ವಿಭಾಗಗಳು

ಸುದ್ದಿಪತ್ರ


 

ಕನಸು ನಿಜವಾಗುತ್ತೋ, ಬಿಡುತ್ತೋ, ಆದರೆ…

ಒಬ್ಬ ಬಾಬಾ ನಿಧಿಯ ಬಗ್ಗೆ ಸುದ್ದಿ ಕೊಟ್ರು. ಸರ್ಕಾರ ನಿಧಿಯ ಹಿಂದೆ ಬಿತ್ತು. ಮತ್ತೊಬ್ಬ ಬಾಬಾ ಕಪ್ಪುಹಣದ ಸುದ್ದಿ ಕೊಟ್ರು. ಸರ್ಕಾರ ಬಾಬಾ ಹಿಂದೇನೇ ಬಿತ್ತು… ಇದೇ ವಿಪರ‍್ಯಾಸ. ಮಂದಿರಗಳನ್ನೂ, ಹಳೆಯ ಮನೆಗಳನ್ನೂ ನಿಧಿಗಾಗಿ ಕೆಡವಿ ಹಾಳು ಮಾಡುವ ಲೂಟಿಕೋರರಿಗೂ ಸರ್ಕಾರಕ್ಕೂ ಅದೇನು ವ್ಯತ್ಯಾಸವೆಂದೇ ಗೊತ್ತಾಗುತ್ತಿಲ್ಲ.

“ಕನಸುಗಳ ಅರ್ಥ”, “ಕನಸುಗಳು ಅದೆಷ್ಟು ಸತ್ಯ!?” ಎಂಬೆಲ್ಲ ಶೀರ್ಷಿಕೆಯ ಪುಸ್ತಕಗಳಿಗೆ ಈಗ ವಿಶೇಷ ಬೆಲೆ ಬಂದುಬಿಟ್ಟಿದೆ. ರಾತ್ರಿ ಮಲಗುವಾಗ ಏನನ್ನು ಯೋಚಿಸುತ್ತೇವೆಯೋ ಅದೇ ಕನಸಿನಲ್ಲಿ ಬರುತ್ತೆಂದು ಕೇಳಿದವರೆಲ್ಲ, ಮಲಗುವ ಮುನ್ನ ಚಿನ್ನ-ಬೆಳ್ಳಿಯ ಕುರಿತಂತೆ ಚಿಂತಿಸುತ್ತಿದ್ದಾರೆ. ಕನಸಿನಲ್ಲಿ ಯಾವುದಾದರೂ ನಿಧಿ ಕಂಡರೆ ಅಗೆದು ತಗೊಂಡುಬಿಡಬಹುದು ಅಂತ! ಬಡತನ ಅನ್ನೋದು ಮಾನಸಿಕ ಸಮಸ್ಯೆ ಎಂದಿದ್ದ ರಾಹುಲ್ ಗಾಂಧಿ ಈಗ ಜನರನ್ನು ಶ್ರೀಮಂತರನ್ನಾಗಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯ ಕನಸು-ಮನಸಿನಲ್ಲೂ ಸಂಪತ್ತಿನ ಬಗ್ಗೆಯೇ ಯೋಚಿಸುತ್ತಿರುವುದರಿಂದ ಬಡತನ ನಿವಾರಣೆಯಾದಂತೆ ತಾನೇ?

Know-sadhu-Shob29367ವಿಸ್ತರಿಸುವ ಅಗತ್ಯವಿಲ್ಲ. ಉತ್ತರಪ್ರದೇಶದ ಉನ್ನಾವ್‌ನ ಮಂದಿರದ ಪ್ರಾಂಗಣವನ್ನು ನಿಧಿಗಾಗಿ ಸರ್ಕಾರವೇ ಅಗೆಯುತ್ತಿರುವುದು ದೇಶದ ಬಹುತೇಕ ಜನರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಸುಮಾರು ೬೫ ವರ್ಷದ ಸಾಧು ಶೋಭನ್ ಸರ್ಕಾರರಿಗೆ ಬಿದ್ದ ಕನಸಿನ ಭಾಗವಾಗಿ ಸರ್ಕಾರ ಪುರಾತತ್ವ ಇಲಾಖೆಯ ಮೂಲಕ ಈ ಉತ್ಖನನ ನಡೆಸಿ ಖಜಾನೆಯನ್ನು ಪಡೆಯಬೇಕೆಂದು ಹವಣಿಸಿದೆ. ದೇವಸ್ಥಾನಗಳಲ್ಲಿ ಭಕ್ತರು ಕೂಡಿಟ್ಟಿರುವ ಬಂಗಾರವನ್ನು ದೋಚುವ ಪ್ರಯತ್ನದಲ್ಲಿ ಸೋತ ನಂತರ ಪೂರ್ವಜರು ಹೂತಿಟ್ಟಿರುವ ಹಣದೆಡೆಗೆ ಕಣ್ಣು ಹಾಕುವ ಹತಾಶ ಯತ್ನದತ್ತ ಹೆಜ್ಜೆ ಇಟ್ಟಿದೆ ಕೇಂದ್ರ. ಕಣ್ಣು ಮುಚ್ಚಿದಾಗಲೆಲ್ಲ ರಾಜಕಾರಣಿಗಳು ಬಂಗಾರವನ್ನೇ ಕಾಣುತ್ತಿದ್ದಾರೆ. ಪೂರಾ ಒಂದು ಸಾವಿರ ಟನ್!
ಅದು ಸಾಧು ಶೋಭನ್ ಸರ್ಕಾರ್‌ರ ಕನಸು. ಹಾಗೆಂದರೆ ಆ ಸಾಧುಗಳಿಗೆ ಕೋಪ ಬಂದುಬಿಡುತ್ತೆ. “ನಾನು ಮಲಗೋದೇ ಇಲ್ಲ; ಇನ್ನು ಕನಸು ಬೀಳೋದು ಹೇಗೆ” ಅಂತಾರೆ. “ನಾನು ಉನ್ನತಾವಸ್ಥೆಯಲ್ಲಿ ಕಂಡುಕೊಂಡ ಸತ್ಯ ಅದು” ಅಂತಾರೆ. ಪುಣೆಯ ಬಳಿ ದಾಭೋಲ್ಕರ್ ಹತ್ಯೆಯಾದಾಗ ಎಡಪಂಥೀಯರೆಲ್ಲ ಕಣ್ಣೀರು ಸುರಿಸಿದ್ದರು. ಮೂಢನಂಬಿಕೆಯ ವಿರುದ್ಧ ಕಾನೂನು ತಂದು ಸಾಧುಗಳನ್ನೆಲ್ಲ ಕಟ್ಟಿ ಹಾಕಿಬಿಡಬೇಕೆಂದು ಆಗ್ರಹಿಸಿದ್ದರು. ಕಾಂಗ್ರೆಸ್ಸು ಆ ಹೋರಾಟಕ್ಕೆ ಬೆಂಬಲ ಕೊಟ್ಟಿತ್ತು. ಸಾಧುಗಳನ್ನು ಮಟ್ಟ ಹಾಕುವ ಅಧಿನಾಯಕಿಯ ಇಟಾಲಿಯನ್ ಅಜೆಂಡಾಕ್ಕೆ ಬಲ ಬಂದಿತ್ತು. ಈಗ ಅದೇ ನಾಯಕರುಗಳು ಸಾಧುವಿನ ಕನಸಿನ ಹಿಂದೆ ಓಡುತ್ತಿದ್ದಾರೆ. ಚಿನ್ನ ದೊರೆಯುವುದಾದರೆ ಮೂಢನಂಬಿಕೆಯೂ ಆಗಬಹುದು. ನನಗಿರುವ ಪ್ರಶ್ನೆ ಒಂದೇ – ಬುದ್ಧಿಜೀವಿಗಳೆಲ್ಲ ಎಲ್ಲಿ ಹೋಗಿದ್ದಾರೆ? ಒಮ್ಮೆ ಉತ್ಖನನ ನಡೆಸಿ ಅವರನ್ನೂ ಹೆಕ್ಕಿ ತೆಗೆಯಬಾರದೇಕೆ?!
ಇರಲಿ. ಚರ್ಚಿಸಬೇಕಾದ ವಿಚಾರ ಇನ್ನೂ ಗಹನವಾದುದು. ಈ ಉತ್ಖನನ ಮತ್ತು ದೋಚುವ ಪರಂಪರೆ ಇಂದು ನಿನ್ನೆಯದಲ್ಲ. ಬಲು ಹಿಂದೆಯೇ ಇಂದಿರಾ ಗಾಂಧಿ ಹೀಗೊಂದು ಪ್ರಯತ್ನ ನಡೆಸಿದ್ದರು. ಆಗ ಸಿಕ್ಕ ನಿಧಿಯ ಕುರಿತಂತೆ ಇಂದಿಗೂ ಯಾರೂ ಬಾಯ್ಬಿಡುತ್ತಿಲ್ಲ. ಹೀಗಾಗಿ ಹರಿದಾಡುತ್ತಿರುವ ಸುದ್ದಿಗಳನ್ನೇ ಸತ್ಯವೆಂದು ನಂಬಬೇಕಿದೆ.
ಅದು ಎಮರ್ಜೆನ್ಸಿಯ ಹೊತ್ತು. ಅಧಿಕಾರವನ್ನು ಕೇಂದ್ರೀಕೃತಗೊಳಿಸಿಕೊಳ್ಳುವ ಹಟಕ್ಕೆ ಬಿದ್ದ ಇಂದಿರಾ ಗಾಂಧಿ ನ್ಯಾಯಾಲಯಗಳು, ಪತ್ರಿಕೆಗಳು, ಜನನಾಯಕರನ್ನೆಲ್ಲ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟರು. ಮಗ ಸಂಜಯ್ ಗಾಂಧಿಯನ್ನು ರಾಜಕೀಯದಲ್ಲಿ ಮುಂಚೂಣಿಗೆ ತರಬೇಕೆಂಬ ಪ್ರಯತ್ನ ಅಲ್ಲಿತ್ತು. ಸಂಜಯ್ ಗಾಂಧಿಯೂ ಅಷ್ಟೇ. ತಾಯಿಯನ್ನೂ ಮೀರಿ ಬೆಳೆದುಬಿಡುವ ಉತ್ಸಾಹದಲ್ಲಿದ್ದರು. ಆಗಲೇ ರಾಜಸ್ಥಾನದ ಜೈಪುರದ ಅಂಬರ್ ಕೋಟೆಯ ಕೆಳಗೆ ಅಗಾಧವಾದ ನಿಕ್ಷೇಪ ಇರುವ ಸುದ್ದಿ ಬಂತು.
ರಾಜಾ ಮಾನ್‌ಸಿಂಗ್‌ನ ಕೋಟೆ ಅದು. ಅಕ್ಬರನ ನಿಷ್ಠ ಸೇನಾನಿಯಾಗಿ ತನ್ನತನವನ್ನೇ ಮಾರಿಕೊಂಡಿದ್ದವ. ಅದೊಮ್ಮೆ ಆತ ಬಂಗಾಳದ ಜೆಸ್ಸೋರಿನ ಕಾಳಿ ಮಂದಿರಕ್ಕೆ ಹೋಗಿದ್ದ. ಅಲ್ಲಿನ ಮೂರ್ತಿಗೆ ಮನಸೋತು ಪೂಜಾರಿಯ ಸಮೇತ ಅದನ್ನು ಹೊತ್ತು ತಂದು ಕೋಟೆಯೊಳಗೆ ಪ್ರತಿಷ್ಠಾಪಿಸಿದನಂತೆ. ಬಹುಶಃ ಕೋಟೆಯೊಳಗೆ ತಾನು ಹೂತಿಟ್ಟಿರುವ ನಿಧಿಯ ರಕ್ಷಣೆಗೆ ಆ ದೇವಿಯನ್ನು ಆವಾಹಿಸಿರಲಿಕ್ಕೂ ಸಾಕು. ಇಷ್ಟಕ್ಕೂ ನಿಧಿ ಏಕೆ ಗೊತ್ತೇನು? ಮುಂದೊಮ್ಮೆ ಅಕ್ಬರನ ದೌರ್ಜನ್ಯದಿಂದ ರಾಜಪರಂಪರೆಯನ್ನು, ವೈಭವವನ್ನು ಕಳೆದುಕೊಳ್ಳಬೇಕಾಗಿ ಬಂದರೆ ಬಳಸಲಿಕ್ಕೆ ಅಂತ ಎಂದು ಅಲ್ಲಿನ ಜನ ಹೇಳುತ್ತಾರೆ. ಅಕ್ಬರನ ಆಳ್ವಿಕೆ ಬದುಕಲು ಯೋಗ್ಯವಲ್ಲವೆಂದು ಗೊತ್ತಿದ್ದೂ ಸಹಕಾರಿಯಾಗಿ ನಿಲ್ಲುವುದು ಎಂಥ ತುಚ್ಛ ಅವಸ್ಥೆ ಅಲ್ಲವೇ?
ಹ್ಞಾಂ! ಅಂದಹಾಗೆ ರಾಜಸ್ಥಾನದ ಆ ಕೋಟೆಗೆ ಹೋದರೆ ಇಂದಿಗೂ ಗೈಡ್‌ಗಳು ಎದೆಕಲಕುವ ಅಂಶ ಹೊರಗೆ ಹಾಕುತ್ತಾರೆ. ಆ ನಿಧಿಯನ್ನು ಕದ್ದವರು ನಾಶವಾಗುವುದಲ್ಲದೇ, ನಿರ್ವಂಶಿಗಳಾಗಿಬಿಡುತ್ತಾರೆಂದು ಶಾಪವಿದೆಯಂತೆ! ಇದು ಮೂಢನಂಬಿಕೆ ಅಂತ ದೋಚುವವರಿಗೆ ಅನ್ನಿಸಬಹುದೇನೋ?
ಅಂತೂ ಅಲ್ಲಿ ನಿಧಿ ಶೋಧ ಶುರುವಾಯಿತು. ಇದಕ್ಕಾಗಿ ಇಂದಿರಾ ಗಾಂಧಿಯವರು ಸೇನೆಯ ಒಂದು ವಿಭಾಗವನ್ನು ಕಳುಹಿಸಿದ್ದರು. ನಿಧಿ ಶೋಧದ ಜಾಗದಲ್ಲಿ ಭಾರಿ ಬಂದೋಬಸ್ತನ್ನೇ ಏರ್ಪಡಿಸಲಾಗಿತ್ತು. ರಾಜಮಾತೆ ಗಾಯತ್ರಿ ದೇವಿಯನ್ನು ಇಂದಿರಾ ಗಾಂಧಿ ಎಮರ್ಜೆನ್ಸಿ ನೆಪದಲ್ಲಿ ಜೈಲಿಗೆ ತಳ್ಳಿದ್ದರಿಂದ ಇದ್ದ ಒಂದು ವಿರೋಧವೂ ಇಲ್ಲದಂತಾಯಿತು.
ಅಚ್ಚರಿ ಏನು ಗೊತ್ತೆ? ೧೯೭೬ರ ಆಗಸ್ಟ್ ೧೧ಕ್ಕೆ ಪಾಕಿಸ್ತಾನದಿಂದ ಅಂದಿನ ಪ್ರಧಾನಮಂತ್ರಿ ಜುಲೀಕರ್ ಅಲಿ ಭುಟ್ಟೋ ಇಂದಿರಾ ಗಾಂಧಿಗೆ ಪತ್ರಬರೆದು “ವಿಭಜನೆಯ ಹೊತ್ತಲ್ಲಿ ಈ ನಿಧಿಯ ಅರಿವಿರಲಿಲ್ಲ. ಈಗ ನೀವು ಅದನ್ನು ಅಗೆದು ತೆಗೆಯುತ್ತಿರುವುದರಿಂದ ನಮಗೂ ಒಂದು ಪಾಲಿದೆ ಎನ್ನುವುದನ್ನು ಮರೆಯಬೇಡಿ” ಎಂದಿದ್ದರು. ಈಗಲೂ ಚಿನ್ನ ದಕ್ಕುವ ಮುನ್ನ ರಾಜ್ಯ ಮತ್ತು ಕೇಂದ್ರಗಳು ತಂತಮ್ಮ ಪಾಲಿಗೆ ಇಷ್ಟಿಷ್ಟೆಂದು ಕಿತ್ತಾಡುತ್ತಿಲ್ಲವೇ? ಹಾಗೆ. ಇಂದಿರಾ ಗಾಂಧಿಗೆ ಸಾವಿರ ಚೇಳುಗಳು ಒಮ್ಮೆಗೆ ಕುಟುಕಿದಂತಾಯ್ತು. ಅವರು ಅನೇಕ ವಕೀಲರನ್ನು ಮಾತನಾಡಿಸಿ ಪಾಕಿಸ್ತಾನಕ್ಕೇನೂ ಕೊಡಬೇಕಿಲ್ಲವೆನ್ನುವುದನ್ನು ಖಾತ್ರಿಪಡಿಸಿಕೊಂಡರಂತೆ! ಅಷ್ಟೇ ಅಲ್ಲ, ಅಲ್ಲಿ ನಿಧಿಯೇನೂ ಇರಲಿಲ್ಲ ಎಂದು ಮಾರುತ್ತರ ಕಳುಹಿಸಿದರು.
ಆದರೆ ಅಲ್ಲಿ ನಿಧಿ ಸಿಕ್ಕಿತೇ ಇಲ್ಲವೇ ಎಂಬುದು ನಿಗೂಢ. ಈ ಕುರಿತಂತೆ ಊಹಾಪೋಹಗಳಂತೂ ಹರಿದಾಡುತ್ತಿವೆ.
ಹೋಗಲಿ ಬಿಡಿ. ಜಗತ್ತೆಲ್ಲಾ ಶಾಂತಿಯಿಂದ ನೆಮ್ಮದಿಯಿಂದ ಬದುಕಲಿ. ಈಗ ಮತ್ತಷ್ಟು ನಿಧಿಯ ಹುಡುಕಾಟ ಶುರುವಾಗಿದೆ. ಅನೇಕ ಮಂದಿರಗಳನ್ನೂ, ಹಳೆಯ ಮನೆಗಳನ್ನೂ ನಿಧಿಗಾಗಿ ಕೆಡವಿ ಹಾಳು ಮಾಡುವ ಲೂಟಿಕೋರರಿಗೂ ಸರ್ಕಾರಕ್ಕೂ ಅದೇನು ವ್ಯತ್ಯಾಸವೆಂದೇ ನನಗೆ ಗೊತ್ತಾಗುತ್ತಿಲ್ಲ. ಇತ್ತ ಉನ್ನಾವ್‌ನಲ್ಲಿ ಉತ್ಖನನ ಆರಂಭವಾಗುತ್ತಿದ್ದಂತೆ ಅತ್ತ ಅನೇಕ ಹಳೆಯ ಕೋಟೆಗಳನ್ನು ಕಿಡಿಗೇಡಿಗಳು ಅಗೆಯಲು ಶುರುವಿಟ್ಟಿದ್ದಾರೆ. ಇದಕ್ಕೆ ಸರ್ಕಾರವೇ ಅಧಿಕೃತ ಪರವಾನಗಿ ಕೊಟ್ಟಂತಾಗಿದೆ.
ಇಷ್ಟಕ್ಕೂ ಭೂಮಿಯೊಳಗೆ ಸಿಗುವ ವಸ್ತುಗಳು ಯಾರಿಗೆ ಸೇರಬೇಕು ಅನ್ನೋದು ಪ್ರಶ್ನೆ. ಅಮೆರಿಕದಲ್ಲಿ ನೂರು ವರ್ಷಗಳ ಹಿಂದಿನ ಮನೆಯನ್ನೇ ಅತ್ಯಂತ ಪುರಾತನವೆಂದು ಭಾವಿಸಿ ಗೌರವಿಸಲಾಗುತ್ತದೆ. ನಮ್ಮಲ್ಲಿ ಸಾವಿರ ವರ್ಷಗಳ ಹಳೆಯ ಮಂದಿರವನ್ನೂ ಕೋಟೆಯನ್ನೂ ಉರುಳಿಸಿ ಚಿನ್ನ ಬಗೆಯಲಾಗುತ್ತದೆ! ಪುರಾತತ್ವ ಇಲಾಖೆಯೂ ವಿಚಿತ್ರವಾಗಿದೆ. ತನಗೆ ಸಂಬಂಧಪಟ್ಟ ಜಾಗದ ನೂರಿನ್ನೂರು ಮೀಟರ್ ದೂರದಲ್ಲಿ ಯಾವ ಕಟ್ಟಡ ನಿರ್ಮಾಣಕ್ಕೂ ಅವಕಾಶ ಕೊಡುವುದಿಲ್ಲ. ಆದರೆ ಸರ್ಕಾರ ಹೇಳಿದರ ಯಾವ ಭೂಮಿಯನ್ನು ಬೇಕಿದ್ದರೂ ಅಗೆದು ಬಿಸಾಡುತ್ತದೆ. ಅಷ್ಟೇ ಅಲ್ಲ, ತನಗೆ ಸಿಕ್ಕ ಒಂದೊಂದು ಇಟ್ಟಿಗೆಯನ್ನೂ ಜತನದಿಂದ ಕಾಪಾಡುತ್ತದೆ. ಚಿನ್ನದ ಖಜಾನೆಯನ್ನು ಮಾತ್ರ ಊರಿಗಿಷ್ಟು, ರಾಜ್ಯಕ್ಕಿಷ್ಟು, ಕೇಂದ್ರಕ್ಕಿಷ್ಟು ಅಂತ ಹಂಚಲು ತಯಾರಾಗಿಬಿಟ್ಟಿದೆ.
ಮಾಧ್ಯಮಗಳೂ ವಿಚಿತ್ರವಾಗಿ ವರ್ತಿಸುತ್ತಿವೆ. ಯೋಗವೆಂಬ ವಿಜ್ಞಾನದ ಬೋಧನೆ ಮಾಡಿ ಜನರನ್ನು ನಿರೋಗಿಯಾಗಿಸುವ ಬಾಬಾ ರಾಮದೇವ್‌ರನ್ನು ಠಕ್ಕ ಅಂತ ಕರೆಯುತ್ತವೆ. ರವಿಶಂಕರ್ ಗುರೂಜಿ, ಮಾತಾ ಅಮೃತಾನಂದಮಯಿ ಅವರನ್ನು ಅನುಮಾನದ ಕಂಗಳಲ್ಲಿ ನೋಡುತ್ತವೆ. ಕನಸು ಕಂಡ ಸರ್ಕಾರಕ್ಕೆ ಪತ್ರ ಬರೆದ ಸಾಧುವಿನ ಬಗ್ಗೆ ಅಪಾರ ಗೌರವ-ಭಕ್ತಿ ತೋರ್ಪಡಿಸುತ್ತವೆ. ಏನೆಂದೇ ಅರ್ಥವಾಗುತ್ತಿಲ್ಲ. ಇಷ್ಟು ಮಾತ್ರಕ್ಕೂ ಪೇಜಾವರ ಶ್ರೀಗಳು ಕನಸು ಕಂಡು ನರೇಂದ್ರ ಮೋದಿ ಉತ್ಖನನಕ್ಕೆ ಆದೇಶಿಸಿದ್ದರೆ ಏನೆಲ್ಲ ಆಗಿಬಿಡುತ್ತಿತ್ತು ಅಂತ ಊಹಿಸಿಕೊಳ್ಳಿ.. ಎದೆ ಒಡೆದೇ ಹೋಗುತ್ತೆ.
ಉನ್ನಾವ್‌ನಲ್ಲಿ ಈಗ ಏಳು ದಿನಗಳ ಉತ್ಖನನದ ನಂತರ ಒಂದಷ್ಟು ಕಬ್ಬಿಣದ ಚೂರುಗಳು, ಗಾಜಿನ ಬಳೆಗಳು ಸಿಕ್ಕಿವೆ. ಅದು ೧೯ನೇ ಶತಮಾನಕ್ಕೆ ಸೇರಿದ್ದಿರಬಹುದೆಂದು ಅಂದಾಜಿಸಲಾಗುತ್ತಿದೆ (ಹಂಪಿಯಲ್ಲಿ ಅಗೆದರೆ ೧೬ನೇ ಶತಮಾನಕ್ಕೆ ಸೇರಿದ ಇಟ್ಟಿಗೆಗಳೇ ಸಿಗುತ್ತವಂತೆ!). ಶೋಭನ್ ಸರ್ಕಾರ್‌ರ ಕನಸು ನನಸಾಗುವುದೇ ಇಲ್ಲವೋ ಬೇರೆ ಮಾತು. ಆದರೆ ದೇಶವಂತೂ ನೂರು ವರ್ಷ ಹಿಂದೆ ಹೋಗಿ ನಿಂತು ಬಿಡ್ತು. ನಮ್ಮ ಪುರಾತತ್ವ ಇಲಾಖೆ ಈಗಲೂ ಕನಸಿನ ಹಿಂದೆ ಓಡುವುದು ಬಿಟ್ಟು ಸೀತಾರಾಮ್ ಗೋಯೆಲ್‌ರ ಆಧಾರ ಪೂರ್ಣ”HINDU TEMPLES: WHAT HAPPENED TO THEM’ ಕೃತಿಯನ್ನು ಅನುಸರಿಸಿ ಒಂದಷ್ಟು ಮಸೀದಿಗಳ ಸುತ್ತ ಉತ್ಖನನ ನಡೆಸಿದರೆ ಭಾರತದ ಇತಿಹಾಸವನ್ನು ಹೊಸದಾಗಿ ರಚಿಸಬಹುದು. ಏನಂತೀರಿ?

 

 

Comments are closed.