ವಿಭಾಗಗಳು

ಸುದ್ದಿಪತ್ರ


 

ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ

ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ

ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ ಕ್ರಿಯಾಶೀಲರಾಗುವವರು ಜಯಶಾಲಿಗಳಾಗುತ್ತಾರೆ. ಇಲ್ಲವಾದರೆ ತಮಗೂ ಸಮಾಜಕ್ಕೂ ತೊಂದರೆ ತಂದಿಡುತ್ತಾರೆ.
೧೮೫೭ರ ಸಂಗ್ರಾಮಕ್ಕೆ ಸುದೀರ್ಘ ತಯಾರಿ ನಡೆದಿತ್ತು. ನಾನಾ, ತಾತ್ಯಾ, ಲಕ್ಷ್ಮೀ ಬಾಯಿ, ಕುವರ ಸಿಂಗರೆಲ್ಲ ತಯಾರಾಗಿದ್ದರು. ಯಾರು, ಎಲ್ಲಿ, ಹೇಗೆ ದಾಳಿ ಮಾಡಬೇಕೆಂಬುದನ್ನೂ ರೂಪಿಸಿಯಾಗಿತ್ತು. ಎಲ್ಲ ಮುಗಿದ ಮೇಲೆ ದೇಶ ಒಪ್ಪುವ ನಾಯಕನ ಕೈಗೆ ಆಡಳಿತ ನೀಡಬೇಕೆಂದು ಬಹಾದ್ದೂರ್ ಷಾಹನೇ ಹೇಳಿದ್ದ. ಎಡವಟ್ಟು, ಬ್ಯಾರಕ್‌ಪುರದಲ್ಲಿ ಆಯಿತು. ಅಂದುಕೊಂಡಿದ್ದಕ್ಕಿಂತ ಒಂದು ತಿಂಗಳು ಮುಂಚೆ ಸಿಡಿದ ಕ್ರಾಂತಿಯ ಸಿಡಿಮದ್ದು ಪೂರ್ಣ ಜಯ ಕೊಡಿಸುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲ, ಮುಂದಿನ ಅನೇಕ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಕಾದಾಡಿ ಗೆಲ್ಲುವುದು ಅಸಾಧ್ಯವೆಂದು ಜನಮಾನಸದಲ್ಲಿ ಹುದುಗಿಹೋಗಿತ್ತು. ಮೌನವಾಗಿ ಸಹಿಸುವ, ಇದ್ದುದರಲ್ಲೆ ಸಂಧಾನ ಮಾಡಿಕೊಂಡು ಬದುಕುವ ಯುವ ಸಮೂಹ ರೂಪುಗೊಳ್ಳಲು ಆರಂಭಿಸಿದ್ದೂ ಆಗಲೇ. ಸರಿಯಾಗಿ ಹೇಳಬೇಕೆಂದರೆ, ಗುಲಾಮೀ ಮಾನಸಿಕತೆಯ ನಿರ್ಮಾಣದ ಹಂತ ಅದು. ಇವಿಷ್ಟಕ್ಕೂ ಕಾರಣ- ಕೈಕೊಟ್ಟ ಒಂದು ಯೋಜನೆ!
ನಾಯಕನಾದವ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಟ್ಟ ಹೆಜ್ಜೆಯನ್ನು ಪ್ರಾಣ ಬಿಟ್ಟರೂ ಹಿಂದೆ ತೆಗೆದುಕೊಳ್ಳದವನಾಗಿರಬೇಕು. ಜೋ ಸಿರ್‌ದಾರ್, ವಹೀ ಸರ್‌ದಾರೆಂದು ಹೇಳೋದು ಅದಕ್ಕೇ. ಗೆದ್ದಾಗ ಹೊಗಳಿಕೆ ಸಿಕ್ಕಷ್ಟೇ ಸೋತಾಗ ತೆಗಳಿಕೆಯೂ ಸಿಗುತ್ತದೆ. ಎಲ್ಲಕ್ಕೂ ತಯಾರಾದವ ಮಾತ್ರ ಮುಂದೆ ಬಂದು ನಿಂತಿರಬೇಕು.
ಈ ಎಲ್ಲ ಘಟನೆಗಳನ್ನು ಕಣ್ಣ ಮುಂದಿಟ್ಟುಕೊಂಡು ಒಮ್ಮೆ ಮಂಗಳೂರಿನ ಗಲಾಟೆಗಳನ್ನು ಅವಲೋಕಿಸಿ ನೋಡಿ. ಹಿಂದೂ ಸಮಾಜ ಅಂತ ಹೇಳಿ ಇಂಥದೊಂದು ರಾದ್ಧಾಂತ ಎಬ್ಬಿಸುವ ಅಗತ್ಯವಿತ್ತೆ? ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಇಂದಿನ ಸಿನಿಮಾ ಟ್ರೈಲರ್‌ಗಳಂತೆ ಬಿತ್ತರಿಸುವ ಜರೂರತ್ತು ಇತ್ತೆ? ಒಮ್ಮೆ ಯೋಚಿಸಿ.
ಜಗತ್ತಿಗೆ ಶ್ರೇಷ್ಟವಾದ್ದನ್ನು ಕೊಟ್ಟೆವಲ್ಲ, ಅದಕ್ಕಿದ್ದ ಂದೂಟ್ಯಾಗ್ ತೆಗೆದು ಪೂರ್ಣ ಜಾತ್ಯತೀತರಾದವರು ನಾವು. ಅಲ್ಲದೆ ಮತ್ತೇನು? ಯೋಗ ನೂರಕ್ಕೆ ನೂರು ಹಿಂದುವಿನದ್ದೆ ಕೊಡುಗೆ. ಆದರೆ ಮುಸಲ್ಮಾನರು ನಮಾಜು ಮಾಡುವುದೂ ಯೋಗ, ಕ್ರಿಶ್ಚಿಯನ್ನರು ಮಂಡಿಯೂರಿ ಮಾಡುವ ಪ್ರಾರ್ಥನೆಯೂ ಯೋಗವೆಂದು ಕಾವಿಧಾರಿಗಳೆ ಬಿತ್ತರಿಸುತ್ತ ನಡೆದರು. ಪುನರ್ಜನ್ಮ ಸಿದ್ಧಾಂತ ನಂಬುವ ಭೂಮಿಯ ಮೇಲಿನ ಏಕೈಕ ದೊಡ್ಡ ಪಂಥ ನಮ್ಮದು. ಅದಕ್ಕೆ ಜಗತ್ತಿನ ಮೂಲೆಮೂಲೆಗಳಲ್ಲಿ ವೈಜ್ಞಾನಿಕ ಪುಷ್ಟಿ ದೊರೆತಾಗ ಅದು ನಮ್ಮ ಧರ್ಮದ ಗೆಲುವೆಂದು ನಾವು ಬೀಗಲೂ ಇಲ್ಲ, ಹೇಳಿಕೊಳ್ಳಲೂ ಇಲ್ಲ. ನಮ್ಮ ಧರ್ಮಗುರುಗಳು ಜಗತ್ತಿನಾದ್ಯಂತ ತಿರುಗಾಡಿ, ಎಲ್ಲ ಮತೀಯರೆದುರು ಧ್ಯಾನದ, ಪ್ರಾಣಾಯಾಮದ ತರಗತಿಗಳನ್ನು ನಡೆಸುತ್ತ ಡಾಲರುಗಟ್ಟಲೆ ದುಡಿಯುತ್ತಾರಲ್ಲ; ಅವರೆಂದಿಗೂ ಇದು ಹಿಂದುವಿನ ಆಸ್ತಿಯೆಂದು ಹೇಳಿಕೊಳ್ಳುವುದೇ ಇಲ್ಲ. ಹೇಳಿಕೊಂಡರೆ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಎಂದು ಭಾವಿಸಿಬಿಡುತ್ತಾರೆ.
ಆದರೆ….. ನಮ್ಮೂರಿನ ಗಲ್ಲಿಯಲ್ಲಿ ಕುಡಿಯುತ್ತಿರುವ, ಕುಣಿಯುತ್ತಿರುವ ಹೆಣ್ಣು-ಗಂಡುಗಳ ಮೇಲೆ ದಾಳಿ ಮಾಡುವವರು ಮಾತ್ರ ಇದು ಹಿಂದೂ ಸಂಸ್ಕೃತಿಎಂದು ಬೀಗುತ್ತಾರೆ. ಹೊಟ್ಟೆಯಲ್ಲಿ ಬೆಂಕಿ ಹಾಕಿದಂತಾಗೋದು ಅದಕ್ಕೇ.
ಅದಾಗಲೇ ಜಗತ್ತಿನ ಬುದ್ಧಿವಂತರನ್ನು ಆಕರ್ಷಿಸಲು, ಸಂಕಲಿತ ಕುರಾನ್ ಅನ್ನು ಮಾರುಕಟ್ಟೆಗಿಳಿಸುತ್ತಿರುವ ಇಸ್ಲಾಮ್, ಜಿಹಾದಿನ ಪರಿಕಲ್ಪನೆಗಳನ್ನು ಪಕ್ಕಕ್ಕಿಡುತ್ತಿದೆ. ಕವಚ ಸುಂದರವಾಗಿಸಿ, ಅದೇ ಒಳಹೂರಣವನ್ನು ಬೇರೆ ರೀತಿಯಲ್ಲಿ ಬಡಿಸುತ್ತಿದೆ. ನಾವು ಮಾತ್ರ ಅತಿ ಶ್ರೇಷ್ಟ ಹೂರಣಕ್ಕೆ ಕಳಪೆ ಕವಚ ಹೊದೆಸಿ ನಮ್ಮನ್ನೆ ಬೆತ್ತಲಾಗಿಸಿಕೊಳ್ಳುತ್ತಿದ್ದೇವೆ.
ಇಷ್ಟಕ್ಕೂ ಹಿಂದುತ್ವ ಇದೇನಾ? ರನ್ನು ಬಲಗೈಯಿಂದ ಕುಡಿಯಬೇಕೇ, ಎಡಗೈಯಿಂದಲೋ? ಕೈಯನ್ನು ಎರಡು ಸಲ ತೊಳೆಯಬೇಕೇ, ನಾಲ್ಕು ಸಲವೋ? ಇಂಥ ಪ್ರಶ್ನೆಗಳನ್ನಿಟ್ಟುಕೊಂಡು ಉದ್ಗ್ರಂಥಗಳನ್ನು ಬರೆಯುವವರು ನೀವು. ನೀವು ಶಾಕ್ತರೂ ಅಲ್ಲ, ವೈಷ್ಣವರೂ ಅಲ್ಲ, ವೈದಿಕರೂ ಅಲ್ಲ, ಪುರಾಣಿಕರೂ ಅಲ್ಲ. ನೀವು ಮುಟ್ಟುಗೇಡಿಗಳಾಗಿಬಿಟ್ಟಿದ್ದೀರಿ. ನಿಮ್ಮ ಧರ್ಮ ಅಡುಗೆಮನೆ ಸೇರಿಬಿಟ್ಟಿದೆ. ಅಲ್ಲಿನ ಪಾತ್ರೆಗಳೆ ದೇವರಾಗಿಬಿಟ್ಟಿವೆ. ಜಗತ್ತಿನ ಶ್ರೇಷ್ಟ ಧರ್ಮ ನಿಮ್ಮದು. ಆದರೆ ಜನರಿಗೆ ಮೂಢ ನಂಬಿಕೆಗಳನ್ನೆ ಹಂಚುತ್ತಿದ್ದೀರಿ. ಬದಿಯಲ್ಲಿಯೆ ಅಮೃತ ಪ್ರವಾಹ ಹರಿಯುತ್ತಿದೆ, ಆದರೆ ಚರಂಡಿ ನೀರನ್ನು ಕುಡಿಸುತ್ತಿದ್ದೀರಿ.ಹಾಗೆಂದಿದ್ದು ಸ್ವಾಮಿ ವಿವೇಕಾನಂದ.
ಧರ್ಮದ ಹೆಸರಲ್ಲಿ ಯಾವುದಾದರೂ ಕೆಲಸ ಮಾಡುವ ಮುನ್ನ ನೂರು ಸಲ ಯೋಚಿಸುವುದೊಳಿತು. ಇಲ್ಲವಾದಲ್ಲಿ, ನಮ್ಮ ಅಪದ್ಧಗಳಿಗೆ ಧರ್ಮವೇ ಉತ್ತರಿಸಬೇಕಾಗುತ್ತದೆ. ತಾಲಿಬಾನ್ ಮಾಡುವ ಕೆಲಸಗಳಿಗೆ ಆರಂಭದಲ್ಲಿ ಸಮರ್ಥನೆ ಕೊಟ್ಟವರೆಲ್ಲ ಈಗ ಕಣ್ಣೀರಿಡುತ್ತಿದ್ದಾರೆ. ಮುಸ್ಲಿಮ್ ಸಮಾಜ ಕುದಿಯುತ್ತಿದೆ. ಇತ್ತ ಪಾಕಿಸ್ತಾನದಲ್ಲಿ ತಾಲಿಬಾನಿಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದರೆ ಉಸಿರೆತ್ತುವವರೂ ಇಲ್ಲ. ಲಾಡೆನ್‌ನಂತಹ ಧರ್ಮಯೋಧ(!)ನನ್ನು ಹುಚ್ಚುನಾಯಿಯನ್ನು ಕೊಲ್ಲುವಂತೆ ಕೊಂದು ಸಮುದ್ರಕ್ಕೆಸೆದು ಹೋದರಲ್ಲ ಅಮೆರಿಕನ್ನರು, ಆಗ ಇಡಿಯ ಇಸ್ಲಾಮ್ ಜಗತ್ತು ಕಮಕ್ ಎನ್ನಲಿಲ್ಲ. ಹೋಗಲಿ, ನಮ್ಮ ಧರ್ಮಕ್ಕೆ ತಕ್ಕ ಅಂತ್ಯ ಸಂಸ್ಕಾರ ಮಾಡಲಿಲ್ಲವೆಂದು ಯಾರೂ ಎಗರಾಡಲಿಲ್ಲ. ನಿಮಗೆ ಗೊತ್ತಿರಲಿ, ದೇಹ ಕಳಕೊಂಡ ಲಾಡೆನ್ ಸ್ವರ್ಗಕ್ಕೆ ಹೋಗಲಾರ. ಅಲ್ಲಿನ ಸವಲತ್ತುಗಳನ್ನು ಅನುಭವಿಸಲಾರ! ಆದರೂ ಇಸ್ಲಾಮ್ ಜಗತ್ತು ಮೌನವಾಗಿತ್ತು. ಕ್ರೌರ್ಯಕ್ಕೆ ಸಿಕ್ಕ ಸೂಕ್ತ ಪ್ರತಿಕ್ರಿಯೆ ಅದು.
ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. ಅವರು ಭಗವಂತ ಸೇಡು ತೀರಿಸಿಕೊಳ್ಳುತ್ತಾನೆಂದು ನಂಬದಿದ್ದರೂ ಇತಿಹಾಸ ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನು ಮರೆಯದಿರಿ ಎಂದು ಎಚ್ಚರಿಸುತ್ತಾರೆ. ಕ್ರೌರ್ಯ, ಅದರಲ್ಲೂ ನಮ್ಮವರದೇ ವಿರುದ್ಧದ ಕ್ರೌರ್ಯ ಯಾವತ್ತೂ ಸಂತೋಷ ಕೊಡುವಂಥದ್ದಲ್ಲ. ನಾವು ಸ್ವಲ್ಪ ದಿಟ್ಟ ಹೆಜ್ಜೆ ಮತ್ತು ಶಾಶ್ವತ ಹೆಜ್ಜೆ ಇಡುವುದನ್ನು ಕಲಿಯಬೇಕು.
ಸಿಂಧೂ ದರ್ಶನ ಅಂತ ಪ್ರತಿ ವರ್ಷ ಆಗುತ್ತೆ ಗೊತ್ತೇನು? ಲೆಹ್‌ನಲ್ಲಿ ಹರಿಯುವ ಸಿಂಧೂ ನದಿಯನ್ನು ನೋಡಲಿಕ್ಕೆ ಅಂತ ಸಾವಿರಾರು ಜನ ಅಲ್ಲಿಗೆ ಬಂದು ಸೇರುತ್ತಾರೆ. ಇದು ತರುಣ್ ವಿಜಯ್‌ರ ಕಾಲಕ್ಕೆ ಅಡ್ವಾಣಿಯವರ ನೇತೃತ್ವದಲ್ಲಿ ರೂಪುಗೊಂಡಿತು. ಹಿಂದೂಗಳು ಮತ್ತು ಬೌದ್ಧರ ನಡುವಿನ ಮನದುರಿಯನ್ನು ಶಮನ ಮಾಡಿದ ಯಾತ್ರೆ ಇದು. ಶ್ರೀನಗರದ ಮೂಲಕ ಹಾದುಹೋಗುವ ಪ್ರತಿ ಹಿಂದೂ ಕಾಶ್ಮೀರವನ್ನು ಮರಳಿ ಪಡೆದೇ ಪಡೆಯುತ್ತೇವೆಂಬ ಸಂಕಲ್ಪ ತೊಡುವಂತೆ ಮಾಡುವ ಯಾತ್ರೆ ಇದು.
ಸಮಸ್ಯೆಗಳಿಗೆ ಕೊರತೆ ಇದೆಯೇನು? ಸ್ವಲ್ಪ ಕಣ್ಮುಚ್ಚಿ ಕೈಯಾಡಿಸಿ.. ಅಲ್ಲೆಲ್ಲ ಸಮಸ್ಯೆಗಳೇ ಸಮಸ್ಯೆಗಳಿವೆ. ಅದನ್ನು ಬಿಟ್ಟು, ಕ್ಯಾಮೆರಾದೆದುರಿಗೆ ಹೆಣ್ಣಿನ ಕಪಾಳಕ್ಕೆ ಬಾರಿಸಿ ಪೌರುಷ ಮೆರೆಯುವ ಅಗತ್ಯವಿತ್ತೇನು? ಟೈಟ್‌ಪ್ಯಾಂಟ್- ಟೀ ಷರಟು ಹಾಕುವ ಹುಡುಗಿಯೊಳಗೂ ಒಬ್ಬ ಹಿಂದೂ ತಾಯಿಯ ಹೃದಯವಿರುತ್ತದೆ. ಹಾಗೇ, ಉದ್ದನೆಯ ಕುಂಕುಮವಿಟ್ಟುಕೊಳ್ಳುವ ಹುಡುಗನೂ ಕುಡಿದಾಗ ತಾಲಿಬಾನಿಗಳಂತೆ ವರ್ತಿಸುವುದೂ ಇದೆ. ಒಂದೇ ಮಾನದಂಡ ಎಲ್ಲ ಕಾಲದಲ್ಲೂ ಕೆಲಸ ಮಾಡೋಲ್ಲ.
ಊರಿಗೆಲ್ಲ ಹಿಂದುತ್ವದ ಬೋಧೆ ಕೊಡುವವನ ಮಗಳನ್ನೆ ಮುಸಲ್ಮಾನ ಹಾರಿಸಿಕೊಂಡು ಹೋದ ಉದಾಹರಣೆ ಸಮಾಜ ಕಂಡಿದೆ. ಹಾಗೆಯೇ ಧರ್ಮವೆಂಬುದು ಅಫೀಮು ಎಂದವನ ಮಗಳು ಮನೆ ಬಿಟ್ಟು ಕ್ರಿಶ್ಚಿಯನ್ನನ ಜೊತೆ ಹೊರಟಾಗ ದೇವರೆಲ್ಲಿ ಎಂದು ಹುಡುಕಿ ಬಂದವರನ್ನೂ ನೋಡಿದ್ದೇವೆ.
ನಮ್ಮೆದುರು ನಿಂತವರು ಹೋರಾಟಕ್ಕೆ ಹೊಸ ಹೊಸ ಮಾರ್ಗಗಗಳನ್ನು ಅರಸುತ್ತಿದ್ದಾರೆ. ಯಾರೂ ವಿರೋಧಿಸಲಾಗದ ನಯವಾದ ರಸ್ತೆಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಒಂದೆಡೆ ಶತಾಯಗತಾಯ ಸಂಖ್ಯೆ ಹೆಚ್ಚಿಸಲು ಪಣತೊಟ್ಟಿರುವ ಮುಸಲ್ಮಾನರು, ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಹೊತ್ತೊಯ್ಯುತ್ತಿದ್ದಾರೆ. ಪ್ರೀತಿಸಿದವರು ಮದುವೆಯಾಗಬಾರದೇನು? ಎಂಬ ಪ್ರಶ್ನೆಗೆ ಆಗಬಾರದು ಎಂದು ಉತ್ತರಿಸುವ ಧೈರ್ಯ ಯಾರಿಗೂ ಇಲ್ಲ. ನ್ನನ್ನು ಅವರಪ್ಪ ಎಷ್ಟು ಚೆನ್ನಾಗಿ ನೋಡಿಕೊಳ್ತಾರೆ ಗೊತ್ತ? ತೊಡೆಯ ಮೇಲೆ ಕೂರಿಸ್ಕೊಂಡು ಊಟ ಮಾಡಿಸ್ತಾರೆಅಂದವಳು ಹನ್ನೆರಡರ ಮುಗ್ಧ ಬಾಲೆಯಲ್ಲ. ಮುಸ್ಲಿಮ್ ಹುಡುಗನ ಬಲೆಗೆ ಬಿದ್ದಿದ್ದ ಬರೋಬ್ಬರಿ ಹತ್ತೊಂಭತ್ತರ ತರುಣಿ. ಅಂಥವಳನ್ನು ತೊಡೆಯ ಮೇಲೆ ಕೂರಿಸಿಕೊಂಡವನು ಮುಂದೇನು ಮಾಡಿಯಾನು? ಅದೇ ಆಯಿತು. ಮದುವೆಯಾದ ತಪ್ಪಿಗೆ ಒಂದಷ್ಟು ದಿನ ಸಹಿಸಿಕೊಂಡು ಕೊನೆಗೊಮ್ಮೆ ಓಡಿಯೇ ಹೋದಳು. ಆಮೇಲೆ ಅವಳ ಕಥೆ ಏನಾಯ್ತೆಂದು ಯಾರಿಗೂ ಗೊತ್ತಿಲ್ಲ. ಸಮಾನತೆ, ಸ್ವಾಭಿಮಾನದ ಕೂಗು ಜೋರಾಗಿರುವಾಗ ಹೆಣ್ಣು ಮಕ್ಕಳನ್ನು ಬಡಿದು ಕೂಡಿ ಹಾಕಲು ಸಾಧ್ಯವೇ ಇಲ್ಲ. ಬೆಂಗಳೂರಿನ ಪತ್ರಿಕೆ ಆಫೀಸೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಹುಡುಗಿ, ಅದೇ ಆಫೀಸಿನ ಮುಸಲ್ಮಾನ ಹುಡುಗನನ್ನು ಅಚಾನಕ್ಕು ಮದುವೆಯಾಗಿಬಿಟ್ಟಳು. ವಿಚಾರಿಸಿದಾಗ, ನನ್ನಪ್ಪನಿಗೆ ಮದುವೆ ಮಾಡುವ ಸಾಮರ್ಥ್ಯವಿಲ್ಲವೆಂದು ಅಲವತ್ತುಕೊಂಡಿದ್ದಳು. ಬದಲಾವಣೆ ತರುವ ಮನಸ್ಸಿದ್ದರೆ ಆ ಹಂತಕ್ಕೆ ಬರೋಣ. ಜಾತಿಗಳ ನಡುವಿನ ಗೋಡೆ ಮುರಿದು ಬೀಳಲಿ, ಮದುವೆ ಅನ್ನೋದು ಸರಳವಾಗಲಿ. ಇಂದಿನ ತರುಣರು ಸಂಕುಚಿತ ಮನೋಭಾವದ ಕವಚದಿಂದ ಹೊರಬರಲಿ. ಸಾಧ್ಯವಾದರೆ, ಇಷ್ಟವಾಗುವ ಅನ್ಯಧರ್ಮೀಯರನ್ನು ಪ್ರೀತಿಸಿ ಮದುವೆಯೂ ಆಗಲಿ. ಪ್ರೀತಿಸಿದವರನ್ನು ಮದುವೆಯಾಗುವುದರಲ್ಲಿ ತಪ್ಪೇನಿದೆ ಅಂತ ನಾವೂ ಕೇಳೋಣ.
ನಾವು ಬುದ್ಧಿವಂತರಾಗಬೇಕು. ಇಸ್ಲಾಮ್‌ನ ಕಟ್ಟರ್ ಪಂಥದಿಂದ ರೋಸಿಹೋಗಿ, ಮನೆಯವರು ನೋಡಿದ ಗಂಡನ್ನೊಪ್ಪದ ಹೆಣ್ಣುಮಗಳೊಬ್ಬಳು ಐಟಿ ಉದ್ಯೋಗಿ. ಅವಳಿಗೆ ಬೇಕೆಂದರೂ ಸಮ ವ್ಯಕ್ತಿತ್ವದ ಹಿಂದೂ ಹುಡುಗ ಸಿಕ್ಕುತ್ತಿಲ್ಲ. ಮೂರು ವರ್ಷಗಳಿಂದ ಆ ಹುಡುಗಿಗೆ ಉತ್ತರಿಸಲಾಗದೆ ಹೆಣಗುತ್ತಿದ್ದೇವೆ. ಮನೆಯವರು ಒಪ್ಪಲಾರರು ಎಂಬ ಕಾರಣವನ್ನು ಸಭ್ಯ ಹುಡುಗರು ಕೊಡುತ್ತಲೇ ಬಂದಿದ್ದಾರೆ. ಮತ್ತೆ, ಬದಲಾವಣೆ ಎಲ್ಲಿಂದ ಬರಬೇಕು ಹೇಳಿ? ಈ ಸಂಕುಚಿತ ಮನಸ್ಸುಗಳಿಗೆ ಮೊದಲು ಬಿಡುಗಡೆ ಕೊಡಿಸೋಣ. ಅವು ವಿಶಾಲವಾಗಲಿ.
ನೆನಪಿಡಿ, ನಮ್ಮದು ಎಲೆ, ಹೂವು, ರೆಂಬೆಗಳನ್ನು ಕತ್ತರಿಸಿದ ಬೋನ್ಸಾಯ್ ಮರವಲ್ಲ, ಲಕ್ಷಾಂತರ ಪಕ್ಷಿಗಳಿಗೆ ಆಶ್ರಯವಾದ ವಿಶಾಲವಾದ ಆಲದ ಮರ.

Leave a Reply