ವಿಭಾಗಗಳು

ಸುದ್ದಿಪತ್ರ


 

ಚಾಣಕ್ಯನ ಬಲೆಗೆ ತಾವಾಗಿಯೇ ಬಿದ್ದ ತೋಳಗಳು!

ಚಾಣಕ್ಯ ಪ್ರತಿತಂತ್ರ ಹೂಡಿಯಾಗಿತ್ತು. ಹಾಗೆ ನೋಡಿದರೆ ರಾಕ್ಷಸ ತಂತ್ರವನ್ನು ಹೆಣೆಯಲಿಕ್ಕೆ ಚಾಣಕ್ಯ ಅವಕಾಶವನ್ನೇ ಕೊಡಲಿಲ್ಲ. ತಾನು ತೋಡಿದ ಖೆಡ್ಡಾದೊಳಕ್ಕೆ ರಾಕ್ಷಸ ನಗುನಗುತ್ತ ಬೀಳುವಂತೆ ಮಾಡಿದ ಅಷ್ಟೇ. ಯುದ್ಧವೇ ಹಾಗೆ. ಮೊದಲು ತಂತ್ರಹೆಣೆದವರು, ಮೊದಲು ಆಘಾತ ಕೊಟ್ಟವರು, ಮೊದಲು ಗುರಿ ಇಟ್ಟವರು ಗೆಲ್ಲುತ್ತಾರೆ, ಬದುಕುತ್ತಾರೆ. ಸರಿ-ತಪ್ಪುಗಳ ತೂಕವಳೆಯಲು ಅಲ್ಲಿ ಸಮಯವೇ ಇರುವುದಿಲ್ಲ.

ಚಾಣಕ್ಯರ ಬುದ್ಧಿ ಬಲು ತೀಕ್ಷ್ಣ. ಒಂದೇ ಸಮಯದಲ್ಲಿ ಸಾವಿರಾರು ದಿಕ್ಕುಗಳಲ್ಲಿ ಯೋಚಿಸಬಲ್ಲ ಸಾಮಥ್ರ್ಯ ಅವರದ್ದು. ಜೀವಸಿದ್ಧಿಯ ಮೂಲಕ ನದೀ ತೀರದಲ್ಲಿ ಜಪಯಜ್ಞಕ್ಕೆ ಅಣಿಗೊಳಿಸುವಂತೆ ಪ್ರೇರೇಪಣೆ ಕೊಡಿಸಿದ ಚಾಣಕ್ಯರು ಸೂಕ್ತ ಸಮಯಕ್ಕೆ ನಂದರ ಪರಿವಾರ ಯಜ್ಞವೇದಿಕೆಗೆ ಬರುವಂತೆ ಮಾಡುವಲ್ಲಿ ತಮ್ಮ ಶಿಷ್ಯನೊಬ್ಬನಿಗೆ ಉಪಾಯ ಹೇಳಿಕೊಟ್ಟರು. ಮಾಸೋಪವಾಸಿ ಎಂಬ ಆ ಶಿಷ್ಯ ಮಹಾ ಸಾಧಕನಂತೆ ಜಪಯಜ್ಞದ ಜವಾಬ್ದಾರಿ ಹೊತ್ತು ತನ್ನ ಸಾಧನೆಯಿಂದಲೇ ಎಲ್ಲರ ಮನಸೂರೆಗೈದುಬಿಟ್ಟ. ಯಜ್ಞಶಾಲೆಯನ್ನು ವೀಕ್ಷಿಸುತ್ತಾ ಬಂದ ನಂದರೂ ಮಾಸೋಪವಾಸಿಯ ಕಠಿಣವ್ರತದ ಶೈಲಿಗೆ ಬೆರಗಾಗಿಬಿಟ್ಟರು. ಮೌನವ್ರತದಲ್ಲಿದ್ದ ಮಾಸೋಪವಾಸಿ ನಂದರನ್ನು ಕಂಡೊಡನೆ ಪ್ರೇರಣೆಗೊಳಗಾದವನಂತೆ ಮಾತಾಡತೊಡಗಿದ. ಪೂಣರ್ಾಹುತಿಯ ಹೊತ್ತಲ್ಲಿ ಶತ್ರುಗಳ ನಾಶದ ದೃಶ್ಯ ಕಾಣತೊಡಗುವುದು ಎಂದ. ಅಂಗರಕ್ಷಕರನ್ನು ಯಜ್ಞಶಾಲೆಯವರೆಗೂ ಕರೆತಂದುದಕ್ಕೆ ಮುಲಾಜಿಲ್ಲದೇ ಕೂಗಾಡಿದ, ಪಾವಿತ್ರ್ಯ ಹಾಳಾಯಿತೆಂದು ಕಣ್ಣು ಕೆಂಪುಮಾಡಿಕೊಂಡ. ಆತನ ಕ್ರಿಯಾಶೀಲತೆ, ವ್ಯಕ್ತಿತ್ವ, ಮಾತುಕತೆ, ಹಾವ-ಭಾವಗಳಿಗೆ ನಂದಗಡಣ ಬೆಕ್ಕಸ ಬೆರಗಾಯ್ತು. ಪೂಣರ್ಾಹುತಿಗೆ ಹೇಳಿಕಳಿಸಿದೊಡನೆ ಧಾವಿಸಿ ಬರುತ್ತೇವೆಂದರು ನಂದರು. ಅಲ್ಲಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು. ಚಾಣಕ್ಯರ ಕುಟಿಲ ನೀತಿ ಫಲ ಕೊಡಲಾರಂಭಿಸಿತ್ತು.
ಸಮಬಲದ ಶತ್ರುಗಳಿಲ್ಲವಾದಾಗ ಎಂಥವನಿಗೂ ತಾನೇ ಸಮರ್ಥ ಎನಿಸಿಬಿಡುತ್ತದಂತೆ. ರಾಕ್ಷಸನಿಗೂ ಇಷ್ಟುದಿನ ಹೀಗೆಯೇ ಆಗಿತ್ತು. ಚಾಣಕ್ಯನನ್ನು ಎದುರಾಳಿಯೆಂದು ಆತ ಭಾವಿಸಿರಲೇ ಇಲ್ಲ. ಜಪ-ತಪ, ಪಾಠ-ಪ್ರವಚನಗಳನ್ನು ಮಾಡಿಕೊಂಡಿರುವ ಬ್ರಾಹ್ಮಣನೊಬ್ಬ ಶಿಖೆ ಬಿಚ್ಚಿದೊಡನೆ ಹೆದರಿ ಬಿಡಬೇಕೇನು? ಎಂದುಕೊಂಡಿದ್ದ. ಹೀಗೆ ಎದುರಾಳಿಯನ್ನು ಉಪೇಕ್ಷಿಸಿ ಕೂರುವುದೇ ಯುದ್ಧದಲ್ಲಿ ಮೊದಲ ಸೋಲು.
1962 ರ ಚೀನಾಯುದ್ಧ ನೆನಪಿರಬೇಕು. ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಚೀನಾ ಉಪೇಕ್ಷಿಸಿ ಕುಳಿತರಲ್ಲದೇ ಅವರನ್ನು ಗೆಳೆಯರೆಂದು ಜನರೆದುರು ಭಾಷಣ ಕೂಡ ಮಾಡುತ್ತಿದ್ದರು. ಚೀನಾದ ನಡೆಯನ್ನು ಗಮನಿಸಿದ ಸೂಕ್ಷ್ಮಮತಿಗಳು ಎಚ್ಚರಿಕೆ ಕೊಡುವಾಗಲೂ ತಲೆ ಕೆಡಿಸಿಕೊಳ್ಳದ ಪ್ರಧಾನಿ ಅದು ದಾಳಿ ಮಾಡಿದೊಡನೆ ವೀರಾವೇಶದ ಮಾತುಗಳನ್ನಾಡುತ್ತ ಯುದ್ಧಸನ್ನದ್ಧವಾಗಿರದ ಸೇನೆಯನ್ನು ಬಲಿಷ್ಠ ಶತ್ರುಗಳೆದುರು ಕದನಕ್ಕೆಂದು ನಿಲ್ಲಿಸಿಬಿಟ್ಟರು. ಪರಿಣಾಮ? ಸ್ವತಂತ್ರ ಭಾರತ ಸೇನೆ ಚೀನಿಯರೆದುರು ಮಂಡಿಯೂರಿ ಕುಳಿತುಕೊಳ್ಳಬೇಕಾಯ್ತು. ಚಾಣಕ್ಯನ ಚಿಂತನೆಗಳು ಒಮ್ಮೆ ಮಗ್ಗಲು ಬದಲಿಸಿರಲಿಕ್ಕೆ ಸಾಕು.
ಮೈಮರೆತು ಕ್ಷಣದಲ್ಲಿ ರಾಕ್ಷಸ ಜೀವಸಿದ್ಧಿಯೆದುರು ತನ್ನ ಮುಂದಿನ ಯೋಜನೆ ತೆರೆದಿಟ್ಟುಬಿಟ್ಟ. ಪರ್ವತರಾಜನ ಸಾಮಂತರಾಗಿ ನಂದರ ವಿರುದ್ಧ ಏರಿ ಬಂದಿರುವ ರಾಜರುಗಳ ಆಪ್ತರಾಗಿ ನಾಟಕ ಮಾಡುತ್ತ ಇರುವ ತನ್ನ ವ್ಯಾಪಾರಿ ಮಿತ್ರರಿಗೆ ಆತನೀಗ ಸಂದೇಶ ಕಳುಹಿಸಿದ. ಈ ವ್ಯಾಪಾರಿಗಳು ಚಂದ್ರಗುಪ್ತನ ವಿರುದ್ಧ ಎಲ್ಲಾ ಬಗೆಯ ಚಾಡಿಗಳನ್ನೂ ಹೇಳಿ ಅದೇ ರಾಜರು ಆತನ ಸಂಹಾರ ಮಾಡುವಂತೆ ಮಾಡಿದರೆ ಆಯಿತು. ಖಚರ್ು ಎಷ್ಟಾದರೂ ಸರಿಯೇ ಎಂದಿದ್ದ ರಾಕ್ಷಸ. ಜೀವಸಿದ್ಧಿ ಧ್ಯಾನಸ್ಥನಂತೆ ಕಂಡರೂ ಎಲ್ಲವನ್ನೂ ಕೇಳಿಸಿಕೊಂಡ. ರಾಕ್ಷಸ ಇದಕ್ಕೆ ಸಂಬಂಧಪಟ್ಟ ಪತ್ರ ಬರೆಸಿ ಚಾರರ ಕೈಲಿ ಅದನ್ನು ಕಳಿಸುವ ಯೋಜನೆ ಮಾಡುತ್ತಿದ್ದಂತೆ ಇತ್ತ ತನ್ನ ಶಿಷ್ಯರ ಮೂಲಕ ಚಾಣಕ್ಯನಿಗೆ ಇಷ್ಟೂ ವಿಷಯ ಮುಟ್ಟಿಸಿಬಿಟ್ಟ. ಚಾಣಕ್ಯ ಚುರುಕಾದ. ನೇರ ಪರ್ವತರಾಜನ ಬಳಿ ಸಾರಿ ರಾಕ್ಷಸ ಇಂತಹುದೊಂದು ಪ್ರಯತ್ನ ನಡೆಸುತ್ತಿರುವ ಸುದ್ದಿಯನ್ನು ಬಿಚ್ಚಿಟ್ಟ. ಅಷ್ಟಕ್ಕೇ ಸುಮ್ಮನಾಗದೇ ತನ್ನವರನ್ನು ಬಿಟ್ಟು ಒಬ್ಬ ಗೂಢಚಾರನನ್ನು ಹಿಡಿದು ತಂದು ಅವನ ಕೈಲಿರುವ ಪತ್ರವನ್ನು ಪರ್ವತರಾಜನಿಗೊಪ್ಪಿಸಿದ. ಆತನಿಗೆ ಅವಮಾನ ಮಾಡಿ ಅಲ್ಲಿಂದ ಓಡಿಸಲಾಯ್ತು. ಈ ಘಟನೆ ಕೇಳಿದ ಉಳಿದ ಚಾರರು ತಂತಮ್ಮ ಪತ್ರಗಳನ್ನು ಅಗಿದು ನುಂಗಿಬಿಟ್ಟರು! ಅಧೀನ ರಾಜರ ಬಳಿ ಇರುವ, ಗುಪ್ತವಾಗಿ ರಾಕ್ಷಸನ ಕೆಲಸವನ್ನೇ ಮಾಡುತ್ತಿರುವ ವರ್ತಕರನ್ನು ಹಿಡಿದು ಅವರವರ ದೇಶಕ್ಕೆ ಓಡಿಸಲಾಯ್ತು. ಅಧಿಕೃತವಾಗಿ ಶುರುವಾದ ಕುಟಿಲ ಯುದ್ಧದ ಮೊದಲ ಜಯ ಚಾಣಕ್ಯನಿಗೇ!
ಈ ಬಗೆಯ ಕುಟಿಲಯುದ್ಧ ಈಗಲೂ ನಡೆಯುತ್ತದೆ. ಪಾಕೀಸ್ತಾನ ಇಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಮುನ್ನ ತನ್ನ ಪರವಾಗಿ ಮಾತಾಡಬಲ್ಲ ರಾಜಕಾರಣಿಗಳನ್ನು ತಯಾರು ಮಾಡಿಕೊಳ್ಳುತ್ತದೆ. ಚೀನಾ, ನಕ್ಸಲ್ವಾದಕ್ಕೆ ಬೆಂಬಲ ಕೊಡಬಲ್ಲ ಕಾಲೇಜು ಪ್ರೊಫೆಸರುಗಳನ್ನು, ಪತ್ರಕರ್ತರನ್ನು ವ್ಯವಸ್ಥಿತವಾಗಿ ರೂಪಿಸುತ್ತದೆ. ಅಮೇರಿಕಾ ತನ್ನ ಆಶಯಕ್ಕೆ ತಕ್ಕಂತೆ ಭಾರತ ಸಕರ್ಾರ ಕುಣಿಯುವಂತೆ ಮಾಡಲು ಇಲ್ಲಿನ ಎನ್ಜಿಓಗಳಿಗೆ ದುಡ್ಡುಕೊಟ್ಟು ಸಲಹುತ್ತದೆ, ಭಿನ್ನ ಭಿನ್ನ ಧಾಮರ್ಿಕ ಕೇಂದ್ರಗಳ ಮೂಲಕ ತನ್ನ ಏಜೆಂಟರನ್ನು ಹಳ್ಳಿ ಹಳ್ಳಿಗೆ ತಲುಪಿಸುತ್ತದೆ!
ಚಾಣಕ್ಯ ಈಗ ಮುಂದಿನ ರಾಜತಾಂತ್ರಿಕ ಯುದ್ಧಕ್ಕೆ ಸಿದ್ಧವಾಗಿದ್ದ. ನಂದರ ಪರವಾಗಿದ್ದ ಸಾಮಂತ ರಾಜರುಗಳಲ್ಲಿ ಗೊಂದಲ ಹುಟ್ಟಿಸುವ ದೃಷ್ಟಿಯಿಂದ ಪರ್ವತ ರಾಜನ ಪರವಾಗಿ ಪತ್ರ ಕಳಿಸಿದ. ಕಾಶೀ ರಾಜನ ಬಳಿ ನಿಯೋಗಿ ಪತ್ರ ಒಯ್ದು ನಿಂತಾಗ ಅದನ್ನೋದಿದ ಕಾಶೀರಾಜ ತಡಮಾಡದೇ ವಿಷಯವನ್ನು ರಾಕ್ಷಸನಿಗೆ ಮುಟ್ಟಿಸಿದ. ಮುಂದೇನು ಮಾಡಬೇಕೆಂದು ರಾಕ್ಷಸನ ಬಳಿಯೇ ಕೇಳಿಕೊಂಡ. ಈಗ ರಾಕ್ಷಸನಿಗೆ ಮಹದಾನಂದ. ಚಂದ್ರಗುಪ್ತ ತಾನೇ ತಾನಾಗಿ ಬಲೆಗೆ ಬಿದ್ದ ಸಂತಸ. ಪರ್ವತ ರಾಜನಿಗೆ ಸಹಾಯ ಮಾಡುವ ನಾಟಕ ಮಾಡುವಂತೆ ಕಾಶೀರಾಜನಿಗೆ ಗುಪ್ತ ಸಂದೇಶ ಕಳಿಸಿದ. ಸೈನ್ಯ ಸಮೇತ ಬರುವ ತನ್ನ ಸ್ವಾಗತಕ್ಕೆ ಚಂದ್ರಗುಪ್ತನೋ, ಪರ್ವತರಾಜನ ಮಗನೋ ಬರುವಂತೆ ಕೇಳಿಕೊಂಡು ಅವರನ್ನು ವಶಪಡಿಸಿಕೊಂಡು ತಮಗೊಪ್ಪಿಸಿದರೆ ಸಾಕು ಎಂದ. ಕಾಶೀರಾಜನ ನಿಷ್ಠೆಯ ಕುರಿತಂತೆ ರಾಕ್ಷಸನಿಗೆ ಹೆಮ್ಮೆಯಾಯ್ತು.
ಇದನ್ನು ಊಹಿಸಿಯೇ ಇದ್ದ ಚಾಣಕ್ಯ ಪ್ರತಿತಂತ್ರ ಹೂಡಿಯಾಗಿತ್ತು. ಹಾಗೆ ನೋಡಿದರೆ ರಾಕ್ಷಸ ತಂತ್ರವನ್ನು ಹೆಣೆಯಲಿಕ್ಕೆ ಚಾಣಕ್ಯ ಅವಕಾಶವನ್ನೇ ಕೊಡಲಿಲ್ಲ. ತಾನು ತೋಡಿದ ಖೆಡ್ಡಾದೊಳಕ್ಕೆ ರಾಕ್ಷಸ ನಗುನಗುತ್ತ ಬೀಳುವಂತೆ ಮಾಡಿದ ಅಷ್ಟೇ. ಯುದ್ಧವೇ ಹಾಗೆ. ಮೊದಲು ತಂತ್ರಹೆಣೆದವರು, ಮೊದಲು ಆಘಾತ ಕೊಟ್ಟವರು, ಮೊದಲು ಗುರಿ ಇಟ್ಟವರು ಗೆಲ್ಲುತ್ತಾರೆ, ಬದುಕುತ್ತಾರೆ. ಸರಿ-ತಪ್ಪುಗಳ ತೂಕವಳೆಯಲು ಅಲ್ಲಿ ಸಮಯವೇ ಇರುವುದಿಲ್ಲ.
1971 ರ ಪಾಕ್ ಯುದ್ಧದಲ್ಲಿ 21 ರ ಹರೆಯದ ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ವೀರಾವೇಶದಿಂದ ಕಾದಾಡಿ ರಣಾಂಗಣದಲ್ಲಿ ಪಾಕಿ ಗುಂಡಿಗೆ ಬಲಿಯಾದರಲ್ಲ; ಅದಾದ ಮೂರು ದಶಕಗಳ ನಂತರ ಅವರ ತಂದೆಯನ್ನು ಭೇಟಿಮಾಡಿದ ಪಾಕೀಸ್ತಾನದ ಹಿರಿಯ ಅಧಿಕಾರಿಯೊಬ್ಬರು ‘ಅಂತಹ ಅಸಮಬಲ ವೀರನನ್ನು ಕೊಂದವನು ನಾನೇ. ಅಂದು ಇಬ್ಬರೂ ಎದುರಾಬದುರು ನಿಂತಿದ್ದೆವು. ನಾನು ಕೊಲ್ಲದಿದ್ದರೆ ಅವರು ಕೊಲ್ಲುತ್ತಿದ್ದರು. ವಿಧಿ ಅಂದು ನನ್ನನ್ನು ಉಳಿಸಿತಷ್ಟೇ’ ಎಂದು ಮನನೊಂದು ಹೇಳಿದ್ದರಂತೆ! ಯುದ್ಧದಲ್ಲಿ ಇತಿಹಾಸ ಬರೆಯೋದು ಗೆದ್ದವರು ಮಾತ್ರ. ನೆನಪಿರಲಿ. ಚಾಣಕ್ಯ ಈಗ ಇತಿಹಾಸ ರಚನೆಗೆ ಸಿದ್ಧರಾಗಿದ್ದರು. ರಾಜತಾಂತ್ರಿಕ ನೈಪುಣ್ಯದ ಪರೀಕ್ಷೆಯಲ್ಲಿ ಗೆಲುವಿನ ಒಂದೊಂದೇ ಮೆಟ್ಟಿಲು ಏರುತ್ತಿದ್ದರು.
ರಾಕ್ಷಸನಿಗೆ ಈಗ ನೆಮ್ಮದಿ. ಕಾಶೀರಾಜ ಚಂದ್ರಗುಪ್ತನನ್ನು ಕೊಂದರಂತೂ ಸಮಸ್ಯೆಯೇ ಇಲ್ಲ. ಬಂಧಿಸಿದರೂ ರಾಜದ್ರೋಹದ ಆಪಾದನೆ ಹೊರಿಸಿ ನೇಣಿಗೇರಿಸಿಬಿಡಬಹುದು. ಪರ್ವತರಾಜನ ಮಗನ ಬಂಧಿಸಿದರೂ ಸಾಕು. ಆತನ ಬಿಡುಗಡೆಗೆ ಚಂದ್ರಗುಪ್ತನ ಒಪ್ಪಿಸಬೇಕೆಂದು ಕೇಳಿದರಾಯ್ತು ಎಂದುಕೊಂಡ ರಾಕ್ಷಸ. ಅವನೀಗ ಕ್ಷಣಗಳನ್ನೆಣಿಸುತ್ತ ಕುಳಿತಿದ್ದ. ಶತ್ರು ಪಲಾಯನ ಜಪ ಕೆಲಸ ಮಾಡುತ್ತಿದೆಯೆಂಬ ಭರವಸೆ ಮೂಡಿತು ಅವನಿಗೆ. ಶತ್ರು ಹೀಗೆ ಗೆಲುವಿನ ಅಮಲಿನಲ್ಲಿ ಎಚ್ಚರ ತಪ್ಪಿರುವಾಗಲೇ ದಾಳಿ ಮಾಡಿಬಿಡಬೇಕು. ಚಾಣಕ್ಯನ ಚಟುವಟಿಕೆಗಳಿಗೆ ಈಗ ಮೊದಲಿಗಿಂತಲೂ ವೇಗ ಬಂತು.
ಬಾಗುರಾಯಣ, ಭದ್ರಭಟಾದಿಗಳು ಆಗಲೇ ರಾಷ್ಟ್ರವನ್ನು ಉಳಿಸಲು ಚಾಣಕ್ಯನ ಜೊತೆ ಕೈ ಜೋಡಿಸಿಯಾಗಿತ್ತು. ಪರ್ವತರಾಯನೆದುರಾಗಿ ಯುದ್ಧ ಮಾಡದಿರುವ ನಿರ್ಣಯ ಕೈಗೊಂಡು ಅವರೆಲ್ಲ ತಟಸ್ಥರಾಗಿಬಿಟ್ಟಿದ್ದರು. ಇಲ್ಲಿಂದಾಚೆಗೆ ಚಂದ್ರಗುಪ್ತನ ಪಟ್ಟಾಭಿಷೇಕದ ಕಥೆ ಭಿನ್ನ ಭಿನ್ನ ರೂಪ ತಾಳುತ್ತದೆ. ಮುದ್ರಾ ಮಂಜೂಷದ ಪ್ರಕಾರ ಪರ್ವತರಾಜನ ಸೇನೆಗೂ ನಂದರ ಸೇನೆಗೂ ಭರ್ಜರಿ ಯುದ್ಧ ನಡೆದು ಕೆಲವೆಡೆ ನಂದರ ಕೈ ಮೇಲಾದರೆ, ಮತ್ತೆ ಕೆಲವೆಡೆ ಪರ್ವತರಾಯನ ಕೈ ಮೇಲಾಯಿತು. ಸಮಬಲದ ಯುದ್ಧವೂ ನಡೆಯಿತು. ಚಂದ್ರಗುಪ್ತನೂ ವೀರಾವೇಶದಿಂದ ಕಾದಾಡಿದ. ಹಾಗಂತ ಮುದ್ರಾ ಮಂಜೂಷದ ವಿವರಣೆ. ರುದ್ರಮೂತರ್ಿ ಶಾಸ್ತ್ರಿಗಳು ಮತ್ತು ನಾರಾಯಣಾಚಾರ್ಯರೂ ಕೂಡ ಚಾಣಕ್ಯ ತಂತ್ರಗಳನ್ನು ವಿಸ್ತರಿಸಿ ರಕ್ತ ಪಾತವಿಲ್ಲದೇ ಗೆದ್ದ ಯುದ್ಧವಿದು ಅಂತ ದಾಖಲಿಸುತ್ತಾರೆ. ಶೌರ್ಯ ಪ್ರದರ್ಶನವಿಲ್ಲದೇ ಚಂದ್ರಗುಪ್ತ ಪಟ್ಟಕ್ಕೇರಬಾರದೆಂದು ಚಾಣಕ್ಯರೇ ನಿಶ್ಚಯಿಸಿದ್ದರೆಂದು ನಾರಾಯಣಶರ್ಮರು ಮುದ್ರಾ ಮಂಜೂಷದಲ್ಲಿ ಹೇಳುತ್ತಾರೆ.
ಅದೆಲ್ಲ ಒತ್ತಟ್ಟಿಗಿಟ್ಟು ಚಾಣಕ್ಯನ ಸಾಹಸಗಳನ್ನು ಮುಂದುವರೆಸೋಣ. ಒಮ್ಮೆಯಂತೂ ತಾಳಲಾಗದೇ ರಾಕ್ಷಸ ಬಾಗುರಾಯಣರ ಯುದ್ಧಸನ್ನದ್ಧ ಸ್ಥಿತಿಯನ್ನು ನೋಡಲೆಂದು ತನ್ನ ಸೇನೆ ತೆಗೆದುಕೊಂಡು ಗಡಿಯವರೆಗೂ ಹೋಗಿ ಅಲ್ಲಿ ಹಗಲು ರಾತ್ರಿ ಶತ್ರು ಸೇನೆಯೊಂದಿಗೆ ಕಾದಾಡಿ ನಂದರ ಪಾಳಯಕ್ಕೆ ಗೆಲುವನ್ನು ಕೊಡಿಸಿ ಪಾಟಲಿಪುತ್ರಕ್ಕೆ ಮರಳಿ ಬಂದ. ಸುಮ್ಮನಾಗುವ ಜೀವವಲ್ಲ ಅವನದ್ದು. ಸೇವಕನೊಬ್ಬನನ್ನು ಕಳಿಸಿ ಪರ್ವತರಾಜನಿಗೆ ಸಂದೇಶ ಮುಟ್ಟಿಸಿದ. ಸೋಲು ಅಮರಿಕೊಳ್ಳುತ್ತಿರುವ ಲಕ್ಷಣದಿಂದ ಭಯಭೀತನಾಗಿ ಚಡಪಡಿಸುತ್ತಿದ್ದ ಪರ್ವತರಾಜನಿಗೆ ಚಂದ್ರಗುಪ್ತನ ವಶಕ್ಕೆ ಕೊಟ್ಟರೆ ಕ್ಷಮಿಸಿ ಬಿಡುವ ರಾಕ್ಷಸನ ಒಪ್ಪಂದ ತಂಪೆರೆಯುವಂತಿತ್ತು. ಗಡಿಯ ಒಂದು ಭಾಗದಲ್ಲಿ ಉಂಟಾದ ಸೋಲಿಗೆ ಆತ ಎಷ್ಟರ ಮಟ್ಟಿಗೆ ಪತರಗುಟ್ಟಿ ಹೋಗಿದ್ದನೆಂದರೆ ಚಾಣಕ್ಯರ ಬೌದ್ಧಿಕ ಸಾಮಥ್ರ್ಯವನ್ನೂ ಮರೆತು ಮಂಕಾಗಿದ್ದ. ಹಾಗಂತ ಚಾಣಕ್ಯರು ಇದನ್ನು ಊಹಿಸಿರಲಿಲ್ಲವೆಂತಲ್ಲ. ಪರ್ವತರಾಜರು ಪಕ್ಷ ಬದಲಿಸುವ ಮನಸ್ಥಿತಿಯವರೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆಯರ್ಾವರ್ತಕ್ಕೆ ಇಂಥವರಿಂದಲೇ ಸಮಸ್ಯೆಗಳೆಂದೂ ಅರಿವಿತ್ತು. ಅವರೀಗ ರಾಜನ ಬಳಿ ಧಾವಿಸಿದರು. ಇನ್ನು ತಡಮಾಡಿದರೆ ಉಪಯೋಗವಿಲ್ಲವೆಂದರಿತು ಮೂರ್ನಾಲ್ಕು ದಿನಗಳಲ್ಲಿ ನಮ್ಮ ನಿಧರ್ಾರ ಪ್ರಕಟಿಸುವೆವೆಂದು ರಾಕ್ಷಸನಿಗೆ ಅವನದ್ದೇ ಚಾರನ ಮೂಲಕ ಹೇಳಿ ಕಳಿಸಿದರು. ಇಷ್ಟೇ ದಿನಗಳಲ್ಲಿ ಯುದ್ಧ ಗೆದ್ದು ಚಂದ್ರಗುಪ್ತನ ಪಟ್ಟಾಭಿಷಕ್ತನನ್ನಾಗಿಸಿಬಿಡುವ ತುಡಿತ ಅವರಿಗಿತ್ತು.
ರಾಕ್ಷಸನಿಗೆ ಪರ್ವತರಾಜನ ಸಂದೇಶದಿಂದ ಉಸಿರಾಡಲು ಸಮಯ ಸಿಕ್ಕಿತು. ಮೂರ್ನಾಲ್ಕು ದಿನಗಳ ಸಮಯದಲ್ಲಿ ತಮ್ಮ ಸೇನೆಯನ್ನು ಮತ್ತೆ ನಿಮರ್ಿಸಿಕೊಳ್ಳುವ, ವಿಶ್ರಾಂತಿ ಪಡೆಯುವ ವಿಶ್ವಾಸ ಅವರಿಗೆ ಬಂತು. ಸೇನೆಗೆ ವಿಶ್ರಾಂತಿ ಬಿಡಿ, ಸ್ವತಃ ಆತನಿಗೂ ನಿದ್ದೆ ಬೇಕಿತ್ತು. ತನ್ನೆಲ್ಲಾ ಚಾರರಿಗೆ ಎಚ್ಚರಿಕೆಯಿಂದಿರಲು ಹೇಳುತ್ತ ರಾಕ್ಷಸ ತಾನು ಮಲಗಿಬಿಟ್ಟ. ಶತ್ರು ಸೇನೆಯನ್ನು ತಾನೇ ಛಿದ್ರ ಛಿದ್ರಗೊಳಿಸಿರುವ ಆತ್ಮ ವಿಶ್ವಾಸ ಮತ್ತು ಚಂದ್ರಗುಪ್ತನನ್ನು ಹಿಡಿಯಲು ಕಾಶೀರಾಜನ ಮೂಲಕ ರಚಿಸಿರುವ ಗುಪ್ತ ನಾಟಕ ಅಷ್ಟೇ ಅಲ್ಲದೇ ಸಂಧಾನದ ಮಾತುಗಳಿಗೆ ಬಲಿಯಾದಂತೆ ಕಾಣುತ್ತಿರುವ ಪರ್ವತರಾಜ. ಯಾವ ದಿಕ್ಕಿನಿಂದ ನೋಡಿದರೂ ಜಯಲಕ್ಷ್ಮಿ ಹಾರ ತೆಗೆದುಕೊಂಡು ಕಾಯುತ್ತಿರುವ ದೃಶ್ಯಗಳೇ ಕಾಣುತ್ತಿದ್ದವು ರಾಕ್ಷಸನಿಗೆ. ಪಲ್ಲಂಗಕ್ಕೆರಗಿ ಕಣ್ಮುಚ್ಚಿದ್ದಷ್ಟೇ. ರಾಕ್ಷಸ ಸುದೀರ್ಘ ನಿದ್ದೆಗೆ ಜಾರಿಬಿಟ್ಟ.
ನಂದರು ಮತ್ತು ರಾಕ್ಷಸರು ಹೀಗೆ ಬೇರೆಯಾದ ಸಂದರ್ಭಗಳು ಬಲು ಕಡಿಮೆ. ಇಂತಹುದೊಂದು ಸಮಯಕ್ಕಾಗಿಯೇ ಚಾಣಕ್ಯ ಚಂದ್ರಗುಪ್ತರು ಕಾಯುತ್ತಿದ್ದರು. ಅದಾಗಲೇ ಚಾಣಕ್ಯರು ಪರ್ವತರಾಜನ ಸೇನೆಯ ತುಕಡಿಯೊಂದಕ್ಕೆ ಕಾಶೀರಾಜನ ಸೈನಿಕರ ವೇಷ ಹಾಕಿಸಿ ಜಪ ಶಾಲೆಯಿದ್ದ ನದಿಯ ಮತ್ತೊಂದು ದಡದಲ್ಲಿ ಸಿದ್ಧವಾಗಿ ನಿಲ್ಲುವಂತೆ ಅಣಿಗೊಳಿಸಿದ್ದರು. ಜಪಶಾಲೆಯಿಂದ ಸಂದೇಶ ಸಿಕ್ಕೊಡನೆ ಈ ಪಡೆ ಅತ್ತ ಧಾವಿಸಿ ಶತ್ರುಗಳ ಹನನ ಮಾಡಬೇಕು. ಜಪಶಾಲೆಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅದು ಸುತ್ತಲೂ ಕಾದಿರುವ ಚಂದ್ರಗುಪ್ತನ ಸೇನೆಗೆ ದಾಳಿಗೈಯ್ಯಲು ಸಂದೇಶ.
ಯೋಜನೆಗೆ ತಕ್ಕಂತೆ ಪರ್ವತರಾಜನ ಸೈನಿಕರು ನದಿಯ ಆ ಬದಿ ಸಿದ್ಧರಾಗಿ ನಿಂತರು. ಚಂದ್ರಗುಪ್ತನ ಪಡೆಯೂ ಆಕ್ರಮಣಕ್ಕೆ ತಯಾರಿ ಮಾಡಿಕೊಂಡೇ ಯಾರ ಕಣ್ಣಿಗೂ ಕಾಣದಂತೆ ಜನರೊಳಗೆ ಒಂದಾಗಿ ಕಾಯುತ್ತಲಿತ್ತು. ರಾಕ್ಷಸನೊಂದಿಗೇ ನಂದರ ಭಾಗ್ಯವೂ ಮಲಗಿಬಿಟ್ಟಿತ್ತು. ಜಾಗೃತನಾಗಿ ಮುಂದಿನ ಘಟನೆಗಳಿಗಾಗಿ ಜತನದಿಂದ ಕಾಯುತ್ತಿದ್ದವ ಚಾಣಕ್ಯ ಮಾತ್ರ.
ಅಂದುಕೊಂಡಂತೆ ಜಪ ಶಾಲೆಯಿಂದ ಹೊರಟ ಸಾಧಕನೊಬ್ಬ ನಂದರ ಬಳಿ ಸಾರಿ ಪೂಣರ್ಾಹುತಿಯ ಸಮಯವೆಂದು ಭಿನ್ನವಿಸಿಕೊಂಡ. ಶತ್ರುನಾಶದ ಸಂದೇಶ ಯಜ್ಞಕುಂಡದಲ್ಲಿಯೇ ಕಾಣಸಿಗುವುದೆಂದು ಮಾಸೋಪವಾಸಿ ಹೇಳಿದ್ದು ನೆನಪಿಗೆ ಬಂದೊಡನೆ ನಂದರು ಲಗುಬಗೆಯಿಂದ ಸಿದ್ಧರಾದರು. ಅಮಾತ್ಯ ರಾಕ್ಷಸರು ಆಯಾಸಗೊಂಡು ವಿಶ್ರಾಂತಿಯಲ್ಲಿದ್ದಾರೆಂದು ಕೇಳಿ ಅವರನ್ನು ಎಬ್ಬಿಸುವುದು ಬೇಡವೆಂದು ನಿಶ್ಚಯಿಸಿ ತಾವುಗಳೇ ಹೊರಟರು. ಅಂಗರಕ್ಷಕರು, ಭಟರು ಜೊತೆಯಲ್ಲಿ ಬಂದರೆ ಮತ್ತೆ ಮಾಸೋಪವಾಸಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತೆಂದು ಹೆದರಿ ಅವರನ್ನು ಅಲ್ಲಿಯೇ ಬಿಟ್ಟು ಮುನ್ನಡೆದರು.
ಓಹ್! ಚಾಣಕ್ಯ ಹೆಣೆದ ಬಲೆಗೆ ತೋಳಗಳು ತಾವಾಗಿಯೇ ಸಿಕ್ಕಿಹಾಕಿಕೊಳ್ಳಲು ಬಂದಿದ್ದವು!

Comments are closed.