ವಿಭಾಗಗಳು

ಸುದ್ದಿಪತ್ರ


 

ಪ್ರಗತಿಯ ಪ್ರಣಾಳಿಕೆ – ಇದು ಬಿಜೆಪಿ ಕೊಡುಗೆ!

ನರೇಂದ್ರ ಮೋದಿಯವರ ದೂರದೃಷ್ಟಿ ಹಾಗೂ ನಾಯಕತ್ವ ಗುಣಗಳಿಗೆ ಹಿಡಿದ ಕನ್ನಡಿಯಂತಿದೆ ಈ ಬಾರಿಯ ಬಿಜೆಪಿ ಪ್ರಣಾಳಿಕೆ….

ತಡವಾಗಿ ಪ್ರಕಟವಾದರೂ ಅತಿ ಹೆಚ್ಚಿನ ಸದ್ದು ಮಾಡಿದ ಚುನಾವಣಾ ಪ್ರಣಾಳಿಕೆ ಬಿಜೆಪಿಯದ್ದು. ಕಾಂಗ್ರೆಸ್ಸಿನ ಪ್ರಣಾಳಿಕೆ ಬಂತು, ಅರ್ಧ ಗಂಟೆ ಚರ್ಚೆಯಾಯ್ತು, ಮರೆತೇ ಹೋಯ್ತು. ದಳ ಅದ್ಯಾವಾಗ ಪ್ರಣಾಳಿಕೆ ಹೊರಹಾಕಿತೋ ದೇವರೇ ಬಲ್ಲ. ಆಪ್‌ ನಾಲ್ಕಾರು ಸಾಲುಗಳನ್ನು ಆಶ್ವಾಸನೆ ರೂಪದಲ್ಲಿಟ್ಟು ಪ್ರಣಾಳಿಕೆ ಎಂದುಬಿಡ್ತು. ಬಿಜೆಪಿ ಬರೋಬ್ಬರಿ ಐವತ್ತೆರಡು ಪುಟಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರ ರಚನೆಯ ಹಿಂದೆ ಸುದೀರ್ಘ ಪರಿಶ್ರಮ ಎದ್ದು ಕಾಣುತ್ತಿದೆ. ಚುನಾವಣೆಗೆ ಮುನ್ನ ಔಪಚಾರಿಕ ಭಾಗವಾಗಿ ಬಿಡುಗಡೆ ಮಾಡುವ ಈ ಪ್ರಣಾಳಿಕೆಗಳು ಮುಖ್ಯ ಸುದ್ದಿಯಲ್ಲಿ ಒಂದು ಚಿತ್ರವಾಗಿ ಲೀನವಾಗಿ ಹೋಗುತ್ತಿತ್ತು. ಆದರೆ ಬಿಜೆಪಿಯ ಈ ಬಾರಿಯ ಪ್ರಣಾಳಿಕೆಗೆ ಮಾಧ್ಯಮಗಳು ಕೊಟ್ಟಿರುವ ಮೌಲ್ಯ ನೋಡಿದರೆ, ಮೋದಿಯ ಮೇಳಿನ ಭರವಸೆ ಹೇಗಿರಬಹುದು, ಯೋಚಿಸಿ! ಆದರೆ ದುರ್ದೆಶೆ ಏನು ಗೊತ್ತೇ? ಈ ಪ್ರಣಾಳಿಕೆಯನ್ನು ಮೊದಲಿನಿಂದ ಚರ್ಚೆಗೆ ತರಬೇಕಾದ ಮಾಧ್ಯಮಗಳು ಕೊನೆಯ ಪುಟದಿಂದ ಶುರುವಿಟ್ಟು ಅಲ್ಲಿಗೇ ನಿಂತುಬಿಟ್ಟಿವೆ. ಇದು ೬೭ ವರ್ಷಗಳ ದೇಶದ ಬೆಳವಣಿಗೆಯ ನೋಟದ ಪರಿ.

bjp

ಇಡಿಯ ಪ್ರಣಾಳಿಕೆಯ ಕೊನೆಯ ಅಂಶ ಸಮಾನ ನಾಗರಿಕ ಸಂಹಿತೆಯದ್ದು. ಇಲ್ಲಿನ ಎಲ್ಲ ಕಾನೂನುಗಳೂ ಇಲ್ಲಿನ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕೆಂಬ ನಿಯಮದ್ದು. ಸ್ವಾತಂತ್ರ್‍ಯ ಬಂದ ಹೊಸತರಲ್ಲಿ ಕಾನೂನು ಸಚಿವರಾಗಿದ್ದ ಅಂಬೇಡ್ಕರರ ಆಶಯದಂತೆ ಹಿಂದೂ ಧರ್ಮದಲ್ಲಿದ್ದ ಅನೇಕ ಆಚರಣೆಗಳನ್ನು ಪ್ರತಿಬಿಂಬಿಸುವ ಹಿಂದೂ ಕೋಡ್ ಬಿಲ್ಲನ್ನು ಜಾರಿಗೆ ತರಲಾಯ್ತು. ಬಾಬೂ ರಾಜೇಂದ್ರ ಪ್ರಸಾದ್‌, ಸರ್ದಾರ್‌ ಪಟೇಲರಾದಿಯಾಗಿ ಅನೇಕರ ವಿರೋಧವಿದ್ದಾಗ್ಯೂ ಅದನ್ನು ಜಾರಿಗೆ ತರುವಲ್ಲಿ ನೆಹರೂ ಗಟ್ಟಿತನ ಮೆರೆದರು. ಆ ಮೂಲಕ ವಿಧವೆಯರಿಗೆ, ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ ಹೆಮ್ಮೆಯಿತ್ತು ಅವರಿಗೆ. ಆದರೆ ಈ ನ್ಯಾಯ ಮುಸಲ್ಮಾನ ಮಹಿಳೆಯರಿಗೆ ವಿಸ್ತಾರಗೊಳ್ಳಲೇ ಇಲ್ಲ. ಎಲ್ಲ ಒಳ್ಳೆಯ ನಿಯಮಗಳೂ ಹಿಂದೂಗಳಿಗೆ ಮಾತ್ರ, ಮುಸಲ್ಮಾನರು ಹೇಗಾದರೂ ಇದ್ದುಬಿಡಲೆಂಬ ಧೋರಣೆ ಇದ್ದಿರಲು ಸಾಕು. ಮುಂದೆ ರಾಜೀವ್‌ ಗಾಂಧಿಯವರ ಕಾಲಕ್ಕೆ ೪೦ ವರ್ಷಗಳ ಕಾಲ ಸಂಸಾರ ನಡೆಸಿ ವಿಚ್ಛೇಧಿತಳಾದ ಷಾ ಭಾನೋ ನ್ಯಾಯಾಲಯದ ಮೆಟ್ಟಿಲೇರಿ ಜೀವನಾಂಶಕ್ಕಾಗಿ ಬಡಿದಾಡಿದಳಲ್ಲ, ಆಗ ನ್ಯಾಯಾಲಯ ಆಕೆಯ ಪರವಾಗಿ ತೀರ್ಪಿತ್ತುಬಿಟ್ಟಿತು. ಗಾಬರಿಗೊಂಡ ರಾಜೀವ್‌ ಗಾಂಧಿ, ಮುಸ್ಲಿಮರ ಮತಗಳು ಕೈತಪ್ಪಿ ಹೋದಾವೆಂದು, ಅವರಿಗಾಗಿ ಪ್ರತ್ಯೇಕ ಕಾನೂನು ರೂಪಿಸಿಕೊಳ್ಳುವ ಅವಕಾಶ ನೀಡಿಬಿಟ್ಟರು. ಅಂದರೆ, ಇಡಿಯ ದೇಶ ಅನುಸರಿಸುವ ಕಾನೂನನ್ನು ಮುಸಲ್ಮಾನರು ಅನುಸರಿಸಬೇಕೆಂದಿಲ್ಲ ಅಂತ! ಇದರರ್ಥ, ಆ ಹೆಣ್ಣು ಮಕ್ಕಳು ನಾಲ್ಕನೇ ಹೆಂಡತಿಯಾಗಬೇಕು, ಮೂರು ಬಾರಿ ತಲಾಕ್‌ ಎಂದೊಡನೆ ವಿಚ್ಛೇದಿತಳಾಗಬೇಕು. ಸಮಾನತೆಯ ತುತ್ತೂರಿ ಊದುವ ಅನೇಕರು ಈ ಕಾನೂನಿನ ವಿಚಾರ ಬಂದಾಗ ಸುಮ್ಮನಾಗಿಬಿಡುತ್ತಾರೆ. ಒಂದು ನೆಲಕ್ಕೆ ಒಂದೇ ಕಾನೂನು ಬೇಡವೆಂದರೆ, ದೇಶವನ್ನು ಒಡೆದಂತಲ್ಲವೆ? ದೇಶವನ್ನು ಒಗ್ಗೂಡಿಸುವ ಮೊದಲ ಪ್ರಯತ್ನ ಸಮಾನ ನಾಗರಿಕತೆ.

ಇನ್ನು ಪ್ರಣಾಳಿಕೆಯಲ್ಲಿ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ರಾಮ ಮಂದಿರ, ರಾಮಸೇತು ಮತ್ತು ಗಂಗೆಯನ್ನು ಗುರುತಿಸಲಾಗಿದೆ. ಸಂವಿಧಾನದ ಅನುಸಾರ ರಾಮ ಮಂದಿರ ನಿರ್ಮಾಣಕ್ಕೆ ಕಟಿಬದ್ಧರಾಗುವುದರಲ್ಲಿ ತಪ್ಪೇನಿದೆ? ಪ್ರಣಾಳಿಕೆಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಸ್ಪಷ್ಟಪಡಿಸಿರುವಾಗ ಅಲ್ಲಿ ಗಲಾಟೆಗೆ ಅವಕಾಶವೇನು? ಬಿಡಿ… ರಾಮಸೇತು ಥೋರಿಯಮ್ ನಿಕ್ಷೇಪದ ಗಣಿ. ಅದನ್ನು ನಾಶಗೈಯಲು ಬಿಡುವುದಿಲ್ಲ ಎಂದುದಲ್ಲದೆ, ಥೋರಿಯಮ್‌ ಬಳಕೆಯ ತಾಂತ್ರಿಕ ಅಭಿವೃದ್ಧಿಗೆ ಹಣ ಹೂಡಲಾಗುವುದು ಎಂದಿರುವುದರಲ್ಲಿ ದೂರದೃಷ್ಟಿ ತಾನೇ ಇರುವುದು! ಸರಿಯಾಗಿ ಥೋರಿಯಮ್‌ನ ಬಳಕೆ ಮಾಡಿದ್ದೇ ಆದರೆ, ಈ ದೇಶದ ವಿದ್ಯುತ್‌ ಬವಣೆ ತೀರುವುದು ಸುಳ್ಳೇನು? ವಿದ್ಯುತ್ತನ್ನು ದಿನದ ಇಪ್ಪತ್ನಾಲ್ಕು ತಾಸೂ ಕೊಡುವ ಭರವಸೆ ಕೊಡುವುದು ಸುಲಭ. ಅದನ್ನು ಉತ್ಪಾದಿಸುವ ದಾರಿ ಕುರಿತ ಆಲೋಚನೆ ಮಾಡುವುದಿದೆಯಲ್ಲಾ, ಅದು ನಾಯಕನ ಕೆಲಸ. ಮೋದಿ ಅದನ್ನು ಮಾಡಿದ್ದಾರೆ.

ವಿದೇಶಾಂಗ ನೀತಿ ಹೇಗಿರುವುದೆಂಬ ಬಗ್ಗೆ ವಿಸ್ತಾರ ಉಲ್ಲೇಖ ಹೊಂದಿರುವ ಪ್ರಣಾಳಿಕೆ, ವಸುಧೈವ ಕುಟುಂಬಕಂ ನೀತಿ ಅನುಸಾರವೇ ಇದೆ. ಜಗತ್ತು ನಮ್ಮನ್ನು ಗುರಾಯಿಸುವುದಲ್ಲ, ಗೌರವದಿಂದ ನೋಡುವಂತೆ ಬದುಕುವ ಮೋದಿಯವರ ಕನಸು ವಿಶಿಷ್ಟವಾದುದು. ಭಯೋತ್ಪಾದಕತೆ ಮತ್ತು ಜಾಗತಿಕ ತಾಪಮಾನದ ಕುರಿತಂತೆ ವೈಶ್ವಿಕ ಮಟ್ಟದಲ್ಲಿ ಏಕರೂಪ ಚಿಂತನೆ  ಊಡಿಸಲು ಭಾರತವೇ ನಾಯಕತ್ವ ವಹಿಸುವ ಚಿಂತನೆಯೇ ರೋಮಾಂಚಕಾರಿ.  ನೆರೆಹೊರೆಯೊಂದಿಗೆ ಸುಮಧುರ ಬಾಂಧವ್ಯ. ಆದರೆ ಅಗತ್ಯ ಬಿದ್ದಾಗ ಕಠೋರ ನಿರ್ಣಯ ಕೈಗೊಳ್ಳುವಲ್ಲಿ ಹಿಂಜರಿಕೆಯಿಲ್ಲ ಎನ್ನುವುದು ಧೀರತ್ವ. ಅಷ್ಟೇ ಅಲ್ಲ… ಎಲ್ಲರ ಕಣ್ತಪ್ಪಿ ಹೋಗಿರುವ ಅಂಶವೊಂದಿದೆ. ಜಗತ್ತಿನಲ್ಲಿ ದಮನಕ್ಕೊಳಗಾದ, ನಿರಾಶ್ರಿತರಾದ ಎಲ್ಲ ಹಿಂದೂಗಳ ಸಹಜ ಆಶ್ರಯ ತಾಣ ಭಾರತ ಮತ್ತು ಅಂತಹ ಪ್ರತಿಯೊಬ್ಬರು ಇಲ್ಲಿಗೆ ಬಂದು ನೆಲೆಸಬಹುದು ಎಂಬುದು ಪ್ರಣಾಳಿಕೆಯ ಮಹತ್ವದ ಭಾಗ. ಕಾಂಗ್ರೆಸ್ಸಿಗೆ ಇದನ್ನು ಹೇಳುವ ತಾಕತ್ತಿದೆಯೆ? ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬರುತ್ತಿರುವ ಹಿಂದೂಗಳಿಗೆ ನೆಲೆ ಕಲ್ಪಿಸಿಕೊಡುವ ಸಾಮರ್ಥ್ಯವಿಲ್ಲದ ಕಾಂಗ್ರೆಸ್ ಕುರಿತು ಹೇಳುವುದೇನು ಬಿಡಿ!

ಆಂತರಿಕ ಸುರಕ್ಷೆಗಾಗಿ NIA ಮತ್ತು National Security council ಗಳನ್ನು ಬಲಪಡಿಸುವ ಕ್ರಿಯಾಯೋಜನೆಗಳನ್ನು ರೂಪಿಸುವುದಲ್ಲದೆ, ತನಿಖಾ ಸಂಸ್ಥೆಗಳನ್ನು ರಾಜನೈತಿಕ ಹಸ್ತಕ್ಷೇಪದಿಂದ ದೂರವಿಸರಿಸುವ ಮಾತಾಡಿರುವುದು ಸಾಮರ್ಥ್ಯವೇ ತಾನೆ? ಸಿಬಿಐಯನ್ನು ಪಂಜರದ ಗಿಳಿ ಮಾಡಿಟ್ಟವರಿಗೆ ಇದು ಅರ್ಥವಾಗೋದು ಕಷ್ಟ. ಬಾಹ್ಯ ಸುರಕ್ಷತೆಯಲ್ಲೂ ಕಠೊರ ಕ್ರಮದ ಮಾತಾಡುವ ಪ್ರಣಾಳಿಕೆ, ರಕ್ಷಣಾ ಇಲಾಖೆಯ ನಿರ್ಧಾರಗಳಲ್ಲಿ ಸೈನ್ಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮಾತಾಡಿದೆ.

ಪ್ರಣಾಳಿಕೆ ಅನೇಕ ಬಗೆಯ ವಿದ್ಯಾ ಸಂಸ್ಥೆಗಳ ಕುರಿತಂತೆ ಮಾತಾಡಿದೆ. ಗ್ರಾಮ ವಿಕಾಸಕ್ಕಾಗಿ ಅಧ್ಯಯನ ನಡೆಸುವ ಸಂಸ್ಥೆಗಳು, ಪೊಲೀಸರ ರಕ್ಷಣೆ ಹೆಚ್ಚಿಸಲು ತರಬೇತಿ ವಿದ್ಯಾಲಯಗಳು, ರಾಷ್ಟ್ರೀಯ ದತ್ತಾಂಶಗಳ ಅಧ್ಯಯನ ಸಂಸ್ಥೆಗಳಯ, ಅಷ್ಟೇ ಅಲ್ಲ, ಹಿಮಾಲಯದ ಉಳಿವಿಗಾಗಿ ಕೇಂದ್ರ ಮಟ್ಟದಲ್ಲಿ ವಿಶ್ವವಿದ್ಯಾಲಯ! ಹೀಗೆ ಕಲ್ಪನೆಯ ಹರಿವು ವಿಸ್ತಾರಬವಾಗುತ್ತ ಸಾಗುತ್ತದೆ.

ಹಿಂದೆಂದೂ ಇಲ್ಲದ ಮಹತ್ವ ವಿಜ್ಞಾನ – ತಂತ್ರಜ್ಞಾನಗಳಿಗೆ ದೊರಕಿದೆ. ಪರಿಸರಕ್ಕೆ ಬಲುವಾದ ಮಹತ್ವ ಬಂದಿದೆ. ಗಂಗೆಯ ಸ್ವಚ್ಛತೆಗೆ ಆದ್ಯತೆ ದೊರಕಿದೆ. ಮನೆಗೆ – ಜಮೀನಿಗೆ – ಕಾರ್ಖಾನೆಗೆ ನೀರು ತಲುಪಿಸುವ ಕನಸು, ಜೊತೆಗೆ ಮನೆಮನೆಗೂ ಇಂಧನ ಅನಿಲವನ್ನು ಪೈಪ್‌ಲೈನ್‌ಗಳ ಮೂಲಕ ಮುಟ್ಟಿಸುವ ಯೋಜನೆಯೂ ಇದರೊಳಗಿದೆ.

ಗರೀಬಿ ಹಟಾವೋ ಎನ್ನುತ್ತಲೇ ಬಂದವರಿಗೆ ಪ್ರತಿಯೊಬ್ಬರಿಗೂ ಒಂದು ಸೂರು ಎಂಬ ಕಲ್ಪನೆ ಬರುವುದು ಕಷ್ಟ. ೨೦೨೨ರೊಳಗೆ, ಅಂದರೆ ಸ್ವಾತಂತ್ರ್‍ಯ ಬಂದು ೭೫ ವರ್ಷಗಳಾಗುವ ವೇಳೆಗೆ ಮಾಡಬೇಕೆಂಬ ಬಲವಾದ ಇಚ್ಛೆ ಬಿಜೆಪಿಯದ್ದು. ಅಷ್ಟೇ ಅಲ್ಲ, ಆ ವೇಳೆಗೆ ಸುವರ್ಣ ಚತುಷ್ಪಥದ ಮೂಲಕ ಅತಿ ವೇಗದ ರೈಲು (ಬುಲೆಟ್‌ ಟ್ರೈನ್)ಗಳ ಜಾಲ ಹಾಕಿರಬೇಕೆಂಬ ಸಂಕಲ್ಪವೂ ಪ್ರಣಾಳಿಕೆಯಲ್ಲಿದೆ

ಒಂದೇ ಬಗೆಯ ಸಮಸ್ಯೆಗಳಿರುವ ರಾಜ್ಯಗಳನ್ನು ಒಟ್ಟುಗೂಡಿಸಿ ಮಾರ್ಗದರ್ಶನ ಮಾಡುವ, ಯುಜಿಸಿಯನ್ನು ಪುನರ್‍ರಚಿಸಿ ಅದನ್ನು . Higher Education council ಆಗಿ ರೂಪಿಸುವ ಯೋಜನೆಯು ಅತ್ಯಂತ ತುರ್ತಾಗಿ ಆಗಬೇಕಿರುವಂಥದ್ದು. ಸದ್ಯಕ್ಕಂತೂ ಯುಜಿಸಿ ಅನುದಾನ ವಿತರಿಸುವ ದಲ್ಲಾಳಿಯಾಗಷ್ಟೆ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇಕಡಾ ೬ರಷ್ಟನ್ನು ಮೀಸಲಿಡುವ ಅಗತ್ಯವಷ್ಟೆ ಅಲ್ಲದೆ, ಮದರಸಾಗಳಿಗೆ ಆಧುನಿಕತೆಯ ರಂಗು ತುಂಬುವ ಪ್ರಯತ್ನಗಳೂ ಕ್ರಾಂತಿಕಾರಕವೇ. ಕಾಶ್ಮೀರಿ ಪಂಡಿತರನ್ನು ಅವರ ಮೂಲಸ್ಥಾನ ಕಾಶ್ಮೀರದಲ್ಲಿ ಪೂರ್ಣ ರಕ್ಷಣೆಯೊಂದಿಗೆ ಉಳಿಸುವ ಪ್ರಯತ್ನಕ್ಕೆ ಕೈಹಾಕುವ ಕಲ್ಪನೆಯೇ ಬೆರಗು ಮೂಡಿಸುತ್ತದೆ.

ಹೇಳಿ… ಇಡಿಯ ಪ್ರಣಾಳಿಕೆಯಲ್ಲಿ ಯಾವುದಕ್ಕೆ ಕೊರತೆಯಿದೆ? ಇಲ್ಲಿ ಕೊರತೆಯಿರೋದು ಉಚಿತ ಕೊಡುಗೆಗಳದ್ದು ಮಾತ್ರ. ಅದು ಮತ ಗಳಿಕೆ ತಂತ್ರವಷ್ಟೆ ತಾನೆ? ಮೋದಿ ಅಂತಹ ನೀಚ ಮಟ್ಟಕ್ಕೆ ಇಳಿಯಲಾರರೆಂಬ ವಿಶ್ವಾಸ ಇದ್ದೇ ಇತ್ತು. ಆ ನಂಬಿಕೆ ಉಳಿಸಿಕೊಂಡಿದ್ದಾರೆ.

೬೭ ವರ್ಷಗಳ ನಂತರ ಅಭಿವೃದ್ಧಿಯ ಮಾರ್ಗದರ್ಶಕವಾದ ಚುನಾವಣಾ ಪ್ರಣಾಳಿಕೆ ಹೊರಬಿದ್ದಿದೆ. ಇದು ಆಶ್ವಾಸನೆಗಳ ಕಂತೆಯಲ್ಲ. ಸಾಧಿಸಬಹುದಾದ ಯೋಜನೆಗಳ ಪಟ್ಟಿ. ಭಾರತವ್ನನು ೨೦೨೦ರಲ್ಲಿ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿಸುವ ಕನಸಿನ ಪಟ್ಟಿ.

ಟೀಮ್‌ ಬಿಜೆಪಿಗೆ ಅಭಿನಂದನೆಗಳು!!

Comments are closed.