ವಿಭಾಗಗಳು

ಸುದ್ದಿಪತ್ರ


 

ಅಮ್ಮ ಯಾಕೆ ಹಿಂಗೆ?

ಹೆತ್ತಮ್ಮನೇ ಶಾಪ ಹಾಕುತ್ತಾಳಾ? ಥೂ ನಾನೆಂಥ ಪಾಪಿ! ಇಂಥ ಅಮ್ಮ ಯಾಕಾದರೂ ಇರಬೇಕು

Abstract-People-Face-Painting
‘ನಾನೂ ಎಷ್ಟೂಂತ ಸಹಿಸಲಿ. ಇತ್ತ ನಿನ್ನ ಕಿರಿಕಿರಿ. ಅವರೂ ಅರ್ಥ ಮಾಡಿಕೊಳ್ಳೋಲ್ಲ. ನೀವಿಬ್ಬರೂ ಕಿತ್ತಾಡೋದು ಹೇಗೆ ನೋಡಲಿ’ ಅಮ್ಮನೆದುರಿಗೆ ಅಲವತ್ತುಕೊಂಡೆ. ‘ನಿನ್ನ ಗಂಡ ಬೇಕಂತಲೇ ನನ್ನ ತಂಟೆಗೆ ಬರೋದು. ನಾನು ಇಲ್ಲಿರೋದು ಅವನಿಗಿಷ್ಟವಿಲ್ಲ. ಬಾಯ್ಬಿಟ್ಟು ಹೇಳಿಬಿಡಲಿ ಅದನ್ನ; ಎಲ್ಲಿಯಾದರೂ ಹಾಳಾಗಿ ಹೋಗುತ್ತೇನೆ’ ಎಂದಳು ಅಮ್ಮ. ಅವಳಿಗೀಗ 70 ದಾಟಿತು. ಅಣ್ಣನ ಮನೆಯಲ್ಲಿ 4 ದಿನ ಇರಲಿಕ್ಕಾಗಲ್ಲ. ಅತ್ತಿಗೆಯೊಂದಿಗೆ ಪಿರಿಪಿರಿ. ನನಗಂತೂ ಅವನನ್ನ ಬಿಟ್ಟರೆ ಅಕ್ಕ ತಂಗಿ, ಅಣ್ಣ ತಮ್ಮ ಯಾರೂ ಇಲ್ಲ. ಅಮ್ಮ ಎಂಬ ತುಡಿತದಿಂದ ತಂದಿಟ್ಟುಕೊಂಡರೆ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ತಿಲ್ಲ. ‘ನನ್ನನ್ನ ಅರ್ಥಮಾಡಿಕೊಳ್ಳಮ್ಮ. ನೀನು ಕಿತ್ತಾಡ್ತಿರೋದು ನಿನ್ನ ಸೊಸೆಯೊಂದಿಗಲ್ಲ; ಮಗಳೊಂದಿಗೆ. ನೋಡಿದವರು ಏನೆಂದುಕೊಂಡಾರು?’ ಕಣ್ಣಂಚು ತುಂಬಿ ಬಂದಿತ್ತು. ‘ಬೇರೆಯವರ ಚಿಂತೆ ಬಿಡು. ನನ್ನನ್ನು ಇಷ್ಟೊಂದು ಗೋಳು ಹೋಯ್ದುಕೊಳ್ಳುತ್ತಿದ್ದೀಯಲ್ಲ; ದೇವರು ನಿನಗೆ ಶಿಕ್ಷಿಸದೇ ಬಿಡೋಲ್ಲ. ನನಗೆ ಬಂದ ಕಷ್ಟ ನಿನಗೂ ಬರಲಿ ಅಂತ ಹಾರೈಸುತ್ತೇನೆ’ ಎಂದು ಬಿಟ್ಟಳು ಅಮ್ಮ.
ದುಃಖ ಉಮ್ಮಳಿಸಿ ಬಂತು. ಅಳುತ್ತ ರೂಮು ಸೇರಿಕೊಂಡೆ. ಧಡಾರನೆ ಬಾಗಿಲು ಬಡಿದ ಸದ್ದು ಅವಳಿಗೆ ಕೇಳಿರಲೇಬೇಕು. ಅವಳ ಕಿವಿ ಬಲು ಚುರುಕು. ನಾನು-ಅವರು ಅಡುಗೆ ಮನೆಯಲ್ಲಿ ಪಿಸುಗುಟ್ಟಿದರೂ ಅವಳಿಗೆ ಕೇಳುತ್ತೆ.
ಕಿಟಕಿಯ ಕರ್ಟನನ್ನೂ ಹಿಡಿದು ಅತ್ತೆ. ‘ಹೆತ್ತಮ್ಮನೇ ಶಾಪ ಹಾಕುತ್ತಾಳಾ? ಥೂ ನಾನೆಂಥ ಪಾಪಿ! ಇಂಥ ಅಮ್ಮ ಯಾಕಾದರೂ ಇರಬೇಕು’. ಮನಸ್ಸು ಕೆಟ್ಟದ್ದನ್ನೇ ಯೋಚಿಸುತ್ತಿತ್ತು. ‘ಅಮ್ಮ ಸತ್ತಾದರೂ ಹೋಗಬಾರದಾ?’ ಶಾಪ ಹಾಕುತ್ತಿತ್ತು!
ಅತ್ತೂ-ಅತ್ತೂ ಕಣ್ಣೀರು ಬತ್ತಿತು. ಮೈಗ್ರೇನ್ ತಲೆಯನ್ನು ತಿಂದುಬಿಟ್ಟಿತ್ತು. ಕೋಣೆಯ ಬಾಗಿಲು ತೆಗೆದು ಹೊರಬಂದೆ. ಅಲ್ಲೆಲ್ಲೂ ಅಮ್ಮ ಕಾಣಲಿಲ್ಲ. ಅವಳ ಕೋಣೆ ಇಣುಕಿದೆ. ಮುಲುಗುತ್ತ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು ಅಪ್ಪ. ಬಾತ್ರೂಮು- ಟಾಯ್ಲೆಟ್ಟು ಎಲ್ಲೂ ಇರಲಿಲ್ಲ ಅವಳು. ‘ಅಮ್ಮಾ’ ಅಂದೆ. ಕಪಾಟಿನಿಂದ ಹರವಿದ ಸೀರೆಗಳು ಹಾಗೆಯೇ ಬಿದ್ದಿದ್ದವು. ‘ಆತ್ಮಹತ್ಯೆ ಮಾಡಿಕೊಂಡಳಾ?’ ಗಾಬರಿಯಾಯ್ತು. ಮನೆಯ ಮೂಲೆ ಮೂಲೆ ಹುಡುಕಿದೆ. ಎದೆ ಬಡಿತ ಜೋರಾಯ್ತು. ರಸ್ತೆಯತ್ತ ನೋಡಿದೆ. ಕಾಣಲಿಲ್ಲ. ರೇಲ್ವೇಸ್ಟೇಷನ್ನಿನ ಕಡೆ ಹೋದಳಾ? ನಮ್ಮೂರಿನಿಂದ ಹೊರಡೋದು ಒಂದೋ ಎರಡೋ ಟ್ರೇನು. ಸಾಯಬೇಕೆಂದಿದ್ದರೂ, ಊರು ಬಿಟ್ಟು ಹೋಗಬೇಕೆಂದಿದ್ದರೂ ಸುಲಭವಿಲ್ಲ. ತಡಮಾಡದೇ ಓಡಿದೆ. ಅಮ್ಮ ಅಲ್ಲಿಯೂ ಇರಲಿಲ್ಲ.

Abstract-Art-Painting-The-Dark
ಹೃದಯ ಭಾರವಾಯ್ತು. ಛೇ. ನಾನೇನಾದರೂ ತಪ್ಪು ಮಾತನಾಡಿದೆನಾ? ನಾನ್ಯಾಕೆ ಅವಳಿಗೆ ಬೈದೆ? ನನ್ನ ಚಡಪಡಿಕೆ ತೀವ್ರವಾಯ್ತು. ಮನೆಗೆ ಬರುವ ದಾರಿಯುದ್ದಕ್ಕೂ ಮನಸ್ಸಿನೊಂದಿಗೆ ಘೋರ ಕದನ. ಅವರೂ ಬಂದರು. ತಬ್ಬಿಕೊಂಡು ಹಿಡಿದು ಅತ್ತೆ. ಅವರಿಗೂ ಸಂಕಟವಾಯ್ತು. ತಾನು ತಪ್ಪು ಮಾಡಿದೆನೆಂಬ ಭಾವ ಬಾಧಿಸುತ್ತಿತ್ತು ಅವರನ್ನು. ಇನ್ನೆಂದಿಗೂ ಗಲಾಟೆ ಮಾಡಲಾರೆ ಎಂದು ನನ್ನ ತಲೆ ನೇವರಿಸುತ್ತಿದ್ದರು. ಅಷ್ಟರೊಳಗೆ ಗೇಟು ತೆಗೆದ ಸದ್ದಾಯ್ತು. ಓಡಿದೆ. ಅಮ್ಮ ಒಳಗೆ ಬಂದಳು. ಕೈಲಿ ಚೀಲ. ಅದರೊಳಗಿಂದ ಸುಂದರ ಸೀರೆ ತೆಗೆದು ನನ್ನ ಕೈಲಿಟ್ಟಳು. ‘ನಿನ್ನೆ ಚೂಡಿದಾರ ಹಾಕಿದ್ಯಲ್ಲ ಚೆನ್ನಾಗಿರಲಿಲ್ಲ. ನಾನೇ ಹೋಗಿ ಸೀರೆ ತೊಗೊಂಡು ಬಂದೆ. ನಾಳೆ ಚಿಕ್ಕಮ್ಮನ ಮನೆಯ ಸತ್ಯನಾರಾಯಣ ಪೂಜೆಗೆ ಹೋಗುವಾಗ ಇದನ್ನೇ ಹಾಕ್ಕೊಂಡು ಹೋಗು’ ಎಂದರು. ನಾನು ನಿಟ್ಟುಸಿರು ಬಿಟ್ಟು ಓಡಿ ಹೋಗಿ ಅವಳನ್ನು ತಬ್ಬಿಕೊಂಡೆ. ಅದು ಕರುವಿಗೆ ತಾಯಿ ಸಿಕ್ಕಷ್ಟೇ ಖುಷಿ!
ಅಮ್ಮನಲ್ಲಿ ಬದಲಾವಣೆ ಇರಲಿಲ್ಲ. ಅವರೆಡೆಗೆ ತಿರುಗಿದಳು. ‘ನಂದೇ ದುಡ್ಡಲ್ಲಿ ತಂದಿರೋದು. ನಿನ್ನ ದುಡ್ಡಲ್ಲ. ಅದಕ್ಕೆ ನಿಂಗೆ ಏನು ತರಲಿಲ್ಲ’ ಎಂದಳು. ಅವರ ಕಣ್ಣು ನಿಗಿ ನಿಗಿ ಕೆಂಡವಾಯ್ತು. ‘ನೀವು ತರದಿದ್ರೆ ನಾನೇನು ಬಟ್ಟೆಯೇ ಹಾಕ್ಕೊಳಲ್ಲ ನೋಡಿ’ ಎಂದು ತೋಳೇರಿಸಿದರು. ಮತ್ತೆ ಶುರುವಾಯ್ತು ತೂ-ತೂ ಮೆ-ಮೆ.
ನಾನು ಸುದೀರ್ಘವಾಗಿ ಉಸಿರು ಬಿಟ್ಟು ನನ್ನ ಕೋಣೆಗೆ ಹೋಗಿ ಕೂತುಬಿಟ್ಟೆ.

Comments are closed.