ವಿಭಾಗಗಳು

ಸುದ್ದಿಪತ್ರ


 

“ಅಚ್ಛೇ ದಿನ್” ಮುನ್ನಿನ ಸವಾಲುಗಳು ~ ಜಾಗೋ ಭಾರತ್

ಕಾಲದ ಪ್ರವಾಹ ಬಲು ವಿಚಿತ್ರವಾದುದು. ಕಳೆದ ಮಾರ್ಚ್‌ನಲ್ಲಿ ಚುನಾವಣಾ ಪ್ರಚಾರದ ವೇಳೆಗೆ “ನರೇಂದ್ರ ಮೋದಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು” ಎಂದು ಶರದ್ ಪವಾರ್ ಕಟಕಿಯಾಡಿದ್ದರು. ಈಗ ಅದೇ ಮೋದಿ ಪಾರ್ಟಿಗೆ ಬೆಂಬಲ ನೀಡುತ್ತೇನೆಂದು ದುಂಬಾಲು ಬೀಳುತ್ತಿರುವುದು ಕಂಡಾಗ ಅಚ್ಚರಿ ಎನಿಸದಿರಲಾರದು. ಅತ್ತ ಕಾಂಗ್ರೆಸ್ಸು ಮೋದಿಯನ್ನು ಬುಡಸಹಿತ ಕಿತ್ತು ಬಿಸುಟುವ ಮಾತಾಡಿತ್ತು; ತನ್ನ ಬುಡ ಉಳಿಸಿಕೊಂಡರೆ ಸಾಕೆನ್ನುವ ಮನಸ್ಥಿತಿಗೆ ಬಂದುಬಿಟ್ಟಿದೆ ಅದು. ಚುನಾವಣಾ ಪ್ರಚಾರದ ವೇಳೆಗೆ ಹಳೆಯದ್ದು, ಕೆಲಸಕ್ಕೆ ಬಾರದ್ದಾಗಿ ಉಳಿದಿರುವ ಕಾನೂನುಗಳನ್ನೆಲ್ಲ ಕಿತ್ತು ಬಿಸುಟುವ ಮಾತಾಡಿದ್ದರು ಮೋದಿ. ಈ ಸಆಲಿನಲ್ಲಿ ‘ಕಾನೂನು’ ಎಂಬುದನ್ನು ತೆಗೆದುಬಿಟ್ಟರೆ ಕಿತ್ತು ಬಿಸಾಡಬೇಕಾದ ಪಟ್ಟಿಗೆ ಕಾಂಗ್ರೆಸ್ಸೂ ಸೇರುತ್ತದೆ, ನೆನಪಿರಲಿ!

ಪಾಪ… ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವೆನ್ನುವುದು ಅವರ ಪಾಲಿನ ಹೆಮ್ಮೆಯಾಗಿತ್ತು. ಈಗ ಅದೇ ಮುಳುವಾಗಿ ಕಾಡಬಹುದೇನೋ? ಇನ್ನು ಕೆಲವು ದಿನಗಳಲ್ಲಿ ಹಳೆಯ ಪಾರ್ಟಿ ಬೇರೆ, ಆನಂತರ ಇಂದಿರಾ ಗಾಂಧಿ ಸೃಷ್ಟಿಸಿದ ಕಾಂಗ್ರೆಸ್ಸೇ ಬೇರೆ ಎಂಬ ಸತ್ಯ ಒಪ್ಪಿಕೊಂಡರೂ ಒಪ್ಪಿಕೊಳ್ಳಬಹುದು. ಈಗಾಗಲೇ ಸ್ವಂತ ಬಲದ ಮೇಲೆ ಕಾಂಗ್ರೆಸ್ಸು ಅಧಿಕಾರ ನಡೆಸುತ್ತಿರುವುದು ಒಂಭತ್ತೇ ರಾಜ್ಯಗಳಲ್ಲಿ. ಮೋದಿ ಅಲೆ ಇನ್ನೊಂದಾರು ತಿಂಗಳು ವಿಸ್ತೃತಗೊಂಡರೂ ಮತ್ತೊಂದಷ್ಟು ರಾಜ್ಯಗಳು ಕೈಬಿಡುವುದು ಗ್ಯಾರಂಟಿ. ಅಲ್ಲಿಗೆ, ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷವಾಗಿ ಉಳಿದರೆ ತಲೆ ಕೆಡಿಸಿಕೊಳ್ಳಬೇಕಾದ ಪ್ರಸಂಗವಿರಲಾರದು.

ಹಾಗಂತ ಪ್ರಧಾನ ಮಂತ್ರಿಯವರ ಮುಂದೆ ಇರುವ ಸವಾಲುಗಳು ಸಾಮಾನ್ಯವೇನೂ ಅಲ್ಲ. ಇನ್ನೊಂದು ತಿಂಗಳು ಕಳೆದರೆ ಸರ್ಕಾರದ ಇನ್ನೂರು ದಿನಗಳು ಹತ್ತಿರ ಬಂದುಬಿಡುತ್ತವೆ. ಕಾಂಗ್ರೆಸ್ಸು ಜವಹರ ಲಾಲ್ ನೆಹರೂ ಕಾಲದಿಂದಲೂ ಗೆಲ್ಲುತ್ತ ಬಂದಿರುವುದು ಭಾವನೆಗಳ ಆಧಾರದ ಮೇಲೆ ಓಲೈಕೆ ಮತ್ತು ಹಣದ ಸಾಮರ್ಥ್ಯದ ಮೇಲೆಯೇ ಹೀಗಾಗಿ ಅವರನ್ನು ಯಾರೂ ಎಂದಿಗೂ ಪ್ರಶ್ನಿಸಲೇ ಇಲ್ಲ. ಮೋದಿಯವರ ಗೆಲುವು ಅಕ್ಷರಶಃ ಜನಜಾಗೃತಿಯ ಆಧಾರದ್ದು. ಸ್ವತಃ ಅವರೇ ನೂರಾರು ಕಾರ್ಯಕ್ರಮಗಳನ್ನು ಸಂಬೋಧಿಸುವ ಮೂಲಕ ಜನರನ್ನು ನಿದ್ರೆಯಿಂದ ಎಚ್ಚರಿಸಿದ್ದಾರೆ. ಈಗ ಎದ್ದು ಕುಳಿತಿರುವ ಇದೇ ಜನ ಸರ್ಕಾರದ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಅದಕ್ಕೇ ‘ಕಪ್ಪು ಹಣ’ ಇನ್ನೂ ಅದ್ಯಾಕೆ ಬರಲಿಲ್ಲವೆಂದು ಹರಟೆ ಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೆ ಸಂವಾದಿಯಾಗಿ ಮೋದಿಯ ಪದಗ್ರಹಣದ ನಂತರ ಇಲ್ಲಿಯವರೆಗೂ ಪೆಟ್ರೋಲ್ ಬೆಲೆ ಹತ್ತು ರೂಪಾಯಿಯಷ್ಟು ಇಳಿದಿದ್ದು ಹೇಗೆಂಬ ಅಚ್ಚರಿಯೂ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ ಸುಚೇತಾ ದಲಾಲ್‌ರಂಥವರು ಸ್ವಚ್ಛತೆ – ಏಕತೆ ಎಂಬ ಸುಂದರ ಪದಗಳ, ಸೆಲ್ಫೀಗಳ ನಡುವೆ ಆಡಳಿತ ಯಂತ್ರ ಮಂದವಾಗಿಬಿಟ್ಟಿದೆ ಎಂದೂ ಚಾಟಿ ಬೀಸಿದ್ದಾರೆ.

ಹೌದು. ಇವೆಲ್ಲವುಗಳ ಕುರಿತು ಹೆದರಿಕೆ ಮೊದಲಿನಿಂದಲೂ ಇತ್ತು. ಜನರ ನಿರೀಕ್ಷೆ ಮುಗಿಲು ಮುಟ್ಟಿತ್ತು. ಪ್ರಧಾನ ಮಂತ್ರಿಗಳ ಕೈಲಿ ಮಂತ್ರದಂಡವೊಂದಿದೆ ಎಂದು ಸಆಮಾನ್ಯರು ಅಂದುಕೊಳ್ಳುವುದು ಬಿಡಿ, ತಿಳಿದವರೂ “ಈ ಮನುಷ್ಯನೊಳಗೆ ಭಗವಂತ ಅವ್ಯಕ್ತ ಶಕ್ತಿ ಇಟ್ಟಿದ್ದಾನೆ” ಎಂದು ಮಾತನಾಡಿಕೊಳ್ಳುವುದನ್ನು ಕಂಡಾಗ ಗಾಬರಿ ಎನ್ನಿಸುತ್ತದೆ.

ದೇಶದ ಭವಿಷ್ಯವನ್ನು ‘ಅಚ್ಛೇ ದಿನ್’ ಆಗಿಸಲು ಮೋದಿಯವರು ಒಂದಷ್ಟು ‘ಕಠಿಣ ದಿನ’ಗಳನ್ನು ಎದುರಿಸಲೇ ಬೇಕಾಗಿದೆ. ಜಡ್ಡುಗಟ್ಟಿರುವ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಿದೆ. ಮಂತ್ರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಕೆಲಸ ಮಾಡುವ ಸ್ಫೂರ್ತಿಯನ್ನು ತುಂಬಬೇಕಿದೆ. ಎಲ್ಲಕ್ಕೂ ಮಿಗಿಲಾಗಿ ಜನಸಮಾನ್ಯರ ಬದುಕನ್ನು ಅನವಶ್ಯಕ ಕಾನೂನು ಕಟ್ಟಳೆಗಳಿಂದ ಮುಕ್ತಗೊಳಿಸಿ ನೆಮ್ಮದಿಯತ್ತ ಹೊರಳುವಂತೆ ಮಾಡಬೇಕಿದೆ.

ಬ್ರಿಟಿಷರ ಕಾಲದ ಕಟ್ಟಳೆಗಳು, ನಮ್ಮವರೇ ರಚಿಸಿದ ಅನವಶ್ಯಕ ಕಾನೂನುಗಳು ನಮ್ಮ ಜೀವ ಹಿಂಡುತ್ತಿವೆ. ಅಧಿಕಾರಿಗಳ ದರ್ಪ ಹೆಚ್ಚಿಸುತ್ತಿವೆ. ಇವನ್ನು ತೆಗೆದೊಗೆದು ಹೊಸ ಶಕೆಗೆ ಭಾರತವನ್ನು ಕೊಂಡೊಯ್ಯುವುದು ಸಾಧ್ಯವಿದೆಯೇ? ಬ್ರಿಟಿಷರು ಭಾರತೀಯರನ್ನು ದಂಗೆಕೋರರು, ಅನಾಗರಿಕರು, ಕಳ್ಳರು ಎಂದು ಭಾವಿಸಿ ಕಾನೂನುಗಳನ್ನು ರಚಿಸಿದ್ದರು. ನಮ್ಮನ್ನು ನಿಯಂತ್ರಣಕ್ಕೆ ತರಲೆಂದು ಅವರು ಮೊದಲು ಕಾನೂನು ರಚಿಸುತ್ತಿದ್ದರು. ಆಮೇಲೆ ಅದನ್ನು ಉಲ್ಲಂಘಿಸದಂತೆ ತಡೆಯಲು ಪೊಲೀಸರನ್ನು ಬಳಸುತ್ತಿದ್ದರು. ಪೊಲೀಸರಿಗೆ ತಪ್ಪು ಮಾಡಿದವರನ್ನು ಹಿಡಿದು ದಂಡ ವಸೂಲಿ ಮಾಡಿ ಹಿರಿಯ ಅಧಿಕಾರಿಗಳೆದುರಿಗೆ ನಿಲ್ಲುವುದೆಂದರೆ ಹಿರಿಹಿರಿ ಹಿಗ್ಗು!

ಇಂದು ಇಂದಾದರೂ ಬದಲಾಗಿದೆಯೇನು? ಅನವಶ್ಯಕ ಒನ್ ವೇಗಳನ್ನು ಸೃಷ್ಟಿಸಿ ಟ್ರಾಫಿಕ್ ಪೊಲೀಸರು ರಸ್ತೆ ಸಂದಿಯಲ್ಲಿ ಅವಿತುಬಿಡುತ್ತಾರೆ. ಅತ್ತ ಬಂದವರನ್ನು ಹಿಡಿದು ದಂಡ ವಸೂಲಿ ಮಾಡಿದ ಪೊಲೀಸರ ಮುಖದಲ್ಲಿ ಆನಂದವೋ ಆನಂದ. ಅನೇಕ ಬಾರಿ ಕಳ್ಳರು ಯಾರು ಅನ್ನೋದು ಪ್ರಶ್ನೆಯಾಗಿ ಉಳಿದುಬಿಡುತ್ತದೆ.

ಇತ್ತೀಚೆಗೆ ಕಟ್ಟಡದ ಕಾಂಟ್ರ್ಯಾಕ್ಟರ್ ಒಬ್ಬರು ಹೇಳುತ್ತಿದ್ದರು. ಗೋಡೆಯ ಉದ್ದಗಲ ಅಳೆಯಲು ಬಳಸುವ ‘ಅಳತೆ ಪಟ್ಟಿ’ ಮಾರಾಟಕ್ಕೆ ೨೦ ಸಾವಿರ ರೂಪಾಯಿ ಕೊಟ್ಟು ಪರವಾನಗಿ ಪಡೆಯಬೇಕಂತೆ! ಐವತ್ತು ರೂಪಾಯಿಯ ವಸ್ತು ಮಾರಾಟಕ್ಕೆ ಇಷ್ಟು ದೊಡ್ಡ ಮೊತ್ತದ ಲೈಸೆನ್ಸು!? ಅಧಿಕಾರಿಗಳು ಆಗೀಗ ಅಂಗಡಿಗೆ ಮೇಸ್ತ್ರಿಯ ರೂಪದಲ್ಲಿ ಹೋಗಿ ಅಳತೆಪಟ್ಟಿ ಕೇಳುತ್ತಾರೆ. ಸಿಕ್ಕಿಬಿದ್ದರೆ ದಂಡ ಕಕ್ಕಿಸುತ್ತಾರೆ. ಇಲ್ಲವೇ ಲಂಚ ಪಡೆದು ಹೊರಡುತ್ತಾರೆ. ಯಾರ ಉದ್ಧಾರಕ್ಕಾಗಿ ಈ ಕಾನೂನುಗಳು?

ಇವೆಲ್ಲ ಬಿಡಿ. ೧೮೭೮ರ ಟ್ರೆಶರ್ ಟ್ರೋಪ್ ಆಕ್ಟ್‌ನ ಪ್ರಕಾರ ರಸ್ತೆಯ ಮೇಲೆ ಬಿದ್ದಿರುವ ಹತ್ತು ರೂಪಾಯಿಯ ಮೇಲಿನ ಹಕ್ಕೂ ‘ಮಹಾರಾಣಿಯದ್ದು’ ಎಂಬ ಕಾನೂನು ಈಗಲೂ ಚಾಲ್ತಿಯಲ್ಲಿದೆ! ಸ್ವಾತಂತ್ರ್ಯ ಬಂದ ೬೮ ವರ್ಷಗಳ ನಂತರವೂ ಬ್ರಿಟನ್ನಿನ ಮಹಾರಾಣಿಯನ್ನೇ ಈ ದೇಶದ ಒಡತಿ ಎಂದು ಭಾವಿಸುವಂತಹ ಕಾನೂನು ಇರುವುದು ಹಾಸ್ಯಾಸ್ಪದವಲ್ಲವೇನು? ಕೊನೆಯ ಟೆಲಿಗ್ರಾಮ್ ಅನ್ನು ಕಳೆದ ವರ್ಷವೇ ಕಳಿಸಿದ ನಂತರವೂ ಅದಕ್ಕೆ ಸಂಬಂಧಿಸಿದ ಕಾನೂನುಗಳು ತುಂಬಿಕೊಂಡಿರುವುದು ಎಷ್ಟು ಸರಿ? ೧೯೩೪ರ ಏರ್‌ಕ್ರಾಫ್ಟ್ ಆಕ್ಟ್‌ನ ಪ್ರಕಾರ ಏರ್‌ಕ್ರಾಫ್ಟ್ ಅಂದರೆ ‘ದಾರಕ್ಕೆ ಕಟ್ಟಿದ ಅಥವಾ ಗಾಳಿಯಲ್ಲಿ ತೇಲಿಬಿಟ್ಟ ಬಲೂನು, ವಿಮಾನ, ಗಾಳಿಪಟ, ಗ್ಲೈಡರ್‌ಗಳು, ಹಾರಾಡುವ ಯಂತ್ರಗಳು’ ಎಂಬ ವ್ಯಾಖ್ಯೆ ಇದೆ. ಕಾನೂನಿನ ಪರಿಪೂರ್ಣ ಅರ್ಥ ಇಂತಹವುಗಳನ್ನು ಇಟ್ಟುಕೊಳ್ಳುವುದು, ಹಾರಾಡಿಸುವುದು, ಮಾರಾಟ ಮಾಡುವುದು ಅಪರಾಧ! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬಲೂನು ಅಥವಾ ಗಾಳಿಪಟ ಹಾರಾಡಿಸಲು ಸರ್ಕಾರದ ಅನುಮತಿ ಪಡೆದಿರಬೇಕು!

ತನ್ನ ಶತ್ರು ರಾಷ್ಟ್ರದಲ್ಲಿ ಭಾರತೀಯರು ಕೆಲಸ ಮಾಡುವುದನ್ನು ತಡೆಗಟ್ಟಲು ಬ್ರಿಟಿಷರು ಜಾರಿಗೆ ತಂದ ಕಾನೂನು, ಬ್ರಿಟಿಷರ ವಿರುದ್ಧ ಸದಾ ಕಾದಾಡುತ್ತಿದ್ದ ಬುಡಕಟ್ಟು ಜನಾಂಗಗಳನ್ನು ದೂಷಿಸಿ ಹಿಡಿತದಲ್ಲಿರಿಸುವ ಕಾನೂನು ಬೆಂಗಳೂರಿನಲ್ಲಿ ಜೇಮ್ಸ್ ಮ್ಯಾಕ್‌ಡೊನಾಲ್ಡ್ ರೆಡ್‌ವುಡ್ ಅರ್ಚಕನಾಗಿ ಮಾಡಿಸಿದ ಮದುವೆಗಳನ್ನು ಕಾನೂನುಬದ್ಧಗೊಳಿಸುವ ಕಾನೂನು… ಒಂದೇ, ಎರಡೇ! ಒಂದಕ್ಕಿಂತ ಒಂದು ಹಾಸ್ಯಾಸ್ಪದ. ಇವೆಲ್ಲವುಗಳಿಂದ ನಮ್ಮ ಕಾನೂನು ಪುಸ್ತಕಗಳು ಭಾರವಾಗಿಬಿಟ್ಟಿವೆ. ಮೊದಲ ಸಾಲು ಓದಿ ಮುಗಿಸಿ ಎರಡನೇ ಸಾಲಿಗೆ ಹೋಗುವ ವೇಳೆಗೆ ಹಿಂದಿನ ಸಾಲು ಮರೆತೇ ಹೋಗಿರುತ್ತದೆ; ಅಷ್ಟು ಕಠಿಣ ಕೂಡ. ಒಮ್ಮೆ ಇವು ಸರಳಗೊಂಡರೆ ನಮ್ಮ ಜನ ತಾವೇ ಅದನ್ನು ಜೀರ್ಣಿಸಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಬದುಕುತ್ತಾರೆ. ಮಧ್ಯೆ ನಿಂತ ನುಂಗುವ ರಕ್ಕಸರ ಕಾಟ ತಪ್ಪುತ್ತದೆ.

ಈ ಪ್ರಯತ್ನ ಹಿಂದೆಯೂ ಆಗಿತ್ತು. ೧೯೫೭, ೧೯೮೦, ೧೯೯೩ ಮತ್ತು ೧೯೯೮ರಲ್ಲಿ ಸರ್ಕಾರಗಳು ಸಮಿತಿ ರಚಿಸಿ ಅನವಶ್ಯಕ ಕಾನೂನುಗಳನ್ನು ಗುರುತಿಸುವ ಹೊಣೆ ಒಪ್ಪಿಸಿತ್ತು. ಆದರೆ ೨೦೦೧ರಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ಸರ್ಕಾರ ಮೊದಲ ಬಾರಿಗೆ ಪಿ.ಸಿ.ಜೈನ್ ಸಮಿತಿ ವರದಿಯ ಆಧಾರದ ಮೇಲೆ ಕಠಿಣ ಹೆಜ್ಜೆಗಳನ್ನು ಇಟ್ಟಿತ್ತು, ೩೫೭ ಕಾನೂನುಗಳನ್ನು ಕಿತ್ತೆದಿತ್ತು. ಅನಂತರದ ದಿನಗಳಲ್ಲಿ ಈ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದು ನರೇಂದ್ರ ಮೋದಿಯವರೇ. ಒಂದು ಕಾನೂನು ಜಾರಿಗೊಳಿಸಿದರೆ ಹತ್ತು ಅನವಶ್ಯಕ ಕಾನೂನುಗಳನ್ನು ತೆಗೆದೊಗೆಯುವ ಭರವಸೆ ತುಂಬಿದ್ದು ಅವರೇ! ಈ ಹಿನ್ನೆಲೆಯಲ್ಲಿಯೇ ೧೦೯೪ ಅನವಶ್ಯಕ ಕಾನೂನುಗಳನ್ನು ಅವಧಿ ಮುಗಿದ, ಇಂದಿನ ದಿನಮಾನಗಳಿಗೆ – ಸನ್ನಿವೇಶಕ್ಕೆ ಒಗ್ಗದ, ಒಂದು ವರ್ಗವನ್ನು ತುಚ್ಛವಾಗಿ ಕಾಣುವ, ಇಂದಿನ ನಿಯಮಗಳಿಗೆ ಸರಿಹೊಂದದೆ ಇರುವಂಥವು ಎಂದು ಗುರುತಿಸಲಾಗಿದೆ. ಈ ಅಧಿವೇಶನದಲ್ಲಿ ಇಂತಹ ೨೮೭ ಕಾನೂನುಗಳನ್ನು ಸಮಾಧಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

೧೫ ವರ್ಷಗಳಿಂದ ಇದನ್ನು ಪ್ರತಿಪಾದಿಸಿಕೊಂಡು ಬಂದ ಅರುಣ್ ಶೌರಿಗೆ ಖಂಡಿತ ಈಗ ನೆಮ್ಮದಿ ಎನ್ನಿಸಿರಲಿಕ್ಕೆ ಸಾಕು. ಆದರೆ ಈ ಸಂಗತಿ ಸರಳವಾಗಿಲ್ಲ. ಜನರನ್ನು ಗೋಳು ಹೊಯ್ದುಕೊಂಡೇ ಬದುಕುವ ಅಧಿಕಾರಿಗಳ ‘ಮಾಫಿಯಾ’ ಅಷ್ಟು ಸಲೀಸಾಗಿ  ಇದನ್ನು ಆಗಗೊಡುವುದಿಲ್ಲ. ಸಮಿತಿಯ ವರದಿ ನೋಡಿದಾಗ ಇದು ನಿಚ್ಚಳವಾಗಿ ಗೋಚರವಾಗುತ್ತದೆ. ಸಂಸತ್ತಿನಲ್ಲಿ ಅಂಗೀಕೃತಗೊಂಡು ಕಿತ್ತು ಬಿಸುಡಲ್ಪಟ್ಟ ಅನೇಕ ಕಾನೂನುಗಳು ಇಂದಿಗೂ ಅಂತರ್ಜಾಲದಲ್ಲಿ ಹಾಗೆಯೇ ಇವೆ! ಇವುಗಳನ್ನು ಬಳಸಿ ಲೂಟಿ ಮಾಡುವ ಪ್ರಕ್ರಿಯೆಯನ್ನು ಅವರಿನ್ನೂ ಬಿಟ್ಟೇ ಇಲ್ಲ.

ಅಮೆರಿಕಾ ಕಾನೂನು ರೂಪಿಸುವಾಗಲೇ ಅದು ಹೇಗೆ ಕೊನೆಯಾಗಬೇಕೆಂಬುದನ್ನೂ ನಮೂದಿಸಿಬಿಡುತ್ತದೆ. ಹೀಗಾಗಿ ಹುಟ್ಟಿದ ಕಾನೂನು ಯಾರ ಮಧ್ಯಸ್ಥಿಕೆಯೂ ಇಲ್ಲದೆ ತಾನೇತಾನಾಗಿ ಸಾಯುತ್ತದೆ. ಎಲ್ಲದಕ್ಕೂ ಅಮೆರಿಕಾವನ್ನು ಅನುಸರಿಸುವ ನಾವು ಈ ವಿಚಾರದಲ್ಲೇಕೆ ಮುನಿಸು ತೋರುತ್ತೇವೋ ಗೊತ್ತಿಲ್ಲ.

‘ಕಾನೂನು ನಾವು ಬೆಳೆದಂತೆ ಬೆಳವಣಿಗೆ ಹೊಂದಬೇಕು. ನಾವು ಬಲಾಢ್ಯರಾದಂತೆ ಅದೂ ಬಲಾಢ್ಯವಾಗಬೇಕು’. ಈ ಪ್ರಯತ್ನಕ್ಕೆ ಮೋದಿ ಸರ್ಕಾರ ಮುನ್ನುಡಿ ಬರೆದರೆ ದೀರ್ಘ ಕಾಲದ ಸಮಾಧಾನ ಶತಃಸಿದ್ಧ.

Comments are closed.