ವಿಭಾಗಗಳು

ಸುದ್ದಿಪತ್ರ


 

ಬದುಕು ಕಲಿಸುವ ಮುಂಬೈ ಟ್ರೇನು…

‘ಏಯ್! ನನ್ ಡಬ್ಬಾ ಒಳಗಿದೆ. ಕೆಂಪು ಡಬ್ಬಾ ನೋಡ್ರೋ’ ಹಾಗಂತ ಬಾಗಿಲ ಬಳಿ ನಿಂತು ಒಬ್ಬ ಕೂಗುತ್ತಿದ್ದ. ಕೆಂಪು ಡಬ್ಬಾ, ಕೆಂಪು ಡಬ್ಬಾ… ಕ್ಷಣ ಮಾತ್ರದಲ್ಲಿ ಅದು ಎಲ್ಲರ ಕೂಗಾಯ್ತು. ಡಬ್ಬಾ ಮಾತ್ರ ಸಿಗಲೇ ಇಲ್ಲ. ಬಾಗಿಲ ಬಳಿ ಇದ್ದ ಮತ್ತೊಬ್ಬ, ಡಬ್ಬಾವಾಲಾನ ಫೋನ್ ನಂಬರ್ ತೊಗೊಂಡ. ಹುಡುಕಾಡಿ ತಲುಪಿಸುವೆನೆಂದ. ಆ ಪರಿ ಜನಸಂದಣಿಯಲ್ಲಿ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ನಡೆದು ಹೋಯಿತು. ‘ಮುಂಬೈ ಟ್ರೇನುಗಳಲ್ಲಿ ಹೀಗೇನೇ’ ಪಕ್ಕದಲ್ಲಿ ನಿಂತಿದ್ದ ಭಾವ ಉದ್ಗಾರ ತೆಗೆದರು. ನನಗೆ ಮಾತನಾಡಲೂ ಆಗುವಂತಿರಲಿಲ್ಲ. ನಾನು ನಿಂತ ಜಾಗ ಬಿಟ್ಟರೆ ಅಕ್ಕಪಕ್ಕ ಹೊರಳಲಿಕ್ಕಿರಲಿ, ಜಾಗದಲ್ಲಿ ಮಿಸುಕಾಡಲೂ ಅವಕಾಶವಿರಲಿಲ್ಲ. ಎಂಟು ನಿಮಿಷದ ಹಿಂದೆ ಬರಬೇಕಿದ್ದ ಒಂದು ಟ್ರೇನು ಬರಲಿಲ್ಲವೆಂಬುದೇ ಇಷ್ಟೆಲ್ಲಾ ರಾದ್ಧಾಂತಕ್ಕೆಕಾರಣ.
ಆಫೀಸಿಗೆ ಹೋಗುವವರು ಇಂಟರ್ವ್ಯೂ ಸಮಯ ಸಮಯ ದಾಟುತ್ತಿರುವವರು, ಕಾಲೇಜಿಗೆ ಓಡಬೇಕಿರುವವರು, ಹುಡುಗಿಗೆ ಬರುತ್ತೇನೆಂದು ಹೇಳಿಬಿಟ್ಟಿರುವ ಹುಡುಗಿಗೆ ಬರುತ್ತೇನೆಂದು ಹೇಳಿಬಿಟ್ಟಿರುವ ಹುಡುಗರು, ಊಟ ತಲುಪಿಸಬೇಕಿರುವ ಡಬ್ಬಾವಾಲಾಗಳು ಕೊನೆಗೆ ಈ ಜನಸಂದಣಿಯ ಅವಕಾಶ ಪಡೆಯಲು ಯತ್ನಿಸುತ್ತಿರುವ ಕಳ್ಳರು.. ಕೆಲವೇ ನಿಮಿಷಗಳಲ್ಲಿ ಎಲ್ಲರ ಪರಿಚಯ! ಅದಕ್ಕೇ ಭಯ. ಜೇಬಿನಲ್ಲಿ ಒಂದು ಮೊಬೈಲು, ಎಂಟ್ ಹತ್ತು ಸಾವಿರ ದುಡ್ಡುಳ್ಳ ಪರ್ಸು, ಅದರಲ್ಲಿಯೇ ಬೆಚ್ಚಗೆ ಕುಳಿತ ನನ್ನ ಡ್ರೈವಿಂಗ್ ಲೈಸೆನ್ಸು, ಟೂ ವ್ಹೀಲರ್ ಡಾಕ್ಯುಮೆಂಟು! ಕೆಳಗೆ ಕಾಲಮೇಲಿಟ್ಟುಕೊಂಡ ಬ್ಯಾಗಿನಲ್ಲಿ ನಲವತ್ತು ಸಾವಿರ ರೂಪಾಯಿಯ ಕ್ಯಾಮೆರಾ…. ನನ್ನ ತಲೆ ಹತ್ತು ದಿಕ್ಕಿನಲ್ಲಿ ಓಡುತ್ತಿತ್ತು. ಪದೇಪದೇ ಮುಟ್ಟಿಕೊಳ್ಳುತ್ತಿದ್ದರೆ ಕಳ್ಳನಿಗೂ ಅನುಮಾನ ಬಂದುಬಿಡುತ್ತದೆಂದು ಎಲ್ಲೋ ಓದಿದ್ದು ಬೇರೆ ನೆನಪಾಗಿತ್ತು. ಸ್ವಲ್ಪ ಹೊತ್ತಷ್ಟೇ. ತಂತಮ್ಮ ಬ್ಯಾಗುಗಳನ್ನು ಅಲ್ಲಲ್ಲಿ ಬಿಸಾಡಿ ಹಾಯಾಗಿ ನಿಂತಿರುವ ಮುಂಬೈಕಾರರನ್ನು ನೋಡಿ ನಿರಾಳವಾಯ್ತು. ಕಳ್ಳನಿಗೆ ಕಿಸೆಗೆ ಕೈಹಾಕಲೂ ಕದ್ದದ್ದನ್ನು ದಾಟಿಸಲೂ ಜಾಗವಿಲ್ಲದಂತಹ ಪರಿಸ್ಥಿತಿಯಲ್ಲಿ ಕಳುವೂ ಸುಲಭವಲ್ಲ ಅಂತ ಅರಿವಾದೊಡನೆ ಎರಡೂ ಕೈ ಮೇಲೆತ್ತಿ ಹ್ಯಾಂಡಲ್ ಹಿಡಿದುಕೊಂಡೆ. ಈಗ ನಿಜವಾಗಿ ಗಾಳಿ ಬೀಸಲಾರಂಭಿಸಿತ್ತು. ‘ಪಂಚೆ ಹಿಡಕೊಂಡಿರುವವರೆಗೆ ಮುಳುಗೋದು ತಪ್ಪುವುದಿಲ್ಲ. ಪಂಚೆ ಬಿಟ್ಟು ಭಗವಂತನನ್ನು ಬಿಗಿಯಾಗಿ ಅಪ್ಪಿಕೊಂಡರೆ, ಸಮುದ್ರವೂ ಮುಳುಗಿಸುವುದಿಲ್ಲ’ ಈ ಸಂಗತಿ ಅರ್ಥವಾಗಲಿಕ್ಕೆ ಮುಂಬೈ ಟ್ರೈನು ಹತ್ತಬೇಕಾಯ್ತು!
ನನ್ನ ಎತ್ತರ ಹೆಚ್ಚುಕಡಿಮೆ ಐದು ಅಡಿ ಹನ್ನೊಂದು ಅಂಗುಲ. ಪ್ರತೀ ಬಾರಿ ಬಸ್ಸು ಹತ್ತಿದಾಗ ಈ ಎತ್ತರದಿಂದಾಗಿ ಕಾಲಿಗೆ ಭಾಳ ನೋವಾಗುತ್ತಿತ್ತು. ನಾನಂತೂ ಇಷ್ಟು ಎತ್ತರವಿರೋದು ಕೆಟ್ಟದೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಮುಂಬೈ ರೈಲಿನ ಆ ಒತ್ತಡದಲ್ಲಿ ನಾನು ಕುಳ್ಳಗಿದ್ದಿದ್ದರೆ ಜನರ ಬೆವರು ಕುಡಿದೇ ಸತ್ತುಹೋಗಿರುತ್ತಿದ್ದೆ ಎನ್ನಿಸಿತು. ನನ್ನ ತಲೆ ಆ ಜನರ ನಡುವೆ ಎತ್ತರದಲ್ಲಿತ್ತು. ಹೊರಗಿನಿಂದ ಹರಿವ ಗಾಳಿ ನನ್ನ ಮೂಗನ್ನು ಮೊದಲು ಸವರಿಕೊಂಡೇ ಹೋಗುತ್ತಿತ್ತು. ಆಹಾ! ಅದರ ಆನಂದ ಹೇಗಂತ ಬಣ್ಣಿಸೋದು? ನಾನೊಮ್ಮೆ ಎದೆಯೆತ್ತಿ ನಿಂತೆ. ರೈಲಿನೊಳಗಿನ ಎಲ್ಲರನ್ನೂ ನೋಡಿದೆ. ನನ್ನ ಪಾಲಿಗೆ ಅದು ಏರಿಯಲ್ ವ್ಯೂ!
ಈಗ ರೈಲು ಅಸಹ್ಯ ಅನ್ನಿಸೋದು ನಿಂತುಹೋಗಿತ್ತು. ಮಾತಾಡುವವರ ದನಿಗಳಿಗೆ ಕಿವಿ ಕೊಟ್ಟೆ. ಕೆಲವರು ಮಾತಾಡುತ್ತ ಆಡುತ್ತಲೇ ಜಗಳಕ್ಕೆ ಬಿದ್ದಿದ್ದರು. ಇನ್ನೊಬ್ಬ ಮನೆಯ ಸಂಕಟಗಳನ್ನು ಹಂಚಿಕೊಳ್ಳುತ್ತಿದ್ದ. ಸಂದಣಿಯ ನಡುವೆಯೇ ಜೇಬಿನಿಂದ ಗುಟ್ಕಾ ತೆಗೆದು ಕೈ ಮೇಲೆ ಪಟಪಟ ಬಡಿದು ಬಾಯಿಗೆ ಸುರುವಿಕೊಂಡ ಮತ್ತೊಬ್ಬ.
ಬೈಗುಳಗಳು ಮುಂಬೈಕಾರರಿಗೆ ಸಹಜ. ಕೆಟ್ಟದೊಂದು ಬೈಗುಳದಿಂದಲೇ ಅವನ ಮಾತಿನಾರಂಭ. ಅದರಿಂದಲೇ ಮಾತಿನ ಅಂತ್ಯ ಕೂಡ. ಬೈಗುಳದಲ್ಲೂ ಒಳ್ಳೆಯದು, ಕೆಟ್ಟದು ಅಂತ ಇರುತ್ತೇನು? ಮುಂಬೈಕಾರರ ಮಾತುಗಳನ್ನು ಕೇಳಿದ ಮೇಲೆ ಕೆಟ್ಟ ಬೈಗುಳಗಳು, ಕೇಳಲಿಕ್ಕೇ ಆಗದ ಬೈಗುಳಗಳೂ ಇರುತ್ತವೇಂತ ಗೊತ್ತಾಯ್ತು. ಅಮ್ಮ – ತಾಯಿ ಅವರ ಬಾಯಲ್ಲಿ ಅತಿ ಹೆಚ್ಚು ಶೋಷಣೆಗೊಳಗಾದವಳು.
ಸ್ವಲ್ಪ ಸ್ವಲ್ಪ ಜಾಗ ಖಾಲಿಯಾಯ್ತು. ಚಕ್ಕಳಮಕ್ಕಳ ಹಾಕಿಕೊಂಡು ಕುಳಿತಿದ್ದ ಹೆಣ್ಣುಮಗಳು. ಕುಳಿತ ಶೈಲಿ ನೋಡಿ ‘ಗಠಾಣಿ’ ಅನ್ನಿಸುವಂತಿತ್ತು. ಇನ್ನೊಂದು ತುದಿಯಲ್ಲಿ ಕುಳಿತು ಮಧ್ಯೆ ಬೇರೆಯವರಿಗೆ ಸೀಟು ಬಿಟ್ಟೆ. ಆತನಾದರೊ ಆಕೆಯ ಪರಿಚಿತನೆನ್ನುವಂತೆ ಮಾತನಾಡಿಸಿದ, ಹಿಂದಿಯಲ್ಲಿ! ಆಕೆ ಗುರ್ರ್ ಎಂದು ಉರಿದುಬಿದ್ದಳು. ‘ಹಿಂದಿಯಲ್ಲೇಕೆ? ಮರಾಠಿಯಲ್ಲಿ ಮಾತಾಡಲು ಆಗುವುದಿಲ್ಲವೇನು?’ ಎಂದಳು. ಒಮ್ಮೆ ಗಾಬರಿಗೊಂಡೆ. ಮಹಾರಾಷ್ಟ್ರನವನಿರ್ಮಾಣ ಸೇನೆ ಬಹಳ ಬೇಗ ಬೆಳೆದುಬಿಡುತ್ತದೆಂದು ಮೇಲ್ನೋಟಕ್ಕೆ ಗೊತ್ತಾಯ್ತು.
ಇಳಿಯುವ ನಿಲ್ದಾಣ ಬಂದಾಗ ಬಾಗಿಲ ಬಳಿ ಬಂದು ನಿಂತಿದ್ದಷ್ಟೇ. ಯಾರೋ ತಳ್ಳಿದರು, ಕೆಳಗೆ ಧುಮುಕಿದೆ. ಯಾವ ದಿಕ್ಕಿನತ್ತ ಹೋಗಬೇಕು ಎಂದು ಕೇಳುವ ಪ್ರಮೇಯವೇ ಬರಲಿಲ್ಲ. ಜನ ಧಿಮ್ಮನೆ ಹಿಂಡುಹಿಂಡಾಗಿ ನಡೆದು ಹೋಗುತ್ತಿದ್ದರಲ್ಲ; ಅದೇ ದಿಕ್ಕಿನತ್ತ ಹೆಜ್ಜೆ ಹಾಕಿದೆ. ಗೇಟು ಕಂಡಿತು. ಮತ್ತಷ್ಟು ಜನ ಟ್ರೇನಿಗಾಗಿ ಕಾದುನಿಂತಿದ್ದರು. ಎರಡು ಟ್ರೇನುಗಳ ನಡುವಿನ ಒಂದೆರಡು ನಿಮಿಷಗಳ ಅಂತರದಲ್ಲೇ ನಿಲ್ದಾಣ ತುಂಬಿ ತುಳುಕಿಬಿಡುತ್ತೆ. ಮತ್ತೆ ಗೌಜು ಗದ್ದಲ; ಹುಡುಗಿಯರನ್ನು ಚುಡಾಯಿಸುವ ಹುಡುಗರು, ತನ್ನ ಹಿಂದೆಯೇ ಹುಡುಗರು ಬಿದ್ದಿರೋದು ಎಂದು ಹೆಮ್ಮೆಯಿಂದ ಬೀಗುವ ಹುಡುಗಿಯರು, ಧಾವಂತದಲ್ಲಿರುವ ಜನ, ಟ್ರೇನು ಹತ್ತಲಾಗದೇ ಚಡಪಡಿಸುವವರು…
ಅಬ್ಬ! ಓಡಲಾಗದವ ಮುಂಬೈನಲ್ಲಿ ಇರಲೇಬಾರದೇನೋ ಅನ್ನಿಸಿಬಿಟ್ಟಿತು. ಇಷ್ಟು ಓಡುತ್ತ ಓಡುತ್ತಲೇ ಬದುಕು ಕಳೆದವನಿಗೆ ಹಳ್ಳಿಯ ಸುಶಾಂತ ಬದುಕು ಹಿಡಿಸುತ್ತಾ? ತುಂಬಾ ಹೊತ್ತು ಯೋಚನೆ ಮಾಡುತ್ತಿದ್ದೆ. ಒಮ್ಮೆ ಬೊರಿವಿಲಿಯ ನಿಲ್ದಾಣವನ್ನು ಹಿಂದಿರುಗಿ ನೋಡಿದರೆ, ಇಳಿಯುತ್ತಿದ್ದ ವ್ಯಕ್ತಿಯೊಬ್ಬ ಬಾಗಿಲಿಂದ ಹೊರಗೆ ಧಡ್ಡನೆ ಬಿದ್ದ. ಅವನನ್ನು ಎತ್ತಲು ಯಾರೂ ಬಾಗಲಿಲ್ಲ. ಒಬ್ಬರನ್ನೊಬ್ಬರು ತಳ್ಳಿಕೊಂಡೇ ಮುಂದೆ ನಡೆದರು. ಬಿದ್ದವ ಸಾವರಿಸಿಕೊಂಡು ಎದ್ದ. ಪ್ಯಾಂಟಿಗೆ ಮೆತ್ತಿದ ದೂಳು ಒರೆಸಿಕೊಂಡ. ಮತ್ತೆ ಓಡಲಾರಂಭಿಸಿದ.
ಯಾಕೋ ಪಿಚ್ಚೆನಿಸಿತು. ಬೆಂಗಳೂರಿಗೆ ಬರುವ ನನ್ನ ಬಸ್ಸು ಹತ್ತಿ ಸೀಟು ಹಿಂದಕ್ಕೆಳೆದು ಒರಗಿಕೊಂಡೆ. ‘ನಮ್ಮೂರೇ ಚೆಂದ, ನಮ್ಮೂರೇ ಅಂದ’ ಹಾಡನ್ನು ಗುನುಗುತ್ತ ಮಲಗಿಬಿಟ್ಟೆ!

Comments are closed.