ವಿಭಾಗಗಳು

ಸುದ್ದಿಪತ್ರ


 

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

ನಿವೇದಿತಾ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. ಕಾಳಿ ಮಂದಿರದ ಹೊರಗೆ ಕುಳಿತು ಧ್ಯಾನಸ್ಥಳಾಗುತ್ತಿದ್ದಳು!

teresa

ಮದರ್ ತೆರೇಸಾಗೂ ಸಿಸ್ಟರ್ ನಿವೇದಿತಾಗೂ ವ್ಯತ್ಯಾಸ ಇದೆ. ಸೇವೆಯ ದೃಷ್ಟಿಯಿಂದ ಇಬ್ಬರೂ ಮಾಡಿದ್ದು ಅಸಾಧಾರಣ ಕೆಲಸವೇ. ಆದರೆ ಮಾಡಿದ ಸೇವೆಯ ಹಿಂದಿರುವ ಮನೋಭಾವ ಭಿನ್ನ ಭಿನ್ನ ಅಷ್ಟೇ. ವಿವೇಕಾನಂದರು ಈ ಕುರಿತಂತೆ ‘ಕರುಣೆಯಿಂದ ಭಾರತೀಯರ ಸೇವೆ ಮಾಡುವುದು ಬೇಕಿಲ್ಲ. ಭರತಖಂಡವನ್ನು ಪ್ರೀತಿಸಿದಾಗಲೇ ಸೇವೆಯ ಅಧಿಕಾರ ದಕ್ಕುವುದು. ಹೀಗೆ ಪ್ರೀತಿಸುವುದಕ್ಕೆ ಭಾರತವನ್ನು ಸರಿಯಾಗಿ ಅರಿಯುವುದು ಅವಶ್ಯಕ’ ಎಂದು ಸ್ಪಷ್ಟ ನುಡಿಯಲ್ಲಿ ಹೇಳುತ್ತಾರೆ. ಭಾರತವನ್ನು ಕೆಲಸಕ್ಕೆ ಬಾರದ ರಾಷ್ಟ್ರವೆಂದು ಬೈದಾಡುತ್ತ ಸೇವೆ ಮಾಡಿ ಹೊಟ್ಟೆ ಹೊರೆದುಕೊಳ್ಳುವವರು, ಆ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮ ಗೌರವಕ್ಕೆ ಧಕ್ಕೆ ತಂದು ತಮ್ಮ ಗುಪ್ತ ವಾಂಛೆಗಳನ್ನು ಈಡೇರಿಸಿಕೊಳ್ಳುವವರು ಖಂಡಿತಾ ಯೋಗ್ಯರಲ್ಲ. ಹಾಗೆಂದೆ ಭಾರತಕ್ಕೆ ಬಂದೊಡನೆ ನಿವೇದಿತೆಯನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡುವ ಹೊಣೆಯನ್ನು ಸ್ವತಃ ಸ್ವಾಮೀಜಿಯೇ ಹೊತ್ತರು. ಅವಳಿಗೆ ಸೋದರ ಸಂನ್ಯಾಸಿಯೋರ್ವರಿಂದ ಬಂಗಾಳಿ ಕಲಿಸುವ ವ್ಯವಸ್ಥೆಯಾಯ್ತು. ಸ್ವತಃ ಸ್ವಾಮೀಜಿ ದಿನವಿಡೀ ವೇದಾಂತ, ಇತಿಹಾಸ, ಆಚರಣೆ, ಜನ-ಜೀವನಗಳೆಲ್ಲದರ ಕುರಿತಂತೆ ಪಾಠ ಹೇಳುತ್ತಿದ್ದರು. ಆಗೆಲ್ಲ ಅನೇಕರು ಸಂನ್ಯಾಸಿಯೊಬ್ಬರು ವಿದೇಶೀ ಮಹಿಳೆಯರೊಂದಿಗೆ ಇಷ್ಟೊಂದು ಸಮಯ ಕಳೆಯುತ್ತಾರಲ್ಲ ಅಂತ ಗುರಾಯಿಸಿರಲಿಕ್ಕೆ ಸಾಕು. ಆದರೆ ಹಾಗೇನಾದರೂ ಸ್ವಾಮೀಜಿ ಭಾರತದ ಪರಿಚಯ ವಿದೇಶಿ ಮಹಿಳೆಯರಿಗೆ ಮಾಡಿಸಲಿಲ್ಲವಾಗಿದ್ದರೆ ಅವರೆಲ್ಲ ಭಾರತವನ್ನು ಅವಮಾನಿಸುತ್ತಲೇ ಸೇವಾ ಕಾರ್ಯ ಮಾಡಿರುತ್ತಿದ್ದರು. ಅದರಿಂದ ಲೌಕಿಕ ಲಾಭವೇನೋ ಆಗಿರುತ್ತಿತ್ತು ಆದರೆ ಭಾರತೀಯರ ಆತ್ಮವಿಶ್ವಾಸಕ್ಕೆ ಬಲವಾದ ಪೆಟ್ಟು ಬಿದ್ದಿರುತ್ತಿತ್ತು. ಮದರ್ ತೆರೇಸಾ ಈ ದೇಶಕ್ಕೆ ಮಾಡಿದ ಸಮಸ್ಯೆ ಏನೆಂದು ಈಗ ಅರ್ಥವಾಗಿರಬೇಕು!

ಕುಳಿತು ಪಾಠವಷ್ಟೇ ಕೇಳಿದ್ದರೆ ನಿವೇದಿತಾ ಯುನಿವಸರ್ಿಟಿಯಿಂದ ಹೊರಬಂದ ಪ್ರೊಫೆಸರ್ರಂತೆ ಆಗಿಬಿಡುತ್ತಿದ್ದಳೇನೋ? ಸ್ವಾಮೀಜಿ ಆಕೆಯನ್ನು ಭಾರತದರ್ಶನಕ್ಕೆಂದು ಜೊತೆಗೊಯ್ದರು. ತೀರ್ಥಕ್ಷೇತ್ರಗಳಿಗೊಯ್ದು ಅಲ್ಲಿನ ಇತಿಹಾಸ, ಆಚರಣೆಗಳನ್ನೆಲ್ಲ ಎಳೆ ಎಳೆಯಾಗಿ ವಿವರಿಸುವಾಗ ಅದೊಂದು ರೋಮಾಂಚನಕಾರಿ ಅನುಭವ. ‘ನೋಟ್ಸ್ ಆಫ್ ಸಮ್ ವಾಂಡರಿಂಗ್ಸ್ ವಿಥ್ ದ ಸ್ವಾಮಿ ವಿವೇಕಾನಂದ’ದಲ್ಲಿ ಇವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾಳೆ ಆಕೆ. ಹಾಗಂತ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ವಿವೇಕಾನಂದರ ಕಲ್ಪನೆಯ ನಿವೇದಿತಾ ಇನ್ನೂ ರೂಪುಗೊಂಡಿರಲಿಲ್ಲ. ಅದೊಮ್ಮೆ ಸ್ವಾಮೀಜಿ ನಿನ್ನ ದೇಶ ಯಾವುದೆಂದು ಕೇಳಿದಾಗ ನಿವೇದಿತಾ ಕೊಟ್ಟ ಉತ್ತರ ಅವರನ್ನು ದಂಗು ಬಡಿಸಿತ್ತು. ಆಕೆ ತನ್ನ ಬ್ರಿಟೀಷ್ ಮೂಲದ ಕುರಿತಂತೆ ಬಲುವಾದ ಹೆಮ್ಮೆ ತಾಳಿದ್ದಳು. ಸ್ವಾಮೀಜಿಗೆ ಇದನ್ನು ಸಹಿಸುವುದಾಗಲಿಲ್ಲ. ಭಾರತವನ್ನು ಸರ್ವಶ್ರೇಷ್ಠವೆಂದು ಪ್ರೀತಿಸದ ಹೊರತು ಇಲ್ಲಿ ಮಾಡುವ ಯಾವ ಸೇವೆಗೂ ಬೆಲೆ ಇರಲಿಲ್ಲ. ಅವರ ಮುಂದಿನ ಶಿಕ್ಷಣ ಕಠೋರವಾಯ್ತು. ಬ್ರಿಟೀಷರು ಜಗತ್ತಿನ ಮೇಲೆ ಮಾಡಿದ ಅತ್ಯಾಚಾರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ನಿವೇದಿತೆಯ ಪ್ರತಿಯೊಂದು ಮಾತನ್ನೂ ಖಂಡಿಸಿದರು. ನಂಬಿಕೆಗಳು ಅಲುಗಾಡುವ ಹೊತ್ತು ಬಲು ಭೀಕರ. ನಿವೇದಿತೆಯಂತೂ ಪ್ರಶ್ನಿಸದೇ ಒಪ್ಪುವವಳಲ್ಲವೇ ಅಲ್ಲ. ಮೊದಲಿನಂತೆ ಈಗ ಅವಳ ಪ್ರಶ್ನೆಗೆ ಸ್ವಾಮೀಜಿ ಸಮಾಧಾನದಿಂದ ಉತ್ತರಿಸುತ್ತಿಲ್ಲ. ತೀವ್ರವಾಗಿ ಖಂಡಿಸುತ್ತಾರೆ. ಕೆಲವೊಮ್ಮೆ ಉದಾಸೀನವಾಗಿರುತ್ತಾರೆ. ನಿವೇದಿತಾ ಕೂಡ ಕಡಿಮೆಯವಳಲ್ಲ. ಅವಳ ಅಹಂಕಾರ ಬಾಗಲು ಅವಳನ್ನು ಬಿಡಲೇ ಇಲ್ಲ.
ಸುಮ್ಮನೆ ಊಹಿಸಿಕೊಳ್ಳಿ. ಸ್ವಾಮೀಜಿಯೊಬ್ಬರೇ ಸರ್ವಸ್ವವೆಂದು ಭಾವಿಸಿ ಬಂದ ನಿವೇದಿತೆಗೆ ಅವರೇ ಇಲ್ಲವಾದಾಗ ಮನಸ್ಸು ಅದೆಷ್ಟು ಕ್ಲೇಶಗ್ರಸ್ತವಾಗಿರಬೇಕು. ಆ ಬೆಂಕಿಯಲ್ಲಿ ಅವಳು ಬೆಂದಳು. ಚೆನ್ನಾಗಿ ತಪಿಸಿ ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸಿದಳು. ಸಮಯ ಪಕ್ವವಾಗಿತ್ತು. ಅದು ಹುಣ್ಣಿಮೆಯ ದಿನ. ಸ್ವಾಮೀಜಿ ಶಿಷ್ಯೆಯ ಬಳಿ ಬಂದು ತಲೆ ನೇವರಿಸಿ ಸಮಾಧಾನ ಮಾಡಿದರು. ಇದಕ್ಕಾಗಿ ಕಾಯುತ್ತಿದ್ದಳೇನೋ ಎಂಬಂತೆ ಪ್ರಣಾಮ ಮಾಡಿ ಆನಂದದಿಂದ ಕುಣಿದಾಡಿದಳು. ಅಂದಿನ ಧ್ಯಾನ ಅವಳ ಪಾಲಿಗೆ ಬಲು ವಿಶೇಷ. ಆನಂದ ಸಾಗರದಲ್ಲಿಯೇ ತೇಲಿದ ಅನುಭವ. ಯಾವ ಅಹಂಕಾರದ ಕಾರಣದಿಂದ ಸಮಾಧಿಯ ಆನಂದ ಅವಳಿಗೆ ಸಿದ್ಧಿಸಿರಲಿಲ್ಲವೋ ಅದರ ರಸಾನುಭೂತಿಯನ್ನು ಸ್ಪರ್ಶ ಮಾತ್ರದಿಂದಲೇ ಕರುಣಿಸಿದ್ದರು ಸ್ವಾಮೀಜಿ!

swami-and-sis-niveditasm
ವಿವೇಕಾನಂದರಿಗೆ ಸಮಯದ ಮಿತಿಯ ಅರಿವಿತ್ತು. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಿ ಹೋಗಬೇಕಿತ್ತು. ನಿವೇದಿತೆಯ ತಯಾರಿಯಲ್ಲಿ ಸಾಧ್ಯವಿದ್ದ ಎಲ್ಲ ಮಾರ್ಗಗಳನ್ನೂ ಬಳಸಬೇಕಿತ್ತು. ಸ್ಪರ್ಶ ಮಾತ್ರದಿಂದ ಆಕೆಯಲ್ಲಿ ಬದಲಾವಣೆ ತರಬಲ್ಲ ಸಾಮಥ್ರ್ಯ ಹೊಂದಿದ್ದ ವಿವೇಕಾನಂದರು ಆ ಬದಲಾವಣೆಗಳನ್ನು ಉಳಿಸಿಕೊಳ್ಳಲು ನಿವೇದಿತೆಯನ್ನು ತಯಾರು ಮಾಡಬೇಕಿತ್ತಷ್ಟೇ! ಈಗ ಆಕೆ ಸ್ವಾಮೀಜಿಯ ಅಂತರಂಗವನ್ನಷ್ಟೇ ಅಲ್ಲ ಸಾಕ್ಷಾತ್ತು ಭಾರತದ ಅಂತರಂಗವನ್ನೂ ಅರಿಯಲಾರಂಭಿಸಿದ್ದಳು. ಈ ಯಾತ್ರೆ ಅವಳನ್ನು ಪೂರ್ಣ ಪರಿವತರ್ಿಸಿತ್ತು.
ಈ ಬದಲಾವಣೆಯ ಗುಂಗಿನಿಂದಲೇ ಕಾಶ್ಮೀರಕ್ಕೆ ಕಾಲಿಟ್ಟ ನಿವೇದಿತೆಗೆ ಭಾರತ ತನ್ನ ತಾನು ತೆರಕೊಂಡಿತ್ತು. ಅದಾಗಲೇ ಸ್ವಾಮೀಜಿಯೊಂದಿಗೆ ಅಮರನಾಥನ ದರ್ಶನ ಮಾಡಿಕೊಂಡಿದ್ದ ನಿವೇದಿತಾ ಸ್ವಾಮೀಜಿಯವರ ಸಾತ್ವಿಕತೆಯ ಪ್ರಖರ ಕಿರಣಗಳನ್ನು ಹತ್ತಿರದಿಂದ ಅನುಭವಿಸುತ್ತಿದ್ದಳು. ಭಾರತ ಹೊಸದಾಗಿ ಗೋಚರಿಸಲಾರಂಭಿಸಿತ್ತು. ಕಾಶ್ಮೀರದಲ್ಲಿ ಸ್ವಾಮೀಜಿ ಶಿವನಿಂದ ದೇವಿಯ ಭಕ್ತಿಯೆಡೆಗೆ ಮನಸ್ಸು ತಿರುಗಿಸಿದ ಮೇಲಂತೂ ಅನೂಹ್ಯ ಅನುಭವಗಳಾಗಲಾರಂಭಿಸಿದ್ದವು. ಈ ವೇಳೆಗೇ ಅವರು ಬರೆದ ‘ಕಾಳಿ ದಿ ಮದರ್’ ಕವಿತೆ ನಿವೇದಿತೆಯನ್ನು ಬಲುವಾಗಿ ಆಕಷರ್ಿಸಿದ್ದು. ಭಾವಾವೇಶಕ್ಕೇರಿ ಕಾಳಿ, ಕಾಳಿ ಎನ್ನುತ್ತ ಸ್ವಾಮೀಜಿ ಸಮಾಧಿ ಸ್ಥಿತಿಯನ್ನು ಅನುಭವಿಸುವುದನ್ನು ನೋಡುವುದೇ ಒಂದು ಆನಂದ. ಅಲ್ಲಿಂದಾಚೆಗೆ ಕಾಳಿಯೆಡೆಗಿನ ನಿವೇದಿತಾಳ ದೃಷ್ಟಿಕೋನ ಪೂರ್ಣ ಬದಲಾಯಿಸಿತ್ತು. ಕಾಳಿಗೆ ನೀಡುತ್ತಿದ್ದ ಪಶುಬಲಿ, ಅಲ್ಲಿನ ಮಂದಿರದ ಹೊರಗೆ ಭಕ್ತರ ಭಾವಾತಿರೇಕದಿಂದ ಅಸಹ್ಯಗೊಳ್ಳುತ್ತಿದ್ದ ನಿವೇದಿತಾ ಈಗ ಸಾಕ್ಷಾತ್ತು ಕಾಳಿಯ ಆರಾಧನೆಗೆ ತನ್ನ ತಾನು ಸಜ್ಜುಗೊಳಿಸಿಕೊಂಡಳು. ಅದೊಮ್ಮೆ ಧ್ಯಾನಸ್ಥ ಸ್ಥಿತಿಯಲ್ಲಿ ಕಾಳಿಯ ದರ್ಶನವಾದ ಮೇಲಂತೂ ಆಕೆಯ ಭಕ್ತಿ ಭಾವಕ್ಕೆ ಎಣೆಯೇ ಇರಲಿಲ್ಲ.
ನಾಲ್ಕಾರು ತಿಂಗಳ ನಂತರ ಕಲ್ಕತ್ತಾದ ಆಲ್ಬಟರ್್ ಹಾಲಿನಲ್ಲಿ ನಿವೇದಿತಾ ಕಾಳಿಯ ಕುರಿತಂತೆ ಉಪನ್ಯಾಸ ಮಾಡುವಾಗ ಈ ಎಲ್ಲಾ ಅನುಭವಗಳೂ ಕೆಲಸಕ್ಕೆ ಬಂದಿದ್ದವು. ಅಂದಿನ ಭಾಷಣ ಬಲು ವಿಶಿಷ್ಟ. ಯೂರೋಪಿನ ಗಣ್ಯರೆಲ್ಲ ಕಾರ್ಯಕ್ರಮದಲ್ಲಿದ್ದರು. ನಿವೇದಿತಾ ಮಾತುಗಳ ಕುರಿತಂತೆ ಅವರಲ್ಲಿ ಸಹಜ ಕುತೂಹಲವಿತ್ತು. ಇನ್ನು ಇವರಿಂದ ಪ್ರಭಾವಿತಗೊಂಡು ಜನಜಾಗೃತಿ ಮಾಡಿ ಕಾಳಿ ಪೂಜೆಯನ್ನೆಲ್ಲ ನಿಲ್ಲಿಸಿಬಿಡಬೇಕೆಂಬ ಹಟಕ್ಕೆ ಬಿದ್ದಿದ್ದ ಭಾರತದ ಬುದ್ಧಿಜೀವಿಗಳು ನಿವೇದಿತಾ ಮಾತುಗಳಿಂದ ಪ್ರೇರಣೆ ಪಡೆಯಲು ಬಂದಿದ್ದರು. ವಿದೇಶಿ ಹೆಣ್ಣುಮಗಳ ಅಭಿಪ್ರಾಯ ಕೇಳಲೆಂದು ಬಂದ ಸಹಜ ಭಕ್ತರೊಂದಷ್ಟು ಜನ. ಆಕೆಯ ಮಾತು ಶುರುವಾಯ್ತು. ಕೆಲವರಿಗೆ ಅಚ್ಚರಿ, ಕೆಲವರಿಗೆ ಗಾಬರಿ, ಒಂದಷ್ಟು ಜನಕ್ಕೆ ಹೆಮ್ಮೆ, ಇನ್ನೊಂದಷ್ಟು ಜನಕ್ಕೆ ಧನ್ಯತಾ ಭಾವ. ಆಕ್ರೋಶಗೊಂಡ ಬುದ್ಧಿಜೀವಿಗಳು ಕಾರ್ಯಕ್ರಮದ ನಡುವೆಯೇ ಕೂಗಾಡಿದರು. ಅವರಿಗೆ ಅದೇ ಕಾರ್ಯಕ್ರಮದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಮುಂದೆ ಕಾಳಿಘಾಟಿನಲ್ಲಿಯೇ ಕಾಳಿಪೂಜೆ ಕುರಿತಂತೆ ಆಕೆಯ ಭಾಷಣ ಏರ್ಪಡಿಸಲಾಗಿತ್ತು. ಕಾಲಕ್ರಮದಲ್ಲಿ ಆಕೆ ಜನರ ಎಲ್ಲಾ ಪ್ರಶ್ನೆಗಳನ್ನು ಕ್ರೋಢೀಕರಿಸಿ ‘ಕಾಳಿ ದಿ ಮದರ್’ ಎಂಬ ಪುಟ್ಟ ಪುಸ್ತಕವನ್ನೇ ಬರೆದಳು. ಇವೆಲ್ಲವನ್ನೂ ದೂರದಿಂದಲೇ ಗಮನಿಸಿ ಮನದಲ್ಲೇ ಆನಂದಿಸುತ್ತಿದ್ದ ಒಂದೇ ಒಂದು ಜೀವ ಸ್ವಾಮಿ ವಿವೇಕಾನಂದರು ಮಾತ್ರ.
ಮೂತರ್ಿ ಪೂಜೆಯನ್ನು ಮೂಢ ನಂಬಿಕೆಯೆಂದು ಕರೆದು ಅವೆಲ್ಲವನ್ನೂ ನಿಷೇಧಿಸಿಬಿಡಬೇಕೆಂದು ಪಣ ತೊಟ್ಟವರ ನಡುವೆ ನಿವೇದಿತೆಯ ಕಾಳಿಯ ಕುರಿತಂತ ಚಚರ್ೆ ಪ್ರಸ್ತುತವೇ. ಈ ಪುಟ್ಟ ಪುಸ್ತಕದ ಮೊದಲ ಅಧ್ಯಾಯ ಸಂಕೇತಗಳ ಮಹತ್ವವನ್ನು ವಿವರಿಸುವಂಥದ್ದು. ಕ್ರಿಶ್ಚಿಯನ್ನರಾಗಲಿ, ಮುಸಲ್ಮಾನರಾಗಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವಾಗ ಹೇಳುವುದು ಒಂದೇ ಮಾತು, ಮೂತರ್ಿ ಪೂಜೆ ಹಿಂದೂ ಧರ್ಮಕ್ಕೆ ಕಳಂಕ ಅಂತ. ನಿವೇದಿತೆ ಎಳೆಎಳೆಯಾಗಿ ಇದಕ್ಕೆ ಉತ್ತರ ಕೊಡುವ ರೀತಿಯೇ ರೋಚಕ.

71jmtepnepl
ಭಾಷೆಯಲ್ಲೂ ಸಂಕೇತಗಳಿವೆ. ಪ್ರತೀ ಪ್ರದೇಶದಲ್ಲೂ ನಾವು ಅವರವರ ಭಾಷೆಯ ಪದಗಳಿಗೆ ತಡಕಾಡುವಂತೆ ದೇವರೆಂಬ ಸಂಕೇತಗಳೂ ಕೂಡ. ಈ ಪದ ಸರಿ, ಇದು ತಪ್ಪು ಎನ್ನುವಂತಿಲ್ಲ. ಅವರವರ ಸಂಸ್ಕೃತಿಗೆ ತಕ್ಕಂತೆ ಆಯಾ ಪದಗಳು. ಪಶ್ಚಿಮದಲ್ಲಿ ಸಂಧ್ಯಾ ಕಾಲವೆಂದರೆ ಬೆಳಗ್ಗೆ ಮತ್ತು ರಾತ್ರಿಗಳು ಸೇರುವ ನಡುವಿನ ಅವಧಿ, ಭಾರತದಲ್ಲಿ ಅವೆರಡೂ ಸೇರುವಾಗಿನ ಕ್ಷಣ. ಪಶ್ಚಿಮ ಸಂಜೆಯನ್ನು ರಾತ್ರಿಗೆ ಹತ್ತಿರದ, ಮನೆಗೆ ಮರಳುವ ಭಾವದ, ಮಕ್ಕಳು ಕೊನೆಯದಾಗಿ ನಕ್ಕು ಮಲಗಿಬಿಡುವ ಸಮಯವೆಂದು ಬಣ್ಣಿಸಿದರೆ ಭಾರತ ಅದನ್ನು ಗೋಧೂಳಿ ಕಾಲ ಎನ್ನುತ್ತದೆ. ಅದರೊಟ್ಟಿಗಿನ ಚಿತ್ರಣ ಪೂರ್ಣ ಭಿನ್ನ. ಗೊಲ್ಲ ಹೆಣ್ಣುಮಕ್ಕಳು ಗೋವುಗಳನ್ನು ಮನೆಗೊಯ್ಯುವ, ಆ ಗೋವುಗಳ ಗೊರಸುಗಳಿಂದ ಹಾರಿದ ಧೂಳಿನಿಂದ ಆಗಸ ತುಂಬಿ ಸೂಯರ್ಾಸ್ತದ ದೃಶ್ಯ ಮಂದವಾಗುವ ಚಿತ್ರಣಗಳೆಲ್ಲ ಕಣ್ಮುಂದೆ ಬಂದು ಬಿಡುತ್ತದೆ. ಸಾಂಸ್ಕೃತಿಕ ಭಿನ್ನತೆಗಳ ಕಾರಣದಿಂದಾಗಿ ಭಾಷೆಯ ಸಂಕೇತಗಳು ಬದಲಾಗುವುದನ್ನು ಗುರುತಿಸುವ ನಿವೇದಿತಾ ಮುಂದುವರೆದು ಇದರ ಆಧಾರದ ಮೇಲೆಯೇ ಶಾಶ್ವತ ಬೆಳಕನ್ನು ಕಾಣಲು ಕಣ್ಣ ಮುಂದಿನ ಕನ್ನಡಕ ಸರಿಸಬೇಕೆನ್ನುತ್ತಾಳೆ. ನಾವೆಲ್ಲರೂ ನಮ್ಮದೇ ಆಲೋಚನೆಗಳಿಂದ ಪ್ರಭಾವಗೊಂಡ ಪರದೆಯೊಂದನ್ನು ಕಣ್ಣಮುಂದೆಳೆದುಕೊಂಡಿರುವುದರಿಂದ ಸತ್ಯದ ದರ್ಶನ ನಮಗಾಗುತ್ತಿಲ್ಲ. ನಾವು ಕಂಡಿದ್ದೇ ಸತ್ಯವೆಂದು ಭಾವಿಸುತ್ತಾ ಕೇಂದ್ರದಿಂದ ಅದೆಷ್ಟು ದೂರ ಬಂದಿದ್ದೇವೆಂದರೆ ಕೆಲವೊಮ್ಮೆ ಪರಿಧಿಯಲ್ಲಿ ವಿರುದ್ಧ ದಿಕ್ಕಿನಲ್ಲಿದ್ದೇವೆ ಎನಿಸಿಬಿಡುತ್ತದೆ ಎಂದಳು. ಓಹ್! ಎಲ್ಲಾ ಮತ-ಪಂಥಗಳ ನಡುವಿನ ವೈರುಧ್ಯವನ್ನು ಅದೆಷ್ಟು ಸಲೀಸಾಗಿ ಬಗೆ ಹರಿಸಿದಳು ಪುಣ್ಯಾತ್ಗಿತ್ತಿ.
ಅವಳ ವಾದ ಮುಂದುವರಿದೇ ಇತ್ತು. ಪುರುಷಪ್ರಧಾನವಾದ ಸಮಾಜ ಹೊಂದಿದ್ದ ಅರಬ್ಬರು ತಂದೆಗೆ ಬಲುವಾಗಿ ಮಹತ್ವ ಕೊಡುತ್ತಿದ್ದರು. ನಿರ್ಣಯ ಕೊಡುವ, ಮಕ್ಕಳನ್ನು ಪೋಷಿಸುವ, ಕಾಲಮೇಲೆ ನಿಲ್ಲಿಸಿಕೊಂಡು ಆಡಿಸುವ ತಂದೆ ಅವರಿಗೆ ಬಲು ಹತ್ತಿರ. ಹೀಗಾಗಿಯೇ ಸೆಮಿಟಿಕ್ ಮತಗಳಲ್ಲೆಲ್ಲಾ ಆತ್ಮವೆಂಬುದು ತಂದೆಯೆಂಬಂತೆ ಬಿಂಬಿಸಲ್ಪಟ್ಟಿತು. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿ ಸ್ತ್ರೀಯೇ ಪರಿವಾರದ ಪ್ರಮುಖ ಅಂಗ. ಪಶ್ಚಿಮದಲ್ಲಿ ಹೆಂಡತಿಯನ್ನು ರಾಣಿ ಎಂದಂತೆ ಭಾರತದಲ್ಲಿ ಮಗ ತಾಯಿಯನ್ನು ಸಿಂಹಾಸನಸ್ಥ ರಾಣಿಯಂತೆ ಪೂಜಿಸುತ್ತಾನೆ. ಅವಳೇ ಅವನ ಪಾಲಿಗೆ ಪಾವಿತ್ರ್ಯ ಮತ್ತು ಶಾಂತಿಯ ದಯಪಾಲಿಸುವವಳು. ಅದಕ್ಕೇ ಇಲ್ಲಿ ಭಗವಂತನನ್ನು ಮಗುವನ್ನು ಲಾಲಿಸುವ ತಾಯಿಯಂತೆ ಕಾಣಲಾಯ್ತು.
ಇಷ್ಟಕ್ಕೇ ಸುಮ್ಮನಾಗದ ನಿವೇದಿತಾ ಮೇರಿಯನ್ನು ಪೂಜಿಸುವ ಕ್ರಿಶ್ಚಿಯನ್ನರನ್ನು ಉಲ್ಲೇಖಿಸುವಳಲ್ಲದೇ ‘ನಿಮ್ಮನ್ನು ನಾನು ಕೋಳಿ ತನ್ನ ಮರಿಗಳನ್ನು ರೆಕ್ಕೆಯೊಳಗೆ ಕೂಡಿ ಹಾಕುವಂತೆ ಹಾಕಿಕೊಳ್ಳುವೆ’ ಎಂಬ ಭಗವಂತನ ವಾಣಿಯನ್ನು ನೆನಪಿಸಿ ತಾಯಿಯಾಗದೇ ಯಾವುದೂ ಸಂಪೂರ್ಣವಾಗಲಾರದು ಮತ್ತು ಕ್ರೈಸ್ತ ಮತವೂ ಅಂತೆಯೇ ನಡಕೊಂಡಿದೆ ಎಂಬುದನ್ನು ಸಾಬೀತು ಪಡಿಸಿದಳು. ಅಲ್ಲಿಗೆ ಎದುರಿಗಿರುವವರ ವಾದ ಅರ್ಧ ಸತ್ತಿತ್ತು. ಈಗ ಆಕೆ ಕಾಳಿ ಪೂಜೆಯ ಮಹಿಮೆಯನ್ನು ಕೊಂಡಾಡಲಾರಂಭಿಸಿ ಆಕೆಯ ಭಯಂಕರ ರೂಪವನ್ನು ಕಣ್ಮುಂದೆ ತಂದು ಅದು ಮೃತ್ಯುವಿಗೆ ಹೇಗೆ ಹತ್ತಿರವೆಂಬುದನ್ನು ವಿವರಿಸಿದಳು.
ಆಕೆಯ ಭಾಷೆ ಖಂಡಿತ ಸಲೀಸಲ್ಲ. ಒಂದು ಪುಸ್ತಕವನ್ನು ನಾಲ್ಕಾರು ಬಾರಿಯಾದರೂ ಓದಿದರೆ ಅರ್ಥವಾದೀತೇನೋ. ಆದರೆ ಒಮ್ಮೆ ಅರ್ಥವಾದರೆ ಹೊಸ ಹೊಳಹನ್ನೇ ಹುಟ್ಟಿ ಹಾಕಬಲ್ಲ ಸಾಹಿತ್ಯ ಆಕೆಯದು. ಮೂತರ್ಿ ಪೂಜೆಯನ್ನು, ದೇವಸ್ಥಾನಗಳಿಗೆ ಹೋಗುವುದನ್ನು ಕಂಡು ಅಸಹ್ಯ ಪಡುವ ಭಾರತೀಯರೆಲ್ಲ ಓದಲೇ ಬೇಕಾದ ಕೃತಿ ಕಾಳಿ ದಿ ಮದರ್! ಶಿವ-ಶಿವೆಯರ ವೈಭವದ ವರ್ಣನೆ ಮಾಡಿ ಶಿವನ ಮೇಲೆ ನಡೆಯುವ ಕಾಳಿಯ ನರ್ತನವನ್ನು ಆಕೆ ವಿವರಿಸಿ ಒಪ್ಪಿಸುವ ಪರಿ ಅನನ್ಯ. ಪ್ರಕೃತಿ-ಪುರುಷರನ್ನು ಆಕೆ ಡೈನಮೋ ಮತ್ತು ಅದರಿಂದ ಬಂದ ವಿದ್ಯುಚ್ಛಕ್ತಿಗೆ ಹೋಲಿಸುತ್ತಾಳೆ. ಪುರುಷ ಶಾಂತವಾಗಿರುತ್ತಾನೆ ಅದರೊಳಗಡಗಿರುವ ಶಕ್ತಿಯೇ ಹೊರಗೆ ರುದ್ರ ನರ್ತನ ಮಾಡೋದು. ಎಷ್ಟು ಸರಳವಾಗಿದೆಯಲ್ಲವೇ?
ನಿವೇದಿತಾ ಬಲು ಹತ್ತಿರವೆನಿಸೋದು ಇದಕ್ಕೇ. ಅವಳೆಂದಿಗೂ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. ಕಾಳಿ ಮಂದಿರದ ಹೊರಗೆ ಕುಳಿತು ಧ್ಯಾನಸ್ಥಳಾಗುತ್ತಿದ್ದಳು!
ಓಹ್! ಈಗ ಅರ್ಥವಾಗಿರಬೇಕು. ಸೋದರಿ ನಿವೇದಿತಾಳಿಗೂ ಮದರ್ ತೆರೇಸಾಗೂ ಅದೆಷ್ಟು ಅಂತರವಿದೆ ಅಂತ!!

Comments are closed.