ವಿಭಾಗಗಳು

ಸುದ್ದಿಪತ್ರ


 

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಬಲ್ಲವರು ಯಾರಿದ್ದಾರೆ?

6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ ಅಮಿತ್ ಷಾಹ್ ಅಲ್ಲದೇ ಸ್ಮೃತಿ ಇರಾನಿಯೂ ಭಿನ್ನ ಭಿನ್ನ ಸ್ತರಗಳಲ್ಲಿ ಮಾತನಾಡಿದ್ದರು. ಅಲ್ಲಲ್ಲಿ ನಡೆದ ಯುವ ಸಮ್ಮೇಳನ, ಮಹಿಳಾ ಸಮ್ಮೇಳನಗಳೂ ಮೋದಿಯವರಿಗೆ ಶಕ್ತಿ ತುಂಬುವಂತೆ ನೋಡಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ, ವ್ಯಾಪಾರಿಗಳ ಸಮಾವೇಶಗಳೂ ಭರ್ಜರಿಯಾಗಿ ನಡೆದವು. ದಲಿತರ ಸಮಾವೇಶಕ್ಕೆ ತುಂಬಿದ ಸ್ವಾಭಿಮಾನ ಸಮ್ಮೇಳನದ ರಂಗು ಸಾಕಷ್ಟು ಕೆಲಸ ಮಾಡಿತ್ತು.

Modi_amit_2921205f

‘ಅವಳು ಬಲು ಪ್ರತಿಭಾವಂತೆ. ಹೋರಾಟದ ಮನೋವೃತ್ತಿಯನ್ನು ಸಹಜವಾಗಿಯೇ ಬೆಳೆಸಿಕೊಂಡಳು. ಅವಳ ವ್ಯಕ್ತಿತ್ವದ ಅಗಾಧ ಪ್ರಭಾವ ಎಂಥದ್ದೆಂದರೆ ತನ್ನ ಚಿಂತನೆಗಳನ್ನು ಬೇರೆಯವರ ಮೇಲೆ ಹೇರುವಲ್ಲಿ ಹಿಂದು ಮುಂದು ನೋಡುತ್ತಲೇ ಇರಲಿಲ್ಲ. ಜನ ಅವಳ ಮಾತುಗಳನ್ನು ಒಪ್ಪಿದರೆ ಜೊತೆಗೂಡಿ ಕೆಲಸ ಮಾಡೋದು ಇಲ್ಲವಾದಲ್ಲಿ ಅವರನ್ನು ಬಿಟ್ಟು ಮುನ್ನಡೆಯುತ್ತಿದ್ದಳು’ ಹಾಗಂತ ಗುರುದೇವ ರವೀಂದ್ರನಾಥ ಠಾಕೂರರು ನಿವೇದಿತೆಯ ಬಗ್ಗೆ ಬರೆಯುತ್ತಾರೆ. ಆಕೆಯೊಂದಿಗೆ ಸಂಭಾಷಿಸುವ, ವೈಚಾರಿಕ ಚರ್ಚೆಯಲ್ಲಿ ಭಾಗವಹಿಸುವ ಅವಕಾಶಗಳು ಸಾಕಷ್ಟು ದೊರೆತರೂ ನನ್ನ ಆಂತರಿಕ ವಿರೋಧದ ಕಾರಣದಿಂದ ಆಕೆಯೊಂದಿಗೆ ಬೆರೆಯುವ ವಿಚಾರದಲ್ಲಿ ಎಚ್ಚರಿಕೆ ವಹಿಸಿದ್ದೆ ಎಂದು ಸೇರಿಸುವುದನ್ನು ಮರೆಯುವುದಿಲ್ಲ.
ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಪರವಾಗಿಲ್ಲ. ಭಾರತದ ಈಗಿನ ಪ್ರಧಾನಮಂತ್ರಿ ನರೇಂದ್ರಮೋದಿಯವರ ವ್ಯಕ್ತಿತ್ವ ಇದಕ್ಕೆ ಬಲು ಹತ್ತಿರದ್ದು. ಅವರೂ ಹನ್ನೆರಡು ವರ್ಷಗಳ ಕಾಲ ವಿರೋಧ ಪಕ್ಷಗಳನ್ನು ಬಿಡಿ, ಸ್ವಂತ ಪಕ್ಷದವರೊಂದಿಗೂ ಗುದ್ದಾಡಿದರು. ತಮ್ಮದೇ ಸಂಘಟನೆಗಳು ಅವರ ವಿರುದ್ಧ ನಿಂತವು. ಮಾಧ್ಯಮಗಳಂತೂ ಸುದೀರ್ಘ ಕಾಲ ಅಪ ಪ್ರಚಾರ ನಡೆಸಿದವು. ಸಿಂಹದ ಹೃದಯವಲ್ಲದಿದ್ದರೆ ಆತ್ಮಹತ್ಯೆಯೇ ಮಾಡಿಕೊಳ್ಳಬೇಕಿತ್ತು. ಅಷ್ಟಾದರೂ ಪುಣ್ಯಾತ್ಮ ಹೋರಾಟದ ಹಾದಿ ಬಿಡಲಿಲ್ಲ. ತನ್ನ ಒಪ್ಪಿದವರ ಜೊತೆ ಹೆಜ್ಜೆ ಊರಿ ನಡೆದ, ವಿರೋಧಿಸಿದವರ ಬಿಟ್ಟು ನಡೆದ. ತುಂಬಾ ಕಿರಿ ಕಿರಿ ಮಾಡಿದವರ ವ್ಯವಸ್ಥಿತವಾಗಿಯೇ ಮಟ್ಟ ಹಾಕಿದ. ಸಂಪರ್ಕಕ್ಕೆ ಬಂದವರು ದೇಶದವರೇ ಇರಲಿ, ವಿದೇಶೀ ನಾಯಕರೇ ಆಗಿರಲಿ ತಮ್ಮ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿ ಅವರದ್ದು ಎತ್ತಿದ ಕೈ.
ಇಷ್ಟನ್ನೂ ಈಗ ಮತ್ತೆ ಹೇಳಲು ಒಂದು ಕಾರಣವಿದೆ. ಹೌದು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮೋದಿಯವರನ್ನು ಪ್ರಶ್ನಾತೀತ ನಾಯಕರನ್ನಾಗಿಸಿಬಿಟ್ಟಿದೆ. ಒಂದು ದೃಷ್ಟಿಯಿಂದ ಅವರೀಗ ಬಿಜೆಪಿಗಿಂತ ಅಗಾಧವಾಗಿ ಬೆಳೆದು ನಿಂತು ಬಿಟ್ಟಿದ್ದಾರೆ. ವಿಧಾನ ಸಭೆ-ಲೋಕ ಸಭೆ ಯಾವ ಚುನಾವಣೆಯಂತೂ ಸರಿಯೇ, ಒರಿಸ್ಸಾದ ಸ್ಥಳೀಯ ಚುನಾವಣೆಗಳಲ್ಲಿ, ಮುಂಬೈನ ಪಾಲಿಕೆ ಚುನಾವಣೆಗಳಲ್ಲೂ ಮೋದಿಯ ಕಟೌಟ್ ಇಲ್ಲದಿದ್ದರೆ ಗೆಲುವೇ ಇಲ್ಲವೆಂಬಂತಾಗಿಬಿಟ್ಟಿದೆ. ಹಾಗಂತ ಮೋದಿ ಸುಮ್ಮನೆ ಈ ಅಬ್ಬರದ ಪ್ರಚಾರಗಳಿಂದ ಗೆಲುವು ಪಡೆಯುವ ಕಾಂಗ್ರೆಸ್ಸಿನ ಚರಿಶ್ಮಾ ಹೊಂದಿದ ನಾಯಕರಂತಲ್ಲ. ಅಥವಾ ಜಾತಿಯ ಬೆಂಬಲದಿಂದಲೇ ನಾಯಕನಾಗಿಬಿಡುವ ಭ್ರಮೆಯ ಕನರ್ಾಟಕದ ಬಿಜೆಪಿ ನಾಯಕರಂತೆಯೂ ಅಲ್ಲ. ಅವರದ್ದು ಪಕ್ಕಾ ಲೆಕ್ಕಾಚಾರ. ಜನರ ಮಾನಸಿಕತೆಯನ್ನೇ ಬದಲು ಮಾಡಿ ಅವರನ್ನೂ ತನ್ನೊಂದಿಗೆ ಸುದೀರ್ಘ ಓಟಕ್ಕೆ ಕರೆದೊಯ್ಯುವ ವಿಶೇಷ ಪಥ. ಜನರನ್ನು ಸದಾ ಕೆಳಮಟ್ಟದಲ್ಲಿಯೇ ಇರಿಸಿ, ಕನಸು ಕಾಣಿಸಿಯೇ ಮತ ಕೇಳುವ ಹಳೆಯ ತಂತ್ರ ಒಂದೆಡೆ. ಅದನ್ನು ಕಾಂಗ್ರೆಸ್ಸು ಮಾಡುತ್ತಿತ್ತು. ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೂ ಎಲ್ಲೆಡೆ ಅದನ್ನೇ ಮಾಡಿತು. ಆದರೆ ಮೋದಿ ಹಾಗಲ್ಲ. ಪ್ರಗತಿಯ ನಾಗಾಲೋಟ ಕಣ್ಣಿಗೆ ರಾಚುವಂತೆ ಮಾಡುವುದು. ಜನರನ್ನು ಈ ಓಟದ ಪಾಲುದಾರರನ್ನಾಗಿ ಮಾಡಿ ಅವರೇ ಯೋಚಿಸಿ ಮತ ಹಾಕುವಂತೆ ಪ್ರೇರೇಪಿಸುವುದು. ಎರಡನೇ ಮಾರ್ಗದಲ್ಲಿ ಜನ ಪ್ರಜ್ಞಾವಂತರಾಗುತ್ತಾರೆ, ಸಮಕಾಲೀನ ಜಗತ್ತಿನಲ್ಲಿ ಇತರರ ಸಮಸಮಕ್ಕೆ ನಿಲ್ಲುವ ಆತ್ಮವಿಶ್ವಾಸ ಪಡೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮೋದಿ ಮಾಡಿದ್ದು ಇದೇ ಪ್ರಯೋಗವನ್ನು. ಇತರೆಲ್ಲ ಪಕ್ಷಗಳು ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ತಮ್ಮ ಪ್ರಚಾರಕಾರ್ಯ ಶುರುಮಾಡಿದರೆ, ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೇ ಉತ್ತರ ಪ್ರದೇಶದಲ್ಲಿ ಚುನಾವಣಾ ಕೆಲಸ ಶುರು ಮಾಡಿದ್ದರು.

Independence Day at Red Fort
ನೆನಪು ಮಾಡಿಕೊಳ್ಳಿ. ಕೆಂಪುಕೋಟೆಯ ತಮ್ಮ ಮೊದಲ ಭಾಷಣದಲ್ಲಿಯೇ ಮೋದಿ ಭಾರತದ ಕರೆಂಟೇ ಇಲ್ಲದ 18 ಸಾವಿರ ಹಳ್ಳಿಗಳಿಗೆ ಒಂದು ಸಾವಿರ ದಿನಗಳ ಗಡುವು ತಾವೇ ವಿಧಿಸಿಕೊಂಡು ವಿದ್ಯುತ್ ಸಂಪರ್ಕ ಕೊಡಿಸುವ ಭರವಸೆ ಕೊಟ್ಟರು. ಈ ಯೋಜನೆ ಎಲ್ಲೆಡೆ ಭರದಿಂದ ಸಾಗಿತಾದರೂ ಉತ್ತರ ಪ್ರದೇಶದಲ್ಲಿ ಅದಕ್ಕೆ ಅಪರೂಪದ ವೇಗ ದೊರಕಿತ್ತು. ಅಲ್ಲಿನ 1529 ವಿದ್ಯುತ್ ಸಂಪರ್ಕ ರಹಿತ ಹಳ್ಳಿಗಳಲ್ಲಿ 1464 ಹಳ್ಳಿಗಳಿಗೆ ಚುನಾವಣೆಗೂ ಮುನ್ನ ವಿದ್ಯುತ್ ಸಂಪರ್ಕ ದಕ್ಕಿತ್ತು. ಬಿಎಸ್ಪಿಯ ಆಡಳಿತಾವಧಿಯಲ್ಲಿ 23 ಹಳ್ಳಿಗಳಿಗೆ ವಿದ್ಯುತ್ ದಕ್ಕಿದರೆ ಸಮಾಜವಾದಿ ಪಾರ್ಟಿಯ ಅವಧಿಯಲ್ಲಿ ಮೂರೇ ಹಳ್ಳಿಗಳು ವಿದ್ಯುತ್ ಭಾಗ್ಯ ಪಡೆದಿದ್ದವು. ಹಳ್ಳಿಗಳು ಇದನ್ನು ಗಮನಿಸದಿರಲಿಲ್ಲ. ಬರಿಯ ಸಂಪರ್ಕ ದೊರೆತರೇನು? ವಿದ್ಯುತ್ತೂ ಪೂರೈಕೆಯಾಗಬೇಕಲ್ಲ. ಗ್ರಿಡ್ ಗಳಲ್ಲಿನ ಸಮಸ್ಯೆ ನಿವಾರಿಸಿ, ಕಳ್ಳತನಕ್ಕೆ ಕಡಿವಾಣ ಹಾಕಿ ನಿರಂತರ ವಿದ್ಯುತ್ ಸಿಗುವಂತೆ ಮಂತ್ರಿ ಪೀಯೂಷ್ ಗೋಯಲ್ ವಿಶೇಷ ಶ್ರಮ ಹಾಕಿದರು. ವಿದ್ಯುತ್ ಪೂರೈಕೆಯೂ ಎರಡು ವರ್ಷಗಳಲ್ಲಿ ಶೇಕಡಾ 20ರಷ್ಟು ಹೆಚ್ಚಾಯ್ತು. ಈ ಹೊತ್ತಿನಲ್ಲಿಯೇ ಒಂದೂವರೆಕೋಟಿ ಎಲ್.ಇ.ಡಿ ಬಲ್ಬುಗಳನ್ನು ಹಳ್ಳಿ ಹಳ್ಳಿಗಳಲ್ಲಿ ವಿತರಿಸಿದ ಕೇಂದ್ರ ಸರ್ಕಾರ ಜನರ ವಿದ್ಯುತ್ ಬಿಲ್ಲು ಕಡಿಮೆಯಾಗುವಂತೆ ನೋಡಿಕೊಂಡಿತು.
2016 ರ ಮೇ 1 ಕ್ಕೆ ನರೇಂದ್ರ ಮೋದಿ 8 ಸಾವಿರ ಕೋಟಿ ರೂಪಾಯಿಯ ಉಜ್ವಲಾ ಯೋಜನೆಯನ್ನು ಜಾರಿಗೆ ತಂದು, ಬಡವರ ಮನೆಗಳನ್ನು ಹೊಗೆರಹಿತ ಮಾಡಿ ಅವರಿಗೆ ಎಲ್ಪಿಜಿ ಸಿಲಿಂಡರುಗಳನ್ನು ಕೊಡಿಸುವ ಭರವಸೆ ಕೊಟ್ಟರು. ಇದು ಆಶ್ವಾಸನೆಯಾಗಿಯಷ್ಟೇ ಉಳಿಯದೇ 50 ಲಕ್ಷಕ್ಕೂ ಹೆಚ್ಚು ಜನ ಇದರ ಲಾಭ ಪಡೆಯುವಂತೆ ನೋಡಿಕೊಳ್ಳಲಾಯಿತು. ಉತ್ತರ ಪ್ರದೇಶದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸುಮಾರು 12 ಸಾವಿರದಷ್ಟು ಜನ ಈ ಯೋಜನೆಯ ಫಲಾನುಭವಿಗಳಾಗಿದ್ದರು.

UP rally
ಮೋದಿ ಕೈಗೆತ್ತಿಕೊಂಡ ಯೋಜನೆಗಳಲ್ಲೆಲ್ಲಾ ಯಶಸ್ಸು ಕಂಡು ಅಂತಿಮ ವ್ಯಕ್ತಿಯವರೆಗೂ ಅದನ್ನು ಮುಟ್ಟಿಸುವಲ್ಲಿ ಸಫಲರಾಗುತ್ತಿದ್ದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲ್ಯಾಪ್ಟಾಪ್ ಕೊಟ್ಟು ಹೆಸರು ಕೆಡಿಸಿಕೊಂಡರು. ಆ್ಯಂಬುಲೆನ್ಸ್ಗಾಗಿ ಡಯಲ್ ಮಾಡಿ ಎಂಬ ಯೋಜನೆ ಸೋತುಹೋಯ್ತು. ಜನಕ್ಕೆ ಬದುಕು ಸುಂದರವಾಗಬೇಕೆಂಬ ಬಯಕೆ ಈಗ ಬಲಿಯಲಾರಂಭಿಸಿತ್ತು. ಅವರೀಗ ಗರೀಬಿ ಹಟಾವೋದಂತಹ ಘೋಷಣೆಗಳಿಂದ ಬೇಸತ್ತಿದ್ದರು. ಬಡವರನ್ನು ಮುಖ್ಯವಾಹಿನಿಗೆ ತರಬಲ್ಲ ಸಮರ್ಥ ನಾಯಕ ಅವರಿಗೆ ದೊರಕಿದ್ದ. ಅವನಿಗೆ ಮೋಸ ಮಾಡುವ ಮನಸ್ಸು ಅವರಿಗಿರಲಿಲ್ಲ. ಅದಕ್ಕೆ ಸರಿಯಾಗಿ ನರೇಂದ್ರ ಮೋದಿಯವರ ನಂಬಿಕಸ್ಥ ಕಟ್ಟಾಳು ಅಮಿತ್ ಷಾಹ್ ಉತ್ತರ ಪ್ರದೇಶದಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸಿದರು. ಚುನಾವಣೆಗೆ ಒಂದು ವರ್ಷವಿರುವಾಗಲೇ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುಮೀರ್ ಬನ್ಸಲ್ರನ್ನು ಸೇರಿಸಿಕೊಂಡು ಲೆಕ್ಕಾಚಾರ ಆರಂಭಿಸಿದರು. ಕಳೆದ ವರ್ಷ ಏಪ್ರಿಲ್ನಲ್ಲಿಯೇ ಮಾಜಿ ಸಂಸದ, ಬೌದ್ಧ ಸಂನ್ಯಾಸಿ ಧರ್ಮ ವಿರಿಯೋರ ನೇತೃತ್ವದಲ್ಲಿ ಧರ್ಮ ಚೇತನಾ ಯಾತ್ರೆಯನ್ನು ಶುರು ಮಾಡಿಸಿದರು. ದಲಿತರು ಮತ್ತು ಹಿಂದುಳಿದವರೇ ಹೆಚ್ಚಿದ್ದ 175ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಈ ಯಾತ್ರೆ ಸಂಚರಿಸಿ ಪ್ರಧಾನಮಂತ್ರಿಗಳ ಯೋಜನೆಯನ್ನು ವಿಸ್ತಾರವಾಗಿ ತೆರೆದಿಟ್ಟಿತು. ಕಾನ್ಪುರದಲ್ಲಿ ಈ ಯಾತ್ರೆ ಸಮಾಪನಗೊಂಡಾಗ 453 ಜನ ಸಭೆಗಳಾಗಿದ್ದವು! ನೆನಪಿಡಿ. ಆಗೆಲ್ಲಾ ಇನ್ನೂ ಚುನಾವಣೆಯ ಬಿಸಿ ಶುರುವಾಗಿರಲೇ ಇಲ್ಲ. ಮಾಯಾವತಿಯ ದಲಿತ ವೋಟುಗಳಿಗೆ ಒಂದು ವರ್ಷದ ಹಿಂದೆಯೇ ಕನ್ನ ಹಾಕಿದ್ದರು ಅಮಿತ್ ಷಾಹ್. ಆಕೆಗೆ ಅರಿವಾಗುವಷ್ಟರಲ್ಲಿ ಕೈ ಮೀರಿ ಹೋಗಿತ್ತು. ಈ ಹೊತ್ತಲ್ಲಿಯೇ 6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ ಅಮಿತ್ ಷಾಹ್ ಅಲ್ಲದೇ ಸ್ಮೃತಿ ಇರಾನಿಯೂ ಭಿನ್ನ ಭಿನ್ನ ಸ್ತರಗಳಲ್ಲಿ ಮಾತನಾಡಿದ್ದರು. ಅಲ್ಲಲ್ಲಿ ನಡೆದ ಯುವ ಸಮ್ಮೇಳನ, ಮಹಿಳಾ ಸಮ್ಮೇಳನಗಳೂ ಮೋದಿಯವರಿಗೆ ಶಕ್ತಿ ತುಂಬುವಂತೆ ನೋಡಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ, ವ್ಯಾಪಾರಿಗಳ ಸಮಾವೇಶಗಳೂ ಭರ್ಜರಿಯಾಗಿ ನಡೆದವು. ದಲಿತರ ಸಮಾವೇಶಕ್ಕೆ ತುಂಬಿದ ಸ್ವಾಭಿಮಾನ ಸಮ್ಮೇಳನದ ರಂಗು ಸಾಕಷ್ಟು ಕೆಲಸ ಮಾಡಿತ್ತು.
ಸಾಮಾಜಿಕ ಜಾಲತಾಣಗಳಲ್ಲೂ ಅಮಿತ್ ಷಾಹ್ ಸಾಕಷ್ಟು ಕೃಷಿ ಮಾಡಿದ್ದರು. ಹಂತ-ಹಂತದ ತಂಡಗಳನ್ನು ಕಟ್ಟಿದ್ದಲ್ಲದೇ ಹತ್ತು ಸಾವಿರದಷ್ಟು ವಾಟ್ಸ್ಅಪ್ ಗುಂಪುಗಳನ್ನು ನಿರ್ಮಿಸಿ ಆಡಿಯೋ ವಿಡಿಯೋ ತತ್ಕ್ಷಣ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಮೋದಿಯವರ ಭಾಷಣ ಹೆಚ್ಚು ಕಡಿಮೆ ಪ್ರತಿಯೊಬ್ಬರ ಮೊಬೈಲುಗಳಲ್ಲೂ ತುಂಬಿ ತುಳುಕಾಡುತ್ತಿತ್ತು. ಅಮಿತ್ ಷಾಹ್ರ ಮಾಸ್ಟರ್ ಸ್ಟ್ರೋಕ್ ‘ಯುಪಿ ಕೆ ಮನ್ ಕಿ ಬಾತ್’ನದ್ದು. 75 ವಿಡಿಯೋ ವಾಹನಗಳನ್ನು ರಾಜ್ಯದ ಮೂಲೆ ಮೂಲೆಗಳಿಗೆ ಕಳಿಸಿ ‘ಸರ್ಕಾರದಿಂದ ನಮ್ಮ ಅಪೇಕ್ಷೆಯೇನು’ ಎಂದು ಜನರನ್ನೇ ಕೇಳುವ ಪ್ರಯತ್ನ ಆರಂಭಿಸಿದರು. ಈ ಪ್ರತಿಕ್ರಿಯೆಗಳ ಆಧಾರದ ಮೇಲೆಯೇ ಚುನಾವಣೆಯ ಪ್ರಣಾಳಿಕೆ ರಚಿಸಿ ಜನರ ಕೈಲಿಟ್ಟರು. ಈ ವೇಳೆಗೆ ಚುನಾವಣೆಯ ಘೋಷಣೆಯಾಯ್ತು. ಅಷ್ಟರೊಳಗೇ ನೋಟು ಬ್ಯಾನ್ ಮಾಡಿಬಿಟ್ಟಿದ್ದರಿಂದ ಪ್ರತಿಪಕ್ಷಗಳ ಹಣ ಚೆಲ್ಲಿ ಓಟು ಪಡೆಯುವ ಎಲ್ಲ ಅವಕಾಶಗಳಿಗೂ ಕತ್ತರಿ ಬಿದ್ದಿತ್ತು. ಬಿಜೆಪಿ ನೆಲದ ಮಟ್ಟದ ಕೆಲಸವನ್ನೆಲ್ಲ ಮುಗಿಸಿ ಸಿದ್ಧವಾಗಿರುವ ವೇಳೆಗಾಗಲೇ, ಎಸ್ಪಿಯ ಒಳಜಗಳ ಬಿಎಸ್ಪಿಯ ಉದಾಸೀನತೆಗೆ ಜನರು ರೋಸಿ ಹೋಗಿದ್ದರು. ಅದಾಗಲೇ ಅವರು ಮಾನಸಿಕವಾಗಿ ನರೇಂದ್ರಮೋದಿಯವರನ್ನು ನಾಯಕರೆಂದು ಗುರುತಿಸಿಕೊಂಡಾಗಿತ್ತು. ಇನ್ನು ಅದನ್ನು ದೃಢೀಕರಿಸುವ ಛಾಪು ಒತ್ತಬೇಕಿತ್ತಷ್ಟೇ. ಸಂಸತ್ ಚುನಾವಣೆ ವೇಳೆಗೆ ದಾಖಲಾದ ಒಂದುಮುಕ್ಕಾಲು ಕೋಟಿ ಸದಸ್ಯರನ್ನು ಮತ್ತೆ ಸಂಪರ್ಕಿಸಲಾಯ್ತು. ಅವರಲ್ಲಿ ಅರ್ಧಲಕ್ಷಕ್ಕೂ ಮಿಕ್ಕಿ ಜನ ಕಾರ್ಯಕರ್ತರಾಗಿ ಬಂದರು. ಅವರಿಗಾಗಿ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಸಂಘಟನೆ ಬಲಪಡಿಸಲಾಯ್ತು. ಒಂದೂವರೆಲಕ್ಷದಷ್ಟು ಬೂಥ್ ಕಮಿಟಿಗಳನ್ನು ರಚಿಸಿ ಕೆಲಸ ಕೊಡಲಾಯ್ತು. ‘ಆಜೀವನ್ ಸಹಯೋಗ ಸಾಥಿ’ ಎಂದು ಕಾರ್ಯಕರ್ತರಿಂದಲೇ ಸಂಗ್ರಹಿಸಿದ 17 ಕೋಟಿಯಷ್ಟು ಹಣವನ್ನು ಚುನಾವಣೆಗೆಂದು ಬಳಸಿಕೊಳ್ಳುವ ಯೋಜನೆ ರೂಪಿಸಲಾಯ್ತು.
ಒಟ್ಟಾರೆ 900 ಬಹಿರಂಗ ಸಭೆಗಳ ತಯಾರಿ. ಟಿಕೇಟು ವಿಚಾರದಲ್ಲಿ ಗೊಂದಲವಾಗದಂತೆ ನೋಡಿಕೊಳ್ಳಲು ಕೆಲವು ಹಿರಿಯ ನಾಯಕರ ಮಕ್ಕಳಿಗೆ ಟಿಕೇಟು ಕೊಟ್ಟು ಆ ನಾಯಕರೆಲ್ಲ ಅವರವರ ಮಕ್ಕಳ ಕ್ಷೇತ್ರದಲ್ಲಿ ವ್ಯಸ್ತರಾಗಿರುವಂತೆ ನೋಡಲಾಯ್ತು. ಈ ಹಿರಿಯ ನಾಯಕರನ್ನು ಎದುರು ಹಾಕಿಕೊಂಡರೆ ಅವರು ಹೊರ ಹಾಕುವ ಒಂದೊಂದು ಹೇಳಿಕೆಗಳೂ ರಾಷ್ಟ್ರಮಟ್ಟದಲ್ಲಿ ಉತ್ಪಾತವನ್ನು ಸೃಷ್ಟಿಸಬಲ್ಲುದೆಂಬ ಅರಿವಿದ್ದುದರಿಂದ ಇಟ್ಟ ಚಾಣಾಕ್ಷ ನಡೆ ಅದು. ದೇಶದ ಪ್ರಮುಖ ಮಂತ್ರಿಗಳು, ರಾಜ್ಯದ ಪ್ರಮುಖ ಸಂಸದರೆಲ್ಲ ಉತ್ತರ ಪ್ರದೇಶದ ಕಣದಲ್ಲಿಯೇ ಇರುವಂತೆ ಪ್ರವಾಸವನ್ನು ರೂಪಿಸಲಾಯ್ತು. ಸ್ವತಃ ಮೋದಿ 23 ರ್ಯಾಲಿಗಳಲ್ಲಿ ಭಾಗವಹಿಸಿ ಲಕ್ಷಾಂತರ ಜನರ ಕಂಗಳಲ್ಲಿ ಕನಸನ್ನು ನೇರವಾಗಿ ಬಿತ್ತಿದರು. ಅಷ್ಟೇ ಅಲ್ಲ. ಏಳು ಹಂತದ ಮತದಾನವಾದ್ದರಿಂದ ಪ್ರಚಾರಕ್ಕೆ ಹೆಚ್ಚಿನ ಸಮಯ ಕೊಡುವ ಅವಕಾಶ ದೊರೆಯಿತು. ಕಾಶಿಯಲ್ಲಿ ರೋಡ್ ಶೋ ನಡೆಸಿ ಮತದಾನಕ್ಕೆ ಹೊರಟಿದ್ದವರಿಗೆ ತುಷ್ಟೀಕರಣದ ವಿರುದ್ಧದ ತಮ್ಮ ವಿಚಾರ ಸ್ಪಷ್ಟವಾಗಿ ಸಾರಿದರು.
ಎಲ್ಲಕ್ಕೂ ಬಲವಾದ ಸಂದೇಶವಿದ್ದರೆ ಅದು ಮುಸಲ್ಮಾನರಿಗೆ ಟಿಕೇಟ್ ಕೊಡದಿದ್ದುದು. ಅಧಿಕಾರಕ್ಕೆ ಬಂದವರೆಲ್ಲರ ಮುಸ್ಲೀಂ ತುಷ್ಟೀಕರಣದಿಂದ ಬೆಂದು ಹೋಗಿದ್ದ ಉತ್ತರ ಪ್ರದೇಶದ ಹಿಂದುಗಳೆಲ್ಲ ತಮ್ಮ ನಡುವಿನ ಭೇದ ಮರೆತು ಮೋದಿಯ 56 ಇಂಚಿನ ಎದೆಗಾರಿಕೆಗೆ ಬೆರಗಾಗಿದ್ದರು. ಅವರೊಂದಿಗೆ ನಿಲ್ಲುವ ಭರವಸೆ ಕೊಟ್ಟಿದ್ದರು. ಟ್ರಿಪಲ್ ತಲಾಖ್ನ ಕುರಿತಂತಹ ಮೋದಿಯವರ ವಿರೋಧ ಮುಲ್ಲಾ-ಮೌಲ್ವಿಗಳ ಕಣ್ಣು ಕೆಂಪಗಾಗಿಸಿದ್ದಿರಬಹುದು. ಆದರೆ ಮುಸ್ಲೀಂ ಮಹಿಳೆಯರು ಮೋದಿಯವರ ಪರವಾಗಿ ಪ್ರಚಾರಕ್ಕೆ ನಿಂತರು. ಇದೂ ಬೋನಸ್ ಆಯ್ತು. ಒಟ್ಟಾರೆ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗಿ ಉತ್ತರ ಪ್ರದೇಶದ ಪಾಲಿಗೆ ‘ಆಲ್ ಟೈಮ್ ರೆಕಾರ್ಡ್’ ಆಯಿತು!
ಗೆಲುವಿನ ಹಿಂದಿದ್ದ ವರ್ಷಗಟ್ಟಲೇ ಶ್ರಮ, ದೂರದೃಷ್ಟಿ, ಚಾಣಕ್ಯ ತಂತ್ರ ಇವೆಲ್ಲವನ್ನೂ ಮೆಲುಕು ಹಾಕಬೇಕೆನ್ನಿಸಿತಷ್ಟೇ. ಮೋದಿ ದೇಶಭಕ್ತ. ದೇಶದ ಒಳಿತಿಗಾಗಿ ಯಾವ ನಿರ್ಣಯವನ್ನು ಬೇಕಿದ್ದರೂ ಕೈಗೊಳ್ಳಬಲ್ಲ ಎನ್ನೋದೇ ಪ್ರತಿಪಕ್ಷಗಳ ಹೆದರಿಕೆಯ ಕಾರಣ ಅಂದಿದ್ದರಲ್ಲ, ರಾಮ್ ಜೇಠ್ಮಲಾನಿ ಈಗ ಅದು ಅರ್ಥವಾಗುತ್ತಿದೆ. ಹ್ಞಾಂ! ಅಂದಹಾಗೆ ತನ್ನ 44 ವರ್ಷಗಳ ಜೀವನದ ಅಂತಿಮ ಕ್ಷಣದಲ್ಲಿ ಕಾರ್ಮೋಡ ಚದುರಿ ಸೂರ್ಯನ ಬೆಳಕು ಎಲ್ಲೆಡೆ ಚೆಲ್ಲಿದಾಗ ನಿವೇದಿತಾ ‘ಶಿಥಿಲವಾದ ಈ ಹಡಗು ಮುಳುಗುತ್ತಿದೆ. ಆದರೂ ನಾನು ಸೂರ್ಯೋದಯವನ್ನು ಕಾಣುತ್ತಿದ್ದೇನೆ’ ಎನ್ನುತ್ತಾ ಪ್ರಾಣತ್ಯಾಗ ಮಾಡಿದ್ದಳು. ಅವಳು ದರ್ಶನ ಪಡಕೊಂಡ ಸೂರ್ಯೋದಯದ ದಿನಗಳು ನಿಜಕ್ಕೂ ಬಂದೇಬಿಟ್ಟವಾ?

Comments are closed.