ವಿಭಾಗಗಳು

ಸುದ್ದಿಪತ್ರ


 

ನನ್ನ ಸಾವಿನ ಭಯವನ್ನು ಮಿತ್ರರ ಕಂಗಳಲ್ಲಿ ಕಂಡೆ!

ಪರಿಸರವೂ ಹೇಳಿ ಮಾಡಿಸಿದಂತಿತ್ತು. ಮೋಡದಿಂದ ಆವೃತವಾಗಿದ್ದ ಆಕಾಶ ನಾಲ್ಕೇ ನಾಲ್ಕು ಹನಿಗಳನ್ನು ಆಗಾಗ ಚೆಲ್ಲುತ್ತಿತ್ತು. ತಂಪು ವಾತಾವರಣವಿದ್ದರೂ ಸಹಿಸಲಾಗದ ಚಳಿಯಲ್ಲ. ಆಗಾಗ ಸೂರ್ಯ ಇಣುಕಿ ನಮ್ಮನ್ನು ನೋಡಿ ಹೋಗುತ್ತಿದ್ದ. ನಾವು ಹೊರಟ ದಿನ ಪೂರ್ಣ ಹೊರ ಬಂದು ನಮ್ಮನ್ನು ಬೀಳ್ಕೊಟ್ಟ!
ಈ ಎರಡು ದಿನಗಳಲ್ಲಿ ಭಗವದ್ಗೀತೆಯ ಪಾಠ, ಗುರುದೇವರ ಬದುಕಿನ ರಸದೂಟಗಳು ನಡೆದವು. ನಮ್ಮ ನಮ್ಮ ಬದುಕಿನ ಲಕ್ಷ್ಯ ದೃಢ ಮಾಡಿಕೊಳ್ಲುವ ಯತ್ನವೂ ಕೂಡ. ಅಲ್ಲಿಂದ ಮರಳಿ ಬರುವಾಗ ಸ್ವರ್ಗ ಬಿಟ್ಟು ಬರುವುದು ಎಷ್ಟು ಕಷ್ಟವೆಂದು ಜೊತೆಯಲ್ಲಿದ್ದವರಿಗೂ ಅನಿಸಿತ್ತು. ದಿವ್ಯತ್ರಯರ ಸಂಗವೇ ಹಾಗೆ!

 

12985612_960439790720682_8585900112418474592_n

ಇದು ಸತತ ಮೂರನೇ ವರ್ಷ. ಏಪ್ರಿಲ್ 9ಕ್ಕೆ ನಾನು ಯಾರ ಕೈಗೂ ಸಿಗದೇ ಕಾಣೆಯಾಗುತ್ತಿರೋದು. ಹಿಂದೊಮ್ಮೆ ನವಿಲು ಕಲ್ಲು ಗುಡ್ಡದ ಮೇಲೆ ಬೆಳ್ಳಂಬೆಳಗ್ಗೆ ಬಗೆಬಗೆಯ ಪಕ್ಷಿಗಳ ದನಿಯೊಂದಿಗೆ ಮೈಮರೆತು ಕುಳಿತಿದ್ದೆ. ಮೂರ್ನಾಲ್ಕು ತಾಸು ಕಣ್ಣು-ಕಿವಿಗಳೆಲ್ಲ ತೆರೆದಿಟ್ಟುಕೊಂಡೇ ಮಾಡಿದ ಧ್ಯಾನ ಅದು. ಮರೆಯಲಾಗದ ಅನುಭವವನ್ನು ಕಟ್ಟಿಕೊಟ್ಟ ದಿನ. ಅಲ್ಲಿಂದ ಮರಳುವ ವೇಳೆಗಾಗಲೇ ಶಿವಮೊಗ್ಗ ಸಂಸ್ಕಾರ ಭಾರತಿಯ ಮಕ್ಕಳು ನನಗೆ ಬೆರಗಾಗುವಂತಹ ಸ್ವಾಗತ ನೀಡಿದ್ದರು. ಕಳೆದ ವರ್ಷ ನಾನು ಇಡಿಯ ದಿನ ಶಕ್ತಿ ಕೇಂದ್ರದ ಮಕ್ಕಳ ಕ್ಯಾಂಪ್ನಲ್ಲಿದ್ದೆ. ಹಿರಿಯರ ಭೇಟಿ, ಮಕ್ಕಳಿಗೆ ಪಾಠ, ಭಜನೆ, ಕಾರ್ಯಕರ್ತರ ಬೈಠಕ್ ಇಡಿಯ ದಿನ ಹಾಗೆಯೇ ಕಳೆದಿತ್ತು. ಅವತ್ತಿಡೀ ಪ್ರೀತಿಪಾತ್ರರ ಕರೆ ಸ್ವೀಕರಿಸಿದ್ದು ಕಾರ್ಯಕರ್ತ ಸಂತೋಷ್. ಅವತ್ತಿನ ಪಾಲಿಗೆ ಅವನೇ ನಾನು!
ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಭಾರ. ದೇಹ ತೂಕವಲ್ಲ. ಮನಸ್ಸಿನ ತೂಕ. ಪ್ರೀತಿಸುವವರ ಸಂಖ್ಯೆ ಎಷ್ಟು ಬೆಳೆದಿದೆಯೆಂದರೆ ಅವರೆದುರು ನಿಂತು ಅವರನ್ನೆದುರಿಸುವುದು ನನಗೆ ಸಾಧ್ಯವೇ ಇರಲಿಲ್ಲ. ನನಗೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ. ದ್ವೇಷಿಸುವವರನ್ನು ಎದುರಿಸೋದು ಬಲು ಸುಲಭ, ಪ್ರೀತಿಸುವವರ ಭಾರ ತಡಕೊಳ್ಳೋದು ಬಲು ಕಷ್ಟ.
ಹಾಗೆಂದೇ ನಾನು ಒಂಟಿಯಾಗಿ ಇರುವ ಜಾಗ ಅರಸತೊಡಗಿದ್ದೆ. ರಮಣಾಶ್ರಮ ಬಿರು ಬಿಸಿಲು, ಕೊಡಗು ಗೌಜು ಗದ್ದಲ, ಕೊಯಮತ್ತೂರಿನ ಈಶ ಪ್ರತಿಷ್ಠಾನ ಪರವಾಗಿಲ್ಲ, ಪಾಂಡಿಚೇರಿ ಅರವಿಂದಾಶ್ರಮದಲ್ಲಿ ಉಳಿಯಲು ರೂಮು ಖಾಲಿ ಇಲ್ಲ. ಕೊನೆಗೆ ನನ್ನ ಕಾಪಾಡಿದ್ದು ರಾಮಕೃಷ್ಣರೇ. ಊಟಿಯ ರಾಮಕೃಷ್ಣಾಶ್ರಮಕ್ಕೆ ಮುಂಚಿನ ದಿನ ಹೊರಟೆ. ಬಂಡೀಪುರದ ಕಾಡು ದಾಟಿ ಊಟಿ ತಲುಪಿದಾಗ ಸಂಜೆ ಆರಾಗಿತ್ತು. ರಾಮಕೃಷ್ಣಾಶ್ರಮವನ್ನು ಹುಡುಕಿ ಒಳ ಸೇರಿಕೊಂಡಾಗ ಶಾರದಾ ಮಾತೆಯ ಕುರಿತಂತೆ ಸುಶ್ರಾವ್ಯವಾದ ಕನ್ನಡದ ಭಜನೆ ಮಂದಿರದೊಳಗಿಂದ ಕೇಳಿಬರುತ್ತಿತ್ತು. ಇತ್ತ ತಿರುಗಿದರೆ ಮುಳುಗುತ್ತಿರುವ ಸೂರ್ಯ ಆಗಸಕ್ಕೆ ಕೇಸರಿಯನ್ನು ಎರಚಿ ವಾತಾವರಣವನ್ನು ರಂಗು-ರಂಗಾಗಿಸಿಬಿಟ್ಟಿದ್ದ. ಗುಡ್ಡಗಳು, ಹರಡಿರುವ ಟೀ ತೋಟ, ಉದ್ದಕ್ಕೆ ಬೆಳೆದು ನಿಂತಿರುವ ಓಕ್ ಮರಗಳು ಎಲ್ಲಕ್ಕೂ ಮಿಗಿಲಾದ ನೀರವ, ನಿಷ್ಪಂದ! ಓಹ್. ಸ್ವರ್ಗವೂ ಇದಕ್ಕಿಂತ ಸುಂದರವಾಗಿರೋದು ನನಗೆ ಅನುಮಾನ.
ನನ್ನ ನಿಶ್ಚಯ ಪಕ್ಕಾ ಆಗಿತ್ತು. ಇರುವ ಎರಡೂ ದಿನ ಆಶ್ರಮದಲ್ಲಿಯೇ ಇರಬೇಕು. ಭಜನೆ, ಧ್ಯಾನ, ಸತ್ಸಂಗಗಳಲ್ಲಿಯೇ ಕಳೆಯಬೇಕೆಂದು ನಿಶ್ಚಯಿಸಿಬಿಟ್ಟಿದ್ದೆ. ಅದರಲ್ಲೂ ಇದೇ ಮಂದಿರದಲ್ಲಿ ರಾಮಕೃಷ್ಣರ ದರ್ಶನ ಪಡೆದ ಸ್ವಾಮೀಜಿಯೊಬ್ಬರ ಕತೆ ಕೇಳಿದ ಮೇಲೆ ಹೊರಗೆಲ್ಲಿ ಹೋಗಲು ಸಾಧ್ಯ? ತಮಿಳುನಾಡಿನ ಸ್ವಾತಂತ್ರ್ಯಹೋರಾಟಗಾರರೊಬ್ಬರಿಗೂ ಇಲ್ಲಿ ಅಲೌಕಿಕ ಅನುಭವಗಳಾಗಿದ್ದುವಂತೆ. ಈ ಘಟನೆಗಳನ್ನು ಕೇಲಿದ ಮೇಲೆ ದೃಢತೆ ಜೋರಾಗಿಯೇ ಬಂದಿತ್ತು.
ಮರುದಿನ ಬೆಳಗ್ಗೆ ನಾಲ್ಕೂವರೆಗೆ ಎದ್ದು ನಿತ್ಯದ ಎಲ್ಲಾ ವಿಧಿಗಳನ್ನು ಮುಗಿಸಿ ಆಶ್ರಮದ ಮಂದಿರ ಹೊಕ್ಕೆ. ಪ್ರಾರ್ಥನೆ-ಆರತಿಯ-ಧ್ಯಾನಗಳ ನಂತರ ಸ್ವಾಮೀಜಿ ಒಳಕರೆದರು. ‘ಹುಟ್ಟಿದ ದಿನಾನಾ?’ ಅಂದರು. ನಕ್ಕೆ. ವಿಶೇಷ ಉಡುಗೊರೆ ಕೊಡುತ್ತೇನೆನ್ನುತ್ತ ಅವರ ಕೋಣೆಗೆ ಕರೆದೊಯ್ದರು. ಜಪಮಣಿಯ ಸರವೊಂದನ್ನು ನನ್ನ ಹಣೆಗೆ ಮುಟ್ಟಿಸಿ ಶಾರದಾಮಾತೆಯವರ ಅಸ್ಥಿಯಲ್ಲಿ ಅದ್ದಿದ ಸರವಿದು ಎಂದು. ಸಾವಿರ ವೋಲ್ಟುಗಳ ಕರೆಂಟು ಹರಿದಂತಾಯ್ತು. ಊಟಿಯೇ ಎತ್ತರದಲ್ಲಿದೆ; ನಾನು ಆಕಾಶಕ್ಕೆ ಹಾರಿಬಿಟ್ಟಿದ್ದೆ!
ಪ್ರೀತಿಸುವವರ ಫೋನುಗಳ ಸುರಿಮಳೆ. ಇಂದು ಮಿತ್ರ ನಂದನ್ ಚಕ್ರವತರ್ಿಯಾಗಿದ್ದ. ಎಲ್ಲರಿಗೂ ಅವನೇ ನಗು-ನಗುತ್ತ ಉತ್ತರಿಸುತ್ತಿದ್ದ. ನನಗೆ ಗೊತ್ತು, ನಾ ಮಾಡಿದ್ದು ತಪ್ಪು. ಆದರೇನು? ಮನಸೆಲ್ಲಾ ತುಂಬಿಕೊಂಡಿದ್ದ ಅವರ್ಣನೀಯ ಶಾಂತಿಯನ್ನು ಕಳಕೊಳ್ಲಲು ಕಿಂಚಿತ್ತೂ ಮನಸಿರಲಿಲ್ಲ.
ಪೂರ್ಣ ಎರಡು ದಿನ ಆಶ್ರಮದ ಹೊರಗೆ ಕಾಲಿಟ್ಟದ್ದು ಎರಡು ಬಾರಿ ಮಾತ್ರ. ಒಮ್ಮೆ ಸ್ವಾಮೀಜಿಯೇ ಅದ್ಭುತವಾದ ಮುರುಗನ್ ಮಂದಿರಕ್ಕೆ ಒಯ್ದಾಗ. ಮತ್ತೊಮ್ಮೆ ಆಶ್ರಮಕ್ಕೆ ಹೊಂದಿಕೊಂಡಂತೆ ಇರುವ ಮಾರಿಯಮ್ಮನ ಮಂದಿರಕ್ಕೆ ಹೋದಾಗ!

IMG_2016-04-11_16-47-22_1460373554646
ಪರಿಸರವೂ ಹೇಳಿ ಮಾಡಿಸಿದಂತಿತ್ತು. ಮೋಡದಿಂದ ಆವೃತವಾಗಿದ್ದ ಆಕಾಶ ನಾಲ್ಕೇ ನಾಲ್ಕು ಹನಿಗಳನ್ನು ಆಗಾಗ ಚೆಲ್ಲುತ್ತಿತ್ತು. ತಂಪು ವಾತಾವರಣವಿದ್ದರೂ ಸಹಿಸಲಾಗದ ಚಳಿಯಲ್ಲ. ಆಗಾಗ ಸೂರ್ಯ ಇಣುಕಿ ನಮ್ಮನ್ನು ನೋಡಿ ಹೋಗುತ್ತಿದ್ದ. ನಾವು ಹೊರಟ ದಿನ ಪೂರ್ಣ ಹೊರ ಬಂದು ನಮ್ಮನ್ನು ಬೀಳ್ಕೊಟ್ಟ!
ಈ ಎರಡು ದಿನಗಳಲ್ಲಿ ಭಗವದ್ಗೀತೆಯ ಪಾಠ, ಗುರುದೇವರ ಬದುಕಿನ ರಸದೂಟಗಳು ನಡೆದವು. ನಮ್ಮ ನಮ್ಮ ಬದುಕಿನ ಲಕ್ಷ್ಯ ದೃಢ ಮಾಡಿಕೊಳ್ಲುವ ಯತ್ನವೂ ಕೂಡ. ಅಲ್ಲಿಂದ ಮರಳಿ ಬರುವಾಗ ಸ್ವರ್ಗ ಬಿಟ್ಟು ಬರುವುದು ಎಷ್ಟು ಕಷ್ಟವೆಂದು ಜೊತೆಯಲ್ಲಿದ್ದವರಿಗೂ ಅನಿಸಿತ್ತು. ದಿವ್ಯತ್ರಯರ ಸಂಗವೇ ಹಾಗೆ!
ದಾರಿಯಲ್ಲಿ ನಂಜನಗೂಡಿನಲ್ಲಿ ಕೆಲಹೊತ್ತು ಕಳೆಯುವ ಅವಕಾಶ ಸಿಕ್ಕಿತ್ತು. ಅಲ್ಲಿನ ಮಿತ್ರರೆಲ್ಲರಿಗೂ ಬರುವ ವಿಚಾರ ಮೊದಲೇ ಗೊತ್ತಿದ್ದುದರಿಂದ ನನಗೆ ಹೇಳದೇ ಕೇಕು ತರಿಸಿ ಸಿದ್ಧ ಮಾಡಿಟ್ಟುಕೊಂಡಿದ್ದರು. ಆ ವೇಳೆಗೇ ಜನರ ನಡುವೆ ನುಸುಳಿ ಬಂದಿದ್ದ ಒಂದೆರಡು ಹಾವುಗಳನ್ನು ಹಿಡಿದು ತಂದಿದ್ದರು ಮಿತ್ರರು. ಹೀಗೆ ಹತ್ತಾರು ಸಾವಿರ ಹಾವುಗಳ ಜೀವವುಳಿಸಿ ಕಾಡಿಗೆ ಬಿಟ್ಟು ಬಂದಿರುವ ಭೂಪರು ಅವರು. ಕೇರೆ ಹಾವನ್ನು ಕೈಲಿ ಹಿಡಿದು ಸ್ವಲ್ಪ ಹೊತ್ತು ಆನಂದಿಸಿದೆವು. ಅಷ್ಟರವೇಳೆಗೆ ನಾಗರಹಾವನ್ನು ನನ್ನ ಕೈಲಿಟ್ಟ ಚಂದ್ರು. ಈ ಹಿಂದೆಯೂ ಹಾವುಗಳನ್ನು ಹಿಡಿದಿದ್ದೆ ನಾನು; ಯಾಕೋ ಅವತ್ತು ಕೈ ಜಾರಿತು ಕೋಲಿನಿಂದ ನುಸುಳಿ ಬಂದ ಹಾವು ಎಡಗೈಯತ್ತ ಮುಖ ಚಾಚಿ ಬಿಟ್ಟಿತ್ತು. ಒಂದೇ ಕ್ಷಣ. ಎಲ್ಲರೂ ಗಲಿಬಿಲಿಗೊಂಡರು. ಚಂದ್ರು ಕೈಯ್ಯ ಕೋಲು ಕಿತ್ತುಕೊಂಡ. ಹಾವು ಎಡಗೈಯ್ಯ ಮಣಿಕಟ್ಟಿಗೆ ಮುತ್ತಿಟ್ಟು ಪಕ್ಕಕ್ಕೆ ಬಿತ್ತು. ಎಲ್ಲರೂ ನಿಟ್ಟುಸಿರು ಬಿಡಬೇಕೆನ್ನುವಾಗಲೇ ನನ್ನ ಮಣಿಕಟ್ಟಿನ ಮೇಲೆ ರಕ್ತದ ಕಲೆ ಕಂಡಿತು. ಹಾವಿನ ಹಲ್ಲು ತಾಕಿದ ಗುರುತೇ ಅದು! ಒಮ್ಮೆ ಗಾಬರಿಯಾಯ್ತು. ಬದಿಗೆ ಬಂದು ರಕ್ತದ ಗುರುತನ್ನು ನೊಡುವಾಗ ಜೊತೆಗಿದ್ದ ಹುಡುಗರು ಅದನ್ನ ನೋಡಿದರು. ಅವರಿಗೆ ತಮ್ಮದೇ ಜೀವ ಹೋದಷ್ಟು ಆತಂಕ. ಚಂದ್ರುವಿನ ಕಂಗಳಲ್ಲಿ ಸಾವಿನ ತಾಂಡವ ನೃತ್ಯ ನಡೆದಿತ್ತು. ಆತನ ಮುಖ ಕಳೆಗುಂದಿತು. ನನ್ನ ಕೈ ಹಿಡಿದು ರಕ್ತದ ಗುರುತನ್ನು ನೋಡಿ ‘ಹಾವು ಕಚ್ಚಿದ ಗುರುತಲ್ಲ’ವೆಂದು ಸಮಾಧಾನ ಮಾಡಿಕೊಳ್ಳುತ್ತಿದ್ದ, ಮತ್ತೆ-ಮತ್ತೆ ಕೈ ನೋಡಿಕೊಳ್ಳುತ್ತಿದ್ದ. ಅವನು ನನಗೆ ಧೈರ್ಯ ತುಂಬುತ್ತೇನೆಂದುಕೊಂಡರೆ, ನಾನು ಅವನಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದೆ. ಆತ ಸಮಾಧಾನಿಯಾದೊಡನೆ ಹಾವು ಕಚ್ಚಿದ 6 ಗಂಟೆಗಳ ಕಾಲ ಬದುಕಿರುತ್ತಾರಂತೆ, ಅಷ್ಟರೊಳಗೆ ಮಾಡಬೇಕಾದ ಕೆಲಸ ಮಾಡಿಬಿಡೋಣ ಅಂತ ಗೇಲಿ ಮಾಡುತ್ತಿದ್ದೆ.
ಉಫ್! ಒಂದೈದು ನಿಮಿಷ ಅಲ್ಲಿನ ವಾತಾವರಣ ಭಯಾನಕವಾಗಿಬಿಟ್ಟಿತ್ತು. ಪ್ರತೀ ವರ್ಷ ಹುಟ್ಟಿದ ಹಬ್ಬಕ್ಕೆ ಪತ್ರ ಬರೆದು ಸಾವನ್ನು ಆನಂದಿಸುವ ಮಾತುಗಳನ್ನಾಡುತ್ತಿದ್ದೆ. ಈ ಬಾರಿ ನನ್ನ ಸಾವಿನ ಪ್ರತಿಫಲನ ಪ್ರೀತಿ ಪಾತ್ರರ ಕಂಗಳಲ್ಲಿ ಹೇಗಿರಬಹುದೆಂಬುದನ್ನು ನೋಡಿಬಿಟ್ಟೆ!
ನಮ್ಮ ಗಾಡಿ ಬೆಂಗಳೂರಿನ ಕಡೆಗೆ ವೇಗವಾಗಿ ಧಾವಿಸುತ್ತಿತ್ತು. ಮನಸ್ಸು ಹಾವಿನ ವಿಷದ ಕುರಿತಂತೆ ಯೋಚಿಸುತ್ತಿತ್ತು. ಅಷ್ಟರಲ್ಲಿಯೇ ಮೊಬೈಲು ಸದ್ದು ಮಾಡಿತು. ಫೇಸ್ಬುಕ್ ನ ಮೆಸೆಂಜರ್ನಲ್ಲಿ ಉದ್ದದೊಂದು ಸಂದೇಶ. ನನ್ನ ಬಗ್ಗೆ ಸಾಕಷ್ಟು ಅಪವಾದಗಳನ್ನು ಮಾಡಲಾಗಿತ್ತು. ಒಮ್ಮೆ ನಕ್ಕೆ. ಮನುಷ್ಯ ಕಕ್ಕುವ ವಿಷಕ್ಕಿಂತ ಹಾವಿನ ವಿಷ ಸಾವಿರ ಪಾಲು ಒಳ್ಳೆಯದು!!
ಅಂದಹಾಗೆ ಆರುಗಂಟೆಯಲ್ಲ, ಈ ಲೇಖನ ಬರೆವ ವೇಳೆಗೆ 16 ಗಂಟೆ ಕಳೆದಿದೆ. ಜೀವ ಇನ್ನೂ ಗಟ್ಟಿಯಾಗಿಯೇ ಇದೆ. ‘ಪಾಪಿ ಚಿರಾಯು’ ಅನ್ನೋದು ಅದಕ್ಕೇ ಏನೋ!!

Comments are closed.