ವಿಭಾಗಗಳು

ಸುದ್ದಿಪತ್ರ


 

ನಿದ್ದೆಯಲ್ಲಿ ನಡೆದಾಡುವ ಪುರುಷತ್ವಹೀನ ಜನಾಂಗ!

ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ?

ಗುರ್ಮೆಹೆರ್ ಕೌರ್. 1999ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಕಾದಾಡುತ್ತ ಪ್ರಾಣತ್ಯಾಗ ಮಾಡಿದ ಜಲಂಧರ್ನ ಕ್ಯಾಪ್ಟನ್ ಮನ್ದೀಪ್ಸಿಂಗ್ರ ಮಗಳು. ಪಾಕೀಸ್ತಾನದೊಂದಿಗೆ ಶಾಂತ ಬಾಂಧವ್ಯವಿರಲೆಂದು ಭಾರತದ ನೇತಾರರಿಗೆ ತಾಕೀತು ಮಾಡಿದವಳು. ‘ಪಾಕೀಸ್ತಾನದೊಂದಿಗೆ ಯುದ್ಧ ಬೇಡ, ಇಷ್ಟಕ್ಕೂ ನನ್ನ ತಂದೆಯನ್ನು ಕೊಂದದ್ದು ಪಾಕೀಸ್ತಾನವಲ್ಲ ಯುದ್ಧ’ ಎಂದು ವಿವಾದದ ಮಾತುಗಳನ್ನಾಡಿದವಳು. ಈಕೆಯ ಈ ಹೇಳಿಕೆ ಬಲು ಹಿಂದೆಯೇ ಬಂದಿತ್ತಾದರೂ ಚುನಾವಣೆಯ ಸಂದರ್ಭದಲ್ಲಿ ಇದಕ್ಕೆ ಮಹತ್ವ ಕೊಟ್ಟು ಮತ್ತೊಂದು ಅಸಹಿಷ್ಣುತೆಯ ಪರ್ವ ಶುರು ಮಾಡಬೇಕೆಂದು ಬುದ್ಧಿ ಜೀವಿಗಳು ಪ್ರಯತ್ನ ಪಟ್ಟಿದ್ದರು. ತೋಳ ಬಂತು ತೋಳದ ಕತೆಯಂತಾಯ್ತು ಅವರ ಪಾಡು. ಜನ ಈ ಬಾರಿ ತಲೆಕೆಡಿಸಿಕೊಳ್ಳಲಿಲ್ಲ. ಬೆದರಿಸುವ ಒಂದು ಅಸ್ತ್ರವನ್ನೂ ಕಳೆದುಕೊಂಡರು ಎಡವಾದಿಗಳು.
ಯುದ್ಧದ ಚರ್ಚೆ ಆಗಬೇಕಾದ್ದೇ. ಭಾರತ ತನ್ನ ಇತಿಹಾಸದುದ್ದಕ್ಕೂ ಮತ್ತೊಬ್ಬರ ಮೇಲೆ ಏರಿಹೋದ ಉದಾಹರಣೆಯೇ ಇಲ್ಲ. ಕ್ಯಾಪ್ಟನ್ ಮನ್ದೀಪ್ಸಿಂಗ್ರ ಸಾವೂ ಪಾಕೀ ನೆಲದಲ್ಲಲ್ಲ, ಭಾರತದಲ್ಲಿಯೇ ಆಗಿದ್ದು. ಕಾರ್ಗಿಲ್ ಕದನವೂ ಕೊನೆಯ ಕ್ಷಣದವರೆಗೆ ನಡೆದದ್ದು ನಮ್ಮದೇ ಗಡಿಯೊಳಗೆ. ನಮ್ಮ ಸೈನಿಕರು ಪೂರಾ ಶರಣಾಗತರಾಗಿ ರಾಷ್ಟ್ರವನ್ನು ಹರಿವಾಣದಲ್ಲಿಟ್ಟು ಶತ್ರುಗಳ ಕೈಗೊಪ್ಪಿಸಿ ಶಾಂತಿಯ ಜಪ ಮಾಡಬೇಕೆಂದು ಇವರೆಲ್ಲರ ಅಭೀಪ್ಸೆಯೇನು?
ಅಕ್ಕ ನಿವೇದಿತಾ ಈ ಕುರಿತಂತೆ ತನ್ನ ‘ಆಕ್ರಮಣಕಾರಿ ಹಿಂದುತ್ವ’ದಲ್ಲಿ ಬಲು ವಿಷದವಾಗಿ ದಾಖಲಿಸುತ್ತಾಳೆ. ‘ಆಕ್ರಮಣಕಾರಿ ಮನೋವೃತ್ತಿ ನಮ್ಮಲ್ಲಿ ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ಆಗ ಗುರಿಯೊಂದನ್ನುಳಿದು ಮತ್ತೇನೂ ಕಾಣದು. ಲಾಭ-ನಷ್ಟಗಳನ್ನು ಲೆಕ್ಕ ಹಾಕುವ, ಹಿಂಜರಿಯುವ ಮನೋವೃತ್ತಿ ಮಾಯವಾಗುತ್ತದೆ. ಕ್ಷುಲ್ಲಕವಾದುದನ್ನು ಪಡೆಯುವ ಆಕಾಂಕ್ಷೆ ಮಾಯವಾಗಿ ವಿಶಾಲವಾದುದನ್ನು ಗಳಿಸುವ, ಸೃಷ್ಟಿಸುವ ಬಯಕೆ ಜಾಗೃತವಾಗುತ್ತದೆ. ನೋಡುತ್ತಿರಿ, ಭವಿಷ್ಯದಲ್ಲಿ ಹಿಂದಿನದಕ್ಕಿಂತ ಹೆಚ್ಚು ಬಲಿದಾನದ ಅವಕಾಶಗಳು ಸೃಷ್ಟಿಯಾಗುತ್ತವೆ. ನಾವು ನಮ್ಮ ಪೂರ್ವಜರಿಗಿಂತ ಭವಿಷ್ಯದ ಕುಡಿಗಳನ್ನು ಹೆಚ್ಚು ಮಹಾತ್ಮರನ್ನಾಗಿಸುವ ಅವಕಾಶ ಪಡೆಯುತ್ತೇವೆ’ ಎನ್ನುತ್ತಾಳೆ. ಹಾಗಂತ ಇದ್ಯಾವುದೂ ಪ್ರತ್ಯಕ್ಷ ರಣಾಂಗಣದ ಕದನಕ್ಕೆ ಆಹ್ವಾನವಲ್ಲ. ಮಲಗಿರುವ ಸಿಂಹವನ್ನು ಬಡಿದೆಬ್ಬಿಸುವ ಆಕೆಯ ಪ್ರಯತ್ನ. ತತ್ಕಾಲೀನ ಸಮಾಜದ ದುಸ್ಥಿತಿ ಆಕೆಯ ಮನಸ್ಸನ್ನು ಕಲಕಿಸಿಬಿಟ್ಟಿತ್ತು. ಆಕೆಗೆ ಈ ರಾಷ್ಟ್ರದ ಮೇಲೆ ಅಪಾರವಾದ ಗೌರವವಿತ್ತು. ಜೊತೆಗೆ ಇದರ ನ್ಯೂನತೆಗಳ ಅರಿವೂ ಕೂಡ. ವಿವೇಕಾನಂದರ ಪ್ರತಿಮೂರ್ತಿಯಾಗಿದ್ದಳು ಆಕೆ. ಜಗತ್ತು ಭಾರತಕ್ಕೆ ಮಾಡುತ್ತಿರುವ ಅನ್ಯಾಯವನ್ನು ಭಾರತೀಯ ಬುದ್ಧಿವಂತರಿಗಿಂತಲೂ ಸಮರ್ಥವಾಗಿ ಅರ್ಥೈಸಿಕೊಂಡಿದ್ದಳು. ‘ಆಧುನಿಕ ಜಗತ್ತು ತುಲನಾತ್ಮಕ ಅಧ್ಯಯನಗಳಿಂದ ಪರಿಪುಷ್ಟವಾಗುತ್ತಿದೆ. ಬಾಗ್ದಾದಿನ ಕಡತಗಳನ್ನು ತನಿಖೆ ಮಾಡಬೇಕೆಂದರೆ ಸ್ಪೇನಿನ ಕಡತಗಳನ್ನು ಅರ್ಥೈಸಿಕೊಳ್ಳಲೇಬೇಕಿದೆ. ಜರ್ಮನಿಯ ಕಾಡುಗಳಲ್ಲಿನ ಕುದುರೆಗಳ ಜನನಕ್ಕೆ ಸಹಕಾರಿಯಾಗದಿದ್ದರೆ ಫ್ರಾನ್ಸಿನ ಅಶ್ವದಳದ ಸ್ವರೂಪ ನಿರ್ಧರಿಸುವುದು ಕಷ್ಟ’ ಎಂದು ಸ್ಪಷ್ಟಪಡಿಸುತ್ತಾಳೆ ಅಕ್ಕ. ಹೀಗೆ ಜಗತ್ತಿನ ರಾಷ್ಟ್ರಗಳೆಲ್ಲ ಒಂದಕ್ಕೊಂದು ಬೆಸೆದುಕೊಂಡು ಜಗತ್ತೇ ಕಿರಿದಾಗಿರುವ ಹೊತ್ತು ಇದು. ಹೀಗಿರುವಾಗಲೂ ಭಾರತವನ್ನು ಮಾತ್ರ ಜಗತ್ತು ಅವಗಣನೆ ಮಾಡುವುದನ್ನು ಆಕೆ ಸಹಿಸಿಕೊಳ್ಳಲು ಸಿದ್ಧಳಿರಲಿಲ್ಲ. ಜ್ಞಾನಾಕಾಂಕ್ಷಿಗಳಿಗೆ ಜನಾಂಗೀಯ ಭೇದದ ಪೂರ್ವಗ್ರಹ ಸಲ್ಲದೆಂದು ವಾದಿಸುತ್ತಿದ್ದಳು. ಹಾಗಂತ ಇದಕ್ಕೆಲ್ಲ ಪಶ್ಚಿಮವೇ ಕಾರಣವೆಂಬ ಬಾಲಿಶ ಮನೋಗತವೂ ಅವಳದಲ್ಲ. ಸಮಸ್ಯೆಯ ಆಳಕ್ಕೆ ಇಳಿದು ಭಾರತವನ್ನು ಪೂರ್ಣ ಪ್ರಮಾಣದಲ್ಲಿ ಹೊಕ್ಕು ನೋಡಿದ್ದಳು. ಯಾವ ಭಾರತ ಪಂಜಾಬಿನ ಗುರ್ಮೆಹೆರ್ ಕೌರ್ಗೆ ಇಂದಿಗೂ ಅರ್ಥವಾಗಿಲ್ಲವೋ ಆ ಭಾರತ ನಿವೇದಿತಾಳ ಎದುರಿಗೆ ಅಂದೇ ಅನಾವರಣಗೊಂಡಿತ್ತು. ಬಹುಶಃ ವಿವೇಕಾನಂದರ ಸಹವಾಸ ಲಾಭವಿರಬೇಕು. ನಿನ್ನ ಮಿತ್ರರನ್ನು ತೋರಿಸು, ನೀನು ಯಾರೆಂದು ಹೇಳುವೆ ಅನ್ನೋದು ಅದಕ್ಕೇ!

Aggressive H

ಈ ದೇಶದ ಇತಿಹಾಸದ ಕುರಿತಂತೆ ಆಕೆಯ ಅರಿವು ಬಲು ಆಳವಾದುದು. ಯುದ್ಧದ ಕುರಿತಂತೆ ನಮ್ಮವರೇ ನಮಗೆ ಶಾಂತಿಯ ಬೋಧನೆ ಮಾಡುವಾಗ, ನಿವೇದಿತಾ ಆಕ್ರಮಣಕಾರಿ ಮನೋವೃತ್ತಿ ಇಲ್ಲವಾದುದೇ ನಮ್ಮ ಹಿನ್ನೆಡೆಗೆ ಕಾರಣವೆಂದು ಬಲವಾಗಿ ನಂಬಿದ್ದಳು. ‘ಭಾರತೀಯ ಮನಸ್ಸು ಜಗತ್ತಿನಲ್ಲಿ ತನ್ನದೇ ಜಾಗವನ್ನು ಜಹಗೀರಿಯೆಂಬಂತೆ ಆಕ್ರಮಿಸಿಕೊಳ್ಳಲು ಎಂದಿಗೂ ಪ್ರಯತ್ನ ಮಾಡಲಿಲ್ಲ. ತೀರಾ ಆಧುನಿಕವಾದುದನ್ನು ಕೊಟ್ಟಾಗಲೂ ಆಜ್ಞಾಪಾಲಕನಂತೆ ಸ್ವೀಕರಿಸಿ ತೃಪ್ತಿಪಟ್ಟಿದೆ. ಅಷ್ಟೇ ಅಲ್ಲ. ಅಪರಿಚಿತವಾದ ಈ ಆಧುನಿಕತೆಯ ಹೊಸತನದ ಕಣ್ಣುಕೋರೈಸುವ ಬೆಳಕಿಗೆ ಕಣ್ಮುಚ್ಚಿ ಕುಳಿತಿದೆ. ಕಳೆದ ಎರಡು ಪೀಳಿಗೆಗಳಿಂದ ಭಾರತೀಯ ಜನ ಪುರುಷತ್ವಹೀನರಾಗಿ, ಪರಿಸ್ಥಿತಿಗಳಿಗೆ ಸೂಕ್ತವಾಗಿ ಪ್ರತಿಸ್ಪಂದಿಸುವ ಸ್ವಾತಂತ್ರ್ಯ ಕಳಕೊಂಡು, ಸಾಮಾನ್ಯ ಜ್ಞಾನವೂ ಇಲ್ಲದವರಾಗಿ ನಿದ್ದೆಯಲ್ಲಿ ನಡೆಯುವ ಜನಾಂಗವಾಗಿಬಿಟ್ಟಿದ್ದಾರೆ’ ಎಂದಿದ್ದಳು ಅಕ್ಕ.
ಹೌದು. ನಾವಿನ್ನೂ ನಿದ್ದೆಯಲ್ಲಿ ನಡೆಯುವ ಜನಾಂಗವೇ. ಯಾವುದನ್ನಾದರೂ ಪ್ರತಿಭಟಿಸುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದೇವೆ. ಶ್ರದ್ಧೆ ನಯಾಪೈಸೆಯಷ್ಟು ಇಲ್ಲ. ರಾಷ್ಟ್ರಗೀತೆ ಹಾಡುವಾಗ ಗೌರವಿಸಬೇಕೋ, ಬೇಡವೋ ಎಂಬ ಚರ್ಚೆ ತರುಣರ ನಡುವೆ. ಮಹಾಪುರುಷರ ಅವಹೇಳನ ಎಗ್ಗಿಲ್ಲದೇ ನಡೆಯುತ್ತಿದೆ. ಕೊನೆಗೆ ರಾಷ್ಟ್ರವನ್ನೇ ಹೀಗಳೆಯುವ, ತುಂಡಾಗಲೆಂದು ಬಯಸುವ ನವ ಜನಾಂಗದ ತರುಣರು ಸೃಷ್ಟಿಯಾಗಿಬಿಟ್ಟಿದ್ದಾರೆ. ಗುರುಸ್ವರೂಪಿ ಭಾರತವನ್ನು ಆರಾಧಿಸುವ ಯೌವ್ವನ ತಯಾರಾಗಬೇಕಿದೆ. ‘ಅವನು ಪೂಜಿಸಲೇಬೇಕು. ಏಕೆಂದರೆ ನಿಷ್ಠೆಯಿಂದ ಮಾತ್ರ ಪುರುಷತ್ವ ಸಿದ್ಧಿಸುತ್ತದೆ. ಆದರೆ ಶ್ರದ್ಧೆಯಲ್ಲಿ ಒಂದೆಳೆ ಕಡಿಮೆಯಾದರೆ, ಸ್ವಹಿತಾಸಕ್ತಿ ಎಳ್ಳಷ್ಟು ಜಾಗೃತವಾದರೆ ಅಂತಹವನನ್ನು ಗುರು ಶಿಷ್ಯತ್ವದಿಂದ ಹೊರದಬ್ಬಲೇಬೇಕು’ ಎನ್ನುತ್ತಾಳೆ ನಿವೇದಿತಾ.
ಅನೇಕ ಬಾರಿ ಆಕೆಯ ಗ್ರಹಿಕೆಯ ಕುರಿತಂತೆ ಅಚ್ಚರಿ ಎನಿಸುತ್ತದೆ. ಇಂಗ್ಲೆಂಡಿನ ವಿರುದ್ಧ ನಡೆದ ಐರಿಷ್ ಚಳವಳಿಗಳಲ್ಲಿ ತಾತ ಜಾನ್ ನೋಬಲ್ ಭಾಗವಹಿಸಿದ್ದರಿಂದ ಆಕೆಯ ರಕ್ತದಲ್ಲಿಯೇ ಸ್ವಾತಂತ್ರ್ಯದೋನ್ಮಾದ ಹರಿದಿರಲು ಸಾಕು. ಮುಕ್ತಿಯ ವಾಂಛೆಯೂ ತೀವ್ರವಾಗಿತ್ತು. ಧ್ಯಾನಸ್ಥಳಾದರೆ ಬಾಹ್ಯಪ್ರಜ್ಞೆ ಕಳೆದುಕೊಳ್ಳುವಂತಾಗಿರುತ್ತಿದ್ದಳು. ಇವೆಲ್ಲದರ ನಡುವೆ ಈ ದೇಶದ ತರುಣರಿಗೆ ಉತ್ಸಾಹದ ಚಿಲುಮೆಯಾಗಿ ಸ್ಫೂರ್ತಿಯ ಕೇಂದ್ರವಾಗಿ ನಿಂತ ಆಕೆಯದ್ದು ನಿಜಕ್ಕೂ ಹತ್ತು ಮುಖ, ನೂರಾರು ಕೈಗಳು. ಹಾಗೆಂದೇ ತಮಿಳಿನ ಕ್ರಾಂತಿಕವಿ ಸುಬ್ರಹ್ಮಣ್ಯ ಭಾರತಿ ‘ಶ್ರೀಕೃಷ್ಣನು ಅರ್ಜುನನಿಗೆ ವಿಶ್ವರೂಪ ತೋರಿಸಿ ಆತ್ಮ ಸಾಕ್ಷಾತ್ಕಾರ ಬೋಧಿಸಿದಂತೆಯೇ ನನಗೆ ಭಾರತ ಮಾತೆಯ ನಿಜರೂಪವನ್ನು ತೋರಿಸಿ ನನ್ನಲ್ಲಿ ದೇಶಭಕ್ತಿಯ ಕಿಚ್ಚನ್ನು ಜಾಗೃತಗೊಳಿಸಿದ ಗುರುವಿನ ಚರಣಗಳಿಗೆ’ ಎಂದು ಬರೆದು ತನ್ನ ಪುಸ್ತಕ ‘ಸ್ವದೇಶ ಗೀತಗಳು’ವನ್ನು ಆಕೆಗೆ ಸಮರ್ಪಿಸಿದ್ದು. ಜನ್ಮಭೂಮಿ ಎಂಬ ಮತ್ತೊಂದು ಕೃತಿಯನ್ನು ಅರ್ಪಿಸುವಾಗ ‘ಕ್ಷಣಾರ್ಧದಲ್ಲಿ ಒಂದೇ ನೋಟದಿಂದ ನನಗೆ ಮಾತೃಭೂಮಿಯ ಸೇವಾದೀಕ್ಷೆ ನೀಡಿ ತ್ಯಾಗದ ಮಹಿಮೆಯನ್ನು ಬೋಧಿಸಿದ, ಭಗವಾನ್ ವಿವೇಕಾನಂದರ ಧರ್ಮಪುತ್ರಿ ನಿವೇದಿತಾ ದೇವಿಯವರಿಗೆ’ ಎಂದು ಬರೆದುಕೊಂಡಿದ್ದರು ಸುಬ್ರಹ್ಮಣ್ಯ ಭಾರತಿ.

Subramanya_Bharathi
ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ? ಸಮಯ ಸಿಕ್ಕಾಗ ಈ ದೇಶದ ಕಥನಗಳನ್ನು ಪುರಾಣವೆಂದು ನಾವೇ ಆಡಿಕೊಂಡು ನಕ್ಕಿಬಿಡುತ್ತೇವೆ. ಅಂತಹುದರಲ್ಲಿ ನಿವೇದಿತಾ 1899ರಲ್ಲಿಯೇ ಧ್ರುವ, ಪ್ರಹ್ಲಾದ, ಗೋಪಾಲರ ಬಾಲ್ಯದ ಕುರಿತ ಕಥನಗಳನ್ನು ಓದಿ ಅದನ್ನು ಆಂಗ್ಲರಿಗಾಗಿ ಬರೆಯತೊಡಗಿದ್ದಳು. ಗ್ರಂಥಾಲಯಗಳಲ್ಲಿ ಓದುತ್ತಿದ್ದಳು, ವಿವೇಕಾನಂದರನ್ನು ಕೇಳುತ್ತಿದ್ದಳು. ಕೊನೆಗೆ ರಾಮಕೃಷ್ಣರ ಸ್ತ್ರೀ ಭಕ್ತರನ್ನೂ ಈ ಕಥೆಯ ಕುರಿತಂತೆ ವಿಚಾರಿಸಿ ದಾಖಲಿಸಿಕೊಳ್ಳುತ್ತಿದ್ದಳು. 1906 ರಲ್ಲಿ ಈ ಕೃತಿ ಸಿದ್ಧವಾದಾಗ ಇಂಗ್ಲೆಂಡು ಮತ್ತು ಅಮೇರಿಕಾದಲ್ಲಿ ಅದು ಏಕಕಾಲಕ್ಕೆ ಬೆಳಕು ಕಾಣುವಂತೆ ಪ್ರಯತ್ನಿಸಬೇಕೆಂದು ಗೆಳತಿ ಮಿಸೆಸ್ ಬುಲ್ಳಿಗೆ ಪತ್ರ ಬರೆದಿದ್ದಳು. ರಾಮಾಯಣ, ಮಹಾಭಾರತ, ಪುರಾಣಗಳಲ್ಲದೇ ಕುಮಾರ ಸಂಭವದಂತಹ ಕಾವ್ಯ ವಿಶೇಷಗಳನ್ನೂ ಓದಿ ಶ್ರೇಷ್ಠ ಕಥೆಗಳನ್ನು ಹೆಕ್ಕಿ ತೆಗೆದಿದ್ದಳು. ಪಶ್ಚಿಮದವರ ಪಾಲಿಗೆ ಆಕೆ ಭಾರತದ ಅಜ್ಜಿಯಾದಳು. ಕಥೆ ಹಳೆಯದಾದರೂ ಸಾಹಿತ್ಯದ ಸೌಂದರ್ಯವನ್ನು ಅದಕ್ಕೆ ತುಂಬಿದಳು. ರೋಮಾಂಚನಕಾರಿ ಮತ್ತು ಕುತೂಹಲಭರಿತವಾಗಿರುವಂತೆ ಅದನ್ನು ರಚಿಸಿದಳು. ಹೀಗಾಗಿ ಭಾರತೀಯರಿಗೂ ಅದು ವಿಶೇಷವೆನಿಸಿದ್ದರಲ್ಲಿ ಅಚ್ಚರಿಯಿಲ್ಲ.
ಬರಿಯ ಕಥೆಗಳನ್ನು ಹೇಳುವುದರಲ್ಲಿ ಮತ್ತು ಲೇಖನಗಳನ್ನು ಬರೆಯುವುದರಲ್ಲಿ ಆಕೆ ತನ್ನ ಕಾಲ ಕಳೆಯಲಿಲ್ಲ. ಖುದ್ದು ತರುಣರನ್ನು ಭೇಟಿಯಾದಳು. ಅವರೊಂದಿಗೆ ಮಾತನಾಡಿದಳು. ಅವರೊಳಗೆ ಹೋರಾಟದ ಕೆಚ್ಚು ತುಂಬಿದಳು. ಹಿಂದೂವಿನಲ್ಲಿ ರಕ್ತಗತವಾಗಿಬಿಟ್ಟಿದ್ದ ಕೆಲವು ದೌರ್ಬಲ್ಯಗಳ ಕಳೆಯನ್ನು ಕಿತ್ತು ಬಿಸಾಡಲು ಪ್ರೇರೇಪಣೆ ನೀಡಿದಳು.
‘ನಮ್ಮ ವಿರುದ್ಧ ನಿಂತಿರುವ ಶಕ್ತಿಯೊಡನೆ ತೊಡೆತಟ್ಟಿ ಗುದ್ದಾಟಕ್ಕೆ ತೊಡಗುವುದರಿಂದ ಸ್ವೀಕರಿಸುವುದರಲ್ಲೇ ತೃಪ್ತಿ ಪಡುತ್ತಿರುವ ನಾವು, ಜಗತ್ತಿನ ಒಟ್ಟಾರೆ ಸಂಸ್ಕೃತಿಗೆ ಒಂದಷ್ಟು ಸೇರಿಸಬಹುದು ಕೂಡ. ಇಲ್ಲಿಂದಾಚೆಗೆ ನಾವು ನಿಷ್ಕ್ರಿಯರಲ್ಲ, ಸಕ್ರಿಯರು. ಭಾರತವನ್ನು ಭಾರತೀಕರಣಗೊಳಿಸುವುದು, ರಾಷ್ಟ್ರೀಯ ಚಿಂತನಾ ಭೂಮಿಕೆಯನ್ನು ಸಿದ್ಧಪಡಿಸುವುದು, ಹೋರಾಟದ ಹಾದಿಯನ್ನು ರೂಪಿಸುವುದು ಇವೆಲ್ಲವನ್ನೂ ನಮ್ಮ ಪರವಾಗಿ ಬೇರೆಯವರು ಮಾಡುವುದಲ್ಲ ಇನ್ನು ಮುಂದೆ ನಾವೇ ಮಾಡಬೇಕು. ಇಲ್ಲಿಂದಾಚೆಗೆ ನಾವು ಯಾವುದೇ ನೀತಿಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕಿಲ್ಲ, ನಮಗೆ ಬೇಕಾದ ನೀತಿಗಳನ್ನು ನಾವೇ ರೂಪಿಸೋಣ. ಹತ್ತು ರೂಪಾಯಿ ಸಂಬಳದ ಕಾರಕೂನರ ಸೃಷ್ಟಿ ಮಾಡುವ ಶಿಕ್ಷಣವನ್ನು ಧಿಕ್ಕರಿಸೋಣ’ ಅವಳ ಬರಹ ಓತಪ್ರೋತ ಪ್ರವಾಹ. ನಿಶ್ಚೇಷ್ಟಿತವಾಗಿ ಬಿದ್ದಿದ್ದ ತಾರುಣ್ಯವನ್ನು ಬಡಿದೆಬ್ಬಿಸಬಲ್ಲ ತಾಕತ್ತು ಅದಕ್ಕೆ. ಅವಳ ಪ್ರೇರಣೆಗೆ ಹತ್ತಾರು ದಿಕ್ಕು. ಭಾರತದ ಇತಿಹಾಸವನ್ನು ಭಾರತೀಯರೇ ಪುನರ್ರಚಿಸಬೇಕು ಎನ್ನುತ್ತಿದ್ದಳು ಆಕೆ. ಪ್ರತಿ ಕಾಲಘಟ್ಟದಲ್ಲೂ ಕೇಂದ್ರವಾಗಿ ಮೆರೆಯುತ್ತಿದ್ದ ಅಯೋಧ್ಯ-ಹಸ್ತಿನಾಪುರ, ಇಂದ್ರಪ್ರಸ್ಥ-ಪಾಟಲೀಪುತ್ರ, ಉಜ್ಜೈನಿ-ದೆಹಲಿ, ಕಾಂಜೀವರಂ-ಅಮರಾವತಿ ಇವುಗಳನ್ನು ಕೇಂದ್ರವಾಗಿರಿಸಿಕೊಂಡು ಅಧ್ಯಯನ ನಡೆಸಬೇಕೆಂದು ಬಯಸಿದ್ದಳು ಆಕೆ. ಸ್ಥಳೀಯ ಭಾಷೆಗಳಲ್ಲಿ ಶ್ರೇಷ್ಠ ಸಾಹಿತ್ಯಗಳು ರಚನೆಯಾಗಬೇಕೆಂಬ ತುಡಿತವಿತ್ತು ಅವಳಿಗೆ. ಜನರನ್ನು ಮುಟ್ಟಲು ಶ್ರೇಷ್ಠ ಮಾರ್ಗವಾದ ಚಿತ್ರ ಕಲೆಯಲ್ಲಿಯೂ ಭಾರತೀಯತೆ ತುಳುಕಾಡಬೇಕೆಂಬ ಅವಳ ಪ್ರಜ್ಞೆಗೆ ಸಾಟಿಯೇ ಇಲ್ಲ. ಮದ್ರಾಸಿನ ಮರಳದಂಡೆಯ ಮೇಲೆ ಕೆಲಸ ಮುಗಿಸಿ ಕೈಬೀಸಿ ಮರಳುತ್ತಿರುವವನನ್ನು, ಸಂಜೆಯ ವೇಳೆಗೆ ಪೂಜೆಯಲ್ಲಿ ನಿರತಳಾಗಿರುವ ಮಹಿಳೆಯನ್ನು, ಸೀರೆಯ ಸೌಂದರ್ಯತೋರುವ ಚಿತ್ರವನ್ನು ಬರೆದು ಜಗತ್ತಿನ ಮುಂದೆ ಅದನ್ನು ತೋರ್ಪಡಿಸಬೇಕೆಂದು ಆಕೆ ಚಿತ್ರಕಾರರಿಗೆ ಮಾರ್ಗದರ್ಶನ ನೀಡುತ್ತಿದ್ದಳು. ನೆನಪಿರಲಿ. ಸ್ವತಃ ಆಕೆಯೂ ಶ್ರೇಷ್ಠ ಚಿತ್ರಗಾತಿ.
ಆಕೆಯ ಬತ್ತಳಿಕೆಯಲ್ಲಿದ್ದುದು ಪ್ರೇರಣೆ ಮಾತ್ರವಲ್ಲ, ಭವಿಷ್ಯದ ನೀಲಿನಕ್ಷೆ ಕೂಡ. ಗುರುದೇವರಂತೆ ತನ್ನ ಆಯಸ್ಸು ಕಡಿಮೆ ಎಂದು ಆಕೆಗೆ ಅರಿವಿತ್ತೇನೋ ಹಾಗಾಗಿ ಎಲ್ಲವನ್ನೂ ಬೇಗ ಮುಗಿಸುವ ಧಾವಂತವಿತ್ತು ಅವಳಿಗೆ. ಈ ವೇಗವೇ ಅವಳ ಮಾತುಗಳನ್ನು ಸಿಡಿಮದ್ದಿನ ಚೆಂಡುಗಳಾಗಿಸಿದ್ದು. ಆಕೆಯೇ ಒಂದೆಡೆ ಹೇಳುತ್ತಾಳೆ, ‘ತ್ಯಾಗವೇ ಉನ್ನತವಾದುದು. ಅದರಲ್ಲೂ ಬದುಕನ್ನೇ ದೊಡ್ಡದೊಂದು ಆದರ್ಶಕ್ಕಾಗಿ ಸಮಪರ್ಿಸುವುದು ಮತ್ತೂ ಶ್ರೇಷ್ಠ. ಇಂತಹ ಮಹಾಪುರುಷರಲ್ಲಿ ಸೈನಿಕ ಅಥವಾ ಸಂನ್ಯಾಸಿ ಯಾರ ವ್ಯಕ್ತಿತ್ವ ಪ್ರಧಾನವಾಗಿದೆಯೆಂದು ಹೇಳುವುದು ಕಷ್ಟ. ಆದರೆ ಸೈನಿಕನ ಧೈರ್ಯ ಮತ್ತು ಸಂನ್ಯಾಸಿಯ ಮುಕ್ತತೆ ಎರಡೂ ಬೆರೆತಿರುವುದೆಂಬುದರಲ್ಲಿ ಅನುಮಾನವಿಲ್ಲ.’

 
ಓಹ್! ಒಂದೊಂದು ಪದಗಳೂ ಮೈ ಬೆಚ್ಚಗಾಗಿಸುವಂಥದ್ದು. ಇಂದಿನ ಈ ದಿನಮಾನದಲ್ಲಿ ಅಂತಹ ಸೈನಿಕ ಮತ್ತು ಸಂನ್ಯಾಸಿ ಇಬ್ಬರನ್ನೂ ಒಳಗೊಂಡ ತ್ಯಾಗಿಗಳ ಜರೂರತ್ತಿದೆ. ಸುದೀರ್ಘ ಹೋರಾಟದಲ್ಲಿ ಭಾರತವನ್ನು ಅರಿತು ಅದನ್ನು ಪ್ರತಿಪಾದಿಸುವ ಮತ್ತು ಅದೇ ವೇಳೆಗೆ ಎದುರಿಸಿ ನಿಂತು ಗೆದ್ದ ಮೇಲೆ ಎಲ್ಲವನ್ನೂ ಬಿಟ್ಟುಬಿಡುವ ಆಧ್ಯಾತ್ಮದ ಸವಿಯುಂಡವರು ಬೇಕಾಗಿದ್ದಾರೆ. ಅವಳೇ ಹೇಳಿದ್ದಾಳೆ, ‘ವಜ್ರಾಯುಧದಂತೆ ಬಲಿಷ್ಠವಾಗಿರುವ, ಬ್ರಹ್ಮಚರ್ಯದಷ್ಟೇ ಕಠೋರವಾಗಿರುವ, ವಿಶಾಲ ಹೃದಯಿಯೂ, ನಿಸ್ವಾರ್ಥಿಯೂ ಆದ ಇತರರ ಸೇವೆ ಮಾಡುವುದನ್ನೇ ಆದರ್ಶವಾಗಿಟ್ಟುಕೊಂಡ ಸಂನ್ಯಾಸಿ ಬೇಕು. ಆಕ್ರಮಣಕಾರಿ ಹಿಂದುತ್ವದ ಸಂತಾನಗಳು ಹೀಗೆಯೇ ಇರಬೇಕು’. ಅಕ್ಕನ ಗ್ರಹಿಕೆಯ ವೈಶಿಷ್ಟ್ಯವಿರೋದು ಇಲ್ಲೇ. ಆಕ್ರಮಣಕಾರೀ ಹಿಂದುತ್ವದ ಮಾತಾಡಿದಾಗಲೂ ಆಕೆ ಯುದ್ಧವನ್ನು ಪ್ರತಿಪಾದಿಸಿದವಳಲ್ಲ ಬದಲಿಗೆ ತನ್ನ ತಾನು ಬಲಾಢ್ಯಗೊಳಿಸಿಕೊಂಡ ಸೇವಾ ನಿರತ ಸನ್ಯಾಸಿಯ ಕನಸನ್ನೇ ಕಟ್ಟಿದವಳು.
ಯಾಕೋ ದೆಹಲಿಯ ಯುನಿವರ್ಸಿಟಿಗಳಲ್ಲಿ ಅರಚಾಡುತ್ತಿರುವವರನ್ನು ಕಂಡಾಗ ಅಕ್ಕ ಬಲುವಾಗಿ ನೆನಪಾಗುತ್ತಿದ್ದಾಳೆ. ದೂರದ ಐರ್ಲೆಂಡಿನಿಂದ ಬಂದರೂ ಭಾರತವನ್ನು ತನ್ನದೆಂದು ಅಪ್ಪಿಕೊಂಡು ನಿಂತ ನಿವೇದಿತಾಗೂ ಇಲ್ಲಿನವರೇ ಆಗಿಯೂ ಈ ನಾಡನ್ನು ಚೂರು-ಚೂರಾಗಿಸಬೇಕೆಂಬ ಬುದ್ಧಿಜೀವಿಗಳಿಗೂ ಅಜಗಜಾಂತರ. ರಾಷ್ಟ್ರಕ್ಕಾಗಿ ಅವಳಲ್ಲಿದ್ದ ತುಡಿತದ ಒಂದಂಶವಾದರೂ ನಮ್ಮಲ್ಲಿದ್ದಿದ್ದರೆ ನಾವು ಹೀಗೆ ದಾರಿ ತಪ್ಪುತ್ತಿರಲಿಲ್ಲ. ಛೇ!

Comments are closed.