ವಿಭಾಗಗಳು

ಸುದ್ದಿಪತ್ರ


 

ಉದಯ ಸೂರ್ಯನ ನಾಡಲ್ಲಿ ಭಾರತೀಯತೆಯ ಹೊಂಬೆಳಕು

ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ

– ಚಕ್ರವರ್ತಿ ಸೂಲಿಬೆಲೆ

‘ಸರ್, ನನಗೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಬಿಹಾರಗಳೆಲ್ಲಗೊತ್ತು. ಆದರೆ ನಿಮ್ಮ ಜನರಿಗೆ ಅರುಣಾಚಲವೇ ಗೊತ್ತಿಲ್ವಲ್ಲ, ನಾವು ಅಲ್ಲಿಗೆ ಹೋದರೆ ನಮ್ಮನ್ನು ಗುರುತಿಸೋದೇ ಇಲ್ವಲ್ಲ, ಹೀಗೇಕೆ?’ ಇಟಾನಗರದ ವಿವೇಕಾನಂದ ಕೇಂದ್ರ ಶಾಲೆಯ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬ ಕೇಳಿದ ಪ್ರಶ್ನೆ ಇದು. ನಾನು ಒಂದಷ್ಟು ಹೊತ್ತು ತಡಬಡಾಯಿಸಿದೆ. ಅಷ್ಟರಲ್ಲಿ ಹುಡುಗಿಯೊಬ್ಬಳು ಎದ್ದು ನಿಂತು, ‘ನಿಮ್ಮ ಬೆಂಗಳೂರಿನಲ್ಲಿಯೇ ನಮ್ಮನ್ನು ನೋಡಿ ಜನ ಚೈನೀಸ್ ಅಂತಾರೆ. ಯಾಕೆಂದು ಕೇಳಿದರೆ ನೋಡಲಿಕ್ಕೆ ಹಾಗೇ ಇದ್ದೀರಲ್ಲ ಅಂದುಬಿಡ್ತಾರೆ. ನೀವು ನೋಡಲಿಕ್ಕೆ ಥೇಟು ಪಾಕಿಸ್ತಾನದವರ ಥರ ಕಾಣ್ತೀರಲ್ಲ ಅಂದರೆ ಕೋಪಿಸ್ಕೋತಾರೆ. ನಿಜ ಹೇಳಿ ಸರ್, ಅರುಣಾಚಲ ನಿಮಗೆ ಬೇಡವಾ? ನಾವೆಲ್ಲ ಚೀನಾಕ್ಕೆ ಸೇರಿ ಹೋದರೆ ನಿಮಗೆ ಖುಷೀನಾ?’ ಅಂತ ತನ್ನ ಪುಟ್ಟ ಕಂಗಳಿಂದ ನನ್ನನ್ನೇ ನೋಡಿದಳು. ನಾನೇ ಸ್ವಲ್ಪ ಕಣ್ತಪ್ಪಿಸುವ ಯತ್ನ ಮಾಡಿದೆ.
ನನ್ನ ಯೋಚನೆಗಳೆಲ್ಲ ಬುಡಮೇಲಾಗಿದ್ದವು. ಅರುಣಾಚಲದ ಜನ ಚೈನಾಕ್ಕೆ ಓಡಿಹೋಗಲು ತುದಿಗಾಲಲ್ಲಿ ನಿಂತಿದ್ದಾರೆ, ಬಿಟ್ಟರೆ ಸಾಕೆಂದು ಕಾಯುತ್ತಿದ್ದಾರೆ, ಪ್ರತಿನಿತ್ಯ ಟೀವಿಯಲ್ಲಿ ಚೈನಾದ ಚಾನೆಲ್ಲುಗಳನ್ನು ನೋಡಿ ಆನಂದಿಸುತ್ತಾರೆ ಎಂದುಕೊಂಡಿದ್ದ ನನಗೆ ಆಘಾತ ಕಾದಿತ್ತು. ನಾನು ದಕ್ಷಿಣ ಅರುಣಾಚಲದ ಅನೇಕ ಜಿಲ್ಲೆಗಳನ್ನು, ಹಳ್ಳಿಗಳನ್ನು, ಕೊನೆಗೆ ಮನೆಗಳನ್ನೂ ಹೊಕ್ಕಿ ಬಂದೆ. ನನ್ನೊಡನೆ ಮಾತನಾಡಿದ ಪ್ರತಿಯೊಬ್ಬರೂ ನನ್ನಷ್ಟೇ, ಸರಿಯಾಗಿ ಹೇಳಬೇಕೆಂದರೆ ನನಗಿಂತ ಒಂದು ಗುಲಗಂಜಿ ಹೆಚ್ಚೇ ಭಾರತೀಯರಾಗಿ ಕಂಡರು!
ಅರುಣಾಚಲ ಚೀನಾದೊಂದಿಗೆ ಬದುಕಲಾರದೆಂಬ ತಥ್ಯ ಕಳೆದ ಒಂದೂವರೆ ದಶಕದಿಂದೀಚೆಗೆ ಪ್ರತಿಯೊಬ್ಬ ಅರುಣಾಚಲೀಯನಿಗೂ ದೃಢವಾಗುತ್ತ ಬಂದಿದೆ. ಆತನೀಗ ತನ್ನ ಮೂಲವನ್ನು ಭಾರತದೊಳಗೆ ಅರಸುವ ಪ್ರಯತ್ನ ಹೆಚ್ಚಿಸುತ್ತಿದ್ದಾನೆ. ಅದಕ್ಕೆ ಸೂಕ್ತ ಪುರಾವೆಗಳು ದಕ್ಕಿದಾಗಲೆಲ್ಲ ಸಂತೋಷಿಸುತ್ತಾನೆ. ಚೈನಾದ ವಿರುದ್ಧ ತನ್ನ ಭಾವನೆಗಳನ್ನು ತೀವ್ರಗೊಳಿಸಿಕೊಳ್ಳುತ್ತಾನೆ.
ಹಾಗೆ ನೋಡಿದರೆ ಅರುಣಾಚಲವೆನ್ನುವ ಹೆಸರೇ ಅದನ್ನು ಭಾರತದೊಂದಿಗೆ ಬೆಸೆಯುವಂತಹ ಮೊದಲ ಅಂಶ. ಅದು ಉದಯ ಸೂರ್ಯನ ನಾಡು. ಬೆಳಿಗ್ಗೆ ನಾಲ್ಕಕ್ಕೆಲ್ಲ ಅಲ್ಲಿ ಸೂರ್ಯನ ಬೆಳಕು ಹರಡಿಕೊಂಡುಬಿಡುತ್ತೆ. ಸಂಜೆ ಐದಕ್ಕೆ ಮುನ್ನ ಕತ್ತಲೂ ಆವರಿಸಿಕೊಂಡುಬಿಡುತ್ತದೆ. ಅರುಣೋದಯ ಮೊದಲು ಇಲ್ಲಿಯೇ ಆಗುವುದರಿಂದ ಇದು ಅರುಣಾಚಲ. ರಾಮಾಯಣ, ಮಹಾಭಾರತದ ಕಾಲದಲ್ಲೂ ಅರುಣಾಚಲದ ಉಲ್ಲೇಖವನ್ನು ಪಂಡಿತರು ಗುರುತಿಸಿದ್ದಾರೆ. ಕೃಷ್ಣನ ಸತಿ ರುಕ್ಮಿಣಿ ಅರುಣಾಚಲದವಳೇ ಎನ್ನುವುದಕ್ಕೆ ಪುರಾವೆಗಳಿವೆ. ಪರಶುರಾಮನ ಮೂಲಸ್ಥಾನವೂ ಇದೇ ಎನ್ನಲಾಗುತ್ತದೆ. ಇಲ್ಲಿನ ಬುಡಕಟ್ಟು ಜನಾಂಗದವರು ಕೈಲಿ ಹಿಡಿಯುವ ‘ದಾವು’ ಮತ್ತು ಪರಶುರಾಮನ ಕೈಯ ‘ಕೊಡಲಿ’ ಎರಡನ್ನೂ ಸಮೀಕರಿಸಿ ನೋಡಿದಾಗ ಇದು ನಿಜವಿರಬಹುದು ಎನ್ನಿಸುತ್ತದೆ. ಅಷ್ಟೇ ಅಲ್ಲ, ಇಡಿಯ ಅರುಣಾಚಲದಲ್ಲಿ ವ್ಯಾಪಿಸಿಕೊಂಡಿರುವ ೨೬ ಥರದ ಬುಡಕಟ್ಟುಗಳ ಆಚರಣೆ, ಬದುಕಿನ ರೀತಿ ನೀತಿಗಳು ವೇದಕಾಲದ ಜೀವನ ಪದ್ಧತಿಗೆ ಅತ್ಯಂತ ಹತ್ತಿರದ್ದೆಂಬುದನ್ನು ನೋಡಿದಾಗಲಂತೂ ಅರುಣಾಚಲದ ಬುಡ ಭಾರತದೊಳಕ್ಕೆ ಎಷ್ಟು ಭದ್ರವಾಗಿದೆಯೆಂಬುದರಲ್ಲಿ ಎಳ್ಳಷ್ಟೂ ಅನುಮಾನವಿರದು.
ಇಷ್ಟಕ್ಕೂ ಅರುಣಾಚಲ ಕರ್ನಾಟಕದ ಅರ್ಧಭಾಗದಷ್ಟು ಭೂಪ್ರದೇಶ ಹೊಂದಿದ್ದು, ಜನಸಂಖ್ಯೆಯಲ್ಲಿ ನಮ್ಮ ಒಟ್ಟು ಜನಸಂಖ್ಯೆಯ ಮೂರು ಪ್ರತಿಶಥದಷ್ಟು ಮಾತ್ರ ಇದೆ. ಅಂದಾಜು ಕಿಲೋಮೀಟರಿಗೆ ಹದಿನೈದು ಜನ! ನೈಸರ್ಗಿಕವಾಗಿ ಅತ್ಯಂತ ಸಿರಿವಂತ ಭೂಮಿ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವಷ್ಟರಲ್ಲಿ ಅದೆಷ್ಟು ನದಿಗಳು ನಿಮ್ಮನ್ನು ಅಡ್ಡಗಟ್ಟುತ್ತವೆಯೋ ಲೆಕ್ಕವಿಟ್ಟು ಸುಸ್ತಾಗುತ್ತೀರಿ. ಹೀಗಾಗಿ ಇಲ್ಲಿನ ಬಹುತೇಕ ಜಿಲ್ಲೆಗಳು ನದಿಗಳ ಹೆಸರಿಂದಲೇ ಗುರುತಿಸಲ್ಪಡುತ್ತವೆ. ಇಲ್ಲಿನ ಪ್ರತಿ ಜಿಲ್ಲೆಯೂ ಒಂದೊಂದು ಬುಡಕಟ್ಟಿನವರಿಂದ ತುಂಬಿಹೋಗಿದೆ. ಅವರ ವೇಷ ಭೂಷಣ, ಆಚಾರ ವಿಚಾರಗಳೆಲ್ಲವೂ ವಿಶಿಷ್ಟವಾದವು. ಪ್ರತಿಯೊಂದು ಪಂಗಡದವರ ಭಾಷೆ ಕೂಡ ಭಿನ್ನವೇ. ಆದರೂ ವಿಚಿತ್ರವೆನಿಸುವಂತೆ ಇಲ್ಲಿನ ಮೂಲೆಮೂಲೆಯಲ್ಲೂ ಜನ ಹಿಂದಿ ಮಾತನಾಡುತ್ತಾರೆ. ಚಿಕ್ಕ ಮಗುವಿರಲಿ, ವಯಸ್ಸಾದ ಮುದುಕರಿರಲಿ ಹಿಂದಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಹೀಗಾಗಿ ಅರುಣಾಚಲದುದ್ದಕ್ಕೂ ತಿರುಗಾಡುವಾಗ ನಿಮಗೆ ಭಾಷೆಯ ಸಮಸ್ಯೆ ಎದುರಾಗದು. ಅಷ್ಟೇ ಅಲ್ಲ, ಇಡಿಯ ರಾಜ್ಯವನ್ನು ರಾಷ್ಟ್ರದೊಂದಿಗೆ ಬೆಸೆಯುವಲ್ಲಿ ಅದರ ಪಾತ್ರ ಹೇಳತೀರದು.
ಈಶಾನ್ಯದ ಏಳು ರಾಜ್ಯಗಳಲ್ಲಿ ಅರುಣಾಚಲದಷ್ಟು ಭಾರತದೊಂದಿಗೆ ಏಕಾತ್ಮಗೊಂಡ ಮತ್ತೊಂದು ರಾಜ್ಯವಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಅಸ್ಸಾಮ್ ಎಲ್ಲ ಬಗೆಯ ಸವಲತ್ತು ಪಡೆದುಕೊಂಡೂ ಭಿನ್ನಭಿನ್ನ ರಾಗ ಹಾಡುತ್ತಿರುತ್ತದೆ. ಅರುಣಾಚಲ ಹಾಗಲ್ಲ. ಈ ಅಸ್ಮಿತೆಯನ್ನು ಹಾಳುಗೈಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಈಸ್ಟ್ ಇಂಡಿಯಾ ಕಂಪೆನಿ ಭಾರತವನ್ನು ಆಳುವಾಗಲೇ ಏಳು ರಾಜ್ಯಗಳನ್ನು ಕ್ರಿಸ್ತನಿಗೆ ಉಡುಗೊರೆಯಾಗಿ ಕೊಡಬೇಕೆಂದು ಅವರು ನಿರ್ಧರಿಸಿಯಾಗಿತ್ತು. ಹೀಗಾಗಿ ಭಾರತದ ಇತರ ರಾಜ್ಯಗಳಿಂದ ಈಶಾನ್ಯ ರಾಜ್ಯಗ್ಳನ್ನು ಬೇರ್ಪಡಿಸಿಯೇ ಇಟ್ಟಿದ್ದರು. ಸ್ವಾತಂತ್ರ್ಯ ಬಂದ ಮೇಲೂ ನಮ್ಮ ಸರ್ಕಾರಗಳು, ಸಂಘಟನೆಗಳು ಅತ್ತ ಗಮನ ಕೊಡಲಿಲ್ಲ. ದೇವರ ಲೀಲೆಯೇ ಇರಬೇಕು, ೧೯೬೨ರಲ್ಲಿ ಚೀನಾ ಆಕ್ರಮಣವೆಸಗಿತು. ‘ಹಿಂದೀ ಚೀನೀ ಭಾಯಿ ಭಾಯಿ’ ಎಂದು ಜಪಿಸುತ್ತಲೇ ಇದ್ದ ನೆಹರೂ ಬೆಚ್ಚಿಬಿದ್ದರು. ತಯಾರಿ ಮಾಡಿಕೊಳ್ಳುವ ಮೊದಲೇ ದಾಳಿಗೆ ಸಜ್ಜಾಗಿದ್ದೇವೆಂದು ಘೋಷಿಸಿಬಿಟ್ಟರು. ಚೀನಾದ ಕೆಂಪು ಸೇನೆ ಭಾರತದೊಳಕ್ಕೆ ನುಗ್ಗಿತು. ಕೆಲವೇ ದಿನಗಳಲ್ಲಿ ನಮ್ಮ ಸೇನೆಯ ಪ್ರತಿರೋಧವನ್ನು ಮಣಿಸಿ ಗೆಲುವು ಸಾಸಿಬಿಟ್ಟಿತು. ಅರುಣಾಚಲದ ಉತ್ತರ ಭಾಗವನ್ನು ವಶಪಡಿಸಿಕೊಂಡುಬಿಟ್ಟಿತು. ಹಿಂದಿನ ಎಲ್ಲ ಒಪ್ಪಂದಗಳನ್ನೂ ಕ್ಕರಿಸಿ ಮುನ್ನಡೆದೇ ಬಿಟ್ಟಿತು. ಮಾವೋತ್ಸೆ ತುಂಗ ಪೂರ್ಣ ಭಾರತವನ್ನು ವಶಪಡಿಸಿಕೊಂಡು ಅರ್ಧದಷ್ಟು ಜನರನ್ನು ನಾಶಗೈದು, ಉಳಿದವರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವ ಕನಸು ಕಾಣತೊಡಗಿದ. ರಷ್ಯಾ ಭಾರತದ ಸಹಾಯಕ್ಕೆ ಬರಲು ನಿರಾಕರಿಸಿತು. ‘ನೀವು ನಮಗೆ ಮಿತ್ರರಿರಬಹುದು. ಚೀನಾ ನಮಗೆ ಸಹೋದರನಂತೆ’ ಎಂದುಬಿಟ್ಟಿತು. ನೆಹರೂ ಒಲ್ಲದ ಮನಸ್ಸಿನಿಂದಲೇ ಅಮೆರಿಕಾದ ಎದುರು ನಿಂತರು. ಅಮೆರಿಕಾ ಅಧ್ಯಕ್ಷರ ಗುಡುಗಿನಂಥ ಮಾತು, ಮಿಂಚಿನಂತಹ ಕಾರ್ಯಾಚರಣೆ ಚೀನಾಕ್ಕೆ ಗಾಬರಿ ಹುಟ್ಟಿಸಿತು. ಚೀನಾ ಮುಂದೆ ಬರುವುದನ್ನು ತಡೆದು, ಈವರೆಗೆ ಪಡಕೊಂಡಿದ್ದ ಪ್ರದೇಶಗಳನ್ನು ಪಟ್ಟಾಗಿ ಹಿಡಕೊಂಡಿತು. ನಮ್ಮ ನಾಯಕರಿಗೆ ಇಷ್ಟಾದರೂ ಸಾಕಿತ್ತು. ಗೆದ್ದೆವೆಂದು ಬೀಗುತ್ತ ತಮ್ಮವರ ಮುಂದೆ ನಡೆದರು. ಆದರೆ ಅರುಣಾಚಲದ ಜನರ ಆತ್ಮಸ್ಥೈರ್ಯ ಕುಸಿದುಹೋಗಿತ್ತು. ಭಾರತದ ಸೈನಿಕರು ಕಠಿಣ ಸಮಯದಲ್ಲಿ ಕೈಕೊಟ್ಟು ಓಡಿಹೋಗುತ್ತಾರೆಂಬ ಚಿತ್ರಣ ಅವರ ಮನಸ್ಸಿನಲ್ಲಿ ನಿಂತುಬಿಟ್ಟಿತು. ಅಲಾಂಗ್ ಜಿಲ್ಲೆಯಲ್ಲಿ ಮುದುಕಿಯೊಬ್ಬಳು ಹೇಳಿದ್ದು ಈಗಲೂ ಗುಂಯ್‌ಗುಡುತ್ತಿದೆ, ‘ನಮ್ಮ ಸೈನಿಕರು ನಮ್ಮನ್ನು ಸಂಕಷ್ಟದಲ್ಲಿ ತಳ್ಳಿ ಓಡಿಬಿಟ್ಟರು.ಆ ಸೈನಿಕರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು’
ಇತ್ತ ಭಾರತೀಯರ ಆತ್ಮಸ್ಥೈರ್ಯವೂ ಉಡುಗಿಹೋಗಿತ್ತು. ಮುಂದೇನು ಎಂಬ ಚಿಂತೆ ಕಾಡುತ್ತಿದ್ದಾಗ, ಗಾಂಧೀಜಿಯ ಅನುಯಾಯಿಗಳೊಂದಷ್ಟು ಜನ ಅರುಣಾಚಲದತ್ತ ನಡೆದರು. ಭಾರತದ ಇತರೆ ಜನಗಳು ಅರುಣಾಚಲಕ್ಕೆ ಬರುತ್ತಾರೆಂಬ ಭರವಸೆಯನ್ನು ಅಲ್ಲಿಯ ಜನರಲ್ಲಿ   ಮೂಡಿಸುವ ಪುಟ್ಟ ಪ್ರಯತ್ನವದು. ಅದೇ ವೇಳೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಶುರುವಾದವು. ವನವಾಸಿ ಕಲ್ಯಾಣ ಆಶ್ರಮ, ಅರುಣಾಚಲ ವಿಕಾಸ ಪರಿಷತ್ತಿನ ಹೆಸರಿನಲ್ಲಿ ನೆಲೆನಿಲ್ಲುವ ಯತ್ನ ಮಾಡಿತು. ಇಷ್ಟು ಹೊತ್ತಿಗಾಗಲೇ ಪಕ್ಕದ ನಾಗಾಲ್ಯಾಂಡು ಕ್ರಿಸ್ತನ ನಾಡಾಗಿ ಪರಿವರ್ತನೆ ಹೊಂದಿತತು. ಮತಾಂತರ ಹೊಂದಿ, ರಾಷ್ಟ್ರವಿರೋ ಕೃತ್ಯಗಳಿಗೆ ಪ್ರೇರಣೆ ಪಡೆದವರ ಉಪಟಳ ಮಿತಿ ಮೀರಿತ್ತು.ಇಡಿಯ ನಾಗಾಲ್ಯಾಂಡ್ ಭೀತಿಯ ರಾಜ್ಯವಾಯ್ತು. ಬೆಚ್ಚಿಬಿದ್ದ ಅರುಣಾಚಲ ಸರ್ಕಾರ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವನ್ನು, ರಾಮಕೃಷ್ಣ ಆಶ್ರಮವನ್ನು ರಾಜ್ಯಕ್ಕೆ ಬರುವಂತೆ ಕೇಳಿಕೊಂಡಿತು.
ಬದಲಾವಣೆಯ ಗಾಳಿ ಬೀಸತೊಡಗಿತು. ಎಲ್ಲ ತೊಂದರೆಗಳ ನಡುವೆ ಶುರುವಾದ ಆಶ್ರಮ ಮತ್ತು ಕೇಂದ್ರದ ಶಾಲೆಗಳು ಕಳೆದ ೩೫ ವರ್ಷಗಳಲ್ಲಿ ಹೊಸದೊಂದು ಶಿಕ್ಷಿತ, ದೇಶಭಕ್ತ ಪೀಳಿಗೆಯನ್ನು ಹುಟ್ಟುಹಾಕಿವೆ. ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ. ಮತ್ತೊಂದೆಡೆ, ಆದರೆ ಅರುಣಾಚಲವನ್ನು ಆದಷ್ಟು ಬೇಗ ಮತಾಂತರಿಸುವ ತರಾತುರಿಗೆ ಬಿದ್ದ ವ್ಯಾಟಿಕನ್ ತನ್ನ ಅಷ್ಟೂ ದೃಷ್ಟಿಯನ್ನು ಅದರತ್ತ ಕೇಂದ್ರೀಕರಿಸಿದೆ. ‘ನಿಮಗೆ ಪೂಜಿಸಲೊಂದು ದೇವರ ಮೂರ್ತಿಯಿಲ್ಲ, ಒಂದು ಪ್ರಾರ್ಥನಾ ಮಂದಿರವಿಲ್ಲ’ ಎಂದು ಪದೇ ಪದೇ ಹೇಳುತ್ತ ಸಮುದಾಯಗಳ ಮುಖಂಡರನ್ನು ಚರ್ಚಿನತ್ತ ಸೆಳೆದು ತರಲಾಗುತ್ತದೆ. ಆಮೇಲೆ ಅವರಿಗೆ ಕುಡಿಸಿ, ತಿನ್ನಿಸಿ,ಕತ್ತಿಗೊಂದು ಶಿಲುಬೆ ತೊಡಿಸಲಾಗುತ್ತದೆ. ಕಳೆದ ೬೫ ವರ್ಷಗಳಿಂದ ಇದೇ ಅವರ ಕಾಯಕವಾಗಿದೆ.
ಇದಕ್ಕೆ ಪ್ರತಿಯಾಗ ಅರುಣಾಚಲ ವಿಕಾಸ ಪರಿಷತ್ತಿನ ಕಾರ್ಯಗಳು ಅನನ್ಯವಾದುದು. ಆಯ್ದ ಬುಡಕಟ್ಟಿನ ಹಿರಿಯರನ್ನು ಪರಿಷತ್ತು ದೇಶದ ಇತರ ರಾಜ್ಯಗಳಿಗೆ ಕರೆದೊಯ್ದಿತು. ಇಲ್ಲಿನ ರೀತಿನೀತಿಗಳನ್ನು ಕಂಡ ಅವರಿಗೆ ತಾವೂ ಹೀಗೇ ಬದುಕಬೇಕನ್ನಿಸಿತು. ಮರಳಿ ಅರುಣಾಚಲಕ್ಕೆ ಬಂದೊಡನೆ ಅಲ್ಲೊಂದು ಸಭೆಯಾಯ್ತು. ಹತ್ತಾರು ವಿಚಾರ ಸಂಕಿರಣಗಳು ನಡೆದವು. ಅವರು ನಿತ್ಯ ಪೂಜಿಸುವ ಸೂರ್ಯ ಚಂದ್ರರ (ಅವರ ಭಾಷೆಯಲ್ಲಿ ಡೋನ್ಯೊ- ಪೋಲೋ) ಚಿತ್ರ ಬಿಡಿಸಲಾಯ್ತು. ಕೇರಿಗೊಂದು ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿತು. ಈಗ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡವರೂ ದೇಸೀ ಶ್ರದ್ಧೆಯ ಹಬ್ಬಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿವರ್ತನೆಗೆ ತಯಾರಾಗುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಅರುಣಾಚಲವನ್ನು ಮುಷ್ಟಿಯಲ್ಲಿ ಹಿಡಿಯುವ ಚೀನಾದ ಪ್ರಯತ್ನಗಳು ನೆಲಕಚ್ಚುತ್ತಿವೆ. ಚೀನಾದ ನಿವೃತ್ತ ಸೇನಾಕಾರಿಯೊಬ್ಬ ಇತ್ತೀಚೆಗೆ ತನ್ನ ಬ್ಲಾಗ್‌ನಲ್ಲಿ ‘ಚೀನಾ ಭಾರತದಿಂದ ಕಲಿಯಬೇಕಾದ ಪಾಠಗಳು’ ಎನ್ನುವ ಲೇಖನ ಬರೆದಿದ್ದಾರೆ. ಅದರಲ್ಲಿ ಅರುಣಾಚಲದಲ್ಲಿ ಬಲಗೊಳ್ಳುತ್ತಿರುವ ಭಾರತೀಯ ಭಾವನೆಗಳ ಕುರಿತಂತೆ ಅಚ್ಚರಿ, ಗಾಬರಿ ಎರಡನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದೂ ಹೊಸತಾಗಿ ಆದುದಲ್ಲ. ಅರುಣಾಚಲದ ಜನರ ಒಳಗಿದ್ದ ದೇಸೀ ಭಾವನೆಗಳು ಈಗ ಹೊರಬರುತ್ತಿವೆ ಅಷ್ಟೇ.

1 Response to ಉದಯ ಸೂರ್ಯನ ನಾಡಲ್ಲಿ ಭಾರತೀಯತೆಯ ಹೊಂಬೆಳಕು

  1. Keerthan S Bhat

    ಚೀನಾ ಆಕ್ರಮಣದಿಂದ ನೊಂದ ಅರುಣಾಚಲ ಭಾರತೀಯರಿಗೆ ತಮ್ಮೊಳಗೆ ಬರಲು ಅವಕಾಶ ನೀಡುತ್ತಿಲ್ಲ ಎಂದು ಕೇಳಿದ್ದೆ. ಚೀನಾ ನಕಲಿ ದಾಖಲೆಗಳನ್ನು ತೋರಿಸಿ ಅರುಣಾಚಲ ನನ್ನದೆಂದು ಅನ್ನುತ್ತಿದೆಯೆಂದು ಕೇಳಿದಾಗಲೆಂತೂ ಇನ್ನೂ ಭಯವಾಗಿತ್ತು. ತಮಿಳು ಚಿತ್ರ ೭ಳಮ್ ಅರಿವು ನೋಡಿದ ಮೇಲಂತೂ ಇದರ ಭೀಕರತೆ ಇನ್ನಷ್ಟು ಮನ ತಲುಪಿತು. ಆದರೆ ನಿಮ್ಮ ಈ ಲೇಖನ ಓದಿದ ಮೇಲೆ ಉಸಿರು ಬಂದಂತಾಗಿದೆ. ನಿಮಗೆ ತುಂಬಾ ಧನ್ಯವಾದಗಳು.