ವಿಭಾಗಗಳು

ಸುದ್ದಿಪತ್ರ


 

ಮೋದಿಯನ್ನು ಸಮರ್ಥ ಆಡಳಿತಗಾರ ಅನ್ನೋದು ಯಾಕೆ ಗೊತ್ತ?

ಅಹ್ಮದಾಬಾದಿನ ಆಟೋ ಚಾಲಕ ಕಿಶನ್ ಸಿಂಗ್ ಮಾತಿನ ಭರದಲ್ಲಿದ್ದ. ’ಈ ಬಾರಿ ಎಲೆಕ್ಷನ್ನಿನಲ್ಲಿ ಮೋದಿಯ ಜಯಭೇರಿ ಖಾತ್ರಿ’ ಎನ್ನುತ್ತಿದ್ದ. ನಾವು ಸುತ್ತಿಬಳಸಿ ಯಾವ ಪ್ರಶ್ನೆಗಳನ್ನು ಕೇಳಿದರೂ ’ಮೋದಿಗೆ ಜೈ’ ಎನ್ನುವುದನ್ನು ಅವನು ಬಿಡಲೇ ಇಲ್ಲ. ’ಆತ ಬಂದುದರಿಂದ ನಮ್ಮೆಲ್ಲರ ಬದುಕಿನ ಮಟ್ಟ ಏರಿದೆ ಸಾರ್’ ಎನ್ನುವಾಗ ಅವನಲ್ಲಿ ಚಿಗುರೊಡೆದ ಆತ್ಮವಿಶ್ವಾಸ ಕಣ್ಣಿಗೆ ರಾಚುತ್ತಿತ್ತು.

ಸೋಮನಾಥ ಮಂದಿರದಿಂದ ಮುವ್ವತ್ತು ಮೈಲು ದೂರದಲ್ಲಿ ಗಾಡಿ ನಿಲ್ಲಿಸಿ ಹಸಿರುಹಸಿರಾಗಿದ್ದ ತೋಟಕ್ಕೆ ನುಗ್ಗಿದೆವು. ಮೈ ಬಗ್ಗಿಸಿ ಬಿರು ಬಿಸಿಲಲ್ಲಿ ದುಡಿಯುತ್ತಿದ್ದ ರೈತನೊಬ್ಬನೊಂದಿಗೆ ನಮ್ಮ ಮಾತುಕತೆ ಶುರುವಾಯ್ತು. ಈ ಬಾರಿಯಾದರೂ ಅಧಿಕಾರ ಚುಕ್ಕಾಣಿ ಬೇರೆಯವರ ಕೈಗೆ ಕೊಡುತ್ತೀರಾ ಎಂದು ಕೇಳೀದ್ದಕ್ಕೆ ಆತನ ಕಣ್ಣು ನಿಗಿನಿಗಿ ಕೆಂಡ. ದಿನಕ್ಕೆ ಎಂಟು ಗಂಟೆ ಮೂರು ಫೇಸ್‌ನ ವಿದ್ಯುತ್ತು, ಉಳಿದ ಹದಿನಾರು ಗಂಟೆ ಸಿಂಗಲ್ ಫೇಸ್‌ನಷ್ಟಾದರೂ ಕರೆಂಟು. ನೀರಿಗೆ ಕೊರತೆಯಿಲ್ಲ, ಶಾಲೆ ಆಸ್ಪತ್ರೆಗಳಿಗೆ ಸಮಸ್ಯೆಯಿಲ್ಲ. ನಮಗೆ ಅಧಿಕಾರ ಬದಲಿಸಬೇಕಿಲ್ಲ ಎಂದುಬಿಟ್ಟ.
ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದ ಹೆಂಗಸು, ’ಮೋದಿಯನ್ನು ದೇಶಕ್ಕೆ ಕೊಡುತ್ತೀರಾ?’ ಅನ್ನೋ ಪ್ರಶ್ನೆಗೆ ’ಆಮೇಲೆ ಗುಜರಾತಿಗೆ ಯಾರು?’ ಎನ್ನುವ ಮತ್ತೊಂದು ಪ್ರಶ್ನೆಯ ಮೂಲಕ ಉತ್ತರಿಸಿದಳು. ಅಲ್ಲಿಗೆ ಗುಜರಾತಿನ ಜನರ ಅಂತರಂಗದ ಸಾಕಷ್ಟು ಅನಾವರಣಗೊಂಡಿತ್ತು. ಸುಮಾರು ೩ ಸಾವಿರ ಕಿಲೋಮೀಟರುಗಳ ನಮ್ಮ ಯಾತ್ರೆಯಲ್ಲಿ ಕಹಿ ಅನುಭವವಾದ ಪ್ರಸಂಗಗಳು ಬಲು ಕಡಿಮೆ. ಕಛ್‌ನ ’ಬಚಾವ್’ ಗ್ರಾಮದಲ್ಲಿ ಕಟ್ಟೆಯೊಂದರ ಮೇಲೆ ಕುಳಿತು ಚುನಾವಣೆಯ ಬಗ್ಗೆ ಮಾತನಾಡುತ್ತಾ ಕುಳಿತಿದ್ದಾಗ ಊರಿನವನೊಬ್ಬ ಮೋದಿಗೆ ವಿರುದ್ಧವಾಗಿ ಒಂದಷ್ಟು ಮಾತಾಡತೊಡಗಿದ. ನಮಗೂ ಖುಷಿಯಾಯ್ತು. ಒಬ್ಬನಾದರೂ ಸಿಕ್ಕನಲ್ಲಪ್ಪ ಅಂತ. ಅಷ್ಟರಲ್ಲಿಯೇ ನಾಲ್ಕಾರು ಜನ ಅವನ ಸುತ್ತ ಕುಳಿತರು. ಬಿಸಿಬಿಸಿ ಚರ್ಚೆಗಳಾದವು. ಅಲ್ಲಿಯೂ ಮೋದಿ ಗೆದ್ದುಬಿಟ್ಟರು. ನಮಗೆ ಮತ್ತೆ ಅಚ್ಚರಿ.

ನರೇಂದ್ರ ಮೋದಿ ಅಪರೂಪದ ಮನುಷ್ಯ. ’ಭಾರತ ವಿಶ್ವಗುರುವಾಗಲಿದೆ. ಭಾರತದ ಯುವಶಕ್ತಿ ಜಗತ್ತನ್ನು ಬೆಳಗಲಿದೆ’ ಹಾಗಂತ ಗೂಗಲ್ ಹ್ಯಾಂಗ್ ಔಟ್‌ನ ಮೊದಲ ಪ್ರಶ್ನೆಗೆ ಉತ್ತರಿಸುವಾಗ ಅವರ ಕಂಗಳಲ್ಲಿನ ಹೊಳಪು ನೋಡಬೇಕಿತ್ತು. ಮುಷ್ಟಿ ಕಟ್ಟಿದ ಕೈಗಳಲ್ಲಿ ಅಡಗಿದ ತಾಕತ್ತು ನೋಡಬೇಕಿತ್ತು. ’ದೇಶ ಅಭಿವೃದ್ಧಿಯಾಗುತ್ತಿಲ್ಲವಲ್ಲ ಎಂಬ ಯುವಕರ ಕೊರಗಿದೆಯಲ್ಲ, ಇದೇ ಒಂದು ಶಕ್ತಿ. ಇದನ್ನು ಸರಿಯಾಗಿ ಬಳಸಿಕೊಂಡರೆ ಸಾಕು, ಈ ದೇಶ ಅಭಿವೃದ್ಧಿಪಥದಲ್ಲಿ ಚೀನಾಗೆ ಸರಿಸಮವಾಗಿಬಿಡುತ್ತದೆ’ ಹಾಗೆಂದು ಆತ ದೃಢ ಧ್ವನಿಯಲ್ಲಿ ಹೇಳುವಾಗ ಬೆನ್ನ ಹುರಿಯ ಆಳದಲ್ಲೆಲ್ಲೋ ಕುಂಡಲಿನಿಯೇ ಜಾಗೃತವಾಗಿ ಮೇಲ್ಮುಖವಾಗಿ ಹರಿದಂತಾಗಿಬಿಡುತ್ತೆ. ಆತನ ಮಾತುಗಳಲ್ಲಿ ಮಾಂತ್ರಿಕ ಶಕ್ತಿ ಇದೆ. ಆತನ ನಿಲುವು, ವ್ಯಕ್ತಿತ್ವಗಳೆಲ್ಲವೂ ವಿಶಿಷ್ಟವೆನ್ನಿಸುತ್ತೆ. ಇಡಿಯ ದೇಶದಲ್ಲಿ ಇಂದು ಯಾವ ರಾಜಕಾರಣಿಯದ್ದಾದರೂ ಚರ್ಚೆ ಗಂಭೀರ ಪ್ರಮಾಣದಲ್ಲಿ ನಡೆಯುತ್ತಿದೆಯೆಂದರೆ ಅದು ನರೇಂದ್ರ ಮೋದಿಯದೇ! ರಾಜೀವ್ ಗಾಂಧಿ, ವಾಜಪೇಯಿಯವರ ನಂತರ ದೇಶ ಬಾಯಿ ಕಳಕೊಂಡು ನೋಡುತ್ತಿರುವ ಏಕೈಕ ವ್ಯಕ್ತಿ ಅವರು. ಅದಕ್ಕೇ ೨೦೧೨ರ ಗುಜರಾತ್ ಚುನಾವಣೆ ಗುಜರಾತಿಗಲ್ಲ, ದೇಶಕ್ಕೇ ದಿಕಕು ತೋರಬಲ್ಲ ಚುನಾವಣೆ ಎನ್ನುತ್ತಿರೋದು.
ಗುಜರಾತನ್ನು ಅನುಕೂಲಕ್ಕೆ ತಕ್ಕಂತೆ ವಿಭಜಿಸಿಕೊಂಡರೆ ಮೂರು ಭಾಗ. ಕೈಗಾರಿಕೆಗಳಿಂದ ಗಿಜಿಗುಡುವ ಮಧ್ಯ ಗುಜರಾತು, ಬಹುಪಾಲು ಕರಾವಳಿಯ ಸೌರಾಷ್ಟ್ರ ಮತ್ತು ಮರಳಿನ ರಾಶಿಯ ಕಛ್. ಹಾಗೆ ನೋಡಿದರೆ ಗುಜರಾತಿನಲ್ಲಿ ಇಡಿಯ ದೇಶವೇ ಇದೆ. ದಕ್ಷಿಣ ಭಾರತದ ಬುದ್ಧಿವಂತರನ್ನು ಪ್ರತಿನಿಧಿಸುವ ಮಧ್ಯ ಗುಜರಾತಿನ ಜನ, ಕರಾವಳಿಯ ಮುಗ್ಧತೆಯ ಪ್ರತೀಕವಾದ ಸೌರಾಷ್ಟ್ರದ ಜನತೆ, ಉತ್ತರ ಭಾರತೀಯರಂತೆ ಬಿಂದಾಸ್ ಆಗಿರುವ ಕಛ್ ಭಾಗದವರು. ಈ ಮೂರೂ ಭಾಗಗಳು ಸಾಂಸ್ಕೃತಿಕವಾಗಿ ಅಕ್ಷರಶಃ ಭಿನ್ನ. ಮಾತು ಕತೆಗಳು, ಊಟ ತಿಂಡಿಗಳೂ ಭಿನ್ನಭಿನ್ನವೇ. ಸಹಜವಾಗಿ ಆಚಾರ ವಿಚಾರ, ಅಪೇಕ್ಷೆಗಳೂ ಬೇರೆಯೇ ಇರುತ್ತವೆ. ಹೀಗಾಗಿ ಗುಜರಾತನ್ನು ಸಮರ್ಥವಾಗಿ ಆಳಿದವ ದೇಶವನ್ನು ಆಳಬಲ್ಲ ಎನ್ನುವ ಮಾತು ಉತ್ಪ್ರೇಕ್ಷೆಯಲ್ಲ. ಹಾಗೆ ಎಲ್ಲ ರಾಜ್ಯಗಳೂ ಹಾಗೆಯೇ. ಅಷ್ಟೂ ಬಗೆಯ ಜನರನ್ನು ಮೆಚ್ಚಿಸುವಂತೆ ಆಳುವುದಿದೆಯಲ್ಲ, ಅದು ಬಲು ಕಠಿಣ. ದಕ್ಷಿಣ ಕರ್ನಾಟಕದ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಜನರ ನಾಡಿ ಅರಿಯುವಷ್ಟರಲ್ಲಿ ಅವಧಿಯೇ ಮುಗಿದುಹೋಗಿರುತ್ತದೆ!
ಮೋದಿಯ ಸ್ಟೈಲ್ ಆಫ್ ವರ್ಕಿಂಗ್ ಇದೆಯಲ್ಲ, ಅದು ಅತಿ ವಿಶಿಷ್ಟ. ಭ್ರಷ್ಟಾಚಾರ ನಿಯಂತ್ರಿಸಲು ಪೊಲೀಸರು, ಲೋಕಾಯುಕ್ತರು ಬೇಕೆಂದಿಲ್ಲ. ಮೋಸ ಮಾಡಲು ಪ್ರೇರೇಪಿಸುವ ವ್ಯವಸ್ಥೆಯನ್ನು ಬದಲಿಸಿದರೆ ಸಾಕಷ್ಟೆ! ಕರೆಂಟುಗಳ್ಳರನ್ನು ಹಿಡಿಯಲು ದೊಡ್ಡದೊಂದು ಪಡೆ ರೂಪಿಸೋದು, ಆ ಪಡೆಗೆ ಹಣ ಹೊಡೆಯಲು ಹೊಸ ಹೆದ್ದಾರಿ ನಿರ್ಮಿಸಿಕೊಡೋದುದರ ಬದಲು, ಜನರಿಗೆ ೨೪ ತಾಸು ಕರೆಂಟು ಪೂರೈಸಿ ಮೀಟರಿಗೆ ತಕ್ಕಷ್ಟು ದುಡ್ಡು ಕಟ್ಟಲು ಪ್ರೇರೇಪಿಸೋದು ಒಳಿತಲ್ಲವೆ? ನಿಮ್ಮ ಸಿಲಿಂಡರನ್ನು ಮೂರು ಪಟ್ಟು ಹೆಚ್ಚು ಬೆಲೆಗೆ ಹೋಟೆಲುಗಳಿಗೆ ಮಾರಿಕೊಳ್ಳುವಂತಹ ಭ್ರಷ್ಟ ವ್ಯವಸ್ಥೆಯ ಬದಲು ಪೈಪುಗಳ ಮೂಲಕ ಪೂರೈಸಿ ಅದರ ಆಧಾರದ ಮೇಲೆ ಹಣ ಕಟ್ಟಿ ಎಂದರೆ ಮಧ್ಯವರ್ತಿಗಳ ಹಾವಳಿಯೇ ತಪ್ಪುತ್ತದೆಯಲ್ಲವೆ? ಉತ್ತಮ ಆಡಳಿತ ಎಂದರೆ ಇದೇನೇ. ಮೋದಿಯ ಸಾಮರ್ಥ್ಯವೇ ಇದು.
ಆತ ದುಡ್ಡಿನ ಹಿಂದೆ ಓಡುವ ಮನುಷ್ಯನಲ್ಲ. ಕಂಠ ಮೀರಿ ದುಡ್ಡು ಮಾಡಬೇಕೆನ್ನುವ ಹುಚ್ಚು ಆತನಿಗಿಲ್ಲ. ಹೆಂಡತಿ ಮಕ್ಕಳ ಜಂಜಡವೇ ಇಲ್ಲವಾದ್ದರಿಂದ ಮುಂದಿನ ಪೀಳಿಗೆಗೆ ಕೂಡಿಡಬೇಕೆಂಬ ತಹತಹವೂ ಇಲ್ಲ. ರಾಜಕಾರಣಿಗೆ ಇರಲೇಬೇಕಾದ ಈ ವೀಕ್‌ನೆಸ್ಸುಗಳೇ ಇಲ್ಲವಾದ್ದರಿಂದ ಮೋದಿಯ ಎದೆ ಯಾವಾಗಲೂ ಮುಗಿಲೆತ್ತರಕ್ಕೇ. ಹೀಗಾಗಿಯೇ ಮೋದಿಯನ್ನು ಓರಗೆಯವರು ದುರಹಂಕಾರಿ ಅಂತ ಜರೆಯೋದು. ಗುಜರಾತಿನ ಬಿಜೆಪಿಯ ತರುಣರನ್ನು ಈ ಕುರಿತು ಪ್ರಶ್ನಿಸಿದರೆ, ಅವರ ಮೊಬೈಲ್ ನಂಬರ್ ನಿಮ್ಮ ಕೈಲಿಟ್ಟು ನೀವೇ ಮಾತಾಡಿ ನೋಡಿ ಅನ್ನುತ್ತಾರೆ. ಇವರಷ್ಟು ಕೈಗೆ ಸಿಗುವ ಮತ್ತೊಬ್ಬ ನಾಯಕನೇ ಇರಲಾರ ಅಂತ ಹೆಮ್ಮೆಯಿಂದ ಹೇಳುತ್ತಾರೆ. ನೆನಪಿರಲಿ. ಇದು ಒಬ್ಬಿಬ್ಬರ ಅಭಿಪ್ರಾಯವಲ್ಲ.
ಹೊರಗಿನ ವಿರೋಧ ಮೋದಿಗೆ ಕಿಂಚಿತ್ತೂ ಸಮಸ್ಯೆಯಾಗಲಾರದು. ಅನೇಕ ಇಂಗ್ಲಿಶ್ ಪತ್ರಕರ್ತರು ಮೋದಿಗೆ ಅಧ್ಯಯನವೇ ಇಲ್ಲವೆಂದು ಮೂದಲಿಸುತ್ತಾರೆ. ಭಾರೀಭಾರೀ ಡಿಗ್ರಿ ಪಡೆದ ಮನಮೋಹನ ಸಿಂಗರು ಕಡಿದು ಕಟ್ಟಿಹಾಕಿದ್ದೇನೆಂದು ಕೇಳಿದರೆ ಉತ್ತರವೇ ಇಲ್ಲದಂತೆ ಮುಗುಮ್ಮಾಗಿಬಿಡುತ್ತಾರೆ. ಮೋದಿಗೆ ಹೊಂದಿಕೊಂಡು ಹೋಗುವುದು ಗೊತ್ತಿಲ್ಲವೆಂದು ಹೇಳುತ್ತ ಪ್ರಧಾನಿ ಹುದ್ದೆಗೆ ಅವರು ಸೂಕ್ತವಲ್ಲವೆಂದು ಷರಾ ಬರೆಯುತ್ತಾರೆ. ಆದರೆ ಮೋದಿ ಮತ್ತೆ ಮತ್ತೆ ಲೀಲಾಜಾಲವಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಸರ್ಕಾರದ ನಾವೆಯನ್ನು ನಡೆಸುವುದು ನೋಡಿ ಮೆತ್ತಗಾಗುತ್ತಾರೆ. ಹೌದು. ಮೋದಿ ಹೊರಗಿನ ವಿರೋಧಕ್ಕೆ ಸಮರ್ಥ ತಡೆ ಒಡ್ಡಬಲ್ಲರು. ಆದರೆ ಒಳಗಿನವರೇ ತಿರುಗಿಬಿದ್ದರೆ?
ಈ ಬಾರಿ ಇದೇ ಸವಾಲು. ಮುಸಲ್ಮಾನರು, ದಲಿತರು ಮೋದಿಯನ್ನು ನಾಯಕನೆಂದು ಒಪ್ಪಿಕೊಂಡಾಗಿದೆ. ಯಾಕೋ ಅವರೊಂದಿಗೆ ದೀರ್ಘಕಾಲ ಜತೆಗಾರರಾಗಿದ್ದ ಪ್ರವೀಣ್ ಭಾಯಿ ತೊಗಾಡಿಯಾರಿಗೆ ಮೋದಿಯಲ್ಲಿ ನಾಯಕತ್ವ ಕಾಣುತ್ತಿಲ್ಲ. ಅನೇಕ ದಶಕಗಳ ನಂತರ ಹುಟ್ಟಿರುವ ನಾಯಕನನ್ನು ಪ್ರಧಾನಿ ಗಾದಿಯಿಂದ ದೂರವಿಡಲು ಕೆ.ಎಸ್.ಗೋವಿಂದಾಚಾರ್ಯರಂತಹ ಹಿರಿಯ ಮುತ್ಸದ್ದಿಗಳು ಸೂಚಿಸುತ್ತಿದ್ದಾರೆ. ಗಡ್ಕರಿಯನ್ನು ಮುಂದಿಟ್ಟುಕೊಂಡು ಎಂ.ಜಿ.ವೈದ್ಯ ಮೋದಿಯನ್ನು ತುಳಿಯುತ್ತಿದ್ದಾರೆ. ಇವುಗಳನ್ನೆಲ್ಲ ಅರಗಿಸಿಕೊಂಡು ಜಯಿಸುವುದು ನಿಜಕ್ಕೂ ದೊಡ್ಡ ಸವಾಲು. ವಿರೋಧ ಪಕ್ಷಗಳಿಗೆ ಶಕ್ತಿ ತುಂಬುತ್ತಿರುವುದು ಈ ಅಂಶಗಳೇ.
ಹಾಗಿದ್ದೂ ಮೋದಿಯ ಜನಪ್ರಿಯತೆಗೆ ಕುಂದಿಲ್ಲ. ಹಾಗಂತ ಅವರು ಪತ್ರಕರ್ತರನ್ನು ಓಲೈಸುತ್ತ ರಾಜಕಾರಣ ನಡೆಸುವವರಲ್ಲ. ನಮ್ಮ ರಾಜ್ಯದ ಬಹುತೇಕ ನಾಯಕರುಗಳು ಟೀವಿ ಮೈಕುಗಳ ಮುಂದೆ ಹಲ್ಕಿರಿದುಕೊಂಡೇ ನಿಂತಿರ‍್ತಾರೆ. ಮೋದಿ ತದ್ವಿರುದ್ಧ. ಅವರು ಮಾತ್ರವಲ್ಲ, ಇಡಿಯ ಗುಜರಾತಿನ ಬಿಜೆಪಿ ಮೀಡಿಯಾಗಳಿಗೆ ಬೆನ್ನು ಹಾಕಿಕೊಂಡು ನಿಂತಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಗೆಳೆಯರ ಸೋಗಿನಲ್ಲಿ ಬಂದ ಅನೇಕ ಪತ್ರಕರ್ತರು ಗುಪ್ತ ಕ್ಯಾಮೆರಾ ಬಳಸಿ ಅನೇಕರ ಬದುಕಿಗೇ ಸಂಚಕಾರ ತಂದುಬಿಟ್ಟಿದ್ದಾರೆ. ಬಾಬು ಭಜರಂಗಿಯನ್ನು ನೆನೆಸಿಕೊಳ್ಳಿ! ಯಾವುದೋ ಅಮಲಿನಲ್ಲಿ ಆತ ಅಡಿದ ಮಾತುಗಳಿಂದಾಗಿ ಅನೇಕರು ಇಂದಿಗೂ ಸರಳುಗಳ ಹಿಂದೆ ನಿಂತಿದ್ದಾರೆ. ಈ ಆಕ್ರೋಶ ಸಹಜವಾದದ್ದೇ. ಆದರೆ ಮೋದಿ ಸದ್ದು ಮಾಡಿದರೆ ಅದೆಷ್ಟು ಜೋರಾಗಿರುತ್ತದೆಂದರೆ, ಮಾಧ್ಯಮಗಳು ಅದನ್ನು ಸುದ್ದಿ ಮಾಡದೆ ಇರಲು ಸಾಧ್ಯವೇ ಇಲ್ಲವೆನ್ನುವಷ್ಟು! ಈ ಬಾರಿಯ ಚುನಾವಣಾ ಪ್ರಚಾರಕ್ಕೂ ವಿವೇಕಾನಂದರ ನೂರೈವತ್ತನೆ ಜಯಂತಿಗೂ ಅವರು ತಳಕು ಹಾಕಿದ್ದೇ ಇದಕ್ಕೆ ಸಾಕ್ಷಿ.
ನರೇಂದ್ರ ಮೋದಿ ಜನರ ನಾಡಿ ಸರಿಯಾಗಿ ಹಿಡಿದುಬಿಟ್ಟಿದ್ದಾರೆ. ಅವರಿಗೇನು ಬೇಕೆಂಬುದು ಇವರಿಗೆ ಗೊತ್ತಿದೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಸುಪ್ತ ಚೇತನವನ್ನು ಗುಜರಾತಿನುದ್ದಕ್ಕೂ ಜಾಗೃತಗೊಳಿಸಿಬಿಟ್ಟಿದ್ದಾರೆ. ನಗರಗಳಿಂದ ನಗರಗಳಿಗೆ ಅಲ್ಲಿರುವಷ್ಟು ರಸ್ತೆ ವ್ಯವಸ್ಥೆ ಇಡಿಯ ರಾಷ್ಟ್ರದಲ್ಲಿ ಮತ್ತೆಲ್ಲೂ ಸಿಗಲಿಕ್ಕಿಲ್ಲ. ಅಹಮದಾಬಾದಿನ ರಿವರ್ ಫ್ರಂಟ್‌ಗೆ ಒಮ್ಮೆ ಹೋಗಿ ನೋಡಿ. ಕೊಳಕಿನ ಆಗರವಾಗಿದ್ದ ಸಾಬರ್‌ಮತಿ ನದಿ ಈಗ ಜೀವಂತವಾಗಿಬಿಟ್ಟಿದೆ. ಹತ್ತಿರ ಸುಳಿಯಲೂ ಹೇಸುತ್ತಿದ್ದಜನ ಈಗ ನದಿಯಲ್ಲಿ ಬೋಟಿಂಗ್ ಮಾಡುತ್ತಾರೆ. ನರ್ಮದಾ ನದಿಯ ಕಾಲುವೆಗಳು ಹಳ್ಳಿಹಳ್ಳಿಗೆ ನೀರುಣಿಸುತ್ತಿವೆ. ಮೋದಿಯ ಮಾತು ಅದಾಗಲೇ ರಾಜ್ಯವನ್ನು ದಾಟಿ ಬಂದಿದೆ. ಅವರೀಗ ಭಾರತ-ಚೀನಾ ಸಂಬಂಧಗಳ ಬಗ್ಗೆ, ಅಮೆರಿಕಾ ಯುರೋಪುಗಳ ಜತೆಗಿನ ವ್ಯಾಪಾರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯವನ್‌ಉ ಮಾದರಿಯಾಗಿ ರೂಪಿಸುತ್ತಿದ್ದಾರೆ. ಕಾಲುವೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿರುವ ಯೋಜನೆಯಂತೂ ಅತಿ ವಿಶಿಷ್ಟ. ಕಾಲುವೆಗಳನ್ನು ಮುಚ್ಚುವ ಈ ಪ್ಯಾನೆಲ್‌ಗಳು ನೀರು ಆವಿಯಾಗುವುದನ್ನು ತಡೆಯುತ್ತವೆ. ಸೋಲಾರ್ ಸೆಲ್‌ಗಳು ವಿದ್ಯುತ್ ಉತ್ಪಾದಿಸುತ್ತವೆ. ಈ ಪ್ಯಾನೆಲ್‌ಗಳ ಅಡಿಯಲ್ಲಿರುವ ಮೋಟರ್‌ಗಳು ನೀರಿನ ಓಟಕ್ಕೆ ತಿರುಗಿ ತಾವೂ ವಿದ್ಯುತ್ ಉತ್ಪಾದಿಸುತ್ತವೆ. ಮೋದಿಯ ಈ ಮೋಡಿಗೆ ತಲೆ ತಿರುಗಿ ಜಪಾನಿನ ತಂತ್ರಜ್ಞರು ಬಂದು ಅಧ್ಯಯನ ನಡೆಸಿಹೋಗಿದ್ದಾರೆ. ಉಹುಂ… ಮೋದಿ ಯಾವ ಕಾರಣಕ್ಕೂ ಈಗ ರಾಜ್ಯದ ನಾಯಕತ್ವಕ್ಕೆ ಸೀಮಿತರಾಗಿ ಉಳಿದಿಲ್ಲ. ಅದಕ್ಕೇ ಯುರೋಪು ಅಮೆರಿಕಾಗಳೂ ಅವರನ್ನು ಕಾಣಲು ಕಾತರದಿಂದ ತುದಿಗಾಲಲ್ಲಿ ನಿಂತಿವೆ.

 

1 Response to ಮೋದಿಯನ್ನು ಸಮರ್ಥ ಆಡಳಿತಗಾರ ಅನ್ನೋದು ಯಾಕೆ ಗೊತ್ತ?

  1. Prabhu

    Well said it is the internal matter of BJP is avoiding him to the PM of nation,
    & the internal quarrel is adding to fuel for the congress to come to power @ center again