ವಿಭಾಗಗಳು

ಸುದ್ದಿಪತ್ರ


 

ಗೋವೆಯ ಕಣಕಣದಲ್ಲಿ ಹಸಿ ರಕ್ತದ ವಾಸನೆ

ಹೈದರಾಬಾದು ಮುಕ್ತಗೊಳ್ಳಲಿಕ್ಕೆ ಒಂದು ವರ್ಷ ಬೇಕಾಯ್ತಾ? ಮಿತ್ರರೊಬ್ಬರು ಉದ್ಗಾರವೆತ್ತಿದ್ದರು. ಕನ್ನಡಿಗರ ನೆತ್ತಿಯ ಮೇಲಿನ ಗೋವಾ ಸ್ವತಂತ್ರಗೊಳ್ಳಲು ದಶಕವೇ ಬೇಕಾಯ್ತು ಎಂದಾಗ ಅವನ ಕಂಗಳು ಇನ್ನೂ ಅಗಲವಾಗಿಬಿಟ್ಟಿದ್ದವು.

ಮತಾಂತರ ಒಲ್ಲದವರಿಗೆ ಸಾವಿನ ‘ಸಹಾನುಭೂತಿ’!

ಅದೊಂದು ದೊಡ್ಡ ಕಥೆ. ಹಿಂದೂ ಹತಭಾಗ್ಯರ ದಾರುಣ ವ್ಯಥೆ.
೧೪೯೮ರಲ್ಲಿ ಮೊದಲಬಾರಿಗೆ ವಾಸ್ಕೋ ಡ ಗಾಮಾ ಭಾರತವನ್ನು ಅರಸಿಕೊಂಡು ಬಂದಿದ್ದನಲ್ಲ, ಆತ ಭಾರತದ ಸಂಪತ್ತಿಗೆ ಮಾರುಹೋದ. ಲೂಟಿಗೈದ. ಪೋರ್ಚುಗಲ್ ದೊರೆಗಳನ್ನು ತೃಪ್ತಿಪಡಿಸಿದ. ಅನೇಕ ವರ್ಷಗಳ ಕಾಲ ಈ ಲೂಟಿ ನಿರಾತಂಕವಾಗಿ ನಡೆದಿತ್ತು. ಸಮುದ್ರ ಮಧ್ಯದ ಹಡಗುಗಳನ್ನು ಲೂಟಿಗೈದು ಅವನ್ನು ಮುಳುಗಿಸಿಬಿಡುತ್ತಿದ್ದ ವಾಸ್ಕೋ ಡ ಗಾಮಾ ಮುಂದೆ ವ್ಯಾಪಾರಕ್ಕೆ ಅಧಿಕೃತ ಪರವಾನಗಿ ಪಡಕೊಂಡ. ಪೋರ್ಚುಗೀಸರ ಸೇನೆ ಒಳಬಂತು. ಅದರ ಜೊತೆಜೊತೆಗೆ ಕ್ರಿಸ್ತನ ಶಿಲುಬೆಯೂ! ಸೈನ್ಯದ ಬೆಂಗಾವಲಿಲ್ಲದೆ ಕ್ರಿಸ್ತ ಅಪ್ಪಿಕೊಂಡ ಯಾವುದಾದರೂ ಭೂ ಪ್ರದೇಶ ತೋರಿಬಿಡಿ ನೋಡೋಣ.
೧೫೩೪ರ ವೇಳೆಗೆ ಗೋವಾ ಪ್ರಾಂತ್ಯದಲ್ಲಿ ಸೈನ್ಯವನ್ನು ಹಿಂದಿಟ್ಟುಕೊಂಡು ಕ್ರಿಸ್ತೀಕರಣ ಶುರುವಾಯ್ತು. ಪೂರ್ವದಲ್ಲಿ ಕ್ರೈಸ್ತ ಮತದ ಬೆಳೆ ತೆಗೆಯಲು ಪೋರ್ಚುಗಲ್ಲರ ದೊರೆ ಸಾಕಷ್ಟು ಸಹಾಯ ಹಸ್ತ ಚಾಚಿದ್ದ. ಅದರಿಂದಾಗಿಯೇ ಗೋವೆಯಲ್ಲಿ ಅನೇಕ ದೇವಸ್ಥಾನಗಳು ಧ್ವಂಸಗೊಂಡವು. ಹಿಂದೂಗಳಿಗೆ ಸೇರಿದ್ದ ಆಸ್ತಿ ಕ್ರೈಸ್ತಮತ ವರ್ಧನೆಗೆ ಹಂಚಿಹೋಯ್ತು. ಎಲ್ಲಕ್ಕೂ ಮಿಗಿಲಾಗಿ ೧೫೬೦ರ ವೇಳೆಗೆ ಅತ್ಯಂತ ಕ್ರೂರ ಇನ್‌ಕ್ವಿಸಿಷನ್ ಹೇರಲ್ಪಟ್ಟಿತು.
ಇನ್‌ಕ್ವಿಸಿಷನ್ ಅನ್ನೋ ಪದ ಯಾವಾಗಲಾದರೂ ಕೇಳಿದ್ದೀರ? ಕ್ಯಾಥೊಲಿಕ್ ಚರ್ಚುಗಳ ಮುಖ್ಯಸ್ಥ ಪೋಪ್ ಈ ಪದ ಕೇಳಿ ನಾಚಿ, ತಲೆ ತಗ್ಗಿಸಿ, ನೀರಾಗಿ ಹರಿದುಬಿಡಬೇಕಾದ ಪದವಿದು. ಕ್ರಿಶ್ಚಿಯನ್ ಸಮಾಜಗಳ ಕ್ರೌರ್ಯದ ಪರಮಾವಧಿ ರೂಪ! ಭಾವಾರ್ಥವನ್ನು ಗ್ರಹಿಸಿದರೆ, ಮತ ವಿರೋಧಿಗಳನ್ನು ಶಿಕ್ಷಿಸುವ ಬರ್ಬರ ಕ್ರಮವನ್ನು ಇನ್‌ಕ್ವಿಸಿಷನ್ ಅನ್ನಬಹುದು. ಇದರ ಬೇರುಗಳು ಸಿಗೋದು ಸ್ಪೇಯ್ನ್‌ನಲ್ಲಿ. ಆಗೆಲ್ಲಾ ಅಲ್ಲಿ ವ್ಯಾಪಕವಾಗಿ ಹಬ್ಬಿದ್ದ ಯಹೂದಿಗಳು ರಾಜಕೀಯದಿಂದ ವ್ಯಾಪಾರದವರೆಗೆ, ಸಾಮಾನ್ಯ ವೃತ್ತಿಯಿಂದ ಬೌದ್ಧಿಕ ಔನ್ನತ್ಯದವರೆಗೆ ಎಲ್ಲೆಡೆ ಖ್ಯಾತಿ ಪಡೆದಿದ್ದರು. ಹೊಟ್ಟೆಯುರಿಯಿಂದ ಕುಬ್ಜರಾಗಿಹೋದ ಕ್ರಿಶ್ಚಿಯನ್ನರ ಕಿರುಕುಳ ಆರಂಭವಯಿತು. ಯಹೂದ್ಯರಿಗೆ ಮತಾಂತರ ಅನಿವಾರ್ಯವಾಯಿತು.

ಇನ್‌ಕ್ವಿಸಿಷನ್‌ ಟಾರ್ಚರ್‍ ಛೇಂಬರ್‍

ಮೇಲ್ನೋಟಕ್ಕೆ ಕ್ರೈಸ್ತರಾದರೂ ಆಂತರ್ಯದಲ್ಲಿ ತಮ್ಮ ನಂಬುಗೆಯನ್ನು ಬಿಡುವುದು ಅವರಿಗೆ ಸಾಧ್ಯವಾಗಲೇ ಇಲ್ಲ. ಇವರುಗಳು ಸರ್ಕಾರದ ದೃಷ್ಟಿಯಲ್ಲಿ ಧರ್ಮದ್ರೋಹಿಗಳಾಗಿಬಿಟ್ಟರು. ಇಂಥವರನ್ನು ಹುಡುಹುಡುಕಿ ಅವರಿಗೆ ಕಠಿಣ ಶಿಕ್ಷೆ ನಿಡಲೆಂದೇ ಒಂದು ನಿಯೋಗ ರಚನೆಯಾಯ್ತು. ರಾಜಕುವರಿ ಇಸಾಬೆಲ್ಲಳಿಗೆ ಮಾರ್ಗದರ್ಶಕನಾಗಿದ್ದ ಥಾಮಸ್ ಡಿ ಟರ್ಕೆಮಾಡಾ ಪ್ರಧಾನನಾದ. ೧೪೮೪ರ ಅಕ್ಟೋಬರ್‌ನಲ್ಲಿ ಇನ್‌ಕ್ವಿಸಿಷನ್‌ನ ಕಠಿಣ ಕಾನೂನು ಜಾರಿಗೆ ಬಂತು. ಅಂಕಿ ಅಂಶಗಳ ಪ್ರಕಾರ ಒಂದೆರಡು ವರ್ಷಗಳಲ್ಲಿಯೇ ೮,೮೦೦ ಧರ್ಮದ್ರೋಹಿಗಳನ್ನು ಜೀವಂತ ಸುಡಲಾಯಿತು. ಹತ್ತಿರ ಹತ್ತಿರ ಒಂದೂವರೆ ಲಕ್ಷ ಜನರನ್ನು ಬೇರೆಬೇರೆ ರೂಪದಲ್ಲಿ ಶಿಕ್ಷಿಸಲಾಯಿತು. ಅನೇಕ ಯಹೂದ್ಯರು ಪ್ರಾಣ ಉಳಿಸಿಕೊಂಡು ಪಕ್ಕದ ಪೋರ್ಚುಗಲ್ಲಿಗೆ ಓಡಿದರು.

ಶಿಕ್ಷೆಗೊಳಗಾದವನು

೧೪೯೫ರಲ್ಲಿ ಪೋರ್ಚುಗಲ್ಲರ ಪಟ್ಟವೇರಿದ ದೊರೆ ಮಾನೋವೆಲ್‌ಗೆ ಸ್ಪೇನಿನ ಇಸಾಬೆಲ್ಲಳೊಂದಿಗೆ ಪ್ರೀತಿ ಉದಿಸಿತು. ಅಷ್ಟೇ. ಅವನನ್ನು ಮದುವೆಯಾಗಲು ಆಕೆ ವಿಧಿಸಿದ ನಿಬಂಧನೆ, ಯಹೂದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬುದೇ ಆಗಿತ್ತು! ಕ್ರೌರ್ಯವೇ ಮೂರ್ತಿವೆತ್ತಂತಾದ ಮಾನೋವೆಲ್, ಪೋರ್ಚುಗಲ್‌ನಲ್ಲೂ ಇನ್‌ಕ್ವಿಸಿಷನ್ ಜಾರಿಗೆ ತಂದ. ಕ್ರಿಸ್ತನನ್ನು ಅಪ್ಪಿಕೊಳ್ಳದವರು ಹತ್ತು ತಿಂಗಳೊಳಗೆ ದೇಶ ಬಿಡಬೇಕೆಂದ. ಹಾಗೆ ಬಿಡದೆ ಉಳಿದುಕೊಂಡವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಿದ. ಅನೇಕರು ದೇಶ ಬಿಟ್ಟು ಹೊರಟಾಗ, ಅವರ ಹದಿನಾಲ್ಕು ತುಂಬಿದ ಮಕ್ಕಳನ್ನು ಕಸಕೊಂಡು ಕ್ರಿಶ್ಚಿಯನ್ನರಾಗಿ ಮಾಡುವ ಫರ್ಮಾನು ಹೊರಡಿಸಿದ. ಅದಕ್ಕೆಂದೇ ಅನೇಕರು ತಮ್ಮ ಮಕ್ಕಳನ್ನು ತಾವೇ ಕೊಂದೋ, ಬಾವಿಗೆ ತಳ್ಳಿಯೋ ಓಡಿಹೋಗುತ್ತಿದ್ದರು. ಈ ಕ್ರೂರಿಗಳ ಕೈಗೆ ಮಕ್ಕಳನ್ನು ಕೊಡುವುದಕ್ಕಿಂತ ಕೊಲ್ಲುವುದು ಮೇಲೆಂದು ಅವರ ಭಾವನೆ!
ಮತಾಂತರಗೊಂಡೂ ಮೂಲ ನಂಬಿಕೆ ಬಿಡಲಾಗದವರ ಕಥೆಯಂತೂ ಅಸಹನೀಯ. ಸುಮಾರು ಇನ್ನೂರ ಮೂವತ್ತು ವರ್ಷಗಳ ಕಾಲ ಶಾಂತಿದೂತನ ಅನುಯಾಯಿಗಳು ಸಾವಿರಾರು ಜನರನ್ನು ಜೀವಂತ ದಹಿಸಿದರು. ಅದರ ಹತ್ತಿಪ್ಪತ್ತು ಪಟ್ಟು ಜನರಿಗೆ ಜೀವಂತವಾಗಿಯೇ ಶಿಕ್ಷೆ ವಿಧಿಸಿ, ‘ಆಮೆನ್’ ಎಂದರು. ಅಲ್ಲಿಂದಲೂ ತಪ್ಪಿಸಿಕೊಂಡ ಕೆಲವು ಆಂತರ್ಯದ ಯಹೂದ್ಯರು ಪೋರ್ಚುಗೀಸರ ಸೇನೆಯೊಂದಿಗೆ ಭಾರತಕ್ಕೆ ಬಂದುಬಿಟ್ಟರು. ಇಲ್ಲಿನ ಮುಕ್ತ ವಾತಾವರಣ, ಹಿಂದೂಗಳ ಸಮನ್ವಯ ಮತ್ತು ಸ್ವೀಕಾರ ಬುದ್ಧಿ ಅವರನ್ನು ಸೆಳೆಯಿತು.ಅ ವರೀಗ ತಮ್ಮ ನಂಬಿಕೆ, ಆಚರಣೆಗಳಿಗೆ ತಕ್ಕಂತೆ ಮತ್ತೆ ಬದುಕಲಾರಂಭಿಸಿದರು.
ಆಗ ಬಂದವನೇ ಸಂತ ಝೇವಿಯರ್! ದೂರದ ಇಂಡೋನೇಷಿಯಾದಲ್ಲಿ ಕುಳಿತೇ ಗೋವೆಯಲ್ಲಿ ಇನ್‌ಕ್ವಿಸಿಷನ್ ಆಗಬೇಕೆಂದು ದೊರೆಗೆ ಪತ್ರ ಬರೆದ. ಸಲಹೆಗೆ ಮನ್ನಣೆ ದೊರೆಯದಾದಾಗ ಕುದ್ದುಹೋದ. ಮುಂದೆ ಮತ್ತೊಬ್ಬ ದೊರೆ ಪಟ್ಟವೇರಿದಾಗ ತನ್ನ ಪ್ರಭಾವ ಬೀರಿ ಸಮ್ಮತಿ ಪಡೆದ. ಕೊಚಿನ್‌ನಿಂದ ಒಂದಷ್ಟು, ಗೋವೆಯಿಂದ ಒಂದಷ್ಟು ಹೊಸ ಕ್ರಿಸ್ತಾನುಯಾಯಿಗಳನ್ನು ಹುಡುಕಿ ಪೋರ್ಚುಗಲ್‌ಗೆ ಕಳಿಸುವ ಏರ್ಪಾಟು ಮಾಡಿದ. ಅವರ ಅಪರಾಧಗಳಿಗೆ ಅಲ್ಲಿ ಜೀವಂತ ದಹನದ ತೀರ್ಪು ಸಿಕ್ಕಿತು. ಝೇವಿಯರ್ ನಕ್ಕ. ಭಾರತಕ್ಕೊಂದು ಪವಿತ್ರ ಕಛೇರಿ ಪ್ರಾಪ್ತವಾಯಿತು. ಗೋವೆಯ ಬದುಕನ್ನು ಬರ್ಬರಗೊಳಿಸುವ ಅಧಿಕಾರ ಆರ್ಚ್ ಬಿಷಪ್‌ನಿಗೆ ದೊರೆಯಿತು.

‘ಶಾಂತಿದೂತ’ರ ಕ್ರೌರ್ಯ

೧೮೬೩ರಲ್ಲಿ ಗೋವಾದ ಇತಿಹಾಸಕಾರ ಬಾರೆಟ್ಟೊ ಮಿರಾಂಡ, ‘ಶಾಂತಿ ಮತ್ತು ಪ್ರೇಮದ ಧರ್ಮವೆಂಬ ಸೋಗಿನಲ್ಲಿ ಯುರೋಪಿನಲ್ಲಿ ನಡೆಯುತ್ತಿದ್ದ ಕ್ರೌರ್ಯ ಭಾರತದಲ್ಲಿ ಇನ್ನೂ ಅಧಿಕವಾಯಿತು. ಇಲ್ಲಿ ಮತದ್ರೋಹಿಗಳನ್ನು ಹುಡುಕಿ ಶಿಕ್ಷಿಸುವ ಅಧಿಕಾರ ಹೊಂದಿದ್ದವನಿಗೆ ಅದೆಷ್ಟು ವೈಭವದ ಜೀವನ ಸಿಗುತ್ತಿತ್ತೆಂದರೆ, ಚರ್ಚಿನ ಆರ್ಚ್ ಬಿಷಪ್ಪರೂ ಅವನಡಿಯಲ್ಲಿ ಇರುತ್ತಿದ್ದರು’ ಎಂದು ಬರೆದಿದ್ದಾನೆ. ಪೋರ್ಚುಗಲ್ ದೊರೆ ಮೂರನೇ ಜಾನ್ ತನ್ನೊಂದು ಆದೇಶದಲ್ಲಿ ‘ಭಾರತದ ಬೇರೆ ಪ್ರಾಂತ್ಯಗಳ ಬಗ್ಗೆ ನಾನೇನೂ ಹೇಳಲಾರೆ. ಆದರೆ ಗೋವೆಯಲ್ಲಿ ಮೂರ್ತಿ ಪೂಜಕರಿದ್ದಾರೆ. ಅಲ್ಲಿ ನಮ್ಮ ಪಂಥ ಇನ್ನೂ ವ್ಯಾಪಕವಾಗಿ ಹರಡಲು ಕಠಿಣವಾಗಿರುವ ಅಧಿಕಾರಿಗಳನ್ನು ನೇಮಿಸಿ, ಮೂರ್ತಿಗಳನ್ನು ಹುಡುಕಿ ತೆಗೆದು ಅವುಗಳನ್ನು ನಾಶ ಮಾಡಿಬಿಡಿ. ಮೂರ್ತಿಯನ್ನು ತಯಾರು ಮಾಡುವ, ಅದಕ್ಕೆ ಬಣ್ಣ ನೀಡುವವರನ್ನು ಹುಡುಕಿ ಶಿಕ್ಷಿಸಿ. ಸಾರ್ವಜನಿಕವಾಗಿ ಅಥವಾ ವೈಯಕ್ತಿಕವಾಗಿ ಪೂಜಾ ಕೈಂಕರ್ಯದಲ್ಲಿ ನಿರತರಾಗಿರುವವರನ್ನು ವಿಶೇಷವಾಗಿ ಕ್ರಿಶ್ಚಿಯನ್ನರ ನೇರ ಶತ್ರುಗಳಾದ ಬ್ರಾಹ್ಮಣರನ್ನು ಮುಲಾಜಿಲ್ಲದೆ ಕಠಿಣ ಶಿಕ್ಷೆಗೆ ಒಳಪಡಿಸಿ’ ಎಂದಿದ್ದ.

ಕ್ರೈಸ್ತರ ದರ್ಬಾರು

೧೫೪೦ರಾಚೆಗೆ ಗೋವೆಯಲ್ಲಿ ದೇವಾಲಯಗಳು ಧ್ವಂಸವಾಗತೊಡಗಿದವು. ದೇವರ ಮೂರ್ತಿಗಳು ಕಾಣೆಯಾದವು. ಅವಶೇಷಗಳಿಂದಲೇ ಚರ್ಚುಗಳು ತಲೆಯೆತ್ತಿದವು. ಅಂತಹ ಅನೇಕ ನೂರು ದೇವಾಲಯಗಳ ಉಲ್ಲೇಖ ನಮಗೆ ಸುಲಭವಾಗಿ ದಕ್ಕೀತು. ಕಂಕೋಲಿಂ ಎಂಬುದು ಉಲ್ಲೇಖಿಸಬಹುದಾದ ಅಂತಹದೊಂದು ದೇವಸ್ಥಾನ. ಅದನ್ನು ಅನಾಮತ್ತು ಚರ್ಚಾಗಿ ಪರಿವರ್ತಿಸಿದ್ದನ್ನು ಇಂದಿಗೂ ಗೋವೆಯ ಇತಿಹಾಸದಲ್ಲಿ ನೆನೆಯಲಾಗುತ್ತದೆ. ಮುಚ್ಚುಮರೆಯೆಲ್ಲದೆ ಕಾನೂನುಗಳೇ ರಚನೆಯಾಗಿ, ಹಿಂದೂಗಳು ಚರ್ಚಿಗೆ ಬಂದು ಭಗವಂತನ ವಾಣಿ ಕೇಳಲೇಬೇಕೆಂಬ ನಿಯಮ ಬಂತು. ಮದುವೆ ಮುಂಜಿಗಳನ್ನು ಹಿಂದೂ ಪದ್ಧತಿಯಂತೆ ಆಚರಿಸುವಂತಿಲ್ಲ ಎಂದು ನಿಷೇಧ ಹೇರಲಾಯ್ತು. ಬ್ರಾಹ್ಮಣರು ಗುರುಕುಲಗಳನ್ನು ನಡೆಸುವಂತಿರಲಿಲ್ಲ. ಬ್ರಾಹ್ಮಣರಾಗಿ ಉಳಿಯಲು ಅಪಾರ ಪ್ರಮಾಣದ ತೆರಿಗೆ ಕಟ್ಟಬೇಕಿತ್ತು. ಇಷ್ಟು ಸಾಲದೇ, ಪಾದ್ರಿಗಳು ಹಿಂದೂಗಳ ನಡುವೆ ಮಾರುವೇಷದಲ್ಲಿ ಪಂಕ್ತಿಭೋಜನದಲ್ಲಿ ಕುಳಿತು ನಡುವೆ ಎದ್ದು ಜಾತಿಭ್ರಷ್ಟರಾಗುವುದನ್ನು ಕಂಡು ನಗುವ ಕೆಲಸ ಮಾಡುತ್ತಿದ್ದರು. ಕುಡಿಯುವ ನೀರಿನ ಬಾವಿಗೆ ಕ್ರಿಸ್ತನ ಪ್ರಸಾದವಾದ ಮದ್ಯ ಮತ್ತು ಮಾಂಸಗಳನ್ನು ಹಾಕಿ, ನೀರು ಕುಡಿದವರಿಗೆಲ್ಲ ಕ್ರಿಶ್ಚಿಯನ್ನರಾದಿರಿಎನ್ನುವ ಹೀನ ಕಾಯಕ ಶುರುವಾಯ್ತು. ಕೊನೆಗೆ ನೀಗ್ರೋ ಸೇವಕರನ್ನು ಕರೆದುಕೊಂಡು ಹೊರಟ ಪಾದ್ರಿಗಳು, ದಾರಿಯಲ್ಲಿ ಸಿಗುವ ಹಿಂದೂವನ್ನು ಹಿಡಿದು ಅವನ ಬಾಯಿಗೆ ಬಲವಂತದಿಂದ ಗೋಮಾಂಸವನ್ನು ತುರುಕಿ ಮತಪರಿವರ್ತನೆಯನ್ನು ಮಾಡುವ ನೀಚತನಕ್ಕೂ ಇಳಿದರು.
ಹೀಗೆ ಮತಾಂತರಗೊಂಡವರು ಕ್ರಿಸ್ತನನ್ನು ಪೂರ್ಣ ಅನುಸರಿಸುತ್ತಿದ್ದಾರೋ ಅಥವಾ ಮನೆಯೊಳಗೆ ಹಿಂದೂವಾಗಿಯೇ ಉಳಿದಿದ್ದಾರೋ ಎಂಬ ಪರೀಕ್ಷೆಗಳ ‘ಇನ್‌ಕ್ವಿಸಿಷನ್’ ಅಧಿಕೃತವಾಗಿ ಇಲ್ಲಿ ಆರಂಭವಾದದ್ದು ೧೫೬೦ರಲ್ಲಿ. ಆದಿಲ್‌ಖಾನನ ಅರಮನೆಯೇ ಧರ್ಮನ್ಯಾಯ ತಾಣವಾಯಿತು. ಇಲ್ಲಿಯೇ ಧರ್ಮನ್ಯಾಯಾಧೀಶರಿರುತ್ತಿದ್ದರು. ಇಲ್ಲಿಯೇ ಧರ್ಮದ್ರೋಹಿಗಳನ್ನು ಕೂಡಿಡುವ ನೂರಾರು ಕೋಣೆಗಳಿರುತ್ತಿದ್ದವು. ಅವರನ್ನು ಶಿಕ್ಷಿಸಿ, ಜೀವಂತ ದಹಿಸುವ ಕೆಲಸ ಇಲ್ಲಿಯೇ ನಡೆಯುತ್ತಿತ್ತು. ಕೆಲವರನ್ನು ಇಲ್ಲಿಂದ ಬಿಡಿಸಿ ಪರದೇಶಗಳಿಗೆ ಗುಲಾಮರನ್ನಾಗಿ ಕಳಿಸಲಾಗುತ್ತಿತ್ತು.
ಏಸುಕ್ರಿಸ್ತ ಇತರರ ಪಾಪಗಳನ್ನು ತನ್ನ ಹೆಗಲ ಮೇಲೆ ಹೊತ್ತ. ಅವನ ಹೆಸರಲ್ಲಿ ಇವರು ಹೊಸ ಪಾಪಗಳ ಪುಸ್ತಕ ತುಂಬಿಸುತ್ತಿದ್ದರು.
ಒಂದೆರಡು ವರ್ಷಗಳ ಕಾಲವಲ್ಲ ಇದು, ಬರೋಬ್ಬರಿ ೨೫೨ ವರ್ಷಗಳುದ್ದಕ್ಕೆ ನಡೆದದ್ದು! ಅಂದಿನ ದಿನಗಳ ಭಯಾನಕ ಚಿತ್ರಣವನ್ನು ಹೇಳಲು ನಮ್ಮವರ್ಯಾರು ಉಳಿದೇ ಇಲ್ಲ. ಅಲ್ಲಿನ ಹಿಂದೂಗಳು ಬದುಕಲಾಗಲಿಲ್ಲವೆಂದಾಗ ಗೋವೆಯನ್ನು ಬಿಟ್ಟು ರಾತ್ರೋರಾತ್ರಿ ಓಡಿಬಂದರು. ಕರ್ನಾಟಕದ ಕರಾವಳಿಯುದ್ದಕ್ಕೂ ಹಬ್ಬಿಕೊಂಡರು. ಈಗಲೂ ಕಾರವಾರದಿಂದ ಮಂಗಳೂರಿನವರೆಗೆ ಹಬ್ಬಿರುವ ಅನೇಕ ಕೊಂಕಣಿ ಭಾಷಿಗರ ಮೂಲಸ್ಥಾನ ಗೋವೆಯೇ. ೧೮೧೨ರಲ್ಲಿ ಇಂಗ್ಲೀಷರು ಗೋವೆಯ ದಿಕ್ಕಿನತ್ತ ಬಂದ ಮೇಲೆ ನಿಂತಿತು ಈ ಕ್ರೌರ್ಯಕಾಂಡ.

ಇನ್‌ಕ್ವಿಸಿಷನ್

ಈ ಬರ್ಬರತೆಯ ದಾಖಲೆಗಳ ರಸವತ್ತು ವರ್ಣನೆ ದೊರೆಯುವುದು ಫ್ರೆಂಚ್ ವೈದ್ಯ ದಿಲ್ಲೋನ್‌ನ ಡೈರಿಯ ಪುಟಗಳಲ್ಲಿ. ಆತ ಗೋವೆಯ ಮತ್ತು ಮುಂಬೈನ ಗಡಿಯಲ್ಲಿ ಕೆಲಸ ಮಾಡುತ್ತಿದ್ದವ. ಅನಗತ್ಯವಾಗಿ ಇನ್‌ಕ್ವಿಸಿಷನ್ ಅಧಿಕಾರಿಗಳ ಕೈಗೆ ಸಿಕ್ಕುಬಿದ್ದು ಅರಮನೆಯ ಜೈಲು ಸೇರಿದ. ಅಲ್ಲಿನ ಹಿಂಸೆ ತಾಳಲಾಗದೆ ಕೈಯ ನರ ಕಡಿದುಕೊಂಡು ಔನ್ಸುಗಟ್ಟಲೇ ರಕ್ತ ಬಸಿದುಕೊಂಡು ಸಾಯಲೆತ್ನಿಸಿದ. ಸಿಕ್ಕಿಬಿದ್ದ ತಪ್ಪಿಗೆ ಮತ್ತೂ ಕಠಿಣ ಶಿಕ್ಷೆಗೆ ಗುರಿಯಾದ. ಶಿಕ್ಷೆ ನೀಡುವ ಮಾನದಂಡವೇನಿತ್ತು ಗೊತ್ತೆ? ಸಿಕ್ಕಿ ಬಿದ್ದವ ತನ್ನ ಗುಟ್ಟನ್ನು ಹೇಳಿರಬಹುದಾದ ಏಳು ಜನರನ್ನು ಹೆಸರಿಸಬೇಕಿತ್ತು. ಹಾಗೆ ಹೇಳಿದ ಹೆಸರುಗಳು ಸರಿ ಇದ್ದರೆ ಇವನಿಗೆ ಶಿಕ್ಷೆ ಕಡಿಮೆ. ಆ ಭ್ರಮೆಯಲ್ಲಿ ಶಿಕ್ಷೆಗೊಳಗಾದವರು ಬಂಧು – ಬಾಂಧವರ – ಗೆಳೆಯರ ಹೆಸರು ಹೇಳಿದರೆ ಅವರನ್ನೂ ತಂದು ಕೂಡಿ ಹಾಕಲಾಗುತ್ತಿತ್ತು. ಶಿಕ್ಷೆಯ ವಿಧಾನ ಮುರು ಬಗೆಯದು. ಕೈಗಳನ್ನು ತಿರುಗಿಸಿ ಹಿಂಬದಿಗೆ ಕಟ್ಟಿ ಆ ಮೂಲಕವೆ ಮೇಲಕ್ಕೆಳೆದು ನೆಲಕ್ಕೆ ಮತ್ತೆ ಮತ್ತೆ ಅಪ್ಪಳಿಸಿ ಮೂಳೆ ಮುರಿಯುವ ಶಿಕ್ಷೆ ಮೊದಲನೆಯದ್ದು. ಕಬ್ಬಿಣದ ರಾಡಿನ ಮೇಲೆ ಅಂಗಾತ ಮಲಗಿಸಿ ಹೊಟ್ಟೆಗೆ ನೀರು ಕುಡಿಕುಡಿಸಿ ಬೆನ್ನು ಮೂಳೆ ಮುರಿಯುವ ಬಗೆ ಎರಡನೆಯದ್ದು. ವ್ಯಕ್ತಿಯನ್ನು ಮೇಲಕ್ಕೆಳದು ಕಟ್ಟಿ ಕೆಳಗೆ ಬೆಂಕಿ ಹೊತ್ತಿಸಿ, ಪಾದಗಳಿಗೆ ಕರ್ಪೂರದಂತಹ ಬೆಂಕಿ ಹಿಡಿಯುವ ವಸ್ತು ತೀಡಿಬಿಡುವ ಭಯಾನಕ ಶಿಕ್ಷೆ ಮೂರನೆಯದ್ದು! ಎಲ್ಲ ಮುಗಿದ ಮೇಲೆ ತೃಪ್ತಿಯಾಯಿತೆನ್ನಿಸಿದಾಗ ಬೆಂಕಿಗೆ ಜೀವಂತ ತಳ್ಳಿಬಿಡುವುದು.
ಅಬ್ಬಾ! ಗೋವೆಯನ್ನರಿಗೆ ೧೯೪೭ರಲ್ಲೂ ಇದರಿಂದ ಶಾಶ್ವತ ಮುಕ್ತಿ ದೊರಕಲಿಲ್ಲ. ಅದಕ್ಕೆ ಮತ್ತೊಂದು ಘನಘೋರ ಹೋರಟವೇ ಬೇಕಾಯ್ತು.

Comments are closed.