ವಿಭಾಗಗಳು

ಸುದ್ದಿಪತ್ರ


 

ದೂರುವುದಲ್ಲ, ಸರಿ ಮಾಡುವತ್ತ ಇರಲಿ ದೃಷ್ಟಿ…

ನಾವು ಸ್ವಲ್ಪ ಬಾಗಿದರೆ ಕತೆ ಮುಗಿದಂತೆ. ಎರಡು ವರ್ಷಗಳ ಅನುಭವದ ಆಧಾರದಲ್ಲಿ ನಾವೂ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಮೊದಲ ವಾರ ಪ್ರೀತಿ, ಮುಂದಿನ ಎರಡು ವಾರ ಕಠಿಣ ನೀತಿ ಮತ್ತು ಕೊನೆಯ ವಾರ ಮಿತೃತ್ವದ ರೀತಿ!

ನಮ್ಮ ಸವಸತಿ ಶಿಬಿರಕ್ಕೆ ಮೂರನೇ ವರ್ಷ. ಸುಮಾರು ಒಂಭತ್ತು ವರ್ಷಗಳ ಹಿಂದಿನ ಮಾತು. ಒಂದಷ್ಟು ತರುಣರು ನನ್ನ ಬಳಿಗೆ ಬಂದು ಹಣ ಒಗ್ಗೂಡಿಸಿದ್ದೇವೆ. ರಾಜೀವ್ ದೀಕ್ಷಿತರ ಬಾಷಣಗಳ ಕನ್ನಡ ಅವತರಣಿಕೆ ತರಬೇಕು ಎನ್ನುತ್ತ ಬಳಿಗೆ ಬಂದರು. ಅದಾಗಲೇ ಈ ಕೆಲಸ ಮಾಡುತ್ತಿದ್ದ ನನ್ನ ಮಿತ್ರನನ್ನು ಈ ಕೆಲಸಕ್ಕೆ ಜೋಡಿಸಿ ನಾನು ಮುಂದಡಿಯಿಟ್ಟೆ. ಈ ಹುಡುಗರ ನಿಸ್ಪೃಹ ಭಾವನೆಗಳು ನನ್ನನ್ನು ಸೆಳೆದವು. ಸಂಬಂಧ ಗಟ್ಟಿಯಾಯ್ತು. ಈ ಒಂಭತ್ತು ವರ್ಷಗಳಲ್ಲಿ ಅನೇಕರಿಂದ ನಾನು ದೂರವಾದೆ. ಕೆಲವರು ನನ್ನಿಂದ ದೂರ ಹೋದರು. ಈ ಗೆಳೆತನ ಮಾತ್ರ ಗಟ್ಟಿಯಾಗುತ್ತಲೇ ನಡೆದಿತ್ತು.
ಆ ಗೆಳೆತನಕ್ಕೆ ನಾವಿಟ್ಟ ಹೆಸರೇ ರಾಷ್ಟ್ರ ಶಕ್ತಿ ಕೇಂದ್ರ. ನಮ್ಮ ಬಾಂಧವ್ಯ ದೇಶಕ್ಕೆ ಗಟ್ಟಿತನ ತುಂಬುವಂಥದ್ದಾಗಬೇಕೆಂಬ ಹಂಬಲ, ತುಡಿತ ನನ್ನೊಳಗಿತ್ತು. ಹೀಗಾಗಿಯೇ ಆ ಮಿತೃತ್ವದ ಮೂಲಕ ಒಂದಷ್ಟು ಸಾಮಾಜಿಕ ಚಟುವಟಿಕೆಗಳು ಶುರುವಾದವು. ಶಾಲೆಯಿಂದ ಶಾಲೆಗೆ ನಮ್ಮ ಭೇಟಿ ಆರಂಭವಾಯ್ತು. ’ಸ್ವದೇಶೀ ಬಳಸಿ, ದೇಶ ಉಳಿಸಿ’ ಎಂಬ ರಾಜೀವ ದೀಕ್ಷಿತರ ಚಿಂತನೆಯನ್ನು ಹೊತ್ತು ಗ್ರಾಮಗಳಿಗೆ ನಡೆದೆವು. ನನ್ನ ಮಿತ್ರರೆಲ್ಲ ಜಿಗಣಿ ಭಾಗದ ಕಾರ್ಖಾನೆಯೊಂದರ ಕಾರಕೂನರು. ಬೆಳಗ್ಗೆಯೋ ಸಂಜೆಯೋ ಒಂದು ಶಿಫ್ಟಿನಲ್ಲಿ ದುಡಿಯೋದು, ಉಳಿದ ಸಮಯ ಶಾಲೆಗಳ ಭೇಟಿ ಮಾಡೋದು- ಇದು ರೂಢಿ. ಶಾಲೆಗಳ ಭೇಟಿಯಿಂದ ಸಿಕ್ಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೇರಿಸಿ ಒಂದು ದಿನದ ತರಬೇತಿ ಕಾರ್ಯಾಗಾರ ಮಾಡಿದೆವು. ಮುಂದೆ ಅದು ಮೂರು ದಿನಕ್ಕೇರಿತು. ಕೊನೆಗೆ ನಮ್ಮ ಸಾಮರ್ಥರ್ಯ ವೃದ್ಧಿಸಿದಂತೆ ಮೂವತ್ತು ದಿನಗಳ ಶಿಬಿರಕ್ಕೆ ಬಂದು ಮುಟ್ಟಿದೆವು.

ಶಿಬಿರದಲ್ಲಿ ಮಕ್ಕಳು

ಶಿಬಿರದಲ್ಲಿ ಮಕ್ಕಳು

ಒಂಬತ್ತನೆ ತರಗತಿ ಮುಗಿಸಿ ಹತ್ತಕ್ಕೆ ಹೊರಡುವವರಿಗಾಗಿ ಒಂದು ತಿಂಗಳ ಶಿಬಿರವದು. ಆರಂಭದಲ್ಲಿ ಒಂದಷ್ಟು ಜನ ಕಾಲೆಳೆದರು; ಕಿರಿಕಿರಿ ಮಾಡಿದರು. ನಮ್ಮದು ಬಿಡಲಾಗದ ಹಠ. ತೊಟ್ಟ ಬಾಣ ಮರಳಿ ಪಡೆಯಲಿಲ್ಲ. ಮೊದಲ ಶಿಬಿರ ಆರಂಭವಾಗಿಯೇ ಬಿಟ್ಟಿತು. ವಿದ್ಯಾರ್ಥಿಗಳಿಗೆ ಬೆಳಗ್ಗೆ ೫ಕ್ಕೆ ಎಬ್ಬಿಸುವುದರಿಂದ ಹಿಡಿದು ರಾತ್ರಿ ೧೦ಕ್ಕೆ ಮಲಗಿಸುವವರೆಗೆ ಎಲ್ಲವೂ ನಮ್ಮದೆ ಜವಾಬ್ದಾರಿ. ಮೊದಲ ವರ್ಷದ ಅನುಭವ, ಮಕ್ಕಳ ಸಖ್ಯ ಅದೆಷ್ಟು ಆನಂದದಾಯಕವಾಗಿತ್ತೆಂದರೆ ಕೊನೆಯ ದಿನ ಅಗಲುವಾಗ ಕಣ್ಣೀರು ಹರಿಸುವಷ್ಟು!
ಅದೇ ಅನುಭವವನ್ನು ಮತ್ತೆ ಪಡೆದದ್ದು ಈ ಬಾರಿ. ಒಂಥರಾ ಈ ಬಾರಿಯ ಶಿಬಿರ ಸವಾಲೇ. ಮೊದಲ ದಿನವೇ ಬಂದ ವಿದ್ಯಾರ್ಥಿಗಳನ್ನು ನೋಡಿದಾಗ ಗಾಬರಿಯಾಗುತ್ತಿತ್ತು. ಒಬ್ಬರಿಗಿಂತ ಒಬ್ಬರು ತರಲೆಗಳೆಂಬುದು ಮೇಲ್ನೋಟಕ್ಕೇ ತಿಳಿಯುತ್ತಿತ್ತು. ಅಷ್ಟೇ ಸಂತೋಷವೂ ಕೂಡ. ಇಂತಹ ಮಕ್ಕಳು ಇಲ್ಲಿಗೆ ಬಂದರೆ ಬದಲಾಗುತ್ತಾರೆಂಬ ಆಶಾಭಾವನೆ ತಂದೆ ತಾಯಂದಿರಿಗಿದೆಯಲ್ಲ ಅಂತ!
ಮೊದಲೈದು ದಿನ ಕಣ್ಣೀರ್ಗರೆಯುವವರನ್ನು ಸುಧಾರಿಸುವುದೇ ದೊಡ್ಡ ಕೆಲಸ. ಕೆಲವು ವಿದ್ಯಾರ್ಥಿಗಳು ಬಲುಬೇಗ ಹೊಂದಿಕೊಂಡುಬಿಡುತ್ಥಾರೆ, ಇನ್ನೂ ಕೆಲವರದು ಹಗ್ಗ ಜಗ್ಗಾಟ… ಜೋರಾಗಿ ಎಳೆಯುತ್ತಾರೆ. ನಾವು ಸ್ವಲ್ಪ ಬಾಗಿದರೆ ಕತೆ ಮುಗಿದಂತೆ. ಎರಡು ವರ್ಷಗಳ ಅನುಭವದ ಆಧಾರದಲ್ಲಿ ನಾವೂ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಮೊದಲ ವಾರ ಪ್ರೀತಿ, ಮುಂದಿನ ಎರಡು ವಾರ ಕಠಿಣ ನೀತಿ ಮತ್ತು ಕೊನೆಯ ವಾರ ಮಿತೃತ್ವದ ರೀತಿ!
ಈ ಬಾರಿ ಇಬ್ಬರು ಹುಡುಗರು ಬಲು ಕಷ್ಟ ಕೊಟ್ಟರಪ್ಪ. ಚಿಕ್ಕಪ್ಪನ ಮಗಳ ಮದುವೆ ಇದೆ, ಹೋಗಲೇಬೇಕು ಎಂದ. ಹಾಗಿದ್ದ ಮೇಲೆ ಬಂದಿದ್ದೇಕೆ ಅಂದರೆ ಒತ್ತಾಯಕ್ಕೆ ಅಂದ. ’ನಾನು ಮದುವೆಗೆ ಹೋಗಲಿಲ್ಲವೆಂದರೆ ನನ್ನ ತಂಗಿಯ ಮದುವೆಗೆ ಅವರು ಬರುವುದಿಲ್ಲ’ ಎಂದು ಹಲುಬಿದ. ನಾವು ಕರಗಲಿಲ್ಲ ಅಂತಾದಾಗ ’ಹೊಲದಲ್ಲಿ ಬೋರ್‌ವೆಲ್‌ ತೆಗೆಸಬೇಕು, ತುರ್ತಾಗಿ ಹೋಗಬೇಕು’ ಅಂತಲೂ ಹೇಳಿದ. ಇಷ್ಟಕ್ಕೂ ಈಗ ಆತ ಹತ್ತನೇ ಕ್ಲಾಸು. ಅವನು ಹೇಳುವ ರೀತಿ ನೋಡಿದರೆ ಮನೆಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ಅವನ ತಲೆ ಮೇಲೆಯೇ ಬಿದ್ದಿರುವಂತೆ! ಇಂಥಾ ಹುಡುಗ ಬಲು ಬೇಗ ಟ್ರ‍್ಯಾಕಿಗೆ ಬಂದ. ನಾವು ಕರಗಲೇ ಇಲ್ಲವಲ್ಲ!
ಮತ್ತೊಬ್ಬನದು ಸ್ವಲ್ಪ ಭಿನ್ನ. ಆತ ಶಿಬಿರಕ್ಕೆ ಬರುವುದು ಗೊತ್ತಾದೊಡನೆ ಅವನ ತಂದೆ ಎರಡು ಸಾವಿರ ರೂಪಾಯಿಗಳ ಬಟ್ಟೆ ತರಿಸಿಕೊಟ್ಟಿದ್ದರಂತೆ. ಆತ ಇಲ್ಲಿ ಬಂದ ಒಂದು ದಿನದಲ್ಲಿಯೇ ಹೊರಡುವ ಹಠ ಹಿಡಿದು ಕುಂತ. ಒಂದು ವಾರವಾದರೂ ಅವನ ರಗಳೆ ಕಳೆಯಲೇ ಇಲ್ಲ. ಅದ್ಹೇಗೋ ತನಗೆ ತಾನೆ ಸುಮ್ಮನಾಗಿಬಿಟ್ಟನಪ್ಪ!
ಬರಬರುತ್ತ ಹುಡುಗರು ಪಳಗಲಾರಂಭಿಸಿದರು. ಅವರೊಳಗಿನ ದುಷ್ಟ ನಿಧಾನವಾಗಿ ಹೊರಬರಲಾರಂಭಿಸಿದ. ಮನೆಯಲ್ಲಿ ಅಪ್ಪ ಅಮ್ಮಂದಿರ ಮುಂದೆ ಮಕ್ಕಳು ದೇವರಂತಾಗಿರುತ್ತಾರೆ. ಆದರೆ ಇಲ್ಲಿ ಇತರರೊಡನೆ ಸೇರಿದಾಗ ಅವನೊಳಗಿನ ರಕ್ಕಸ ಬಲು ಬೇಗ ಹೊರಬಂದು ಬಿಡುತ್ತಾನೆ. ಅವರು ಮಲಗುವ ಕೋಣೆಯ ಹೊರಗೆ ನಿಂತು ಮಾತುಗಳನ್ನು ಕೇಳಿಸಿಕೊಳ್ಳಬೇಕು. ಅಲ್ಲಿ ಭೂಮಿಯ ಮೇಲಿನ ಅತ್ಯಂತ ಕೆಟ್ಟ ಬೈಗುಳದಿಂದ ಹಿಡಿದು ಅತಿ ಕೆಟ್ಟ ವಿಚಾರದವರೆಗೆ ಎಲ್ಲವೂ ಬಂದು ಹೋಗುತ್ತದೆ. ಅಂಥವರನ್ನು ಕಾಲಕ್ರಮೇಣ ಹಿಡಿದು ತಂದು ’ಕೋರ್ಟ್‌ ಮಾರ್ಷಲ್’ ಮಾಡಿ ಅವರ ತಪ್ಪನ್ನು ತಿಳಿಸಿ ಕಳಿಸುವುದು ನಮ್ಮ ರೂಢಿ. ಈ ಬಾರಿ ನನ್ನ ಬಹುಪಾಲು ಸಮಯ ಅದಕ್ಕೇ ಕಳೆದುಹೋಯ್ತು. ಸಂತೋಷವೆಂದರೆ, ಕೊನೆಯ ಎರಡು ವಾರ ಕೆಟ್ಟ ಬೈಗುಳಗಳನ್ನು ಒಬ್ಬೊಬ್ಬರಿದ್ದಾಗಲೂ ಆಡಿಕೊಳ್ಳದ ಮಟ್ಟಿಗೆ ಆ ಹುಡುಗರು ಬಂದುಬಿಟ್ಟಿದ್ದರು!

ಯೋಗಾಭ್ಯಾಸ

ಯೋಗಾಭ್ಯಾಸ

ಭಗವದ್ಗೀತೆಯ ಒಂದು ಅಧ್ಯಾಯ ಒಂದು ತಿಂಗಳೊಳಗೆ ಅವರಿಗೆ ಕಂಠಸ್ಥ. ವಿಷ್ಣು ಸಹಸ್ರನಾಮದ ಆ ಪದಗಳು ಅವರ ನಾಲಗೆಯ ಮೇಲೆ ಲೀಲಾಜಾಲವಾಗಿ ನಲಿದಾಡುತ್ತವೆ. ಭಜನೆಯಲ್ಲಿ ಒಂದು ಗಂಟೆ ತಲ್ಲೀನರಾಗಿ ಹಾಡುವ ಸಾಮರ್ಥ್ಯ ಸಿದ್ಧಿಸಿದೆ. ಊಟ ಬಡಿಸುವುದನ್ನು ಬಿಡಿ ಆಮೇಲೆ ಪೊರಕೆ ಹಿಡಿದು ಮುಂದಿನ ಪಾಳಿಗೆ ಸ್ವಚ್ಛ ಮಾಡಿಡುವ ಹೊಣೆಯೂ ಅವರದ್ದೇ. ಶೌಚಾಲಯಗಳನ್ನು ಮಕ್ಕಳು ಸ್ವಚ್ಛ ಮಾಡುವುದನ್ನು ನೋಡಿದ ತಂದೆ ತಾಯಿಯರಂತೂ ಹವಹಾರಿಬಿಡುತ್ತಾರೆ. ಇವೆಲ್ಲವೂ ಒಂದೇ ತಿಂಗಳೊಳಗೆ!
ಇದರ ಜೊತೆಗೆ ಪುರುಸೊತ್ತಿಲ್ಲದಷ್ಟು ತರಗತಿಗಳು. ಅದರಲ್ಲಿ ಗಣಿತ – ವಿಜ್ಞಾನ – ಸಮಾಜಗಳು ಇರುವುದಲ್ಲದೆ ಇನ್ನಿತರ ಆಸಕ್ತಿಕರ ವಿಷಯಗಳ ಅಧ್ಯಯನ. ಉಹು… ಒಂದು ನಿಮಿಷವೂ ವ್ಯರ್ಥವಾಗುವಂತಿಲ್ಲ. ಒಂದು ವಿಸಿಲ್‌ಗೆ ಎಲ್ಲ ಕೆಲಸವನ್ನೂ ಬಿಟ್ಟು ಓಡಿಬರುವ ವಿದ್ಯಾರ್ಥಿಗಳ ಶಿಸ್ತು ನಿಜಕ್ಕೂ ಅಚ್ಚರಿ ತರಿಸುವಂಥದ್ದೇ.
ಹಾ! ಬೆಳಗಿನ ಯೋಗ, ಸಂಜೆಯ ಶಾರೀರಿಕಗಳು ವಿದ್ಯಾಥಿಗಳನ್ನು ಮೈಬಗ್ಗಿಸುವಂತೆ ಮಾಡುತ್ತಿದ್ದವು. ಸಂಜೆಯ ಪ್ರಾರ್ಥನೆಗೆ ಮುನ್ನ ಬೆವರು ಹರಿಸುವಷ್ಟು ಆಟವಾಡಿ ಬರುವ ವಿದ್ಯಾರ್ಥಿಗಳು ಸರಸರನೆ ಸ್ನಾನ ಮಾಡಿ ದೇವರ ಕೋಣೆಗೆ ಧಾವಿಸುತ್ತಿದ್ದರು. ಮನೆಯಲ್ಲಿ ಒಮ್ಮೆ ಸ್ನಾನ ಮಾಡಲಿಕ್ಕೆ ತಡಕಾಡುವ ಹುಡುಗರು ಇಲ್ಲಿ ಎರಡೆರಡು ಬಾರಿ ಮಾಡುತ್ತಾರಲ್ಲ, ಅದೇ ವಿಶೇಷ. ಇಂತಹದರ ನಡುವೆಯೂ ಕಣ್ತಪ್ಪಿಸಿ ಸ್ನಾನ ಮಾಡದ ಹುಡುಗನೊಬ್ಬ ಸಿಕ್ಕು ಬಿದ್ದ. ಅವನನ್ನು ಎಳಕೊಂಡು ಹೋಗಿ ನೀರೆರಚಿ ಶುದ್ಧ ನೀರಿನ ಹೋಳಿಯಾಡಿದ ಮೇಲೆ ಆತ ನಿತ್ಯ ತಂತಾನೆ ಸ್ನಾನ ಮಾಡಲು ಶುರು ಮಾಡಿದ.
ಅದು ಹೇಗೆ ಆ ೩೦ ದಿನಗಳು ಕಳೆದುಹೋದವೋ ದೇವರೇ ಬಲ್ಲ. ಕೊನೆಯ ದಿನದ ಕಾರ್ಯಕ್ರಮದಲ್ಲಿ ಹುಡುಗರು ಇಷ್ಟೂ ದಿನ ಕಲಿತಿದ್ದನ್ನು ಪ್ರಸ್ತುತಪಡಿಸುವಾಗ ಅಪ್ಪ ಅಮ್ಮಂದಿರ ಮುಖ ನೋಡಬೇಕು. ಅನೇಕರಂತೂ ’ಅವನು ನಮ್ಮ ಮಗನೇನಾ?’ ಅಂತ ಬಾಯಿ ಕಳಕೊಂಡು ನೋಡ್ತಿರ‍್ತಾರೆ.
ಹಹ್ಹ! ಈ ಬಾರಿ ಎಲ್ಲ ಮುಗಿದ ಮೇಲೆ ನಾವು ಪೋಷಕರನ್ನು ಕೂರಿಸಿ ಇಪ್ಪತ್ತು ನಿಮಿಷ ಮಾತನಾಡಿದ್ದು ಭಾರೀ ಪ್ರಭಾವ ಉಂಟು ಮಾಡಿತ್ತು. ಆ ಪೋಷಕರ ಸವಾಲುಗಳು, ಆತಂಕಗಳಿಗೆ ಒಂದು ತಿಂಗಳ ಅನುಭವದ ಆಧಾರದ ಮೇಲೆ ಉತ್ತರಿಸಿದ್ದೆವು. ಅವರ ಮಕ್ಕಳ ಅಂತಃಶಕ್ತಿಯನ್ನು ಅವರಿಗೆ ನಾವೇ ಗುರುತಿಸಿ ತೋರಿಸಿಕೊಟ್ಟಿದ್ದು ನಮಗೇಕೋ ಬಲು ಹೆಮ್ಮೆ ಎನಿಸಿತ್ತು.
ಅಲ್ಲವೆ ಮತ್ತೆ? ಯಾವುದೂ ಸರಿಯಿಲ್ಲ ಅಂತ ಕೆಲವರು ದೂರುತ್ತ ಇರುತ್ತಾರೆ. ನಾವು ಸರಿ ಮಾಡುವತ್ತ ದಾಪುಗಾಲಿಡುತ್ತೇವೆ. ಅಷ್ಟೇ ವ್ಯತ್ಯಾಸ. ಏನಂತೀರಿ?

1 Response to ದೂರುವುದಲ್ಲ, ಸರಿ ಮಾಡುವತ್ತ ಇರಲಿ ದೃಷ್ಟಿ…

  1. dharma raj

    nimma karya adbuta guru ji