ವಿಭಾಗಗಳು

ಸುದ್ದಿಪತ್ರ


 

ಕ್ರಾಂತಿ ದೀವಿಗೆಯ ಕಿಡಿಗಳು

‘ಇಂದಿನ ಯುವಕರಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ’ ಹಾಗಂತ ಎಲ್ಲೆಡೆ ಕೂಗು ಕೇಳಿಬರುತ್ತಲೇ ಇರುತ್ತದೆ. ಇಷ್ಟಕ್ಕೂ ದೇಶಭಕ್ತಿ ಅಂದರೇನು? ದೇಶದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದೇ? ದೇಶದ ಇತಿಹಾಸವನ್ನು ಅರೆದು ಕುಡಿದಿರುವುದೇ? ಅಥವಾ ದೇಶದ ಯಾವ ಮೂಲೆಯಲ್ಲಿ ಏನಾದರೂ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವುದೇ? ಸರಿಯಾದ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಒಟ್ಟಾರೆಯಾಗಿ ದೇಶದ ಕುರಿತಂತೆ ಕಾಳಜಿ ಕಡಿಮೆಯಾಗುತ್ತಿದೆ ಎನ್ನುವುದಂತೂ ನಿಚ್ಚಳವಾಗಿ ಅರಿವಾಗುತ್ತಿದೆ.

ದೇಶಪ್ರೇಮಕ್ಕೂ ದೇಶಭಕ್ತಿಗೂ ಸಾಕಷ್ಟು ಅಂತರವಿದೆ. ಬಾಹ್ಯ ಸೌಂದರ್ಯವನ್ನು ಆರಾಧಿಸುವವರು ಪ್ರೇಮಿಗಳಷ್ಟೇ ಆಗಬಲ್ಲರು. ಆಂತರ್ಯದ ಸೌಂದರ್ಯವನ್ನು ಗ್ರಹಿಸುವವರು ಮಾತ್ರ ಭಕ್ತರಾಗಬಲ್ಲರು. ಭಕ್ತ ಭಗವಂತನಿಂದ ದೂರಾಗಲಾರ. ಆದರೆ ಕಾಲಕಳೆದಂತೆ ಪ್ರೇಮಿ ಸೌಂದರ್ಯದ ಮೇಲೆ ಆಸಕ್ತಿ ಕಳೆದುಕೊಂಡುಬಿಡುತ್ತಾನೆ. ಭಾರತಕ್ಕೆ ಆಗಿರುವುದು ಇದೇ ಸಮಸ್ಯೆ. ಯಾರು ಭಾರತದ ಆಂತರಿಕ ಸಕ್ತಿ ಸಾಮರ್ಥ್ಯಗಳೊಮ್ದಿಗೆ ಪರಿಚಿತನಾಗಿದ್ದಾನೋ ಆತ ಇಂದಿಗೂ ಬಲಿಷ್ಠನಾಗಿಯೇ ಇದ್ದಾನೆ. ಆದರೆ ಯಾರು ಇಲ್ಲಿನ ರಸ್ತೆಗಳನ್ನು, ಕಾಂಕ್ರೀಟು ಕಟ್ಟಡಗಳನ್ನು, ಹೆಚೆಂದರೆ ನದಿ ಅರಣ್ಯಗಳನ್ನು ಕಂಡು ರೋಮಾಂಚಿತನಾಗುತ್ತಿದ್ದನೋ ಅವನು ಮಾತ್ರ ಹತಾಶನಾಗುತ್ತಿದ್ದಾನೆ. ದಿನಕಳೆದಂತೆ ಅವನಿಗೆ ಭಾರತದ ಕೆಡುಕುಗಳೇ ಬೆಟ್ತವಾಗಿ ಕಾಣುತ್ತಿದೆ ಹೊರತು, ಇದರ ಸತ್ತ್ವ ಅವನ ಕಣ್ಣಿಗೆ ಗೋಚರವಾಗುತ್ತಲೇ ಇಲ್ಲ. ಅಂತಃ ಸತ್ವವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸದ ಹೊರತು ದೇಶಭಕ್ತಿಯನ್ನು ಜಾಗೃತಗೊಳಿಸುವುದು ಅಸಾಧ್ಯವೇ ಸರಿ.

ಭಾರತದ ದೇಶಭಕ್ತಿಯ ಪರಂಪರೆ ಇಂತಹುದೇ ಜಾಗೃತಿಯ ಪರ್ವ. ಆಂಗ್ಲರು ಮಾನಸಿಕವಾಗಿ ಭಾರತೀಯರನ್ನು ಉಧ್ವಸ್ತಗೊಳಿಸಿದರಲ್ಲ, ಆಗ ಮತ್ತೆ ಭಾರತದಲ್ಲೊಂದು ಕ್ರಾಂತಿಯೆಬ್ಬಿಸಿದ ಸ್ವಾಮಿ ವಿವೇಕಾನಂದರು ಭಾರತದ ಅಂತಃಸತ್ತ್ವದ ನಾಡಿ ಹಿಡಿದೇ ಜಾಗೃತಿಯ ಕೈಂಕರ್ಯ ಕೈಗೊಂಡಿದ್ದು. ನಿಜವಾದ ಭಾರತವನ್ನು ಭಾರತೀಯರಿಗೆ ತೋರಿಸಿಕೊಟ್ಟ ಸ್ವಾಮೀಜಿ ಯುವಕರನ್ನು ಪ್ರೇಮಿಗಳ ಪಾಳಯದಿಂದ ಭಕ್ತರ ಪಾಳಯಕ್ಕೆ ಕರೆತಂದು ನಿಲ್ಲಿಸಿದರು. ಹೀಗಾಗಿಯೇ ಭಾರತದ ಹೊಸ ರಾಷ್ಟ್ರೀಯತೆಯ ಜನಕನೆಂದು ಅವರನ್ನು ತಿಲಕರು ಗೌರವಿಸಿದ್ದು.

ಸ್ವಾಮೀಜಿಯ ಪ್ರಭಾವ ಅದೆಷ್ಟು ತೀವ್ರವಾಗಿತ್ತೆಂದರೆ ಹೇಮಚಂದ್ರದಾಸ್ ಕಾನುಂಗೋ ತನ್ನ ಅಸ್ತಿಯನ್ನೆಲ್ಲ ಮಾರಿ ದೇಶಸೇವೆಗೆ ಪರಿಪೂರ್ಣಪ್ರಮಾಣದಲ್ಲಿ ತೊಡಗಿಬಿಟ್ಟ. ಸಂತ ರಾಮತೀರ್ಥರು ದೇಹ-ದೇಶವನ್ನು ಒಂದಾಗಿಸಿಕೊಂಡು ಮಿಂಚಿನ ಸಂಚಾರ ಮಾಡುತ್ತ ಜಾಗೃತಿಗೆ ತೊಡಗಿಕೊಂಡಿದ್ದು ವಿವೇಕಾನಂದರ ಮಾತುಗಳ ಪ್ರಭಾವದಿಂದಲೇ. ಯೌವನಕ್ಕೆ ಕಾಲಿಡುವ ಮುನ್ನವೇ ವಿವೇಕಾನಂದರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಮನೆಬಿಟ್ಟು ಓಡಿ ಹೋದ ಬಾಲಕ ಮುಂದೆ ಒಬ್ಬ ಶ್ರೇಷ್ಠ ಕ್ರಾಂತಿಕಾರಿಯಾಗಿ ನಿರ್ಮಾಣಗೊಂಡ. ಆ ಕ್ರಾಂತಿಕಾರಿ ಮತ್ಯಾರೂ ಅಲ್ಲ, ಸುಭಾಷ್ ಚಂದ್ರ ಬೋಸರು.

ಅವರು ಯಾವಾಗಲೂ ಹೇಳುತ್ತಿದ್ದರು ‘ಸ್ವಾಮಿ ವಿವೇಕಾನಂದರು ಬದುಕಿದ್ದಿದ್ದರೆ ನಾನು ಅವರ ಪದತಲದಲ್ಲಿ ಇರುತ್ತಿದ್ದೆ’ ಅಂತ. ಅಂತರಂಗದ ಜಾಗೃತಿಯೇ ನಿಜವಾದ ಜಾಗೃತಿ. ಹಾಗಂತಲೇ ಸ್ವಾಮಿ ವಿವೇಕಾನಂದರ ಚಿಂತನೆಗಳ ಓಘಕ್ಕೆ ಸಿಕ್ಕವರೆಲ್ಲ ಭಾರತದ ಅಪ್ಪಟ ಅಭಿಮಾನಿಗಳಾಗಿಬಿಡುತ್ತಿದ್ದುದು. ಸುಭಾಷ್ ಚಂದ್ರ ಬೋಸರೂ ಇದಕ್ಕೆ ಹೊರತಾಗಿರಲಿಲ್ಲ. ತಂದೆಯ ಮಾತನ್ನು ನೆರವೇರಿಸಲೆಂದು ಐಸಿಎಸ್ ಪರೀಕ್ಷೆ ಬರೆದ ಹುಡುಗ ಅತ್ಯುನ್ನತ ಶ್ರೇಣಿ ಪಡೆದು ಪಾಸಾದ. ಅನಂತರ ಸರ್ಕಾರಿ ಹುದ್ದೆಯನ್ನು ಧಿಕ್ಕರಿಸಿ ದೇಶದ ಸೇವೆಗೆ ಕಟಿಬದ್ಧನಾಗಿ ನಿಂತ. ಗಾಂಧೀಜಿಯವರ ಜೊತೆ ಸೇರಿದ. ಗೋಖಲೆಯವರ ಅನುಯಾಯಿಯಾದ. ಕಂಗ್ರೆಸ್ಸಿನೊಳಗೆ ಕ್ರಾಂತಿಯ ಅಲೆ ಎಬ್ಬಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ. ಅಚ್ಚರಿಯ ಸಂಗತಿ ಏನು ಗೊತ್ತೆ? ಆ ಒಂದು ಕಾಲಘಟ್ಟದಲ್ಲಿ ಗಾಂಧೀಜಿಗೆ ಸರಿಸಮನಾಗಿ ಖ್ಯಾತಿ ಪಡೆದಿದ್ದ ಮತ್ತೊಬ್ಬ ವ್ಯಕ್ತಿ ಸುಭಾಷ್ ಚಂದ್ರ ಬೋಸರೆಂಬುದರಲ್ಲಿ ಅನುಮನವೇ ಇಲ್ಲ.

ಆ ವೇಳೆಗೆ ಖ್ಯಾತಿ ಹಾಗೇ ಮುಂದುವರೆದಿದ್ದರೆ, ಸುಭಾಷರು ವಿದೇಶಕ್ಕೆ ಹೋಗದೆ ಇಲ್ಲಿಯೇ ಇದ್ದಿದ್ದರೆ ಬಹುಶಃ ಮೊದಲ ಪ್ರಧಾನಿ ಅವರೇ ಆಗಿರುತ್ತಿದ್ದರು. ಬಿಡಿ… ಅದು ವಿಧಿಯ ಇಚ್ಛೆ ಆಗಿರಲಿಲ್ಲ. ಸುಭಾಷರು ಸ್ವಾತಂತ್ರ್ಯ ವೀರ ಸಾವರ್ಕರರ ಮಾತಿನಂತೆ ವಿದೇಶಕ್ಕೆ ಹೋದರು. ಅಲ್ಲಿನ ಭಾರತೀಯ ಯುದ್ಧ ಕೈದಿಗಳನ್ನು ಸೇರಿಸಿಕೊಮ್ಡು ಸೈನ್ಯ ಕಟ್ಟಿದರು. ಹಿಟ್ಲರ್, ಮುಸೋಲಿನಿ ಅವರಂಥವರ ನದುವೆ ನಿಂತು ಎದೆಯೆತ್ತಿ ಭಾರತದ ಕುರಿತು ಮಾತನಾಡಿದರು. ಅದು ಅವರ ಸಾಮರ್ಥ್ಯ. ಅವರನ್ನು ನೋಡಿಯೇ ಸೈನಿಕರಿಗೆ ಸ್ಫೂರ್ತಿ ಉಕ್ಕುತ್ತಿದ್ದ ಅನೇಕ ಘಟನೆಗಳನ್ನು ಜೊತೆಗಾರರು ಬಣ್ಣಿಸುತ್ತಾರೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ‘ನೀವು ರಕ್ತ ಕೊಡಿ, ನಾನು ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಅವರು ಹೇಳಿದ ಮಾತು ಜನರಲ್ಲಿ ದೇಶಭಕ್ತಿಯ ಬುಗ್ಗೆಯನ್ನೇ ಚಿಮ್ಮಿಸಿತ್ತಂತೆ. ಒಮ್ಮೆಯಂತೂ ಅವರ ಭಾಷಣ  ಕೇಳಿದ ವೃದ್ಧೆಯೊಬ್ಬಳು ತನ್ನ ಚಿನ್ನದ ಬಳೆಗಳನ್ನು ತೆಗೆದುಕೊಟ್ಟಿದ್ದಳಂತೆ, ನಿಧಿ ಸಮರ್ಪಣೆಯಾಗಿ!

ಒಂದೆಡೆ ಭಾರತೀಯರೆಲ್ಲ ಶಾಂತಿಯ ಕದನ ಎಂದು ಕೂತಿದ್ದಾಗ ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಬಂದೂಕಿನ ಘರ್ಜನೆ ಮಾಡಿಸಲು ಸುಭಾಷರು ತಯಾರಾಗಿ ನಿಂತಿದ್ದರು. ಹಾಗೆ ನೊಡಿದರೆ ಆಂಗ್ಲರು ಹೆದರಿದ್ದು ಎರಡನೆಯದಕ್ಕೇ. ಜಾಗತಿಕ ಮಟ್ಟದಲ್ಲಿ ತಮ್ಮನ್ನು ಮಟ್ಟಹಾಕಲು ಕಾತರಿಸುತ್ತಿರುವವರ ಜೊತೆಗೆ ಭಾರತೀಯರೂ ಕೈ ಜೋಡಿಸಿದರೆ ತಮ್ಮ ಗತಿ ನೆಟ್ಟಗಾಗಲಿಕ್ಕಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿಯೇ ಅವರು ಸುಭಾಷರನ್ನು ಶತಾಯಗತಾಯ ತುಳಿಯಬೇಕೆಂದು ಕಾತರಿಸಿದ್ದರು. ಅದಕ್ಕೆ ಪೂರಕವಾಗಿ ಇಲ್ಲಿ ಅನೇಕ ಭಾರತೀಯ ನಾಯಕರೂ ಸುಭಾಷರ ವಿರುದ್ಧವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರು. ಅಂತೂ ದ್ವಿತೀಯ ಮಹಾಯುದ್ಧದಲ್ಲಿ ಆಂಗ್ಲರ ಕೈಮೇಲಾಗಿ ಶತ್ರುಪಕ್ಷಗಳು ಸೋಲನ್ನಪ್ಪುವ ವೇಳೆಗೆ ಇತ್ತ ಸುಭಾಷರ ಇಂಡಿಯನ್ ನ್ಯಾಷನಲ್ ಆರ್ಮಿ ಹೈರಾಣಾಗಿತ್ತು. ತನ್ನ ಕೊನೆಯ ಉಸಿರಿನವರೆಗೂ ಸೈನ್ಯ ಕಾದಾಡಿತು. ಸೆರೆ ಸಿಕ್ಕವರನ್ನು ಆಂಗ್ಲರು ವಿಚಾರಣೆಗೆ ಗುರಿಪಡಿಸಿದರೆ ಆಗ ಮತ್ತೊಂದು ಕ್ರಾಂತಿಯೇ ನಡೆದುಹೋಯಿತು. ಈ ಸೈನಿಕರನ್ನು ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲವೆಂದು ನೌಕಾಸೇನೆ. ಈ ವಿದ್ರೋಹ ಆಂಗ್ಲರ ಪಲಿಗೆ ನುಂಗಲಾರದ ತುಪ್ಪವಾಯ್ತು. 1857ರ ಸಂಗ್ರಾಮ ಮರುಕಳಿಸಿದರೆ ಬದುಕುವ ಖಾತ್ರಿಯಿಲ್ಲವೆಂದರಿತ ಆಂಗ್ಲರು ತಮ್ಮ ‘ಸೇಫ್ ಎಕ್ಸಿಟ್’ಗೆ ಮಾರ್ಗ ಹುಡುಕಲಾರಂಭಿಸಿದರು. ಆಗ ಮೌಂಟ್ ಬ್ಯಾಟನ್ ಅವರಿಗೆ ವರವಾಗಿ ಸಿಕ್ಕ ಅಖಂಡ ಭಾರತವನ್ನು ಖಂಡತುಂಡ ಮಾಡಿ ದೇಶವನ್ನು ಬಿಟ್ಟುಹೋಗುವ ಯೋಜನೆ ರೂಪಿಸಲಾಯ್ತು. ಸಾತ್ವಿಕ ಶಕ್ತಿಗಳು ಅಮಾವಾಸ್ಯೆಯಂದು ಬೇಡಬೆಡವೆಂದರೂ ಆಗಸ್ಟ್ 14ರ ಮಧ್ಯ ರಾತ್ರಿಯಂದೇ ನಮ್ಮ ಕೈಗೆ ಸ್ವಾತಂತ್ರ್ಯ ನೀಡಿ ಹೊರಟರು.

1893ರ ಚಿಕಾಗೋ ಭಾಶಣದ ನಂತರ ಹೊರಟ ವಿವೇಕಾನಂದರ ದೇಶಭಕ್ತಿಯ ಕಿಡಿ 1947 ಆಗಸ್ಟ್ 14ರ ರಾತ್ರಿ  ಜ್ವಾಜಲ್ಯಮಾನವಾಗಿ ಸುಭಾಷರ ಸ್ಮೃತಿಯೊಂದಿಗೆ ಬೆಳಗಿತು. ಕಾಕತಾಳೀಯವೇನೋ ನೋಡಿ. ವಿವೇಕಾನಂದರು ಸುಭಾಷರು ಇಬ್ಬರ ಜಯಂತಿಯೂ ಜನವರಿಯಲ್ಲೇ. ಒಬ್ಬರ ನೆನಪಿನೊಂದಿಗೇ ಮತ್ತೊಬ್ಬರ ನೆನಪೂ ಸೇರಿರುವ ಅಪರೂಪದ ಬದುಕು ಅವರಿಬ್ಬರದು. ಅವರೀರ್ವರ ಸ್ಮೃತಿ ನಮ್ಮನ್ನೂ ದೇಶಪ್ರೇಮದಿಂದ ದೇಶಭಕ್ತಿಯೆಡೆಗೆ ಒಯ್ದರೆ ಅದು ನಿಜವಾದ ಸಾರ್ಥಕತೆ.

Comments are closed.