ವಿಭಾಗಗಳು

ಸುದ್ದಿಪತ್ರ


 

ಬಾಣಲೆಯಿಂದ ಬೆಂಕಿಗೆ ಬೀಳ ಹೊರಟಿದೆ ಭಾರತ!

ಅರ್ಥಶಾಸ್ತ್ರಜ್ಞ ಪೌಲ್ ಕ್ರುಗ್ಮನ್ ಯುದ್ಧ ಮಾಡುವುದರಿಂದ ಮಾತ್ರ ಆರ್ಥಿಕ ದುಸ್ಥಿತಿಯಿಂದ ಹೊರಬರುವುದು ಸಾಧ್ಯವೆಂದು ವಾದಿಸಿದ್ದ. ಅಮೇರಿಕ ಈ ಹಿಂದಿನ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಳಸಿದ್ದು ಇದೇ ಮಾರ್ಗ. ’ಪರ್ಲ್ ಹಾರ್ಬರ್’ ದಾಳಿಯ ಕುರಿತಂತೆ ಇಂದಿಗೂ ಜಗತ್ತಿನಲ್ಲಿ ಪ್ರಶ್ನಾರ್ಥಕ ಚಿನ್ಹೆ ಇದೆ. ವರ್ಲ್ಡ್ ಟ್ರೇಡ್ ಸೆಂಟರ್‌ನ್ನು ಉರುಳಿಸಿದ್ದುದರ ಕುರಿತಂತೆಯೂ ಇಂತಹುದೇ ವಾದವಿದೆ. ಹೀಗಿರುವಾಗ ಅಮೇರಿಕದ ನಿಯತ್ತು ಎತ್ತ ತಿರುಗಬಲ್ಲದೋ ಬಲ್ಲವರ್ಯಾರು?

ಅಕ್ಷರಶಃ ಸತ್ಯ. ಕೃಷ್ಣ ಹುಟ್ಟಿದ, ಚಾಣಕ್ಯ ನೀತಿ ಬೋಧಿಸಿದ ಭಾರತ ಇದೇನಾ ಅಂತ ಅನ್ನಿಸ್ತಿದೆ. ಶಾಂತಿಯ ಹೆಸರಲ್ಲಿ ಸ್ವಾತಂತ್ರ್ಯ ಪಡಕೋಮಡಿದ್ದೇ ತಪ್ಪಾಯ್ತು, ನಾವೆಲ್ಲ ಹೇಡಿಗಳಾಗಿಬಿಟ್ಟಿದ್ದೇವೆ. ಸುಭಾಷರು ಏಕಾಂಗಿಯಾಗಿ ಇಟಲಿ-ಜರ್ಮನಿ-ಜಪಾನ್‌ಗಳಿಗೆ ಹೋಗಿ ಬ್ರಿಟೀಷರ ಶತ್ರುಗಳೊಂದಿಗೆ ಮಿತೃತ್ವ ಸಾಧಿಸಿ ಭಾರತವನ್ನೇ ಸುತ್ತುವರೆದು ಯೋಗ್ಯ ಸ್ವಾತಂತ್ರ್ಯ ತಂದುಕೊಡುವ ಭರ್ಜರಿ ಪ್ರಯಾಸ ನಡೆಸಿದರಲ್ಲ; ಅದು ಯಶಸ್ಸು ಕಂಡಿದ್ದರೆ ಇಂದು ಈ ರೀತಿ ಹಲುಬುವ ಸ್ಥಿತಿ ಇರಲಿಲ್ಲ.

ಅಲ್ಲದೇ ಮತ್ತೇನು? ನಮ್ಮ ಸುತ್ತಲಿನ ರಾಷ್ಟ್ರಗಳನ್ನು ಅಪ್ಪಿಕೊಳ್ಳುತ್ತ ಮುತ್ತಿನ ಹಾರದ ಹೆಸರಲ್ಲಿ ನಮ್ಮ ಕೊರಳಿಗೆ ಉರುಳು ಬೆಸೆದು ಏಷ್ಯಾದ ದೈತ್ಯವಾಗುವತ್ತ ಚೀನಾ ದಾಪುಗಾಲಿಡುತ್ತಿದ್ದರೆ ಕೇಂದ್ರ ನಾಯಕರು ಬೆರಳು ಚೀಪುತ್ತ ಕುಳಿತುಬಿಟ್ಟಿದ್ದಾರಲ್ಲ! ಪಾಕಿಸ್ತಾನ, ನೇಪಾಳ, ಬಂಗ್ಲಾ, ಭೂತಾನ್, ಶ್ರೀಲಂಕ ಅಷ್ಟೇ ಅಲ್ಲ ಅತ್ಯಂತ ಮಹತ್ವದ ಮಾಲ್ಡೀವ್ಸ್‌ನ ಮೇಲೂ ಪ್ರಭಾವ ಬೀರಿ ಕುಳಿತಿದೆ ಚೀನಾ. ಬೇರೆ ರಾಷ್ಟ್ರಗಳ ಕತೆ ಬಿಡಿ, ನಮ್ಮನ್ನು ಮುಟ್ಟಿದರೆ ಸುಮ್ಮನಿರುವುದಿಲ್ಲ ಅಂತಾದರೂ ಹೇಳುತ್ತಾರಾ? ಲಡಾಖ್‌ನೊಳಗೆ ನಮ್ಮ ಸೈನ್ಯ ತೂಗುಬಿಟ್ಟಿದ್ದ ರಕ್ಷಣಾ ಕ್ಯಾಮೆರಾಗಳನ್ನು ಕಿತ್ತುಬಿಸಾಕಿ ಎಚ್ಚರಿಕೆ ಕೊಟ್ಟು ಹೋಗಿದ್ದಾರಲ್ಲ; ನಾಯಕರೆನಿಸಿಕೊಂಡವರೆಲ್ಲ ಸತ್ತುಹೋಗಿದ್ದಾರಾ?
ಕ್ಷಮಿಸಿ. ಇದು ಎದೆಯೊಳಗಿನ ಬೆಂಕಿಯ ಮಾತುಗಳು. ಕಳೆದ ಹತ್ತು ಸಾವಿರ ವರ್ಷಗಳ ಇತಿಹಾಸದಲ್ಲಿ ಎಲ್ಲ ಬಗೆಯ ಶಕ್ತಿಯಿದ್ದೂ ಶಾಂತವಾಗಿದ್ದ ರಾಷ್ಟ್ರ ನಮ್ಮದು ಮಾತ್ರ. ಇತರ ರಾಷ್ಟ್ರಗಳಿಗೆ ಸದಾ ಅಭಯಪ್ರದವಾಗಿದ್ದವರೂ ನಾವೇ. ಹೀಗಾಗಿ ನಮ್ಮ ಮೇಲಿದ್ದಷ್ಟು ವಿಶ್ವಾಸ ಜಗತ್ತಿನಲ್ಲಿ ಮತ್ಯಾರ ಮೇಲೂ ಇಲ್ಲ. ಚೀನಾದ ತೆಕ್ಕೆಗೆ ಬೀಳುವ ಮುನ್ನ ಶ್ರೀಲಂಕಾಕ್ಕೆ ಹೊಟ್ಟೆಯುರಿ ಇರಲಿಲ್ಲವೆಂದುಕೊಂಡಿರೇನು? ಮಾಲ್ಡೀವ್ಸ್‌ನಲ್ಲಿ ಚೀನಾ ಸಹಕಾರದ ಹೆಸರಲ್ಲಿ ಕೈಯ್ಯಾಡಿಸುವಾಗ ಅದೂ ಭಾರತದ ಬಳಿಗೆ ಬಂದಿತ್ತು. ಇಲ್ಲಿನ ನಾಯಕತ್ವಕ್ಕೆ ತಾಕತ್ತಿಲ್ಲವೆಂದು ಗೊತ್ತಾದಾಗಲೇ ಮಾಲ್ಡೀವ್ಸ್ ಚೀನಾದ ಮಾತು ಕೇಳಲಾರಂಭಿಸಿದ್ದು.
ಕಳೆದು ಒಂದೆರಡು ತಿಂಗಳಿಂದೀಚೆಗೆ ರಕ್ಷಣಾ ಸಚಿವರು ಎದ್ದು ಕುಳಿತುಬಿಟ್ಟಿದ್ದಾರೆ. ವಿದೇಶಾಂಗ ಸಚಿವರು ನೀರಿನೊಳಗೆ ಕೈಕಾಲು ಬಡಿಯಲು ಶುರುವಿಟ್ಟಿದ್ದಾರೆ. ಹೀಗಾಗಿಯೇ ಜಪಾನಿಗೆ ಹೋಗಿ ಬಂದು ಒಪ್ಪಂದ ಮಾಡಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ವಿದ್ಯುತ್ ಕೊಟ್ಟು ಒಲಿಸಿಕೊಳ್ಳುವ ಪ್ರಯತ್ನ ಶುರುವಾಗಿದೆ.ಇಷ್ಟಾದರೂ ಚೀನಾ ಬಗ್ಗುತ್ತಿಲ್ಲ. ಬದಲಿಗೆ ಲಡಾಖ್‌ನ ಮೇಲಿನ ಹಿಡಿತವನ್ನು ಗಟ್ಟಿ ಮಾಡುತ್ತಲೇ ಇದೆ. ಹೀಗಾಗಿಯೇ ರಕ್ಷಣಾ ಸಚಿವರು ಈಗ ಅಮೇರಿಕದತ್ತ ದೃಷ್ಟಿ ನೆಟ್ಟು ಕೂತಿದ್ದಾರೆ.

Unclesamwantyouಇಲ್ಲ ಎನ್ನುವುದಕ್ಕೆ ಕಾರಣವೇ ಇಲ್ಲ. ಕಳೆದ ಏಪ್ರಿಲ್‌ನಲ್ಲಿ ಮಾಲ್ಡೀವ್ಸ್‌ನ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದಿದ್ದರಲ್ಲ, ಅವರು ರಕ್ಷಣಾ ಸಚಿವ ಆಂಟನಿಯವರನ್ನು ಭೇಟಿಯಾಗಿ ಅಮೇರಿಕದೊಂದಿಗಿನ ರಕ್ಷಣಾ ಒಪ್ಪಂದದ ಕುರಿತಂತೆ ಪ್ರಸ್ತಾಪಿಸಿದರು. ನಮಗೆ ಬಲು ಹತ್ತಿರದಲ್ಲಿರುವ ರಾಷ್ಟ್ರ ಯಾವುದಾದರೂ ರಕ್ಷಣಾ ಒಪ್ಪಂದವನ್ನು ಬೇರೆ ರಾಷ್ಟ್ರಗಳೊಂದಿಗೆ ಮಾಡಿಕೊಳ್ಳುವುದನ್ನು ಗಟ್ಟಿರಕ್ಷಣಾ ಮಂತ್ರಿಯೊಬ್ಬ ಒಪ್ಪುವುದು ಸಾಧ್ಯವೇ ಇಲ್ಲ. ದುರ್ದೈವ. ರಕ್ಷಣಾ ಸಚಿವರು ’ನಮಗೆ ತೊಂದರೆಯಾಗದಿದ್ದರಾಯ್ತು, ನಿಮ್ಮಿಷ್ಟ ಬಂದಂತೆ ಮಾಡಿ’ ಎಂದು ಬಿಟ್ಟರು.
ಇಷ್ಟಕ್ಕೂ ಒಪ್ಪಂದವೇನು ಗೊತ್ತೆ? ಮಾಲ್ಡೀವ್ಸ್‌ನಲ್ಲಿ ಅಮೇರಿಕದ ಸೇನೆ ಜಮಾವಣೆಗೆ ಅವಕಾಶ ಮಾಡಿಕೊಡೋದು. ಅದಕ್ಕೆ ಪ್ರತಿಯಾಗಿ ಅಮೇರಿಕಾ ಮಾಲ್ಡೀವ್ಸ್‌ನ ಅಭಿವೃದ್ಧಿಯಲ್ಲಿ ಸಹಕರಿಸೋದು. ಮಾಲ್ಡೀವ್ಸ್‌ನಲ್ಲಿ ನಿಂತ ಅಮೇರಿಕದ ಸೇನೆಗೆ ಭಾರತ ತಲುಪಲು ಅರ್ಧ ಗಂಟೆ ಸಾಕು. ಚೀನಾವನ್ನೆದುರಿಸಲು ಆಂತರಿಕವಾಗಿ ಭಾರತವನ್ನು ಗಟ್ಟಿಗೊಳಿಸಿಕೊಳ್ಳುವುದನ್ನು ಬಿಟ್ಟು ಅಮೇರಿಕದ ಸೆರಗಿನಲ್ಲಿ ಮುಚ್ಚಿಟ್ಟುಕೊಳ್ಳುವ ಈ ’ಐಡಿಯಾ’ ಅದ್ಯಾರು ಕೊಟ್ಟರೋ ದೇವರೇ ಬಲ್ಲ! ಇದು ಷಂಡತನಕ್ಕಿಂತ ಉತ್ತಮವಾದುದೇನಲ್ಲ.
ಮಾಲ್ಡೀವ್ಸ್ ಭಾರತದ ನೈರುತ್ಯ ದಿಕ್ಕಿನಲ್ಲಿರುವ ದ್ವೀಪ ಸಮುಚ್ಚಯ. ಜಗತ್ತಿನ ಸಮುದ್ರಮಾರ್ಗದ ಶೇಕಡಾ ಎಂಭತ್ತರಷ್ಟು ತೈಲ ಸಾಗಾಣಿಕೆ ನಡೆಯೋದು ಇದಕ್ಕೆ ಹೊಂದಿಕೊಂಡ ಸಮುದ್ರದ ಮೂಲಕವೇ. ಹೀಗಾಗಿ ಅತ್ಯಂತ ಪುಟ್ಟದಾದರೂ ಆಯಕಟ್ಟಿನ ಜಾಗ ಇದು. ಇಲ್ಲಿ ಬೇರೂರಿರುವ ಸೇನೆ ನೌಕಾದಾಳಿ, ವಾಯುದಾಳಿಯ ಮೂಲಕ ಜಗತ್ತನ್ನೇ ಬೆದರಿಸಬಹುದು, ವಿಶೇಷವಾಗಿ ಚೀನಾವನ್ನು! ಮಧ್ಯ ಆಫ್ರಿಕಾದಿಂದ ಚೀನಾಕ್ಕೆ ಸಾಗಬೇಕಿರುವ ಖನಿಜ ಮತ್ತು ತೈಲಕ್ಕೆ ಹೆದ್ದಾರಿಯೇ ಇದು. ಮೂಗು ಹಿಡಿದರೆ ಮಕ್ಕಳು ಬಾಯ್ದೆರೆಯುತ್ತವಲ್ಲ; ಹಾಗೆ ಮಾಲ್ಡೀವ್ಸ್‌ನ ಮೇಲೆ ಅಧಿಕಾರ ಸ್ಥಾಪಿಸಿದರೆ ಚೀನಾ ಬಾಯ್ಬಿಡುತ್ತದೆ. ಇದು ನಮ್ಮ ಬುದ್ಧಿವಂತರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಚೀನಾ ಮುಂದಡಿ ಇಡುವವರೆಗೂ ನಾವೆಂದಿಗೂ ಮಾಲ್ಡೀವ್ಸ್‌ನ ಬಗ್ಗೆ ಯೋಚಿಸಿಯೇ ಇರಲಿಲ್ಲ. ಕಳೆದ ವರ್ಷ ಚೀನಾ ಮಾಲ್ಡೀವ್ಸ್ ಗೆ ಐದುನೂರು ದಶಲಕ್ಷ ಅಮೇರಿಕನ್ ಡಾಲರುಗಳ ಸಹಾಯ ನೀಡಿತ್ತು. ಇದು ಮಾಲ್ಡೀವ್ಸ್‌ನ ಒಟ್ಟೂ ಉತ್ಪಾದನೆಯ ಕಾಲುಭಾಗಕ್ಕೆ ಸಮ. ಇಷ್ಟಕ್ಕೆ ಸುಮ್ಮನಾಗದ ಚೀನಾ ತನ್ನ ಅನೇಕ ನಾಗರಿಕರನ್ನು ಮಾಲ್ಡಿವ್ಸ್ ತಿರುಗಾಡಿಬರಲು ಕಳಿಸುತ್ತಿದೆ. ಯಾತ್ರಾರ್ಥಿಗಳನ್ನೇ ಅವಲಂಬಿಸಿರುವ ಆ ದೇಶಕ್ಕೆ ತನ್ನ ಅಗತ್ಯವನ್ನು ಸಾಬೀತುಪಡಿಸುತ್ತಿದೆ. ಚೀನಾಕ್ಕಿಂತಲೂ ಹತ್ತಿರವಿರುವ ಭಾರತ ಮನಸ್ಸು ಮಾಡಿದರೆ ಬಿಗಿಯಾಗಿ ಮಾಲ್ಡೀವ್ಸ್‌ನ್ನು ಅಪ್ಪಿಕೋಬಹುದು. ಆದರೆ ಹಾಗಾಗಲಿಲ್ಲ. ನಾವು ಅಮೇರಿಕದ ಪಾದ ಒತ್ತಿದೆವು. ಹಾರ್ವರ್ಡ್‌ನಲ್ಲಿ ಕಲಿತುಬಂದ ಬುದ್ಧಿವಂತರಿಗೆ ಸ್ವಂತ ಬಲ, ಸ್ವಂತ ಬುದ್ಧಿಯ ಕೊರತೆ ಇದೆ. ಅವರಿಗೆ ಅಮೇರಿಕದ ಕೈ ಹಿಡಿದೇ ಹೆಜ್ಜೆ ಹಾಕಬೇಕು. ಅಷ್ಟೊಂದು ಹೆದರಿಕೆ.
ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಸ್ತಾಪಿಸಲು ಹವಣಿಸುತ್ತಿರುವ ಅಮೇರಿಕಕ್ಕೆ ಹೆದರಿಕೆ ಇರೋದು ಭಾರತದ್ದೇ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಿರುಗಿಬಿದ್ದರೆ ಅಮೇರಿಕದ ವಾದಕ್ಕೆ ಬೆಂಬಲವೇ ಇಲ್ಲ. ಈಗ ಭಾರತವೇ ಬಾಲ ಮುದುರಿಕೊಂಡಿದ್ದರೆ ಅಮೇರಿಕದ ಓಟ ತಡೆಯುವರ್ಯಾರು? ಹೀಗಾಗಿ ಅಮೇರಿಕ ಆಂತರಿಕ ಹಸ್ತಕ್ಷೇಪ ನಡೆಸಿ ಮಾಲ್ಡೀವ್ಸ್‌ನ ಅಧ್ಯಕ್ಷರನ್ನೇ ಕೆಳಗಿಳಿಸಿಬಿಟ್ಟಿತು. ತನ್ನ ಮಾತು ಕೇಳುವ ಉಪಾಧ್ಯಕ್ಷರನ್ನು ಗದ್ದುಗೆಯ ಮೇಲೆ ಕೂರಿಸಿತು. ತನಗೆ ಬೇಕಾದ್ದನ್ನು ಮಾಡಿಸಿಕೊಳ್ಳುವ ಹಂತಕ್ಕೆ ಬಂತು.
ವಾಹ್! ಇದನ್ನೇ ಚತುರ ವಿದೇಶಾಂಗ ನೀತಿ ಅನ್ನೋದು. ಹತ್ತು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿಯಾಗಿದೆಯೆಂದು ಮಾಲ್ಡೀವ್ಸ್‌ನಲ್ಲಿ ಸುದ್ದಿ ಹರಿದಾಡಲಾರಂಭಿಸಿದಾಗ ಅಲ್ಲಿನ ಅದ್ಯಕ್ಷರು ನಿರಾಕರಿಸಿದರು ಆದರೆ ಅಮೇರಿಕ ಅಲ್ಲಗಳೆಯಲಿಲ್ಲ. ಬದಲಿಗೆ ಈ ಒಪ್ಪಂದ ಹೊಸತೇನಲ್ಲ. SOFA(Status Of Force Agreement)ದ ಹೆಸರಿನ ಈ ಒಪ್ಪಂದ ಅನೇಕ ರಾಷ್ಟ್ರಗಳೊಂದಿಗೆ ಮಾಡಿಕೊಳ್ಳಲಾಗಿದೆ, ಮಾಲ್ಡೀವ್ಸ್ ಅದರಲ್ಲಿ ಒಂದಷ್ಟೇ ಎಂದು ಹೇಳಿಕೊಂಡಿದೆ. ಅದೂ ಸರಿಯೇ. ಕೆನಡಾ, ಕತಾರ್, ಕೋರಿಯಾ ಮುಂತಾದ ದೇಶಗಳೊಂದಿಗೆ ಈ ಬಗೆಯ ನೂರು ಒಪ್ಪಂದಗಳನ್ನು ಅಮೇರಿಕಾ ಮಾಡಿಕೊಂಡಿದೆ. ಇರಾಕ್, ಅಪ್ಘಾನಿಸ್ತಾನಗಳಲ್ಲಿ ಅಮೇರಿಕದ ಸೇನೆ ನೆಲೆ ನಿಂತಿತ್ತಲ್ಲ ಇದೇ ಆಧಾರದ ಮೇಲೇಯೇ.
ಇತಿಹಾಸದ ಪುಟ ತಿರುವಿ ನೋಡಿ. ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ತಂದಿದ್ದ. ನಮ್ಮ ರಾಜರುಗಳ ಅಡಿಯಲ್ಲಿ ಆಂಗ್ಲ ಸೇನೆ ಇಡುವ ವ್ಯವಸ್ಥೆ ಮಾಡಿದ್ದ. ಮೇಲ್ನೋಟಕ್ಕೆ ಇದು ರಾಜರುಗಳ ಸಹಾಯಕ್ಕೆ ಅಂತ ಕಾಣಿಸುತ್ತಿದ್ದರೂ ನಿಜವಾಗಿಯೂ ಈ ಸೈನ್ಯದ ಮೂಲಕ ರಾಜರನ್ನೇ ಹದ್ದುಬಸ್ತಿನಲ್ಲಿಡುವ ಪ್ರಯತ್ನ ಅದಾಗಿತ್ತು. ಈಗ ನಮ್ಮ ಪರಿಸ್ಥಿತಿಯೂ ಅದೇ. ತಲೆಯ ಮೇಲೆ ತೂಗಾಡುತ್ತಿರುವ ಕತ್ತಿಯಿಂದ ಬಚಾವಾಗಲು, ಕಾಲಬುಡದಲ್ಲಿ ಬೆಂಕಿ ಹಚ್ಚಿಕೊಳ್ಳುತ್ತಿದ್ದೇವೆ.
ತಕ್ಷಣಕ್ಕೆ ಗೆಲುವು ಸಾಧಿಸಲು ಅಮೇರಿಕದ ಬೆಂಬಲ ಪಡೆಯೋದು ಸರಿ. ಆದರೆ ಆ ರಾಷ್ಟ್ರವನ್ನು ನಂಬಬಹುದೆಂದು ಭಾವಿಸುವಿರೇನು? ತನ್ನ ಉದ್ಧಾರಕ್ಕಾಗಿ ಯಾರನ್ನು ಬೇಕಿದ್ದರೂ ತುಳಿದುಬಿಡಬಲ್ಲ ರಾಷ್ಟ್ರ ಅದು. ಜಗತ್ತನ್ನು ಬಡಿದಾಡಲು ಹಚ್ಚಿ ತಾನು ಹಣ ಮಾಡಿಕೊಳ್ಳುವ ಬುದ್ಧಿ ಅದರದ್ದು.
ಬಲು ಹಿಂದೆಯೇ ಅರ್ಥಶಾಸ್ತ್ರಜ್ಞ ಪೌಲ್ ಕ್ರುಗ್ಮನ್ ಯುದ್ಧ ಮಾಡುವುದರಿಂದ ಮಾತ್ರ ಆರ್ಥಿಕ ದುಸ್ಥಿತಿಯಿಂದ ಹೊರಬರುವುದು ಸಾಧ್ಯವೆಂದು ವಾದಿಸಿದ್ದ. ಯುದ್ಧ ನಡೆದಾಗ ಹಣ ಹೊರಗೆ ಬರುತ್ತೆ, ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತೆ. ಹೀಗಾಗಿ ಜಿ.ಡಿ.ಪಿ ಏರುತ್ತೆ. ಆರ್ಥಿಕ ದುಸ್ಥಿತಿ ನಿವಾರಣೆಯಾಗುತ್ತೆ ಎಂದೆಲ್ಲ ಹೇಳಿದ್ದ. ನೆನಪಿರಲಿ. ಅಮೇರಿಕ ಈ ಹಿಂದಿನ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಳಸಿದ್ದು ಇದೇ ಮಾರ್ಗ. ’ಪರ್ಲ್ ಹಾರ್ಬರ್’ ದಾಳಿಯ ಕುರಿತಂತೆ ಇಂದಿಗೂ ಜಗತ್ತಿನಲ್ಲಿ ಪ್ರಶ್ನಾರ್ಥಕ ಚಿನ್ಹೆ ಇದೆ. ವರ್ಲ್ಡ್ ಟ್ರೇಡ್ ಸೆಂಟರ್‌ನ್ನು ಉರುಳಿಸಿದ್ದುದರ ಕುರಿತಂತೆಯೂ ಇಂತಹುದೇ ವಾದವಿದೆ. ಹೀಗಿರುವಾಗ ಅಮೇರಿಕದ ನಿಯತ್ತು ಎತ್ತ ತಿರುಗಬಲ್ಲದೋ ಬಲ್ಲವರ್ಯಾರು?
ಅದಕ್ಕೆ ನಮ್ಮ ನೀತಿ ಸ್ಪಷ್ಟವಾಗಿರಬೇಕು ಅಂತ ಹೇಳೋದು. ಏಷ್ಯಾದಲ್ಲಿ ನಮ್ಮ ಸ್ಥಿತಿ-ಗತಿ ಬಲಪಡಿಸಿಕೊಳ್ಳುವುದರಲ್ಲಿ ಆಫ್ರಿಕಾ-ಯೂರೋಪುಗಳಿಗೆ ನಮ್ಮ ಪ್ರಭೆ ವಿಸ್ತರಿಸುವ ಪ್ರಯತ್ನ ಶುರುಮಾಡಬೇಕು. ಆದರೆ ಚುನಾವಣೆ ಹತ್ತಿರ ಬಂದಂತೆಲ್ಲ ಜಗತ್ತಿನ್ನ ಚಿಂತೆ ಬಿಟ್ಟ ಕೇಂದ್ರ ಸರ್ಕಾರ ಈರುಳ್ಳಿ ಬೆಲೆಯ ಮೇಲೆ ದೃಷ್ಟಿ ಹಾಯಿಸಿ ಕುಳಿತಿದೆ.
ಮಂತ್ರಿಗಳೆನಿಸಿಕೊಂಡ ಹಲವರು ಅದೇ ಅಮೇರಿಕದ ಮುಂದೆ ಮಂಡಿಯೂರಿ, ಮೋದಿಗೆ ವೀಸಾ ಕೊಡಬೇಡಿ ಅಂತ ಗೋಗರೆಯುತ್ತಿದ್ದಾರೆ. ಜೀವಮಾನವಿಡೀ ಅಮೇರಿಕವನ್ನು ಅನುಮಾನದ ಕಂಗಳಿಂದಲೇ ನೋಡಿಕೊಂಡು ಬಂದ ಎಡ ಪಕ್ಷಗಳು ಮೋದಿಯ ಕಾರಣಕ್ಕಾಗಿ ಅಮೇರಿಕದೆದುರು ದೀನರಾಗಿ ನಿಂತಿರುವುದನ್ನು ಕಂಡಾಗ ಅಯ್ಯೋ ಎನಿಸದಿರದು. ಅಮೇರಿಕದಷ್ಟು ಮುಸಲ್ಮಾನರ ಮೇಲೆ ದಾಳಿ ಮಾಡಿದ ಮತ್ತೊಂದು ರಾಷ್ಟ್ರವಿಲ್ಲ, ಆದರೆ ಅದೇ ಅಮೇರಿಕದೆದುರು ರಾಷ್ಟ್ರದ ಘನತೆಯನ್ನು ಹರಾಜಿಗಿಟ್ಟವರಿಗೆ ಏನೆನ್ನಬೇಕು ಹೇಳಿ?
ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಗಡಿಯ ಬೆಟ್ಟಗಳ ಮೇಲೆ ಹೋರಾಡಲು ಗೆರಿಲ್ಲಾ ಪಡೆಯೊಂದನ್ನು ರಚಿಸುವ ಕುರಿತಂತೆ ನಾವು ಈಗ ಮಾತನಾಡುತ್ತಿದ್ದೇವೆ, ಚೀನಾ ಅದಾಗಲೇ ಬೆಟ್ಟ ದಾಟಿ ಬಯಲಿಗೆ ಬಂದುಬಿಟ್ಟಿದೆ. ಅಮೇರಿಕ ಬುಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ. ನಾವು ನಾಯಿ-ತೋಳಗಳ ನಡುವಿನ ಕುರಿಯಾಗಿಬಿಟ್ಟವಾ?
ನೆನಪಿಸಿಕೊಂಡಾಗೆಲ್ಲ ಅಸಹ್ಯವೆನಿಸುತ್ತದೆ!

1 Response to ಬಾಣಲೆಯಿಂದ ಬೆಂಕಿಗೆ ಬೀಳ ಹೊರಟಿದೆ ಭಾರತ!

  1. SUNIL VASISTA

    ಅಂಕಣ ಚೆನ್ನಾಗಿದೆ ,
    ದೇಶ ಉದ್ದಾರ ಆಗಕ್ಕೆ ಮೊದಲು ಯುವಜನತೆ ಒಂದು ಸ್ವಲ್ಪವಾದರೂ ದೇಶದ ಬಗ್ಗೆ ಯೋಚನೆ ಮಾಡಬೇಕು .
    ೨೦೦ ವರ್ಷಗಳ ಕಾಲ ಆಂಗ್ಲರು ” ಡಿವೈಡ್ ಅಂಡ್ ರೂಲ್ ” ಪದ್ಧತಿ ಕಲಿಸಿ ಹೋದರು . ಈಗ ನಮ್ಮ ನಾಯಕರು ಅದನ್ನೇ ಚಾಚೂ ತಪ್ಪದೆ ನಡೆಸಿಕೊಂಡು ಹೋಗ್ತಿದಾರೆ .
    ಬರಿ ರಾಜಕೀಯ ಮಾಡಿದರೆ ಸಾಲದು , ಮನೆ ಅಂದರೆ ತಾಯಿ ದೇಶವನ್ನು ಕಾಪಾಡಿಕೊಳ್ಳುವ ಕಿಂಚಿತ್ ಜ್ಞಾನವು ಕೂಡ ಬೇಕು.