ವಿಭಾಗಗಳು

ಸುದ್ದಿಪತ್ರ


 

ಬೆಳಕು ತೋರುವ ಗುರುವಿಗೆ ನಮನ..

‘ಗುರು’ ಎನ್ನುವ ಪದವೇ ಅದೆಷ್ಟು ಸುಂದರ ಅಲ್ಲವೇ? ‘ಗು’ ಎಂದರೆ ಅಂಧಕಾರವಂತೆ. ‘ರು’ ಅಂದರೆ ಬೆಳಕಂತೆ, ಕತ್ತಲಿಂದ ಬೆಳಕಿನೆಡೆಗೆ ಒಯ್ಯುವವನೇ ಗುರು! ಈ ಕಲ್ಪನೆಯೇ ಸುಂದರ. ಅದಕ್ಕೂ ಮಿಗಿಲಾಗಿ ಈ ಪದ ಸೃಷ್ಟಿಯೇ ಅದ್ಭುತ. ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುವವನು ಎಂದ ಮೇಲೆ ಆತ ಮೊದಲೇ ಬೆಳಕನ್ನು ಕಂಡವನೆಂದಾಯ್ತು. ಜೊತೆಗೆ ಬೇಕೆಂದಾಗ ಕತ್ತಲೆಡೆಗೆ ಮರಳಿ ಬರಬಲ್ಲ ಸಾಮಥ್ರ್ಯ ಅವನಿಗಿರಬೇಕು. ಅಷ್ಟೇ ಅಲ್ಲ. ಹೀಗೆ ಬಂದವನು ಕತ್ತಲಲ್ಲಿರುವವರ ಜೊತೆಗೊಯ್ಯುವ ಸಾಮಥ್ರ್ಯವನ್ನೂ ಹೊಂದಿರಬೇಕು. ಅಬ್ಬಬ್ಬ! ಅಲ್ಲಿಗೆ ಸಾಮಾನ್ಯನೊಬ್ಬ ಗುರುವಾಗುವಂತೆಯೇ ಇಲ್ಲ. ಅಂತಹ ಗುರು ದೊರೆತುಬಿಟ್ಟರೆ ಮೋಕ್ಷದ್ವಾರ ತೆರೆದಂತೆಯೇ ಬಿಡಿ.

ಗುರುವಿನ ಕಾರ್ಯವ್ಯಾಪ್ತಿ ಯುಗದಿಂದ ಯುಗಕ್ಕೆ ವಿಸ್ತಾರವಾಗುತ್ತಲೇ ಸಾಗಿದೆ. ರಾಮನ ಕಾಲದಲ್ಲಿ ನಡೆದು ತೋರಿದರೆ ಜನ ಅನುಸರಿಸುತ್ತಿದ್ದರು. ಹೀಗಾಗಿಯೇ ರಾಮನ ಪಥಕ್ಕೆ ಅಷ್ಟೊಂದು ಶಕ್ತಿ. ಅವನು ಆಡಿದ್ದಕ್ಕಿಂತ ಆಡದೆ ನುಂಗಿಕೊಂಡದ್ದೆ ಹೆಚ್ಚು. ಮನಸ್ಸಿನಲ್ಲಿ ಒಂದೇ ಒಂದು ಕೆಟ್ಟ ಆಲೋಚನೆ ಸುಳಿದರೂ ಅದನ್ನು ಹತ್ತಿಕ್ಕಿ ಬಿಡುತ್ತಿದ್ದನಂತೆ ರಾಮ. ತಂದೆ-ತಾಯಿಯರೊಂದಿಗೆ, ತಮ್ಮಂದಿರೊಂದಿಗೆ, ಗುರು-ಹಿರಿಯರೊಂದಿಗೆ ಕೊನೆಗೆ ಶತ್ರು-ಮಿತ್ರರೊಂದಿಗೂ ಹೇಗಿರಬೇಕೆಂದು ಆತ ನಡೆದೇ ತೋರಿದ.
ಕಾಲ ಬದಲಾಯ್ತು. ನಡೆದದ್ದನ್ನು ಅರಿತು ನಡೆಯಬಲ್ಲ ಸಾಮಥ್ರ್ಯವನ್ನು ಸಮಾಜ ಕಳೆದುಕೊಂಡಿತು. ಆಗಲೇ ಕೃಷ್ಣನ ಅವತಾರವಾಗಿದ್ದು. ತನ್ನ ಸಖನಿಗೇ ನಡೆದು ತೋರಿದ ಮಾರ್ಗ ತಿಳಿಯದಾದಾಗ ಕೃಷ್ಣ ಹದಿನೆಂಟು ಅಧ್ಯಾಯಗಳ ಗೀತೆ ಬೋಧಿಸಬೇಕಾಯ್ತು. ಅಜರ್ುನನನ್ನು ಒಪ್ಪಿಸಬೇಕಾಯ್ತು. ಕುರುಕ್ಷೇತ್ರ ಯುದ್ಧದ ನಡುವೆಯೂ ಅಜರ್ುನನಿಗೆ ಅನೇಕ ಬಾರಿ ಛೀಮಾರಿ ಹಾಕಿ ತಿಳಿಹೇಳಬೇಕಾಯ್ತು.

ಕಾಲ ಮತ್ತೆ ಬದಲಾಯಿತು. ಈಗ ನಡೆ-ನುಡಿಯಷ್ಟೇ ಅಲ್ಲ, ಕೈ ಹಿಡಿದು ನಡೆವವರೂ ಬೇಕಾಯಿತು. ಹಾಗೆಂದೇ ಬುದ್ಧನ ಅವತಾರವಾಗಿದ್ದು. ತಾನು ಭಗವತಮೃತಸುಧೆ ಸವಿದ ಬುದ್ಧ ಸುಮ್ಮನಿರಬಹುದಿತ್ತು. ಆತ ನುಡಿದ. ಬರಿ ಆಡುತ್ತಲೇ ಉಳಿಯಲಿಲ್ಲ. ತಾನೇ ಕೈ ಹಿಡಿದು ನಡೆದ. ನೂರಾರು-ಸಾವಿರಾರು ಜನರನ್ನು ಜಾತಿ-ಮತ-ಭೇದಗಳ ಮರೆತು, ಮೇಲು-ಕೀಳು ವಾದವ ಮರೆತು ಜೊತೆಗೊಯ್ದ. ತಾನೇ ಕರೆದೊಯ್ದು ಪರಮ ಪದ ಮುಟ್ಟಿಸಿದ. ಆದರೆ ಆತ ಎಂದಿಗೂ ಬೇಸರಿಸಲಿಲ್ಲ. ಆತನ ಕರುಣಾದೃಷ್ಟಿ ಮಹೋನ್ನತವಾದುದು. ಎಲ್ಲರೂ ಸಮಾನವಾಗಿ ಪ್ರೀತಿಸುವ ಅವನ ಕಾರುಣ್ಯವೇ ಅವನನ್ನು ಸಾಕ್ಷಾತ್ ಭಗವಂತನನ್ನಾಗಿಸಿದ್ದು. ಅದಕ್ಕೆ ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎಂದದ್ದು ದಾಸರು.

ತೀವ್ರ ಹಂಬಲವಿದ್ದಾಗ ಅಂತಹ ಗುರು ದೊರೆಯುತ್ತಾನೆ. ಸಾಧನೆ ಛಲವಿದ್ದರೆ ಆತ ಬೋಧಿಸುತ್ತಾನೆ. ಶ್ರದ್ಧೆ ಇದ್ದರೆ ಆತ ಗೆಲ್ಲಿಸುತ್ತಾನೆ. ‘ಗುರುತ್ವ’ ಪದದ ಮೊದಲಕ್ಷರಗಳು ಗುರುವಿನದ್ದೇ. ತೂಕ ಬೇಕೆಂದರೆ ಗುರುವಿರಲೇಬೇಕು. ಇಲ್ಲವಾದರೆ ಬದುಕು ಜಾಳು-ಜಾಳು. ಎಂದೂ ನಡೆಯದ ಆ ದಾರಿಯಲಿ ಇಂದು ನಾಲ್ಕು ಹೆಜ್ಜೆ ಇಡೋಣ.

 

Leave a Reply