ವಿಭಾಗಗಳು

ಸುದ್ದಿಪತ್ರ


 

ಮಗೂ, ಶ್ವೇತಕೇತೂ….

ಅಹಂಕಾರದಿಂದ ಬೀಗಿದ ಮಗ
ಅಪ್ಪನೆದುರು ನಿಂತ.
“ತಂದೆ, ನಾ ಎಲ್ಲ ಕಲಿತಿರುವೆ
ನಿನಗಿಂತ ನಾ ತಿಳಿದವನೀಗ”
ಎಂದ.

ಅಪ್ಪ ನಕ್ಕ,
“ಓಹೋ! ಯಾವುದನರಿತು
ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ….
ಅದನ್ನೂ ಅರಿತುಬಿಟ್ಟೆಯಾ!?”
ಮಗ ತಬ್ಬಿಬ್ಬು.

ಅಪ್ಪ ಕೇಳುತ್ತಲೇ ಹೋದ,
ಯಾರು ನೀನು?
ನೀನು ಯಾರು?
ದೇಹ ನೀನಾದರೆ, ನಿನ್ನ ಶವ ನೀನಾ?
ಮನವು ನೀನಾದರೆ, ಬುದ್ಧಿ ಯಾರದು?
ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ?
ತಿಳಿಯಲಿರುವುದದೆಷ್ಟು?
ಇದನರಿತರೆ ಉಳಿಯುವುದು ಇನ್ನೆಷ್ಟು!?

ಮಗೂ ಶ್ವೇತಕೇತು,
ನಿನ್ನನರಿ.
ನಿನ್ನನರಿ, ನಿನ್ನನರಿ.
ಅದಕ್ಕಾಗಿ ‘ನಿನ್ನ’ ಮರಿ!

5 Responses to ಮಗೂ, ಶ್ವೇತಕೇತೂ….

  1. ತೇಜಸ್ವಿನಿ ಹೆಗಡೆ

    ಸತ್ಯ. ನಮ್ಮನ್ನು ನಾವು ಮರೆತರೆ ಮಾತ್ರ ನಮ್ಮನ್ನರಿತು.. ಮುಂದೆ ಸಾಗಬಹುದು. ‘ಅಹಂ’ ಅರಿವಿಗೆ ಮೊದಲ ಮತ್ತು ಕೊನೆಯ ಅಡ್ಡಿ.

  2. hariharapura sridhar

    ನಾನು, ನಾನು ,ಅನ್ನೋದು ಅಷ್ಟು ಸುಲಭವಾಗಿ ಹೋಗುಲ್ಲ. ಅದಿಲ್ಲದಿದ್ದರೆ ಇದೆಲ್ಲಾ ಯಾಕ್ರಿ? ಅದು ಹಿತಮಿತವಾಗಿದ್ದಾರೆ ಅದೂ ಚಂದ. ಇಲ್ಲದಿದ್ದರೆ ಸವಾರಿ ಮಾಡೋಕೆ ಜನ ಕ್ಯೂ ನಲ್ಲಿದ್ದಾರೆ, ಇದು ನಮಗೆ ನೆನಪಿರಲಿ.
    ಹರಿಹರಪುರಶ್ರೀಧರ್

  3. ಮನೋಹಂಸ

    ಶ್ರೀಧರ್ ರವರೇ, ಜನ ಸವಾರಿ ಮಾಡ್ತಾರೆ ಅಂತ ನಾನು ಅನ್ನೋ ಅಹಂಕಾರವನ್ನ ಪೋಷಿಸಿಕೊಳ್ಳಬೇಕೇ? ಆತ್ಮ ಗೌರವವಿದ್ದರೆ ಸಾಲದೇ?
    ಸ್ವಾಮಿ ವಿವೇಕಾನಂದರನ್ನು ತಿಳಿಯದ ಹಲವಾರು ಜನ ಅವರನ್ನು ಅಪಮಾನಿಸಿದ್ದರು. ವಿವೇಕಾನಂದರು ಅವರ ಮುಂದೆಲ್ಲ ತಮ್ಮ ‘ನಾನು’ಗಾನ ಮಾಡಿಕೊಳ್ಳಲಿಲ್ಲ. ಉದಾ: ಅಮೆರಿಕೆಯಲ್ಲಿ ಒಮ್ಮೆ ಕ್ಷೌರದ ಅಂಗಡಿಯ ಬಿಳಿಯನೊಬ್ಬ ಇವರನ್ನು ನೀಗ್ರೋ ಎಂದು ತಿಳಿದು ಪ್ರವೇಶ ನಿರಾಕರಿಸಿದ. ವಿವೇಕಾನಂದರು ಸುಮ್ಮನೆ ಮುಂದೆ ನಡೆದು ಹೋದರಷ್ಟೇ. ನಂತರ ಅಂಗಡಿಯವ ಇವರು ಆರ್ಯರೆಂದು ತಿಳಿದು ಇವರ ಕ್ಷಮೆ ಕೇಳಿ ಒಳಕರೆದಾಗ, ಸ್ವಾಮೀಜಿ ಹೇಳಿದ್ದೇನು ಗೊತ್ತೇ? ‘ಒಬ್ಬ ಮಾನವ ಸಹೋದರನನ್ನು ಆತನ ತೊಗಲಿನ ಬಣ್ಣದ ಕಾರಣಕ್ಕೆ ತುಚ್ಚವಾಗಿ ಕಾಣುವ, ಪ್ರವೇಶ ನಿರಾಕರಿಸುವ ಸ್ಥಳ ನನಗೂ ವರ್ಜ್ಯ’. ಅದು ಅವರ ಮಾನವ ಪ್ರೇಮ ಹಾಗೂ ಆತ್ಮ ಗೌರವ.

  4. ಜಗದೀಶರ್ಮಾ

    ಉಪನಿಷತ್ತಿನ ಅದ್ಭುತ ಘಟನೆಯೊಂದರ ಸುಂದರ ಕವಿತಾರೂಪ.

  5. ಮಹೇಶ ದೀಕ್ಷಿತ್, ಯಾದಗಿರಿ

    ಉಪನಿಷತ್ತಿನ ಕಥೆಯನ್ನು, ಕನ್ನಡದ ಕಥಾರೂಪದಲ್ಲಿ ಸುಂದರವಾಗಿ ಮೂಡಿಬಂದಿದೆ.