ವಿಭಾಗಗಳು

ಸುದ್ದಿಪತ್ರ


 

ಒಂದೇ ವೇದಿಕೆಯಲ್ಲಿ ಹತ್ತು ಸಹಸ್ರ ವಿವೇಕ ದರ್ಶನ

ಈ ಬಾರಿ ಮುಗಳಖೋಡದ ಜಾತ್ರೆಯ ವೈಶಿಷ್ಟ್ಯವೆಂದರೆ ಜನವರಿ 12ರ ವಿವೇಕಾನಂದ ಜಯಂತಿಯನ್ನು ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹದಿನೈದರಿಂದ ಮುವ್ವತ್ತೊಂಬತ್ತರ ನಡುವಿನ ಹತ್ತು ಸಾವಿರ ತರುಣರನ್ನು ಒಟ್ಟುಗೂಡಿಸಿ ಅವರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿ ವಿವೇಕಾನಂದರ ಸಂದೇಶಗಳನ್ನು ಅವರ ಮೂಲಕ ಹೇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಡಿಯ ಮಠ ಈ ಕಾರ್ಯಕ್ರಮಕ್ಕಾಗಿ ಬಲು ವಿಶಿಷ್ಟರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ.

ಮುಗಳಖೋಡ ಬೆಳಗಾವಿಯಲ್ಲಿರೋ ಒಂದು ಪುಟ್ಟ ಹಳ್ಳಿ. ಇದು ದಾಸೋಹ ಮಠವೆಂದೇ ಖ್ಯಾತ. ದಿನದ ಯಾವ ಹೊತ್ತಲ್ಲಿ ಅಲ್ಲಿಗೆ ಹೋದರೂ ಪ್ರಸಾದಕ್ಕೆ ಕೊರತೆಯಾಗಲಾರದು. ಭಕ್ತರ ಭಕ್ತಿಯೂ ಅದೆಂಥದ್ದೆಂದರೆ ದಕ್ಷಿಣದಿಂದ ಬಂದವರು ಗಾಬರಿಯಾಗುವಷ್ಟು. ಉತ್ತರಕ್ಕೂ ದಕ್ಷಿಣಕ್ಕೂ ಇರುವ ಮಹತ್ವದ ವ್ಯತ್ಯಾಸ ಇದೇ. ಉತ್ತರದಲ್ಲಿ ಹೃದಯ ಶ್ರೀಮಂತಿಕೆ; ದಕ್ಷಿಣದಲ್ಲಿ ಬೌದ್ಧಿಕ ಸಿರಿವಂತಿಕೆ. ಉತ್ತರ ಭಾವನೆಗಳಿಗೆ ಹೆಚ್ಚಿನ ಮಹತ್ವಕೊಟ್ಟರೆ, ದಕ್ಷಿಣ ತತ್ತ್ವಕ್ಕೆ ಹೆಚ್ಚಿನ ಮೌಲ್ಯ ನೀಡುತ್ತದೆ. ದಕ್ಷಿಣ ಜ್ಞಾನ ಮಾಗರ್ಿಯಾಗುವ ತವಕದಲ್ಲಿದ್ದರೆ, ಉತ್ತರ ಯಾವ ಪ್ರಶ್ನೆಯನ್ನೂ ಕೇಳದೇ ಭಕ್ತಿಯನ್ನು ತಬ್ಬಿಕೊಂಡುಬಿಟ್ಟಿದೆ. ಹೀಗಾಗಿ ಉತ್ತರ ಕನರ್ಾಟಕದಲ್ಲಿ ಕೆಲಸ ಮಾಡುವ ಆನಂದವೇ ಬೇರೆ. ಇಲ್ಲಿ ಈ ಭಾವ ಅದು ಹೇಗೆ ಬೆಳೆಯಿತೋ, ಮೊದಲೇ ಇದ್ದಿದ್ದೆನ್ನುವುದಾದರೆ ಇಷ್ಟೆಲ್ಲ ಆಕ್ರಮಣ, ದಾಸ್ಯಗಳ ನಂತರವೂ ಅದೇ ಮುಗ್ಧತೆಯನ್ನು ಈ ಭಾಗದ ಜನ ಉಳಿಸಿಕೊಂಡಿದ್ದಾದರೂ ಹೇಗೆ ಎನ್ನುವುದು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ. ನೀವು ಓದಿಕೊಂಡಿರುವ ಇತಿಹಾಸ, ವಿಜ್ಞಾನ, ಮಾನವ ಶಾಸ್ತ್ರ, ಮನಶ್ಶಾಸ್ತ್ರ ಯಾವುವೂ ನಿಮಗೆ ಈ ಪ್ರಶ್ನೆಗೆ ಉತ್ತರ ಖಂಡಿತ ಕೊಡಲಾರವು.

1

ಆದರೆ ನಾನು ಕಳೆದೊಂದು ದಶಕದಿಂದ ಇಲ್ಲಿನ ಊರುಗಳಲ್ಲಿ ಸುತ್ತಾಡುತ್ತ, ಮಠ ಮಾನ್ಯಗಳಿಗೆ ಭೇಟಿಕೊಡುತ್ತ, ಸಂತರನ್ನು ಮಾತನಾಡಿಸುತ್ತ ಪಡೆದ ಅನುಭವದ ಆಧಾರದ ಮೇಲೆ ಹೇಳಬಲ್ಲೆ; ಇಲ್ಲಿನ ಎಲ್ಲ ಶಕ್ತಿಯ ಮೂಲವೂ ಮಠ ಕೇಂದ್ರಿತವೇ. ಮಠಾಧೀಶರಿಗೆ ಬಲು ಶ್ರದ್ಧೆಯಿಂದ ನಡೆದುಕೊಳ್ಳುವ ಈ ಜನರ ಭಾವನೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದೇ ಇವರ ಶಕ್ತಿ. ಪವಾಡಗಳು ಇಲ್ಲಿನ ಜನರ ಜೀವಾಳ. ಹಿರಿಯ ಗುರುಗಳು ನಡೆಸಿದ ಪವಾಡದ ಆಧಾರದ ಮೇಲೆ ಇಂದಿನ ಗುರುಗಳನ್ನು ಗುರುತಿಸುತ್ತಾರೆ. ಅದೇ ಶ್ರದ್ಧೆಯ ಕಂಗಳಿಂದ ಇಂದಿನ ಗುರುಗಳನ್ನು ನೋಡಿದವರಿಗೆ ಇವರೂ ಅಷ್ಟೇ ಪವಾಡಪುರುಷರಾಗಿ ಕಾಣಲಾರಂಭಿಸುತ್ತಾರೆ. ಜಗತ್ತಿನ ಎಲ್ಲ ವೈಭವಗಳೂ ತಮ್ಮ ಗುರುಗಳ ಪದತಲದಲ್ಲಿರಲೆಂದು ಅವರು ಆಶಿಸುತ್ತಾರೆ. ಅವರಿಗೆ ಬೇಕಾದ್ದನ್ನು ತಮ್ಮ ಹೊಟ್ಟೆ ಕಟ್ಟಿಯಾದರೂ ತಂದು ಕೊಡುತ್ತಾರೆ. ಗುರುಗಳೂ ಅದನ್ನು ಸಮಾಜಕ್ಕೆ ಮರಳಿ ಕೊಡುವುದನ್ನು ನೋಡಿ ಆನಂದಿಸುತ್ತಾರೆ.

ಕೆಲವೊಮ್ಮೆ ಆಲೋಚನೆಗಳು ಸುಳಿದು ಹೋಗುತ್ತವೆ, ಪವಾಡಗಳೇ ಸಂತತ್ವದ ಕುರುಹಾಗುವುದಾದರೆ ಉತ್ತರ ಕನರ್ಾಟಕದ ಒಂದೊಂದು ಮಠದಲ್ಲೂ ಹತ್ತಾರು ಏಸು ಕ್ರಿಸ್ತರು ಸಿಗುತ್ತಾರೆ!

ಮುಗಳಖೋಡ ಮಠವೂ ಮುನ್ನೂರರವತ್ತು ಶಾಖಾ ಮಠಗಳನ್ನು ಹೊಂದಿರುವ ಬೆಳಗಾವಿಯ ಪ್ರಸಿದ್ಧ ಮಠಗಳಲ್ಲೊಂದು. ಯಲ್ಲಾಲಿಂಗ ಮಹಾಸ್ವಾಮಿಗಳು ಸ್ಥಾಪಿಸಿದ ಮಠವಿದು. ಪೂವರ್ಾಶ್ರಮದಲ್ಲಿ ಕುಸ್ತಿ ಪಟುವಾಗಿದ್ದು ತನ್ನ ಗಭರ್ಿಣಿ ಪತ್ನಿಯ ಚಿತೆಯೆದುರು ಕುಳಿತು ಅನ್ಯ ಮನಸ್ಕನಾಗಿರುವಾಗಲೇ ಆಕೆಯ ಹೊಟ್ಟೆ ಸಿಡಿದು ಅದರೊಳಗಿದ್ದ ಸತ್ತು ಮಲಗಿದ್ದ ಮಗು ಯಲ್ಲಪ್ಪನ ಕಾಲಮೇಲೆ ಬಂದೆರಗಿತು. ಆ ಮಗುವನ್ನು ಮತ್ತೆ ಚಿತೆಗೆ ಹಾಕಿ ಸಂಸಾರ ಬಂಧನದಿಂದ ಕಳಚಿಕೊಂಡು ನಡೆದ ಯಲ್ಲಪ್ಪ ಸಿದ್ದಲಿಂಗ ಮಹಾಸ್ವಾಮಿಗಳೆಡೆಗೆ ಸಾಗಿದ. ಆತನ ಸೇವೆಯಿಂದ ಸಂತೃಪ್ತರಾದ ಗುರುಗಳು ತಮ್ಮೆಲ್ಲ ಅಂತಃಕರಣವನ್ನೂ ಧಾರೆಯೆರೆದರು. ಇದೇ ಯಲ್ಲಪ್ಪ ಮುಂದೆ ಗುರುಗಳ ಕೃಪೆಯಿಂದ ಯಲ್ಲಾಲಿಂಗ ಮಹಾಸ್ವಾಮಿಗಳೆಂದು ಖ್ಯಾತರಾಗಿ ಈ ಮಠವನ್ನು ಸ್ಥಾಪಿಸಿದ್ದು. ಅಂದಿನಿಂದ ಇಂದಿನವರೆಗೂ ಈ ಮಠದಲ್ಲಿ ಭಕ್ತರು ಪರಂಪರೆ ಎಂಬಂತೆ ಶ್ರದ್ಧೆಯನ್ನು ಹರಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿವೇಕ ಆವಾಹನಾ ಕಾರ್ಯಕ್ರಮಕ್ಕಾಗಿ ಇಲ್ಲಿಯೇ ಬೀಡುಬಿಟ್ಟಿರುವ ನಮಗೆಲ್ಲರಿಗೂ ಮರೆಯಲಾಗದ ಅನುಭವಗಳ ಕಂತೆ ಕಟ್ಟಿಕೊಡುತ್ತಿದೆ ಮುಗಳಖೋಡ.

FB_IMG_1515288491113

ಈ ಮಠವನ್ನು ಸದ್ಭಾವನಾ ಮಠವೆಂದೇ ಕರೆಯಲಾಗುತ್ತದೆ. ಜಾತಿಯ ಹೆಸರೂ ಇಲ್ಲಿ ಯಾರೂ ಎತ್ತುವುದಿಲ್ಲ. ಗುರುಗಳು ಶಿಷ್ಯರ ಆಯ್ಕೆ ಮಾಡುವಾಗ ಜಾತಿಯನ್ನು ಗಣನೆಗೇ ತಂದುಕೊಳ್ಳುವುದಿಲ್ಲ. ಹಿಂದಿನ ಗುರುಗಳು ಮತ್ತು ಈಗಿನ ಗುರುಗಳ ಜಾತಿಗಳು ಬೇರೆ, ಬೇರೆ. ಈ ಪರಂಪರೆಯೇ ಹಾಗೆ ಬೆಳೆದುಬಂದಿದೆ. ಮಠಕ್ಕೆ ನಡೆದುಕೊಳ್ಳುವ ಜನರೂ ಹಾಗೆಯೇ. ಒಂದು ಜಾತಿಯವರೆಂದು ಇಲ್ಲ. ಬೇರೆಯದು ಬಿಡಿ. ಈ ಬಾರಿಯ ಜಾತ್ರೆಗೆ ಸೇರಲಿರುವ ಲಕ್ಷಾಂತರ ಜನರಿಗೆ ದಾಸೋಹ ನಡೆಸಲೆಂದೇ ಹಳ್ಳಿಹಳ್ಳಿಗಳಿಂದ ಜನ ದವಸ ಧಾನ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಕರಾವಳಿಯಲ್ಲಿ ಇದನ್ನು ಹೊರೆ ಕಾಣಿಕೆ ಎನ್ನುತ್ತಾರಲ್ಲ; ಈ ಭಾಗದಲ್ಲಿ ಇದನ್ನು ಮಠಕ್ಕೆ ಬುತ್ತಿ ಎನ್ನುತ್ತಾರೆ. ಮೊನ್ನೆ ಇತ್ತೀಚೆಗೆ ಅಕ್ಕಪಕ್ಕದ ದಲಿತರೆಲ್ಲ ಸೇರಿ ತಮ್ಮ ಹಳ್ಳಿಗಳಿಂದ ಮಠದ ಬುತ್ತಿ ತಂದು ಕೊಟ್ಟಿದ್ದಾರೆ. ಅದೂ ಹೇಗೆ ಗೊತ್ತೇನು? ಎತ್ತಿನ ಗಾಡಿಗಳಲ್ಲಿ ಕಾಳು-ಧಾನ್ಯಗಳನ್ನು ತುಂಬಿ ಅಲಂಕರಿಸಿ ತರುವ ಗಂಡಸರು ಒಂದೆಡೆಯಾದರೆ ಮನೆಯಲ್ಲಿ ತಾವೇ ರೊಟ್ಟಿಗಳನ್ನು ಮಾಡಿ, ಒಣಗಿಸಿ ತಲೆ ಮೇಲೆ ಬುಟ್ಟಿ ಹೊತ್ತು ತರುವ ಹೆಣ್ಣು ಮಕ್ಕಳು ಮತ್ತೊಂದೆಡೆ. ಒಬ್ಬಿಬ್ಬರಲ್ಲ, ಸಾವಿರಾರು ಜನರ ಮೆರವಣಿಗೆ ಅದು. ಈ ವರ್ಷ ಜಾತ್ರೆಯಲ್ಲಿ ಅಡುಗೆ ಮಾಡಿ ಬಡಿಸುವ ಹೊಣೆ ಇದೇ ದಲಿತರದ್ದೆಂದು ಇಲ್ಲಿನ ಭಕ್ತರು ಹೇಳುವಾಗ ಹೃದಯ ತುಂಬಿ ಬರುತ್ತಿತ್ತು. ಮಹಾರಾಷ್ಟ್ರದಲ್ಲಿ ಜಿಗ್ನೇಶ್ ಮತ್ತವನ ಗೆಳೆಯರು ದಲಿತರನ್ನು ವಿಸ್ತಾರವಾದ ಸಮಾಜದಿಂದ ಒಡೆದು ಭಾರತವನ್ನು ಚೂರುಗೈಯ್ಯುವ ಪ್ರಯತ್ನದಲ್ಲಿದ್ದರೆ ಮುಗಳಖೋಡದ ಮಠ ಎಲ್ಲ ಜಾತಿ ಪಂಗಡಗಳನ್ನು ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಅಲ್ಲಿನ ಭಕ್ತಗಣಕ್ಕೆ ದಯಪಾಲಿಸಿದೆ ಎಂದರೆ ನತಮಸ್ತಕವಾಗಲೇ ಬೇಕು.

3

ಬರಲಿರುವ 12ರಿಂದ ಮೂರು ದಿನಗಳ ಕಾಲ ಮಠದ ಆವರಣದಲ್ಲಿ ಜಾತ್ರೆ. ಈ ಜಾತ್ರೆಯ ಅವಧಿಯಲ್ಲಿ ಕನಿಷ್ಠ ಮೂರ್ನಾಲ್ಕು ಲಕ್ಷ ಜನರಾದರೂ ಸೇರುತ್ತಾರೆ. ಈಗಿನ ಗುರುಗಳಾಗಿರುವ ಮುರುಘರಾಜೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಹಾತೊರೆದು ನಿಲ್ಲುವ ಆ ಬಡ, ಹಳ್ಳಿಗರ ಕಂಗಳನ್ನು ನೋಡುವುದೇ ಮಹಾಭಾಗ್ಯ. ಅವಕಾಶ ಸಿಕ್ಕರೆ ಒಮ್ಮೆ ಉತ್ತರ ಕನರ್ಾಟಕದ ಮಠಗಳ ಕೇಂದ್ರಿತ ಜಾತ್ರೆಯನ್ನು ಒಮ್ಮೆ ನೋಡಿ. ಅದು ಕೊಪ್ಪಳದ್ದಾಗಿರಬಹುದು, ಮುಗಳಖೊಡದ್ದೇ ಆಗಿರಬಹುದು. ಅದರ ವಿಸ್ತಾರ, ಜನಸಂಖ್ಯೆ, ಅನ್ನದಾನದ ಶೈಲಿ ಇವೆಲ್ಲವೂ ನಿಮ್ಮನ್ನು ಖಂಡಿತ ದಂಗುಬಡಿಯುವಂತೆ ಮಾಡುತ್ತದೆ. ಈ ಬಾರಿ ಮುಗಳಖೋಡದ ಜಾತ್ರೆಯ ವೈಶಿಷ್ಟ್ಯವೆಂದರೆ ಜನವರಿ 12ರ ವಿವೇಕಾನಂದ ಜಯಂತಿಯನ್ನು ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹದಿನೈದರಿಂದ ಮುವ್ವತ್ತೊಂಬತ್ತರ ನಡುವಿನ ಹತ್ತು ಸಾವಿರ ತರುಣರನ್ನು ಒಟ್ಟುಗೂಡಿಸಿ ಅವರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿ ವಿವೇಕಾನಂದರ ಸಂದೇಶಗಳನ್ನು ಅವರ ಮೂಲಕ ಹೇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಡಿಯ ಮಠ ಈ ಕಾರ್ಯಕ್ರಮಕ್ಕಾಗಿ ಬಲು ವಿಶಿಷ್ಟರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ. ಅಂದಾಜು ಮಾಡಿಕೊಂಡು ನೋಡಿ. ಹತ್ತು ಸಾವಿರ ವಿವೇಕಾನಂದರು ನಿಲ್ಲುವ ವೇದಿಕೆ ಒಂದೆಡೆಯಾದರೆ ಅವರನ್ನು ನೋಡಲೆಂದೇ ಬರುವ ಸಾವಿರಾರು ಜನ ಅದೆಲ್ಲಿ ಕೂರಬೇಕು. ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಇದೆ. ಅತಿಥಿಗಳಿಗಾಗಿಯೇ ಭರ್ಜರಿಯಾದ ವೇದಿಕೆ. ಎಲ್ಲವೂ ಸೇರಿ ಸ್ವರ್ಗವೇ ಧರೆಗಿಳಿದ ಅನುಭೂತಿ. ಅದಾಗಲೇ ಸುತ್ತಮುತ್ತಲಿನ ಕಾಲೇಜು ಯುವಕರನ್ನು ಸಂಪಕರ್ಿಸಿ ಅವರಿಂದ ಸಹಮತಿ ಪತ್ರ ಪಡೆಯಲಾಗಿದೆ. ವಿವೇಕಾನಂದರ ಮಾತುಗಳನ್ನು ಅಭ್ಯಾಸ ಮಾಡಿಸಲಾಗಿದೆ. ಊರೂರುಗಳಲ್ಲಿ ವಿವೇಕಾನಂದರ ಚಿತ್ರ ಪ್ರದರ್ಶನ ಮಾಡಿಸಿ ಅವರ ಬದುಕು-ಸಂದೇಶವನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಶಾಲಾ ಮಕ್ಕಳಿಗೆ ವಿವೇಕಾನಂದರ ಕುರಿತಂತೆ ಪ್ರಬಂಧ ಸ್ಪಧರ್ೆ ಮಾಡಿಸಲಾಗಿದೆ. ಆಟೋದಲ್ಲಿ ವಿವೇಕಾನಂದರ ಸಂದೇಶಗಳು, ಗೀತೆಗಳು ಮೊಳಗುತ್ತಿವೆ. ಹತ್ತಿರದ ಹಳ್ಳಿಗಳಲ್ಲಿ ಜನರನ್ನು ಆಹ್ವಾನಿಸಲೆಂದೇ ಪಂಜಿನ ಮೆರವಣಿಗೆ ಮಾಡಿ ಸೆಳೆಯಲಾಗುತ್ತಿದೆ. ಒಟ್ಟಾರೆ ಎಲ್ಲರ ಚಿತ್ತ ಮುಗಳಖೋಡದತ್ತ ನೆಲೆಸುವಂತೆ ಮಾಡುವ ಎಲ್ಲ ಪ್ರಯತ್ನಗಳು ಜೋರಾಗಿ ನಡೆದಿವೆ. ಕನಿಷ್ಠ ಇನ್ನೂರು ಮಂದಿ ಇದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ.
ಅವಘಡವೊಂದರಲ್ಲಿ ಕಾಲು ಕಳೆದುಕೊಂಡ ನಂತರವೂ ವಿವೇಕಾನಂದರ ಪ್ರೇರಣೆಯಿಂದಲೇ ಹಿಮಾಲಯವನ್ನೇರಿದ ಅರುಣಿಮಾ ಸಿನ್ಹಾ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ರವಿಶಂಕರ್ ಗುರೂಜಿ ಈ ಕಾರ್ಯಕ್ರಮದ ದರ್ಶನ ಪಡೆಯಲಿದ್ದಾರೆ. ಜೊತೆಗೆ ವಿವೇಕಾನಂದರ ಪ್ರೇರಣೆಯನ್ನು ಸದಾ ಸ್ಮರಿಸುವ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇಷ್ಟೇ ಅಲ್ಲ. 770 ಭೇರಿ-ನಗಾರಿಗಳು ಈ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಮೊಳಗಲಿವೆ. ಅವುಗಳ ಸದ್ದಿನಿಂದ ಆಕಾಶವೇ ಬಿರಿದು ಹೋಗಲಿದೆ. ಮಲಗಿದ್ದವರನ್ನು ಬಡಿದೆಬ್ಬಿಸಬೇಕೆನ್ನುವ ಸ್ವಾಮೀಜಿಯವರ ಸದಾಶಯ ಈಡೇರಲಿದೆ. ನೆನಪಿಡಿ. ವ್ಯಕ್ತಿಯೊಬ್ಬನ ವೇಷಧಾರಣೆ ಮಾಡಿದ ಹತ್ತುಸಾವಿರ ಜನ ಒಂದೇ ವೇದಿಕೆಯಲ್ಲಿ ನಿಲ್ಲುವುದು ಒಂದು ವಿಶ್ವದಾಖಲೆಯೇ ಸರಿ. 770 ವಾದ್ಯಗಳು ಒಮ್ಮೆಗೇ ನುಡಿಸಲ್ಪಡುವುದು ಮತ್ತೊಂದು ದಾಖಲೆ.

ಒಟ್ಟಿನಲ್ಲಿ ವಿವೇಕಾನಂದರ ಚಿಂತನೆಗಳು ಮತ್ತೊಮ್ಮೆ ದಿಗ್ದಿಗಂತದಲ್ಲಿ ಹರಡಲು ಇದು ಸಮರ್ಥ ಸಮಯ. ಚಿಕಾಗೋ ಭಾಷಣದ 125ನೇ ವಷರ್ಾಚರಣೆಯ ಈ ಹೊತ್ತಲ್ಲಿ ನಾವೆಲ್ಲರೂ ಸ್ವಾಮಿ ವಿವೇಕಾನಂದರು ಹೇಳಿದ ವಿಚಾರಗಳನ್ನು ಮತ್ತೊಮ್ಮೆ ಕೇಳಲು ಕಿವಿಯಾಗಬೇಕಿದೆ. ಅಂದಿನ ಅವರ ಮಾತು ಇಂದಿಗೂ ನಮಗೆ ಕಂದೀಲಾಗಿ ನಿಲ್ಲುವಂಥವಾಗಿವೆ. ಅವರೊಳಗಿನ ದೇಶಭಕ್ತಿ, ಧರ್ಮಪ್ರಜ್ಞೆ, ಮಾನವ ಪ್ರೇಮ ಇವೆಲ್ಲವೂ ಸಮಾಜಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಬೇಕಿದೆ. ಅದಕ್ಕೇ ಯಾರಾದರೂ ವಿವೇಕಾನಂದರ ಕೆಲಸ ಮಾಡುತ್ತಾರೆಂದರೆ ಹೃದಯಕ್ಕೆ ಹತ್ತಿರವೆನಿಸುತ್ತಾರೆ. ಭಾರತವನ್ನು ಪ್ರಸ್ತುತ ಸಮಸ್ಯೆಗಳಿಂದ ರಕ್ಷಿಸಬಲ್ಲ ಸಮಗ್ರ ಪರಿಹಾರ ಅವರಲ್ಲಿಯೇ ಇರೋದು. ಮುಗಳಖೋಡದ ಶ್ರೀಗಳು ಸ್ವಾಮಿ ವಿವೇಕಾನಂದರನ್ನು ಸಮಾಜಕ್ಕೆ ಮತ್ತೊಮ್ಮೆ ಪರಿಚಯಿಸುವ ಈ ಅಮೋಘ ಕಾರ್ಯಕ್ಕೆ ನಿಂತಿರುವುದು ನಿಜಕ್ಕೂ ರಾಷ್ಟ್ರಪುನನರ್ಿಮರ್ಾಣದಲ್ಲಿ ಮಹೋನ್ನತ ಹೆಜ್ಜೆಯೇ ಸರಿ. ಇತಿಹಾಸದ ಪುಟದಲ್ಲಿ ಇದೊಂದು ಮಹತ್ವದ ಅಂಶವಾಗಿ ಖಂಡಿತ ದಾಖಲಾಗಲಿದೆ.

ಅಂದಹಾಗೆ ನೂರಿಪ್ಪತ್ತೈದು ವರ್ಷಗಳಿಗೂ ಹಿಂದೆ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಿದ್ದರು; ಹತ್ತು ದಿನಗಳ ಕಾಲ ತಂಗಿದ್ದರು. ಯಾರಿಗೆ ಗೊತ್ತು? ಆಗ ಈ ಮುಗಳಖೋಡಕ್ಕೂ ಒಮ್ಮೆ ಬಂದು ಹೋಗಿದ್ದಿರಬಹುದು!

Comments are closed.