ವಿಭಾಗಗಳು

ಸುದ್ದಿಪತ್ರ


 

ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

ಹಿಂದುವನ್ನು ಹಿಂದು ಧರ್ಮದ ಆಚರಣೆಯನ್ನು ಅವಹೇಳನ ಮಾಡೋದು ಇಂದು ನೆನ್ನೆಯ ಪ್ರಯತ್ನವಲ್ಲ. ಶತಶತಮಾನದಿಂದಲೂ ಇಸ್ಲಾಮಿನ, ಕ್ರಿಸ್ತನ ಕಟ್ಟರ್ ಅನುಯಾಯಿಗಳು ಹಿಂದೂ ಧರ್ಮದ ನಾಶಕ್ಕೆ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಒಮ್ಮೆ ಕತ್ತಿ ಹಿರಿದು, ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಹೆದರಿಸಿ, ಒಮ್ಮೆ ಸೇವೆಯ ಸೋಗಿನಲ್ಲಿ, ಒಮ್ಮೆ ಸಿನೆಮಾ ಪರದೆಯಲ್ಲಿ!
ಪ್ರಶ್ನಾತೀತರು ಯಾರೂ ಇಲ್ಲ. ಸೃಷ್ಟಿಗೆ ಕಾರಣನಾದವನನ್ನೆ ಬಗೆಬಗೆಯಲ್ಲಿ ಪ್ರಶ್ನಿಸಿ ಉತ್ತರವನ್ನು ಮಥಿಸಿದ ಸಮಾಜ ನಮ್ಮದು. ಚರ್ಚೆ, ವಾಗ್ವಾದಗಳು ನಮ್ಮಲ್ಲಿ ಉಳಿದೆಲ್ಲ ಪಂಥಗಳಿಗಿಂತಲೂ ಸಹಜ ಮತ್ತು ಸಾಮಾನ್ಯ. ವೇದಕಾಲೀನ ಋಷಿ ಯಾಜ್ಞವಲ್ಕ್ಯ ಮತ್ತು ಗಾರ್ಗಿಯರ ಸಂಭಾಷಣೆಗಳು ಮೂಲವನ್ನೆ ಅಲುಗಾಡಿಸಬಲ್ಲ ಪ್ರಶ್ನೋತ್ತರಗಳು. ಶಂಕರರ ಮತ್ತು ಬುದ್ಧಾನುಯಾಯಿಗಳ ಚರ್ಚೆಗಳೇನು ಕಡಿಮೆಯವಲ್ಲ. ಆರ್ಯ ಸಮಾಜದ ಸಯಾನಂದರಂತೂ ಎದುರಾಳಿಗಳನ್ನು ಯಾವ ಗದೆಯಿಂದ ಬೀಸುತ್ತಿದ್ದರೋ ಅದೇ ಗದಾಪ್ರಹಾರವನ್ನು ಸ್ವಂತ ಮತದ ಮೇಲೂ ಮಾಡುತ್ತಿದ್ದರು. ಓರೆಕೋರೆಗಳನ್ನು ತಿದ್ದಿತೀಡುವಲ್ಲಿ ನಾವು ಯಾವಾಗಲೂ ಒಂದು ಹೆಜ್ಜೆ ಮುಂದೆಯೇ. ಆದರೆ ನಾವು ತಿದ್ದಹೊರಟಿದ್ದು ನಮ್ಮನ್ನೇ ಹೊರತು ಅನ್ಯರನ್ನಲ್ಲ. ಅನ್ಯರು ನಮ್ಮ ಮೇಲೆ ಏರಿ ಹೋಗುತ್ತಿದ್ದಾರೆನಿಸಿದಾಗ ಮಾತ್ರ ಸಾಕಷ್ಟು ಅಧ್ಯಯನ ಮಾಡಿ ತಿರುಗಿ ಬಿದ್ದಿದ್ದು. ಶಂಕರಾನುಯಾಯಿಗಳು ಕೆಲವರು ಬುದ್ಧನ ಮತ ಸ್ವೀಕರಿಸಿ ಅವರ ವಾದಶೈಲಿಯನ್ನು ಅರಿತು, ಮರಳಿ ಮೂಲಮತಕ್ಕೆ ಬಂದು ಅದಕ್ಕೆ ಉತ್ತರಿಸಿದ್ದೂ ಈ ಕಾರಣದಿಂದಲೇ. ರಾಜಾ ರಾಮ್‌ಮೋಹನ್ ರಾಯರು ಕ್ರಿಸ್ತಾನುಯಾಯಿಗಳ ಒಡನಾಟದ ಪ್ರಭಾವದಿಂದ ಮೂರ್ತಿ ಪೂಜೆಯನ್ನು ಧಿಕ್ಕರಿಸಿದ್ದು ನಿಜ. ಆದರೆ ಬರಬರುತ್ತಾ ಹಿಂದೂ ಧರ್ಮದ ತಿರುಳಿನಿಂದ ಅದೆಷ್ಟು ಆಕರ್ಷಿತರಾದರೆಂದರೆ, ವಾದಕ್ಕೆ ಬಂದಿದ್ದ ಪಾದ್ರಿಯೇ ಮನಸೋತು ಹಿಂದೂ ಧರ್ಮ ಸ್ವೀಕರಿಸುವಂತೆ ಮಾಡಿದ್ದರು!
ಹೀರಂ ಮ್ಯಾಕ್ಸಿಂ, ಸ್ವಾಮಿ ವಿವೇಕಾನಂದರು ಅಮೆರಿಕಾದ ವೇದಿಕೆಯ ಮೇಲೆ ನಿಂತು ‘ಕ್ರಿಸ್ತ ಪಾದ್ರಿಗಳೊಂದಿಗೆ ಬೆಕ್ಕು ಇಲಿಯೊಂದಿಗೆ ಆಡುವಂತೆ ಆಡುತ್ತಿದ್ದರು’ ಎಂದು ಬರೆದಿದ್ದಾರೆ! ಸ್ವಾಮೀಜಿಯವರ ಪ್ರವಾಸದ ನಂತರ ಅಮೆರಿಕದ ಕ್ರಿಶ್ಚಿಯನ್ನರಿಗೆ ಪ್ರತಿ ವರ್ಷ ಹತ್ತು ಲಕ್ಷ ಡಲರ್‌ಗಳಷ್ಟು ಹಣ ಉಳಿತಾಯವಾಗುತ್ತಿತ್ತೆಂಬುದು ಅವನ ಅಭಿಪ್ರಾಯ. ಅಲ್ಲಿನ ಅನೇಕರು ಯೋಚಿಸಿದ್ದರಂತೆ, ‘ವಿವೇಕಾನಂದರ ನಾಡಿನ ಜನರ ಉದ್ಧಾರಕ್ಕೆಂದು ನಾವು ಮಿಷನರಿಗಳಿಗೆ ಹಣ ಕೊಡುವುದು ವ್ಯರ್ಥ; ವಿವೇಕಾನಂದರಂಥವರನ್ನು ಭಾರತದಿಂದ ಕರೆಸಿಕೊಂಡು ನಾವು ಉದ್ಧಾರವಾಗುವುದೇ ಸೂಕ್ತ’ ಎಂದು!
ನಮ್ಮದು ನೆನ್ನೆ ಮೊನ್ನೆ ಹುಟ್ಟಿದ ಧರ್ಮವಲ್ಲ. ಅದು ಅತಿ ಪ್ರಾಚೀನ ಧರ್ಮ. ಹಾಗಂತ ಮುಂದೆ ವಾಮದೇವ ಶಾಸ್ತ್ರಿಯಾಗಿ ಬದಲಾದ ಡೇವಿಡ್ ಫ್ರಾಲಿ ಅಧಿಕೃತವಾಗಿ ಉಲ್ಲೇಖ ಮಾಡುತ್ತಾರೆ. ‘ನಾನೇಕೆ ಹಿಂದುವಾದೆ?’ ಎಂಬ ತಮ್ಮ ಪುಸ್ತಕದಲ್ಲಿ ಋಗ್ವೇದದಿಂದ ಹಿಡಿದು ಆಧುನಿಕ ಕಾಲದ ಎಸ್.ಎಸ್.ರಾಜಾರಾಂ ರವರೆಗೆ ಪುಂಖಾನುಪುಂಖವಾಗಿ ಉಲ್ಲೇಖಿಸುತ್ತಾರೆ. ಅನ್ಯ ಮತಕ್ಕೂ ಇದಕ್ಕೂ ಇರುವ ಭಿನ್ನತೆಗಳನ್ನು ಗುರುತಿಸಿ ಇದರ ಶ್ರೇಷ್ಠತೆ ಎತ್ತಿ ಹಿಡಿಯುತ್ತಾರೆ. hih
ಅನುಮಾನವೇ ಇಲ್ಲ. ಈ ಹತ್ತು ಸಾವಿರ ವರ್ಷಗಳಲ್ಲಿ ಮಿಡತೆಯ ಹಿಂಡಿನಂತೆ ಬಂದ ದಾಳಿಕೋರರು ಈ ಧರ್ಮದ ನಾಶಕ್ಕೆ ಪ್ರಯತ್ನಿಸಿದಾಗಲೆಲ್ಲ ‘ಇದು ಹೊಸ ರೂಪ ಆವಾಹಿಸಿಕೊಂಡಿದೆ. ಒಳಗಿನ ತಿರುಳನ್ನು ಹಾಗೆಯೇ ಉಳಿಸಿಕೊಂಡು ಹೊರಗಣ ರೂಪಕ್ಕೆ ಹೊಸ ರಂಗು ಬಳಿದು ತನ್ನ ತಾನು ಉಳಿಸಿಕೊಂಡಿದೆ. ಬುದ್ಧ ಭಿಕ್ಷುಗಳ ಪ್ರಭಾವ ಅತಿಯಾದಾಗ ಬಾಲ್ಯ ಸನ್ಯಾಸದ ಕಲ್ಪನೆ ಹುಟ್ಟಿತು. ಮುಸಲ್ಮಾನರ ಆಟಾಟೋಪ ತೀವ್ರವಾದಾಗ ಸುಪ್ತವಾಗಿದ್ದ ಭಕ್ತಿಯು ಚಳವಳಿಯಾಗಿ ಭುಗಿಲೆದ್ದಿತು. ಹರಿ ಎನ್ನುವ ಹೆಸರೇ ಭಕ್ತಿಯ ಅಭಿವ್ಯಕ್ತಿಯಾಯಿತು. ಒಬ್ಬರನ್ನೊಬ್ಬರು ಸಂಧಿಸುವಾಗ ಉತ್ತರ ಭಾರತದಲ್ಲಿ ಈಗಲೂ ‘ಹರಿಬೋಲ್’ ಎನ್ನುತ್ತಾರಲ್ಲ, ಅದು ಮುಸಲ್ಮಾನ ರಾಜರ ವಿರುದ್ಧ ಸೆಟೆದು ನಿಂತ ಹಿಂದೂ ಸಮಾಜದ ದನಿಯೇ!
ಹೀಗೆ ಕಾಲಕ್ರಮದಲ್ಲಿ ಹೊರ ಆವರಣಕ್ಕೆ ಬಳಿಯುತ್ತ ಹೋದ ಬಣ್ಣವನ್ನೆ ಅನೇಕರು ಹಿಂದೂ ಧರ್ಮವೆಂದು ಭಾವಿಸಿ ಯುದ್ಧಕ್ಕೆ ತೊಡೆ ತಟ್ಟಿ ನಿಂತರು. ಕೆಲವೆಡೆ ಒಂದಷ್ಟು ದುರುಪಯೋಗವೂ ಆಯಿತು. ಕಾವಿಧಾರಣೆ ಬಲು ಸಲೀಸಾಯ್ತು. ಭಕ್ತಿಯ ಹೆಸರಲ್ಲಿ ಮೂರ್ತಿಪೂಜೆ ವ್ಯಾಪಕವಾಯ್ತು. ಕೊನೆಗೆ ಸಿನೆಮಾ – ಕ್ರಿಕೆಟ್ ಸ್ಟಾರುಗಳಿಗೂ ಮಂದಿರವಾಗಿ ಕ್ಷೀರಾಭಿಷೇಕ ನಡೆಯಿತು.
ಹೌದು… ಇವೆಲ್ಲವೂ ಸಹಿಸಲಾಗದವೇ ನಿಜ. ಆದರೆ ಇದು ಹಿಂದೂ ಧರ್ಮವಲ್ಲ, ಅದರೊಳಗಿನ ಸತ್ವದ ಕಡೆಗೆ ಹೊರಳುವ ಪ್ರಯತ್ನವನ್ನೆ ಯಾರೂ ಮಾಡಿಲ್ಲ! ಯಾರು ಈ ಪ್ರಯತ್ನಕ್ಕೆ ಕೈ ಹಾಕುವರೋ ಅವರು ಅಕ್ಷರಶಃ ಶಾಂತರಾಗುತ್ತಾರೆ. ಎಲ್ಲರಲ್ಲೂ ದೇವರನ್ನು ಕಾಣುತ್ತಾ ಆನಂದೋನ್ಮತ್ತರಾಗುತ್ತಾರೆ. ಅದನ್ನು ಅರಿಯಲಾಗದವರು ಮಾತ್ರ ‘ಪೀಕೆ’ಯಂತಹ ಸಿನೆಮಾದ ಮೂಲಕ ಸವಾಲೆಸೆದ ವಿಕೃತ ತೃಪ್ತಿ ಪಡೆಯುತ್ತಾರೆ.
ಬಾಲಿವುಡ್ ಸಿನೆಮಾಗಳು ಎತ್ತುವ ಯಾವ ಪ್ರಶ್ನೆಗಳೂ ಹೊಸತಲ್ಲ, ನಾವು ಅದನ್ನು ಅಲ್ಲಗಳೆಯುವುದೂ ಇಲ್ಲ. ಆದರೆ ಈ ಪ್ರಶ್ನೆ ಎತ್ತುವ ಹಿಂದಿನ ಉದ್ದೇಶವಷ್ಟೆ ನಮಗೆ ಮುಖ್ಯ. ಹಾಗೆ ನೋಡಿದರೆ ಸ್ವಾಮಿ ವಿವೇಕಾನಂದರಿಗಿಂತಲೂ ನಮ್ಮನ್ನು ಚೆನ್ನಾಗಿ ಝಾಡಿಸಿದ ಮತ್ತೊಬ್ಬ ವ್ಯಕ್ತಿ ಇರುವುದು ಅಸಾಧ್ಯ. ‘ಕೆಲವು ಸಾವಿರ ಢೋಂಗೀ ಸಾಧುಗಳು, ಒಂದಷ್ಟು ಲಕ್ಷ ಢೋಂಗೀ ಸಮಾಜ ಸುಧಾರಕರು ಈ ಧರ್ಮವನ್ನು ಹಾಳು ಮಾಡಿಬಿಟ್ಟಿದ್ದಾರೆ’ ಎಂದು ಅವರು ಹೇಲುವುದರ ಹಿಂದೆ ಗೂಢಾರ್ಥ ಅಡಗಿದೆ. ಅವರ ಉದ್ದೇಶ ಸಾಧುಗಳ ನಾಶವಲ್ಲ, ಬದಲಿಗೆ ಸಾಧು ಸುಧಾರಣೆ. ಹಿಂದೂ ಧರ್ಮವನ್ನು ಶಕ್ತಿವಂತಗೊಳಿಸುವ ಸಾತ್ವಿಕ ಪ್ರಯತ್ನ ಅದು. ಅದಕ್ಕೇ ಅವರು ನಮಗೆ ದೇವರಾಗೋದು. ಬುದ್ಧ ವೇದವಿರೋಧಿಯಾದರೂ ಅವನನ್ನು ಹಿಂದೂ ಸಮಾಜ ಪೂಜಿಸೋದು ಆತ ನಮ್ಮ ಓರೆಕೋರೆಗಳನ್ನು ಸಾತ್ವಿಕ ಮನೋಭಾವದಿಂದಲೇ ತಿದ್ದಿದ ಎನ್ನುವ ಕಾರಣಕ್ಕಾಗಿಯೇ.
ಆದರೆ ಆಮೀರ್ ಖಾನ್‌ನ ಮನೋಗತ ಖಂಡಿತ ಸಾಧುವಲ್ಲ. ಈ ಹಿಂದೆ ಆತ ಸತ್ಯಮೇವ ಜಯತೇಯಲ್ಲೂ ಹೀಗೇ ಂಆಡಿದ್ದ. ಸಾಮಾಜಿಕ ಸಮಸ್ಯೆಗಳು ಅಂದಾಗಲೆಲ್ಲ ಅವರಿಗೆ ಕಾಣಿಸೋದು ಜಾತಿ ವೈಷಮ್ಯಗಳೇ! ಸ್ತ್ರೀ ಸಮಾನತೆಯ ಕೊರತೆ ಅದೇಕೆ ಕಾಣುವುದೇ ಇಲ್ಲ? ಗಂಡೊಬ್ಬ ನಾಲ್ಕು ಹೆಣ್ಣನ್ನು ಮದುವೆಯಾಗುವ ಬಗ್ಗೆ ಅದೇಕೆ ಬೌದ್ಧಿಕ ಶ್ರೀಮಂತಿಕೆಯ ಸಮಾಜ ಚಕಾರ ಎತ್ತುವುದಿಲ್ಲ? ಎತ್ತಿದ ಪ್ರಶ್ನೆಗಳು ಮನುಕುಲದ ಹಿತದೃಷ್ಟಿಯವಾಗಬೇಕೇ ಹೊರತು ಒಂದು ಪಂಥವನ್ನು ನಿರ್ನಾಮ ಮಾಡಬೇಕೆಂಬ ಉದ್ದೇಶದ್ದಲ್ಲ.
291442-aamir-weird-pkನನಗೊಬ್ಬ ವೈದ್ಯರು ‘ಪೀಕೆಯಲ್ಲಿ ತೋರಿಸಿದ್ದರಲ್ಲಿ ತಪ್ಪೇನಿದೆ? ಢೋಂಗೀ ಬಾಬಾಗಳ ಹಿಂದೆ ಬಿದ್ದು ಕ್ಯಾನ್ಸರ್ ತೃತೀಯ ಹಂತಕ್ಕೆ ಹೋದಮೇಲೆ ರೋಗಿಗಳು ನಮ್ಮ ಬಳಿ ಬಂದು ರೋಗ ಉಲ್ಬಣಗೊಂಡು ಸಾಯುತ್ತಾರೆ. ತಪ್ಪಲ್ಲವೆ?’ ಅಂದರು. ಅದೂ ನಿಜವೇ. ಆದರೆ ರೋಗವೇ ಇಲ್ಲದವನ ಬಳಿ ದುಡ್ಡಿದೆ ಎಂಬ ಏಕಮಾತ್ರ ಕಾರಣಕ್ಕೆ ಹೃದಯವನ್ನೆ ಬಗೆದು ಹಣ ಪೀಕುವ ವೈದ್ಯರೆಷ್ಟಿಲ್ಲ? ಎಂದು ಕೇಳಿದೆ. ಡಾಕ್ಟರ್ ಮೌನವಾಗಿದ್ದರು. ಹುಬ್ಬಳ್ಳಿ ಒಂದರಲ್ಲಿಯೇ ಇರುವ ಆಸ್ಪತ್ರೆಗಳ ಒಟ್ಟೂ ದಿನದ ಆದಾಯ ಸುಮಾರು ಎಂಟು ಕೋಟಿಯಂತೆ! ತಿಂಗಳಿಗೆ ೨೫೦ ಕೋಟಿ ರುಪಾಯಿಗಳು! ವರ್ಷಕ್ಕೆ ಸುಮಾರು ಮೂರು ಸಾವಿರ ಕೋಟಿ!! ಲೆಕ್ಕ ಮುಂದಿಟ್ಟೊಡನೆ ಅವರ ಮುಖ ಕೆಂಪಾಯ್ತು. ಎಲ್ಲಾ ವೈದ್ಯರೂ ಒಂದೇ ರೀತಿ ಇರೋದಿಲ್ಲ ಎಂದರು. ಹಾಗೆಯೇ ಎಲ್ಲಾ ಬಾಬಾಗಳೂ ಢೋಂಗಿಯೇ ಆಗಬೇಕಿಲ್ಲ ಎಂದೆ. ಚರ್ಚೆ ಮುಗಿದಿತ್ತು.
ಅಮೀರ್ ಖಾನ್‌ನ ಸಿನೆಮಾವನ್ನು, ಈ ಹಿಂದೆ ಬಂದಂತಹ ಓ ಮೈ ಗಾಡ್ ಅನ್ನು ಭಾರತದಲ್ಲಿ ಹಿಂದೂಗಳ ನಡುವೆಯೇ ಕುಳಿತು ನೋಡುವುದು ಸರಿ; ಯಾವಾಗಲಾದರೂ ದೂರದ ಅಬುದಾಭಿಯಲ್ಲಿ, ದುಬೈನಲ್ಲಿ, ಅಮೆರಿಕಾ – ಲಂಡನ್ನುಗಳಲ್ಲಿ ನೋಡುವುದನ್ನು ಊಹಿಸಿಕೊಳ್ಳಿ! ಎದೆ ಒಡೆದುಹೋಗುತ್ತದೆ. ಪಾಕಿಸ್ತಾನಿ ಗೆಳೆಯನೊಡನೆ ನೋಡುವವನ ಕಥೆಯಂತೂ ಅಸಹನೀಯ. ಹಿಂದೂ ಪ್ರಧಾನಿಯಾಗಿ ಯೋಗ, ಭಗವದ್ಗೀತೆಗಳನ್ನು ಜಗತ್ತಿಗೆ ಹಂಚುತ್ತ ನಡೆದಿರುವ ನರೇಂದ್ರ ಮೋದಿಯವರ ಓಟಕ್ಕೆ ಇದು ಎಂತಹ ಸ್ಪೀಡ್ ಬ್ರೇಕರ್ ಆಗಬಹುದೆಂದು ಆಲೋಚಿಸಿ. ಹಿಂದೂ ಜಾಗೃತವಾಗಲಿ. ಒಗ್ಗಟ್ಟಾಗಿ ನಿಲ್ಲಲು ಇದು ಸಕಾಲ. ನಮ್ಮ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ನಾವೇ ಬೀದಿಗೆ ಬರೋಣ. ಅಮೀರ್ ಖಾನ್ ತನ್ನ ಸಮುದಾಯವನ್ನು ತಿದ್ದುವ ಹೊಣೆ ಹೊತ್ತರೆ ಸಾಕು!
ವಿಶ್ವರೂಪಮ್‌ನ ವಿರುದ್ಧ ಹೋರಾಡಿದ ಮುಸಲ್ಮಾನರ ಕುರಿತು ನನಗೆ ಹೆಮ್ಮೆಯಿದೆ. ತಮ್ಮ ಪಂಥಕ್ಕೆ ಆಘಾತವಾಗುವ ಸತ್ಯವನ್ನೂ ಅವರು ಸಹಿಸಲಾರರು; ನಾವು ಸುಳ್ಳನ್ನೂ ಚಪ್ಪಾಳೆ ತಟ್ಟಿ ಆನಂದಿಸುತ್ತೇವೆ.
ಬದಲಾಗೋದು ಬೇಡವೆ?

Leave a Reply