ವಿಭಾಗಗಳು

ಸುದ್ದಿಪತ್ರ


 

ಮತಾಂಧನ ಉದ್ವೇಗ ಮತ್ತು ಜಡವಾದಿಯ ವೈಶಾಲ್ಯ!!

ಸ್ವಾಮೀಜಿ ಹಾಗೆಯೇ ಬದುಕಿದರು. ಜೊತೆಗಾರರ, ಬಂಧುಗಳ, ವಿರೋಧಿಗಳ ಮಾತುಗಳಿಂದ ಮನಸ್ಸು ಜರ್ಝರಿತವಾಗಿದ್ದರೂ ಜಗತ್ತಿಗೆ ಕೊಡಬೇಕಾದ್ದನ್ನು ಮಾತ್ರ ಕೊಟ್ಟೇ ಕೊಟ್ಟರು. ಅದಕ್ಕೇ ಅವರೊಂದಿಗೆ ವಾದಿಸಿದ ಪಂಡಿತರು ಇತಿಹಾಸದಲ್ಲಿ ಮರೆತು ಹೋಗಿದ್ದಾರೆ. ವಾದವೇ ಮಾಡದೇ ಸ್ವಾಮೀಜಿ ಜಗತ್ತನ್ನು ಗೆದ್ದು ಬಿಟ್ಟಿದ್ದಾರೆ.
ವಿವೇಕಾನಂದರ ಹುಟ್ಟಿದ ಹಬ್ಬ ನಾಳೆ ಹನ್ನೆರಡಕ್ಕೆ. ಯಾಕೋ ಸ್ವಾಮೀಜಿ ಮತ್ತೆ-ಮತ್ತೆ ಕಾಡುತ್ತಿದ್ದಾರೆ!!

1

ಚಿಕಾಗೋ ಸರ್ವಧರ್ಮ ಸಮ್ಮೇಳನ!
ಹಾಗೆಂದೊಡನೆ ನೆನಪಾಗುವ ಹೆಸರು ಯಾವುದು ಹೇಳಿ? ನಿಸ್ಸಂಶಯವಾಗಿ ಸ್ವಾಮಿ ವಿವೇಕಾನಂದರೇ. ಕೆಲವು ವ್ಯಕ್ತಿಗಳೇ ಹಾಗೆ. ಅವರು ಉರಿಯುವ ಸೂರ್ಯ. ಅವರೆದುರಿಗೆ ಉಳಿದವರು ಹಣತೆಗಳಾಗಿ ಮಿನುಗಿದರೆ ಅದೇ ಪುಣ್ಯ. ಹಾಗಂತ ಸರ್ವಧರ್ಮ ಸಮ್ಮೇಳನದ ಸ್ವಾಮೀಜಿಯವರ ಯಾತ್ರೆ ಸಲೀಸಾದುದಾಗಿರಲಿಲ್ಲ. ಕಷ್ಟಪಟ್ಟು ಹಣ ಹೊಂದಿಸಿ ಹೋಗಿದ್ದು. ಅಲ್ಲಿ ಸಮ್ಮೇಳನಕ್ಕೆ ಇನ್ನೂ ಸಮಯವಿದ್ದುದರಿಂದ ತಾವು ತಂದಿರುವ ಹಣ ಸಾಲದಾಯ್ತು. ಸ್ಥಳೀಯವಾಗಿ ಪರಿಚಯದವರಾರೂ ಇರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಚಿಕಾಗೋ ವೇದಿಕೆ ಹತ್ತಲು ಬೇಕಿದ್ದ ಪರಿಚಯ ಪತ್ರವನ್ನು ಯಾರೂ ಕೊಟ್ಟಿರಲಿಲ್ಲ. ಇಷ್ಟಕ್ಕೂ ಅವರು ಯಾವ ಸಂಘಟನೆಗೋ, ಜಾತಿಗೋ ಸೇರಿದವರಾಗಿರಲಿಲ್ಲ! ಅವರು ಸಮಗ್ರ ಹಿಂದೂ ಸಮಾಜದ ಪ್ರತಿನಿಧಿಯಾಗಿದ್ದರು. ಅವರನ್ನು ಸಮಥರ್ಿಸಿಕೊಂಡು ಪತ್ರ ಯಾರು ಕೊಡಬೇಕಿತ್ತು?
ಆಗಲೇ ಸ್ವಾಮೀಜಿಗೆ ಥಿಯಾಸಾಫಿಕಲ್ ಸೊಸೈಟಿಯ ಅಧ್ಯಕ್ಷರ ಸಂಪರ್ಕವಾಯ್ತು. ಆತ ಭಾರತದ ಹಿತೈಷಿಯಾದುದರಿಂದ ಸಹಾಯ ಕೇಳಿದರು. ಆತ ಸ್ವಾಮೀಜಿ ಥಿಯಾಸಾಫಿಕಲ್ ಸೊಸೈಟಿಗೆ ಸೇರಿದರೆ ಮಾಡಬಹುದೆಂದ. ಸ್ವಾಮೀಜಿ ನಿರಾಕರಿಸಿದರು. ಅಷ್ಟೇ ಅಲ್ಲ. ಅವರ ಒಪ್ಪಲಾಗದ ಕೆಲವು ಸಿದ್ಧಾಂತಗಳ ಕುರಿತಂತೆಯೂ ತಿಳಿ ಹೇಳಿದರು. ಆತ ಸಹಾಯ ಮಾಡಲಾಗದೆಂದು ಕೈ ಚೆಲ್ಲಿ ಬಿಟ್ಟ. ಈ ಕೈ ಚೆಲ್ಲುವಿಕೆ ಇಷ್ಟಕ್ಕೇ ನಿಲ್ಲಲಿಲ್ಲ. ಸ್ವಾಮೀಜಿ ಅಮೇರಿಕಾದಲ್ಲಿನ ಚಳಿಯನ್ನು ತಾಳಲಾಗದೇ ಬೆಚ್ಚಗಿನ ಬಟ್ಟೆ ಕೊಳ್ಳಲು ಒಂದಷ್ಟು ಹಣ ಬೇಕೆಂದು ಮದ್ರಾಸೀ ಮಿತ್ರರಿಗೆ ತಂತಿ ಕಳಿಸಿದರು. ಈ ಸುದ್ದಿ ತಿಳಿದ ಥಿಯಾಸಫಿಸ್ಟರು ‘ಈಗ ಪಿಶಾಚಿ ಸಾಯುತ್ತಿದೆ, ದೇವರು ನಮ್ಮನ್ನು ಈ ಪೀಡೆಯಿಂದ ತಪ್ಪಿಸಿದ’ ಎಂದು ನಿಟ್ಟುಸಿರುಬಿಟ್ಟರು. ಮುಂದೆ ಸ್ವಾಮೀಜಿ ಸರ್ವಧರ್ಮ ಸಮ್ಮೇಳನದ ವೇದಿಕೆಯೇರಿ ಕುಳಿತಾಗ ಅಲ್ಲಿ ಥಿಯಾಸಫಿಸ್ಟರನ್ನು ಮಾತನಾಡಿಸಲು ಹೋದರೆ ಅವರು ಮುಖ ಸಿಂಡರಿಸಿಕೊಂಡರು. ‘ದೇವತೆಗಳೊಂದಿಗೆ ಇರಬಯಸುವ ಈ ಕ್ಷುದ್ರ ಕೀಟ ಯಾವುದು?’ ಎಂಬಂತಿತ್ತು ಅವರ ತಿರಸ್ಕಾರ ಭಾವದ ಮುಖಮುದ್ರೆ. ಇಲ್ಲಿಗೇ ನಿಲ್ಲಲಿಲ್ಲ ಅವರ ವಿರೋಧ. ವಿವೇಕಾನಂದರ ವಿರುದ್ಧ ಈ ಕ್ರೈಸ್ತ ಪಾದ್ರಿಗಳು ನಡೆಸುತ್ತಿದ್ದ ಅಸತ್ಯದ ಚಳವಳಿಗೆ ಬೆಂಬಲ ಘೋಷಿಸಿ ಅದನ್ನು ತೀವ್ರಗೊಳಿಸಿದರು.
ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿದ್ದಷ್ಟು ದಿನ ಕ್ರೈಸ್ತ ಮಿಶನರಿಗಳು ದಿನಕ್ಕೊಂದು ಸುಳ್ಳು ಪೋಣಿಸಿ ಹೊಸ-ಹೊಸ ಹಾರ ಮಾಡುತ್ತಿದ್ದರು. ಅದಕ್ಕೆ ಅಲಂಕಾರ ಪುಷ್ಪವೆಂದರೆ ಥಿಯಾಸಾಫಿಸ್ಟ್ಗಳೇ. ವಿವೇಕಾನಂದರ ಶೀಲದ ಕುರಿತಂತೆ ಇಲ್ಲಸಲ್ಲದ ಪುಕಾರು ಹಬ್ಬಿಸಿದರು. ಅವರು ಯಾರದ್ದಾದರೂ ಮನೆಯಲ್ಲಿ ಉಳಕೊಂಡಿರುವ ಸುದ್ದಿ ಗೊತ್ತಾದೊಡನೆ ಅಲ್ಲಿಗೆ ಹೋಗಿ ಮನೆಯವರ ಕಿವಿ ಊದಿ ಸ್ವಾಮೀಜಿಯನ್ನು ಅಲ್ಲಿಂದ ಹೊರ ದಬ್ಬುವಂತೆ ಮಾಡುತ್ತಿದ್ದರು. ಅನೇಕ ಕಡೆಗಳಲ್ಲಿ ಸ್ವಾಮೀಜಿ ಹೋಗುವ ಮುನ್ನವೇ ಆತಿಥೇಯರ ತಲೆಕೆಡಿಸಿ ಇವರು ಹೋಗುವಾಗ ಬೀಗ ಹಾಕಿದ ಬಾಗಿಲುಗಳನ್ನು ಕಂಡು ವಾಪಸ್ಸು ಬರಬೇಕಿತ್ತು. ವಾಪಸ್ಸಾದರೂ ಎಲ್ಲಿಗೆ? ಅಕ್ಷರಶಃ ಆಗೆಲ್ಲ ಸ್ವಾಮೀಜಿ ಅನಾಥ ಶಿಶು! ಅಂತಹ ಹೊತ್ತಲ್ಲೂ ಅವರನ್ನು ರಕ್ಷಿಸಿದ್ದು ಜಗನ್ಮಾತೆ ಮಾತ್ರ.
ವಿರೋಧಿಗಳ ಕಿರಿಕಿರಿ ಇಲ್ಲಿಗೇ ನಿಲ್ಲಲಿಲ್ಲ. ಹಿಂದೂ ಧರ್ಮದ ಅರಿವೇ ಇಲ್ಲದ ಜನರ ನಡುವೆ ಹಿಂದೂ ಧರ್ಮದ ಸ್ಥಾಪನೆಗೆ ವಿವೇಕಾನಂದರು ತಮ್ಮೆಲ್ಲ ಶಕ್ತಿ ವ್ಯಯಿಸುತ್ತಿದ್ದರೆ ಒಂದಷ್ಟು ಸುಧಾರಕರೆನ್ನಿಸಿಕೊಂಡವರು ಸ್ವಾಮೀಜಿಯನ್ನು ‘ಢೋಂಗಿ ಸಾಧು’ ಎಂದು ಪುಕಾರು ಹಬ್ಬಿಸಿದರು. ಅವರ ವಾದ ಸ್ಪಷ್ಟವಾಗಿತ್ತು. ವಿವೇಕಾನಂದರು ಶೂದ್ರರಾಗಿದ್ದು ಶಾಸ್ತ್ರದ ಪ್ರಕಾರ ಸನ್ಯಾಸತ್ವ ಸ್ವೀಕಾರಕ್ಕೆ ಅವರಿಗೆ ಅರ್ಹತೆಯೇ ಇರಲಿಲ್ಲ. ಊಹೂಂ. ಸ್ವಾಮೀಜಿ ವಿಚಲಿತರಾಗಲಿಲ್ಲ. ನಾನೊಬ್ಬ ಹೊಲೆಯನಾದರೂ ನನಗೆ ಸಂತೋಷವೇ ಎಂದರು. ಚಂಡಾಲನ ಮನೆಯನ್ನು ಯಾರಿಗೂ ತಿಳಿಯದಂತೆ ಪ್ರವೇಶಿಸಿ, ಅವನ ಕಕ್ಕಸನ್ನು ಗುಡಿಸಿ, ತಮ್ಮ ಕೇಶರಾಶಿಯಿಂದ ಅದನ್ನೊರೆಸಿದವರ ಶಿಷ್ಯ ನಾನು ಎಂದು ಎದೆ ತಟ್ಟಿಕೊಂಡರು.
ತಮ್ಮ ಮದರಾಸಿನ ಭಾಷಣದಲ್ಲಿ ಸ್ವಾಮೀಜಿ ಉತ್ಕಂಠಿತವಾಗಿ ನುಡಿದರು, ‘ಭಾರತೀಯನು ಪರದೇಶದಲ್ಲಿ ತನ್ನ ಸ್ನೇಹಿತನನ್ನು ಉಪವಾಸವಿರುವಂತೆ ಮಾಡಿರುವುದು ಇಪ್ಪತ್ತು ವರ್ಷಗಳ ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮ. ಇದಕ್ಕೆ ಕಾರಣ ಆತನಿಗಿಂತ ನಾನು ಹೆಚ್ಚು ಜನಾದರಣೀಯನಾಗಿದ್ದು; ದುಡ್ಡು ಮಾಡುವುದಕ್ಕೆ ನಾನು ಆತಂಕವೆಂದು ಅವನು ಭಾವಿಸಿದ್ದು’ ಎಂದರು. ಅದೂ ಸರಿಯೇ ಬಿಡಿ. ಸ್ವಾಮೀಜಿಯವರ ಕೀತರ್ಿ ದಿನೇ ದಿನೇ ವೃದ್ಧಿಸುತ್ತಿತ್ತಲ್ಲ, ಅದನ್ನು ತಡೆಯದೇ ಹೋದರೆ ತಮ್ಮ ಬೇಳೆಕಾಳು ಬೇಯದೆಂದು ಅರಿತವರು ಮಾಡಿದ ಕಿರಿ ಕಿರಿ ಅದು. ಹಾಗಂತ ವಿದೇಶದ ಭಾರತೀಯರಿಗಷ್ಟೇ ಅಲ್ಲ ದೇಶೀಯ ಹಿಂದೂಗಳನ್ನು ಅವರು ಝಾಡಿಸಿದರು. ‘ಶುದ್ಧ ಸನಾತನ ಹಿಂದೂಗಳು, ಸುಧಾರಕರು ಚಂಡಾಲನಿಗೂ ಸೇವೆಯನ್ನು ಸಲ್ಲಿಸುವಂತಹ ಬದುಕನ್ನು ಬಾಳಲಿ. ಆಗ ನಾನು ಅವರ ಪದತಲದಲ್ಲಿ ಕುಳಿತು ಕಲಿಯುತ್ತೇನೆ. ಅದಕ್ಕೆ ಮುಂಚೆ ಅಲ್ಲ. ಎಳ್ಳಿನಷ್ಟು ಅನುಷ್ಠಾನ ರಾಶಿ ರಾಶಿ ಮಾತಿಗಿಂತ ಮೇಲು’ ಎಂದರು.
ಹೌದು. ನಮ್ಮಲ್ಲನೇಕರು ಹಾಗೆಯೇ ಬರಿಯ ಮಾತಾಳಿಗಳು. ಕೆಲಸದ ವಿಚಾರಕ್ಕೆ ಬಂದರೆ ಶೂನ್ಯ. ವಿವೇಕಾನಂದರ ವ್ಯಕ್ತಿತ್ವಕ್ಕೆ, ಪಾಂಡಿತ್ಯಕ್ಕೆ, ಸಾಧನೆಗೆ ಯಾವ ದಿಕ್ಕಿನಿಂದಲೂ ಸಮವಲ್ಲದ ಈ ಅಯೋಗ್ಯರು ಅವರ ವಿರುದ್ಧ ಮಾತನಾಡುತ್ತಿದ್ದರು. ಮೊದಮೊದಲು ಅಮೇರಿಕಾ ನಂಬಿರಬೇಕು. ಬರಬರುತ್ತಾ ಸತ್ಯ ಗೆದ್ದಿತು. ವಿವೇಕಾನಂದರು ಅಮೇರಿಕಾವನ್ನೇ ಆಚ್ಛಾದಿಸಿಕೊಂಡರು. ಖ್ಯಾತ ಲೇಖಕ ಹೀರಂ ಮ್ಯಾಕ್ಸಿಂ ಹೇಳುವಂತೆ ಬರಲಿರುವ ದಿನಗಳಲ್ಲಿ ಅಮೇರಿಕನ್ನರು ಮಿಶನರಿಗಳಿಗೆ ಕೊಡುತ್ತಿದ್ದ ಹಣದಲ್ಲಿ ಲಕ್ಷಾಂತರ ಡಾಲರುಗಳು ಕಡಿಮೆಯಾಯಿತು! ಎಲ್ಲಕ್ಕೂ ವಿವೇಕಾನಂದರೇ ಕಾರಣ. ಮಿಶನರಿಗಳ ಢೋಂಗೀ ವ್ಯಕ್ತಿತ್ವ, ಸುಳ್ಳುಗಳು ಅನಾವರಣಗೊಂಡಿದ್ದವು.

2
ಹಾಗಂತ ಎಲ್ಲವೂ ಮುಗಿದಿರಲಿಲ್ಲ. ಸ್ವಾಮೀಜಿ ಭಾರತಕ್ಕೆ ಮರಳಿ ಬಂದರು. ದಿಗ್ವಿಜಯ ಮಾಡಿ ಪಶ್ಚಿಮವನ್ನು ಕಾಲಬುಡಕ್ಕೆ ಕೆಡವಿಕೊಂಡಿದ್ದ ಸ್ವಾಮಿ ವಿವೇಕಾನಂದರನ್ನು ಇಲ್ಲಿನ ಸಾಮಾನ್ಯ ಜನತೆ ಅತಿ ವೈಭವದಿಂದ ಸ್ವಾಗತಿಸಿದರು. ಮದ್ರಾಸಿನಲ್ಲಂತೂ ಬೆಸ್ತರ ಮನೆ-ಮನೆಗಳೂ ಸಿಂಗಾರಗೊಂಡವು. ಅವರ ದರ್ಶನಕ್ಕೆ ಮೇಲ್ವರ್ಗದವರು ನೆರದಿದ್ದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಜನ ಕೆಳವರ್ಗದಿಂದ ಬಂದಿರುತ್ತಿದ್ದರು. ಸ್ವಾಮೀಜಿಯ ಹೃದಯ ತುಂಬಿ ಬರುತ್ತಿತ್ತು.
ಆದರೇನು? ಸ್ವಾಮೀಜಿಯ ದೂರದೃಷ್ಟಿಯ ಮಾತುಗಳನ್ನು ಜೀಣರ್ಿಸಿಕೊಳ್ಳಲಾಗದ ಕೆಲವು ಜನ ವೇದ-ಪುರಾಣ-ಶಾಸ್ತ್ರ ಎಂದೆಲ್ಲ ಹೇಳಿ ಇವರ ಮಾತುಗಳನ್ನು ಧಿಕ್ಕರಿಸಲು ಕಾಯುತ್ತಿರುತ್ತಿದ್ದರು. ಕೆಲವು ಪಂಡಿತರಂತೂ ಸ್ವಾಮೀಜಿ ಕ್ಷಾಮ ಪರಿಹಾರ ಕಾರ್ಯದಲ್ಲಿ ತಲೆಕೆಡಸಿಕೊಂಡಿದ್ದಾಗ ಶಾಸ್ತ್ರ ಚಚರ್ೆ ಮಾಡಬೇಕೆಂದು ದುಂಬಾಲು ಬೀಳುತ್ತಿದ್ದರು. ಅದಕ್ಕೆ ಸಾಕಷ್ಟು ಸಮಯ ದೊರಕದಿದ್ದಾಗ ಕುಪಿತರಾಗುತ್ತಿದ್ದರು. ಆಗೆಲ್ಲಾ ಸ್ವಾಮೀಜಿ ‘ಪಂಡಿತರೇ, ಶಾಸ್ತ್ರ ಚಚರ್ೆ ಬಿಡಿ; ಕರ್ಮ ಚಚರ್ೆ ಮಾಡಿ’ ಎಂದು ಸೂಕ್ಷ್ಮವಾಗಿ ಹೇಳಿ ಕಳಿಸುತ್ತಿದ್ದರು. ಸದ್ಯಕ್ಕೆ ಮಾಡಬೇಕಿರೋದು ನೊಂದವರ ಸೇವೆ ಎಂಬುದು ಸ್ವಾಮೀಜಿಯವರ ಅನಿಸಿಕೆ. ಇದನು ಅಥರ್ೈಸಿಕೊಳ್ಳಬಲ್ಲಷ್ಟು ಹೃದಯ ವೈಶಾಲ್ಯ ಅವರ್ಯಾರಿಗೂ ಇರಲಿಲ್ಲ. ಅದೊಮ್ಮೆ ಗೋರಕ್ಷಣೆಯ ಕಾರ್ಯಕರ್ತನೊಬ್ಬ ಸ್ವಾಮೀಜಿಯ ಬಳಿಗೆ ಬಂದ. ಕ್ಷಾಮದ ಹೊತ್ತಲ್ಲಿ ಸಾಯುವ ಗೋವನ್ನುಳಿಸಲು ಸ್ವಾಮೀಜಿಯ ಬಳಿ ಚಂದಾ ಬೇಡಿದ. ಮಾನವ ಪ್ರೇಮದ ಮುದ್ದೆಯಾಗಿದ್ದ ಸ್ವಾಮೀಜಿ ಸಹಜವಾಗಿಯೇ ‘ಹಸಿವಿನಿಂದ ನರಳಿ ಸಾಯುತ್ತಿರುವ ಮನುಷ್ಯರಿಗಾಗಿ ಏನು ಮಾಡುತ್ತಿರುವಿರಿ?’ ಎಂದರು. ತಕ್ಷಣ ಆತ ‘ಅದು ಅವರ ಕರ್ಮ, ಸಾಯುತ್ತಾರೆ, ಗೋವು ಮಾತೆಯಲ್ಲವೇ?’ ಎಂದದ್ದಷ್ಟೇ. ಸ್ವಾಮೀಜಿ ಕುಪಿತರಾದರು. ಹಾಗಾದರೆ ‘ಸಾಯುವುದು ಗೋವಿನದ್ದೂ ಕರ್ಮವೇ. ನನ್ನ ಬಳಿ ಸದ್ಯಕ್ಕೆ ಹಣವಿಲ್ಲ. ಇದ್ದರೆ ಮೊದಲು ಅದನ್ನು ಮಾನವರಿಗಾಗಿ ಬಳಸುವೆ. ಉಳಿದರೆ ಬೇರೆಯವರ ಬಗ್ಗೆ ಆಲೋಚಿಸುವೆ’ ಎಂದು ಹೊರಟುಬಿಟ್ಟರು.
ಅವರ ಮಾನವ ಪ್ರೇಮವನ್ನು ಅಥರ್ೈಸಿಕೊಳ್ಳುವುದು ಸುಲಭಸಾಧ್ಯವಾಗಿರಲಿಲ್ಲ. ಕಟ್ಟರ್ ಪಂಥಿಗಳೆನ್ನಿಸಿಕೊಂಡ ಕೆಲವರು ಸದಾ ಅವರನ್ನು ವಿರೋಧಿಸುತ್ತಿದ್ದರು. ಕೆಲವೊಮ್ಮೆ ಮಿತ್ರರು, ಸೋದರ ಸನ್ಯಾಸಿಗಳೂ ಕೂಡ!
ಅದಕ್ಕೇ ಸ್ವಾಮೀಜಿ ಒಂದೆಡೆ ಹೇಳಿದ್ದು ‘ಧರ್ಮ ಜಾಗೃತಿಯೊಂದಿಗೆ ಮತಾಂಧತೆಯೂ ಬಂದುಬಿಡುತ್ತದೆ’ ಅಂತ. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರ ನಿಮರ್ಾಣಕ್ಕೆ ನಮಗೊಂದು ಮಧ್ಯಮ ಮಾರ್ಗ ಹಾಕಿಕೊಟ್ಟರು ಸ್ವಾಮೀಜಿ. ‘ಮತಭ್ರಾಂತನ ಉದ್ವೇಗದೊಂದಿಗೆ, ಜಡವಾದಿಯ ವೈಶಾಲ್ಯ ಇರಲಿ. ಸಾಗರದಷ್ಟು ಆಳವಾಗಿ, ಆಗಸದಷ್ಟು ವಿಶಾಲವಾಗಿರಬೇಕು ನಮ್ಮ ಹೃದಯ. ಇತರ ರಾಷ್ಟ್ರಗಳಂತೆ ನಾವು ಪ್ರಗತಿಗಾಮಿಗಳಾಗೋಣ. ಅದರ ಜೊತೆಗೆ ಹಿಂದೂಗಳಿಗೆ ಮಾತ್ರ ಸಾಧ್ಯವಾದ ಸಂಪ್ರದಾಯ ನಿಷ್ಠೆಯನ್ನೂ ಕಾಪಾಡಿಕೊಳ್ಳೋಣ’.
ಸ್ವಾಮೀಜಿ ಹಾಗೆಯೇ ಬದುಕಿದರು. ಜೊತೆಗಾರರ, ಬಂಧುಗಳ, ವಿರೋಧಿಗಳ ಮಾತುಗಳಿಂದ ಮನಸ್ಸು ಜರ್ಝರಿತವಾಗಿದ್ದರೂ ಜಗತ್ತಿಗೆ ಕೊಡಬೇಕಾದ್ದನ್ನು ಮಾತ್ರ ಕೊಟ್ಟೇ ಕೊಟ್ಟರು. ಅದಕ್ಕೇ ಅವರೊಂದಿಗೆ ವಾದಿಸಿದ ಪಂಡಿತರು ಇತಿಹಾಸದಲ್ಲಿ ಮರೆತು ಹೋಗಿದ್ದಾರೆ. ವಾದವೇ ಮಾಡದೇ ಸ್ವಾಮೀಜಿ ಜಗತ್ತನ್ನು ಗೆದ್ದು ಬಿಟ್ಟಿದ್ದಾರೆ.
ವಿವೇಕಾನಂದರ ಹುಟ್ಟಿದ ಹಬ್ಬ ನಾಳೆ ಹನ್ನೆರಡಕ್ಕೆ. ಯಾಕೋ ಸ್ವಾಮೀಜಿ ಮತ್ತೆ-ಮತ್ತೆ ಕಾಡುತ್ತಿದ್ದಾರೆ!!

Comments are closed.