ವಿಭಾಗಗಳು

ಸುದ್ದಿಪತ್ರ


 

ಸೈನ್ಯದ ಮಾನವನ್ನು ಅಡವಿಟ್ಟು, ಬೇಳೆ ಬೇಯಿಸಿಕೊಳ್ಳುವವರು..

ಜನರಲ್ ತಿಮ್ಮಯ್ಯ ಚೀನಿ ಆಕ್ರಮಣದ ಕುರಿತು ಎಚ್ಚರಿಸಿದಾಗ ರಕ್ಷಣಾ ಸಚಿವ ಉರಿದು ಬಿದ್ದಿದ್ದರು.  ತಿಮ್ಮಯ್ಯನವರ ನಿಷ್ಠೆಯನ್ನು ಪ್ರಶ್ನಿಸಿದ್ದರು.  ಕುಪಿತ ಜನರಲ್ ರಾಜೀನಾಮೆ ಎಸೆದು ನಿರಾಳವಾಗಿ ಬಿಟ್ಟಿದ್ದರು.  ನೆಹರೂ ಮಧ್ಯಸ್ಥಿಕೆ ಮಾಡಿ ರಾಜೀನಾಮೆ ಮರಳಿ ಪಡೆಯುವಂತೆ ಮಾಡಿದ್ದಲ್ಲದೇ ಸಂಸತ್ತಿನಲ್ಲಿ ಜನರಲ್ ತಿಮ್ಮಯ್ಯನವರ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿತರನ್ನಾಗಿಸಿದ್ದರು.  ವಿಕೆ ಸಿಂಗ್‌ರದೂ ಅದೇ ಕತೆ.

ನಿವೃತ್ತ ಜನರಲ್ ವಿ.ಕೆ.ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹರ‍್ಯಾಣಾದಲ್ಲಿ ನಿವೃತ್ತ ಸೈನಿಕರ ಸಮಾವೇಶದಲ್ಲಿ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಾಗಿನಿಂದ ಕೇಂದ್ರ ಸರ್ಕಾರದ ಕಣ್ಣು ಕೆಂಪಗಾಗಿದೆ. ಮಾಧ್ಯಮಗಳೂ ನಿಗಿನಿಗಿಯಾಗಿ ಬಿಟ್ಟಿವೆ. ಅಣ್ಣಾ ಹಜಾರೆಯೊಂದಿಗೆ ವೇದಿಕೆ ಹಂಚಿಕೊಳ್ಳುವಾಗ ದೇಶಭಕ್ತರೆಂದು ಬಿಂಬಿಸಲ್ಪಟ್ಟಿದ್ದ ವಿಕೆ ಸಿಂಗರನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಿರುವುದನ್ನು ನೋಡಿದರೆ ಸತ್ಯ ಹೇಳೋದು ತಪ್ಪಾ? ಎನ್ನುವ ಹೊಸ ಪ್ರಶ್ನೆ ಉದ್ಭವಿಸುತ್ತದೆ.

hazare-singhಜನರಲ್ ವಿ.ಕೆ.ಸಿಂಗ್ ಸಾಮಾನ್ಯವಾದ ವ್ಯಕ್ತಿಯಲ್ಲ. ವೋಟಿಗೊಂದು ನೋಟು ಕೊಟ್ಟು ಆಯ್ಕೆಯಾದವರೋ, ಮತಯಂತ್ರವನ್ನೇ ತಿದ್ದಿ ತೀಡಿ ಲೋಕಸಭೆ ಪ್ರವೇಶಿಸಿದವರೋ ಅಲ್ಲ. ಪರಿವಾರಕ್ಕೆ ಪರಿವಾರವೇ ಸೈನ್ಯದ ಸೇವೆಯಲ್ಲಿ ಜೀವ ಸವೆಸಿದ ಪರಂಪರೆಯವರು. ತಂದೆ ಭಾರತೀಯ ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾದವರು, ತಾತ ಜೂನಿಯರ್ ಕಮಿಷ ಅಧಿಕಾರಯಾಗಿದ್ದವರು, ಮೂರ‍್ಮೂರು ಚಿಕ್ಕಪ್ಪಂದಿರು ಸೈನ್ಯದ ಸೇವೆಯಲ್ಲಿದ್ದವರು. ನಾಲ್ಕನೇ ಪೀಳಿಗೆಯವರೂ ಸೇನಾ ಸೇವೆಗೆ ಬದುಕು ಮುಡಿಪಾಗಿಟ್ಟರುವ ಅಪರೂಪದ ಪರಿವಾರ. ಅಷ್ಟೇ ಅಲ್ಲ ಹೆಣ್ಣು ಮಕ್ಕಳಿಗೆ ವರನನ್ನು ಅರಸಬೇಕಾದರೂ ಸೇನೆಯ ಸೇವೆ ಮಾಡುವನನ್ನೆ ಹುಡುಕುವುದು ಅವರ ವಾಡಿಕೆಯಾಗಿ ಬಿಟ್ಟಿದೆ. ಈ ಪರಿವಾರದ ಮೂರನೇ ಪೀಳಿಗೆಯ ಗಟ್ಟಿ ಮನಸ್ಸಿನ ಸೈನಿಕ ವಿ.ಕೆ.ಸಿಂಗ್. ಹರ‍್ಯಾಣಾದ ಭವಾನಿ ಜಿಲ್ಲೆಯ ಬಾಪೋರಾ ಹಳ್ಳಿಯೇ ಹಾಗೇ. ಅಲ್ಲಿ ಮನೆಗೊಬ್ಬ ಸೈನಿಕ ಸಿಗುತ್ತಾನೆ. ಸೇನೆಯ ಸೇವಕನಾಗೋದು ಅಂದರೆ, ಹೆಮ್ಮೆ ಪಡುವ ಹಳ್ಳಿ ಅದು. ಲೆಕ್ಕ ಹಾಕಿದರೆ ಆ ಪುಟ್ಟ ಹಳ್ಳಿಯಲ್ಲಿ ಐದುನೂರಕ್ಕೂ ಹೆಚ್ಚು ಸೈನಿಕರಿದ್ದಾರೆ.
ಎಂಟನೇ ತರಗತಿಯಲ್ಲಿರುವಾಗಲೇ ಈ ಪ್ರೇರಣೆಯನ್ನು ಕವನದ ಮೂಲಕ ಹೊರಹಾಕಿದ್ದವರು ಅವರು. ಶ್ರೀಮಂತನಾಗಲೊಲ್ಲೆ,
ಕೂಲಿಕಾರ್ಮಿಕನೂ ಅಲ್ಲ.
ವೀರ ಸೈನಿಕನಾಗುವೆ,
ಹೆಗಲಮೇಲೆ ಬಂದೂಕು ಹೊತ್ತು ಕಾದುವೆ
ದೇಶಕ್ಕಾಗಿ ಸಾಯುವುದೇ ಪ್ರೇರಣೆ,
ಶತ್ರುಗಳ ಮೇಲೆ ನನಗಿಲ್ಲ ಕರುಣೆ
ಚೀನಿಗಳಿಗೆ ಪಾಠ ಕಲಿಸುವೆ,
ಮಾತೃ ಭೂಮಿಗಾಗಿ ಸಾಯಲೂ ಸಿದ್ಧ ಅನ್ನುವೆ
ಈ ಹುಡುಗ ಅಧ್ಯಯನ ಮುಗಿಸಿ ರಜಪೂತ ರೆಜಿಮೆಂಟು ಸೇರಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ೧೯೭೧ರ ಬಾಂಗ್ಲಾ ಕದನ, ೧೯೮೭ರ ಶ್ರೀಲಂಕಾದ ಕದನ, ಅಷ್ಟೆ ಅಲ್ಲದೇ ಅನೇಕ ನುಸುಳುಕೋರ ತಡೆ ಕಾರ್ಯಚರಣೆಯಲ್ಲೂ ಜೀವದ ಹಂಗು ತೊರೆದು ಹೋರಾಡಿದರು. ಚೀನಾದ ಮೇಲಿದ್ದ ಬಾಲ್ಯದ ಆಕ್ರೋಶ ತಣ್ಣಗಾಗಿರಲಿಲ್ಲ. ಹೀಗಾಗಿ ಆರ್ಮಿ ಕಮಾಂಡರ್ ಆಗಿದ್ದಾಗ ಬೆಟ್ಟದ ಮೇಲೆ ಕಾದಾಡುವ ೮೬ ಸಾವಿರ ಸೈನಿಕರ ತುಕಡಿಯ ಪರಿಕಲ್ಪನೆಯನ್ನು ಸರ್ಕಾರಕ್ಕೆ ಕೊಟ್ಟು ಅದಕ್ಕೆ ಪೂರಕವಾಗಿ ಕೆಲಸ ಮಾಡಿದ್ದರು! ಆದರೆ ಇಂತಹ ಕ್ರಿಯಾಶೀಲ ಮನಸ್ಸಿಗೆ ಸರ್ಕಾರದ ನಿಧಾನಗತಿಯ ನಿರ್ಧಾರಗಳಿಂದ ಫಾಸಿಯಾಯ್ತು. ಈ ನೋವಿನ ನಡುವೆಯೇ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ದೇಶದ ಮೊದಲ ತರಬೇತಿ ಪಡೆದ ಕಮಾಂಡೋ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಲ್ಲವೂ ಸುಮ್ಮನೆ ಸಾಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ದೇಶಭಕ್ತ ಕುಟುಂಬದಿಂದ ಬಂದ ಜನರಲ್ ವಿಕೆ ಸಿಂಗರು ಎ.ಕೆ.ಆಂಟನಿಯವರನ್ನು ಭೇಟಿ ಮಾಡಿ ಸೈನ್ಯಕ್ಕೆ ಟ್ರಕ್ಕುಗಳನ್ನು ಖರೀದಿಸುವಲ್ಲಿ ಹದಿನಾಲ್ಕು ಕೋಟಿಯಷ್ಟು ಲಂಚ ಕೊಡಲು ಕಂಪನಿ ಮುಂದೆ ಬಂದಿತ್ತೆಂದರು. ರಕ್ಷಣಾ ಸಚಿವರಿಗೆ ಇದೆಲ್ಲ ಗೊತ್ತಿರಲಿಲ್ಲವೆಂದಲ್ಲ. ಅವರು ಲಿಖಿತ ರೂಪದಲ್ಲಿ ಆರೋಪ ಮಾಡುವಂತೆ ಕೇಳಿಕೊಂಡರು. ಸೈನ್ಯದ ಜನರಲ್ ಮಾಡುತ್ತಿರುವ ಈ ಗಂಭೀರ ಆರೋಪವನ್ನು ಅಪಮಾನಿಸಿದಂತೆ ಅದು. ನಲವತ್ತು ಲಕ್ಷ ಬೆಲೆ ಬಾಳದ ಟ್ರಕ್ಕುಗಳನ್ನು ಒಂದು ಕೋಟಿಗೂ ಹೆಚ್ಚು ಬೆಲೆಗೆ ಮಾರಾಟ ಮಾಡುವುದೇಕೆಂದು ವಿಚಾರಣೆ ನಡೆಸಿದ್ದರೆ ಎಲ್ಲ ಬಂಡವಾಳ ಹೊರ ಬೀಳುತ್ತಿತ್ತು. ಹಾಗಾಗಲಿಲ್ಲ. ವಿ.ಕೆ.ಸಿಂಗರು ಪ್ರಧಾನಿಗೆ ಪತ್ರ ಬರೆದರು. ಸುದ್ದಿ ಸೋರಿತು. ರಕ್ಷಣಾ ಸಚಿವರು ಜನರ ಆಕ್ರೋಶಕ್ಕೆ ಬರುವಂತಾಯ್ತು. ಇದೇ ರೀತಿ ಮುಂಬೈನ ಕೊಲಾಬಾ ಭಾಗದಲ್ಲಿ ಸೈನ್ಯಕ್ಕೆ ಸೇರಿದ ಜಮೀನಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಸೈನಿಕರಿಗೆ ಮನೆ ಕಟ್ಟಿಕೊಡುವ ಯೋಜನೆಯಲ್ಲಿ ಹೇರಾಫೇರಿಯಾಯ್ತು. ಮಹಾರಾಷ್ಟ್ರದ ಮಂತ್ರಿಗಳನೇಕರು ಮೂಗು ತೂರಿಸಿ ಸೈನಿಕರಿಗೆಂದು ಮೀಸಲಿಟ್ಟ ಮನೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅಪದ್ಧವೆಸಗಿಬಿಟ್ಟರು. ಈ ಬಾರಿ ಗುರ್ರೆನ್ನುವ ಸರದಿ ವಿ.ಕೆ ಸಿಂಗರದಾಗಿತ್ತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ೬೯ ಲಕ್ಷವನ್ನು ಮರಳಿಸಿದ್ದು ಸಿಬಿಐ ವರದಿಯಲ್ಲೂ ಉಲ್ಲೇಖಗೊಂಡು ದೇಶವೇ ತಲೆತಗ್ಗಿಸುವಂತಾಗಿತ್ತು. ವಿ.ಕೆ ಸಿಂಗರು ಸರ್ಕಾರಕ್ಕಷ್ಟೇ ಅಲ್ಲ, ಸೈನ್ಯದಲ್ಲಿರುವ ಹುಳುಕನ್ನು ಸರಿಪಡಿಸುವ ಮಹಾ ಸಾಹಸಕ್ಕೆ ಕೈ ಹಾಕಿದ್ದರು ಗೊತ್ತಿರಲಿ. ರಾಷ್ಟ್ರಭ್ರಷ್ಟರು ಎಲ್ಲೆಡೆ ಇದ್ದಾರೆ. ಇವರ ಲಾಬಿ ಹೇಗಿದೆಯೆಂದರೆ ಸಿಬಿಐ ನಿಂದ ಹಿಡಿದು ಮೀಡಿಯಾಗಳವರೆಗೆ ಎಲ್ಲರನ್ನು ಕೊಂಡುಕೊಳ್ಳಬಲ್ಲರು; ಯಾರನ್ನು ಬೇಕಿದ್ದರೂ ಬಲೆಯೊಳಗೆ ಸಿಕ್ಕಿ ಹಾಕಿಸಬಲ್ಲರು. ಹಾಗೆಯೇ ಆಯ್ತು. ಆದರ್ಶ್ ಹಗರಣದಲ್ಲಿ ಗೃಹ ಸಚಿವ ಶಿಂಧೆಯವರಿಗೆ ಕ್ಲೀನ್ ಚಿಟ್ ಸಿಕ್ಕರೆ, ಟಾಟ್ರಾ ಟ್ರಕ್ಕು ಖರೀದಿ ಅಕ್ರಮದಲ್ಲಿ ಜನರಲ್ ವಿಕೆ ಸಿಂಗರನ್ನೇ ದೋಷಿಯಾಗಿಸಿಬಿಡುವ ಪ್ರಯತ್ನವೂ ನಡೆಯಿತು. ಆಸಾಮಿ ಜಗ್ಗಲಿಲ್ಲ. ಆಗ ಶುರುವಾಗಿದ್ದು, ಹುಟ್ಟಿದ ದಿನಾಂಕದ ವಿವಾದ. ೨೦೦೬ರ ವರೆಗೆ ಸೈನ್ಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಲ್ಲಿ ವಿ.ಕೆ. ಸಿಂಗರ ಹುಟ್ಟಿದ ವರ್ಷ ೧೯೫೧ ಎಂದೇ ನಮೂದಿತವಾಗಿತ್ತು. ಲೆಫ್ಟಿನೆಂಟ್ ಜನರಲ್ ಆಗಿ ವಿ.ಕೆ ಸಿಂಗರು ಅಧಿಕಾರ ವಹಿಸಿಕೊಂಡ ನಂತರ ಅದು ಹೇಗೋ ದಾಖಲೆಗಳು ತಿದ್ದಲ್ಪಟ್ಟು ೧೯೫೦ ಎಂದಾಯ್ತು. ಇದನ್ನು ಪ್ರತಿಭಟಿಸಿದ ವಿ.ಕೆ ಸಿಂಗರು ಸರ್ಕಾರದ ಮೊರೆಹೋದರು. ಅದಾಗಲೇ ಸಾಕಷ್ಟು ಕಿರಿಕಿರಿಗೆ ಕಾರಣರಾಗಿದ್ದ ಈ ವ್ಯಕ್ತಿ ತೊಲಗಿದರೆ ಸಾಕೆಂದು ಭಾವಿಸಿದ್ದ ಕೇಂದ್ರ ತುಟಿ ಎರಡು ಮಾಡಲಿಲ್ಲ. ಜನರಲ್ ಸಾಹೇಬರು ಕೋರ್ಟಿಗೆ ಹೋದರು. ಸರ್ಕಾರವನ್ನು ಕಟಕಟೆಗೆಳೆದ ಮೊದಲ ಜನರಲ್ ಎಂಬ ಕೀರ್ತಿಯೂ ಅವರದಾಯ್ತು. ಈ ಬಾರಿ ಸರ್ಕಾರ ಮತ್ತು ಮಾಧ್ಯಮಗಳು ವಿ.ಕೆ ಸಿಂಗರನ್ನು ಸುಳ್ಳ ಎಂದವು. ಭಾರತೀಯರ ಮುಂದೆ ತಲೆತಗ್ಗಿಸುವಂತೆ ಮಾಡಿದವು. ಸೈನಿಕನ ಆತ್ಮಸ್ಥೈರ್ಯ ಕುಸಿಯುವಂತಹ ಕೆಲಸವೂ ನಡೆಯಿತು. ಜನರಲ್ ವಿಕೆ ಸಿಂಗರು ನಿವೃತ್ತರಾದರು.
ಅಲ್ಲಿಂದಾಚೆಗೆ ಅವರು ಅಣ್ಣಾ ಹಜಾರೆಯೊಂದಿಗೆ ಭ್ರಷ್ಟಾಚಾರದ ವಿರುದ್ಧದ ಆಂದೆಲನದಲ್ಲಿ ಜೊತೆಯಾದರು. ಅರವಿಂದ ಕೇಜ್ರೀವಾಲ್‌ನ ಹೋರಾಟಕ್ಕೆ ಬೆಂಬಲ ಕೊಟ್ಟರು. ಬಾಬಾರಾಮದೇವರೊಂದಿಗೆ ಕೈಜೋಡಿಸಿದರು. ’ಕೈ’ ಪಾಳಯ ಅಳುಕಲಿಲ್ಲ. ಆದರೆ, ಯಾವಾಗ ಮೋದಿಯೊಂದಿಗೆ ಗುರುತಿಸಿಕೊಂಡರೋ ಆಗ ಕಾಂಗ್ರೆಸ್ಸಿನ ವಾರ್ ರೂಮನಲ್ಲಿ ತಳಮಳ ಶುರುವಾಯ್ತು. ವಿ.ಕೆ ಸಿಂಗರ ಹಳೆಯ ಫೈಲುಗಳನ್ನು ಕೆದಕಲಾಯ್ತು. ಅವರ ಕಾಲದಲ್ಲಿ ರೂಪುಗೊಂಡಿದ್ದ ಸೈನ್ಯ ಗುಪ್ತಚರ ದಳದ ತಾಂತ್ರಿಕ ಸಹಕಾರ ವಿಭಾಗದ (Technical Support Division-TSD) ಕುರಿತಂತೆ ವಿಚಾರಣೆ ನಡೆಸಲಾಯ್ತು. ಹಾಗೆ ನೋಡಿದರೆ ಇಂತಹ ವಿಭಾಗಗಳೆಲ್ಲ ಅತ್ಯಂತ ಗುಪ್ತವಾಗಿ ಕಾರ್ಯನಿರ್ವಹಿಸಬೇಕು. ಅದರ ಕುರಿತಂತೆ ವಿಚಾರಣೆಗಳು ನಡೆದರೂ ಅದು ಗುಪ್ತವಾಗಿಯೇ ಹೂತುಹೋಗಬೇಕೇ ಹೊರತು ಹೊರಗೆ ಬರಲೇಬಾರದು. ಆದರೆ ವಿ.ಕೆ ಸಿಂಗರನ್ನು ಜನರೆದುರು ಖಳನಾಯಕನೆಂದು ಬಿಂಬಿಸ ಹೊರಟಿದ್ದ ಕೇಂದ್ರ ಸರ್ಕಾರ ಈ ವರದಿಯನ್ನು ಮಾಧ್ಯಮಗಳಿಗೆ ಸೋರುವಂತೆ ಮಾಡಿತು. ಅಷ್ಟೇ ಅಲ್ಲ ಜನರಲ್ ಸಾಹೇಬರು ದೆಹಲಿಯನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿದ್ದರೆಂಬ ಸುದ್ದಿಯನ್ನು ಹರಿದಾಡುವಂತೆ ಮಾಡಿತು! TSDಯ ಹಣವನ್ನು ದೆಹಲಿಯ ಪ್ರಮುಖರ ಟೆಲಿಫೋನ್ ಕದ್ದಾಲಿಕೆಗೆ ಬಳಸಲಾಗಿದೆ ಎನ್ನಲಾಯ್ತು. ಅದು ಸುಳ್ಳೆಂದು ಸಾಬೀತಾದ ಮೇಲೆ ’ಆಪರೇಷನ್ ಕಾಶ್ಮೀರ’ ಹೆಸರಲ್ಲಿ ಎಂಟು ಕೋಟಿ ದುರುಪಯೋಗವಾಗಿದೆ ಎಂದು ಸಿಬಿಐ ತೂಗುಕತ್ತಿ ಬಿಟ್ಟು ವಿಕೆ ಸಿಂಗರನ್ನು ಬೆದರಿಸುವ ತಂತ್ರಗಾರಿಕೆ ಶುರುವಾಯ್ತು. ಕಾಂಗ್ರೆಸ್ಸಿನ ಈ ಚಾಳಿ ಮೊದಲನೆಯ ಬಾರಿಯೇನಲ್ಲ. ಫೀಲ್ಡ್ ಮಾರ್ಷಲ್ ಮಾಣಿಕಷಾಹರನ್ನು ಇಂದಿರಾಗಾಂಧಿ ’ದೇಶವನ್ನು ವಶಪಡಿಸಿಕೊಳ್ಳಲಿದ್ದೀರಾ, ಸ್ಯಾಮ್’ ಎಂದು ಕೇಳಿದಾಗ ಕಡಕ್ಕಾಗಿ ಉತ್ತರಿಸಿದ್ದರು, ’ನೀವು ದೇಶ ನೋಡಿಕೊಳ್ಳಿ, ನಾನು ಸೈನ್ಯ ನೋಡಿಕೊಳ್ಳುತ್ತೇನೆ’. ಜನರಲ್ ತಿಮ್ಮಯ್ಯ ಚೀನಿ ಆಕ್ರಮಣದ ಕುರಿತು ಎಚ್ಚರಿಸಿದಾಗ ರಕ್ಷಣಾ ಸಚಿವ ಉರಿದು ಬಿದ್ದಿದ್ದರು. ತಿಮ್ಮಯ್ಯನವರ ನಿಷ್ಠೆಯನ್ನು ಪ್ರಶ್ನಿಸಿದ್ದರು. ಕುಪಿತ ಜನರಲ್ ರಾಜೀನಾಮೆ ಎಸೆದು ನಿರಾಳವಾಗಿ ಬಿಟ್ಟಿದ್ದರು. ನೆಹರೂ ಮಧ್ಯಸ್ತಿಕೆ ಮಾಡಿ ರಾಜೀನಾಮೆ ಮರಳಿ ಪಡೆಯುವಂತೆ ಮಾಡಿದ್ದಲ್ಲದೇ ಸಂಸತ್ತಿನಲ್ಲಿ ಜನರಲ್ ತಿಮ್ಮಯ್ಯನವರ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿತರನ್ನಾಗಿಸಿದ್ದರು. ವಿಕೆ ಸಿಂಗ್‌ರದೂ ಅದೇ ಕತೆ. ಸೈನ್ಯಕ್ಕೆ ಅತ್ಯಾಧುನಿಕ ಶಸ್ತ್ರಗಳು ದೊರಕುತ್ತಿಲ್ಲ, ಸೈನ್ಯ ಹತ್ತಾರು ವರ್ಷಗಳಿಷ್ಟು ಹಿಂದುಳಿದಿದೆ ಎಂದು ಅವರು ಕೊಟ್ಟ ವರದಿಯನ್ನು ರಕ್ಷಣಾ ಸಚಿವರು ಅಂಡಡಿ ಹಾಕಿ ಕುಳಿತು ಬಿಟ್ಟರು. ಜನರಲ್‌ಗಳು ಕೊಟ್ಟ ಸಲಹೆಯನ್ನು ಉಪೇಕ್ಷಿಸೋದು ನಾಯಕರುಗಳಿಗೆ ರೂಢಿಯಾಗಿಹೋಗಿದೆ. ಯುದ್ಧ ಬಂದಾಗ ಸೈನಿಕರತ್ತ ಹ್ಯಾಪು ಮೋರೆ ಹಾಕಿ ನೋಡುತ್ತೇವೆ ಆದರೆ ಶಾಂತಿಯ ಹೊತ್ತಲ್ಲಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡುವಲ್ಲಿ ಸೋತುಹೋಗುತ್ತೇವೆ. vks
ವಿ.ಕೆ.ಸಿಂಗ್ ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಾಗಿರಲಿಲ್ಲ. ದುರುಪಯೋಗಪಡಿಸಿಕೊಂಡಿದ್ದಾರೆನ್ನಲಾದ ೮ ಕೋಟಿಯಲ್ಲಿ ಜಮ್ಮು ಕಾಶ್ಮೀರದ ಮಂತ್ರಿಗಳಿಗೂ ಸಾಕಷ್ಟು ಹಣ ನೀಡಲಾಗಿದೆ ಎಂದು ಲೆಕ್ಕ ಕೊಟ್ಟಾಗ ಕಾಂಗ್ರೆಸ್ಸಿನ ನೀರಿಳಿದಿತ್ತು. ಕಾಶ್ಮೀರದಲ್ಲಿ ಜನರ ಅಹವಾಲುಗಳಿಗೆ ಸ್ಪಂದಿಸೋದು ಸರ್ಕಾರವಲ್ಲ, ಸೇನೆ. ಇತ್ತೀಚೆಗೆ ನಡೆದ ಕಾಶ್ಮೀರ ಪ್ರೀಮಿಯರ್ ಲೀಗ್‌ಗೆ ಹಣ ಕೊಟ್ಟವರು ನಾವೇ ಅಂದರು. ಇದು ಅತ್ಯಂತ ಮಹತ್ವದ ಖುಲಾಸೆಯಾಗಿತ್ತು. ಕಾಶ್ಮೀರದಲ್ಲಿ ಪ್ರತ್ಯೇಕತೆ ಇದ್ದಷ್ಟು ಹಣ ಸರಾಗವಾಗಿ ಹರಿಯುತ್ತೆ ಅನ್ನೋದು ನಾಯಕರಿಗೆ ಗೊತ್ತಿರೋದ್ರಿಂದಲೇ ಅದು ಭಾರತದೊದಿಗೆ ಒಂದಾಗಲು ಹಿಂದೇಟು ಹಾಕುತ್ತಿರೋದು! ಇವೆಲ್ಲವನ್ನು ಕೇಳಿ ಮೀಡಿಯಾಗಳ ಮುಂದೆ ಸಿಬಿಐ ತನಿಖೆ ಎಂದೆಲ್ಲ ಬಡಬಡಾಯಿಸಿದ. ಓಮರ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಮಾತ್ರ ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲಿಲ್ಲ! ಅಂದರೆ, ’ದಾಲ್ ಮೆ ಕಾಲಾ ಹೈ’ ಅಂತಾಯ್ತು.
ಈ ನೋವಿನ ನಡುವೆಯೇ ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮೆರೆದಾಡಿದೆ. ಇನ್ನೂ ಅದೆಷ್ಟು ಬಲಿದಾನವಾದ ಮೇಲೆ ನಮ್ಮವರಿಗೆ ಬುದ್ಧಿ ಬರುತ್ತೋ ದೇವರೇ ಬಲ್ಲ!

Leave a Reply