ವಿಭಾಗಗಳು

ಸುದ್ದಿಪತ್ರ


 

ಕನಸು ಕಾಣೋದಕ್ಕೂ ದಾರಿದ್ರ್ಯವೇಕೆ?

ನಾವೀಗ ವರಸೆ ಬದಲಿಸಬೇಕಿದೆ. ನಮ್ಮ ರಾಜ್ಯದ ಕುರಿತಂತೆ ನಾವೊಂದು ಕನಸು ಕಾಣಬೇಕಿದೆ. ಪಕ್ಷ ಯಾವುದೇ ಬರಲಿ. ವ್ಯಕ್ತಿಯಾರೇ ಅಧಿಕಾರದಲ್ಲಿರಲಿ. ರಾಜ್ಯದ ಜನತೆಯ ಕನಸನ್ನು ನನಸು ಮಾಡುವುದಷ್ಟೇ ಅವನ ಕರ್ತವ್ಯವಾಗಿರಬೇಕು. ಅಂತಹ ಪ್ರಜ್ಞಾವಂತಿಕೆ ನಾವೂ ಬೆಳೆಸಿಕೊಳ್ಳಬೇಕು ನಾಯಕರಿಗೂ ತುಂಬಬೇಕು. ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಆಚರಿಸುವಂತಾಗಬೇಕು.

ಪ್ರಜಾಪ್ರಭುತ್ವಕ್ಕೆ ಎಷ್ಟು ಗುಣಗಳಿವೆಯೋ, ಒಂದಷ್ಟು ದೋಷಗಳೂ ಇವೆ. ರಾಜಪ್ರಭುತ್ವವಾಗಿದ್ದರೆ ಸಮರ್ಥ ರಾಜನ ಆಯ್ಕೆಯಲ್ಲಿ ಪ್ರಜೆಗಳ ಪಾತ್ರ ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಬುದ್ಧಿವಂತ ಮಂತ್ರಿಮಂಡಲ ರಾಜನಿಗೆ ಸಲಹೆ ನೀಡಬಹುದು. ಆದರೆ ರಾಜನ ನಿರ್ಣಯವೇ ಅಂತಿಮ. ಹೀಗಾಗಿ ಪ್ರಜೆಗಳು ರಾಜಕಾರಣದತ್ತ ತಲೆ ಹಾಕದೇ ತಮ್ಮ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಗ್ನರಾಗಿರುತ್ತಿದ್ದರು. ಹೊಲದಲ್ಲಿ ಮೈಮುರಿದು ದುಡಿಯೋದು, ಮನೆಗೆ ಬಂದು ಪುರಾಣ ಪುಣ್ಯ ಕಥೆಗಳ ಶ್ರವಣ, ಯಕ್ಷಗಾನ-ಬಯಲಾಟಗಳ ದರ್ಶನಗಳಲ್ಲಿ ಪಾಲ್ಗೊಳ್ಳೋದು. ಹೀಗಾಗಿ ಸ್ವಾಮಿ ವಿವೇಕಾನಂದರು ಪಶ್ಚಿಮದಲ್ಲಿ ಹೇಳೋರು, ‘ಭಾರತದ ರೈತರಿಗೆ ರಾಮ-ಕೃಷ್ಣರೆಲ್ಲ ಗೊತ್ತು, ರಾಜನಾರೆಂದು ಗೊತ್ತಿರುವುದಿಲ್ಲ. ಯೂರೋಪಿನ ಜನಕ್ಕೆ ಪ್ರತಿಯೊಬ್ಬ ರಾಜಕಾರಣಿ, ಅವನ ಪಕ್ಷ ಪ್ರತಿಯೊಂದರ ಜ್ಞಾನವೂ ಇದೆ’ ಅಂತ. ಪ್ರಜಾಪ್ರಭುತ್ವದಲ್ಲಿ ರಾಜನ ಆಯ್ಕೆಯ ಹೊಣೆ ಪೂರ್ಣವಾಗಿ ಪ್ರಜೆಗಳದ್ದೇ. ಹೀಗಾಗಿ ಬಲು ಎಚ್ಚರಿಕೆ ಅವಶ್ಯಕ. ಆದರೆ ಈ ಎಚ್ಚರಿಕೆ ತೋರುವ ಭರದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ವರ್ಷಗಟ್ಟಲೆ ಚುನಾವಣೆಯ ದುಶ್ಚಕ್ರದಲ್ಲಿ ಸಿಲುಕಿ ಆಲಸ್ಯದ ಮುದ್ದೆಯಾಗಿಬಿಡುತ್ತೆ ತಾರುಣ್ಯ. ಹಾಗೆ ಸುಮ್ಮನೆ ಯೋಚಿಸಿ ನೋಡಿ. ಕಳೆದ ವರ್ಷ ತಾಲೂಕು-ಜಿಲ್ಲಾ ಪಂಚಾಯತ್ಗಳಿಗೆ ಚುನಾವಣೆಯಾಯ್ತು, ಈಗ ವಿಧಾನಸಭೆಯ ತಯಾರಿ ಅದರ ಹಿಂದು ಹಿಂದೆಯೇ ಲೋಕಸಭೆಯ ಚುನಾವಣೆ, ಮತ್ತೆ ಗ್ರಾಮ ಪಂಚಾಯತಿ. ಪಕ್ಷಗಳ ದೃಷ್ಟಿಯಿಂದ ನೋಡುವುದಾದರೆ ರಾಜ್ಯ-ರಾಜ್ಯಗಳಲ್ಲಿ ಇದೇ ಕದನ. ಒಂದರಲ್ಲಿ ಸೋತರೂ ಹೊಣೆಗಾರಿಕೆ ಪ್ರಧಾನಿಯದ್ದು, ಪಕ್ಷಾಧ್ಯಕ್ಷರದ್ದು. ಅವರಿಗೊಂಥರಾ ಬಾಜೀರಾವ್ ಪೇಶ್ವೆಯ ಪರಿಸ್ಥಿತಿ ಯುದ್ಧ ಮಾಡೋದು, ಗೆಲ್ಲೋದು. ವಿಸ್ತಾರ ಮಾಡಿದ್ದನ್ನು ಸಂಭಾಳಿಸುವ, ಗಟ್ಟಿಗೊಳಿಸುವ ಸಮಯವೂ ಇಲ್ಲ.

Photo Caption

 

ಕಾಲ ಬದಲಾಗಿದೆ. ವೈಜ್ಞಾನಿಕವಾಗಿ ಅಂತರಿಕ್ಷಕ್ಕೇ ಲಗ್ಗೆ ಇಟ್ಟಿದ್ದೇವೆ ನಾವು. ಆದರೆ ಪ್ರಜಾಪ್ರಭುತ್ವದ ಸೂತ್ರವನ್ನು ಗಟ್ಟಿಗೊಳಿಸುವಲ್ಲಿ ಸೋತಿದ್ದೇವೆ. ಯೋಗದ ಮೂಲಕ ಜಗತ್ತಿನ ಸ್ವಾಸ್ಥ್ಯ ಸುಧಾರಿಸಲು ಪಣ ತೊಟ್ಟಿದ್ದೇವೆ. ಜಾತಿ-ಜಾತಿಗಳಲ್ಲಿ ಕಳೆದು ಹೋಗಿರುವ ಭಾರತೀಯರ ಮಾನಸಿಕ ರೋಗ ಗುಣ ಪಡಿಸಲು ನಮ್ಮಿಂದಾಗುತ್ತಿಲ್ಲ. ಜಗತ್ತಲ್ಲೆಲ್ಲಾ ಸ್ವಾಭಿಮಾನದ ಧ್ವಜ ಹೆಮ್ಮೆಯಿಂದ ಪಟಪಟಿಸುತ್ತಿದ್ದರು ನಾವಿನ್ನೂ ಮಂತ್ರಿಗಳು, ಶಾಸಕರ ಹಿಂದೆ ಬಾಲಬಡುಕರಾಗಿ ತಿರುಗಾಡುತ್ತ ದೇಶದ ಜಿಡಿಪಿಗೆ ನಯಾಪೈಸೆಯಷ್ಟನ್ನೂ ಸೇರಿಸಲಾಗದೇ ಹೆಣಗಾಡುತ್ತಿದ್ದೇವೆ. ನಮ್ಮನ್ನಾಳುವವರೂ ಅಷ್ಟೇ ಅದಾಗಲೇ ಮುಖ್ಯಮಂತ್ರಿ ಯಾರೆಂಬ ಜಿದ್ದಿಗೆ ಬಿದ್ದು ಬಡಿದಾಡುತ್ತಿದ್ದಾರೆಯೇ ಹೊರತು ರಾಜ್ಯವನ್ನು ದೇಶದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ತಂತಮ್ಮ ರಾಜ್ಯವನ್ನು ಎಲ್ಲಾ ದಿಕ್ಕಿನಲ್ಲೂ ನಂಬರ್ ಒನ್ ಮಾಡಲು ಪ್ರಯತ್ನಿಸುತ್ತಿದ್ದರೆ ನಾವು ಮಾತ್ರ ಹತಭಾಗ್ಯರಾಗಿ ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಮುಖ್ಯಮಂತ್ರಿಗಳನ್ನು ಕಂಡೆವು, ತುಷ್ಟೀಕರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಂದೆ-ಮಕ್ಕಳ ರಾಜಕಾರಣ ಎಲ್ಲವನ್ನೂ ಕಂಡೆವು. ಪ್ರಗತಿಯ ದೃಷ್ಟಿಯಿಂದ ಅತಿ ಕಡಿಮೆ ಸಾಧನೆಯಿಂದ ಹೈರಾಣಾದೆವು. ಇಷ್ಟಾದರೂ ಬುದ್ಧಿ ಕಲಿಯಲಿಲ್ಲ. ಚುನಾವಣೆಯ ಮಳೆಗಾಲದ ಮುನ್ಸೂಚನೆ ಬರುತ್ತಿದ್ದಂತೆ ಗರಿಕಟ್ಟಿ ಕುಣಿಯುವ ನವಿಲಿನಂತಾಗಿಬಿಟ್ಟಿದ್ದೇವೆ. ಖಂಡಿತ ತಪ್ಪಲ್ಲ. ಆದರೆ ಮತ್ತದೇ ಹಳೆಯ ಜಾತಿ ಪ್ರಭಾವಿತ ಹಣವೇ ಮುಖ್ಯವಾದ, ಹೆಂಡದ ಹೊಳೆ ಹರಿಸುವ ರಾಜಕಾರಣದ ದಾಸರಾಗುವುದಾದರೆ ಕರ್ನಾಟಕದ ಭವಿಷ್ಯ ಕರಾಳವಾಗುವುದಂತೂ ಸತ್ಯ.

ನಾವೀಗ ವರಸೆ ಬದಲಿಸಬೇಕಿದೆ. ನಮ್ಮ ರಾಜ್ಯದ ಕುರಿತಂತೆ ನಾವೊಂದು ಕನಸು ಕಾಣಬೇಕಿದೆ. ಪಕ್ಷ ಯಾವುದೇ ಬರಲಿ. ವ್ಯಕ್ತಿಯಾರೇ ಅಧಿಕಾರದಲ್ಲಿರಲಿ. ರಾಜ್ಯದ ಜನತೆಯ ಕನಸನ್ನು ನನಸು ಮಾಡುವುದಷ್ಟೇ ಅವನ ಕರ್ತವ್ಯವಾಗಿರಬೇಕು. ಅಂತಹ ಪ್ರಜ್ಞಾವಂತಿಕೆ ನಾವೂ ಬೆಳೆಸಿಕೊಳ್ಳಬೇಕು ನಾಯಕರಿಗೂ ತುಂಬಬೇಕು. ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಆಚರಿಸುವಂತಾಗಬೇಕು. ಅದಕ್ಕೇ ಈ ಬಾರಿ ಸದೃಢ ಕರ್ನಾಟಕಕ್ಕೊಂದು ಕನಸು ಕಾಣೋಣ ಅಂದಿದ್ದು. ಯಾವಾಗ ಕನಸು ಕಾಣಲು ಶುರುಮಾಡುತ್ತೇವೆಯೋ ಆಗಲೇ ಗೊತ್ತಗೋದು ನಮಗೆ ರಾಜ್ಯದ ಕುರಿತಂತೆ ಗೊತ್ತಿರೋದು ಕಡಿಮೆ ಅಂತ. ಬಹುತೇಕರು ಗಿಡನೆಡಿ, 24 ತಾಸು ನೀರುಕೊಡಿ ಅಂತೆಲ್ಲಾ ಕನಸು ಕಂಡುಬಿಡುತ್ತಾರೆ. ಆದರೆ ಗಿಡನೆಡಲು ರಾಜ್ಯದಲ್ಲಿರುವ ಒಟ್ಟಾರೆ ಖಾಲಿಜಾಗ ಎಷ್ಟೆಂಬ ಅಂದಾಜಾದರೂ ಇದೆಯಾ? ಮನೆಗೊಂದು ಮರ ಕಡ್ಡಾಯಗೊಳಿಸಿ ಎನ್ನುವವರಿಗೆ ಬೆಂಗಳೂರಿನಲ್ಲಿ ತುಳಸಿ ಗಿಡಕ್ಕೆ ಜಾಗವಿಲ್ಲ ಎಂಬುದರ ಅರಿವಿದೆಯಾ? ನೀರು 24 ತಾಸು ಕೊಡಬೇಕೆಂದಾಗ ಅಷ್ಟು ನೀರಿನ ದಾಸ್ತಾನು ಉಳಿಸಿಕೊಂಡಿರುವ ಬಗ್ಗೆ ಖಾತ್ರಿಯಿದೆಯಾ? ಅಂತರ್ಜಲದ ಪರಿಸ್ಥಿತಿ ಹೇಗಿದೆ, ಕರ್ನಾಟಕದಲ್ಲಿ ಬರದ ಪ್ರಮಾಣ ಎಷ್ಟಿದೆ ಎಂಬುದರ ಅರಿವಿದೆಯಾ? ಇವೆಲ್ಲವನ್ನೂ ತಿಳಿದುಕೊಂಡೇ ಕನಸು ಕಾಣಬೇಕು. ಇದರಿಂದ ಎರಡು ಲಾಭವಿದೆ. ಮೊದಲನೆಯದು ರಾಜ್ಯದ ಸಮಗ್ರ ಅರಿವು ದೊರೆಯುತ್ತದೆ ಎರಡನೆಯದು ರಾಜ್ಯದ ಯಾವುದೇ ಸಮಸ್ಯೆಗೂ ಸಮಗ್ರ ಪರಿಹಾರ ನಾವೇ ಕೊಡಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆ ಪ್ರಜ್ಞಾವಂತನಾಗೋದು ಹೀಗೇ.

Karnataka

ಹೀಗೆ ನಾವು ರಾಜ್ಯದ ಅಭಿವೃದ್ಧಿಯ ಕುರಿತಂತೆ, ಜಿಲ್ಲೆ-ತಾಲೂಕು ಮತ್ತು ಹಳ್ಳಿಗಳ ಬೆಳವಣಿಗೆಯ ಕುರಿತಂತೆ ಅಲ್ಲಲ್ಲಿಯ ಪ್ರಜ್ಞಾವಂತರು ಸೇರಿ ನೀಲಿನಕಾಶೆ ತಯಾರು ಮಾಡಿಟ್ಟು ಅದಕ್ಕೆ ಪೂರಕವಾಗಿ ಪಂಚಾಯತಿಯಿಂದ ಹಿಡಿದು ರಾಜ್ಯದವರೆಗೆ ಎಲ್ಲರೂ ಕೆಲಸ ಮಾಡುವಂತಾಗಬೇಕು ಅಷ್ಟೇ. ಹೌದು. ಪ್ರಜಾಪ್ರಭುತ್ವವೆಂದರೆ ಹಾಗೇನೇ. ಪ್ರಧಾನಮಂತ್ರಿ ಹೇಳಿದ್ದನ್ನು ಪಂಚಾಯತಿ ಜಾರಿಗೆ ತರುವುದಲ್ಲ. ಪಂಚಾಯತಿಯ ಅಪೇಕ್ಷೆಗಳನ್ನು ಜಾರಿಗೆ ತರಲು ಪ್ರಧಾನಿ ಯೋಜನೆ ರೂಪಿಸುವುದು. ಅಧಿಕಾರಿಗಳು ಹೇಳಿದ್ದಂತೆ ನಡೆದುಕೊಳ್ಳುವುದಲ್ಲ ಗ್ರಾಮಸ್ಥನ ಬದುಕು ಬದಲಿಗೆ ವಿಧಾನಸೌಧದೊಳಗಿನ ಅಧಿಕಾರಿಗಳಿಗೆ ತಿಳಿ ಹೇಳಿ ಕೆಲಸ ಮಾಡಿಸಬಲ್ಲ ಸ್ವಾತಂತ್ರ್ಯ ಗ್ರಾಮಪ್ರತಿನಿಧಿಗಿರಬೇಕು. ಆಗ ಮಾತ್ರ ಕೊನೆಯ ವ್ಯಕ್ತಿಯ ಸಂದೇಶವೂ ರಾಜನೀತಿಯಲ್ಲಿ ಮಹತ್ವದ ಹೊಣೆ ಹೊಂದಿರುತ್ತದೆ.

ನಮ್ಮಲ್ಲಿರುವುದು ಇದರದ್ದೇ ಕೊರತೆ. ಹಳ್ಳಿಗನಿಗೆ ರಾಜ್ಯದ ಸಮಗ್ರತೆಯ ಅರಿವು ಮೂಡಿಸಲಿಲ್ಲ ಆದರೆ ಅವನ ಕೈಗೆ ಅಧಿಕಾರ ಕೊಟ್ಟಿದ್ದೇವೆ. ಪಂಚಾಯತಿಗೆ ಹಣ ನೀಡುತ್ತೇವೆ. ಆದರೆ ಅದನ್ನು ಬಳಸುವ ಸ್ವಾತಂತ್ರ್ಯ ಮಾತ್ರ ನೀಡುವುದಿಲ್ಲ. ಇದೊಂಥರಾ ಗೊಂದಲದ ಪರಿಸ್ಥಿತಿ. ಪ್ರತೀ ವರ್ಷ ಲಕ್ಷಾಂತರ ಇಂಜಿನಿಯರುಗಳು ಮಾರುಕಟ್ಟೆಗೆ ಬರುತ್ತಾರಲ್ಲ ಅವರಲ್ಲಿ ರಾಷ್ಟ್ರ ನಿರ್ಮಾಣದ ಕನಸುಗಳನ್ನು ಹುಟ್ಟು ಹಾಕಿದ್ದೇವೇನು? ಲಕ್ಷಾಂತರ ಶೌಚಾಲಯಗಳನ್ನು ಕಟ್ಟುವುದಲ್ಲ ಸರ್ಕಾರ ಅದ್ಯಾಕೆ ಕಾಲೇಜಿನ ಸಿವಿಲ್ ಇಂಜಿನಿಯರುಗಳು ಇದರ ಮೇಲೆಯೇ ಸಂಶೋಧನೆ ನಡೆಸಿ ಕಡಿಮೆ ನೀರು ಬಳಕೆಯಾಗುವ, ಕಡಿಮೆ ಹಣ ವ್ಯಯವಾಗುವ ಶೌಚಾಲಯ ನಿರ್ಮಾಣದ ಕನಸು ಕಟ್ಟಿ ಸರ್ಕಾರಕ್ಕೆ ಸಮವೆನಿಸಬಾರದು! ಸರ್ಕಾರಗಳು ಅದನ್ನು ಪರೀಕ್ಷಿಸಿ ಬಳಸಿ ಸಂಶೋಧಕರಿಗೇಕೆ ರಾಯಲ್ಟಿ ಕೊಡಬಾರದು. ಹೇಳಿ ಇವೆಲ್ಲ ಹೊಸ ಕಲ್ಪನೆಗೆ ನೀರೆರೆಯುವ ಪ್ರಕಿಯೆ ಅಲ್ಲವೇ? ‘ಸ್ಟಾರ್ಟ್ ಅಪ್ ಇಂಡಿಯಾ’ ಎಂದರೆ ಇದೇ ಅಲ್ಲವೇನು?

tour

ನನ್ನ ಕನಸಿನ ಕರ್ನಾಟಕದ ಕಲ್ಪನೆ ನಾವು ಹರಿಬಿಟ್ಟಿರುವುದೇ ಇದಕ್ಕೆ. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳೊಂದಿಗೆ ತುಲನೆ ಮಾಡುವಂತೆ ಕರ್ನಾಟಕವನ್ನು ಕಟ್ಟಬೇಕೇ ಹೊರತು, ತೆಲಂಗಾಣ, ಒರಿಸ್ಸಾ, ಬಿಹಾರ, ಮಿಜೋರಾಂಗಳೊಂದಿಗಲ್ಲ. ಸಿಂಗಪೂರದ ಪ್ರವಾಸೋದ್ಯಮದಿಂದ ನಾವು ಪ್ರೇರಣೆ ಪಡೆದು ನಮ್ಮ ಪ್ರವಾಸ ಕೇಂದ್ರಗಳನ್ನು ಜಾಗತಿಕ ಮಟ್ಟದ ಕೇಂದ್ರವಾಗಿ ರೂಪಿಸಬೇಕಲ್ಲವೇ? ದುಬೈನಿಂದ ಪ್ರೇರಣೆ ಪಡೆದು ಜಗತ್ತಿನ ಉದ್ಯಮಿಗಳನ್ನು ಆಹ್ವಾನಿಸುವ ರೀತಿ ರೂಪಿಸಬೇಕಲ್ಲವೇ? ಚೀನಾದಿಂದ ಪ್ರೇರಣೆ ಪಡೆದು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ವಿಕ್ರಮ ಸ್ಥಾಪಿಸುವುದು ಬೇಡವೇ? ಇಸ್ರೇಲಿನಿಂದ ಪ್ರಭಾವಿತರಾಗಿ ಸ್ವಾಭಿಮಾನದ ಶಿಕ್ಷಣ, ಸ್ವಾವಲಂಬಿ ಕೃಷಿ ಆಲೋಚಿಸುವವರಾಗಬೇಕಲ್ಲವೇ? ಇವೆಲ್ಲವುಗಳನ್ನೂ ಅರ್ಥೈಸಿಕೊಂಡು ಅದನ್ನು ಇಲ್ಲಿನ ಸ್ಥಳೀಯ ರಾಜನೀತಿಗೆ ಹೊಂದುವಂತೆ ಬದಲಾಯಿಸಿ ನಮ್ಮದೇ ತರುಣರನ್ನು ಸಂಶೋಧನೆಗೆ ಹಚ್ಚಿ ಸರ್ಕಾರದ ಸಾಹಾಯದಿಂದ ಈ ಕನಸುಗಳನ್ನು ನನಸು ಮಾಡಿಕೊಂಡರಾಯ್ತು. ಇಲ್ಲಿ ಯಾವುದೂ ಇತರರ ಅನುಕರಣೆಯಲ್ಲ; ಬೇರೆ ರಾಷ್ಟ್ರಗಳ ಶ್ರೇಷ್ಠ ಸಂಗತಿಯನ್ನು ಗುರುತಿಸಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿ ನಮ್ಮವರನ್ನು ಕ್ರಿಯಾಶೀಲಗೊಳಿಸಿ ಅಪ್ಪುವ ವಿಧಾನ. ಸದ್ಯಕ್ಕೆ ನಾವು ಯೂರೋಪು-ಅಮೇರಿಕಾಗಳಿಂದ ಪಡೆಯುತ್ತಿರುವ ಪ್ರೇರಣೆ ಯಾವುದಕ್ಕೆ ಗೊತ್ತೇನು? ರಸ್ತೆಗಳಲ್ಲಿ ಗೀಚುವ ಟ್ರಾಫಿಕ್ ಪೇಂಟುಗಳ ಬಗ್ಗೆ ಮಾತ್ರ.

ನೆನಪಿಡಿ. ಇಡಿಯ ದೇಶದಲ್ಲಿ ಇಂಥದ್ದೊಂದು ಅಭಿಯಾನ ನಡೆದಿಲ್ಲ. ಎಲ್ಲರೂ ನಾಯಕರನ್ನು ನಂಬಿ ಅವರಿಗಾಗಿ ಕೆಲಸ ಮಾಡಿದ್ದಾರಷ್ಟೇ. ನಾವು ಆ ಪರಂಪರೆಯನ್ನು ಬದಲಾಯಿಸೋಣ. ಈ ಬಾರಿ ನಾವು ಬೆಂಬಲಿಸೋದು ವ್ಯಕ್ತಿಗಲ್ಲ, ನಾಡಿನ ಅಭಿವೃದ್ಧಿಗೆ ಎಂಬುದನ್ನು ದೃಢ ಪಡಿಸಿಕೊಳ್ಳೋಣ. ಒಮ್ಮೆ ನಮ್ಮ ಕನಸುಗಳು ಬಲ್ಲವರ ಕೈ ಸೇರಿ ಅವರು ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಸಿ ನೀಲಿನಕಾಶೆ ತಯಾರಿಸಿ ಕೊಡಲಿ. ಅದಕ್ಕೆ ತಕ್ಕಂತೆ ದುಡಿಯುವುದಷ್ಟೇ ಆಳುವ ಕೈಗಳ ಕೆಲಸವಾಗುತ್ತದೆ. ಆಗ ಹೇಗೆ ಕೃಷಿಕ ಹೊಲದಲ್ಲಿ ದುಡಿಯುತ್ತಾನೋ, ಹೇಗೆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡುತ್ತಾನೋ, ಹೇಗೆ ಕಚೇರಿಯಲ್ಲಿ ಅಧಿಕಾರಿಗಳು ಮಂಡೆ ಬಗ್ಗಿಸಿ ಫೈಲಿನ ಮುಂದೆ ಕುಳಿತುಕೊಳ್ಳುತ್ತಾರೋ ಹಾಗೆಯೇ ರಾಜಕಾರಣಿಯೂ ಜನರ ಕನಸುಗಳ ಫೈಲನ್ನು ಮುಂದಿರಿಸಿಕೊಂಡು ಅದನ್ನು ಪೂರೈಸುವಲ್ಲಿ ಮೈಬಗ್ಗಿಸಿ ದುಡಿಯಬೇಕು ಅಷ್ಟೇ. ಇಲ್ಲಿ ಪ್ರಭುಗಳೆಂದರೆ ಜನತೆ ಮಾತ್ರ, ಉಳಿದವರೆಲ್ಲ ಸೇವಕರೇ! ಇದನ್ನು ಸಮರ್ಪಕವಾಗಿ ಅರ್ಥೈಸಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದಕ್ಕಿದಂತೆಯೇ. ಅದಕ್ಕೆ ಕನಸು ಹೆಣೆಯಲು ಆರಂಭಿಸಿ ಎಂದು ಕೇಳಿಕೊಳ್ಳುತ್ತಿರುವುದು. ಅದಾಗಲೇ ಜಗತ್ತಿನ ಬೇರೆ-ಬೇರೆ ಭಾಗಗಳಲ್ಲಿರುವ ಕನ್ನಡಿಗರೂ ಕೈಜೋಡಿಸುತ್ತಿದ್ದಾರೆ. ಮತ್ತೇಕೆ ತಡ? ನಮ್ಮ ಹಳ್ಳಿ, ಊರು, ನಮ್ಮ ರಾಜ್ಯ ನಮ್ಮಿಚ್ಚೆಗೆ ತಕ್ಕಂತೆ ರೂಪುಗೊಳ್ಳಲಿ. ಸದೃಢ ಕರ್ನಾಟಕ ಸುಭದ್ರ ಭಾರತದ ಕನಸು ನನಸಾಗಲಿ.

Comments are closed.