ವಿಭಾಗಗಳು

ಸುದ್ದಿಪತ್ರ


 

WTO ಸೂತ್ರ ನಮ್ಮ ಕೈಲಿ ಭದ್ರ!

ಹೊಸದಿಗಂತ ~ ೨

ಮಹತ್ವದ ವ್ಯಾಪಾರೀ ಒಪ್ಪಂದವೊಂದಕ್ಕೆ ಭಾರತದ ನಿಲುವನ್ನು ಅಮೆರಿಕಾ ಬೆಂಬಲಿಸಿದೆ ಎಂಬ ಸುದ್ದಿ ನೆನ್ನೆ ಮೊನ್ನೆಯೆಲ್ಲ ಜಗತ್ತಿಗೆ ನೆಮ್ಮದಿ ತಂತು. ಈ ಬಾರಿ ಖಡಕ್ಕಾಗಿ ಕುಳಿತುದ್ದುದು ಅಮೆರಿಕವಲ್ಲ, ಭಾರತವೇ. ಬಡವರ ಅನುಕೂಲಕ್ಕೆ ಧಕ್ಕೆ ತರುವಂತಹ ಯಾವ ಒಪ್ಪಂದಕ್ಕೂ ನಾವು ಬಗ್ಗಲಾರೆವು ಎಂಬುದು ಭಾರತದ ಗಟ್ಟಿ ನಿಲುವಾಗಿತ್ತು. ಆರಂಭದಲ್ಲಿ ಬಲಿಷ್ಠ ರಾಷ್ಟ್ರಗಳು ಸೆಟೆದು ನಿಂತವಾದರೂ ಬರಬರುತ್ತ ಸಡಿಲಗೊಂಡವು. ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲ ಭಾರತದ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದಂತೆ ಅತ್ತ ಸಿರಿವಂತ ರಾಷ್ಟ್ರಗಳು ಭಾರತವನ್ನು ಓಲೈಸುವ ಜವಾಬ್ದಾರಿಯನ್ನು ಅಮೆರಿಕಕ್ಕೆ ಕೊಟ್ಟು ಕೈತೊಳೆದುಕೊಂಡವು. ಅಮೆರಿಕ ಲಲ್ಲೆಗರೆಯುತ್ತ ಭಾರತದ ಸುತ್ತುವುದನ್ನು ಕಂಡಾಗ ಕಳೆದುಹೋಗಿದ್ದ ವೈಭವ ಮರುಕಳಿಸುತ್ತಿದೆ ಎನ್ನಿಸಿತ್ತು!

ಇಷ್ಟಕ್ಕೂ ಒಪ್ಪಂದ ಏನು? ಭಾರತ ಎದುರಿಗಿಟ್ಟಿದ್ದ ಪ್ರಶ್ನೆಗಳ್ಯಾವುವು? ಉತ್ತರ ಹುಡುಕುವ ಸಣ್ಣ ಪ್ರಯತ್ನ ಮಾಡೋಣ.

ವಿಶ್ವ ವ್ಯಾಪಾರ ಒಕ್ಕೂಟ ಸುಮಾರು ಎಂಟು ವರ್ಷಗಳ ಉರುಗ್ವೆ ಸುತ್ತಿನ ಮಾತುಕತೆ ನಂತರ ಹುಟ್ಟಿಕೊಂಡ ವ್ಯಾಪಾರ ಸಂಬಂಧಿ ವೈಶ್ವಿಕ ಸಂಘಟನೆ. ರಾಷ್ಟ್ರ – ರಾಷ್ಟ್ರಗಳ ನಡುವಣ ವ್ಯಾಪಾರ ವ್ಯವಹಾರಕ್ಕಿರುವ ಅಡೆತಡೆಗಳನ್ನು ನಿವಾರಿಸಿ ಜಗತ್ತನ್ನು ಒಂದು ಮಾರುಕಟ್ಟೆಯಾಗಿಸುವ ಪ್ರಯತ್ನ ಅದರದ್ದು. ಸಹಜವಾಗಿಯೇ ಸಿರಿವಂತ ರಾಷ್ಟ್ರಗಳೇ ಅಧಿಪತ್ಯವಹಿಸಿರುವ ಸಂಘಟನೆಯಾದ್ದರಿಂದ ಬಡ ರಾಷ್ಟ್ರಗಳ ಬಗೆಗಿನ ಕಾಳಜಿ ಅಷ್ಟಕ್ಕಷ್ಟೆ. ಮುಂದುವರೆಯುತ್ತಿರುವ ಮತ್ತು ಬಡತನದ ಕಾಳಕೂಪದಲ್ಲಿರುವ ರಾಷ್ಟ್ರಗಳಂತೂ ಸಾಲಶೂಲಕ್ಕೆ ಸಿಕ್ಕು ನರಳುತ್ತಿರುವುದರಿಂದ ಅವುಗಳಿಗೆ ದನಿಯೂ ಇಲ್ಲ, ನಾಯಕತ್ವವೂ ಇಲ್ಲ. ಶಕ್ತ ರಾಷ್ಟ್ರಗಳು ತೋಳೇರಿಸಿ ನಿಂತರೆ ವಿಶ್ವ ಒಕ್ಕೂಟ ಮಣಿದು ಮಂಡಿಯೂರಿಬಿಡುತ್ತದೆ.

ಜಗತ್ತಿಗೆ ಮಾರಾಟ ಮಾಡಲು ಬಹಳಷ್ಟು ಸರಕು ಹೊಂದಿರುವವರಿಗೆ ಈ ಒಕ್ಕೂಟ ವರದಾಯಕ. ಆಮದು ಮಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದ ರಾಷ್ಟ್ರಗಳಲ್ಲಿನ ಅಲ್ಪ ಸ್ವಲ್ಪ ಉತ್ಪಾದಕರೂ ವಿನಾಶದ ಹಂತಕ್ಕೆ ಬಂದುಬಿಡುತ್ತಾರೆ. ೧೬೦ ದೇಶಗಳ ಈ ಬಲಾಢ್ಯ ಒಕ್ಕೂಟ ಸ್ವದೇಶೀ – ವಿದೇಶೀ ಪರಿಕಲ್ಪನೆಗಳನ್ನು ಕಿತ್ತೊಗೆದು ಕಾಶ್ಮೀರದ ಸೇಬು ಬ್ರೆಝಿಲ್‌ನಲ್ಲಿ ಸಿಗುವಂತೆ ಮಾಡಲು, ಅಮೆರಿಕದ ಕಾರು ಭಾರತದಲ್ಲಿ ಓಡಾಡುವಂತೆ ಮಾಡುವ ಉತ್ಸುಕತೆ ಹೊಂದಿದೆ.

ಈ ಧಾವಂತದ ಹಿಂದೆ ಒಂದು ಷಡ್ಯಂತ್ರವೇ ಇದೆ. ಬಲಾಢ್ಯ ರಾಷ್ಟ್ರಗಳು ತಮ್ಮ ವ್ಯಾಪಾರಿಗಳ ಹಿತ ಕಾಯಲು ಈ ಒಕ್ಕೂಟದ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದ ಕಾನೂನುಗಳನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿಬಿಡುತ್ತವೆ. ಈ ಕಾನೂನುಗಳ ಒತ್‌ತಡಕ್ಕೆ ಸಿಲುಕಿ ಅಶಕ್ತ ರಾಷ್ಟ್ರಗಳು ಸತ್ತೇಹೋಗಿಬಿಡುತ್ತವೆ. ಬ್ರೆಝಿಲ್‌ನಂತಹ ರಾಷ್ಟ್ರಗಳಂತೂ ಆರ್ಥಿಕ ದಿವಾಳಿತನಕ್ಕೆ ಸಿಲುಕಿ ತತ್ತರಿಸಿಹೋಗಿದ್ದು ಈ ಒಪ್ಪಂದಗಳ ಹೊರಲಾರದ ಭಾರದಿಂದಲೇ. ಬಡ ರಾಷ್ಟ್ರಗಳಿಗೆ ದನಿ ಇಲ್ಲದಿರುವುದರಿಂದ ಅವರು ಎಲ್ಲ ನಿಯಮಗಳನ್ನುಅ ನುಸರಿಸಲೇಬೇಕು. ಇತ್ತ ಸಿರಿವಂತರು ತಮ್ಮ ಹಿತಾಸಕ್ತಿಗೆ ಧಕ್ಕೆಯಾಗುವುದು ಅನ್ನಿಸಿದಾಗ ನಿಯಮಗಳನ್ನೆ ಬದಲಿಸಿ ಎಲ್ಲರ ಮೇಲೂ ಹೇರಿಬಿಡುವುದು ಸಾಮಾನ್ಯವೇ. ಈ ಖಾರಣಕ್ಕೇ ಅನೇಕ ಬಾರಿ ಈ ಒಪ್ಪಂದಗಳು ಮುರಿದುಬಿದ್ದಿರೋದು. ಅದೇ ಸಾಲಿಗೆ ೨೦೧೩ರ ಬಾಲಿ ಶೃಂಗ ಸಭೆಯ ಮಾತುಕತೆಗಳೂ ಸೇರಿ ಸಮಾಧಿಯಾಗಿಬಿಟ್ಟಿರುತ್ತಿದ್ದವು.

ಹೌದು, ೨೦೧೩ರಲ್ಲಿ ಬಾಲಿಯಲ್ಲಿ ವಿಶ್ವ ವ್ಯಾಪಾರ ಒಕ್ಕೂಟದ ಸದಸ್ಯರೆಲ್ಲ ಸೇರಿ ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್ (ಟಿಎಫ್‌ಎ)ನ ಕರಡು ರೂಪಿಸಿದರು. ಇದು ರಾಷ್ಟ್ರಗಳ ನಡುವಿನ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಒಪ್ಪಂದವಾಗಬೇಕಿತ್ತು. ಈ ಒಪ್ಪಂದದ ಮೂಲಕ ಎಲ್ಲ ಬಗೆಯ ಮಾರುಕಟ್ಟೆ ವಸ್ತುಗಳೂ ಮುಕ್ತವಾಗಿ ಗಡಿ ದಾಟುವಂತಾಗಬೇಕಿತ್ತು. ಅಧಿಕಾರಿಗಳ ಅಡ್ಡಗಾಲು ಮುಕ್ತ, ಸ್ಥಳೀಯ ಕಾನೂನುಗಳ ಕಿರಿಕಿರಿಯಿಂದ ಮುಕ್ತವಾದ ವಹಿವಾಟಿನ ಕಲ್ಪನೆ ಅದು. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕೃಷಿಗೆ ಸಂಬಂಧಿಸಿದ ಅಂಶವೊಂದು ನಡುಮಧ್ಯೆ ನುಸುಳಿ ಉಂಟು ಮಾಡಿದ್ದ ತಕರಾರು ಮುಂದುವರೆಯುತ್ತಿರುವ ರಾಷ್ಟ್ರಗಳನ್ನು ಕಂಗೆಡಿಸಿತು.

ಇಂತಹ ರಾಷ್ಟ್ರಗಳಲ್ಲಿ ಬಡವರ ಸಂಖ್ಯೆಯೇ ಅಧಿಕ. ಅವರಿಗೆ ಧಾನ್ಯವನ್ನು ಒದಗಿಸುವುದು ಸರ್ಕಾರದ್ದೇ ಕೆಲಸ. ಹೀಗಾಗಿ ಈ ರಾಷ್ಟ್ರಗಳು ರೈತರಿಗೆ ಸಬ್ಸಿಡಿ ಕೊಟ್ಟು ಬೆಳೆಯುವುದಕ್ಕೆ ಪ್ರೇರಣೆ ನೀಡಿ, ಬೆಂಬಲ ಬೆಲೆ ಕೊಟ್ಟು ಧಾನ್ಯ ಖರೀದಿಸಿ, ಅದನ್ನು ಕಡಿಮೆ ಬೆಲೆಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ತಲುಪಿಸುವ ಯೋಜನೆ ಇದೆಯಲ್ಲ, ಅದು ಅತ್ಯಂತ ಅನಿವಾರ್ಯ. ಹೀಗೆ ಈ ರಾಷ್ಟ್ರಗಳು ತಮ್ಮವರನ್ನು ತಾವೇ ಸಲಹಿಬಿಟ್ಟರೆ ಸಿರಿವಂತ ರಾಷ್ಟ್ರಗಳೆದುರು ಕೈಚಾಚುವ ಸಂದರ್ಭಕ್ಕೆ ಅವಕಾಶ ಇರುವುದಿಲ್ಲ. ಹೀಗೆಂದೇ ಅಲ್ಲಿನ ಕೃಷಿಕ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಟಿಎಫ್‌ಎನಲ್ಲಿ ಎರಡು ಪ್ರಮುಖ ತಕರಾರುಗಳು ನುಸುಳಿದವು. ಮೊದಲನೆಯದು – ಕೃಷಿ ಉತ್ಪನ್ನ ಶೇಖರಣೆಗೆ ಸಂಬಂಧಿಸಿದಂತೆ, ಮತ್ತೊಂದು – ಒಟ್ಟಾರೆ ಸಬ್ಸಿಡಿ ಕುರಿತಂತೆ.

ಹೆಚ್ಚು ಶೇಖರಿಸಿಟ್ಟುಕೊಂಡರೆ ಆಮದು ವಹಿವಾಟು ನಡೆಯಲಾರದು. ಶ್ರೀಮಂತ ರಾಷ್ಟ್ರಗಳಿಗೆ ಲಾಭವಿರಲಾರದು. ಇನ್ನು, ಹೆಚ್ಚು ಸಬ್ಸಿಡಿ ಕೊಟ್ಟರೆ ಅನ್ಯ ರಾಷ್ಟ್ರಗಳು ಈ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾರವು. ಒಟ್ಟಾರೆ ದಿನ ಕಳೆದಂತೆ ಪ್ರತಿಯೊಂದು ರಾಷ್ಟ್ರವನ್ನೂ ಆಹಾರ ದೃಷ್ಟಿಯಿಂದ ಪರಾವಲಂಬನಗೊಳಿಸುವ ಹುನ್ನಾರವಿದು. ಈ ಹಿಂದೆ ವಾಣಿಜ್ಯ ಸಚಿವರಾಗಿದ್ದ ಆನಂದ್ ಶರ್ಮ ಈ ಕುರಿತಂತೆ ತಕರಾರು ಎತ್ತಿದಾಗ ಸ್ವತಃ ವಿಶ್ವ ವ್ಯಾಪಾರ ಒಕ್ಕೂಟದ ಪ್ರಧಾನ ನಿರ್ದೇಶಕ ರಾಬರ್ಟೊ ಅಜಿವಿಡೋ ಭಾರತಕ್ಕೆ ಧಾವಿಸಿ ಬಂದು ಸಮಾಧಾನಗೈದಿದ್ದರು. ‘ಮುಂದುವರೆದ ರಾಷ್ಟ್ರಗಳು ಮೊದಲೆಲ್ಲ ಕೃಷಿ ಸಂಬಂಧಿ ವಿಚಾರಗಳ ಸುಧಾರಣೆ ಕುರಿತು ಮಾತಾಡಲೂ ಒಪ್ಪುತ್ತಿರಲಿಲ್ಲ. ಈಗ ಮಾತಾಡುತ್ತಿದ್ದಾರಲ್ಲದೆ, ಕಾಯ್ದೆ ಜಾರಿಗೊಳಿಸಲು ಗಡುವನ್ನೂ ವಿಸ್ತರಿಸುತ್ತಿದ್ದಾರೆ’ ಎಂದಿದ್ದರು. ಶ್ರೀಮಂತ ರಾಷ್ಟ್ರಗಳ ಧಿಮಾಕು ನೋಡಿ! ಈ ವಿಚಾರವಾಗಿ ಮಾತಾಡುವುದನ್ನೂ ಅವರು ಬಡರಾಷ್ಟ್ರಗಳ ಮೇಲೆ ಕೃಪೆ ತೋರಿದಂತೆ ಎಂದು ಭಾವಿಸಿದ್ದಾರೆ!!

ಒಟ್ಟಾರೆ ನಮ್ಮ ಸುದೀರ್ಘ ಪ್ರಯತ್ನದ ನಂತರ ೨೦೧೩ರ ಒಪ್ಪಂದ ಅನುಷ್ಠಾನಕ್ಕೆ ೨೦೧೭ರವರೆಗೂ ಸಮಯ ದೊರಕುತ್ತದೆ ಎನ್ನುವುದೇ ಪುಣ್ಯ ಪ್ರಾಪ್ತಿಯಾಗಿತ್ತು. ಅಜಿವಿಡೋ ಈ ದೇಶದ ವ್ಯಾಪಾರಿಗಳ ಮೂಲಕ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಇಲ್ಲಿ ಸರ್ಕಾರ ಬದಲಾಯ್ತು. ಭರ್ಜರಿ ಬಹುಮತವೂ ಬಂದುಬಿಡ್ತು. ತಮ್ಮ ಜೀವಮಾನದ ಶ್ರೇಷ್ಠ ಸಾಧನೆಯೆಂದು ಟಿಎಫ್‌ಎ ಕುರಿತಂತೆ ಬೀಗುತ್ತಿದ್ದ ಅಜಿವಿಡೋಗೆ ಆಘಾತ ಕಾದಿತ್ತು. ಜಿನೆವಾದಲ್ಲಿ ಮತ್ತೊಮ್ಮೆ ವಿಶ್ವ ವ್ಯಾಪಾರ ಒಕ್ಕೂಟ ಸಭೆ ಸೇರಿದಾಗ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಿರಾಕರಿಸಿಬಿಟ್ಟಿತು. ಅಮೆರಿಕಾ ತನ್ನ ಕೃಷಿಕರಿಗೆ ಮನ ಬಂದಷ್ಟು (ಅಮೆರಿಕಾ ೧೨೦ ಬಿಲಿಯನ್ ಡಾಲರ್‌ನಷ್ಟು ಸಬ್ಸಿಡಿ ಕೊಡುತ್ತದೆ, ಭಾರತ ೧೨ ಬಿಲಿಯನ್‌ಗಳನ್ನೂ ಕೊಡಬಾರದು ಎನ್ನುತ್ತದೆ) ಸಬ್ಸಿಡಿ ಕೊಡಬಹುದಾದಲ್ಲಿ, ಭಾರತ ಏಕಿಲ್ಲ? ಎಂದು ಪ್ರಶ್ನಿಸಿತು. ನನ್ನ ದೇಶದ ಬಡವರಿಗೆ ಆಹಾರ ಭದ್ರತೆ ಮೊದಲ ಆದ್ಯತೆ. ಉಳಿದಿದ್ದು ಆಮೇಲೆ ಎಂದು ನಿಷ್ಠುರವಾಗಿ ಹೇಳಿಬಿಟ್ಟಿತು. ಸಿರಿವಂತ ರಾಷ್ಟ್ರಗಳೂ ಸೇರಿದಂತೆ ಎಲ್ಲ ೧೬೦ ರಾಷ್ಟ್ರಗಳೂ ವೇಳಾಪಟ್ಟಿ ಹಾಕಿಕೊಂಡು, ಅದರಂತೆ ಕಾಯ್ದೆ ಜಾರಿ ಮಾಡುವ ಭರವಸೆ ಕೊಡಬೇಕೆಂದು ಹಠ ಹಿಡಿಯಿತು. ಒಪ್ಪಿಗೆ ಇಲ್ಲವಾದಲ್ಲಿ, ಈ ಒಪ್ಪಂದದಿಂದಲೇ ತಾನು ಹೊರಗೆ ಎನ್ನುತ್ತ ಪೃಷ್ಠ ಕೊಡವಿಕೊಂಡು ಎದ್ದೇಬಿಟ್ಟಿತು ಭಾರತ.

ಅದೋ! ಎಲ್ಲ ರಾಷ್ಟ್ರಗಳೂ ಕಕ್ಕಾಬಿಕ್ಕಿ.. ‘ಇದೊಂದು ದುಃಸ್ವಪ್ನ’ ಎಂದಿತು ಜಪಾನ್. ಜರ್ಮನಿ ಧಮಕಿ ಹಾಕಿತು. ಅಮೆರಿಕಾ ಕಣ್ಣು ನಿಗಿನಿಗಿ ಕೆಂಡ. ಅತ್ತ ಸ್ವರ್ಗದಲ್ಲಿ ತೇಲುತ್ತಿದ್ದ ಅಜಿವಿಡೋ ಕುಸಿದುಬಿದ್ದ ಕೋಪದಿಂದ, ಭಾರತವನ್ನು ಎಲ್ಲ ಒಪ್ಪಂದಗಳಿಂದಲೂ ದೂರ ಇಡುವುದಾಗಿ ಬೆದರಿಕೆ ಒಡ್ಡಿದ. ಆಪಾನಿನಿಂದ ಸಂಧಾನಕಾರ ಓಡೋಡಿಬಂದ. ಭಾರತ ಬಡವರ ಹಿತಾಸಕ್ತಿಯನ್ನು ಪುನರುಚ್ಚರಿಸಿತು. ಆಂಗ್ಲ ಮಾಧ್ಯಮಗಳು ಭಾರತ ಪ್ರಗತಿಯಿಂದ ಹಿಂದೆ ಸರಿಯುತ್ತಿದೆ ಎಂದು ಮನದುಂಬಿ ಜರೆದವು. ಯಾವುದಕ್ಕೂ ಭಾರತ ಜಗ್ಗಲಿಲ್ಲ.

ಈ ನಡುವೆ ಭಾರತ ಹತ್ತಾರು ದೇಶಗಳನ್ನು ಬೇರೆಬೇರೆಯಾಗಿ ಸಂಪರ್ಕಿಸಿ ತನ್ನ ನಿಲುವನ್ನು ವಿವರಿಸಿ ಅವುಗಳನ್ನು ತನ್ನತ್ತ ಸೆಳೆಯಿತು. ನಿಧಾನವಾಗಿ ಸಿರಿವಂತರ ಪಕ್ಷ ನಿಶ್ಶಕ್ತವಾಗುತ್ತ ಸಾಗಿತು. ಭಾರತ ಬಲಿಷ್ಠವಾಯಿತು.

ಈಗ ಜಗತ್ತಿನ ದೃಷ್ಟಿಯೂ ನಿಧಾನವಾಗಿ ಬದಲಾಯ್ತು. ರಾಯ್ಟರ‍್ಸ್‌ಗೆ ಸಂದರ್ಶನ ಕೊಟ್ಟ ಮುಕ್ತ ಮಾರುಕಟ್ಟೆ ತಜ್ಞ ಪೀಟರ್ ಗಾಲ್ಫರ್ ‘ಭಾರತ ಬಲು ಪ್ರಭಾವೀ ರಾಷ್ಟ್ರ. ಅದು ಈ ಒಪ್ಪಂದವನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಮೆದುವಾಗಿ ಮಾತಾಡಿದ. ಭಾರತೀಯ ಅಧಿಕಾರಿಗಳ ಮಾತಿನ ಶೈಲಿಯೂ ಬದಲಾಗಿತ್ತು. ‘ಬಡವರಿಗೆ ಆಹಾರ ಭದ್ರತೆ ನಮ್ಮ ಮೊದಲ ಆದ್ಯತೆ. ಅದಕ್ಕೆ ಧಕ್ಕೆ ತರುವ ಯಾವ ಒಪ್ಪಂದಗಳಿಗೂ ನಮ್ಮ ಒಪ್ಪಿಗೆಯಿಲ್ಲ’ ಎಂದು ಅಧಿಕಾರಿಯೊಬ್ಬರು ಆಂಗ್ಲ ಪತ್ರಿಕೆಗೆ ಸಂದೇಶ ಕೊಟ್ಟರು.

download (1)

ವಿಶ್ವ ವ್ಯಾಪಾರ ಒಕ್ಕೂಟ ಈಗ ಭಾರತವನ್ನು ರಮಿಸಲು ಶುರು ಮಾಡಿತು. ಇದನ್ನು ಒಪ್ಪುವಂತೆ ಮಾಡಲು ಭಾರತದ ನಿಯಮಗಳೇನು ಎಂದು ಬಾಗಿ ಕೇಳಲು ಮೊದಲಾಯ್ತು. ಭಾರತವೀಗ ಚೌಕಶಿ ಶುರು ಮಾಡಿತು. ಕಾಯ್ದೆಗೆ ಸಂಬಂಧಪಟ್ಟಂತೆ ಎಲ್ಲ ಸದಸ್ಯ ರಾಷ್ಟ್ರಗಳೂ ಒಪ್ಪಿ, ನಿಯಮಗಳು ರೂಪುಗೊಳ್ಳುವವರೆಗೆ ಕಾಯ್ದೆ ಲಾಗೂ ಮಾಡಲು ಆತುರ ತೋರಬಾರದು ಎಂದಿತು ಭಾರತ. ಹಾಗೆ ಎಲ್ಲರೂ ಒಪ್ಪುವಂಥ ನಿಯಮ ರೂಪುಗೊಳ್ಳುವುದು ಸದ್ಯದಮಟ್ಟಿಗೆ ಅನಿಶ್ಚಿತವೇ ಆಗಿರುವುದರಿಂದ ಭಾರತ ಧಾನ್ಯ ಸಂಗ್ರಹಣೆ ಹಾಗೂ ಹಣ ನೀಡುವಿಕೆಯಲ್ಲಿ ದೀರ್ಘಾವಧಿ ಕಾಲ ತನ್ನ ನಿಲುವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಸೂಚನೆ ರವಾನೆಯಾಗಿತ್ತು.

ಎಲ್ಲವನ್ನೂ ಅಳೆದು ತೂಗಿ ನೋಡಿದ ಅಮೆರಿಕಾ ಭಾರತದ ಮಾತಿಗೆ ತಲೆದೂಗಿಬಿಟ್ಟಿತು. ವ್ಯಾಪಾರ ಒಕ್ಕೂಟದಿಂದ ಭಾರತವನ್ನು ಹೊರಗಿಡುವ ಬೆದರಿಕೆ ಹಾಕಿದ್ದ ರಾಷ್ಟ್ರಗಳೆಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕನಾಗಿ ಭಾರತವನ್ನು ಕಾಣತೊಡಗಿದ್ದು ಹೆಮ್ಮೆಯ ಸಂಗತಿಯೇ ತಾನೆ?

ಮೊನ್ನೆ ಅಮೆರಿಕಾ ಮತ್ತು ಭಾರತ ಈ ಮಾತುಕತೆ ನಡೆಸುತ್ತಿದ್ದಂತೆ, ಇನ್ನೆರಡು ವಾರಗಳಲ್ಲಿ ಒಪ್ಪಂದ ಸ್ವೀಕೃತವಾಗುತ್ತದೆಂದು ಅಜಿವಿಡೋ ಕುಣಿದಾಡಿದನಲ್ಲ! ಇಷ್ಟಕ್ಕೇ ಅರ್ಥಮಾಡಿಕೊಳ್ಳಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಅದೆಷ್ಟು ಹೆಚ್ಚಿದೆ ಅಂತ!

Leave a Reply