ವಿಭಾಗಗಳು

ಸುದ್ದಿಪತ್ರ


 

ಕ್ಷಾಮಕ್ಕೆ ಪರಿಹಾರ ಮನೆಯ ಅಂಗಳದಲ್ಲಿದೆ!

ಅರಣ್ಯವನ್ನು ನಾಶಗೈದು ಕೃಷಿಗೆ ಭೂಮಿಯನ್ನು ಚೊಕ್ಕಗೊಳಿಸುತ್ತಿದ್ದಂತೆ ಎಲೆಗಳಿಂದಾವೃತವಾದ ಭೂಮಿಯ ಮೇಲ್ಮೈ ಕೂಡ ಕಡಿಮೆಯಾಗುತ್ತದೆ. ನಾವು ಬೆಳೆಯುವ ಬೆಳೆಗಳ ಬೇರು ಆಳಕ್ಕಿಳಿಯುವುದಿಲ್ಲವಾದ್ದರಿಂದ ಈ ಗಿಡಗಳು ವಾತಾವರಣದ ತಂಪಿಗೆ ವಿಶೇಷವಾಗಿ ಏನನ್ನೂ ಸೇರಿಸಲಾರವು. ಪರಿಣಾಮ ಮಳೆ ನೀರಿಗೆ ತತ್ವಾರ.

‘ಹುಲಿ ಉಳಿಸಿ’ ಯೋಜನೆ ಬಲು ಜೋರಾಗಿ ನಡೆಯೋದು ನಿಮಗೆ ಗೊತ್ತೇ ಇದೆ. ಅದಕ್ಕೆ ಅನೇಕ ಸಿನಿಮಾ ನಟ-ನಟಿಯರು ರಾಯಭಾರಿಗಳಾಗಿ ಬರುತ್ತಾರೆ. ಸರ್ಕಾರವೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಘನ ಕಾಡನ್ನು ಹೊಂದಿರುವ ಎಲ್ಲ ರಾಜ್ಯಗಳ ರಾಜಕಾರಣಿಗಳೂ ಕೇಂದ್ರ ಸರ್ಕಾರದಿಂದ ಇದಕ್ಕಾಗಿಯೇ ದೊಡ್ಡ ಮೊತ್ತದ ಅನುದಾನ ಕೇಳುತ್ತಲೇ ಇರುತ್ತದೆ. ಈ ರಾಜಕಾರಣಿಗಳನ್ನು ಕಾಡು ಉಳಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಕೇಳಿ ನೋಡಿ. ಅವರು ತಕ್ಷಣಕ್ಕೆ ಸಿಟ್ಟಾಗುತ್ತಾರೆ. ಅರಣ್ಯ ಪ್ರದೇಶದ ಮಿತಿಯಿಂದಾಗಿಯೇ ಹೊಸ ಕಾರ್ಖಾನೆಗಳು ಬರುತ್ತಿಲ್ಲ, ಮೂಲ ಸೌಕರ್ಯಗಳ ಅಭಿವೃದ್ಧಿಯಾಗುತ್ತಿಲ್ಲ, ಮೈನಿಂಗ್ ನಡೆಯುತ್ತಿಲ್ಲ. ವಿಕಾಸಕ್ಕೆ ಅರಣ್ಯ ಪ್ರದೇಶವೆಂದು ಚೌಕಟ್ಟು ಹಾಕಿರೋದೇ ದೊಡ್ಡ ಸಮಸ್ಯೆ ಎಂದು ಬಿಡುತ್ತಾರೆ. ತರ್ಕ ಬದ್ಧವಾಗಿ ಯೋಚಿಸಿ, ಕಾಡು ಉಳಿಯದೇ ಹುಲಿಯ ಸಂತಾನ ಉಳಿವುದೇನು? ಹಾಗಿಲ್ಲದೇ ಕೂಡಿ ಹಾಕಿ ಉಳಿಸಿದ ಹುಲಿಯನ್ನು ನಿಜಕ್ಕೂ ಹುಲಿಯೆನ್ನಬಹುದೇನು?

ಕಾಗೋಡು ತಿಮ್ಮಪ್ಪನವರು ಪತ್ರಕರ್ತರೊಂದಿಗೆ ಮಾತನಾಡುತ್ತ ‘ಪಶ್ಚಿಮ ಘಟ್ಟದಲ್ಲಿ ನೀರು ಇಲ್ಲವಾದರೇನಂತೆ ಸಮುದ್ರದಿಂದ ತರ್ತೀವಿ’ ಎಂಬ ಉಡಾಫೆಯ ಮಾತುಗಳನ್ನೊಮ್ಮೆ ಆಡಿದ್ದರು. ‘ಮನುಷ್ಯನೇ ಇಲ್ಲವಾದ ಮೇಲೆ ಮರಗಳಿದ್ದೂ ಏನುಪಯೋಗ? ಜಗತ್ತು ಮರಗಳು-ಜಿಂಕೆಗಳಿಂದಲೇ ಆಳಲ್ಪಡಬೇಕೇನು? ಲಕ್ಷಾಂತರ ವರ್ಷಗಳಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ನಡೆದಿದೆ, ಇದಕ್ಕೂ ಅರಣ್ಯ ನಾಶಕ್ಕೂ ಸಂಬಂಧವೇ ಇಲ್ಲ’ ಎಂದು ಅವರು ಬಲವಾದ ನುಡಿಗಳಲ್ಲಿ ಹೇಳಿದ್ದನ್ನು ಕಳೆದ ವರ್ಷ ನವೆಂಬರ್ನ ‘ದಿ ನ್ಯೂಸ್ ಮಿನಿಟ್’ ಸಂಚಿಕೆ ವರದಿ ಮಾಡಿದೆ. ಮಲೆನಾಡಿನ ಹೃದಯ ಭಾಗದಿಂದ ಬಂದ ಪ್ರಜ್ಞಾವಂತರೆನಿಸಿಕೊಂಡವರೇ ಹೀಗೆಲ್ಲಾ ಮಾತನಾಡಬಹುದಾದರೆ ಇನ್ನು ಕ್ಯಾಬಿನೆಟ್ಟಿನಲ್ಲಿ ಕುಳಿತ ಇತರೆ ದಿಗ್ಗಜರ ಕಥೇಯೇನು? ಯೋಚಿಸಿ. ನಾವು ಅದೆಷ್ಟು ಸುರಕ್ಷಿತ ಕೈಗಳಲ್ಲಿ ರಾಜ್ಯವನ್ನಿಟ್ಟಿದ್ದೇವೆ ಅಂತ.

1.cycling-in-western-ghats-misty-roads

 

ಭಾರತದಲ್ಲಾಗುವ ಒಟ್ಟೂ ಮಳೆಯ ಮುಕ್ಕಾಲು ಭಾಗದಷ್ಟು ಜೂನ್ನಿಂದ ಸಪ್ಟೆಂಬರ್ ನಡುವಿನ ಬೇಸಗೆಯ ಮಾನ್ಸೂನ್ನಿಂದಲೇ ಆಗುವಂಥದ್ದು. ಆದರೆ ಕಳೆದ ಒಂದು ದಶಕದಲ್ಲಿ ಈ ಮಳೆಯಲ್ಲಿ ಭಾರೀ ಪ್ರಮಾಣದ ಕಡಿತ ಕಂಡು ಬಂದಿದೆ. ಐಐಟಿ ಮುಂಬೈನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಧ್ಯಾಪಕರಿಬ್ಬರು ಈ ಕುರಿತಂತೆ ವಿಶೇಷ ಅಧ್ಯಯನ ನಡೆಸಿ ಉತ್ತರ ಮತ್ತು ಈಶಾನ್ಯ ಭಾರತಗಳಲ್ಲಿ ಮಳೆ ಕಡಿಮೆಯಾಗಲು ಅರಣ್ಯನಾಶವೇ ಪ್ರಮುಖ ಕಾರಣ ಎಂದಿದ್ದಾರೆ. ಇದು ಸಹಜವಾಗಿಯೇ ಅರ್ಥವಾಗುವಂಥದ್ದು. ಮಳೆ ಸುರಿಸುವ ಮೋಡಗಳು ಹರಳುಗಟ್ಟಿ ನೀರಾಗಿ ಸುಮ್ಮ ಸುಮ್ಮನೆ ಸುರಿಯುವುದೇನು? ವೇಗವಾಗಿ ಸಾಗುತ್ತಿರುವ ಈ ಮೋಡಗಳನ್ನು ತಡೆಯುವ ಪರ್ವತಗಳಿರಬೇಕು. ಇಲ್ಲವೇ ಓಡುತ್ತಿರುವ ಮೋಡಗಳನ್ನು ಹಿಡಿದೆಳೆದು ತರಬಲ್ಲ ತೇವಾಂಶವನ್ನಾದರೂ ಭೂಮಿಯ ಮೇಲೆ ಸೃಷ್ಟಿಸಬೇಕು. ಈ ತೇವಾಂಶವನ್ನು ‘ಇವಾಪೋಟ್ರಾನ್ಸ್ಪಿರೇಶನ್’ ಅಂತಾರೆ. ಪದ ದೊಡ್ಡದಿರಬಹುದು. ಅರ್ಥೈಸಿಕೊಳ್ಳೋದು ಕಷ್ಟವೇನಲ್ಲ. ಇವ್ಯಾಪೊರೇಶನ್ ಅಂದರೆ ಆವಿಯಾಗೋದು ಅಂತ. ಭೂಮಿಯ ಮೇಲ್ಭಾಗದಲ್ಲಿರುವ ಮಣ್ಣಿನ ಮತ್ತು ನೀರಿನ ಸ್ರೋತಗಳ ನೀರಿನಂಶ ಆವಿಯಾಗುತ್ತಲ್ಲ ಅದೇ ಇದು. ಟ್ರಾನ್ಸ್ಪಿರೇಶನ್ ಅಂದರೆ ಭೂಮಿಯ ಅಡಿಯಲ್ಲಿರುವ ನೀರನ್ನು ಬೇರುಗಳ ಮೂಲಕ ಹೀರಿ ತನ್ನ ಚಟುವಟಿಕೆಗಳಿಗೆ ಉಳಿಸಿಕೊಳ್ಳುವ ಮರ ಎಲೆಗಳ ಸಂಕುಲದ ಮೂಲಕ ಒಂದಷ್ಟು ನೀರನ್ನು ಆವಿಯಾಗಿ ಪರಿಸರಕ್ಕೆ ಸೇರಿ ಹೋಗುವಂತೆ ಮಾಡುತ್ತಲ್ಲ ಅದು. ಇವೆರಡೂ ಸೇರಿಕೊಂಡರೆ ಮೇಲ್ಪದರದಲ್ಲಿ ಶೇಖರಗೊಂಡ ನೀರು ಮತ್ತು ಭೂಮಿಯೊಳಗಿನ ನೀರು ಎರಡೂ ವಾತಾವರಣಕ್ಕೆ ಬಿಡುಗಡೆಯಾಗಿ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ. ಮತ್ತು ಈ ತಂಪಿನ ವಾತಾವರಣಕ್ಕೆ ಆಕಷರ್ಿತಗೊಂಡ ಮೋಡಗಳು ಮುಂದೆ ಸಾಗುವ ಮನಸಾಗದೇ ಮಳೆಗರೆದು ಇನ್ನಷ್ಟು ತಂಪುಗೈಯ್ಯುತ್ತವೆ.

ಅರಣ್ಯವನ್ನು ನಾಶಗೈದು ಕೃಷಿಗೆ ಭೂಮಿಯನ್ನು ಚೊಕ್ಕಗೊಳಿಸುತ್ತಿದ್ದಂತೆ ಎಲೆಗಳಿಂದಾವೃತವಾದ ಭೂಮಿಯ ಮೇಲ್ಮೈ ಕೂಡ ಕಡಿಮೆಯಾಗುತ್ತದೆ. ನಾವು ಬೆಳೆಯುವ ಬೆಳೆಗಳ ಬೇರು ಆಳಕ್ಕಿಳಿಯುವುದಿಲ್ಲವಾದ್ದರಿಂದ ಈ ಗಿಡಗಳು ವಾತಾವರಣದ ತಂಪಿಗೆ ವಿಶೇಷವಾಗಿ ಏನನ್ನೂ ಸೇರಿಸಲಾರವು. ಪರಿಣಾಮ ಮಳೆ ನೀರಿಗೆ ತತ್ವಾರ. ಉತ್ತರದವರಿಗೆ ಹಿಮಾಲಯದಿಂದ ಹೊರಟ ಆವಿಯ ಮೋಡಗಳು ಮಳೆ ಸುರಿಸಿದರೆ, ದಕ್ಷಿಣದವರಿಗೆ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಮೋಡಗಳು ಮಳೆಗರೆಯುತ್ತವೆ. ಈ ಮೋಡಗಳನ್ನು ವಿಂಧ್ಯವೋ, ಪಶ್ಚಿಮ ಘಟ್ಟಗಳೋ ತಡೆದು ಮಳೆ ಸುರಿಸಬೇಕು. ನಾವು ಕಾಡಿನ ನಾಶ ಮಾಡುತ್ತಲೇ ಸಾಗಿದರೆ ಈ ಮೋಡಗಳು ಮಳೆ ಸುರಿಸದೇ ಉತ್ತರ ದಿಕ್ಕಿಗೆ ಸಾಗುತ್ತವೆ, ಅಲ್ಲಿ ವ್ಯರ್ಥವಾಗಿ ಹೋಗುತ್ತದೆ. ಕಳೆದ ಒಂದು ದಶಕಗಳಿಂದ ಹೀಗೆ ಆಗಿಯೇ ವಿಕಟ ಪರಿಸ್ಥಿತಿಯಲ್ಲಿರೋದು ಭಾರತ. ಗಂಗಾ ತಟದ ಮಳೆ ಮಾನ್ಸೂನ್ ಅವಧಿಯಲ್ಲಿ ದಿನಕ್ಕೆ 1-2 ಮಿ.ಮೀ ನಷ್ಟು ಕಡಿಮೆಯಾಗಿರುವುದನ್ನು ಅಂಕಿ ಅಂಶಗಳು ದಾಖಲಿಸಿವೆ.
ಒಂದು ಮೂಲದ ಪ್ರಕಾರ ಭಾರತದಲ್ಲಿ ಸುಮಾರು 15 ಬಿಲಿಯನ್ ಎಕರೆಗಳಷ್ಟು ಭೂ ಪ್ರದೇಶ ಕಾಡಾಗಿತ್ತು. ಈಗ ಅದು 9 ಬಿಲಿಯನ್ ಎಕರೆಗಳಿಗಿಂತ ಕಡಿಮೆಯಾಗಿಬಿಟ್ಟಿದೆ. ಇಂಡಿಯಾ ಸೈಟ್ ಆಫ್ ಫಾರೆಸ್ಟ್ ರಿಪೋರ್ಟ್ನ ಪ್ರಕಾರ 2009 ರಲ್ಲಿದ್ದುದಕ್ಕಿಂತ 2011 ರಲ್ಲಿ ಭಾರತದ ಅರಣ್ಯದ ಪ್ರಮಾಣ 367 ಚ.ಕಿಮೀ ನಷ್ಟು ಕಡಿಮೆಯಾಗಿದೆ. 1980 ರ ನಂತರ ಅರಣ್ಯ ನಾಶ ಕಡಿಮೆಯಾಗಿದೆಯೆಂದು ಲೆಕ್ಕಾಚಾರ ಹೇಳುತ್ತಾರಾದರೂ ಈ ಗತಿ ಹೀಗೆ ಮುಂದುವರಿದರೆ ನೂರು ವರ್ಷಗಳಲ್ಲಿ ಭೂಮಿಯ ಮೇಲೆ ಮಳೆ ಕಾಡುಗಳೇ ಇರುವುದಿಲ್ಲವೆಂದೂ ಎಚ್ಚರಿಕೆ ಕೊಡುತ್ತಾರೆ. ಎರಡನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಜೀವ ವೈವಿಧ್ಯತೆಯುಳ್ಳ ಅರಣ್ಯನಾಶ ಮಾಡಿ ನಾವು ಏಕ ಪ್ರಕಾರದ ನೀಲಗಿರಿಯನ್ನೋ ತೇಗದ ಮರಗಳನ್ನೋ ನೆಟ್ಟು ಅರಣ್ಯ ಅಂತ ಕರೆದು ತೃಪ್ತಿ ಪಡುತ್ತಿದ್ದೇವೆ. ಅವು ಭೂಮಿಯನ್ನು ಮತ್ತಷ್ಟು ನಾಶಮಾಡಬಲ್ಲವೇ ಹೊರತು ವಾತಾವರಣದ ತಂಪನ್ನಂತೂ ಹೆಚ್ಚಿಸಲಾರದು. 2012 ರಲ್ಲಿ ಎಕಾನಾಮಿಕ್ ಟೈಮ್ಸ್ ವರದಿ ಮಾಡಿ ಕಳೆದ 13 ವರ್ಷಗಳಲ್ಲಿ ಅರಣ್ಯದ ಪ್ರಮಾಣ ಹೆಚ್ಚಿದೆಯೆಂಬ ಸರ್ಕಾರದ ಅಂಕಿ ಅಂಶವೇ ದೋಷಪೂರಿತವೆಂದು ಆರೋಪ ಮಾಡಿತ್ತು. ಅದಕ್ಕೆ ಕೊಟ್ಟ ಕಾರಣವೂ ಸಮರ್ಪಕ. ಸರ್ಕಾರ ಅರಣ್ಯ ಪ್ರದೇಶವನ್ನು ಲೆಕ್ಕ ಹಾಕುವುದು ಹೇಗೆ ಗೊತ್ತೇ? ಉಪಗ್ರಹ ಕೊಟ್ಟ ಚಿತ್ರವನ್ನು ಮುಂದಿಟ್ಟುಕೊಳ್ಳುವುದು ಅದನ್ನು ಒಂದೊಂದು ಹೆಕ್ಟೇರುಗಳ ಒಂದೊಂದು ಚೌಕವಾಗಿ ವಿಂಗಡಿಸೋದು. ಈ ಒಂದೊಂದು ಚೌಕದಲ್ಲೂ ಶೇಕಡಾ 10 ರಷ್ಟು ಹಸಿರಿದ್ದರೆ ಸಾಕು ಅದನ್ನು ಅರಣ್ಯವೆಂದು ಗುರುತಿಸಿ ಲೆಕ್ಕ ಹಾಕೋದು. ಈ ಜಮೀನು ಸರ್ಕಾರಕ್ಕೆ ಸೇರಿದ್ದಾಗಿರಲೇಬೇಕೆಂಬ ನಿಯಮವಿಲ್ಲ. ಈ ಲೆಕ್ಕಾಚಾರದ ಪ್ರಕಾರ, ಅಸ್ಸಾಂನ ಟೀ ತೋಟಗಳು, ಮಡಿಕೇರಿಯ ಕಾಫಿ ತೋಟಗಳು, ಪಾರ್ಕುಗಳು, ಬೆಳೆದು ನಿಂತ ಬತ್ತದ ಗದ್ದೆಗಳೂ ‘ಕಾಡು’ ಎನಿಸಿಕೊಳ್ಳುತ್ತವೆ. ಬೌಂಡರಿಯುದ್ದಕ್ಕೂ ಗಿಡಗಳನ್ನು ಹೊಂದಿರುವ ಕ್ರಿಕೇಟ್ ಮೈದಾನವೂ ಕಾಡೇ! ಹೀಗೆ ನಮಗೆ ನಾವೇ ಮೋಸ ಮಾಡಿಕೊಂಡು ಹೆಮ್ಮೆಯ ಬದುಕು ಬದುಕುತ್ತಿದ್ದೇವೆ.

deforestation_in_the_amazon.jpg.662x0_q70_crop-scale

 

ಕರ್ನಾಟಕದ ಕಥೆಯೇನು ಭಿನ್ನವಲ್ಲ. ಜಾಗತಿಕ ಜೀವವೈವಿಧ್ಯತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಡುವ ಪಶ್ಚಿಮ ಘಟ್ಟದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಹಾಗೆ ನೋಡಿದರೆ ಪಶ್ಚಿಮ ಘಟ್ಟ ನಮಗೆ ಮಾತ್ರ ಸೇರಿದ್ದಲ್ಲ. ಉತ್ತರದಲ್ಲಿ ತಪತಿ ನದಿಯಿಂದ ಹಿಡಿದು ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ಹಬ್ಬಿದೆ ಇದು. ನಮ್ಮಲ್ಲಷ್ಟೇ ಅಲ್ಲದೇ ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡುಗಳಿಗೂ ಹಬ್ಬಿದೆ ಪಶ್ಚಿಮಘಟ್ಟ. ಈ ಘನವಾದ ಕಾಡಿನ ಹೆಚ್ಚು ಭಾಗ ಇರುವುದು ಕರ್ನಾಟಕದಲ್ಲಿಯೇ. ಹೀಗಾಗಿಯೇ ಇದನ್ನುಳಿಸುವ ದೊಡ್ಡ ಮೊತ್ತದ ಹೊಣೆಗಾರಿಕೆ ನಮ್ಮದೇ.
ಕೊಡಗು ಭಾಗದಲ್ಲಿಯೇ ಪಶ್ಚಿಮ ಘಟ್ಟ 4102 ಚ.ಕಿ.ಮೀಗಳಷ್ಟು ಹಬ್ಬಿದೆ. ಅತ್ಯಂತ ಕಡಿಮೆ ಜನಸಂಖ್ಯೆ ಆದರೆ ವಿಪುಲವಾದ ಅರಣ್ಯ ಸಂಪತ್ತು ಹೊಂದಿರುವ ಜಿಲ್ಲೆ ಅದು. ಸರ್ಕಾರ ಇತ್ತೀಚೆಗೆ ಮೈಸೂರಿನ ಇಳವಾಲದಿಂದ ಕೇರಳದ ಕೋಜಿಕ್ಕೊಡ್ನವರೆಗೆ 400 ಕಿಲೋ ವ್ಯಾಟ್ನ ವಿದ್ಯುತ್ ತಂತಿ ಎಳೆಯಲು ಸುಮಾರು 55 ಸಾವಿರ ಮರಗಳನ್ನು ಘನ ಕಾಡಿನಿಂದ ಕಡಿದು ಬಿಸಾಡಲು ಅನುಮತಿ ನೀಡಿದೆಯಂತೆ. ಹಾಗಂತ ಕೂರ್ಗ್ ನ್ಯೂಸ್ ನ ಬೋಪಣ್ಣ ವರದಿ ಮಾಡುತ್ತಾರೆ. ಈ ಮರಗಳನ್ನು ಕಡಿಯುವಾಗ ಒಂದೇ ಒಂದು ಮಾತನಾಡದ ರಾಜಕಾರಣಿಗಳು ಕಾವೇರಿ ಗಲಾಟೆಯ ವೇಳೆಗೆ ಮಾತ್ರ ಮುಂದೆ ನಿಂತು ಮೈಲೇಜು ಗಿಟ್ಟಿಸಿಬಿಡುತ್ತಾರೆ. ಅವ್ಯಾಹತವಾದ ಅರಣ್ಯನಾಶದಿಂದಾಗಿ ಕಳೆದೊಂದು ದಶಕದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇಕಡಾ 50ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. 10 ಟಿ.ಎಂ.ಸಿ ಕಾವೇರಿ ನೀರನ್ನು ಬೆಂಗಳೂರಿಗೆ ಪೈಪ್ಲೈನ್ಗಳ ಮೂಲಕ ತಲುಪಿಸುತ್ತಾರಲ್ಲ ಹೀಗೆ ತಲುಪುವಾಗಲೇ ಸುಮಾರು ಅರ್ಧದಷ್ಟು ನೀರು ಪೋಲಾಗಿಬಿಡುತ್ತದೆ. ಸೋರುವ ಪೈಪು, ಆವಿಯಾಗುವ ನೀರು ಇವೆಲ್ಲದರ ಕುರಿತಂತೆ ನಾವೆಂದಿಗೂ ಗಮನ ಹರಿಸಿಯೇ ಇಲ್ಲ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಟಿವಿ ರಾಮಚಂದ್ರನ್ ‘ನ್ಯಾಯಾಲಯಕ್ಕಾಗಲಿ, ರೈತರಿಗಾಗಲಿ ನದಿಯ ಜಲ ವಿಜ್ಞಾನವೂ ಅರ್ಥವಾಗುವುದಿಲ್ಲ, ಪರಿಸರ ವಿಜ್ಞಾನವೂ ಅರ್ಥವಾಗುವುದಿಲ್ಲ. ನದಿಯ ಹತ್ತಿರದಲ್ಲಿ ವಿರಳವಾಗುತ್ತಿರುವ ಕಾಡು ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನೇ ಬರುವ ವರ್ಷಗಳಲ್ಲಿ ಕಡಿಮೆ ಮಾಡೀತು’ ಎಂದು ಎಚ್ಚರಿಸುತ್ತಾರೆ. ಕೇಳುವವರು ಯಾರು ಹೇಳಿ.
ಉತ್ತರ ಕರ್ನಾಟಕದ ಪರಿಸ್ಥಿತಿಯಂತೂ ಮತ್ತೂ ವಿಭಿನ್ನ. ಮಹಾದಾಯಿಗಾಗಿ ಕಾಡನ್ನು ಕಡಿದರೂ ಚಿಂತೆಯಿಲ್ಲವೆಂದು ಜನರೇ ಸರ್ಕಾರಕ್ಕೆ ಆಹ್ವಾನ ಕೊಟ್ಟರೆ, ಗದಗ್ನಲ್ಲಿ ಎದೆಯುಬ್ಬಿಸಿ ನಿಂತ ಕಪ್ಪತಗುಡ್ಡವನ್ನೇ ಗಣಿಗಾರಿಕೆಗೆಂದು ಬಿಟ್ಟು ಕೊಟ್ಟು ಲೂಟಿಗೈಯ್ಯುವ ನಿರ್ಧಾರ ಅಧಿಕಾರಿ-ರಾಜಕಾರಣಿಗಳದ್ದು! ಎಲ್ಲರಿಗೂ ತಮ್ಮ ಕಾಲ ನಡೆದರಾಯ್ತು ಅನ್ನೋ ಮನೋಭಾವ. ನೆನಪಿಡಿ. ನಾವು ಇಷ್ಟೇ ಬೇಜವಾಬ್ದಾರಿಯಿಂದ ವರ್ತಿಸಿದರೆ ನಮ್ಮ ಜೀವನ ಕಾಲವಿರಲಿ, ಈ ಬೇಸಗೆ ಕಾಲವೂ ನೆಮ್ಮದಿಯಿಂದ ಕಳೆಯೋದು ಕಷ್ಟ.

 

 

ಕಾಡುಗಳನ್ನು ಈಗ ಸೂಕ್ತವಾಗಿ ವ್ಯಾಖ್ಯಾನಿಸಬೇಕಾದ ಅವಶ್ಯಕತೆ ಇದೆ. ಸ್ಥಳೀಯ ದೇವರಕಾಡುಗಳು ಅನೇಕ ವರ್ಷಗಳಿಂದ ಯಾರ ಗೊಡವೆಯೂ ಇಲ್ಲದೇ ಪೊಗದಸ್ತಾಗಿ ಬೆಳೆದು ನಿಂತ ಘನವಾದ ಅರಣ್ಯ ಮತ್ತು ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದಲೇ ವೃದ್ಧಿಸಲ್ಪಡುತ್ತಿರುವ ಪ್ಲಾಂಟೆಡ್ ಅರಣ್ಯ. ಸರ್ಕಾರಗಳು ಅನುದಾನ ನೀಡಿ ಅರಣ್ಯ ಅಭಿವೃದ್ಧಿಗೆ ಯತ್ನಿಸುತ್ತಿವೆಯಲ್ಲ ಅವೆಲ್ಲ ಪ್ಲಾಂಟೇಶನ್ಗಳ ರೂಪದಲ್ಲಿಯೇ. ಕೆರೆಯೊಂದರ ತುಂಬಾ ಅಕೇಶಿಯಾ ಗಿಡಗಳನ್ನು ನೆಟ್ಟರೆ ಅದು ಅರಣ್ಯ ಪ್ರದೇಶವೆಂದು ಲೆಕ್ಕ ಹಾಕಲ್ಪಡುತ್ತದೆ. ಆದರೆ ಈ ಅಕೇಶಿಯಾಗಳು ಪರಿಸರಕ್ಕೆ ಕೊಡುವ ಕೊಡುಗೆಗಿಂತಲೂ ನಾಶ ಮಾಡುವುದೇ ಹೆಚ್ಚು. 1995 ರಿಂದ 2005ರ ನಡುವೆ ಪ್ಲಾಂಟೇಶನ್ನ ಪ್ರಮಾಣ ಹೆಚ್ಚು ಕಡಿಮೆ ದ್ವಿಗುಣವಾದರೆ ಸ್ಥಳೀಯ ಅರಣ್ಯ ಅಪಾರ ಪ್ರಮಾಣ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತು. ಕೇಂದ್ರದಲ್ಲಿ ಜಯಂತಿ ನಟರಾಜನ್ ಪರಿಸರ ಮಂತ್ರಿಯಾಗಿದ್ದಾಗ ರಾಜ್ಯ ಸಭೆಯಲ್ಲಿ ಮಾತನಾಡುತ್ತಾ 2012ರಲ್ಲಿ ಎಂಟೂವರೆ ಸಾವಿರ ಚ.ಕಿ.ಮೀನಷ್ಟು ಅರಣ್ಯವನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡು, ಯೋಜನೆ ರೂಪಿಸಿದವರ ಬಳಿ ಅಷ್ಟೇ ಪ್ರಮಾಣದ ಕಾಡನ್ನು ಬೆಳೆಸಲೆಂದು ಹಣ ಸಂಗ್ರಹಿಸಲಾಗಿದೆ ಎಂದಿದ್ದರು. ಕೇಂದ್ರ ಸರ್ಕಾರದಿಂದ ಈ ಹಣವನ್ನು ಪಡಕೊಂಡ ರಾಜ್ಯಗಳು ನಿಯತ್ತಾಗಿ ಹೊಸ ಅರಣ್ಯ ಪ್ರದೇಶಗಳ ಸೃಷ್ಟಿಗೆ ಶ್ರಮಿಸಿದ್ದವೆಂದುಕೊಂಡಿದ್ದೀರೇನು? ಖಂಡಿತ ಇಲ್ಲ. ಪ್ರತೀ ರಾಜ್ಯವೂ ಈ ಹಣದಲ್ಲಿ ಬಹುಪಾಲನ್ನು ರಸ್ತೆಗೆ, ಕಟ್ಟಡ ನಿರ್ಮಾಣಗಳಿಗೆ ಬಳಸಿಕೊಂಡು ಖಾಲಿ ಮಾಡಿಬಿಟ್ಟಿತು.

tree-cutting-chainsaw-sl

ಹಾಗಂತ ಕಾಡಿನ ಮರಗಳನ್ನು ಮುಟ್ಟಲೇ ಬಾರದಾ? ಹಾಗಂತ ನಾನೂ ಹೇಳೋಲ್ಲ. ದೇಶದ 25 ಪ್ರತಿಶತ ಭೂಭಾಗ ಅರಣ್ಯದಿಂದಲೇ ತುಂಬಿರುವಾಗ ಅಭಿವೃದ್ಧಿಗೆ ಭೂಮಿ ಎಲ್ಲಿ ಹುಡುಕಬೇಕು? ಆದರೆ ಅರಣ್ಯವನ್ನು ರಾಷ್ಟ್ರೀಯ ಸಂಪತ್ತಾಗಿ ಲೆಕ್ಕ ಹಾಕಬೇಕು. ಮರವೊಂದನ್ನು ಕಡಿದರೆ ದೊರೆಯುವ ಭೂಮಿ, ಟಿಂಬರ್ನ ಲೆಕ್ಕಾಚಾರ ಅದು ಉಳಿದರೆ ಭೂಮಿಗಿಳಿಯುವ ನೀರಿನ ಪ್ರಮಾಣ, ಅದರಿಂದ ಸ್ಥಳೀಯ ಮನೆಗೆ ದೊರೆವ ಉರುವಲು, ವಾತಾವರಣಕ್ಕೆ ಅದು ಬಿಡುಗಡೆ ಮಾಡುವ ತೇವಾಂಶ ಆ ಮೂಲಕ ಅಲ್ಲಿ ಸುರಿಯುವ ಮಳೆಯ ಪ್ರಮಾಣ ಇವೆಲ್ಲವನ್ನೂ ಸೇರಿಸಿ ತುಲನೆ ಮಾಡಬೇಕು. ಆಗಲೂ ಕಡಿಯುವುದೇ ಲಾಭದಾಯಕವೆಂದಾದರೆ ಕಡಿಯಬೇಕು ಅಷ್ಟೇ.

ಜಗತ್ತಿನ ವಾತಾವರಣ ಬಲು ತೀವ್ರವಾಗಿ ಹದಗೆಡುತ್ತಿದೆ. ಭೂಮಿ ಕಾಯುತ್ತಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ವೃದ್ಧಿಯಾಗುತ್ತಿದೆ. ಬಿಸಿಯುಸಿರಿಗೆ ಹಿಮಾಲಯ ಕರಗಿ ನೀರಾಗುತ್ತಿದೆ. ಒಂದೆಡೆ ಪ್ರವಾಹ, ಒಂದೆಡೆ ಕ್ಷಾಮ ಒಟ್ಟಾರೆ ಸಮಸ್ಯೆ ಬೆಟ್ಟದಷ್ಟಿದೆ. ಪರಿಹಾರ ನಮ್ಮ ಮನೆಯ ಅಂಗಳದಲ್ಲಿದೆ. ನಾವು ನೆಡುವ ಗಿಡದೊಳಗಿದೆ. ನಾವು ರಕ್ಷಿಸುವ ನಮ್ಮ ಆಸ್ತಿಯಾಗಿರುವ ಅರಣ್ಯದಲ್ಲಿದೆ. ನಮ್ಮ ಕನಸಿನ ಕರ್ನಾಟಕ ನಿರ್ಮಾಣವಾಗಬೇಕೆಂದರೆ ಇಷ್ಟಾದರೂ ಹೊಣೆ ನಾವು ಹೊರಬೇಕು.

Comments are closed.