ವಿಭಾಗಗಳು

ಸುದ್ದಿಪತ್ರ


 

ಜೀವಂತಿಕೆ ತುಂಬುವ ಶಿಕ್ಷಣ ಬೇಕಾಗಿದೆ!

ಮಂಗಳೂರು-ಬೆಂಗಳೂರುಗಳಲ್ಲಿ ಕೆಲವು ಸಂಸ್ಥೆಗಳಿವೆ. ಒಮ್ಮೆ ಒಳಹೊಕ್ಕರೆ ಹೊರಬರುವ ವೇಳೆಗೆ ವಿದ್ಯಾಥರ್ಿಗಳು ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಬದುಕುವ ಶಿಕ್ಷಣ ಪಡೆದು ಬರುತ್ತಾರೆ. ಆ ಪರಿಯ ಜೈಲುಗಳನ್ನೂ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ರೂಪಿಸಿಬಿಟ್ಟಿದ್ದೇವೆ. ಚಿಂತನೆಗಳು ಅರಳಲು ಬೇಕಾದ ವಾತಾವರಣದಲ್ಲಿ ಬೆಳೆಯದ ವಿದ್ಯಾಥರ್ಿ ಸಕರ್ಾರಿ ನೌಕರಿಯಲ್ಲಿ ಉನ್ನತ ಹುದ್ದೆ ಪಡೆಯಬಹುದೇನೋ ಸರಿ, ಆದರೆ ಆತ ತನ್ನ ಹುದ್ದೆಯಲ್ಲಿ ಛಾಪು ಮೂಡಿಸಬಲ್ಲ, ಹೊಸತನವನ್ನು ಸೃಷ್ಟಿಸಬಲ್ಲ ಕೆಲಸಗಾರನಂತೂ ಖಂಡಿತ ಆಗಲಾರ.

ಬೆಳಗಾವಿಯ ಹಳ್ಳಿಯೊಂದರ ಶಾಲೆಗೆ ಇತ್ತೀಚೆಗೆ ಭೇಟಿಕೊಡುವ ಅವಕಾಶ ಒದಗಿ ಬಂದಿತ್ತು. ಮುಖ್ಯೋಪಾಧ್ಯಾಯರು, ಶಿಕ್ಷಕರನ್ನು ಭೇಟಿ ಮಾಡಿದ ನಂತರ ಮಕ್ಕಳೊಂದಿಗೆ ಮಾತನಾಡಲೆಂದು ತರಗತಿಯೊಳಗೆ ಇಣುಕಿದರೆ ಮನ ಕಲಕುವ ದೃಶ್ಯ. ತರಗತಿಗಳಲ್ಲಿ ಸೂಕ್ತ ಬೆಳಕಿಲ್ಲ, ಸಹಜವಾಗಿ ಗಾಳಿಯೂ ಇಲ್ಲ. ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಒಂದು ತರಗತಿಯಲ್ಲಿ ಬೆಳಗಿನಿಂದ ಸಂಜೆಯವರೆಗೂ ಆ ವಾತಾವರಣದಲ್ಲಿರಬೇಕು. ಅವರ ಕಣ್ಣುಗಳ ಮೇಲೆ, ದೇಹಾರೋಗ್ಯದ ಮೇಲೆ ಆಗುವ ಪ್ರಭಾವಗಳನ್ನು ಊಹಿಸಿ ವಿಶಾಲವಾದ ಶಾಲೆಗಳನ್ನೆಲ್ಲ ಕಂಡಿದ್ದವನಿಗೆ ಒಮ್ಮೆ ಗಾಬರಿಯಾಯ್ತು. ಇಲ್ಲಿನ ಶಾಲೆಗಳು ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬುದನ್ನು ಕೇಳಿ ಏನೂ ತೋಚದೇ ಸಮ್ಮನಾಗಿಬಿಟ್ಟೆ. ಯಾಕೋ ಗುರುದೇವ ರವೀಂದ್ರರ ಶಾಂತಿನಿಕೇತನ ನೆನಪಾಯ್ತು. ಪಶ್ಚಿಮದ ನಮೂನೆಯನ್ನು ನಕಲು ಮಾಡಿದುದರ ಪರಿಣಾಮವಾಗಿ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕುವ ಪರಿಪಾಠ ನಮಗೆ ರೋಗವಾಗಿ ಆವರಿಸಿಕೊಂಡುಬಿಟ್ಟಿದೆ. ಶಕ್ತಿಯ ಕಾರಂಜಿಯಿಂದ ಕೂಡಿದ ವಿದ್ಯಾಥರ್ಿಗಳ ಚಿಮ್ಮುವ ಬುಗ್ಗೆಯನ್ನು ಬಂಧಿಸಿ ಕೂಡಿಡುವ ಶಿಕ್ಷಣವನ್ನು ನಕಲು ಮಾಡುವ ಕೆಲಸ ಭರದಿಂದ ಸಾಗಿದೆ. ಒಂದೆರಡು ವರ್ಷಗಳಲ್ಲ; ಸ್ವಾತಂತ್ರ್ಯ ದೊರೆತ ಎಪ್ಪತ್ತು ವರ್ಷಗಳಿಂದ ಇದೇ ಪ್ರಕ್ರಿಯೆ ನಡೆದು ಬಂದಿರೋದು. ಪಶ್ಚಿಮದ ಶಿಕ್ಷಣದ ಮಾಡೆಲ್ಲು ಅದಾಗಲೇ ಅನೇಕ ಮಜಲುಗಳನ್ನು ದಾಟಿ ಬಂದಿದೆ. ಅಲ್ಲಿ ಈ ವಿಚಾರದಲ್ಲಿ ನಿರಂತರ ಸಂಶೋಧನೆಗಳೂ ನಡೆಯುತ್ತಿವೆ. ಅಲ್ಲಿನ ಪ್ರಾಥಮಿಕ ಶಿಕ್ಷಣವಂತೂ ಮನಮುಟ್ಟುವಂಥದ್ದು. ಅಲ್ಲಿ ಇಂದಿನ ದಿನಗಳ ಪ್ರಾಥಮಿಕ ಶಿಕ್ಷಣ ಅಕ್ಷರಶಃ ಪುಸ್ತಕ ರಹಿತವಾದುದು. ನಮ್ಮಲ್ಲಿಯಂತೆ ಮಕ್ಕಳು ವಿಷಯಕ್ಕೊಂದು ಪುಸ್ತಕದ ಹೊರೆ ಹೊರುವುದಿಲ್ಲ. ಅದನ್ನು ಮನೆಗೆ ತಂದು ಹೋಂ ವಕರ್್ನ ತಲೆಬೇನೆಯನ್ನೂ ಹೊತ್ತು ತಿರುಗಾಡುವುದಿಲ್ಲ. ಆಟ ಆಡಲೆಂದೇ ಶಾಲೆಗೆ ಹೋಗುತ್ತಾರೆ. ಅಥವಾ ಆಟ ಆಡುತ್ತಲೇ ಶಾಲೆ ಮುಗಿಸುತ್ತಾರೆ. ಕಲಿಕೆ ಒಂದು ಆನಂದವಾಗಿ ಬದಲಾಗೋದು ಹೀಗೆ. ಈ ಶಿಕ್ಷಣದ ಹೊತ್ತಲ್ಲಿಯೇ ಅವರಿಗೆ ಸಂಘ ಬದುಕಿಗಾಗಿ ಅನುಸರಿಸಲೇಬೇಕಾದ ಸಾಮಾಜಿಕ ನಿಯಮಗಳನ್ನು ರೂಪಿಸಿಕೊಟ್ಟು ತಿಳಿ ಹೇಳೋದು ಅಲ್ಲಿ. ರಸ್ತೆಯನ್ನು ಗಲೀಜು ಮಾಡಬಾರದು, ಕಾರಲ್ಲಿ ಕುಳಿತೊಡನೆ ಬೆಲ್ಟು ಹಾಕಿಕೊಳ್ಳಬೇಕು, ಚಾಕ್ಲೇಟ್ನ ರ್ಯಾಪರ್ ಡಸ್ಟ್ಬಿನ್ಗೇ ಎಸೆಯಬೇಕು, ರೆಡ್ಸಿಗ್ನಲ್ ಅಂದರೆ ನಿಲ್ಲೋದು, ಗ್ರೀನ್ ಸಿಗ್ನಲ್ ಬರೋವರೆಗೆ ಹೊರಡಬಾರದು. ಇವೆಲ್ಲ ಶಿಕ್ಷಣ ಆ ವೇಳೆಯಲ್ಲೇ ಸಿಗೋದು. ಮತ್ತು ಆ ಹೊತ್ತಲ್ಲಿ ಹೇಳಿಕೊಟ್ಟ ಪಾಠ ಶಾಶ್ವತ. ನಾವಾದರೋ ಅದೇ ಸಮಯದಲ್ಲಿ ಮಕ್ಕಳಿಗೆ ತಮ್ಮದಲ್ಲದ ಭಾಷೆಯನ್ನು ಕಲಿಸುವುದಕ್ಕೆ ಹಾತೊರೆಯುತ್ತಿರುತ್ತೇವೆ.  ಹುಟ್ಟಿದಾಗಿನಿಂದ ಕನ್ನಡ-ಕೊಂಕಣಿ-ತುಳುಗಳಲ್ಲಿ ಆಲೋಚಿಸುವ ಮಗು ಶಾಲೆಯಲ್ಲಿ ಕುಳಿತು ಅದನ್ನು ಅನುವಾದ ಮಾಡುವ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ನಾಲ್ಕು ಗೋಡೆಗಳ ನಡುವೆ ಬಂಧಿಸುವ ಕಿರಿಕಿರಿಗೆ ಸಿಲುಕಿದ ಪುಟ್ಟ ಮಗು ಈಗ ಆಲೋಚನೆಯನ್ನು ಸ್ವತಂತ್ರವಾಗಿ ಮಾಡಲಾಗದ ಸಮಸ್ಯೆಗೆ ತನ್ನ ತಾನು ಒಡ್ಡಿಕೊಳ್ಳುತ್ತದೆ. ಆಗಲೇ ಗುಲಾಮಿ ಮಾನಸಿಕತೆ ಮೈದೋರುವುದು. ಭಾಷೆ ತನ್ನದಲ್ಲ, ಚಿಂತನೆಗಳು ತನ್ನದಲ್ಲ. ಕ್ರಮೇಣ ಇದರ ಪರಿಣಾಮವಾಗಿ ತನ್ನದಲ್ಲದ ಸಂಸ್ಕೃತಿಯೂ ಆವಾಹನೆಯಾಗುತ್ತದೆ. ಅಲ್ಲಿಗೆ ಒಟ್ಟಾರೆ ಕಥೆ ಮುಗಿದಂತೆ. ತಾರುಣ್ಯ ಅತ್ತ ಪಶ್ಚಿಮದ್ದೂ ಅಲ್ಲದ ಇತ್ತ ಭಾರತೀಯವಾದದ್ದೂ ಅಲ್ಲದ ಎಡಬಿಡಂಗಿ ಸಮಾಜದ ಅಂಗವಾಗಿಬಿಡುತ್ತದೆ. ಪಶ್ಚಿಮದ ಪ್ರಾಪಂಚಿಕತೆ ಇವರನ್ನು ಸೆಳೆಯುತ್ತಿರುತ್ತದೆ. ಅದೇ ಸಮಯಕ್ಕೆ ಭಾರತದ ಮೌಲ್ಯಗಳಿಂದ ದೂರವಾಗುತ್ತಿರುವೆನೆಂಬ ಪಾಪ ಪ್ರಜ್ಞೆ ಕೂಡ. ಕವಲುದಾರಿಯಲ್ಲಿ ನಿಂತ ಈ ತಾರುಣ್ಯವನ್ನು ಸುಂದರವಾಗಿ ರೂಪಿಸುವುದು ಸುಲಭದ ಮಾತಲ್ಲ. ಅದಕ್ಕೆ ಬಾಲ್ಯದ ಶಿಕ್ಷಣ ಬಲು ಯೋಗ್ಯವಾದುದಾಗಿರಬೇಕು.

1

ನಾವು ಶಿಕ್ಷಣ ವ್ಯವಸ್ಥೆಯ ಮೊದಲ ಹಂತದಲ್ಲಿಯೇ ಸೋತುಬಿಟ್ಟಿದ್ದೇವೆ. ಇತ್ತೀಚೆಗೆ ದೆಹಲಿಯಲ್ಲಿ ಮಾತನಾಡಲು ಸಿಕ್ಕ ಶ್ರೀ ಅಶೋಕ್ ಠಾಕೂರರು ಶಾಲೆಯೊಂದನ್ನು ನಡೆಸುತ್ತಿರುವುದರ ಕುರಿತಂತೆ ಹೇಳಿದರು. ಒಂದಲ್ಲ ಅಂತಹ ನಾಲ್ಕಾರು ಶಾಲೆಗಳನ್ನು ಜೊತೆಗೆ ದತ್ತು ತೆಗೆದುಕೊಂಡ ಸಕರ್ಾರಿ ಶಾಲೆಗಳನ್ನೂ ಅವರು ನಡೆಸುತ್ತಾರೆ. ಅವರ ಶಿಕ್ಷಣ ಕ್ರಮವೇ ವಿಶಿಷ್ಟವಾದುದು. ಅಲ್ಲಿ ಮಕ್ಕಳು ಓದುವುದಿಲ್ಲ. ಮೇಷ್ಟ್ರು ಓದುತ್ತಾರೆ ಮಕ್ಕಳು ಕೇಳುತ್ತಾರಷ್ಟೇ! ಅವರು ಹೇಳುವ ಕಲ್ಪನೆಯೇ ಅದ್ಭುತ. ಸಂಬಳ ಕೊಡುವುದು ಮೇಷ್ಟರಿಗೆ ಹೀಗಾಗಿ ಅವರು ಓದಲಿ; ಮಕ್ಕಳು ಕೇಳಲಿ ಅಂತಾರೆ ಅವರು. ನೋಡುವುದರ ನಂತರ ಮಕ್ಕಳ ಸೂಕ್ಷ್ಮತೆ ಅರಳೋದು ಕೇಳುವುದರಲ್ಲಿಯೇ. ಅವರು ಆ ವಯಸ್ಸಿನಲ್ಲಿ ಹೆಚ್ಚು ಹೆಚ್ಚು ಕೇಳುವುದನ್ನು ರೂಢಿಸಿಕೊಂಡರೆ ಗ್ರಹಿಕೆಯ ಸಾಮಥ್ರ್ಯವೂ ವೃದ್ಧಿಯಾಗುತ್ತದೆ. ನಾವು ಎ, ಬಿ, ಸಿ, ಡಿ ಬರೆಸಿ ಉರು ಹೊಡೆಸುವುದರಲ್ಲಿ ಮಗ್ನವಾಗಿರುವುದರಿಂದ ಮಕ್ಕಳ ಒಂದು ಕೌಶಲವನ್ನು ಪೂರ್ಣ ನಾಶಮಾಡಿಯೇ ಬಿಟ್ಟಿದ್ದೇವೆ. ಹೀಗಾಗಿಯೇ ಗಹನವಾದ ವಿಚಾರಗಳನ್ನು ಕೇಳುವ ಸಾಮಥ್ರ್ಯವನ್ನೇ ತರುಣರು ಕಳಕೊಂಡಿರೋದು. ಸೀಟಿ ಹೊಡೆಯುವ ಕೇಕೆ ಹಾಕುವ ಮಾತುಗಳಿದ್ದರಷ್ಟೇ ಅವರಿಗೆ ಆನಂದ. ಅಂತಮರ್ುಖಿಯಾಗಿಸಬಲ್ಲ ಪ್ರವಚನಗಳಿಂದ ಅವರೆಲ್ಲ ಬಲು ದೂರ. ಇದು ಬಾಲ್ಯದ ಶಿಕ್ಷಣದ ಸಮಸ್ಯೆಯೇ. ಊರಿನ ಶಾಲೆಗೇ ಹೋಗದ ಹೆಣ್ಣುಮಕ್ಕಳು ಕುಳಿತು ಕೇಳಬಲ್ಲ ಗುರುವಿನ ಪ್ರವಚನಗಳಿಗೆ ತರುಣ ಕಿವಿಯಾಗಲಾರ. ನಾವು ಅವನ ಕಿವಿಗಳನ್ನು ಹರಿದು ಹಾಕಿಬಿಟ್ಟಿದ್ದೇವೆ.

ಬಾಲ್ಯದಲ್ಲಿ ಅನುಭವ ಜನ್ಯವಾದ ಶಿಕ್ಷಣಕ್ಕೆ ಹೆಚ್ಚು ಬೆಲೆ. ಮಾಡಿದ ತಪ್ಪುಗಳನ್ನು ಅವನೇ ಅನುಭವದ ಆಧಾರದ ಮೇಲೆ ತಿದ್ದಿಕೊಳ್ಳುತ್ತಾನಲ್ಲ ಅದು ಜೀವನದ ಪಾಠವಾಗಿ ರೂಪುಗೊಳ್ಳುತ್ತದೆ. ಹೀಗಾಗಿಯೇ ಪಶ್ಚಿಮದಲ್ಲಿ ಶಾಲೆಗಳಲ್ಲಿ ಪ್ರಯೋಗಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು. ನಮ್ಮಲ್ಲಿ ವಿದ್ಯಾಥರ್ಿಯ ಅನುಭವಕ್ಕೆ ನಯಾಪೈಸೆಯಷ್ಟೂ ಕಿಮ್ಮತ್ತಿಲ್ಲ. ಮನೆಯಲ್ಲಿ ಅಪ್ಪ-ಅಮ್ಮ ತಮ್ಮ ಅನುಭವಗಳನ್ನು ಹೇರುತ್ತಾರೆ, ‘ನಾವು ಚಿಕ್ಕವರಾಗಿದ್ದಾಗ ಹೇಗಿತ್ತು ಗೊತ್ತಾ?’ ಅಂತಾನೇ ಅವರ ಮಾತುಗಳೆಲ್ಲ ಶುರುವಾಗೋದು. ಅದು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರೇರಣೆಯಾಗಿ ದಕ್ಕುವುದಿಲ್ಲ, ಬದಲಿಗೆ ಸಮಸ್ಯೆ ಮತ್ತು ಪರಿಹಾರಗಳೆರಡರೆಡೆಗೆ ಅಸಡ್ಡೆ ಮೂಡುವಂತೆ ಮಾಡುತ್ತದೆ. ಅತ್ತ ಶಾಲೆಗೆ ಹೋದರೂ ಹಾಗೆಯೇ. ವಿದ್ಯಾಥರ್ಿಯ ಸಹಜ ಅಭಿಪ್ರಾಯಕ್ಕೆ ಮನ್ನಣೆಯೇ ಇಲ್ಲ. ಟೈಮ್ಟೇಬಲ್ನ ನಿಯಮದಡಿಯಲ್ಲಿ ಬಂಧಿಸಲ್ಪಟ್ಟ ವಿದ್ಯಾಥರ್ಿಗೆ ಮಿಸುಕಾಡಲೂ ಅವಕಾಶವಿಲ್ಲ. ಅವನಿಗೆ ಎಲ್ಲವನ್ನೂ ಪೂರೈಸುವ ಸುಂದರ ವ್ಯವಸ್ಥೆ ತಮ್ಮದೆಂದು ಬಡಾಯಿ ಕೊಚ್ಚಿಕೊಳ್ಳುತ್ತವೆ ಪ್ರತಿ ದೊಡ್ಡ ಶಾಲೆಯೂ ಕೂಡ. ಆದರೆ ಹಾಗೆ ವ್ಯವಸ್ಥೆ ಪೂರೈಸುವ ಭರದಲ್ಲಿ ಆ ವಿದ್ಯಾಥರ್ಿಯ ಆಂತರ್ಯದ ಹೋರಾಟದ ಸಾಮಥ್ರ್ಯವನ್ನೇ ಕದಡಿಬಿಟ್ಟಿದ್ದೇವೆಂಬುದನ್ನು ಮರೆತು ಬಿಟ್ಟಿರುತ್ತೇವೆ. ಬಾಳೇಹಣ್ಣನ್ನು ಸುಲಿದು ಬಾಯಿಗಿಡುವುದು ಅದ್ಯಾವ ಶಿಕ್ಷಣ? ಬಾಳೇಹಣ್ಣನ್ನು ಬೆಳೆಸಿ ಮರದಿಂದ ಕಿತ್ತು ತಂದು ಸುಲಿದು ಹಂಚಿಕೊಂಡು ತಿನ್ನುವಂತಹ ಕಲ್ಪನೆ ಬೇಡವೇನು?

3

ಮಂಗಳೂರು-ಬೆಂಗಳೂರುಗಳಲ್ಲಿ ಕೆಲವು ಸಂಸ್ಥೆಗಳಿವೆ. ಒಮ್ಮೆ ಒಳಹೊಕ್ಕರೆ ಹೊರಬರುವ ವೇಳೆಗೆ ವಿದ್ಯಾಥರ್ಿಗಳು ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಬದುಕುವ ಶಿಕ್ಷಣ ಪಡೆದು ಬರುತ್ತಾರೆ. ಆ ಪರಿಯ ಜೈಲುಗಳನ್ನೂ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ರೂಪಿಸಿಬಿಟ್ಟಿದ್ದೇವೆ. ಚಿಂತನೆಗಳು ಅರಳಲು ಬೇಕಾದ ವಾತಾವರಣದಲ್ಲಿ ಬೆಳೆಯದ ವಿದ್ಯಾಥರ್ಿ ಸಕರ್ಾರಿ ನೌಕರಿಯಲ್ಲಿ ಉನ್ನತ ಹುದ್ದೆ ಪಡೆಯಬಹುದೇನೋ ಸರಿ, ಆದರೆ ಆತ ತನ್ನ ಹುದ್ದೆಯಲ್ಲಿ ಛಾಪು ಮೂಡಿಸಬಲ್ಲ, ಹೊಸತನವನ್ನು ಸೃಷ್ಟಿಸಬಲ್ಲ ಕೆಲಸಗಾರನಂತೂ ಖಂಡಿತ ಆಗಲಾರ. ನಮಗೀಗ ಬೇಕಿರೋದು ಕೆಲಸವನ್ನು ಮಾಡಿ ಮುಗಿಸಿಬಿಡಬಲ್ಲವನಲ್ಲ; ಬದಲಿಗೆ ಸವಾಲನ್ನು ಸ್ವೀಕರಿಸಿ ಪರಿಹಾರ ಹುಡುಕಿ ಸಾವಿರ ವರ್ಷಗಳ ದಾಸ್ಯದಿಂದ ರಾಷ್ಟ್ರವನ್ನು ಮುಕ್ತಗೊಳಿಸಬಲ್ಲ ವೀರ. ಅದಕ್ಕಾಗಿಯೇ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾವಣೆಯತ್ತ ಹೆಜ್ಜೆ ಹಾಕಬೇಕಿರೋದು. ಮೊದಲೈದು ವರ್ಷ ತಂದೆ-ತಾಯಿಯರು ಮುದ್ದಿನಿಂದ ಪಾಠ ಕಲಿಸಲಿ. ಆನಂತರದ ಹತ್ತು ವರ್ಷಗಳ ಕಾಲ ಮೇಷ್ಟ್ರು ಶಾಲೆಯಲ್ಲಿ ಅಗತ್ಯಬಿದ್ದರೆ ದಂಡಿಸಲಿ. ಆ ವೇಳೆಗೆ ಮೀಸೆ ಚಿಗುರಿದ ಪೋರನಾಗಿದ್ದರೆ ಅವನಿಗೆ ಸ್ವತಂತ್ರವಾಗಿ ಆಲೋಚಿಸುವ ಅಗತ್ಯ ಬಿದ್ದರೆ ತಿದ್ದುವ ಜವಾಬ್ದಾರಿ ನಮ್ಮ ಹೆಗಲ ಮೇಲಿದ್ದರೆ ಸಾಕು. ಹಾಗೆನ್ನುತ್ತದೆ ಸಂಸ್ಕೃತದ ಒಂದು ಶ್ಲೋಕ!

4

ಭಾರತೀಯ ಶಿಕ್ಷಣದ ಕಲ್ಪನೆ ಇದ್ದದ್ದೇ ಹಾಗೆ. ಆರೇಳು ವರ್ಷದ ವೇಳೆಗೆ ಉಪನಯನ ಮಾಡಿಸಿ ಗುರುಕುಲಕ್ಕೆ ಕಳಿಸಿದರೆ ಮನೆಯ ಬಂಧನವನ್ನೆಲ್ಲ ಕಳಚಿ ಹುಡುಗ ಅಧ್ಯಯನಶೀಲನಾಗುತ್ತಾನೆ. ಗುರುವಿಗೆ ಶಿಷ್ಯನ ಅಧ್ಯಯನ ತೃಪ್ತಿ ತಂದ ಮೇಲೆ ಮನೆಗೆ ಮರಳಿ ಬರುತ್ತಾನೆ. ಉದ್ಯೋಗಶೀಲನಾಗುತ್ತಾನೆ. ನಮ್ಮ ಇಡಿಯ ಶಿಕ್ಷಣ ವ್ಯವಸ್ಥೆ ಗುರುಕೇಂದ್ರಿತ. ಮೊದಲ ಪ್ರಾಶಸ್ತ್ಯ ಆತನಿಗೇ. ಆನಂತರ ಗುರುಕುಲದ ಕಟ್ಟಡ, ಅಲ್ಲಿರುವ ದನ-ಕರುಗಳು, ಗುರುಗಳ ಸಿರಿವಂತಿಕೆ ಇವುಗಳಿಗೆ. ಸದ್ಗುರುಗಳು ಸಿಕ್ಕರೆ ಹುಡುಗ ಬೇರೆಡೆ ಕಣ್ಣಾಡಿಸುವ ಪ್ರಮೇಯವೂ ಇರಲಿಲ್ಲ. ಅವರ ಸೇವೆ ಮಾಡುತ್ತ ಮಾಡುತ್ತ ಆತ ತನ್ನ ಶಿಕ್ಷಣವನ್ನು ಪೂರೈಸಿಕೊಳ್ಳುತ್ತಿದ್ದ. ಶಿಷ್ಯನ ಆಯ್ಕೆಯೂ ಹಾಗೆಯೇ. ಅದು ಅವನ ತಂದೆ-ತಾಯಿಯರ ಶಿಕ್ಷಣದ ಮಟ್ಟವನ್ನು ಅನುಸರಿಸಿದುದಾಗಿರಲಿಲ್ಲ. ಅದು ಅಪ್ಪನ ಸಿರಿವಂತಿಕೆಯ ಆಧಾರದ ಮೇಲಿನದುದಾಗಿರಲಿಲ್ಲ ಬದಲಿಗೆ ಶಿಷ್ಯನ ಶ್ರದ್ಧೆ, ಭಕ್ತಿಗಳೇ ಮೊದಲ ಹೆಜ್ಜೆಯಾಗಿದ್ದವು. ಅದರ ಆಧಾರದ ಮೇಲೆಯೇ ಅವನಿಗೆ ಕೊಡಬೇಕಾದ ಶಿಕ್ಷಣವನ್ನು ರೂಪಿಸುತ್ತಿದ್ದುದು ಗುರುಗಳು.

ಸ್ವಲ್ಪ ಈಗಿನ ಕಾಲಮಾನವನ್ನು ನೋಡಿ. ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆ ಶಾಲೆಯ ಶಿಕ್ಷಕರನ್ನು ಎಂದಾದರು ಗಮನಿಸುವಿರೇನು? ತಮ್ಮ ಶಾಲೆಯಲ್ಲಿ ಮಕ್ಕಳು ಎಷ್ಟು ಅಂಕ ಪಡೆದಿದ್ದಾರೆಂದು ಮುಗಿಲೆತ್ತರದ ಕಟೌಟು ಹಾಕುವ ಶಾಲೆಗಳು ಶಾಲೆಯ ಮಾಸ್ತರರ ಸಾಮಥ್ರ್ಯವೇನು ಎಂಬ ಫ್ಲೆಕ್ಸು ಹಾಕಿರುವುದನ್ನು ನೋಡಿರುವಿರಾ? ಶಾಲೆಯ ಕಟ್ಟಡವನ್ನು ಕಂಡು ಮಾರು ಹೋಗುವ ನಮಗೆ ಒಳಗಿನ ಹೂರಣದ ಚಿಂತೆಯೇ ಇಲ್ಲ. ಕಾಲೇಜಿಗೆ ಮಗನನ್ನು ಸೇರಿಸುವಾಗ ಮೊದಲ ಆದ್ಯತೆ ಕಟ್ಟಡಕ್ಕೆ, ಎರಡನೆಯದು ಅಲ್ಲಿರುವ ಪ್ರಯೋಗಾಲಯದ ವಿಸ್ತಾರಕ್ಕೆ, ಮೂರನೆಯದು ಯಂತ್ರವೇ ಮಾತಾಡುವ ಸ್ಮಾಟರ್್ ಕ್ಲಾಸುಗಳಿಗೆ. ಶಿಕ್ಷಕರಿಗೆ ಇಲ್ಲೆಲ್ಲಾ ಜಾಗವೇ ಇಲ್ಲ. ಅದರಿಂದಾಗಿಯೇ ಆದರ್ಶವಾಗಿ ನಿಲ್ಲುವವರು ನಾವಾಗಬೇಕೆಂದು ಶಿಕ್ಷಕರಿಗೂ ಅನಿಸುತ್ತಿಲ್ಲ. ಗುರುಕುಲದಲ್ಲಿ ಗುರುವನ್ನು ಹತ್ತಿರದಿಂದ ನೋಡಿ ಅನುಭವಿಸಿ ಪಾಠ ಕಲಿಯುತ್ತಿದ್ದ ವಿದ್ಯಾಥರ್ಿ ಈಗಿನ ದಿನಗಳಲ್ಲಿ ಹಾಗೆ ಮಾಡಬಹುದೇನು? ಈ ಪ್ರಶ್ನೆಗೆ ಉತ್ತರಿಸಲು ನಮ್ಮ ಶಾಲೆಗಳು ಯೋಗ್ಯವಾದರೆ ನಾವು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಅರ್ಧಗೆದ್ದಂತೆ.

2

ಈ ಬದಲಾವಣೆಯಲ್ಲಿ ಮೊದಲ ಪಾತ್ರ ಶಾಲೆಗಳದ್ದಲ್ಲ, ನಮ್ಮದ್ದೇ. ಈ ಬಾರಿ ಶಾಲೆಗೆ ಮಗುವನ್ನು ಸೇರಿಸುವಾಗ ಶಿಕ್ಷಕರ ಕುರಿತಂತೆ ಮಾಹಿತಿ ಕೇಳಿ. ಅವರನ್ನು ಹಿಂದಿನ ವರ್ಷದ ವಿದ್ಯಾಥರ್ಿಗಳು, ಪೋಷಕರು ಹೇಗೆ ಗ್ರೇಡ್ ಮಾಡಿದ್ದಾರೆ ಕೇಳಿ ನೋಡಿ. ನನಗೆ ಗೊತ್ತು. ಗುರುಗಳ ಯೋಗ್ಯತೆ ಅಳೆಯುವ ಪದ್ಧತಿ ಸರಿಯಲ್ಲ. ಆದರೆ ಶಿಕ್ಷಕರೊಬ್ಬರು ಶಾಲೆಗೆ ಸರಿಯಾದ ಸಮಯಕ್ಕೆ ಬರುತ್ತಾರಾ? ಪಾಠವನ್ನು ಅರ್ಥವಾಗುವಂತೆ ಮಾಡುತ್ತಾರಾ? ವಿದ್ಯಾಥರ್ಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾರಾ? ಎಂಬುದಕ್ಕೆಲ್ಲ ಯಾವ ಸಿಸಿಟಿವಿಯೂ ಉತ್ತರ ಕೊಡಲಾರದು. ವಿದ್ಯಾಥರ್ಿಗಳೇ ಇದಕ್ಕೆ ಸೂಕ್ತ ನಿಣರ್ಾಯಕರು. ವರ್ಷದ ಕೊನೆಯಲ್ಲಿ ವಿದ್ಯಾಥರ್ಿಗಳು, ಪೋಷಕರು ನೀಡುವ ಅಂಕಿಗಳ ಆಧಾರದ ಮೇಲೆಯೇ ಶಿಕ್ಷಕರೊಬ್ಬರ ಭವಿಷ್ಯ ನಿರ್ಣಯವಾಗಬೇಕು. ಸತತ ಮೂರು ವರ್ಷ ಅಂಕ ಗಳಿಕೆಯಲ್ಲಿ ಬೆಳವಣಿಗೆ ಕಂಡು ಬರದಿದ್ದರೆ ಮುಲಾಜಿಲ್ಲದೇ ಮನೆಗೆ ಕಳಿಸಬೇಕು. ಇಷ್ಟು ಕಠೋರ ನಿಯಮವನ್ನು ಜಾರಿಗೆ ತಂದು ನೋಡಿ, ಶಾಲೆ ಬಿಟ್ಟು ಇತರೆ ವ್ಯವಹಾರ ಮಾಡುವ ಶಿಕ್ಷಕರು ನೆಟ್ಟಗಾಗುತ್ತಾರೆ. ಮಕ್ಕಳ ಪ್ರೀತಿ ಗಳಿಸದೇ ಹೆದರಿಸಿ ಕೂರಿಸುವ ಉಪನ್ಯಾಸಕರುಗಳೆಲ್ಲ ಅನಿವಾರ್ಯವಾಗಿ ಬಾಗುವುದನ್ನು ಕಲಿಯುತ್ತಾರೆ. ತನ್ನ ಪಾಠ ಮಕ್ಕಳಿಗೆ ಆಸಕ್ತಿಕರವಾಗುವಂತೆ ಮಾಡುವಲ್ಲಿ ಎಲ್ಲ ಪ್ರಯಾಸ ಮಾಡುತ್ತಾರೆ.

ಹಾಗಂತ ಇಂತಹ ಶಿಕ್ಷಕರಿಲ್ಲವೆಂದಲ್ಲ ನನ್ನ ಅಭಿಪ್ರಾಯ. ಖಂಡಿತ ಇದ್ದಾರೆ. ಹಾಗೆಂದೇ ಒಂದಷ್ಟು ಶ್ರೇಷ್ಠ ನಾಗರಿಕರು ನಿಮರ್ಾಣಗೊಳ್ಳುತ್ತಿರೋದು. ಆದರೆ ನೂರು ಕೋಟಿ ಜನರಿಗೆ ಎಷ್ಟು ಅಗತ್ಯವೋ ಅಷ್ಟು ಜನ ಸಿಗುತ್ತಿಲ್ಲವೆನ್ನುವುದೇ ದೌಭರ್ಾಗ್ಯಪೂರ್ಣ ಸಂಗತಿ. ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳು ಶಿಕ್ಷಕ ಕೇಂದ್ರಿತವಾದವೆಂದರೆ ಯಾವ ಬಾಹ್ಯ ಬಹುಮುಖ್ಯ ಬದಲಾವಣೆಯೂ ಇಲ್ಲದೇ ಪ್ರಾಚೀನ ಶಿಕ್ಷಣ ಕ್ರಮಕ್ಕೆ ಅಡಿಪಾಯ ಹಾಕಿದಂತೆ. ಭಾರತದ ಪಾಲಿಗೆ ವಿಕಾಸದ ಮೊದಲ ಹೆಜ್ಜೆಯೇ ಟೈಮ್ಲೈನಿನಲ್ಲಿ ಹಿಂದೆ ಹೋಗೋದು. ಅತ್ಯಂತ ಶ್ರೇಷ್ಠವಾಗಿರುವ ಭಾರತೀಯ ಶಿಕ್ಷಣ ಕ್ರಮವನ್ನು ಪುನರುಜ್ಜೀವನಗೊಳಿಸೋದು. ಹಾಗಂತ ಇರುವುದೆಲ್ಲವನ್ನೂ ಬದಲಿಸಬೇಕೆಂದಿಲ್ಲ. ಪಶ್ಚಿಮದ ಶಿಕ್ಷಣ ಕ್ರಮ ನಮಗೆ ಆಕರ್ಷಣೀಯ ದೇಹದ ಕಲ್ಪನೆ ಕೊಟ್ಟಿದೆ. ನಾವು ಅದರೊಳಗೆ ಭಾರತೀಯ ಹೃದಯವನ್ನು ತುಂಬಬೇಕಷ್ಟೇ! ದುರದೃಷ್ಟವಶಾತ್ ನಾವೆಲ್ಲ ಶಿಕ್ಷಣ ಕ್ರಮದಲ್ಲಿ ವಿಕಾಸದ ಕುರಿತಂತೆ ಮಾತನಾಡುವಾಗಲೂ ಬರಿಯ ಬಾಹ್ಯ ಬದಲಾವಣೆಗಳ ಕುರಿತಂತೆಯಷ್ಟೇ ಚಚರ್ಿಸುತ್ತಿದ್ದೇವೆ. ಆಂತರಿಕ ಬೆಳವಣಿಗೆ ಮರೆತೇ ಬಿಟ್ಟಿದ್ದೇವೆ.

ಇವಿಷ್ಟು ತಲೆಗೆ ಹಾದು ಹೋದದ್ದೇಕೆ ಗೊತ್ತೇ? ನಾನು ಆರಂಭದಲ್ಲಿ ಉಲ್ಲೇಖ ಮಾಡಿದ ಬೆಳಗಾವಿಯ ಶಾಲೆಯಲ್ಲಿ ಗಾಳಿ-ಬೆಳಕು ಬರುತ್ತಿರಲಿಲ್ಲ ನಿಜ. ಆದರೆ ಮಕ್ಕಳಲ್ಲಿ ಜೀವಂತಿಕೆ ಇತ್ತು; ಲವಲವಿಕೆ ಇತ್ತು. ಪಟ್ಟಣದ ಮಕ್ಕಳಿಗೆ ಎಲ್ಲ ಸವಲತ್ತುಗಳನ್ನೂ ಕೊಟ್ಟ ನಂತರವೂ ಜೀವಕಳೆಯೇ ಇಲ್ಲದಂತಾಗಿಬಿಟ್ಟಿರುತ್ತದೆ. ಹೀಗೇಕೆ ಎಂಬ ಗೊಂದಲ ಕಾಡುತ್ತಿತ್ತು. ನಿಮ್ಮೆದುರು ಬಿಚ್ಚಿಡಬೇಕೆನಿಸಿತಷ್ಟೇ!

ಮುಂದಿನ ವಾರಗಳಲ್ಲಿ ಇನ್ನಷ್ಟು ಹೊಸ ಆಲೋಚನೆಗಳನ್ನು ಹಂಚಿಕೊಳ್ಳೋಣ.

Comments are closed.