ವಿಭಾಗಗಳು

ಸುದ್ದಿಪತ್ರ


 

ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?

ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ. ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು. ರಾಣಿ ತಾನೇ ಭಾರತವನ್ನು ತನ್ನ ತೆಕ್ಕೆಗೆ ಎಳೆದುಕೊಂಡಳು. ಪರೋಕ್ಷವಾಗಿ ಮಾಡುತ್ತಿದ್ದ ಸುಲಿಗೆಗೆ ನೇರವಾಗಿ ಕೈಹಾಕುವ ಹೊಸ ಮೋಸದಾಟವಿದು. ೧೬೦೦ರ ಮೊದಲ ದಿನದಿಂದ ಹಿಡಿದು, ೧೯೪೭ರ ತಮ್ಮ ಅವಧಿಯ ಕೊನೆಯ ದಿನದವರೆಗೆ ಆಂಗ್ಲರ ಲೂಟಿ ಹೇಳತೀರದ್ದು. ಅವರು ಹಳ್ಳಿಗಳನ್ನು ಧ್ವಂಸಗೈದರು. ಬಂದರುಗಳನ್ನು ಖಾಲಿ ಮಾಡಿದರು. ಊರುಗಳುದ್ದಕ್ಕು ರೈಲ್ವೆ ಹಳಿಗಳನ್ನೆಳೆದು, ತೆರಿಗೆ ಲೂಟಿಗೆ ವ್ಯವಸ್ಥೆ ಮಾಡಿಕೊಂಡರು. ಇಲ್ಲವಾದಲ್ಲಿ, ಸುಮಾರು ಏಳು ಲಕ್ಷದಷ್ಟಿದ್ದ ಬ್ರಿಟಿಷರು ಕೋಟ್ಯಂತರ ಸಂಖ್ಯೆಯಲ್ಲಿದ್ದ ಭಾರತೀಯರನ್ನು ಆಳುತ್ತಿದ್ದುದಾದರೂ ಹೇಗೆ?
ಇವೆಲ್ಲ ಬಿಡಿ. ಇಂಥ ಲೂಟಿಕೋರ ಆಂಗ್ಲರನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಬಿಂಬಿಸಿರುವ ರೀತಿಯನ್ನು ನೀವು ನೋಡಬೇಕು. ಹತ್ತನೆ ತರಗತಿಯ ಸಮಾಜ ಪುಸ್ತಕದಲ್ಲಿ ಕೂಡಲೇ ಭಾರತದಾದ್ಯಂತ ರೈಲು ಸಂಪರ್ಕ ಬೆಳೆಯಿತು. ಇದರ ಪರಿಣಾಮವಾಗಿ ಹೆಚ್ಚಿನ ಭಾರತೀಯರು ದೇಶದಾದ್ಯಂತ ಪ್ರಯಾಣ ಮಾಡಲು ಅನುಕೂಲವಾಯಿತು. ಇದರಿಂದ ಭಾರತೀಯರಿಗೆ ತಾವೆಲ್ಲ ಒಂದೇ ಎಂಬ ಭಾವನೆ ಮೂಡಿತು ಎಂದು ಬರೆದಿದ್ದಾರೆ. ನಮ್ಮ ಮಕ್ಕಳು ಈ ಸಾಲುಗಳನ್ನು ಓದಿದರೆ, ನಾವು ಒಂದೆಂಬ ಭಾವನೆ ಮೂಡಲು ರೈಲು ಪ್ರಯಾಣವೇ ಕಾರಣವಾಯಿತು ಎಂದು ತಿಳಿಯುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎರಡನೆಯದು, ಬ್ರಿಟಿಷರು ಬರುವ ಮುನ್ನ ಮಗಧ ಸಾಮ್ರಾಜ್ಯ ದೇಶವ್ಯಾಪಿ ಹರಡಿತ್ತಲ್ಲ, ಆಗ ಭಾರತ ದೇಶ ಒಂದಾಗಿರಲಿಲ್ಲವೆ? ಕಾಶಿಯಾತ್ರೆ ಮಾಡಿದ ಭಕ್ತ ರಾಮೇಶ್ವರಕ್ಕೆ ಬಂದು ತೀರ್ಥ ಸಮರ್ಪಿಸುತ್ತಿದ್ದನಲ್ಲ, ಅವನು ಓಡಾಟ ಮಾಡಲೇ ಇಲ್ಲವೆ? ಅದು ಬಿಡಿ. ಇಂದು ಜಮ್ಮುವಿನಿಂದ ಕನ್ಯಾಕುಮಾರಿಯವರೆಗೆ ರೈಲು ಮಾರ್ಗಗಳಿವೆಯಲ್ಲ, ನಿಜ ಹೇಳಿ, ನಾವೆಲ್ಲ ಒಂದೇ ಎಂಬ ಭಾವನೆ ಜನರಲ್ಲಿ ಬಲವಾಗಿ ಮೂಡಿದೆಯಾ? ಇಂಥಾ ಸಾಲುಗಳನ್ನು ಪ್ರೌಢ ಮಕ್ಕಳ ತಲೆಯಲ್ಲಿ ತುರುಕುವಾಗ ಎಚ್ಚರಿಕೆ ಬೇಡವಾ?
ಅದೇ ಪಾಠ ಆಂಗ್ಲರ ಆಳ್ವಿಕೆಯಲ್ಲಿ ಶಿಕ್ಷಣ ಪದ್ಧತಿ ಚೆಂದಗೊಂಡಿದುದರ ಕುರಿತು ಒಂದಿಡೀ ಪ್ಯಾರ ಹೊಗಳುತ್ತದೆ. ಭಾರತದಲ್ಲಿ ಶಿಕ್ಷಣ ಮೇಲುಜಾತಿಯ ಪುರುಷರಿಗೆ ಮಾತ್ರ ದೊರೆಯುತ್ತಿತ್ತೆಂದು ತೆಗಳುತ್ತದೆ. ಅಷ್ಟೇ ಅಲ್ಲ, ಇಂಗ್ಲೀಷರ ಶಿಕ್ಷಣದಿಂದ ಪಾಶ್ಚಾತ್ಯ ಜ್ಞಾನ- ವಿಜ್ಞಾನ ಎಲ್ಲರಿಗೂ ಹರಡಿತು…. ದೇಶದಲ್ಲಿ ಇಂಗ್ಲಿಷ್ ಶಿಕ್ಷಣ ಶಾಲೆಗಳನ್ನು ತೆರೆದರು…. ಕ್ರೈಸ್ತ ಮತ ಪ್ರಚಾರಕರು ಇದರಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದೆ.
ಈ ಇತಿಹಾಸಕಾರರ ಮನಸ್ಸೆಂಥದ್ದು ನೋಡಿ. ಎಲ್ಲರಿಗೂ ಶಿಕ್ಷಣ ತಲುಪಿಸುವಲ್ಲಿ ಮುಖ್ಯ ಪಾತ್ರ ಕ್ರೈಸ್ತ ಪಾದ್ರಿಗಳದ್ದು ಎಂದು ಹೇಳುವ ಮೂಲಕ ಓದುಗರಲ್ಲಿ ಜಾತೀಯತೆ ಬಿತ್ತುವ ಕೆಲಸ ಮಾಡಿದ್ದಾರೆ. ಇಷ್ಟಕ್ಕೂ ನಮ್ಮ ಚರಿತ್ರಕಾರರು ಧರ್ಮಪಾಲರ ಬ್ಯೂಟಿಫುಲ್ ಟ್ರೀ ಓದಿದ್ದಾರೇನು? ಆಂಗ್ಲರ ದಾಖಲೆಗಳೇ ಹೇಳುವಂತೆ, ಬಳ್ಳಾರಿಯಲ್ಲಿ ಅಧ್ಯಯನಶೀಲರು ಮತ್ತು ಅಧ್ಯಾಪಕರಲ್ಲಿ ಬಹುತೇಕರು ಕೆಳವರ್ಗಗಳಿಂದ ಬಂದವರು. ದೇಶದ ಬಹುತೇಕ ಕಡೆಗಳಲ್ಲಿ ಶಾಲೆಗಳ ಸ್ಥಿತಿ ಹೀಗೆಯೇ ಇತ್ತು. ಇಲ್ಲವಾದಲ್ಲಿ, ಆಂಗ್ಲರ ಆಗಮನ ಕಾಲಕ್ಕೆ ಎಲ್ಲೆಡೆ ಕುಶಲಕರ್ಮಿಗಳು ಇದ್ದರಲ್ಲ, ಅದು ಹೇಗೆ ಸಾಧ್ಯವಾಯ್ತು? ಬ್ರಾಹ್ಮಣರು ಉನ್ನತ ಹುದ್ದೆಗಳಲ್ಲಿದ್ದು ಶೋಷಣೆ ಮಾಡುತ್ತಾ ಕಾಲಾಯಾಪನೆ ಮಾಡುತ್ತಿದ್ದರು ಎನ್ನುವವರಿಗೆ, ೧೮೫೭ರ ವೇಳೆಗೆ ಸೈನ್ಯದಲ್ಲಿದ್ದ ಬಹುಪಾಲು ಸಂಖ್ಯೆ ಬ್ರಾಹ್ಮಣರದ್ದು ಎನ್ನುವ ಅರಿವಿದೆಯೇನು? ಈ ಸಂಗ್ರಾಮದ ಕಿಡಿ ಉರಿಸಿದ ಮಂಗಲ್‌ಪಾಂಡೆ ಸ್ವತಃ ಜನಿವಾರಧಾರಿ. ನಮ್ಮನ್ನು ಒಡೆದಾಳಲು ಆಂಗ್ಲರು ಬಳಸಿದ್ದ ಅದೇ ದಾಳವನ್ನು ಮುಂದಿರಿಸಿ ಇಂದಿಗೂ ಕೊಲ್ಲುವುದು ಯಾವ ನ್ಯಾಯ? ಒಬ್ಬರನ್ನು ಕೊಲ್ಲುವುದು ಒತ್ತಟ್ಟಿಗಿರಲಿ, ಕ್ರೈಸ್ತಪಾದ್ರಿಗಳನ್ನು ಸಾರ್ವಜನಿಕ ಶಿಕ್ಷಣದ ಹರಿಕಾರರೆಂದು ಬಿಂಬಿಸಿರುವುದು ಸರಿಯಾ? ಕ್ರೈಸ್ತಮತ ಪ್ರಚಾರಕರು ಬಂದಾಗಿನಿಂದ ಮಾಡಿದ ಕೆಲಸಗಳೇನೆಂಬುದನ್ನು ಅನೇಕ ಬ್ರಿಟಿಷ್ ಅಧಿಕಾರಿಗಳೇ ದಾಖಲಿಸಿದ್ದಾರೆ. ಗೋವೆಯಲ್ಲಿ ಸಂತ ಕ್ಸೇವಿಯರ್ ನಡೆಸಿದ ಕ್ರೌರ್ಯ ಯಾರಿಗೆ ತಿಳಿಯದು ಹೇಳಿ. ಇಷ್ಟಿದ್ದರೂ ಅವನ್ನೆಲ್ಲ ಮರೆಮಾಚಿ, ಆ ಕ್ರೈಸ್ತಮತವನ್ನು ಹೆಚ್ಚೆಂದು ಬಿಂಬಿಸಿ, ನಮ್ಮ ಪ್ರಚೀನ ಪರಂಪರೆಯನ್ನು ಜರೆದಿರುವುದು ಸರಿಯಾ? ಇದೊಂದು ಗಮನಿಸಲೇಬೇಕಾದ ಸಂಗತಿ.
ನಾವು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುವುದನ್ನು ನೋಡುತ್ತಾ ಇದ್ದೇವೆ. ನೆನ್ನೆ ಲ್ಯಾಪ್‌ಟಾಪ್, ಇಂದು ಪಾಮ್‌ಟಾಪ್. ಪುಸ್ತಕದ ಬದಲು ಕಿಂಡಲ್. ಅದು ಒಪ್ಪಬಹುದಾದದ್ದು. ಆದರೆ ಭಾರತದಲ್ಲಿ ಇತಿಹಾಸವೇ ಬದಲಾಗಿಬಿಡುತ್ತೆ. ಭಾರತವೆಂದರೆ ಏನೆಂದು ಅರಿಯದ ಬ್ರಿಟಿಷರು ಈ ದೇಶದ ಇತಿಹಾಸ ಮನಸಿಗೆ ಬಂದಂತೆ ಬರೆದರು. ಆಮೇಲೆ ಮಾವೋ ಮದವೇರಿಸಿಕೊಂಡವರು, ಸಚ್ಚಿಂತನೆಗಳೆಲ್ಲ ಚೀನಾದಿಂದಲೇ ಹರಿದುಬಂದವೆಂಬಂತೆ ಭಾರತವನ್ನು ತೆಗಳಿದರು. ನಾವು ಅದೇ ವರ್ಣ ಪದ್ಧತಿಯ ಮನುಸ್ಮೃತಿ ಹಿಡಿದುಕೊಂಡು ಬಡೆದಾಡುತ್ತ ಉಳಿದೆವು. ನಮ್ಮ ಅಂಗಳದಲ್ಲಿಯೇ ನಿಂತುಕೊಂಡು ನಮ್ಮ ಮನೆಯನ್ನು ಬಯ್ದುಕೊಳ್ಳುವ ದೈನೇಸಿ ಸ್ಥಿತಿ.
ಇದೇ ಪುಸ್ತಕ, ೧೮೫೭ರ ಸಂಗ್ರಾಮದ ಕುರಿತಂತೆ ಬ್ರಿಟಿಷ್ ಇತಿಹಾಸಕಾರರು ಇದನ್ನು ಕೇವಲ ಸಿಪಾಯಿ ದಂಗೆ ಎಂದು ವರ್ಣಿಸಿದ್ದಾರೆ. ಭಾರತದ ಇತಿಹಾಸಕಾರರು ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಮರ ಎಂದು ಕರೆದಿದ್ದಾರೆ ಎಂದು ಹೇಳುತ್ತದೆ. ಆಮೇಲೆ ಇಡಿಯ ಪುಸ್ತಕದಲ್ಲಿ ಎಲ್ಲೂ ಇದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಸಂಬೋಧಿಸದೆ, ದಂಗೆ ಎಂದೇ ಮತ್ತೆ ಮತ್ತೆ ಕರೆದಿರುವುದರ ಔಚಿತ್ಯ ಯಾರಿಗೂ ಅರ್ಥವಾಗದ್ದು. ಬಹುಶಃ ನಮ್ಮ ಇತಿಹಾಸಕಾರರ ತಲೆ ಕೆಟ್ಟಿರಬೇಕೆಂದು ಪಠ್ಯಪುಸ್ತಕ ರಚನೆಕಾರರು ನಿರ್ಧರಿಸಿರಬೇಕು. ಹೀಗಾಗಿ ಅವರಿಗೆ ಪಠ್ಯಪುಸ್ತಕದ ಉದ್ದಕ್ಕೂ ವಿದೇಶಿ ಅಥವಾ ಕಮ್ಯುನಿಸ್ಟ್ ಬುದ್ಧಿಯ ಸ್ವದೇಶಿ ಲೇಖಕರೇ ಮಾರ್ಗದರ್ಶಕರು. ಅದಕ್ಕೇ ಇಷ್ಟೆಲ್ಲ ಸಮಸ್ಯೆಗಳು.
ಜಾಗತಿಕ ಇತಿಹಾಸ ತಿಳಕೊಳ್ಳುವ ಮುನ್ನ, ಪ್ರಾದೇಶಿಕ ಸ್ಥಿತಿಗತಿಗಳ ಅವಲೋಕನವಾಗಬೇಕಾದದ್ದು ಅತ್ಯಗತ್ಯ. ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಹಲಗಲಿಯ ಬೇಡರೇ ಗೊತ್ತಿಲ್ಲವಾದರೆ ಹೇಗೆ? ಶಿವಮೊಗ್ಗದ ಮಕ್ಕಳು ನಗರದ ಕೋಟೆಯನ್ನೇ ನೋಡಿಲ್ಲವೆಂದರೆ ಸರಿಯೇ? ಉತ್ತರಕನ್ನಡದ ಶಾಲೆಗೆ ಹೋಗಿ ಮೀರ್ಜಾನ್ ಕೋಟೆಯ ಕಥೆ ಕೇಳಿ. ಅದು ಕರಿಯ ಚಲನಚಿತ್ರದ ಚಿತ್ರೀಕರಣ ನಡೆದ ಜಾಗ ಅನ್ನುತ್ತಾರೆ. ಇದಕ್ಕೇನು ಹೇಳುವುದು!?
ಇತ್ತೀಚೆಗೆ ಸುರಪುರಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ೧೮೫೭ರ ಹೋರಾಟದಲ್ಲಿ ವೆಂಕಟಪ್ಪ ನಾಯಕ ಹೋರಾಡಿದ ಜಾಗ ಅದು. ವೆಂಕಟಪ್ಪನಾಯಕನ ಮುಂದಿನ ಪೀಳಿಗೆಯ ರಾಜರು ಅಲ್ಲಿದ್ದಾರೆ. ಅವರು ಅಂದಿನ ದಿನಗಳಲ್ಲಿದ್ದ ನವಾಬರ, ರಾಜರುಗಳ ಇಂದಿನ ಪೀಳಿಗೆಯವರನ್ನು ಒಟ್ಟು ಸೇರಿಸಿ ಮಹತ್ವದ ಕಾರ್ಯಕ್ರಮವೊಂದಕ್ಕೆ ಭಾಷ್ಯ ಬರೆದಿದ್ದರು. ಅದಕ್ಕೂ ವರ್ಷ ಮೊದಲು, ಶಾಲೆ ಮಕ್ಕಳಿಗೆಂದೇ ಇತಿಹಾಸ ಮೇಳವನ್ನು ಅಲ್ಲಿನ ಮಿತ್ರರು ಆಯೋಜಿಸಿದ್ದರು. ಆ ಮಕ್ಕಳು ತಮ್ಮ ಆಸುಪಾಸಿನ ಚಾರಿತ್ರಿಕ ಸ್ಥಳಗಳನ್ನು, ವ್ಯಕ್ತಿಗಳನ್ನು ಭೇಟಿ ಮಾಡಿ, ತಮ್ಮೂರಿನ- ತಮ್ಮ ಜನರ ಕುರಿತಂತೆ ಗೌರವ ತಾಳಿದರು. ಎಲ್ಲ ಕಡೆಯೂ ಹೀಗೆ ಆದರೆ ಎಷ್ಟು ಚೆಂದ ಅಲ್ಲವೆ?
ನಾವು ಇತ್ತೀಚೆಗೆ ವಿಜ್ಞಾನದ ಕುರಿತಂತೆ ತುಂಬ ಗಮನ ಹರಿಸುತ್ತ ಇದ್ದೇವೆ, ಸರಿ. ಆದರೆ ಇತಿಹಾಸವನ್ನು ಅತ್ಯಂತ ಬೋರಿಂಗ್ ಮಾಡಿಬಿಟ್ಟಿದ್ದೇವೆ. ಅಷ್ಟೇ ಅಲ್ಲ, ಅದನ್ನು ತಿರುತಿರುಚಿ ಇತಿಹಾಸ ಪುರುಷರಿಗೆ ಮೈತುಂಬ ಅವಮಾನ ಮಾಡುತ್ತಿದ್ದೇವೆ. ಇವೆಲ್ಲವನ್ನು ಸರಿ ಮಾಡುವ ಯತ್ನಕ್ಕೆ ಯಾರಾದರೂ ಕೈಹಾಕಿದರೆ ಕೇಸರೀಕರಣ ಎಂದು  ಬೊಬ್ಬೆ ಹಾಕುತ್ತಾರೆ. ಭಾರತದ ಇತಿಹಾಸವನ್ನು ಭಾರತೀಯರೇ ಬರೆಯೋದು, ಭಾರತೀಯರು ಓದೋದು ಬೇಡ ಅನ್ನಿಸುತ್ತದೆಯೇನು?

Comments are closed.