ವಿಭಾಗಗಳು

ಸುದ್ದಿಪತ್ರ


 

ಅಮೆರಿಕದ ಕಳ್ಳತನಕ್ಕೆ ನಮ್ಮ ಪ್ರತಿರೋಧವೇ ಇಲ್ಲ..

ಜಗತ್ತು ಹೇಗಾಗಿಬಿಟ್ಟಿದೆ ನೋಡಿ. ನಮ್ಮ ನಡೆ-ನುಡಿ ಎಲ್ಲವನ್ನೂ ಗಮನಿಸುವವನೊಬ್ಬನಿರುತ್ತಾನೆ ಅಂತ ಯಾವಾಗಲೂ ಹೇಳುತ್ತಿದ್ದೇವಲ್ಲ, ಆತ ಯಾರೂಂತ ಈಗ ಗೊತ್ತಾಗಿಹೋಗಿದೆ! ಹ್ಹಾಂ, ನಾನು God Particle ಬಗ್ಗೆ ಮಾತನಾಡುತ್ತಿಲ್ಲ. ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ಸಾಮರ್ಥ್ಯ ಕೊಂಡಾಡುತ್ತಿದ್ದೇನೆ ಅಷ್ಟೇ.
ಹೌದು. ನೀವು ಮನೆಯಲ್ಲಿಯೇ ಕುಳಿತು -ಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರೆ ನಿಮ್ಮನ್ನು ನೋಡುವವರ‍್ಯಾರೂ ಇಲ್ಲ ಅಂದುಕೊಳ್ಳಬೇಡಿ. ನೀವು ಅಪ್ಪ-ಅಮ್ಮನ ಕಣ್ತಪ್ಪಿಸಬಹುದು. ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ)ಯದ್ದಲ್ಲ. ನೀವು ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುವಾಗ ನೀವು ಓಡಾಡುತ್ತಿರುವ ದಾರಿಯೂ ಗಮನದಲ್ಲಿರುತ್ತದೆನ್ನುವುದನ್ನು ಮರೆಯಬೇಡಿ. ನೀವು ಬಳಸುವ ಇಮೇಲ್ ಗೂಗಲ್ ಆಗಿದ್ದರೆ ಅದೆಷ್ಟು ಕಠಿಣ ಪಾಸ್‌ವರ್ಡ್ ಹಾಕಿಟ್ಟರೇನು? ನೀವು ಕಳಿಸಿದ ಮಾಹಿತಿ, ನಡೆಸಿದ ಸಂಭಾಷಣೆ ನಿಮಗೇ ಗೊತ್ತಿಲ್ಲದಂತೆ ಅಮೆರಿಕಕ್ಕೆ ಗೊತ್ತಾಗುತ್ತದೆ. ಸ್ಕೈಪ್ ಬಳಸಿ ಫೋನ್ ಮಾಡಿದರೆ ಮತ್ತೊಂದು ಕಿವಿ ನಿಮ್ಮ ಮಾತನ್ನು ಕದ್ದು ಮುಚ್ಚಿ ಕೇಳುತ್ತಿರುತ್ತದೆ. ಎಲ್ಲ ಬಿಡಿ, ನೀವು ಮೊಬೈಲ್‌ನಿಂದ ಕಳಿಸುವ ಒಂದೊಂದು ಎಸ್ಸೆಮ್ಮೆಸ್ಸು, ಆಡುವ ಒಂದೊಂದು ಮಾತೂ ಒಂದೆಡೆ ಮುದ್ರಣಗೊಳ್ಳುತ್ತಿರುತ್ತದೆ. ಇನ್ನೊಂದೆರಡು ವರ್ಷ. ಜಗತ್ತಿನ ಪ್ರತಿಯೊಂದು ಪರಿವಾರದ ಕುರಿತಂತೆ ಸಾವಿರಾರು ಡಿವಿಡಿ ತುಂಬಬಲ್ಲಷ್ಟು ಮಾಹಿತಿಯನ್ನು ಸಂಗ್ರಹಿಸಿಡಬಲ್ಲ ಸಾಮರ್ಥ್ಯ ಅಮೆರಿಕಕ್ಕೆ ಬಂದುಬಿಡುತ್ತದೆ. ಆಗ ನಿಜಾರ್ಥದಲ್ಲಿ ನಿಮ್ಮ ಜಾತಕ ಅಮೆರಿಕದ ಕೈಲಿರುತ್ತದೆ!

yes-we-scan-ಈಗಾಗಲೇ ಭಾರತ ಅನ್ನೋ ಭಾರತಕ್ಕೆ ಸಂಬಂಧಿಸಿದ 6.3 ಬಿಲಿಯನ್ ಮಾಹಿತಿಗಳನ್ನು ಅಮೆರಿಕ ಸಂಗ್ರಹಿಸಿ ಅಧ್ಯಯನ ನಡೆಸಿಬಿಟ್ಟಿದೆ. ಇರಾನ್, ಪಾಕಿಸ್ತಾನ, ಜೋರ್ಡಾನ್, ಈಜಿಪ್ಟ್ ಬಿಟ್ಟರೆ ಅದು ಬಲು ಆಸ್ಥೆಯಿಂದ ಸಂಗ್ರಹಿಸಿರೋದು ನಮ್ಮ ಮಾಹಿತಿಯೇ. ಬೋಧಗಯಾದಲ್ಲಿ ಬಾಂಬ್ ಸೋಟವಾಗಿ ವಾರಗಳೇ ಉರುಳಿವೆ. ನಮ್ಮ ತನಿಖಾ ಸಂಸ್ಥೆಗಳು ಇನ್ನೂ ಹೆಣಗಾಡುತ್ತಿವೆ. ಶಂಕಿತರ ರೇಖಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟು ಅವರನ್ನು ಹಿಡಿದು ಬಿಡುವ ಭ್ರಮೆಯಲ್ಲಿ ಕುಳಿತಿವೆ. ಈಗಲೂ ಸರ್ಕಾರ ಅಮೆರಿಕವನ್ನು ಕೇಳಿಕೊಂಡರೆ ಇಲ್ಲಾದ ಬಾಂಬ್ ಸೋಟದ ರೂವಾರಿಗಳ ಮಾತುಕತೆಯ ವಿವರಗಳನ್ನು ನಮಗೆ ಕೊಟ್ಟು ಅಚ್ಚರಿಗೆ ತಳ್ಳಿದರೆ ಗಾಬರಿಯಾಗಬೇಕಿಲ್ಲ.
ಈ ಯೋಜನೆಯಿಂದಾಗಿ ಅಮೆರಿಕ ಐವತ್ತು ಬಾಂಬ್ ಸೋಟಗಳನ್ನು ತಡೆಗಟ್ಟಿದೆ ಅಷ್ಟೇ ಅಲ್ಲ ಡೇವಿಡ್ ಹೆಡ್ಲಿಯಂಥವನನ್ನು ಹಿಡಿದು ಹಾಕಿದೆಯೆಂದು ಸ್ವತಃ ಒಬಾಮ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಅಮೆರಿಕವೂ ಸೇರಿದಂತೆ ಬಹುತೇಕ ರಾಷ್ಟ್ರಗಳು ಗೌಪ್ಯತೆ ಕಳೆದುಕೊಂಡು ಪತರಗುಟ್ಟಿವೆ. ಭಯೋತ್ಪಾದಕರ ಬೆನ್ನಟ್ಟುವ ನೆಪದಲ್ಲಿ ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳು ರಾಷ್ಟ್ರದ ರಾಜಕಾರಣದಲ್ಲಿ, ಆರ್ಥಿಕ ವಿಚಾರಗಳಲ್ಲೆಲ್ಲಾ ಮೂಗು ತೂರಿಸಿ ತನ್ನ ‘ಬಿಗ್ ಬಿ’ ಪಟ್ಟವನ್ನು ಉಳಿಸಿಕೊಳ್ಳುವ ಪ್ರಭಾವೀ ಯತ್ನ ನಡೆಸುತ್ತಿದೆ.
ಇತ್ತೀಚೆಗೆ ಎಡ್ವರ್ಡ್ ಸ್ನೋಡೆನ್ ಈ ವಿಚಾರಗಳನ್ನು ಬಹಿರಂಗಪಡಿಸಿದ ಮೇಲೆ ಜಗತ್ತಿನಲ್ಲಿ ಉತ್ಪಾತವೇ ಆಗಿಬಿಟ್ಟಿದೆ. ‘ದ ಗಾರ್ಡಿಯನ್’ ಪತ್ರಿಕೆಯನ್ನೇ ನಂಬುವುದಾದರೆ ಜಿ-20 ಶೃಂಗಸಭೆ ನಡೆದಾಗ ಅಮೆರಿಕಾ ಎನ್‌ಎಸ್‌ಎ ಮತ್ತು ಬ್ರಿಟಿಷರ GCHQ (Govt.Communication Head Quarters) ಇಬ್ಬರೂ ಸೇರಿ ಯಾವ ಮಟ್ಟದ ಬೇಹುಗಾರಿಕೆ ನಡೆಸಿದ್ದರೆಂದರೆ ಅಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಅಮೆರಿಕದ ಕಚೇರಿಯಲ್ಲಿ ನೇರಪ್ರಸಾರದಲ್ಲಿ ನೋಡಲು ಸಾಧ್ಯವಿತ್ತಂತೆ. ಈ ಆಧಾರದ ಮೇಲೆ ತನ್ನ ನೀತಿಯನ್ನು ಆಗಿಂದಾಗ್ಗೇ ರೂಪಿಸಿ ಶೃಂಗಸಭೆಯ ಮೇಲೆ ಪ್ರಭಾವ ಬೀರಿತ್ತು ಅಮೆರಿಕ. ನೆನಪಿರಲಿ, ಆ ಸಭೆಯಲ್ಲಿ ಭಾರತವೂ ಇತ್ತು!
ಸುದ್ದಿ ಈಗ ಹೊರಬಂದಿರಬಹುದು. ಆದರೆ ಅಮೆರಿಕ ಇದನ್ನು ಅನಾದಿ ಕಾಲದಿಂದಲೂ ಮಾಡುತ್ತಲೇ ಬರುತ್ತಿದೆ. ನಾವುಗಳೆಲ್ಲ ಸೆಲ್ ಫೋನ್ ಬಳಸುವುದನ್ನು ಶುರು ಮಾಡುವ ವೇಳೆಗಾಗಲೇ ಅಮೆರಿಕಾ ಅದನ್ನು ಕದ್ದಾಲಿಸುವ ತಂತ್ರಜ್ಞಾನದ ಕುರಿತು ಯೋಚಿಸುತ್ತಿತ್ತು.1967ರಲ್ಲಿ ಮೊದಲ ಬಾರಿಗೆ ಈ ಕುರಿತಂತೆ ವ್ಯಾಪಕ ಸುದ್ದಿಯಾದಾಗ ಅಮೆರಿಕದ ನ್ಯಾಯಾಲಯ ಫೋನ್ ಕದ್ದಾಲಿಕೆಯ ಕುರಿತಂತೆ ತನ್ನ ನಿರ್ಣಯ ಪ್ರಕಟಿಸಿ, ಹೀಗೆ ಮಾಡುವಂತಿಲ್ಲವೆಂದು ಆದೇಶಿಸಿತು. ವಿಯೆಟ್ನಾಂ ಯುದ್ಧದ ವೇಳೆಗೆ ವಿದೇಶೀ ಬೇಹುಗಾರಿಕೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಅಮೆರಿಕಾ FISA (Foreign Intelligence Surveillance Act ) ಜಾರಿಗೆ ತರಲು ಹರಸಾಹಸ ಮಾಡಿತು. ಈ ಕಾಯ್ದೆಯಂತೂ ಸರ್ಕಾರದ ಕೈಗೆ ಬ್ರಹ್ಮಾಸವಾಯಿತು. ಯಾರ ಮೇಲಾದರೂ ಬೇಹುಗಾರಿಕೆ ನಡೆಸುವ ಅನುಮತಿ ಅದಕ್ಕೆ ದಕ್ಕಿತ್ತು. 2001ರ ಸೆಪ್ಟೆಂಬರ್11ರ ದಾಳಿಯ ನಂತರವಂತೂ ಅಮೆರಿಕದ ಓಟಕ್ಕೆ ದೇಶದ ನಾಗರಿಕರ ತಡೆಯೂ ಇರಲಿಲ್ಲ. ಪ್ರತಿಯೊಬ್ಬ ಅಧ್ಯಕ್ಷರೂ ದಾಳಿಯಾದಾಗ ರಕ್ಷಿಸಿಕೊಳ್ಳುವುದಿರಲಿ, ದಾಳಿಗೆ ಮುನ್ನವೇ ಅದನ್ನು ತಡೆಯುವ ಬಲುದೊಡ್ಡ ಯೋಜನೆಗಳನ್ನು ಹಾಕಿಕೊಂಡರು. ಅಮೆರಿಕ ಗಣಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಜಗತ್ತನ್ನು ತನ್ನಿಚ್ಛೆಗೆ ತಕ್ಕಂತೆ ಕುಣಿಸಲಾರಂಭಿಸಿತು.
ದೇಶದ ರಕ್ಷಣೆಯ ವಿಚಾರ ಬಂದಾಗ ಯಾರೂ ಮಿಸುಕಾಡುವುದಿಲ್ಲವೆಂದು ಅಮೆರಿಕಕ್ಕೆ ಚೆನ್ನಾಗಿ ಗೊತ್ತು. ಈ ಹಿಂದೆ ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳು ಸೇರಿ ‘ಎಕೆಲಾನ್’ ಎನ್ನುವ ಕಂಪ್ಯೂಟರ್ ಪ್ರೋಗ್ರಾಂನ ಮೂಲಕ ಯುರೋಪ್ ಒಕ್ಕೂಟದ ಕುರಿತಂತೆ ಬೇಹುಗಾರಿಕೆ ನಡೆಸಿದ್ದವು. ಅದೇ ಕೆಲಸವನ್ನು ಆನಂತರದ ದಿನಗಳಲ್ಲಿ ಅಮೆರಿಕ ಮುಂದುವರಿಸಿತಷ್ಟೇ. ಈ ಬಾರಿ ಈ ಕಂಪ್ಯೂಟರ್ ಪ್ರೋಗ್ರಾಂ ಅನ್ನು ಪ್ರಿಸಮ್ ಎಂದು ಕರೆಯಲಾಗಿದೆ. ಜಗತ್ತಿನಾದ್ಯಂತ ಹರಿದುಹಂಚಿರುವ ಬಿಲಿಯನ್‌ಗಟ್ಟಲೆ ಮಾಹಿತಿಗಳನ್ನು ಒಂದೇ ಕೇಂದ್ರಕ್ಕೆ ಎಳೆದುತರುವುದು ಮೊದಲ ಹಂತ. ಸ್ನೋಡೆನ್ ಹೇಳುವ ಪ್ರಕಾರ ಎಟಿ-ಟಿಯಂತಹ ಸೇವಾದಾರರು ತಮ್ಮ ಸರ್ವರ್‌ಗಳಿಗೆ ಬರುವ ಮಾಹಿತಿ ನೇರ ಎನ್‌ಎಸ್‌ಎಗೆ ಹೋಗಲೆಂದೇ ರೂಟರ್ ಹಾಕಿಬಿಟ್ಟಿದ್ದಾರೆ. ಹೀಗಾಗಿಯೇ ಪ್ರತಿಯೊಂದು ಕರೆಯೂ ಆ ಕೇಂದ್ರಕ್ಕೆ ಹೋಗಿಯೇ ಹೋಗುತ್ತೆ. ಹಾಗೆಯೇ ಜೀಮೇಲ್, ಹಾಟ್‌ಮೇಲ್, ಫೇಸ್‌ಬುಕ್‌ಗಳ ಮಾಹಿತಿಯೂ ಆ ಕೇಂದ್ರವನ್ನು ಹೊಕ್ಕಿಬರುತ್ತದೆ. ಹೀಗೆ ಸಂಗ್ರಹಿತವಾದ ಮಾಹಿತಿಗಳನ್ನು ಅಧ್ಯಯನ ಮಾಡಲಿಕ್ಕೆಂದು ಗಣಿತದ ಅತ್ಯಂತ ಕ್ಲಿಷ್ಟ ಆಲ್ಗೊರಿದಮ್ ಗಳನ್ನು ಬಳಸಲಾಗುತ್ತಿದೆ. ಒಂದು ಮೂಲದ ಪ್ರಕಾರ ಶ್ರೇಷ್ಠ ಗಣಿತಜ್ಞರೆಲ್ಲ ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಉದ್ಯೋಗಿಗಳಾಗಿದ್ದಾರೆ. ಇವರುಗಳು ಕುಳಿತು ಪ್ರಿಸಮ್ ರೂಪಿಸಿಕೊಂಡು ಅಧ್ಯಯನ ನಡೆಸಿ, ಯಾರು-ಏನು ಎಲ್ಲವನ್ನೂ ಅಮೆರಿಕ ಸರ್ಕಾರಕ್ಕೆ ತಿಳಿಸುತ್ತಾರೆ. ಅಲ್ಲಿಗೆ ಅವರ ಕೆಲಸ ಮುಗಿಯಿತು. ಮುಂದೆ ಈ ವರದಿಯ ಆಧಾರದ ಮೇಲೆ ಇತರ ಬೇಹುಗಾರಿಕಾ ಏಜೆನ್ಸಿಗಳು ಆಯಾ ರಾಷ್ಟ್ರದಲ್ಲಿ ತಮ್ಮ ಕೆಲಸದ ರೂಪುರೇಷೆ ನಿರ್ಧರಿಸುತ್ತವೆ. ಅಂದರೆ.. ನಾವು-ನೀವು ಎಷ್ಟೇ ಬಡಿದಾಡಲಿ ಭಾರತದ ಮುಂದಿನ ಪ್ರಧಾನಿ ಯಾರೆಂಬುದು ಅಮೆರಿಕಕ್ಕೆ ಆಗಲೇ ತಿಳಿದುಹೋಗಿದೆ.
ಈ ವಿಚಾರದಲ್ಲಿ ನಾವು ನಿಜಕ್ಕೂ ನಿಷ್ಕ್ರಿಯರೇ ಸರಿ. ನಮ್ಮ ಬೇಹುಗಾರಿಕಾ ಏಜೆನ್ಸಿಗಳು ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುತ್ತ ಕಾಲ ತಳ್ಳುವಾಗ ಅಮೆರಿಕದ ಬೇಹುಗಾರರು ಪಕ್ಕದ ರಾಷ್ಟ್ರದಲ್ಲಿ ಅಧ್ಯಕ್ಷರು ಯಾರಾಗಬೇಕೆಂದು ನಿರ್ಧರಿಸುವ ಮಟ್ಟಿಗೆ ತಲುಪಿದ್ದಾರಲ್ಲ! ಹೋಗಲಿ ಇವೆಲ್ಲಗಳ ಅರಿವಿದ್ದೂ ನಾವು ಮಾಡುವುದೇನು ಗೊತ್ತೇ? ನಮ್ಮ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನೂ ಜೀಮೇಲ್‌ನ ಮೂಲಕ ಹಂಚಿಕೊಳ್ಳೋದು. ಹೈದರಾಬಾದ್ ಬಾಂಬ್ ಸೋಟವಾಯ್ತಲ್ಲ, ಆಗ ಸುಳಿವು ಕೊಟ್ಟವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ನಮ್ಮ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿತ್ತು. ಮಾಹಿತಿ ಹಂಚಿಕೊಳ್ಳಲು ಅವರು ಕೊಟ್ಟಿದ್ದು ಮತ್ತೆ ‘ಜೀಮೇಲ್’ ಅಕೌಂಟೇ! ಹೇಗಿದೆ ವರಸೆ? ಅಮೆರಿಕ ಇದನ್ನು ಹತ್ತಿರದಿಂದ ಗಮನಿಸುತ್ತೆ ಎಂಬ ಸಾಮಾನ್ಯ ಜ್ಞಾನವೂ ನಮ್ಮವರಿಗಿಲ್ಲವೇ ಅಥವಾ ಅಮೆರಿಕ ನೋಡಲಿ ಅಂತಾನೇ ಹಾಗೆ ಮಾಡೋದಾ?
ಅದು ಬಿಡಿ. ಆಧಾರ್ ಕಾರ್ಡ್‌ನ ಮಾಹಿತಿಯನ್ನು ಕಾಪಾಡಲು ನಾವು ಬಳಸಿಕೊಳ್ಳುತ್ತಿರುವ ಕಂಪನಿಗಳೂ ಅಮೆರಿಕದ್ದೇ! ಅದರರ್ಥ.. ನಮ್ಮ ದೇಶದ ನಾಗರಿಕರ ಸಂಪೂರ್ಣ ಮಾಹಿತಿ ಅಮೆರಿಕನ್ನರ ಬೆರಳ ತುದಿಯಲ್ಲಿ!
ಕಳೆದ ಬಾರಿ ಚುನಾವಣೆಯ ಪ್ರಚಾರಕ್ಕೆ ಒಬಾಮ ‘Yes, We can’ ಅನ್ನೋ ಹೇಳಿಕೆ ಬಳಸಿದ್ದರು. ಈ ಬಾರಿ ಜರ್ಮನಿಯ ಜನತೆ ಒಬಾಮ ಸ್ವಾಗತಕ್ಕೆ ‘Yes, We sacn’ ಎನ್ನುವ ಹೇಳಿಕೆಯ ಸ್ವಾಗತ ಕೋರಿದ್ದಾರೆ. ಹಾಗೆ ನೋಡಿದರೆ, ಈ ಕಾರಣಕ್ಕಾಗಿ ಒಬಾಮ ಜನಪ್ರಿಯತೆ ಕುಸಿದಿದೆ ಅಂತ ಎಡಪಂಥೀಯರು ಆನಂದದಿಂದ ಕುಣಿದಾಡುತ್ತಿದ್ದಾರೆ. ವಾಸ್ತವವಾಗಿ ಸುರಕ್ಷತೆಯ ದೃಷ್ಟಿಯಿಂದ ಅವರು ಮಾಡಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲವೆಂದು ಅಮೆರಿಕ ನಿಧಾನವಾಗಿ ಒಪ್ಪಿಕೊಳ್ಳುತ್ತಿದೆ. ರಾಷ್ಟ್ರ ಮೊದಲು ಅಂತ ನಾವು ಘೋಷಿಸುತ್ತಲೇ ಇರುತ್ತೇವೆ. ಆದರೆ ಅಮೆರಿಕ ಅದನ್ನು ಸ್ಪಷ್ಟವಾಗಿ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ.
ಅಷ್ಟೇ ಅಲ್ಲ. ತಾನು ಹಿಂಬದಿಯಿಂದ ಇಷ್ಟೆಲ್ಲಾ ಕಳ್ಳತನ ಮಾಡುತ್ತಿರುವಾಗ ಅಮೆರಿಕ ಅಷ್ಟೂ ಆರೋಪವನ್ನು ಚೀನಾ ಮೇಲೆರಚಿ ಆನಂದಿಸುತ್ತಿತ್ತು. ಜಗತ್ತನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಚೀನಾದ ಪ್ರಯಾಸವಿದೆಲ್ಲ ಅಂತ ಜಗತ್ತು ಭಾವಿಸಿಬಿಟ್ಟಿತ್ತು. ಆದರೆ ಎಡ್ವರ್ಡ್ ಸ್ನೋಡೆನ್ ಎಲ್ಲದಕ್ಕೂ ಪರದೆ ಎಳೆದಿದ್ದಾನೆ. ಆದರೆ ಹೀಗೆ ಸುದ್ದಿ ಸೋಟಿಸಿ ಹೆದರಿಕೆಯಿಂದ ಹಾಂಕಾಂಗ್‌ಗೆ ಓಡಿ ಹೋಗಿದ್ದಾನೆ. ಈಗ ಮತ್ತದೇ ಅನುಮಾನ. ಆತ ಚೀನಾದ ಏಜೆಂಟನಂತೆ ವರ್ತಿಸುತ್ತಿದ್ದಾನಾ? ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತ ಜಗತ್ತನ್ನು ದಾರಿ ತಪ್ಪಿಸುತ್ತಿದ್ದಾನಾ?
ಎಲ್ಲರಿಗೂ ಅನುಮಾನವಿದೆ. ಆದರೆ ಅನುಮಾನವಿಲ್ಲದಿರೋದು ಭಾರತಕ್ಕೆ ಮಾತ್ರ. ಅದು ಅಮೆರಿಕದ ಈ ಕಳ್ಳತನಕ್ಕೆ ಯಾವ ಪ್ರತಿರೋಧವನ್ನೂ ತೋರದೆ ಸುಮ್ಮನೆ ಕುಳಿತಿದೆ. ಮೌನ, ಪರಮ ಮೌನ! ಅಮೆರಿಕವನ್ನು ವಿರೋಧಿಸೋದು ಅಂದರೆ ಚೀನಾದ ಪರ ಅನ್ನೋ ಭಯವಿರಬೇಕು. ಅಂದರೆ ನಮಗೊಂದು ಸ್ವಂತ ಅಸ್ತಿತ್ವವೇ ಇಲ್ಲವಾ?

Comments are closed.