ವಿಭಾಗಗಳು

ಸುದ್ದಿಪತ್ರ


 

ಸೂರ್ಯನತ್ತ ಉಗುಳುವವರ ಪಾಡು ಗೊತ್ತೇನು?

ಟ್ರೇಲರ್ ನೋಡಿ ಸಿನೆಮಾ ಬಗ್ಗೆ ಬರೆಯೋರು, ಬ್ಲರ್ಬ್ ಓದಿ ಪುಸ್ತಕದ ಬಗ್ಗೆ ಹೇಳೋರು, ಕೊನೆಗೆ ಒಂದು ಪುಸ್ತಕ ಓದಿ ಮಹಾಪುರುಷನ ಯೋಗ್ಯತೆ ಅಳೆಯೋರು ದಿನದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಸದ್ಯಕ್ಕೆ ಚರ್ಚೆ ನಡೆಯುತ್ತಿರೋದು ಬಂಗಾಳಿ ಲೇಖಕ ಮಣಿ ಶಂಕರ ಮುಖರ್ಜಿ ಬರೆದಿರುವ ‘The Monk as Man’ ಪುಸ್ತಕ ಕುರಿತಂತೆ. ಬಂಗಾಳಿಯಲ್ಲಿ ಲಕ್ಷಕ್ಕೂ ಮೀರಿ ಪ್ರತಿಗಳು ಮಾರಾಟಗೊಂಡು ದಾಖಲೆ ನಿರ್ಮಿಸಿದ ಕೃತಿ ಇದು. ಒಬ್ಬ ಸನ್ಯಾಸಿಯೊಳಗಿನ ಮಾನವನ ಅಂತಃಕರಣವನ್ನು ಅನಾವರಣಗೊಳಿಸುವ ಅತಿ ವಿಶಿಷ್ಟ ಪ್ರಯತ್ನ ಇದು. ಇದನ್ನು ಆತ ಸನ್ಯಾಸಿಯಲ್ಲ, ಮಾನವನಷ್ಟೇ ಆಗಿದ್ದ ಎಂದು ಬಿಂಬಿಸಲು ದುರ್ಬಳಕೆ ಮಾಡಿಕೊಳ್ಳಲು ಹೊರಟರೆ ಏನೆನ್ನೋಣ!

monk_as_man
ಅದೊಮ್ಮೆ ರಾಮಕೃಷ್ಣರು ನರೇಂದ್ರನನ್ನು ಕೇಳಿದ್ದರು. ’ಜನ ನಿನ್ನನ್ನು ನಿಂದಿಸಿದರೆ, ನಿನ್ನ ಬಗ್ಗೆ ಅಪಸ್ವರವೆತ್ತಿದರೆ ನೀನೇನು ಮಾಡುತ್ತೀ?’ ಆತನ ಉತ್ತರವೇನಿತ್ತು ಗೊತ್ತೆ? ’ನಾಯಿಗಳು ಬೌಬೌ ಎನ್ನುತ್ತಿವೆ ಎಂದುಕೊಳ್ಳುತ್ತೇನೆ’ ಅಂತ!
ನಿಜ ಬಲ್ಲವರು, ಹಿರಿಯರು, ಸಹೃದಯಿಗಳು ಹೇಳುತ್ತಾರೆ. ’ವ್ಯಕ್ತಿಯೊಬ್ಬನನ್ನು ಹೋಗಳಲು ಹೆಚ್ಚು ತಿಳಿಯಬೇಕಿಲ್ಲ; ತೆಗಳಬೇಕೆಂದರೆ ಮಾತ್ರ ಚೆನ್ನಾಗಿ ಅರಿತುಕೊಂಡಿರಬೇಕು’ ಅಂತ. ಸತ್ಯವಲ್ಲವೇ ಮತ್ತೆ? ವಿವೇಕಾನಂದರನ್ನು ನೋಬೆಲ್ ಪುರಸ್ಕೃತ ಸಾಹಿತಿ ರೋಮರೋಲಾ, ಸೋದರಿ ನಿವೇದಿತಾ, ಸೋದರಿ ಕ್ರಿಸ್ಟೀನ್, ಮ್ಯಾಕ್ಲಾಯ್ಡ್ ಕಣ್ಣುಗಳ ಮೂಲಕ ನೋಡಿದವರಿಗೆ ಶಂಕರ ಮುಖರ್ಜಿಯ ಪುಸ್ತಕ ಭಾವಪ್ರಚೋದಕವಾಗಬಲ್ಲದು. ಅದನ್ನು ಬಿಟ್ಟು ಮೊತ್ತಮೊದಲಿಗೇ ಈ ಪುಸ್ತಕ ಹಿಡಿದು ಕುಳಿತರೆ ಸ್ವಾಮೀಜಿ ಅಭಾವಗಳ ಕಂತೆ ಎನ್ನಿಸಬಹುದು. ಇರಲಿ, ನಿಂದನೆಯ ತುತ್ತೂರಿಯ ದನಿ, ವಿವೇಕವಾಣಿಯ ಚಂಡೆ ಮದ್ದಳೆಗಳ ನಡುವೆ ಕೊಚ್ಚಿಹೋಗಿರುವಾಗ ಮತ್ತೇಕೆ ತಲೆ ಕೆಡಿಸಿಕೊಳ್ಳೋಣ?
ಸ್ವಾಮಿ ವಿವೇಕಾನಂದ ನಮ್ಮೆದುರಿಗಿನ ಸಾವಿರಾರು ಸಂತರ ನಡುವೆ ಭಿನ್ನವಾಗಿ ನಿಲ್ಲುವುದೇ ಅವರ ಶುದ್ಧ ಅಂತಃಕರಣ ಮತ್ತು ಅಪಾರ ಮಾನವ ಪ್ರೇಮದಿಂದಾಗಿ. ಅವರು ಮಿತ್ರರಿಗೆ, ಸನ್ಯಾಸಿಗಳಿಗೆ ಬರೆದ ಒಂದೊಂದು ಪತ್ರವೂ ಮಾನವ ಪ್ರೇಮದ ಮಹಾಸಾಗರ. ಇಪ್ಪತ್ನಾಲ್ರಲ್ಲಿಯೇ ಸನ್ಯಾಸ ಸ್ವೀಕರಿಸಿದ ಈ ಮಹಾಭೈರವನಿಗೆ ಕಾವಿಯೇನು ಬಂಧನವಾಗಿರಲಿಲ್ಲ. ಅನೇಕ ಬಾರಿ ಆತ ಮನೆಗೆ ಹೋಗುವಾಗ ಕಾವಿ ಹಾಕಿಕೊಂಡಿರುತ್ತಿರಲಿಲ್ಲ. ಅಚ್ಚರಿಯ ವಿಷಯವೆಂದರೆ, ಸ್ವಾಮೀಜಿ ವಿದೇಶಕ್ಕೆ ಹೋಗಿ ವಿಖ್ಯಾತರಾದ ಮೇಲೆಯೇ ಅವರ ತಾಯಿಗೆ ಮಗ ಸನ್ಯಾಸಿಯಾಗಿದ್ದಾನೆಂದು ಗೊತ್ತಾಗಿದ್ದು!
ಮೇಲ್ನೋಟಕ್ಕೆ ಇದು ವಿಪರೀತವಾಗಿ ಕಾಣಬಹುದು. ಅದರೆ ಬಾಹ್ಯಾಡಂಬರಗಳಾಗಲೀ ಆಚರಣೆಗಳ ಬಲೆಯಾಗಲೀ ಆ ಮಹಾಪುರುಷನನ್ನು ಎಂದಿಗೂ ಬಂಧಿಸಿಯೇ ಇರಲಿಲ್ಲ. ಬೆಳಗಾವಿಯ ಭಾಟೆಯವರ ಮನೆಯಲ್ಲಿ ಸ್ವಾಮೀಜಿ ಬನಿಯನ್ ಹಾಕಿಕೊಳ್ಳುವುದನ್ನು, ಕೈಯಲ್ಲಿ ಸಾಧುಗಳ ದಂಡದ ಬದಲಿಗೆ ಬೆತ್ತದ ಕೋಲು ಹಿಡಿದು ತಿರುಗಾಡುವುದನ್ನು, ಅಗತ್ಯ ಬಿದ್ದಾಗೆಲ್ಲ ಇಂಗ್ಲಿಶ್ ಬಳಸುವುದನ್ನು, ಪಶ್ಚಿಮದ ಸಾಹಿತ್ಯ ರಾಶಿಗಳನ್ನು ಉದ್ಧರಿಸುವುದನ್ನು ಕಂಡು ಗಾಬರಿಯಾಗಿಬಿಟ್ಟರು. ಎಲೆ ಅಡಿಕೆ ಹೊಗೆಸೊಪ್ಪು ಕೇಳಿದಾಗಲಂತೂ ಭಾಟೆಯವರ ಹೃದಯ ಬಡಿತ ಜೋರಾಗಿಬಿಟ್ಟಿತ್ತು. ಅದನ್ನರಿತ ಸ್ವಾಮೀಜಿ, ’ನಾನು ಬಲು ಸಾಮಾನ್ಯ ಹುಡುಗನಾಗಿದ್ದವನು. ರಾಮಕೃಷ್ಣರ ಸಂಪರ್ಕದಿಂದ ಹೀಗಾಗಿಬಿಟ್ಟೆ. ನನ್ನ ಅಧ್ಯಾತ್ಮ ಜೀವನಕ್ಕೆ ಧಕ್ಕೆ ಬಾರದ ಯಾವುದನ್ನೂ ನಾನು ಬಿಟ್ಟಿಲ್ಲ. ಪರಮಹಂಸ ಪಂಥಕ್ಕೆ ಸೇರಿದವನಾದ್ದರಿಂದ ಭಿಕ್ಷೆಯಾಗಿ ಮಾಂಸವನ್ನೇ ಕೊಟ್ಟರೂ ಉಣ್ಣುವೆ’ ಎಂದರು. ಮೊದಮೊದಲು ಭಾಟೆಯವರಿಗೆ ಈ ವಿಚಾರ ಅರಗಿಸಿಕೊಳ್ಳಲಾಗಲಿಲ್ಲ. ಬರಬರುತ್ತ ವಿವೇಕಾನಂದರ ಆಧ್ಯಾತ್ಮಿಕ ತೇಜಸ್ಸಿನ ಶಾಖವನ್ನನುಭವಿಸಿದ ಬೆಳಗಾವಿಯೇ ಅವರ ಅಂತರಂಗದ ಶಕ್ತಿಗೆ ಮಾರುಹೋಯ್ತು.
ಇದನ್ನು ಅರ್ಥೈಸಿಕೊಳ್ಳಲು ಸ್ವಲ್ಪಮಟ್ಟಿಗಾದರೂ ಅಂತಃಶಕ್ತಿ ನಮಗಿರಬೇಡವೇ. ಅದಕ್ಕೇ ಬಹುಶಃ ಸ್ವಾಮೀಜಿ ಒಮ್ಮೆ ಹೇಳಿದ್ದುದು, ’ಈ ವಿವೇಕಾನಂದನನ್ನು ಅರ್ಥೈಸಿಕೊಳ್ಳಲು ಮತ್ತೊಬ್ಬ ವಿವೇಕಾನಂದನೇ ಹುಟ್ಟಿ ಬರಬೇಕು.’
ಇನ್ನು ಸ್ವಾಮೀಜಿಯವರ ಮಾತೃಪ್ರೇಮವಂತೂ ಉಲ್ಲೇಖಯೋಗ್ಯ. ಹಾಗೆ ನೋಡಿದರೆ ಅವರನ್ನು ಪ್ರಪಂಚದೊಂದಿಗೆ ಕಟ್ಟಿ ಇಟ್ಟಿದ್ದು ಆ ಮಾತೃಪ್ರೇಮವೇ. ಶಂಕರ ಮುಖರ್ಜಿ ಈ ಕುರಿತು ಅನೇಕ ಘಟನೆಗಳನ್ನು ದಾಖಲಿಸುತ್ತಾರೆ. ಹದಿನಾರನೆ ವಯಸ್ಸಿನಲ್ಲಿ ಮದುವೆಯಾದ ಬಾಲೆ ೪೩ನೇ ವಯಸ್ಸಿಗೆ ವಿಧವೆಯಾಗಿದ್ದಳು. ಹತ್ತು ಮಕ್ಕಳ ತಾಯಿ ಅಕೆ. ಕೆಲವರು ಬಾಲ್ಯದಲ್ಲೇ ತೀರಿಕೊಂಡಿದ್ದರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಮೂವರು ಗಂಡುಮಕ್ಕಳಲ್ಲಿ ಹಿರಿಯವ ಸನ್ಯಾಸಿಯಾದ. ಮಧ್ಯದವ ದೇಶ ವಿದೇಶಗಳ ಪ್ರವಾಸ ಮಾಡುತ್ತ ಮನೆಯಿಂದ ದೂರವಾದ. ಕಿರಿಯವ ತಾಯಿ ಭಾರತಿಯ ಆರಾಧನೆಗಾಗಿ ಬದುಕು ಮುಡಿಪಿಟ್ಟು ಊರು ಬಿಟ್ಟು ಓಡಿಹೋದ. ಆಸ್ತಿ ವ್ಯಾಜ್ಯಗಳಲ್ಲಿ ಬಳಲಿಹೋಗಿದ್ದ ತಾಯಿಗೆ ಆಸರೆಯಾಗಿ ನಿಂತಿದ್ದು ನರೇಂದ್ರನೊಬ್ಬನೇ. ಹೀಗಾಗಿಯೇ ಆತ ಎಷ್ಟು ಸುತ್ತಾಡಿದರೂ ಅಗಾಗ ಕಲ್ಕತ್ತೆಗೆ ಅಚಾನಕ್ಕಾಗಿ ಬಂದುಹೋಗುತ್ತಿದ್ದ. ’ಮತ್ತಿನ್ನು ಇತ್ತ ಬರಲಾರೆ’ ಎಂಬ ಆತನ ದೃಢ ಮನಸ್ಸನ್ನು ಮೆತ್ತಗೆ ಮಾಡುವ ತಾಕತ್ತಿದ್ದುದು ಆ ಮಹಾತಾಯಿಗೆ ಮಾತ್ರ. ತಮ್ಮ ಆಪ್ತ ಮಿತ್ರ ಖೇತ್ರಿಯ ಮಹಾರಾಜ ಅಜಿತ್ ಸಿಂಗರಿಗೆ ಜೀವನದ ಸಂಧ್ಯಾಕಾಲದಲ್ಲಿ ’ನನ್ನ ತಾಯಿಗಾಗಿ ತಿಂಗಳಿಗೆ ನೂರು ರುಪಾಯಿ ಕಳಿಸುವೆಯಾ?’ ಎಂದು ಪತ್ರ ಬರೆಯುವಾಗ ಆಸ್ವಾಭಿಮಾನಿ ಹೃದಯ ಅದೆಷ್ಟು ನೊಮದಿರಬಹುದು ಅರಿವಿದೆಯೆನು? ’ನಾನು ನಿನ್ನನ್ನಲ್ಲದೆ ಮತ್ಯಾರನ್ನೂ ಈ ಕುರಿತು ಕೇಳಲಾರೆ. ನೀನು ಕೊಡುವೆನೆಂದರೂ ಸರಿ. ಇಲ್ಲವೆಂದರೂ ಸರಿಯೇ. ನನ್ನ ಪಾಲಿಗೆ ಎರಡೂ ಒಂದೇ’ ಎಂಬ ಸಮಜಾಯಿಷಿ ನೀಡುವುದನ್ನು ಓದುವಾಗ ಮೈಯಲ್ಲಿ ಮುಳ್ಳುಗಳೇಳುತ್ತವೆ. ’ನಾಳೆ ನಮ್ಮ ನಡುವೆ ವಿರಸ ಉಂಟಾದರೂ ಈ ಸಹಾಯ ನಿಲ್ಲಿಸದಿರು’ ಎಂದವರು ಬರೆಯುವಾಗಲಂತೂ ಅದೆಷ್ಟು ಶಿಶುಸಹಜ ವ್ಯಕ್ತಿತ್ವ ಅವರದು ಎನ್ನಿಸಿಬಿಡುತ್ತದೆ.
ಎಡಬಿಡಂಗಿಯಂತೆ ಬರೆಯುವವರಿಗೆ ಒಂದು ವಿಚಾರ ಸ್ಪಷ್ಟವಾಗಿರಲಿ. ಸನ್ಯಾಸ ಧರ್ಮಕ್ಕೆ ಒಂದು ನಿಯಮವಿದೆ. ಸನ್ಯಾಸಿ ಗುರುವಲ್ಲದೆ ಯಾರಿಗೂ ನಮಸ್ಕರಿಸುವಂತಿಲ್ಲ. ಸ್ವತಃ ತಂದೆಗೂ ಕೂಡ. ಆದರೆ ತಾಯಿ ಈ ನಿಯಮದಿಂದ ಹೊರಗೆ. ಆಕೆಗೆ ಸನ್ಯಾಸಿಯೇ ಪಾದ ಮುಟ್ಟಿ ನಮಸ್ಕರಿಸಬೇಕು. ಹೀಗಾಗಿಯೇ ಶಂಕರರು ಅವತ್ತಿನ ಎಲ್ಲ ಕಟ್ಟುಕಟ್ಟಳೆಗಳನ್ನು ಮೀರಿ ನಿಂತು ತಾಯಿಗೆ ಅಮಥ್ಯಸಂಸ್ಕಾರ ಮಾಡಿದ್ದು. ಚೈತನ್ಯರಂತೂ ಸನ್ಯಾಸಿಯಾದರೂ ನಿನ್ನ ಮರೆಯಲಾಗದು ಎಂದು ತಾಯಿಗೆ ಹೆಳಿದ್ದರು. ಚೈತನ್ಯರು – ಶಂಕರರು ದೈವತ್ವದ ಮಹಾಪಟ್ಟವನ್ನು ಅಲಂಕರಿಸಿದ್ದರೆ, ವಿವೇಕಾನಂದರೇಕೆ ಬೇಡ? ಹಾ! ದೇವರಾಗಿಸಿ ಕರ್ತವ್ಯಪ್ರಜ್ಞೆ ಮರೆಸಿಬಿಡುತ್ತೇವೆಂಬ ಸಹಜ ಆತಂಕ ನಿಮ್ಮದಾಗಿದ್ದರೆ, ಅದೋ, ಅದಕ್ಕೆ ನನ್ನ ಬೆಂಬಲವೂ ಇದೆ. ಆದರೆ ಕಾಷಾಯ ವಸ್ತ್ರದ ಹಾರಾಟ ಕಂಡು ಹೊಟ್ಟೆಯುರಿಗೆ ಮೈ ಪರಚಿಕೊಂಡಿದ್ದರೆ ಮಾತ್ರ ಧಿಕ್ಕಾರವಿದೆ.
ಸ್ವಾಮಿ ವಿವೇಕಾನಂದರು ರೋಗಗಳ ಗೂಡಾಗಿದ್ದರೆಂಬುದು ಅದೇಕೋ ಈ ಪುಣ್ಯಾತ್ಮರಿಗೆ ಮಹದಾನಂದ. ಒಂದು ನಿಮಿಷ ಆಲೋಚಿಸಿ, ಬಾರಾನಾಗೋರ್ ಮಠದಲ್ಲಿ ಕಟ್ಟುನಿಟ್ಟಿನ ಸಾಧನೆಗೆ ತೊಡಗಿದ ಯುವ ಸನ್ಯಾಸಿಗಳಿಗೆ ಊಟ ತಿಂಡಿಯ ಪರಿವೆಯೇ ಇರಲಿಲ್ಲ. ಬೆಳಗ್ಗೆ, ಮಧ್ಯಾಹ್ನ ಸಂಜೆ ಮಂಡಕ್ಕಿ ತಿಂದೇ ಬದುಕಿದವರು. ಪರಿವ್ರಾಜಕರಾಗಿ ಅಲೆಯುವಾಗಲಂತೂ ದಿನಗಟ್ಟಲೆ ಆಹಾರ ದಕ್ಕುತ್ತಿರಲಿಲ್ಲ. ಇಂಥವರಿಗೆ ಅಸಿಡಿಟಿ ಬರಬಾರದಾ? ಅಮೆರಿಕಾದ ವೇದಿಕೆ ಮೇಲೆ ನಿಂತಾಗ ಸ್ವಾಮೀಜಿಗೆ ಮೂವತ್ತೇ ವರ್ಷ ವಯಸ್ಸು. ದೇಹ ಬಿಟ್ಟಾಗ ನಲವತ್ತೂ ಆಗಿರಲಿಲ್ಲ. ಹತ್ತು ವರ್ಷಗಳಲ್ಲಿ ಸಾವಿರ ವರ್ಷಕ್ಕಾಗುವಷ್ಟು ಮಾತಾಡಿದರು, ಬರೆದರು, ಮಾರ್ಗದರ್ಶನ ಮಾಡಿದರಲ್ಲ, ಇಂಥವರ ಜೀವಕೋಶಗಳು ಸೋಲಬಾರದ? ದೇಹವನ್ನು ದಂಡಿಸಿ ಅಮರನಾಥಕ್ಕೆ ಕೌಪೀನ ಧಾರಿಯಾಗಿ ಹೋಗಿಬಂದರಲ್ಲ, ಆ ಕೊಲ್ಲುವ ಚಳಿ ದೇಹವನ್ನು ಏನೆಲ್ಲ ಮಾಡಿರಬೇಕು? ಮನೆಯಿಂದ ಬಳುವಳಿಯಾಗಿ ಬಂದ ಮಧುಮೇಹ, ಚಿಕ್ಕಂದಿನಲ್ಲಿಯೇ ಇದ್ದ ವಾತ ರೋಗ – ಯಾವುದೂ ಅಸಹಜವಲ್ಲ. ಎಸಿ ರೂಮುಗಳಲ್ಲಿ ಕೂತು ಓದು- ಬರೆದು ಮಾಡುತ್ತಾರಲ್ಲ, ಅಂಥವರು ನಾಲ್ಕು ದಿನ ಸಮಾಜಕ್ಕಾಗಿ ಎಡತಾಕಿದರೆ ಆಗ ಈ ರೋಗಗಳ ಕಾರಣ ಅರ್ಥವಾಗುತ್ತದೆ. (ಇಷ್ಟಕ್ಕೂ ಈ ಲೇಖಕರುಗಳನ್ನು ವೇದಿಕೆಗೆ ಕರೆದು ಇವರು ಅಮೋಘ ಲೇಖಕರು, ಆದರೆ ಡಯಾಬಿಟೀಸ್, ಬಿ.ಪಿ, ಸಂಧಿವಾತ, ಹೃದಯಬೇನೆಗಳಿಂದ ನರಳುತ್ತಿದ್ದಾರೆ ಎಂದು ಪರಿಚಯಿಸಿದರೆ ಹೇಗಿರಬಹುದು ಹೇಳಿ?) ಸ್ವಾಮೀಜಿ ಈ ಪರಿಯ ಯಮಯಾತನೆಯನ್ನು ಒಳಗೆ ಪೋಷಿಸಿಕೊಂಡು ಸಮಾಜದ ಮುಂದೆ ನಗುನಗುತ್ತ ನಿಂತು ಅಗತ್ಯ ಬಿದ್ದಾಗೆಲ್ಲ ಶಕ್ತಿ ಸಂಚಾರ ಮಾಡುವ ಮಾತುಗಳನ್ನಾಡಿದ್ದರಲ್ಲಾ, ಅದಕ್ಕೇ ಆತ ದೇವರು!
ಅವರ ವ್ಯಕ್ತಿತ್ವವೇ ವಿಚಿತ್ರ. ತಿನ್ನಲು ಕೂತರೆ ಗಾಬರಿ ಹುಟ್ಟಿಸುವಂತೆ ತಿನ್ನುತ್ತಿದ್ದರು. ಸಂಕಲ್ಪ ಮಾಡಿ ಉಪವಾಸ ಕುಂತರೂ ಹಾಗೆಯೇ. ’ನಾವು ಚೆನ್ನಾಗಿ ತಿನ್ನುವುದೇಕೆ ಗೊತ್ತೆ? ವಾರಗಟ್ಟಲೆ ಊರ ಸಿಗದಾಗ ಈ ಕೊಬ್ಬನ್ನೆ ಕರಗಿಸಿ ಬದುಕಿಕೊಳ್ಳೋಕೆ’ ಎಂದವರು ತಮಾಷೆ ಮಾಡ್ತಿದ್ದರು. ಒಮ್ಮೆಯಂತೂ ಆರೋಗ್ಯದ ದರಷ್ಟಿಯಿಂದ ವೈದ್ಯರು ನೀರು ಕುಡಿಯಬಾರದೆಂದು ತಾಕೀತು ಮಾಡಿದಾಗ ತುಂಬ ನೀರು ಕುಡಿಯುತ್ತಿದ್ದ ಸ್ವಾಮೀಜಿ ಇಪ್ಪತ್ತು ದಿನಗಳ ಕಾಲ ಒಂದೇಒಂದು ಗುಟಕು ನೀರು ಕುಡಿಯಲಿಲ್ಲ. ಸ್ವಾಮೀಜಿಯನ್ನು ತಿಂಡಿಪೋತ ಎಂದು ಜರೆದವರಿಗೆ ಇದೆಲ್ಲ ಕಾಣಬೇಕಲ್ಲ?
ಇನ್ನು ಅವರ ಸಾವು. ಅನುಮಾನವೇ ಇಲ್ಲ. ಅದು ಇಚ್ಛಾಮರಣ. ಸಾವಿಗೆ ವಾರಗಳ ಮುನ್ನ ಶಿಷ್ಯರ ಬಳಿ ಪಂಚಾಂಗ ತರಿಸಿ ಸೂಕ್ತ ದಿನಾಂಕ ಹುಡುಕಾಡುತ್ತಿದ್ದರು. ಕೆಲವು ದಿನಗಳ ಮುನ್ನ ಸೋದರ ಸನ್ಯಾಸಿಗಳ ಬಳಿ ತನ್ನ ದೇಹತ್ಯಾಗದ ನಂತರ ಸ್ತ್ರೀಯರಿಗಾಗಿ ಮಠ ಮತ್ತು ವೇದ ಗುರುಕುಲ ತೆರೆಯುವಲ್ಲಿ ಚುರುಕಾಗಬೇಕೆಂದು ಆಗ್ರಹಿಸಿದ್ದರು. ನಾಲ್ಕು ದಿನಗಳ ಮುಂಚೆ ಕೋರ್ಟಿನಲ್ಲಿ ನಡೆಯುತ್ತಿದ್ದ ತನ್ನ ಮನೆಯ ವ್ಯಾಜ್ಯವನ್ನು ಹೆಚ್ಚಿನ ಹಣ ಕೊಟ್ಟು ಪರಿಹರಿಸಿದ್ದರು. ಎರಡೇ ದಿನಗಳ ಮುನ್ನ ’ನಾನಿನ್ನು ಹೊರಡಬೇಕಿದೆ, ಆಲದ ಮರದ ಕೆಳಗೆ ಬೇರೆ ಗಿಡಗಳು ಬೆಳೆಯೋಲ್ಲ’ವೆಂದು ಮುನ್ಸೂಚನೆ ಕೊಟ್ಟಿದ್ದರು. ಹೆಚ್ಚೂಕಡಿಮೆ ಅದೇ ಸಮಯಕ್ಕೆ ನಿವೇದಿತಾಲನ್ನು ಕರೆಸಿ, ಊಟ ಬಡಿಸಿ, ಕೈತೊಳೆದು ಒರೆಸಿದ್ದರು. ಹೀಗೇಕೆಂದು ಕೇಳಿದ್ದಕ್ಕೆ, ’ಕ್ರಿಸ್ತ ಶಿಷ್ಯರ ಸೇವೆ ಮಾಡಿದಂತೆ’ ಎಂದು ನಕ್ಕುಬಿಟ್ಟಿದ್ದರು. ಹಾಗೆ ಕ್ರಿಸ್ತ ಸೇವೆ ಮಾಡಿದ್ದ ಆತನ ಕೊನೆಯ ದಿನಗಳಲ್ಲೆಂಬುದು ನಿವೇದಿತಾಗೆ ಖಂಡಿತ ಗೊತ್ತಿತ್ತು. ಇವೆಲ್ಲದರ ಅರಿವಿದ್ದವರಿಗೆ ಸ್ವಾಮೀಜಿಯವರ ದೇಹತ್ಯಾಗ ಬರಿಯ ಹೃದಯಾಘಾತ ಎಂದು ದೇವರಾಣೆಗೂ ಅನ್ನಿಸಲಾರದು.
ಹ್ಹ! ಯಾರು ಅದೆಷ್ಟು ಕೂಗಾಡಿದರೂ ವಿವೇಕಾನಂದರು ಜಗತ್ತಿನ ನೂರಿಪ್ಪತ್ತು ರಾಷ್ಟ್ರಗಳಲ್ಲಾದರೂ ಅವರ ಸಂದೇಶದ ಸುಗಂಧ ಹರಡಲಿದೆ. ಮಹಾ ಉತ್ಪಾತವಂತೂ ಖಂಡಿತ ಆಗಲಿದೆ.

Leave a Reply