ವಿಭಾಗಗಳು

ಸುದ್ದಿಪತ್ರ


 

ಅರುಣಾಚಲಕ್ಕೆ ಭರವಸೆಯ ಕಿರಣ 

ಈಶಾನ್ಯ ರಾಜ್ಯಗಳು ನಮಗೆ ಯಾವಾಗಲೂ ದೂರವೇ. ಮೊದಲೆಲ್ಲ ಆಳುವ ಧಣಿಗಳು ಕ್ರಿಸ್ತನ ಬೆಳೆ ಬೆಳೆಯಲು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಿಟ್ಟರು. ಸ್ವಾತಂತ್ರ್ಯಾನಂತರ ಇಲ್ಲಿಂದ ಆಯ್ಕೆಯಾಗಿ ಬರುವ ಸಂಸದರ ಸಂಖ್ಯೆ ಪ್ರಭಾವಿಯಲ್ಲವಾದ್ದರಿಂದ ನಮ್ಮವರೂ ತಲೆಕೆಡಿಸಿಕೊಳ್ಳಲಿಲ್ಲ. ಈಶಾನ್ಯದ ಏಳೂ ರಾಜ್ಯಗಳು ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ಬಂಗಾಳಕ್ಕೆ ತಾಕಿಕೊಂಡಿದ್ದ ಅಸೋಮ್ ಪ್ರಗತಿಗೆ ಮುಖ ಮಾಡಿದ್ದು ಬಿಟ್ಟರೆ, ಉಳಿದವು ಕೇಂದ್ರ ಸರ್ಕಾರ ಕೊಡುವ ಹಣಕ್ಕೆ ಕಾಯುತ್ತ ಉಳಿದುಬಿಟ್ಟವಷ್ಟೇ.
ಮೊದಲ ಬಾರಿಗೆ ವಾಜಪೇಯಿ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಒಬ್ಬ ಮಂತ್ರಿಯನ್ನೂ ನೇಮಕ ಮಾಡಿತ್ತು. ಅನಂತರ ಮನಮೋಹನ ಸಿಂಗರು ಮತ್ತೆ ಈ ರಾಜ್ಯಗಳನ್ನು ಮರೆತುಬಿಟ್ಟರು. ಸ್ವತಃ ಅಸೋಮ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರೂ  ಅದೆಷ್ಟು ಬಾರಿ ಹೋಗಿಬಂದರೋ ದೇವರೇ ಬಲ್ಲ!
ಈ ವಾರದೊಳಗೆ ಈಗಿನ ಪ್ರಧಾನಿ ಅಸೋಮ್ – ನಾಗಾಲ್ಯಾಂಡ್ – ಅರುಣಾಚಲ ಪ್ರದೇಶಗಳತ್ತ ಹೊರಡಲಿದ್ದಾರೆ. ಸಂದೇಶ ಅದ್ಯಾರಿಗೋ.. ಆದರೆ ಚೀನಾ ಅಂತೂ ಒಮ್ಮೆ ಮೈ ಕೊಡವಿಕೊಳ್ಳಲಿದೆ. ಈ ದೇಶದ ಮಂತ್ರಿಗಳು ಅರುಣಾಚಲಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗಲೇ ಎಚ್ಚರಿಕೆಯ ಗಂಟೆಯೊತ್ತುತ್ತಿದ್ದ ಚೀನಾ ಈಗೇನು ಮಾಡಲಿದೆಯೆಂದು ಕಾದು ನೋಡಬೇಕಿದೆ. ತನ್ನ ಸುತ್ತಲಿನ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಏಷ್ಯಾದ ಹಿರಿಯಣ್ಣನಾಗುವ ದಿಸೆಯಲ್ಲಿ ದಾಪುಗಾಲಿಡುತ್ತಿರುವ ಭಾರತದೊಂದಿಗೆ ಚೀನಾದ ನಡೆ ಭಿನ್ನವಾಗಿರುವುದು ಶತಃಸಿದ್ಧ. ಕೆಲವೇ ದಿನಗಳ ಹಿಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅರುಣಾಚಲಕ್ಕೆ ಬಂದು ಹೋದಾಗಲೂ ಚೀನಾ ತೆಪ್ಪಗಿತ್ತು ಅನ್ನುವುದನ್ನು ಮರೆಯುವಂತಿಲ್ಲ. ಆರು ತಿಂಗಳಲ್ಲಿ ಬದಲಾದ ನಮ್ಮ ಸಾಮರ್ಥ್ಯವನ್ನಿದು ಪರಿಚಯಿಸುತ್ತದೆಯಷ್ಟೇ!
ಈಶಾನ್ಯದ ಏಳೂ ರಾಜ್ಯಗಳಲ್ಲಿ ಹೆಚ್ಚಿನ ಭೂವಿಸ್ತಾರ ಅರುಣಾಚಲದ್ದು. ಇದರ ಉತ್ತರ ಭಾಗದ ಗಡಿಯಷ್ಟೂ ಚೀನಾದೊಂದಿಗೆ ಹೊಂದಿಕೊಂಡಿರುವಂಥದ್ದೇ. ‘ಇಲ್ಲಿಯ ಜನ ನೋಡಲು ಚೀನೀಯರಂತೆ ಇದ್ದಾರೆಂದು ಇತರ ಭಾರತೀಯರು ಭೇಕಿದ್ದರೆ ಚಿಂಕಿಗಳೆಂದು ಕರೆಯಲಿ, ಟಿಬೆಟನ್ ಅಂತಾದರೂ ಕರೆಯಲಿ. ಇಲ್ಲಿಯವರ ನಿಷ್ಠೆ ಮಾತ್ರ ಅಚಲ. ಇಲ್ಲಿಯವರು ಮಾತ್ರ ಯಾವತ್ತೂ ಚೀನಾವಿರೋಧಿಗಳೇ. ಅಪ್ಪಟ ಭಾರತೀಯರೇ!’ ಅನ್ನುವಾಗ ಚಾಟುಂಗ್ ತರುವಿನ ಮುಖದಲ್ಲಿ ಅಪರೂಪದ ಪ್ರಭೆ. ಚಾಟುಂಗ್ ಇಲ್ಲಿಯ ಜೀರೋ ಜಿಲ್ಲೆಯ ಅಪತಾನಿ ಬುಡಕಟ್ಟಿನ ತರುಣ ಸಂಘದ ಅಧ್ಯಕ್ಷ. ಬಲು ಬುದ್ಧಿವಂತ.

ಅರುಣಾಚಲದ ವಿಶಿಷ್ಟ ಸಂಸ್ಕೃತಿಯ ಪ್ರತೀಕ

ಅರುಣಾಚಲದ ವಿಶಿಷ್ಟ ಸಂಸ್ಕೃತಿಯ ಪ್ರತೀಕ

ಅರುಣಾಚಲದುದ್ದಕ್ಕೂ ಬುಡಕಟ್ಟು ಜನರದ್ದೇ ಸಾಮ್ರಾಜ್ಯ. ನಮ್ಮಲ್ಲಿ ಪ್ರತಿ ನೂರು ಮೀಟರಿಗೆ ಭಾಷೆ ಬದಲಾಗುತ್ತದೆ ಅನ್ನುತ್ತೀವಲ್ಲ, ಇಲ್ಲಿ ಜನರೇ ಬದಲಾಗಿಬಿಡುತ್ತಾರೆ. ಒಂದಕ್ಕಿಂತ ಪೂರ್ತಿ ಭಿನ್ನವಾದ ಮತ್ತೊಂದು ಜನ ಸಂಸ್ಕೃತಿ! ಉಡುಗೆ ತೊಡುಗೆ, ಮನೆ ಕಟ್ಟುವ ರೀತಿ, ಊಟದ ಶೈಲಿ ಎಲ್ಲವೂ ಭಿನ್ನ. ಭಾಷೆಯಂತೂ ಒಬ್ಬರು ಮತ್ತೊಬ್ಬರಿಗೆ ಉತ್ತರ ದಕ್ಷಿಣವೇ! ಮೂಲತಃ ಮಂಗೋಲಿಯನ್ನರಾದ ಇವರು ಅನೇಕ ಶತಮಾನಗಳ ಹಿಂದೆ ವಲಸೆ ಬಂದು ನೆಲೆಸಿದವರಂತೆ. ಆಗೆಲ್ಲ ಅರುಣಾಚಲ ಈಗಿನಷ್ಟು ಮನುಷ್ಯಸ್ನೇಹಿಯಾಗಿರಲಿಲ್ಲ. ಸುತ್ತಲೂ ಬೆಟ್ಟಗುಡ್ಡಗಳು, ದಟ್ಟ ಕಾಡು, ಸಿಗಿದು ತಿನ್ನುವ ಮೃಗಗಳೇ. ಇದ್ದ ಒಂದೇ ಒಂದು ಶಕ್ತಿ ಸೂರ್ಯನದ್ದು. ಆತನೂ ಇಲ್ಲಿ ಭಾರತದ ಉಳಿದೆಲ್ಲ ಕಡೆಗಿಂತ ಬಲು ಬೇಗ ಕಾಣಿಸಿಕೊಳ್ಳುತ್ತಾನೆ, ಅಷ್ಟೇ ಬೇಗ ಹೊರಟೂಹೋಗುತ್ತಾನೆ. ಇಲ್ಲಿ ಬೆಳಗ್ಗೆ ನಾಲ್ಕಕ್ಕೇ ಬೆಳಕು. ಇಳಿ ಮಧ್ಯಾಹ್ನ ನಾಲ್ಕು ಗಂಟೆಗೆಲ್ಲ ಕತ್ತಲು ಆವರಿಸಲು ಶುರು. ಮಂಗೋಲಿಯನ್ನರು ಈ ಜಾಗ ಆರಿಸಿಕೊಂಡರು. ಅರಣ್ಯದಲ್ಲಿ ಬೇಟೆಯಾಡುತ್ತಾ ಪ್ರಕೃತಿಯೊಡನೆ ಸಾಮರಸ್ಯ ಕಾಪಾಡಿಕೊಂಡು, ಈ ಮಣ್ಣಿನೊಡನೆ ಒಂದಾಗಿಬಿಟ್ಟರು.
ಹೌದು. ಅರುಣಾಚಲಿಗಳನ್ನು ಕಂಡರೆ ಪ್ರೀತಿ ಮೂಡೋದು ಅದಕ್ಕೇ. ಕಶ್ಮೀರದ ಜನ ಕೇಂದ್ರ ಸರ್ಕಾರವನ್ನು ತಮ್ಮ ಅಡಿಗಳಲ್ಲಿಟ್ಟುಕೊಳ್ಳಬೇನ್ನುವ ತುಡಿತದಿಂದ ಪ್ರತ್ಯೇಕತೆಯ ಗದ್ದಲವೆಬ್ಬಿಸುತ್ತ ಇರುತ್ತಾರೆ. ಆಗಾಗ ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುತ್ತಾರೆ, ಅದನ್ನು ಕೇಳಿ ಭಾರತ ಹೆದರಿ ಥರಥರ ನಡಗುತ್ತದೆ. ಮನಸ್ಸು ಮಾಡಿದ್ದರೆ ಅರುಣಾಚಲ ಕೂಡ ಚೀನಾಕ್ಕೆ ಜೈಕಾರ ಹಾಕಬಹುದಾಗಿತ್ತು. ಹಾಗಾಗಿಬಿಟ್ಟಿದ್ದರೆ ಚೀನಾವನ್ನು ತಡೆಯುವ ಸಾಮರ್ಥ್ಯ ಭಾರತದ ಯಾವ ಪ್ರಧಾನಿಗೂ ಅಸಾಧ್ಯವೇ ಆಗಿರುತ್ತಿತ್ತು. ಚೀನಾದಿಂದ ಹಣವೂ ಹರಿದು ಬರುತ್ತಿತ್ತು. ಆದರೆ ಅರುಣಾಚಲ ಈ ವಿಷಯದಲ್ಲಿ ನಿಜಕ್ಕೂ ಅಚಲವೇ. ಅನುಮಾನವೇ ಇಲ್ಲ!
ಇಲ್ಲಿನ ವ್ಯವಸ್ಥೆಗಳು – ಪದ್ಧತಿಗಳು ಕಟ್ಟಿಕೊಡುವ ಕಥೆಗಳು ಅನೇಕ. ಕಲಿಯಬೇಕಾದ ಪಾಠಗಳು ನೂರಾರು. ಸಾಮಾನ್ಯ ಅರುಣಾಚಲಿ ಮಾಂಸಾಹಾರಿ. ಇಲ್ಲಿಗೆ ಹೊರಗಿನಿಂದ ಬಂದವರೂ ನಿಧಾನವಾಗಿ ಮಾಂಸಾಹಾರಿಗಳಾಗಿಬಿಡುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿನ ಆಹಾರ ಪದ್ಧತಿಯೊಳಗೆ ಮಾಂಸ ಬೆರೆತು ಹೋಗಿದೆ. ಆದರೆ ಇವರು ಮಾಂಸಾಹಾರಕ್ಕೂ ಸಂಸ್ಕೃತಿಗೂ ಸಂಬಂಧವಿಲ್ಲವೆನ್ನುವಷ್ಟು ಸ್ವಚ್ಛ, ಅಷ್ಟು ಶುಭ್ರ. ಈ ಜನರಿಗೆ ಪ್ರಕೃತಿಯೇ ದೇವರು. ಸದಾ ಜೊತೆಗಿರುವ ಸೂರ್ಯ ಚಂದ್ರರೇ ಬದುಕಿನಾಧಾರ. ಹಾಗಂತ ಮನೆಗಳಲ್ಲಿ ದೇವರ ಕೋಣೆಗಳಿಲ್ಲ. ಇವರು ಪ್ರಾರ್ಥನೆಗೆಂದು ಪ್ರತ್ಯೇಕ ಸಮಯ ಮೀಸಲಿಡುವುದಿಲ್ಲ. ಎಲ್ಲವೂ ಬಲು ಸಹಜ. ಕಾಡನ್ನು ಕಂಡರೆ ಅಪಾರ ಭಕ್ತಿ. ಕೆಲವು ಬುಡಕಟ್ಟುಗಳು ಬೆಟ್ಟದ ಮೇಲಿನ ಒಂದಷ್ಟು ಜಾಗವನ್ನು ಆಯ್ದುಕೊಂಡು, ಅಲ್ಲಿನ ಮರಗಳನ್ನು ಕಡಿದು, ಒಂದೆರಡು ವರ್ಷ ಕೃಷಿ ಮಾಡಿ ಬಿಟ್ಟುಬಿಡುತ್ತವೆ.  ಅಲ್ಲಿ ಮತ್ತೆ ಘನವಾದ ಕಾಡು ಬೆಳೆಯಲೆಂದು. ಈ ಜನ ಆ ಜಾಗದ ಮೇಲೆ ಒಡೆತನ ಸ್ಥಾಪಿಸಬೇಕೆನ್ನುವ ವ್ಯಾಮೋಹವನ್ನೆ ತೋರುವುದಿಲ್ಲ. ಅವರು ಜಾಗವನ್ನು ಆರಿಸಿಕೊಳ್ಳುವುದೂ ಜನಾಂಗದ ಎಲ್ಲರೊಡನೆ ಚರ್ಚಿಸಿ ನಿರ್ಧರಿಸಿದ ಬಳಿಕವೇ.
ಭೂಮಿಯ ಕುರಿತಂತೆಯೂ ಇಲ್ಲಿನವರ ಮಾನ್ಯತೆ ಬಲು ವಿಶಿಷ್ಟ. ಇಲ್ಲಿ ಮೂರು ಹಂತದಲ್ಲಿ ಭೂಮಿ ವಿಂಗಡಣೆಯಾಗಿದೆ. ಸ್ವಂತದ ಭೂಮಿ, ಪರಿವಾರದ್ದು ಮತ್ತು ಬುಡಕಟ್ಟಿನವರದ್ದು. ಮೊದಲನೆಯದು ಅಕ್ಷರಶಃ ತನಗೇ ಸೇರಿದ್ದು. ಅಲ್ಲಿ ಆತ ಕೃಷಿ ಮಾಡುತ್ತಾನೆ. ಎರಡನೆಯ ಹಂತದ ಭೂಮಿಯ ಒಡೆತನ ಪರಿವಾರಕ್ಕೆ ಸೇರಿದ್ದು. ಇಲ್ಲಿನ ಜವಾಬ್ದಾರಿ ಇಡಿಯ ಪರಿವಾರ ಹೊರಬೇಕು. ಕೊನೆಯ, ಅತಿ ವಿಶಿಷ್ಟ ಭಾಗ ಬುಡಕಟ್ಟಿನದ್ದು. ಇದರಡಿ ಕಾಡು ಬರುತ್ತದೆ. ಇಲ್ಲಿನ ಒಂದು ಕಟ್ಟಿಗೆ ತರಬೇಕಾದರೂ ಬುಡಕಟ್ಟಿನ ಹಿರಿಯರ ಅನುಮತಿ ಪಡೆಯಲೇಬೇಕು! ಹೀಗೆ ಕಡಿದು ಹಾಕಿದ ಮರಗಳಿಂದ ಕಾಡಿನ ಕೊರತೆಯಾಗದಂತೆ ಸಮತೋಲನ ಕಾಪಾಡಲಿಕ್ಕಾಗಿ, ಪ್ರತಿ ವರ್ಷ ಆ ಜಾಗದಲ್ಲಿ ಎಲ್ಲರೂ ಸೇರಿ ಸಿಗಳನ್ನು ನೆಡಬೇಕು. ಬರೀ ಮರಗಳನ್ನು ಕಡಿದುಹಾಕಲಷ್ಟೆ ಆಸಕ್ತಿ ತೋರುವ ನಮಗೆ ಅರುಣಾಚಲಿಗಳು ಕಲಿಸಿಕೊಡುವ ಶ್ರೇಷ್ಠ ಪಾಠವಿದು.
ಅಪತಾನಿ ಬುಡಕಟ್ಟಿನವರು ಒಂದೆಡೆ ನೆಲೆನಿಂತು ಕೃಷಿ ಮಾಡುವ ಜಾತಿಗೆ ಸೇರಿದವರು. ಭತ್ತ ಇವರು ಬೆಳೆಯುವ ವಿಶಿಷ್ಟ ಬೆಳೆ. ವಿಶೀಷ್ಟವೇಕೆಂದರೆ, ಇವರು ಭತ್ತದ ಜೊತೆಗೆ ಮೀನನ್ನೂ ಕೃಷಿ ಮಾಡುತ್ತಾರೆ! ಭತ್ತದ ಸಸಿಗೆ ನೀರು ನಿಲ್ಲಿಸುತ್ತಾರಲ್ಲ, ಅಲ್ಲಿ ಮೀನುಗಳನ್ನು ಬಿಟ್ಟು ಸಾಕುತ್ತಾರೆ. ಪೈರಿನ ಬುಡದ ಬೇರಿನ ಗಂಟುಗಳನ್ನು ತಿಂದು ಈ ಮೀನುಗಳು ಪೊಗದಸ್ತಾಗಿ ಬೆಳೆಯುತ್ತವೆ. ಮೀನು ಗೊಬ್ಬರದಿಂದ ಭತ್ತದ ಪೈರುಗಳೂ ಬಲಿಷ್ಟಗೊಂಡು, ತೆನೆತೆನೆಯಾಗಿ ತೂಗುತ್ತವೆ. ಕೆಲವೊಮ್ಮೆ ಭತ್ತಕ್ಕಿಂತಲೂ ಮೀನಿನಿಂದಲೇ ಲಾಭ ಹೆಚ್ಚಂತೆ! ತಮ್ಮ ಕೃಷಿ ಭೂಮಿಗೆ ರಾಸಾಯನಿಕ ವಸ್ತುಗಳನ್ನು ಇಲ್ಲಿಯವರು ಬಳಸುವುದಿಲ್ಲ. ಬಹುಶಃ ಸಾವಯವ ಕೃಷಿ ವಲಯ ಎಂದು ಘೋಷಿಸಿ, ಸೂಕ್ತ ವೇದಿಕೆ ಕೊಟ್ಟರೆ ಜಗತ್ತಿನ ಮಾರುಕಟ್ಟೆಯನ್ನೂ ಆಳಬಲ್ಲ ಸಾಮರ್ಥ್ಯ ಇಲ್ಲಿನ ಜನರಿಗಿದೆ. ಅಂದಹಾಗೆ ಈ ಜನರು ತಮ್ಮ ಭೂಮಿಯಲ್ಲಿ ಉಳಲು ಟ್ರ್ಯಾಕ್ಟರ್ ಬಿಡಿ, ಎತ್ತನ್ನೂ ಬಳಸುವುದಿಲ್ಲ! ಭೂಮಿಯು ತಾಯಿಯೆಂಬ ನಂಬಿಕೆ ಅಷ್ಟು ಗಾಢ. ಇವರದು ಫುಕವೋಕ ಮಾದರಿಯ ಕೃಷಿ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಇಲ್ಲಿನವರಿಗೆ ಆತನ ಕುರಿತಂತೆ ಅರಿವೇ ಇಲ್ಲ.

arunachalpradesh-220214-in3ನಮ್ಮ ಮಂತ್ರಿಗಳು, ಪುಢಾರಿಗಳು ಕೃಷಿ ಅಧ್ಯಯನಕ್ಕೆಂದು ಚೀನಾಕ್ಕೆ ಹೋಗುತ್ತಾರಲ್ಲ, ವಾಸ್ತವವಾಗಿ ಅವರನ್ನು ಇಲ್ಲಿಗೆ ಕರೆತಂದು, ಇಲ್ಲಿನ ಗದ್ದೆ ಬದುಗಳ ಮೇಲೆ ಬರಿಗಾಲಲ್ಲಿ ಓಡಾಡಿಸಬೇಕು. ಭೂಮಿಯನ್ನು ಪ್ರೀತಿಸುವ ಈ ಜನರ ಭಾವನೆಗಳನ್ನು ಅಪ್ಪಿಕೊಳ್ಳಲು ಹೇಳಬೇಕು. ಸಾಧ್ಯವಾದರೆ, ಇವರ ಬೆಳೆಗೆ ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಾರುಕಟ್ಟೆ ಕೊಡಿಸುವಲ್ಲಿ ಪ್ರಯತ್ನ ಹಾಕಬೇಕು.  ಇವರಿಂದ ಕಲಿಯುವುದೆಷ್ಟಿದೆಯೋ, ಇವರಿಗಾಗಿ ಮಾಡಬೇಕಾದುದೂ ಅಷ್ಟೇ ಇದೆ.
ಅಲ್ಲದೆ ಮತ್ತೇನು? ಪ್ರತ್ಯೇಕತೆಯ ಮಾತನಾಡುವವರು ಮುಸಲ್ಮಾನರೆಂಬ ಕಾರಣಕ್ಕೆ ನಾವು ಕಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟು ಕಾಪಾಡಿಕೊಳ್ಳುತ್ತೇವೆ. ಮಾಧ್ಯಮಗಳಲ್ಲಿ ಪ್ರಮುಖ ಸ್ಥಾನ ಕೊಟ್ಟು ಗೌರವಿಸುತ್ತೇವೆ. ರಕ್ತದ ಕಣಕಣದಲ್ಲೂ ಭಾರತೀಯತೆಯನ್ನು ಉಳಿಸಿಕೊಂಡಿರುವ ಅರುಣಾಚಲದಿಂದ ಆಚೆ ತಳಳುತ್ತೇವೆ. ಇದು ನ್ಯಾಯವಾ?
ನರೇಂದ್ರ ಮೋದಿ ಇದನ್ನು ಗಮನಿಸಿಯೇ ಇದ್ದಾರೆ. ಹೀಗಾಗಿಯೇ ಇಲ್ಲಿಯವರೇ ಆದ ಕಿರಣ್ ರಿಜಿಜುರನ್ನು ಗೃಹ ಖಾತೆಯ ರಾಜ್ಯ ಸಚಿವರನ್ನಾಗಿಸಿ ಗಡಿ ಅಭಿವೃದ್ಧಿಯ ಜವಾಬ್ದಾರಿ ವಹಿಸಿದ್ದಾರೆ. ಈ ಬಾರಿ ಇಲ್ಲಿಗೆ ಬಂದಾಗ ಅರುಣಾಚಲಿಗಳಿಗೆ ಶಕ್ತಿಮದ್ದು ಕೊಟ್ಟು, ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಬೆಸೆಯುವ ಹಲವು ಯೋಜನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಮೋದಿಯವರ ನೇತೃತ್ವದಿಂದ ಪ್ರಭಾವಿತರಾಗಿರುವ ಜನರಿಗೆ ಇದು ಮತ್ತೊಂದು ಹೊಸ ಕೊಡುಗೆಯೇ ಸರಿ!

Comments are closed.