ವಿಭಾಗಗಳು

ಸುದ್ದಿಪತ್ರ


 

ಇಲಿ ಹಿಡಿದು ಹುಲಿ ಹೊಡೆದೆವು ಅನ್ನುವವರ ನಡುವೆ…

ಮನಮೋಹನ ಸಿಂಗರು ಕೊಟ್ಟ ಔತಣ ಕೂಟ ನಾಲ್ಕು ವರ್ಷ ತುಂಬಿದ ಖುಷಿಗಲ್ಲ, ವಿನೋದ್ ರೈ ತೊಲಗಿದರಲ್ಲ ಎನ್ನುವುದಕ್ಕಾಗಿಯೇ ಇರಬೇಕು. ಏಕೆಂದರೆ ಈಗ ಆ ಸ್ಥಾನಕ್ಕೆ ಬರಲಿರುವವರು ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರುಗಳನ್ನು ಕೊಳ್ಳಲು ಎರಡೆರಡು ಬಾರಿ ಅನುಮತಿ ಕೊಟ್ಟ ಶಶಿಕಾಂತ್ ಶರ್ಮ.

ಶ್ರೀಶಾಂತ್ ಇಂದಿನ ದಿನಗಳ ಮಾಧ್ಯಮದ ಪ್ರಮುಖ ಸುದ್ದಿ. ಅವನು ಒಂದು ಓವರಿಗೆ ಹದಿಮೂರು ರನ್ ಕೊಟ್ಟಿದ್ದು, ತಾನು ಮುಂದೆ ಎಸೆಯುವ ಚೆಂಡುಗಳ ಮಾಹಿತಿ ನೀಡುತ್ತಿದ್ದುದು ಎಲ್ಲವೂ ಚರ್ಚೆಗೆ ಗ್ರಾಸವಾಯ್ತು. ಶ್ರೀಶಾಂತ್ ಕುಡಿಯುತ್ತಿದ್ದನಂತೆ; ಹೆಣ್ಣುಗಳ ಸಹವಾಸವೂ ಇತ್ತಂತೆ. ಒಂದೇ ದಿನ ಒಂದೂವರೆ ಲಕ್ಷ ರೂಪಾಯಿಗೆ ಬಟ್ಟೆ ಖರೀದಿಸಿದ್ದನಂತೆ…. ಓಹೋ! ರಂಗುರಂಗಿನ ರೂಪ ಪಡಕೊಂಡ ಸುದ್ದಿಗಳು. ದಿನ ಬೆಳಗಾದರೆ ಐಪಿಎಲ್‌ನ ಜಪ ಮಾಡುವವರಿಗೆ ಬೆನ್ನಿಗೆ ಚೂರಿ ಇರಿಸಿಕೊಂಡಷ್ಟು ಸಂಕಟ. ಆಟದ ಸ್ಪಿರಿಟ್ಟನ್ನೆ ಹಾಳುಮಾಡಿಬಿಟ್ಟನಲ್ಲ ಅಂತ ಬೊಬ್ಬೆಯಿಟ್ಟರು. ಭ್ರಷ್ಟಾಚಾರಿ, ಮೋಸಗಾರ ಅಂತೆಲ್ಲ ಜರಿದರು. ಪ್ರತಿಭಟನೆಗಳಾದವು; ಪ್ರತಿಕೃತಿ ದಹನಗಳಾದವು. ಹಾಗಂತ ಐಪಿಎಲ್ಲೂ ನಿಲ್ಲಲಿಲ್ಲ, ಬೆಟ್ಟಿಂಗ್‌ಗಳೂ ನಿಲ್ಲಲಿಲ್ಲ. ಆದರೆ ಈ ಗಲಾಟೆಯಲ್ಲಿ ಸಿಎಜಿಯ ವಿನೋದ್ ರೈ ನಿವೃತ್ತರಾದುದನ್ನು, ಚೀನಾದ ಅಧ್ಯಕ್ಷ ಬಂದು ಹೋಗಿದ್ದನ್ನು ದೇಶ ಗಮನಿಸಲೇ ಇಲ್ಲ. ಸುಬ್ರಮಣಿಯನ್ ಸ್ವಾಮಿ ಕಾಶ್ಮೀರದ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ’ಕಾಶ್ಮೀರ ನಮ್ಮದೇ, ಅರಿತು ಬಾಳಿದರೆ ಒಳ್ಳೆಯದು; ಎನ್‌ಡಿಎ ಅಧಿಕಾರಕ್ಕೆ ಬಂದರೆ ನಮ್ಮ ಕಾಶ್ಮೀರದ ನೀತಿಯೇ ಬದಲಾಗಲಿದೆ’ ಎಂದ ಖಡಕ್ಕು ವಾಣಿ ಎಲ್ಲಿಯೂ ಸುದ್ದಿಯಾಗಲೇ ಇಲ್ಲ.

ಶ್ರೀಶಾಂತ್

ಶ್ರೀಶಾಂತ್

ಕಳೆದ ಒಂಭತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ನಡೆಸಿದ ನೂರಾರು ಲಕ್ಷ ಕೋಟಿ ಭ್ರಷ್ಟಾಚಾರದ ಹಗರಣವೂ ಶ್ರೀಶಾಂತ್‌ನ ಬೆಟ್ಟಿಂಗ್ ಹಗರಣದಷ್ಟು ವ್ಯಾಪಕ ಪ್ರಚಾರ ಪಡೆಯಲಿಲ್ಲ. ಬೇರೆಲ್ಲ ಬಿಡಿ. ಈ ಒಂಭತ್ತು ವರ್ಷಗಳಲ್ಲಿ ನಮ್ಮ ತೆರಿಗೆ ಹಣದಲ್ಲಿ ಮನಮೋಹನ ಸಿಂಗರು ಔತಣ ಕೂಟಗಳನ್ನು ಕೊಟ್ಟರಲ್ಲ, ಇದಕ್ಕಾದ ಖರ್ಚೆಷ್ಟು ಗೊತ್ತೇನು? ಒಟ್ಟಾರೆ ಭಾಗವಹಿಸಿದ್ದು ೩೦೬೪ ಅತಿಥಿಗಳು. ಅವರ ಊಟಕ್ಕೆ ಅರವತ್ತು ಲಕ್ಷ, ಪೆಂಡಾಲಿಗೆ ೫೭ ಲಕ್ಷ, ಬೆಳಕಿನ ವ್ಯವಸ್ಥೆಗೆ ೧೫ ಲಕ್ಷ ಮತ್ತು ಹೂವಿನ ಅಲಂಕಾರಕ್ಕೆ ೭ ಲಕ್ಷ. ಹೆಚ್ಚೂಕಡಿಮೆ ಒಂದೂವರೆ ಕೋಟಿ ರೂಪಾಯಿಗಳು. ಸರ್ಕಾರವೇ ಕೊಟ್ಟಿರುವ ಅಂಕಿ ಅಂಶಗಳನ್ನು ಒಪ್ಪುವುದಾದರೆ, ಒಬ್ಬೊಬ್ಬ ಅತಿಥಿಗೆ ಹೆಚ್ಚೂಕಡಿಮೆ ನಾಲ್ಕುವರೆ ಸಾವಿರ ರೂಪಾಯಿಗಳನ್ನು ಊಟಕ್ಕೆಂದು ಖರ್ಚು ಮಾಡಿರುವ ಶ್ರೀಮಂತ ರಾಷ್ಟ್ರದವರು ನಾವು! ನಮ್ಮ ದೇಶದಲ್ಲಿ ಬಡವನೊಬ್ಬ ಬದುಕಲು ಮೂವತ್ತು ರೂಪಾಯಿ ಸಾಕೆಂದವರು ಇವರು. ಆದರೆ ಸರ್ಕಾರದ ಮಂತ್ರಿಗಳಿಗೆ ಒಂದು ಹೊತ್ತಿನ ಊಟಕ್ಕೇ ನಾಲ್ಕೂವರೆ ಸಾವಿರ ರೂಪಾಯಿ ಬೇಕಾಯಿತಲ್ಲ. ಎಷ್ಟು ಜನ ಬಡವರ ಊಟವನ್ನು ಒಬ್ಬೊಬ್ಬ ಕೇಂದ್ರಮಂತ್ರಿ ನುಂಗಿರಬಹುದು ಲೆಕ್ಕ ಹಾಕಿ! ಯಾಕೋ ದೇಶ ತಲೆ ಕೆಡಿಸಿಕೊಳ್ಳಲೇ ಇಲ್ಲ. ಆಟದ ಸ್ಪಿರಿಟ್ಟು ಹಾಳಾಯ್ತು, ನಮಗೆ ಮೋಸವಾಯ್ತೆಂದು ಭಾವಿಸಲೇ ಇಲ್ಲ. ಪಾಪ ಶ್ರೀಶಾಂತ..!
ಇಂತಹ ಹಲವಾರು ಹಗರಣಗಳನ್ನು ಬಯಲಿಗೆ ತಂದು ತಿಮಿಂಗಿಲಗಳನ್ನು ಗುರುತಿಸಿಕೊಟ್ಟ ಸಿಎಜಿಯ ವಿನೋದ್ ರೈ ಮೊನ್ನೆ ಗುರುವಾರ ನಿವೃತ್ತರಾಗಿದ್ದಾರೆ. ಸಿಬಿಐ, ಎಟಿಎಸ್‌ಗಳಂತಹ ಸಂಶ್ಥೆಗಳು ಕಾಂಗ್ರೆಸ್‌ಗೆ ಬಕೆಟ್ ಹಿಡಿದುಕೊಂಡು ಕಾಲ ತಳ್ಳುವ ದಿನಗಳಲ್ಲಿಯೇ ಮಂತ್ರಿಗಳು ಇಟ್ಟ ತಪ್ಪು ಹೆಜ್ಜೆಯ ಜಾಡನ್ನು ತೋರಿಸಿಕೊಟ್ಟು ದೇಶದ ಗಮನವನ್ನು ಸೆಳೆದ ಧೀರನೀತ. ೧೫೩ ವರ್ಷಗಳಷ್ಟು ಹಳೆಯದಾದ ಸಂಸ್ಥೆಯೊಂದರ ಕತ್ತಿಯ ಅಲಗುಗಳನ್ನು ಸಾಣೆ ಹಿಡಿದು ಲಕಲಕಿಸುವಂತೆ ಮಾಡಿದವ. ಎಲೆಕ್ಷೆನ್ ಕಮಿಷನ್‌ನ ನೇತೃತ್ವವನ್ನು ಟಿ.ಎನ್.ಶೇಷನ್ ವಹಿಸುವ ಮುನ್ನ ಹಾಗೊಂದು ಸಂಸ್ಥೆ ಇತ್ತೆಂಂದು ಗೊತ್ತೇ ಇರಲಿಲ್ಲವಲ್ಲ, ಹಾಗೆಯೇ ಸಿಎಜಿಯೂ ಕೂಡಾ. ಅದರ ಅಸ್ತಿತ್ವವನ್ನು ಸಮರ್ಥವಾಗಿ ಸಮಾಜದೆದುರು ಇಟ್ಟವರೇ ವಿನೋದ್ ರೈ. ಅವರು ಬರುವವರೆಗೂ ಸಾಹುಕಾರರ ಮನೆಯ ಲೆಕ್ಕ ಬರೆದಿಡುವ ಶಾನುಭೋಗರಂತಿದ್ದ ಸಿಎಜಿ ಸಂಸ್ಥೆ, ಇದ್ದಕ್ಕಿದ್ದಂತೆ ಮೈಕೊಡವಿಕೊಂಡು ನಿಂತಿತು. ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬೃಹತ್ ಮಾಫಿಯಾವನ್ನು ಬಯಲಿಗೆಳೆದು ಬಿಸಾಡಿತು.
ಇಷ್ಟಕ್ಕೂ ಸಿಎಜಿಯ ಕೆಲಸವೇ ಅದು.ಜನರ ಹಣದ ಕಟ್ಟುನಿಟ್ಟು ಲೆಕ್ಕಾಚಾರ. ಇದು ಪಬ್ಲಿಕ್ ಅಕೌಂಟ್ ಕಮಿಟಿ (ಪಿಎಸಿ)ಯ ಜೊತೆಗಾರ ಸಂಸ್ಥೆ. ಸಹಕಾರ ನಡೆಸಿದ ಹತ್ತಾರು ವ್ಯವಹಾರಗಳ ಆಡಿಟಿಂಗ್ ನಡೆಸಿ ಸಂಸತ್ತಿನ ಮುಂದೆ ಲೆಕ್ಕ ಇಡಬೇಕು. ಮೊದಲೆಲ್ಲ ಒಂದೊಂದು ವ್ಯವಹಾರಕ್ಕೆ ವರದಿ ಸಿದ್ಧಪಡಿಸಲು ಮೂರ್ನಾಲ್ಕು ವರ್ಷ ತೆಗೆದುಕೊಳ್ಳುತ್ತಿತ್ತು ಸಿಎಜಿ. ಅಷ್ಟರಲ್ಲಿ ಜನರ ಮನಸ್ಸಿನಿಂದ ಅದು ಮರೆಯಾಗಿ ಹೋಗಿರುತ್ತಿತ್ತು. ವಿನೋದ್ ರೈ ಅದರ ದಿಕ್ಕು ಬದಲಾಯಿಸಿದರು. ತುಕ್ಕು ಹಿಡಿದಿದ್ದ ಉದ್ಯೋಗಿಗಳನ್ನು ಚುರುಕುಗೊಳಿಸಿದರು. ಏಳೆಂಟು ತಿಂಗಳಲ್ಲಿಯೇ ವರದಿ ಹೊರಬರುವಂತೆ ಪ್ರಯಾಸ ಶುರು ಮಾಡಿಸಿದರು. ಅಷ್ಟೇ ಅಲ್ಲ, ಬೃಹತ್ ವರದಿಯನ್ನು ಹದಿನೆಂಟಿಪ್ಪತ್ತು ಪುಟಗಳಿಗೆ ಇಳಿಸಿ ಸಾರಾಂಶವನ್ನು ಮಾಧ್ಯಮದ ಮುಂದೆ ಬಿಚ್ಚಿಡುವ ಕೆಲಸ ಶುರು ಮಾಡಿದರು. ಸರ್ಕಾರ ಮಾಡಿದ ಘನಂದಾರಿ ಕೆಲಸಗಳು ಹರಾಜಿಗೆ ಬಂದವು. ೨ಜಿ ತರಂಗಗಳ ಹಂಚಿಕೆಯಲ್ಲಿ ದೇಶಕ್ಕಾದ ಅನ್ಯಾಯ ಒಂದು ಲಕ್ಷ ಎಪ್ಪತ್ತಾರು ಸಾವಿರ ಕೋಟಿ ಎಂಬ ಸುದ್ದಿ ಕೇಳಿ ದೇಶವೇ ಹೌಹಾರಿತು. ನ್ಯಾಯಾಂಗ ಚುರುಕಾಯ್ತು. ಮಂತ್ರಿ ಎ.ರಾಜಾ ಜೈಲಿನ ಅತಿಥಿಯಾದರು. ಇಚೆಲ್ಲದರ ಹಿಂದಿನ ಸೂತ್ರಧಾರ ಚಿದಂಬರಂ ತನ್ನ ಮುಖವುಳಿಸಿಕೊಳ್ಳಲು ಹೆಣಗಾಡಬೇಕಾಯ್ತು. ರಾಜಾ ಸಹಿತ ಆರೋಪಿತರೆಲ್ಲ ಗೌರವಯುತವಾಗಿ ಹೊರಬಂದರು. ಕರ್ನಾಟಕದ ವಾರ್ಷಿಕ ಬಜೆಟ್ಟಿನ ಸರಿಸುಮಾರು ದುಪ್ಪಟ್ಟು ಹಣ ಲೂಟಿಗೈದವರು ಇಂದಿಗೂ ನಮ್ಮನ್ನು ಆಳುತ್ತಿದ್ದಾರೆ. ಆದರೆ ಬೆಟ್ಟಿಂಗ್‌ನಲ್ಲಿ ಕೆಲವು ಲಕ್ಷ ದೋಚಿದ ಶ್ರೀಶಾಂತ್ ಮೋಸಗಾರ ಎನಿಸುತ್ತಿದ್ದಾನೆ. ಅವನ ಮೇಲೆ ಐಪಿಸಿ ೪೦೯ರ ಪ್ರಕಾರ ಕೇಸು ನಡೆಸಲಾಗುತ್ತಿದೆ. ಅದರರ್ಥ ಜೀವಾವಧಿ ಶಿಕ್ಷೆ ಕೊಡಿಸುವ ಪ್ರಯತ್ನ. ಪಾಪ ಶ್ರೀಶಾಂತ!

ವಿನೋದ್ ರೈ

ವಿನೋದ್ ರೈ

ವಿನೋದ್ ರೈ ಕೈಗೆ ಕಾಮನ್ ವೆಲ್ತ್ ಗೇಮ್ಸ್‌ನ ಕಡತ ಬಂತು. ಸುರೇಶ್ ಕಲ್ಮಾಡಿಯ ಕಥೆ ಮುಗಿಯಿತು. ಕಲ್ಲಿದ್ದಲಿನ ಬ್ಲಾಕ್ ಹಂಚಿಕೆಗಳ ಹಿನ್ನೆಲೆಯಲ್ಲಿ ಸಿಎಜಿ ಕೊಟ್ಟ ಲೆಕ್ಕಾಚಾರವೂ ಗಾಬರಿ ಹುಟ್ಟಿಸುವಂತಿತ್ತು. ಅದು ಟೂಜಿಯ ಹತ್ತು ಪಟ್ಟು ದೊಡ್ಡ ಹಗರಣ. ಅದರ ಮುಂದೆ ಕರ್ನಾಟಕದ ಗಣಿ ಹಗರಣಗಳು, ಡಿನೋಟಿಫಿಕೇಷನ್ ಹಗರಣಗಳೂ ನಾಚಿ, ತಲೆ ತಗ್ಗಿಸಿ ನಿಂತವು. ಸ್ವತಃ ಪ್ರಧಾನಿ ಮನಮೋಹನ ಸಿಂಗರು ಇದರಲ್ಲಿ ನೇರವಾಗಿ ಭಾಗವಹಿಸಿದ್ದರು. ಆ ವೇಳೆಗೆ ರಾಹುಲ್ ಗಾಂಧಿ ಶಕ್ತಿವಂತರಾಗಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಪಡೆದುಬಿಟ್ಟಿರುತ್ತಿದ್ದರೆ ಕಾಂಗ್ರೆಸ್ಸು ಪ್ರಧಾನಿಯನ್ನು ಜೈಲಿಗೆ ಕಳಿಸಿ ಗದ್ದುಗೆಯಲ್ಲಿ ರಾಹುಲ್‌ರನ್ನು ಕೂರಿಸಿಬಿಟ್ಟಿರುತ್ತಿತ್ತು. ಮನಮೋಹನರ ಅದೃಷ್ಟ ಚೆನ್ನಾಗಿದೆ, ಬಚಾವಾಗಿಬಿಟ್ಟಿದ್ದಾರೆ. ಇಡಿಯ ಪ್ರಕರಣವನ್ನು ಸಿಬಿಐಗೆ ವಹಿಸಿ, ಅದರಲ್ಲೂ ಅಶ್ವನಿ ಕುಮಾರ್ ಮೂಗು ತೂರಿಸಿ ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡರು. ಇವರ‍್ಯಾರೂ ಜೈಲಿಗೆ ಹೋಗಲಿಲ್ಲ. ತಪ್ಪೊಪ್ಪಿಕೊಂಡ ಶ್ರೀಶಾಂತ್ ಮಾತ್ರ ಕೆಲವಾರು ಲಕ್ಷ ರೂಪಾಯಿಗಳಿಗಾಗಿ ಜೈಲಿಗೆ ಹೋದ, ಜನರ ಮುಂದೆ ಬೆತ್ತಲಾದ. ಪಾಪ ಶ್ರೀಶಾಂತ!
ಇವೆಲ್ಲ ವಿನೋದ್ ರೈರದ್ದೆ ಸಾಧನೆ. ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಅವರ ಇರುವಿಕೆ ಸಾಬೀತಾಯ್ತು. ತಮ್ಮ ಕಛೇರಿಯಲ್ಲಿಯೇ ಮಾಧ್ಯಮ ಅಧಿಕಾರಿಯೊಬ್ಬರನ್ನು ನಿಯುಕ್ತಿಗೊಳಿಸಿ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಹಾಗಂತ ಅದು ಹೊಸ ಬೆಳವಣಿಗೆಯೇನಾಗಿರಲಿಲ್ಲ. ಬೋಫೋರ್ಸ್ ಭಯಾನಕ ಹಗರಣದ ನಂತರ ೧೯೮೮ರಲ್ಲಿ ಸಿಎಜಿಯ ಅಂದಿನ ಮುಖ್ಯಸ್ಥ ಟಿ.ಎನ್.ಚತುರ್ವೇದಿಯೂ ಸರ್ಕಾರದೊಂದಿಗೆ ಸಮಾಲೋಚಿಸಿ, ಜನ ಊಹೆಗಳಲ್ಲಿ ತೊಡಗಿ ತಪ್ಪುತಪ್ಪು ಅಂಕಿ ಅಂಶಗಳನ್ನು ನಂಬುವುದಕ್ಕಿಂತ ಸಿಎಜಿಯೇ ಮಾಧ್ಯಮಗಳ ಮುಂದೆ ಅಂಕಿ ಅಂಶ ಬಿಡುಗಡೆ ಮಾಡುವುದು ಒಳಿತೆಂದಿದ್ದರು. ಅದೇ ಕಾನೂನಾಯ್ತು. ಅದನ್ನು ಯಾರೂ ಪಾಲಿಸುತ್ತಿರಲಿಲ್ಲ ಅಷ್ಟೇ. ವಿನೋದ್ ರೈ ಒಂದು ಶ್ರೇಷ್ಠ ದಾರಿ ಹಾಕಿಕೊಟ್ಟರು. ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್, ಮನೀಷ್ ತಿವಾರಿಗಳನ್ನು ಬಿಡಿ; ಸ್ವತಃ ಮನಮೋಹನ ಸಿಂಗರೇ ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ವಿನೋದ್ ರೈ ಜಗ್ಗಲಿಲ್ಲ. ೨೦೦೮ರಲ್ಲಿ ಬದಲಾದ ಮೀಡಿಯಾ ಪಾಲಿಸಿಯನ್ನು ಪ್ರಧಾನಿಯ ಕೈಗಿಟ್ಟು ಕಾನೂನಿನಿಂದ ಹೆಜ್ಜೆ ಹೊರಗಿಲ್ಲವೆಂಬುದನ್ನು ಎಗ್ಗಿಲ್ಲದೆ ಹೇಳಿದರು.
ಕಪಿಲ್ ಸಿಬಲ್‌ರಂತೂ ಮಾಡದ ಆರೋಪವೇ ಇಲ್ಲ. ವಿನೋದ್ ರೈ ಅವರನ್ನು ವಿರೋಧ ಪಕ್ಷದ ಚೇಲಾ ಅಂದುಬಿಟ್ಟರು. ನಿವೃತ್ತಿಯ ಅನಂತರ ಬಿಜೆಪಿ ಸೇರುತ್ತಾರೆ ನೋಡುತ್ತಿರಿ ಎಂದರು. ಕೊನೆಗೆ ಪ್ರಚಾರಪ್ರಿಯ ಎಂತಲೂ ಹೀಯಾಳಿಸಿದರು. ವಿನೋದ್ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ತಾನೆದುರಿಟ್ಟ ಲೆಕ್ಕಾಚಾರಗಳಲ್ಲಿ ತಪ್ಪುಗಳಿದ್ದರೆ ಮುಂದೆ ಬನ್ನಿ ಎಂದಷ್ಟೆ ಹೇಳಿ ಸುಮ್ಮನಾದರು. ಅವರು ಕೊಟ್ಟ ವರದಿಗಳೇ ಅಣ್ಣಾ ಹಜಾರೆಗೆ, ರಾಮದೇವ್ ಬಾಬಾರಿಗೆ ಅಸ್ತ್ರವಾಗಿದ್ದು. ಕಾಂಗ್ರೆಸ್‌ಗೆ ಕಂಟಕವಾಗಿದ್ದು. ಇಂತಹ ಧೀರ ಅಧಿಕಾರಿಯೊಬ್ಬ ಕೇಂದ್ರಸರ್ಕಾರದ ಆಡಳಿತಕ್ಕೆ ನಾಲ್ಕು ವರ್ಷ ತುಂಬಿದ ದಿನವೇ ನಿವೃತ್ತಿ ಹೊಂದಿರುವುದು ಕಾಕತಾಳೀಯವಷ್ಟೆ. ಹಾಗೆ ನೋಡಿದರೆ ಮನಮೋಹನ ಸಿಂಗರು ಕೊಟ್ಟ ಔತಣ ಕೂಟ ನಾಲ್ಕು ವರ್ಷ ತುಂಬಿದ ಖುಷಿಗಲ್ಲ, ವಿನೋದ್ ರೈ ತೊಲಗಿದರಲ್ಲ ಎನ್ನುವುದಕ್ಕಾಗಿಯೇ ಇರಬೇಕು. ಏಕೆಂದರೆ ಈಗ ಆ ಸ್ಥಾನಕ್ಕೆ ಬರಲಿರುವವರು ಆಗಸ್ಟಾ ನೆಸ್ಟ್‌ಲ್ಯಾಂಡ್ ಹೆಲಿಕಾಪ್ಟರುಗಳನ್ನು ಕೊಳ್ಳಲು ಎರಡೆರಡು ಬಾರಿ ಅನುಮತಿ ಕೊಟ್ಟ ಶಶಿಕಾಂತ್ ಶರ್ಮ. ಕಳಂಕ ಹೊತ್ತೇ ಬರುತ್ತಿರುವವ ಆತ. ಕಾಂಗ್ರೆಸ್ಸಿನ ಪರಮ ಮಿತ್ರ. ಇನ್ನೇನು ಬೇಕು ಹೇಳಿ, ಔತಣ ಕೂಟ ನೀಡಲು!
ಕಾಂಗ್ರೆಸ್ಸಿನ ನಡೆಗಳೇ ಹಾಗೆ. ಇತರರು ಪ್ರಾಮಾಣಿಕರಾಗಿದ್ದರೆ ತನ್ನ ಭ್ರಷ್ಟತನ ಪ್ರಶ್ನಿಸುತ್ತಾರೆ. ಅವರನ್ನೇ ಭ್ರಷ್ಟರನ್ನಾಗಿಸಿಬಿಟ್ಟರೆ ಸಮಸ್ಯೆಯೇ ಕಳೆದು ಹೋಯ್ತಲ್ಲ! ಹಾಗಂತಲೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದದ್ದು. ಯೋಜನೆಯ ಕಲ್ಪನೆ ಚೆನ್ನಾಗಿಯೇ ಇದೆ. ಆದರೆ ಆಚರಣೆಯಲ್ಲಿ ಅದರಷ್ಟು ಭ್ರಷ್ಟ ಯೋಜನೆ ಮತ್ತೊಂದಿಲ್ಲ. ಇದರಲ್ಲಿ ಸರ್ಕಾರಗಳು, ಅಧಿಕಾರಿಗಳಿರಲಿ; ಸ್ವತಃ ಹಳ್ಳಿಯ ಜನರೂ ಭ್ರಷ್ಟರಾಗಿಬಿಟ್ಟರು. ಇನ್ನು ಭ್ರಷ್ಟರನ್ನು ಪ್ರಶ್ನಿಸುವ ನೈತಿಕತೆ ಅವರಿಗೆಲ್ಲಿ? ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಟ್ಟ ಮೇಲೆ ಕೆಲಸ ಮಾಡುವ ಅಗತ್ಯ ಯಾರಿಗೂ ಇಲ್ಲ. ಬೇಡಿಕೊಂಡು ತಿಂದರಾಯ್ತು. ಬೇಡುವವನಿಗೆ ಕೊಡುವ ಧಣಿ ಬೇಕು. ಮತ್ತೆ ಅದೇ ಧೂರ್ತರ ಪದತಲದಲ್ಲಿ ಆತ. ಇವೆಲ್ಲವುಗಳ ಕುರಿತು ನಮ್ಮ ಕಣ್ತೆರೆಸಿದ್ದು ಸಿಎಜಿ.
ಶ್ರೀಶಾಂತನ ಗಲಾಟೆಯಲ್ಲಿ ವಿನೋದ್ ರೈಗೊಂದು ಗೌರವಯುತ ಬೀಳ್ಕೊಡುಗೆ ನೀಡುವುದು ನಮ್ಮಿಂದಾಗಲಿಲ್ಲ. ಈ ದೇಶಕ್ಕೆ ಲಕ್ಷಾಂತರ ಕೋಟಿಗಳು ಲುಕ್ಸಾನಾಗಿದ್ದನ್ನು ಹುಡುಕಿಕೊಟ್ಟು ಮುಂದೆ ಹಾಗಾಗದಂತೆ ತಡೆಗಟ್ಟಿದವನು ಆತ. ಅವರಿಗೊಂದು ಪ್ರೀತಿಯ ಗುಡ್‌ಬೈ ಹೇಳೋಣ.
ಅಂದ ಹಾಗೆ ದೇವರಾಣೆಗೂ ನಾನು ಶ್ರೀಶಾಂತನ ಸಮರ್ಥಕನಲ್ಲ. ಆದರೆ ತಿಮಿಂಗಿಲಗಳನ್ನು ಬಿಟ್ಟು ಮರಿಮೀನುಗಳ ಹಿಂದೆ ಬಿದ್ದಿದೆಯಲ್ಲ ವ್ಯವಸ್ಥೆ, ಹೇಸಿಗೆಯಾಗುತ್ತಿದೆ ಅಷ್ಟೇ.

Comments are closed.