ವಿಭಾಗಗಳು

ಸುದ್ದಿಪತ್ರ


 

ಪ್ರೇಮ ಲೋಕಕ್ಕಿಂತಲೂ ರೋಚಕವಾದದ್ದು ಪ್ರಾಣ ಲೋಕ!!

ಯಾರಾದರೂ ಸತ್ತಾಗ ‘ಪ್ರಾಣ ಹೋಯ್ತು’ ಅಂತೇವಲ್ಲ; ಅಲಂಕಾರಿಕವಾಗಿ ’ಪ್ರಾಣ ಪಕ್ಷಿ ಹಾರಿ ಹೋಯ್ತು’ ಅಂತಾನೂ ಹೇಳುತ್ತೇವೆ. ಅದಾದ ನಂತರವೂ ಕಿಡ್ನಿ, ಕಣ್ಣುಗಳು ಜೀವಂತವಾಗಿರುತ್ತವಲ್ಲ. ಮತ್ತೆ ಹಾರಿ ಹೋಗಿದ್ದು ಏನು? ಸತ್ತು ಹೋದನೆಂದು ವೈದ್ಯರು ಘೋಷಿಸಿದ ಮೇಲೂ ಅಂಗಾಂಗಗಳು ಬದುಕಿದ್ದು ಹೇಗೆ? ಹೀಗೆ ಅಂಗಾಂಗಗಳು ಬದುಕಿದ್ದಾಗಲೇ ಯಾರಾದರೂ ಸಮರ್ಥ ಯೋಗಿಗಳು ಪ್ರಾಣಶಕ್ತಿಯನ್ನು ಧಾರೆ ಎರೆದರೆ ಮತ್ತೆ ವ್ಯಕ್ತಿಯನ್ನು ಜೀವಂತ ಮಾಡಿಬಿಡಬಹುದೇ? ಸಾವಿತ್ರೀ ಸತ್ಯವಾನನ ಅಂಗಾಂಗಗಳು ನಿಷ್ಕ್ರಿಯವಾಗುವುದಕ್ಕೆ ಮುನ್ನವೇ ಯಮನನ್ನು ಕಾಡಿ-ಬೇಡಿ ಪ್ರಾಣಶಕ್ತಿ ಹರಿಸಿಕೊಂಡಳಾ?

‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ಎನ್ನುವ ಮಾತನ್ನು ಕೇಳಿದ್ದೀರಲ್ಲ. ಇಲ್ಲದೇ ಮತ್ತೇನು ?ಬಾಲಗಂಗಾಧರ ತಿಲಕರುರಾಷ್ಟ್ರವಾಸಿಗಳಲ್ಲಿ ಹುಟ್ಟುಹಾಕಿದ ಸ್ವಾಭಿಮಾನದ ಮೂಲ ಮಂತ್ರ ಅದು! ಬ್ರಿಟಿಷರ ಬಂಧನದಲ್ಲಿದ್ದ ಭಾರತಿಯರನ್ನು ಸ್ವಾಂತಂತ್ರ್ಯದ ಇಚ್ಛುಕರನ್ನಾಗಿ ಪರಿವರ್ತಿಸಿದ ವಾಕ್ಯ ಅದು. ದೇಶದ ವಿಚಾರ ಬಂದಾಗ ಅದು ಸರಿ,ದೇಹದ ವಿಚಾರ ಬಂದಾಗ? ಅದೇ ಸಾಲು ’ಸಮಾಧಿನನ್ನ ಆಜನ್ಮ ಸಿದ್ದ ಹಕ್ಕು’ ಎಂದಾಗಬಹುದೇನೊ? ದೇಶಭಕ್ತನಿಗೆಸ್ವರಾಜ್ಯ ಎಂಬ ಪದದಿಂದ ಅದೆಷ್ಟು ರೋಮಾಂಚನವಾಗಬಹುದೋ;ದೇವಭಕ್ತನಿಗೆ ಸಮಾಧಿ ಎಂಬ ಪದವು ಅಷ್ಟೇರೋಮಹರ್ಷಕ. ಹುಟ್ಟಿರುವ ಪ್ರತಿಯೊಬ್ಬರೂ ಸಮಾಧಿಯ ಸ್ಥಿತಿಯನ್ನು ಅನುಭವಿಸಲೇಬೇಕು ಏಕೆಂದರೆ ನಾವ್ಯಾರೂ ಪಾಪದ ಸಂತಾನಗಳಲ್ಲ; ಅಮೃತ ಪುತ್ರರು. ಪಶ್ಚಿಮದ ಮತಗಳು ಜಗತ್ತನ್ನ ಆಡಮ್ ಮತ್ತು ಈವ್ ರ ಪಾಪದಕುಡಿಗಳು ಎಂದು ಜರಿದರೆ, ಭಾರತೀಯ ಮತಗಳು ಅಮೃತದ ಮಡಿಲಲ್ಲಿ ಮಿಂದೆದ್ದ ಪುಣ್ಯಾತ್ಮರು ಎಂದುನಮ್ಮನ್ನು ಹುರಿದುಂಬಿಸುತ್ತವೆ. ಇಂತಹ ಅಮೃತ ಸಮಾನ ಸಂತಾನವಲ್ಲದೇ ಮತ್ಯಾರು ಸಮಾಧಿ ಸ್ಥಿತಿಗೆ ಅರ್ಹರಾಗಬೇಕು ಹೇಳಿ!

ಕಬ್ಬಿಣದ ಚೂರೊಂದುಚುಂಬಕವನ್ನು ಮೆತ್ತಿಕೊಳ್ಳಲೆಂದೇ ಹುಟ್ಟಿರುತ್ತದೆ . ಆದರೆ ಮಣ್ಣೊಳಗೆ ಬಿದ್ದು ರಾಡಿಯಾಗಿ ಸುತ್ತಮಣ್ಣಿನ ಮುದ್ದೆ ಮೆತ್ತಿಕೊಂಡ ಕಬ್ಬಿಣ, ಚುಂಬಕವನ್ನು ಅರಸಲಾರದು. ಒಮ್ಮೆ ಮಣ್ಣಿನ ಕವಚ ಕಳಚಿಬಿತ್ತೆಂದರೆಕಬ್ಬಿಣ ರಪ್ಪನೆ ಚುಂಬಕವನ್ನ ಹಿಡಿದುಬಿಡುತ್ತದೆ. ಬಹಳ ಕಾಲ ಹೀಗೆ ಹಿಡಿದುಕೊಂಡಿದ್ದರೆಕಬ್ಬಿಣವೇ ಚುಂಬಕವಾಗಿ ಬಿಡುತ್ತದೆ. ಮುಂದೆ ತಾನು ಇತರರನ್ನು ಆಕರ್ಷಿಸಲಾರಂಭಿಸುತ್ತದೆ. ಅವತಾರಪುರುಷರ ಕಲ್ಪನೆ ಹೀಗೆ ಇರಬಹುದೇನೋ?

6a00d834539cc469e200e5539114508833-320wiಇರಲಿ; ವಿಷಯ ಅದಲ್ಲ.ಸಮಾಧಿ ಅನ್ನೋದು ನಮ್ಮನ್ನು ವಿಶ್ವ ಶಕ್ತಿಯೊಂದಿಗೆ ಒಂದು ಮಾಡುವ ಪ್ರಕ್ರಿಯೆ. ವಿಶ್ವದ ಹುಟ್ಟಿಗೆ ಕಾರಣವಾಗಿರುವ ಆ ವಿಶ್ವ ಶಕ್ತಿಯೊಂದಿಗೆ ನಾವು ಒಂದಾಗಲಿಲ್ಲವೆಂದರೆ ನಿಸ್ತೇಜರಾಗುತ್ತೇವೆ, ನಿಶ್ಯಕ್ತರೂ ಆಗುತ್ತೇವೆ. ಪ್ರತಿದಿನ ಒಂದಷ್ಟು ಗಂಟೆಗಳ ಕಾಲವಾದರೂ ಆ ಬ್ರಹ್ಮಾನುಭವ ನಮಗೆ ಆಗಲೇ ಬೇಕು. ಆಗ ಮಾತ್ರ ದಿನವಿಡೀ ಶಕ್ತಿವಂತರಾಗಿ ಲವಲವಿಕೆಯಿಂದಿರಲು ಸಾಧ್ಯ. ಹೌದು.ಪ್ರತಿ ದಿನ ಸಮಾಧಿಯ ಸವಿ ಸವಿಯಲೇ ಬೇಕು. ನನ್ನೊಳಗಿನ ಶಕ್ತಿ, ವಿಶ್ವ ಶಕ್ತಿಯ ಕಂಪನಕ್ಕೆ ಹೊಂದಿಕೊಂಡಾಗ ಮಾತ್ರ ನಮ್ಮ ಶಕ್ತಿ ವೃದ್ದಿಯಾಗೋದು. ಭೌತಶಾಸ್ತ್ರದ ಸರಳ ನಿಯಮ ರೆಸೊನೆನ್ಸ್ ನಂತೆ ಇದು. ನಾವು ಪ್ರತಿನಿತ್ಯ ಹೀಗೆ ಸಮಾಧಿಗೇರುವುದನ್ನು ಸಹಜವಾಗಿ ’ನಿದ್ದೆ’ ಎಂದುಬಿಡುತ್ತೇವೆ. ಮನಸ್ಸು ಶೂನ್ಯವಾದೊಡನೆ ವಿಶ್ವಶಕ್ತಿಯೊಂದಿಗೆ ದೇಹಶಕ್ತಿ ಅನುರಣನಗೊಳ್ಳುತ್ತದೆ. ಆಮೇಲೆ ಇಡಿಯ ದಿನಕ್ಕೆ ಸಾಕಾಗುವಷ್ಟು ಶಕ್ತಿ ನಮ್ಮದಾಗುತ್ತದೆ. ಹೀಗೆ ಇಡಿಯ ರಾತ್ರಿಯ ನಿದ್ದೆಯಲ್ಲಿ ನಾವು ಗಾಢ ನಿದ್ರೆಗೆ ಜಾರುವುದು ಹತ್ತಿಪ್ಪತ್ತು ನಿಮಿಷಮಾತ್ರ. ಉಳಿದುದೆಲ್ಲವೂ ದೇಹಕ್ಕೆ ವಿಶ್ರಾಂತಿ ಅಷ್ಟೇ. ಗಾಢ ನಿದ್ರೆ ಮಾತ್ರ ಚೈತನ್ಯ ಶಕ್ತಿ ತುಂಬುವಂಥದ್ದು. ಬಲು ಆಯಾಸವಾಗಿ ಮದ್ಯಾಹ್ನ ಹತ್ತೇ ನಿಮಿಷ ಮಲಗಿ ಎದ್ದು ಬಿಟ್ಟಾಗ ಒಮ್ಮೆ ಹೊಸದಿನ ಪ್ರಾರಂಭವಾದಂತೆ ಅನಿಸುತ್ತಲ್ಲ; ಅದಕ್ಕೆ ಕಾರಣ ಇದೇ. ಯೋಗಿಯಾದವನು ಬಯಸಿದಾಗ ಸಮಾಧಿಗೇರುವ ಶಕ್ತಿ ಪಡಕೊಂಡಿರುವುದರಿಂದಲೇ ಆತ ನಮ್ಮಂತೆ ಗಂಟೆಗಟ್ಟಲೆ ಹಾಸಿಗೆಯ ಮೇಲೆ ಬಿದ್ದುಕೊಳ್ಳಬೇಕಾಗಿಲ್ಲ! ಹೌದು, ವ್ಯತ್ಯಾಸ ಅದೇ. ಯೋಗಿಯೊಬ್ಬ ಸಮಾಧಿಗೆ ಪ್ರಯತ್ನಪೂರ್ವಕವಾಗಿ ಏರಿ ಶಕ್ತಿ-ಚೈತನ್ಯ ಪಡೆದುಕೊಂಡು ಅನುಭವಗಳೊಂದಿಗೆ ಮರಳುತ್ತಾನೆ. ನಾವು ಅನಾಯಾಸವಾಗಿ ಮಲಗಿ ನಿದ್ದೆ ಮಾಡಿ ಶಕ್ತಿ-ಚೈತನ್ಯ ಗಳಿಸಿಕೊಂಡು ಅನುಭವಗಳಿಲ್ಲದೇ ಮರಳಿಬಿಡುತ್ತೇವೆ. ಅರೇ! ತಿಳಿಯದೇ ಉಂಟಾದ ಸಮಾಧಿಯಿಂದಲೇ ಇಷ್ಟೊಂದು ಶಕ್ತಿ-ಸಂತೋಷಗಳು ದೊರಕಿದ್ದರೆ ಇನ್ನು ಅರಿತು ಸಮಾಧಿ ಸಿದ್ದಿಸಿಕೊಂಡರೆ ಅದರ ಆನಂದ ಹೇಗಿರಬಹುದು?

ಆಲೋಚನಾ ಸರಣಿ ಬಲು ಸ್ಪಷ್ಟ. ಯಾವ ಅಂಶಗಳಿಂದ ಈ ವಿಶ್ವ ನಿರ್ಮಾಣಗೊಂಡಿದೆಯೋ ಅದೇ ಅಂಶಗಳಿಂದ ಈ ದೇಹವೂ ನಿರ್ಮಿತವಾಗಿದೆ. ಹೀಗಾಗಿ ವಿಶ್ವದ ಆಗುಹೋಗುಗಳು ಈ ದೇಹವನ್ನು ಪ್ರಭಾವಿಸಬಹುದಾದರೆ,ಈ ದೇಹದ ಆಗುಹೋಗುಗಳನ್ನು ನಿಯಂತ್ರಿಸುವ ಮೂಲಕ ನಾನೇಕೆ ವಿಶ್ವವನ್ನೇ ಬದಲಾಯಿಸಬಾರದು! ಅಬ್ಬ, ಹೀಗೆ ಆಲೋಚಿಸುವುದಕ್ಕೆ ಎಂಟೆದೆ ಬೇಕು. ಅದಕ್ಕೇ ಭಾರತೀಯ ಋಷಿಗಳನ್ನು ಯಾರೂ ಅಳ್ಳೆದೆಯವರೆನ್ನುವುದಿಲ್ಲ. ಅವರದ್ದು ಸಿಂಹದ ಹೃದಯವೇ ಸರಿ.

ಪಂಚಭೂತಗಳ ನಿರ್ಮಾಣಕ್ಕೆ ಮೂಲ ಶಕ್ತಿಯೇ ಪ್ರಾಣ ಎಂಬುದನ್ನು ಹಿಂದಿನ ಸಂಚಿಕೆಗಳಲ್ಲಿ ಓದಿದ್ದೇವೆ. ಪರಬ್ರಹ್ಮನಲ್ಲಿ ಉಂಟಾದ ಕಂಪನದಿಂದ ಹೊರ ಸೂಸಿದ ಪ್ರಾಣದಿಂದ ಆಕಾಶ ಸೃಷ್ಟಿಯಾಯ್ತು. ಆಕಾಶ ಪ್ರಾಣಗಳ ಸಂಯೋಗದಿಂದ ವಾಯುವಿನ ಜನನ. ಆಮೇಲೆ ಬೆಂಕಿ,ನೀರು, ಭೂಮಿ ಎಲ್ಲಾ! ಅಂದರೆ ಎಲ್ಲಕ್ಕೂ ಶಕ್ತಿಸ್ರೋತ ಪ್ರಾಣವೇ ಎಂದಾಯ್ತು ತಾನೇ? ಇದೇ ಶಕ್ತಿ ನಮ್ಮ ದೇಹದೊಳಗೂ ಸಂಚರಿಸುತ್ತಾ ನಮ್ಮ ಜೀವಂತಿಕೆಯನ್ನು ಖಾತ್ರಿಪಡಿಸಿದೆ. ಅಷ್ಟೇ ಅಲ್ಲ ಮರಣಾನಂತರದ ಯಾತ್ರೆಗೂ ನಮ್ಮನ್ನು ಸಜ್ಜುಗೊಳಿಸುತ್ತದೆ.

ನನಗೆ ಗೊತ್ತು. ಈ ಹಂತದಲ್ಲಿ ಒಂದಷ್ಟು ಗೊಂದಲ ಸಹಜವೇ. ನಾವು ಮಾತು ಮಾತಿಗೆ ಬಳಸುವ ಪ್ರಾಣಕ್ಕೂ ಈಗ ಉಲ್ಲೇಖಿಸುತ್ತಿರುವ ಪ್ರಾಣಕ್ಕೂ ಸಂಬಂಧ ಇದೆಯೇ ಅಂತ. ಸುಮ್ಮನೆ ಹಾಗೆ ಗಮನಿಸಿ. ಯಾರಾದರೂ ಸತ್ತಾಗ ‘ಪ್ರಾಣ ಹೋಯ್ತು’ ಅಂತೇವಲ್ಲ; ಅಲಂಕಾರಿಕವಾಗಿ ’ಪ್ರಾಣ ಪಕ್ಷಿ ಹಾರಿ ಹೋಯ್ತು’ ಅಂತಾನೂ ಹೇಳುತ್ತೇವೆ. ಅದಾದ ನಂತರವೂ ಕಿಡ್ನಿ, ಕಣ್ಣುಗಳು ಜೀವಂತವಾಗಿರುತ್ತವಲ್ಲ. ಮತ್ತೆ ಹಾರಿ ಹೋಗಿದ್ದು ಏನು? ಸತ್ತು ಹೋದನೆಂದು ವೈದ್ಯರು ಘೋಷಿಸಿದ ಮೇಲೂ ಅಂಗಾಂಗಗಳು ಬದುಕಿದ್ದು ಹೇಗೆ? ಹೀಗೆ ಅಂಗಾಂಗಗಳು ಬದುಕಿದ್ದಾಗಲೇ ಯಾರಾದರೂ ಸಮರ್ಥ ಯೋಗಿಗಳು ಪ್ರಾಣಶಕ್ತಿಯನ್ನು ಧಾರೆ ಎರೆದರೆ ಮತ್ತೆ ವ್ಯಕ್ತಿಯನ್ನು ಜೀವಂತ ಮಾಡಿಬಿಡಬಹುದೇ? ಸಾವಿತ್ರೀ ಸತ್ಯವಾನನ ಅಂಗಾಂಗಗಳು ನಿಷ್ಕ್ರಿಯವಾಗುವುದಕ್ಕೆ ಮುನ್ನವೇ ಯಮನನ್ನು ಕಾಡಿ-ಬೇಡಿ ಪ್ರಾಣಶಕ್ತಿ ಹರಿಸಿಕೊಂಡಳಾ?

ಇವೆಲ್ಲಕ್ಕೂ ಉತ್ತರ ಬೇಕೆಂದರೆ ಸ್ವಲ್ಪ ಪ್ರಾಣದ ಆಳಕ್ಕೆ ಹೊಕ್ಕು ಒಂದು ಸುತ್ತು ಬರಬೇಕು.

ವಿಶ್ವ ಸೃಜನೆಗೆ ತನ್ಮೂಲಕ ದೇಹದ ಹುಟ್ಟಿಗೂ ಕಾರಣವಾದ ಈ ಪ್ರಾಣಶಕ್ತಿ ಪ್ರಾಣ. ಅಪಾನ, ವ್ಯಾನ, ಸಮಾನ, ಉದಾನ ಎಂಬ ಐದು ಸ್ವರೂಪಗಳಲ್ಲಿ ದೇಹದಲ್ಲಿ ಹರಡಿಕೊಂಡಿದೆ. ಕಲ್ಪನೆಮಾಡಿಕೊಳ್ಳಿ. ಯುದ್ಧದಹೊತ್ತಲ್ಲಿ ಕೊಟೆಯ ರಕ್ಷಣೆಗೆಂದು ರಾಜ ಮಂತ್ರಿಯನ್ನು ಕರೆದು ವ್ಯೂಹ ರಚಿಸುತ್ತಾನೆ. ಒಬ್ಬ ಸೇನಾ ನಾಯಕನನ್ನು ಶಸ್ತ್ರ ಸಂಗ್ರಹಕ್ಕೆ ನೇಮಿಸುತ್ತಾನೆ. ಮತ್ತೊಬ್ಬ ಈ ಶಸ್ತ್ರಗಳನ್ನು ಕದನ ನಿರತರಿಗೆ ತಲುಪಿಸಲು. ಒಬ್ಬ ಮುಖ್ಯ ದ್ವಾರದಲ್ಲಿ ನಿಂತು ಕೋಟೆಗೆ ಬೇಕಾದ ಅಗತ್ಯ ಸಾಮಾನುಗಳನ್ನು, ವ್ಯಕ್ತಿಗಳನ್ನು ಪರೀಕ್ಷಿಸಿ ಒಳಗೆ ಬಿಡುವ ಕೆಲಸದಲ್ಲಿ ನಿಂತರೆ ಮತ್ತೊಬ್ಬ ದ್ರೋಹಿಗಳನ್ನು ಆಲಸಿಗಳನ್ನು ಹುಡು-ಹುಡುಕಿ ಹಿಂಬಾಗಿಲಿನಿಂದ ಹೊರದಬ್ಬುತ್ತಿರುತ್ತಾನೆ.

ಒಟ್ಟಾರೆ ದೇಹವನ್ನು ಆವರಿಸಿರುವ ಪ್ರಾಣದ ಕಲ್ಪನೆ ಇಷ್ಟೇ. ಇಲ್ಲಿ ಕೋಟೆ ಈ ದೇಹ. ರಾಜನೇ ಪ್ರಾಣ. ಆತನೇ ಉಳಿದೆಲ್ಲರನ್ನೂ ನಿಯಂತ್ರಿಸುವವ. ಜೊತೆಗೆ ಯುದ್ಧದ ಹೊತ್ತಲ್ಲಿ ಹೊರಬಾಗಿಲಲ್ಲಿ ನಿಂತು ಒಳಬರುವವರನ್ನು ಪರೀಕ್ಷಿಸಿ ಒಳಬಿಡುವವನೂ ಕೂಡ. ಮಂತ್ರಿಯೇ ’ಉದಾನ’. ಆತ ಯೋಜನೆಗಳನ್ನು ರೂಪಿಸುವನಲ್ಲದೇ, ಫಲಿತಾಂಶದ ವಿಶ್ಲೇಷಣೆ ಮಾಡುತ್ತಾನೆ. ಶಸ್ತ್ರ ಸಂಗ್ರಹದಲ್ಲಿ ’ಸಮಾನ’ವಿದ್ದರೆ, ಅದನ್ನು ಎಲ್ಲೆಡೆಗೂ ತಲುಪುವಂತೆ ನೋಡಿಕೊಳ್ಳುವಲ್ಲಿ ’ವ್ಯಾನ’ದ ಪಾತ್ರ ಮಹತ್ವದ್ದು. ಇನ್ನು ’ಅಪಾನ’ ಬೇಡದಿರುವವರನ್ನು ಹೊರದಬ್ಬುವ ಕೆಲಸದಲ್ಲಿ ನಿರತವಾಗಿರುತ್ತದೆ. ಯಾರೊಬ್ಬರ ಕೆಲಸ ಏರುಪೇರಾದರೂ ದೇಹವೆಂಬ ಕೋಟೆ, ಬಿರುಕು ಬಿಟ್ಟಂತೆ.

ನೇರವಾಗಿಯೇ ಹೇಳಬೇಕೆಂದರೆ, ಪ್ರಾಣ ಮುಖದಲ್ಲಿ ನೆಲೆ ನಿಂತಿದ್ದು, ಮೂಗಿನ ಮೂಲಕ ಉಸಿರನ್ನು ಸೆಳೆದುಕೊಳ್ಳುತ್ತದೆ;ಕಣ್ಣು-ಕಿವಿ-ನಾಲಗೆ-ಚರ್ಮಗಳ ಮೂಲಕ ಗ್ರಹಿಸುತ್ತದೆ.ಅನ್ನ ಸೇವಿಸುತ್ತದೆ. ಒಟ್ಟಾರೆ ನಮ್ಮ ಬದುಕಿಗೆ ಬೇಕಾದ ಅತಿಮುಖ್ಯ ಇಂಧನವನ್ನು ಒದಗಿಸಿಕೊಡುತ್ತದೆ. ‘ಸಮಾನ’ ಒಳಹೊಕ್ಕ ಎಲ್ಲ ಬಗೆಯ ಆಹಾರವನ್ನೂ ಜೀರ್ಣವಾಗಲು ಸಹಕರಿಸುತ್ತದೆ. ಜಠರದಲ್ಲಿ ಕ್ರಿಯೆ ನಡೆಯಲು ಬೇಕಾದ,ಮನಸ್ಸಿನಲ್ಲಿ ಇಂದ್ರಿಯ ಪ್ರೇರಿತ ಗ್ರಹಿಕೆಗಳ ಸಂಕಲನಕ್ಕೆ ಬೇಕಾದ ಶಕ್ತಿಯನ್ನು ಒದಗಿಸಿಕೊಡುತ್ತದೆ. ಸಹಜವಾಗಿಯೇ ಪ್ರಾಣದ ಮೂಲಕ ಒಳಹೊಕ್ಕ ಈ ಆಹಾರ ಶಕ್ತಿಯಾಗಿ ಪರಿವರ್ತನೆಗೊಂಡು ಮುಂದಿನ ಚಟುವಟಿಕೆಗಾಗಿ  ಕಾಯುತ್ತಿರುತ್ತದೆ. ಆಗ ಕೆಲಸಕ್ಕೆ ಬರೋದು ’ವ್ಯಾನ’. ಇದು ಈ ಶಕ್ತಿಯನ್ನು ದೇಹದ ಮೂಲೆ ಮೂಲೆಗೂ ತಲುಪುವಂತೆ ಮಾಡುತ್ತದೆ. ಜಠರದಲ್ಲಿ ಉತ್ಪಾದನೆಯಾದ ಶಕ್ತಿಯನ್ನು ಕೈ-ಕಾಲುಗಳಿಗೆ ತಲುಪಿಸಿ ಕೆಲಸ ಮಾಡಲು ಚೈತನ್ಯ ನೀಡಿದರೆ, ಮನಸ್ಸಿನ ಶಕ್ತಿಯನ್ನು ಆಲೋಚನೆ ಮಾಡುವಲ್ಲಿ ಪ್ರೇರೇಪಿಸುತ್ತದೆ. ಇನ್ನು ಈ ಒಟ್ಟಾರೆ ಪ್ರಯತ್ನದಲ್ಲಿ ಉತ್ಪಾದನೆಯಾದ ಅನಗತ್ಯ ವಸ್ತುಗಳನ್ನು ದೇಹದಿಂದ ಹೊರದಬ್ಬುವ ಕಾಯಕ ‘ಅಪಾನ’ದ್ದು! ಮಲ-ಮೂತ್ರ ವಿಸರ್ಜನೆಗೆ, ಮೂಗಿನ ಹೊಳ್ಳೆಗಳಿಂದ ಇಂಗಾಲದ ಡೈ ಆಕ್ಸೈಡ್ ಹೊರ ಹಾಕುವಲ್ಲೆಲ್ಲ ಅಪಾನದ್ದೇ ಬಲು ದೊಡ್ಡ ಪಾತ್ರ. ಇನ್ನು ಉಳಿದಿದ್ದು ’ಉದಾನ’. ಇದು ಪ್ರಾಣದ ಶಾಂತ ರೂಪ, ಆದರೆ ಅಷ್ಟೇ ಪ್ರಮುಖ ಕೂಡ. ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ಗಮನಿಸುತ್ತಲೇ ಇದ್ದು, ಕರ್ಮಕ್ಕನುಸಾರವಾಗಿ ನಮ್ಮನ್ನು ಸಾವಿನ ನಂತರದ ಯಾತ್ರೆಗೆ ಅಣಿಗೊಳಿಸುತ್ತದೆ. ದೇಹ ತ್ಯಾಗದ ನಂತರ ಆತ್ಮದ ಹೊಸ ದೇಹ, ಹೊಸ ಪರಿಸರದೆಡೆಗಿನ ಯಾತ್ರೆಗೆ ಶಕ್ತಿ ತುಂಬುವುದು ಉದಾನವೇ!

ಇವಿಷ್ಟನ್ನೂ ಋಷಿ ಪಿಪ್ಪಲಾದ ತನ್ನ ಬಳಿಗೆ ಬಂದ ಆರು ಜನ ಶಿಷ್ಯರಿಗೆ ಎಳೆಎಳೆಯಾಗಿ ಬಿಡಿಸಿ ಹೇಳುತ್ತಾರೆ. ಪ್ರಶ್ನೋಪನಿಷತ್ತು ಎಂದೇ ಹೆಸರಾದ ಈ ಉಪನಿಷತ್ತಿನಲ್ಲಿ ಶಿಷ್ಯರಿಗೆ ಹುಟ್ಟುವ ಪ್ರಶ್ನೆಗಳು ಗುರುಗಳು ಅನುಗ್ರಹಿಸುವ ಉತ್ತರ ಎರಡೂ ಅಮೋಘ. ಪ್ರಾಣ ಶಕ್ತಿಯ ಕುರಿತಂತೆ ಇಷ್ಟು ಅನನ್ಯವಾದ ಚರ್ಚೆ ಜಗತ್ತಿನ ಮತ್ಯಾವ ಸಾಹಿತ್ಯದಲ್ಲೂ ಕಂಡು ಬರಲಾರದು.

ಹೋಗಲಿಬಿಡಿ ಆ ಚರ್ಚೆಯನ್ನು ಮತ್ತೊಮ್ಮೆ ಮಾಡೋಣ. ಸದ್ಯಕ್ಕೆ ಸ್ಥೂಲವಾಗಿ ಈ ಶಕ್ತಿಯನ್ನ ಅರ್ಥೈಸಿಕೊಳ್ಳಬೇಕೆಂದರೆ, ಯಂತ್ರವೊಂದಕ್ಕೆ ಪ್ರಾಣ ಇಂಧನವನ್ನು  ತಂದುಕೊಟ್ಟರೆ, ಸಮಾನ ಈ ಇಂಧನವನ್ನು ಶಕ್ತಿಯಾಗಿಸುತ್ತದೆ. ವ್ಯಾನ ಈ ಶಕ್ತಿಯನ್ನು ಯಂತ್ರದ ಬೇರೆ ಬೇರೆ ಭಾಗಗಳಿಗೆ ತಲುಪಿಸಿದರೆ,ಅಪಾನ ಬೇಡದವಸ್ತು ಹೊರಹಾಕುತ್ತದೆ. ಉದಾನ ಈ ಯಂತ್ರದ ಸಾಮರ್ಥ್ಯ ಗಮನಿಸಿ ಅದು ಮಾಡಬಹುದಾದ ಕಾರ್ಯವನ್ನು ನಿರ್ಧರಿಸುತ್ತದೆ.

ಈಗ ಹೇಳಿ ನಮ್ಮ ಬೈಕಿಗೆ ಇಂಧನ ಹಾಕುವುದು ಬಿಡಿ, ಸೈಲೆನ್ಸರ್ ಪೈಪನ್ನು ಮುಚ್ಚಿಬಿಟ್ಟರೂ ಸಾಕು; ಗಾಡಿ ಹಾಳಾಗಿ ಹಳ್ಳ ಹಿಡಿಯುತ್ತದೆ. ಹಾಗೆಯೇ ದೇಹದಲ್ಲಿನ ಈ ಪ್ರಾಣದ ಭಿನ್ನ-ಭಿನ್ನ ರೂಪಗಳನ್ನು ಸಮರ್ಥವಾಗಿ ನಿಯಂತ್ರಿಸಿದರೆ ದೇಹ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಶಕ್ತಿಯ ಕಣಜವಾಗುತ್ತದೆ.

ಅದಕ್ಕಾಗಿಯೇ ಪ್ರಾಣಾಯಾಮದ ಪ್ರಯೋಗ ಶುರುವಾಗಿದ್ದು. ಪ್ರಾಣಶಕ್ತಿಯನ್ನು ನಿಯಂತ್ರಿಸಲು ಉಸಿರಾಟದ ನಿಯಂತ್ರಣದ ಕಲ್ಪನೆ ಹುಟ್ಟಿದ್ದೇ ಹೀಗೆ. ಒಳ ಬರುವ ವಸ್ತುಗಳ ನಿಯಂತ್ರಣಕ್ಕೆಂದು ನಿಂತ ಪ್ರಾಣಕ್ಕೆ ಸಹಕಾರ ಮಾಡಿ ಅದನ್ನು ಒಲಿಸಿಕೊಂಡುಬಿಟ್ಟರೆ, ಆಮೇಲೆ ಅದರ ವಿವಿಧ ರೂಪಗಳು ನಮ್ಮ ಹಿಡಿತಕ್ಕೆ ಬಂದಂತೆಯೇ.

ಹೀಗೆ ಪ್ರಾಣಶಕ್ತಿಯನ್ನು ವಶಕ್ಕೆ ಪಡಕೊಂಡವ ಇತರರಿಗೂ ಅದನ್ನ ಹರಿಸಬಲ್ಲ. ಇದರ ಆಧಾರದ ಮೇಲೆ ಪ್ರಾಣಿಕ್ ಹೀಲಿಂಗ್ ಎನ್ನುವ ಆರೋಗ್ಯ ವಿಜ್ಜ಼ಾನ ಹುಟ್ಟಿಕೊಂಡಿದ್ದು. ಪ್ರಾಣಶಕ್ತಿಯ ಕೊರತೆಯೇ ಅನಾರೋಗ್ಯ ಎನ್ನುವುದು ಸರ್ವವಿದಿತ. ’ಅಪಾನ’ ಸೂಕ್ತ ಕಾರ್ಯನಿರ್ವಹಿಸಲಿಲ್ಲವೆಂದರೆ ಗ್ಯಾಸ್ಟ್ರಿಕ್ ಟ್ರಬಲ್ ಅಂತಾರೆ. ’ಸಮಾನ’ ಕೈ ಕೊಟ್ಟರೆ ಅಸಿಡಿಟಿ, ಅಜೀರ್ಣ ಅಂತಾರೆ. ’ವ್ಯಾನ’ದಲ್ಲಿ ಸಮಸ್ಯೆಯಾದರೆ ಹಾರ್ಟ್ ಅಟ್ಯಾಕ್ ಆಗುತ್ತೆ; ಉದಾನ ಹೆಚ್ಚು ಕಡಿಮೆಯಾದರೆ ನರ್ವಸ್ ಡಿಸಾರ್ಡರ್ ಕೂಡ ಆಗಬಹುದು. ಇನ್ನು ಸಣ್ಣ ಪುಟ್ಟ ಮೈ-ಕೈ ನೋವು ತಲೆ ಬೇನೆಗಳೆಲ್ಲ ಪ್ರಾಣಸಂಚಾರದಲ್ಲಿನ  ವ್ಯತ್ಯಯವಲ್ಲದೆ ಬೇರೇನೂ ಅಲ್ಲ. ಹೀಗಿರುವಾಗ ಪ್ರಾಣಶಕ್ತಿಯನ್ನು ವಶಪಡಿಸಿಕೊಂಡ ಸಾಧಕನೊಬ್ಬ ತನ್ನೊಳಗಿನ ಈ ಶಕ್ತಿಯನ್ನು ಮತ್ತೊಬ್ಬರಿಗೆ ಹರಿಸುತ್ತಾನೆಂದರೆ ಅಸಾಧ್ಯವೇಕೆ ಆಗಬೇಕು?

ಬುದ್ಧ ಮೈ ಮುಟ್ಟಿ ಜನರನ್ನು ಗುಣಪಡಿಸಿದ ಎನ್ನುವುದು ಈ ಪ್ರಾಣಶಕ್ತಿ ಹರಿಸಿದ ಎನ್ನುವುದರ ಪವಾಡ ರೂಪ ಅಷ್ಟೇ. ಈ ಕೆಲಸ ಎಲ್ಲರೂ ಮಾಡಬಹುದು. ಹರಿಸಿದಷ್ಟು ಖಾಲಿಯಾಗದ ಪ್ರಾಣದಶಕ್ತಿ ಉತ್ಪಾದಿಸುವ ಜನರೇಟರ್ ಗಳಾಗಬೇಕು ಅಷ್ಟೇ!

1 Response to ಪ್ರೇಮ ಲೋಕಕ್ಕಿಂತಲೂ ರೋಚಕವಾದದ್ದು ಪ್ರಾಣ ಲೋಕ!!

  1. Hemanth Raj

    super shakthi