ವಿಭಾಗಗಳು

ಸುದ್ದಿಪತ್ರ


 

ಯುವಾಬ್ರಿಗೇಡ್ ಎಂಬ ವಿಶಾಲವಾದ ಪರಿವಾರ!

ಕೆಲವೊಮ್ಮೆ ನಿಮ್ಮಂತಹ ತಮ್ಮಂದಿರ, ತಂಗಿಯರ ಪಡೆದ ನನ್ನ ಭಾಗ್ಯಕ್ಕೆ ನಾನೂ ಕರುಬುತ್ತೇನೆ. ಹಾಗಿರುವಾಗ ಬೇರೆಯವರು ಹೊಟ್ಟೆ ಉರಿಸಿಕೊಳ್ಳುವುದು ಬಲು ದೊಡ್ಡದಲ್ಲ. ನಮ್ಮ ಸಂಪರ್ಕಕ್ಕೆ ಬಂದ ಹೊರಗಿನವರು ಯುವಾಬ್ರಿಗೇಡಿನ ಕಾರ್ಯಕರ್ತರ ಕುರಿತಂತೆ ಆಡುವ ಮೆಚ್ಚುಗೆಯ ಮಾತುಗಳು ನನ್ನನ್ನು ಆಗಸದಲ್ಲಿ ತೇಲಿಸುತ್ತವೆ. ಅನೇಕ ಬಾರಿ ಒಬ್ಬನೇ ಕುಳಿತು ನಮ್ಮದು ವಿಶಾಲವಾದ ಒಂದು ಪರಿವಾರವಾಗಿಬಿಟ್ಟಿದೆಯಲ್ಲ ಅಂತ ಖುಷಿ ಪಡುತ್ತಿರುತ್ತೇನೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಹೀಗೆಯೇ ಕೈ ಹಿಡಿದು ಸಾಗೋಣ. ನಮ್ಮವರನ್ನು ಜೊತೆಗೆ ಒಯ್ಯೋಣ. ಬೇಕಿದ್ದರೆ ಕುಂಟುತ್ತ, ತೆವಳುತ್ತಲಾದರೂ ಸರಿಯೇ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತ ವಿಶ್ವಗುರುವಿನ ಪಟ್ಟದಲ್ಲಿ ತಾಯಿ ಭಾರತಿ ಆರೂಢಳಾಗುವವರೆಗೆ ನಡೆಯೋಣ

18987458_1320265884738069_873832683_o

ಆತ್ಮೀಯ ಕಾರ್ಯಕರ್ತ ಮಿತ್ರರೇ,
ಯುವಾಬ್ರಿಗೇಡಿಗೆ ಭರ್ತಿ ಮೂರು! ಬೆಂಗಳೂರಿನ ದೊಡ್ಡ ಆಲದ ಮರದ ಹತ್ತಿರದ ತೋಟದಲ್ಲಿ ಯುವಾಬ್ರಿಗೇಡಿಗೆ ಅಡಿಪಾಯ ಹಾಕಿದಂದಿನಿಂದ ಇಂದಿನವರೆಗೆ ಸುಮಾರು ಸಾವಿರ ದಿನಗಳು ಕಳೆದವು. ಸಾವಿರಾರು ನೆನಪುಗಳನ್ನು ಉಳಿಸಿಬಿಟ್ಟವು. ಯಾರಿಗೇನೋ ಗೊತ್ತಿಲ್ಲ ಯುವಾಬ್ರಿಗೇಡ್ ನನ್ನ ಬದುಕಿಗೆ ರಂಗು ತುಂಬಿತು. ‘ಬರೀ ಮಾತಾಡೋದಷ್ಟೇ’ ಅಂತ ಮೂದಲಿಸುತ್ತಿದ್ದವರೆಲ್ಲ, ‘ಕೆಲಸ ಮಾಡದಿದ್ದರೆ ಭಾಷಣಕ್ಕೇ ಬರೋಲ್ವಂತೆ’ ಅಂತ ಆಡಿಕೊಳ್ಳುತ್ತಾರೆ. ಅನೇಕರಿಗೆ ಕಿರಿಕಿರಿಯಾಗಲು ಇದೇ ಕಾರಣ.
ಮೊದಲ ಬಾರಿ ಜಲ ಜೀವನದ ಹೆಸರಲ್ಲಿ ಕಲ್ಯಾಣಿಯ ಸ್ವಚ್ಛತೆಗೆ ಧುಮುಕಿದಾಗ ನಮಗೇ ವಿಶ್ವಾಸದ ಬಲವಿರಲಿಲ್ಲ. ಹುಚ್ಚು ಆವೇಶವೊಂದೇ ನಮ್ಮಲ್ಲಿದ್ದುದು. ನೀರಿನ ಕೆಲಸ ಮಾಡಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಅಂತಾರಲ್ಲ ಹಾಗೆಯೇ ಆಯಿತು. ರಾಜ್ಯದಾದ್ಯಂತ ಕಲ್ಯಾಣಿಯ ಸ್ವಚ್ಛತೆಯ ಕೆಲಸ ಎಷ್ಟು ವೇಗವಾಗಿ ಹಬ್ಬಿತೆಂದರೆ ಯುವಾಬ್ರಿಗೇಡ್ ಮತ್ತು ಕಲ್ಯಾಣಿ ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳಾಗಿಬಿಟ್ಟವು. ಅಂದೆಲ್ಲಾ ಇದನ್ನು ‘ಸರ್ಕಾರದ ಕೆಲಸ’, ‘ತೆರಿಗೆ ಕಟ್ಟಲ್ವಾ?’ ಎಂದೆಲ್ಲಾ ಧಿಮಾಕಿನಿಂದ ಪ್ರಶ್ನಿಸುತ್ತಿದ್ದರು ನಮ್ಮನ್ನು. ಇಂದು ಜಲಮೂಲಗಳನ್ನು ಉಳಿಸುವುದು ದೊಡ್ಡ ಹಬ್ಬವಾಗಿಬಿಟ್ಟಿದೆ. ಅನೇಕ ತರುಣ ಸಂಘಗಳು ತಮ್ಮ ಸಂಘಟನೆಯ ಭಾಗವಾಗಿ ಕಲ್ಯಾಣಿಯ ಸ್ವಚ್ಛತೆಯ ಕಾರ್ಯಕೈಗೆತ್ತಿಕೊಂಡಿದೆ. ಕೆರೆಗಳು ಹೂಳೆತ್ತಲ್ಪಡುತ್ತಿವೆ, ಜಲಾಶಯಗಳು ಸ್ವಚ್ಛಗೊಳ್ಳುತ್ತಿವೆ. ‘ಇದು ಸರ್ಕಾರದ ಕೆಲಸ ಅಲ್ವಾ?’ ಅಂತ ಈಗ ಯಾರೂ ಕೇಳುತ್ತಿಲ್ಲ. ಕಲ್ಯಾಣಿಗಳು ಸ್ವಚ್ಛಗೊಂಡಿದ್ದು ಭಾರೀ ದೊಡ್ಡ ಕೆಲಸವಲ್ಲ ನಿಜ ಆದರೆ ನಮ್ಮೂರಿನ ಕೆಲಸ ನಮ್ಮದ್ದೇ ಎಂಬ ಪ್ರಜ್ಞೆ ಮೊಳೆತು ತರುಣರ ಮೆದುಳಿಗೆ ಮೆತ್ತಿದ್ದ ಕೊಳೆ ಸ್ವಚ್ಛವಾಯಿತಲ್ಲ ಅದು ವಿಶೇಷ. ಕಾವೇರಿಯ ಸ್ವಚ್ಛತೆಗೆ ನಿಂತ ಬ್ರಿಗೇಡಿನ ಹುಡುಗರನ್ನು ಕಂಡು ಕುಶಾಲನಗರದ ಚಂದ್ರಮೋಹನ್ ಬೆರಗಾಗಿ ‘ಈ ಪಡೆ ಎಂತಹ ಸಾಹಸ ಬೇಕಿದ್ದರೂ ಮಾಡಬಲ್ಲುದು’ ಎಂದು ಉದ್ಗರಿಸಿದ್ದು ಕಿವಿಯಲ್ಲಿ ಈಗಲೂ ಗುಂಯ್ಗುಡುತ್ತಿದೆ.
ಯುವಾಬ್ರಿಗೇಡಿನ ಶಕ್ತಿಯೇ ಕಾರ್ಯಕರ್ತರಾದ ನೀವು. ನನಗೆ ಗೊತ್ತು. ಎಲ್ಲಿಯೋ ಯಾವುದೋ ಪ್ರವಾಸದಲ್ಲಿ, ಯಾರದೋ ಮನೆಯಲ್ಲಿ, ಯಾರೊಡನೆಯೋ ಹರಟುತ್ತ ಕುಳಿತಾಗ, ನನ್ನ ಮನಸಿಗೆ ತಟ್ಟನೆ ಹೊಳೆದ ಕೆಲಸವನ್ನು ಮಾಡಿಬಿಡೋಣವೇ ಅಂತ ನಿಶ್ಚಯಿಸಿ ನನ್ನ ಫೇಸ್ಬುಕ್ನಲ್ಲಿ ಕಾರಿಕೊಂಡುಬಿಡುತ್ತೇನೆ. ನೀವೆಲ್ಲ ಅದರ ಹಿಂದೆ ಬಿದ್ದು ಆ ಯೋಜನೆ ದಡ ಸೇರಿಸುವಲ್ಲಿ ನಿಮ್ಮೆಲ್ಲ ಶ್ರಮ ಹಾಕಿ ಪ್ರಯತ್ನಿಸುವಿರಲ್ಲ ಅದೇ ಯುವಾಬ್ರಿಗೇಡಿನ ಶಕ್ತಿ. ಒಂದು ದಿನವೂ ‘ಮೇಲೆ ಕುಳಿತವರು ಹೇಳಿಬಿಡುತ್ತೀರಾ, ನಾವು ಮಾಡಬೇಕಾ?’ ಅಂತ ನೀವು ಪ್ರಶ್ನಿಸಿದ್ದಿಲ್ಲ. ನನಗೇ ಅನೇಕ ಬಾರಿ ಹಾಗನ್ನಿಸುತ್ತೆ. ಸತ್ಯ ಹೇಳಲಾ? ನನಗೂ ಈ ಎಲ್ಲಾ ಕೆಲಸಗಳಿಗೆ ಯಾರೋ ಪ್ರೇರಣೆ ಕೊಡುತ್ತಾರೆ. ನಾನೂ ನಿಮ್ಮಷ್ಟೇ ಅಸಹಾಯಕನಾಗಿ ‘ಹ್ಞೂಂ’ ಎನ್ನುತ್ತೇನೆ. ಬಾಯಿ ಮುಚ್ಚಿಕೊಂಡು ಕೆಲಸ ಮಾಡುತ್ತೇನೆ. ಆಮೇಲೆ ಯಶಸ್ಸು ಕಾಲ್ಗಳಿಗೆ ಮುತ್ತಿಟ್ಟಾಗ ನಿಮ್ಮೊಂದಿಗೆ ನಾನೂ ಪುಟ್ಟ ಮಗುವಿನಂತೆ ಅನುಭವಿಸುತ್ತಾ ಪ್ರೇರಣೆ ಕೊಟ್ಟು ಕೆಲಸ ಮಾಡಿಸಿದವನಿಗೆ ಕಣ್ಮುಚ್ಚಿ ವಂದಿಸುತ್ತೇನೆ.

19048295_1032962666806253_884123719_o
ನನಗೆ ನಿವೇದಿತಾ ನೂರೈವತ್ತನ್ನು ಸವಾಲಾಗಿ ಸ್ವೀಕರಿಸಿ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕೆಲಸಕ್ಕೆ ಕೈ ಹಾಕಿದಾಗ ಇದು ಅನುಭವಕ್ಕೆ ಬಂತು. ಮಂಗಳೂರಿನ ಆ ಸಮ್ಮೇಳನ ಎಲ್ಲಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಗೆಲುವು ಕಂಡಿತು. ಗೆಲುವೆಂದರೆ ಎಂಥದ್ದು? ಭಾಗವಹಿಸಿದವರು ಇಂದಿಗೂ ನೆನಪಿಸಿಕೊಂಡು ರೋಮಾಂಚಿತರಾಗುವಷ್ಟು. ನೆನಪಿರಲಿ. ಇಡಿಯ ದೇಶದಲ್ಲಿ ನಮ್ಮಷ್ಟು ಉತ್ಕಟವಾಗಿ ನಿವೇದಿತಾಳ ನೂರೈವತ್ತನೇ ಜಯಂತಿಯನ್ನು ಮೈಮೇಲೆಳೆದುಕೊಂಡು ಸಂಭ್ರಮಿಸಿದ ಸಂಘಟನೆಗಳು ಕೈ ಬೆರಳೆಣಿಕೆಯಷ್ಟಿರಬಹುದೇನೋ? ಆಕೆಯ ಹೆಸರಲ್ಲೇ ಕಟ್ಟಿದ ಸೋದರಿಯರ ಪ್ರತಿಷ್ಠಾನವಂತೂ ಈ ವರ್ಷ ಆವೇಶಕ್ಕೆ ಬಿದ್ದಂತೆ ದುಡಿಯಿತು. ಯಾದವಾಡ-ಯರಗುದ್ರಿಯಲ್ಲಿ ನಡೆದ ಬೇಸಿಗೆ ಶಿಬಿರಗಳು, ಬೆಂಗಳೂರು-ಮಂಗಳೂರಿನಲ್ಲಿ ನಡೆದ ಶಿಬಿರಗಳೆಲ್ಲ ನಿವೇದಿತಾ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮಗಳು. ಈ ಹೆಣ್ಣು ಮಕ್ಕಳಲ್ಲಿ ವಿದ್ಯುತ್ ಸಂಚಾರವಾಗಲು ಅಕ್ಕನದೇ ಅವ್ಯಕ್ತ ಪ್ರೇರಣೆ ಇರಬೇಕೇನೋ!
ನಾವು ಯಾವ ಅವಕಾಶವೂ ಬಿಟ್ಟುಕೊಟ್ಟವರಲ್ಲ. ಪ್ರೇರಣೆ ಪಡೆಯಲೆಂದು ಶಿವಾಜಿಯ ಕೋಟೆಯತ್ತ ಯಾತ್ರೆ ಹೊರಟರೆ ಅಲ್ಲಿಂದ ಸ್ವಚ್ಛ ಸ್ಮಾರಕದ ಸಂಕಲ್ಪ ಮಾಡಿಕೊಂಡು ಬಂದೆವು. ರಾಜ್ಯಾದ್ಯಂತ ಅನೇಕ ಪ್ರಾಚೀನ ಸ್ಮಾರಕಗಳನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಮತ್ತೆ ಪರಿಚಯಿಸಿದೆವು. ನವೆಂಬರ್ ಬಂದಾಗ ಕೈಲಿ ಮೊಬೈಲ್ ಹಿಡಿದು ‘ಕನ್ನಡವೇ ಸತ್ಯ’ ಟ್ವಿಟರ್ನಲ್ಲಿ ಟ್ರೆಂಡ್ ಆಗುವಂತೆ ನೋಡಿಕೊಂಡೆವು. ಎಡಚರು ಬೀಫ್ ಫೆಸ್ಟ್ ಆಯೋಜಿಸಿದಾಗ ಅದಕ್ಕೆ ವಿರುದ್ಧವಾಗಿ ಬಿಲೀಫ್ ಫೆಸ್ಟ್ ಆಯೋಜಿಸಿ ಜನರ ನಡುವೆ ವಿಶ್ವಾಸದ ಬುಗ್ಗೆ ಚಿಮ್ಮಿಸಿದೆವು. ಅನುಮಾನವೇ ಇಲ್ಲ. ನಾವು ಹಿಡಿದ ಎಲ್ಲ ಕೆಲಸವನ್ನೂ ಸಮಾಜ ತಾನೇ ಮುಂದುವರಿಸಿಕೊಂಡು ಹೋಗುತ್ತಿದೆ. ಮೊದಲೆಲ್ಲ ಸೈನಿಕರ ಕಾರ್ಯಕ್ರಮಗಳನ್ನು ಮಾಡುತ್ತಿದ್ದುದು ನಾವು ಮಾತ್ರ. ಕಾರ್ಗಿಲ್ ವಿಜಯೋತ್ಸವ, 1965 ಯುದ್ಧದ ಸ್ಮರಣೆ, ಯೋಧನಮನ ಇವೆಲ್ಲ ಊರೂರಲ್ಲೂ ಮಾಡುತ್ತಿದ್ದೆವು. ಈಗ ಸಂತರ ಪಟ್ಟಾಭಿಷೇಕ ಮಹೋತ್ಸವಕ್ಕೂ ಸೈನಿಕರ ಸನ್ಮಾನ ನಡೆಯಲಾರಂಭಿಸಿವೆ. ಕಲ್ಯಾಣಿ ಕೆಲಸ ನಾವು ಕೈಗೆತ್ತಿಕೊಂಡೆವು ಈಗ ಊರೂರಲ್ಲೂ ಈ ಕಾರ್ಯ ಭರದಿಂದ ಸಾಗಿದೆ. ನನ್ನ ಕನಸಿನ ಕನರ್ಾಟಕದ ಕಲ್ಪನೆ ಈಗ ಊರೂರಿಗೆ ಹಬ್ಬುತ್ತಿದೆ. ಪೌರ ಕಾರ್ಮಿಕರಿಗೆ ಸನ್ಮಾನ ನಡೆಯುತ್ತಿದೆ. ಎಲ್ಲವನ್ನೂ ಸದಾಕಾಲ ನಾವೇ ಮಾಡಬೇಕೆಂಬ ಹುಚ್ಚು ಬಯಕೆ ನಮಗೆ ಯಾವಾಗಲೂ ಇಲ್ಲ. ಸಂಘಟನೆಯ ಹಂಗೇ ಇಲ್ಲದೇ ಸಮಾಜದ ಕೆಲಸ ಮಾಡಬಲ್ಲ ತರುಣರು ನಿಮರ್ಾಣವಾದರೆ ನಾವು ಪಾರಾದಂತೆ. ಹಾಗೆ ಬಲವಾಗಿ ನಂಬಿದ್ದೇವೆ.
ಈ ಕಾರಣಕ್ಕೇ ಸವಾಲುಗಳನ್ನು ಸ್ವೀಕರಿಸುವಾಗ ನಮ್ಮ ಛಾತಿ ಯಾವಾಗಲೂ ಮುಂದು. ಕನಕ ನಡೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಒಮ್ಮೆ ಜೀವ ಝಲ್ಲೆನ್ನುತ್ತದೆ. ಅವತ್ತು ದಲಿತರ ಪ್ರಾಮಾಣಿಕ ಹೋರಾಟವನ್ನು ಎಡಪಂಥೀಯರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಮೊದಲು ಗುರುತಿಸಿದ್ದೇ ಯುವಾಬ್ರಿಗೇಡ್. ನಾವು ಅದನ್ನು ತಡೆಯಲೆಂದು ನಿಂತೊಡನೆ ಅದೇ ದಲಿತರ ಹೆಗಲ ಮೇಲೆ ಕೋವಿ ಇಟ್ಟು ನಮ್ಮ ಮೇಲೆ ದಾಳಿ ನಡೆಸುವ ಪ್ರಯತ್ನ ಶುರುವಾದಾಗ ನಮಗೆಲ್ಲ ದಲಿತ ವಿರೋಧಿ ಎಂಬ ಹಣೆ ಪಟ್ಟಿ ಸಿಕ್ಕಿತ್ತು. ಆ ಸವಾಲನ್ನು ಸ್ವೀಕರಿಸಿ ವಿರೋಧದ ಸಾಗರವನ್ನು ಈಜಿ ದಡ ಸೇರಿದ್ದು ಯುವಾಬ್ರಿಗೇಡಿನ ಕಿರೀಟಕ್ಕೆ ಗರಿಯೇ. ಆಮೇಲೆ ನೋಡಿ ಹಂತ ಹಂತವಾಗಿ ಎಡಪಂಥೀಯರ ಮುಖವಾಡ ಕಳಚಿ ಬಿತ್ತು. ದಲಿತರೂ ಅದರಿಂದ ದೂರವಾಗಿ ತಮ್ಮ ನ್ಯಾಯಪರ ಹೋರಾಟಕ್ಕೆ ಬದ್ಧರಾದರು. ಸಹಜವಾಗಿಯೇ ನಮಗೆಲ್ಲ ಮೊದಲಿಗಿಂತಲೂ ಹತ್ತಿರವಾದರು. ಅಂದು ಮಾತು ಕೊಟ್ಟಂತೆ ದಲಿತ ಕೇರಿಯ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಮ್ಮ ಸಂಕಲ್ಪ ಈಗ ಈಡೇರುತ್ತಿದೆ. ಯುವಾಬ್ರಿಗೇಡಿನ ವಿತ್ತಶಕ್ತಿ ಈಗ ಜಾಗೃತವಾಗುತ್ತಿದೆ! ನಮ್ಮೆಲ್ಲರ ಮನಸ್ಸು ನಿಷ್ಕಲ್ಮಶವಾಗಿರುವುದರಿಂದಲೇ ಜಾತಿಯ ಸಂಕೋಲೆ ಕಳಚೋಣ ಬನ್ನಿ ಎಂಬ ಕಾರ್ಯಕ್ರಮ ಮಾಡುವ ಸಾಹಸ ನಮಗಿರೋದು. ಜಾತಿ ಎನ್ನೋದು ಭಾರತದ ಕಾಲಿಗೆ ಕಟ್ಟಿದ ಟೈಂ ಬಾಂಬಿನಂತೆ. ಅದು ಸಿಡಿಯುವ ಮುನ್ನ ಅದನ್ನು ನಿಷ್ಕ್ರಿಯಗೊಳಿಸಬೇಕು. ಅದಕ್ಕೆ ಎದೆಗೊಟ್ಟು ನಿಲ್ಲುವವರು ಬೇಕಿತ್ತು. ಅದೊಂದು ನಾವು ಹಿಡಿದರೆ ನಮ್ಮನ್ನು ಸುಡುವ, ಬಿಟ್ಟರೆ ದೇಶವನ್ನೇ ಸುಡುವ ಬೆಂಕಿಯ ಚೆಂಡು. ನಾನು ಸುಟ್ಟು ಭಸ್ಮವಾದರೂ ಪರವಾಗಿಲ್ಲ, ದೇಶವನ್ನು ಉಳಿಸಬೇಕೆಂಬ ನಿಸ್ವಾರ್ಥ ಮನೋಭಾವದವರು ಈ ಕಾರ್ಯಕ್ಕೆ ಬೇಕಿತ್ತು. ಮತ್ತೆ ಯುವಾಬ್ರಿಗೇಡಿನ ಕಾರ್ಯಕರ್ತರು ಮುಂದೆ ಬಂದರು. ಬದಲಾವಣೆ ಅದೆಷ್ಟು ಬಂತೋ ದೇವರೇ ಬಲ್ಲ. ಆದರೆ ಚರ್ಚೆಯಂತೂ ಶುರುವಾಯ್ತು. ಬದಲಾವಣೆಯ ಮೊದಲ ಹೆಜ್ಜೆಗೆ ಧೈರ್ಯವಂತೂ ಬಂತು. ಮತ್ತೆ ಎಲ್ಲ ಶ್ರೇಯ ಕಾರ್ಯಕರ್ತರಾದ ನಿಮಗೇ!

18986682_1320257664738891_1952922832_o
ಕೆಲವೊಮ್ಮೆ ನಿಮ್ಮಂತಹ ತಮ್ಮಂದಿರ, ತಂಗಿಯರ ಪಡೆದ ನನ್ನ ಭಾಗ್ಯಕ್ಕೆ ನಾನೂ ಕರುಬುತ್ತೇನೆ. ಹಾಗಿರುವಾಗ ಬೇರೆಯವರು ಹೊಟ್ಟೆ ಉರಿಸಿಕೊಳ್ಳುವುದು ಬಲು ದೊಡ್ಡದಲ್ಲ. ನಮ್ಮ ಸಂಪರ್ಕಕ್ಕೆ ಬಂದ ಹೊರಗಿನವರು ಯುವಾಬ್ರಿಗೇಡಿನ ಕಾರ್ಯಕರ್ತರ ಕುರಿತಂತೆ ಆಡುವ ಮೆಚ್ಚುಗೆಯ ಮಾತುಗಳು ನನ್ನನ್ನು ಆಗಸದಲ್ಲಿ ತೇಲಿಸುತ್ತವೆ. ಅನೇಕ ಬಾರಿ ಒಬ್ಬನೇ ಕುಳಿತು ನಮ್ಮದು ವಿಶಾಲವಾದ ಒಂದು ಪರಿವಾರವಾಗಿಬಿಟ್ಟಿದೆಯಲ್ಲ ಅಂತ ಖುಷಿ ಪಡುತ್ತಿರುತ್ತೇನೆ. ನಿಜಕ್ಕೂ ಹೌದು. ಹೊನ್ನಾವರದ ಕಾರ್ಯಕರ್ತನೊಬ್ಬನ ಭಾವನ ಕಾರು ಶಿರಸಿಯಲ್ಲಿ ಅವಘಡಕ್ಕೆ ತುತ್ತಾದಾಗ ಅಲ್ಲಿನ ಎಲ್ಲಾ ಕೆಲಸಗಳನ್ನೂ ನೋಡಿಕೊಂಡು ಕಾದು, ಆಘಾತಕ್ಕೆ ಒಳಗಾಗಿದ್ದ ಪರಿವಾರದವರನ್ನು ಜತನದಿಂದ ಮನೆಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿದ ಶಿರಸಿಯ ಯುವಾಬ್ರಿಗೇಡಿನ ಕಾರ್ಯಕರ್ತರ್ಯಾರೂ ಅವನ ಪರಿವಾರದವರಾಗಿರಲಿಲ್ಲ. ಕಲ್ಬುರ್ಗಿಯ ಮೇಷ್ಟ್ರು ರೋಗಿಯೊಬ್ಬರಿಗೆ ರಕ್ತ ಬೇಕೆಂದು ಬೆಂಗಳೂರಿನ ಕಾರ್ಯಕರ್ತರಿಗೆ ಹೇಳಿದಾಗ ವ್ಯವಸ್ಥೆ ಮಾಡಿದವರ್ಯಾರೂ ರಕ್ತ ಸಂಬಂಧಿಗಳಾಗಿರಲಿಲ್ಲ. ಕುಷ್ಟಗಿಯ ಕಾರ್ಯಕರ್ತನ ಮಗ ಮನೆಯ ಮಾಡಿಯಿಂದ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾಗ ಅವನನ್ನು ನೋಡ ಹೋದ ಹುಬ್ಬಳ್ಳಿಯ ಕಾರ್ಯಕರ್ತರನೇಕರಿಗೆ ಅವನ ಮುಖ ಪರಿಚಯವೇ ಇರಲಿಲ್ಲ. ಸತ್ಯ ಹೇಳಿ. ಯುವಾಬ್ರಿಗೇಡ್ ಇನ್ನೇನು ಕೊಡಬೇಕು?
ಭಗವಂತ ನಮಗೆಲ್ಲ ಭರ್ಜರಿ ಊಟ ಮಾಡಿಸಿಯಾಗಿದೆ. ಇನ್ನೇನಿದ್ದರೂ ಊಟದ ನಂತರ ಬರುವ ವಿಶೇಷ ಸಿಹಿ ತಿನಿಸುಗಳಷ್ಟೇ! ಹಾಗಂತ ವಿರೋಧ ಎದುರಾಗಲಿಲ್ವಾ? ಖಂಡಿತ ಆಗಿದೆ. ಜೊತೆಗಿದ್ದವರೇ ಎದುರಿಗೆ ನಿಂತು ತೊಡೆ ತಟ್ಟಿದ ಉದಾಹರಣೆಗಳಿವೆ. ಆದರೆ ಅವರು ಹಾಗೆ ಎದುರಲ್ಲಿ ನಿಂತು ಕೂಗಾಡಿದಷ್ಟು ನಮ್ಮ ಪರಿವಾರದ ಬೆಸುಗೆ ಬಲಗೊಂಡಿದೆ. ನಾವು ಒಬ್ಬರಿಗೊಬ್ಬರು ಮತ್ತೂ ಹತ್ತಿರವಾಗಿದ್ದೇವೆ. ಅದಕ್ಕೆ ನಿಂದಿಸಿದವರನ್ನು ನಾನು ಹೆಚ್ಚು ಗೌರವಿಸೋದು. ನಮ್ಮ ಬಂಧವ ಗಟ್ಟಿ ಗೊಳಿಸುವುದಾದರೆ ಅವರ ಸಂತಾನ ಹೀಗೆ ನೂರಾಗಲಿ, ಸಾವಿರವಾಗಲಿ.
ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಹೀಗೆಯೇ ಕೈ ಹಿಡಿದು ಸಾಗೋಣ. ನಮ್ಮವರನ್ನು ಜೊತೆಗೆ ಒಯ್ಯೋಣ. ಬೇಕಿದ್ದರೆ ಕುಂಟುತ್ತ, ತೆವಳುತ್ತಲಾದರೂ ಸರಿಯೇ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತ ವಿಶ್ವಗುರುವಿನ ಪಟ್ಟದಲ್ಲಿ ತಾಯಿ ಭಾರತಿ ಆರೂಢಳಾಗುವವರೆಗೆ ನಡೆಯೋಣ. ಅದೊಂದು ಪ್ರಾರ್ಥನೆಯನ್ನು ಬಿಡದೇ ಭಗವಂತನಲ್ಲಿ ಮಾಡೋಣ.
ಮತ್ತೊಮ್ಮೆ ಮೂರು ವರ್ಷಗಳ ಈ ದೇಶಭಕ್ತಿಯ ತಿರಂಗಾ ಜಾತ್ರೆಗೆ ನಿಮಗೆಲ್ಲ ಅಭಿನಂದನೆಗಳು. ಶುಭವಾಗಲಿ.
ವಂದೇ
ಚಕ್ರವರ್ತಿ

 

Comments are closed.