ವಿಭಾಗಗಳು

ಸುದ್ದಿಪತ್ರ


 

ರೀಲ್‌ನವರು ಇನ್ನು ಸಾಕು, ರಿಯಲ್ ಹೀರೋಗಳು ಬೇಕು

ತರುಣ ಪೀಳಿಗೆ ದಿಕ್ಕು ತಪ್ಪುತ್ತಿರೋದೇ ಇಲ್ಲಿ. ಸ್ವಾರ್ಥದ ಅಧೀನರಾಗಿ, ದುಷ್ಟ ಚಟಗಳ ದಾಸರಾಗಿ ಯಾವಕಾರಣಕ್ಕೂ ಮಾದರಿಯಾಗಲು ಯೋಗ್ಯರಲ್ಲದವರನ್ನು ಅನುಸರಿಸುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದೇವಲ್ಲ ಅದೇ ದೊಡ್ಡ ಸಮಸ್ಯೆ.

ಸಂಜಯ್ ದತ್‌ಗೆ ಜೈಲು! ಸುದ್ದಿ ಕೇಳಿದಾಗ ನೆಮ್ಮದಿಯಾಯ್ತು. ದೇಶಕ್ಕೆ ಕಂಟಕವಾದವನನ್ನು ಯಾವ ಕಾಲಕ್ಕೂ ಕ್ಷಮಿಸಬಾರದೆನ್ನುವ ಸುಪ್ರೀಮ್ ಕೋರ್ಟಿನ ನಿರ್ಣಯ ಸಮಾಧಾನಕರವೇ. ಆದರೆ ನೋವೇನು ಗೊತ್ತೆ? ’ಇದಕ್ಕಿಂತ ಕಡಿಮೆ ಶಿಕ್ಷೆ ಕೊಡಲಾಗುತ್ತಿರಲಿಲ್ಲ’ ಎಂದು ಸುಪ್ರೀಮ್ ಕೋರ್ಟ್ ಗೋಳು ಹೇಳಿಕೊಂಡಿರುವುದು. ಜಗತ್ತಿನಲ್ಲೆಲ್ಲ ದೇಶದ್ರೋಹಕ್ಕೆ ಅತ್ಯುಗ್ರ ಶಿಕ್ಷೆ ವಿಧಿಸುವ ರೂಢಿ ಇದ್ದರೆ, ಭಾರತದಲ್ಲಿ ಅದನ್ನು ಅತಿ ಕನಿಷ್ಠಗೊಳಿಸುವ ಪ್ರಯತ್ನ ನಡೆದಿದೆಯಲ್ಲ, ಅದು ದುರಂತ. ಬಹುಶಃ ತೀರ್ಪು ಕೊಟ್ಟವರು ನಟ ಸಂಜಯ್ ದತ್‌ನ ಅಭಿಮಾನಿಯಾಗಿರಬಹುದೇನೋ.
ಪ್ರಶ್ನೆ ಇರೋದು ಇಲ್ಲಿಯೇ. ನಿಜವಾದ ಹೀರೋ ಯಾರು? ಮುಂಬಯ್ ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕ ಇರಿಸಿಕೊಂಡು, ಮಾವನೊಂದಿಗೆ ಮಾತಾಡುವಂತೆ ಫೋನಿನಲ್ಲಿ ಮಾತಾಡುತ್ತಾ ಚಿಕ್ಕ ಪಿಸ್ತೂಲಿನಿಂದ ಹಿಡಿದು ಎ.ಕೆ.೪೭ ವರೆಗೆ ಕೈಲಿ ಹಿಡಿದು ಓಡಾಡುವ ಹೀರೋನಾ? ಇದು ಯಾರ ಕಥೆ ಎಂದರೆ ಈ ಹೊತ್ತು ‘ಸಂಜಯ್ ದತ್ತನದು’ ಅಂತೀರೇನೋ. ಆದರೆ ಬಾಲಿವುಡ್‌ನಲ್ಲಿರುವ ಬಹುತೇಕ ಮಂದಿ ಮಾಡ್ತಿರುವುದು ಇದನ್ನೇ. ಹೀಗಾಗಿಯೇ ಹಿಂದೀ ಚಿತ್ರರಂಗವನ್ನು ಆಳುವವರು ಖಾನ್‌ಗಳು.

ಸರಳುಗಳ ಹಿಂದೆ ಸಂಜಯ್ ದತ್

ಸರಳುಗಳ ಹಿಂದೆ ಸಂಜಯ್ ದತ್

ನೆನಪಿಸಿಕೊಳ್ಳಿ. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಡುವಿನ ಪ್ರೇಮ ಪ್ರಕರಣದ ವರದಿಗಳು ಆಗೆಲ್ಲ ನಿತ್ಯ ಸುದ್ದಿಯಾಗುತ್ತಲೇ ಇದ್ದವು. ಒಂದಷ್ಟು ದಿನಗಳ ಅನಂತರ ಅವರಿಬ್ಬರ ಸಂಬಂಧ ಮುರಿದು ಬಿದ್ದ ವಿಷಯವೂ ಸುದ್ದಿಯಾಯ್ತು. ಇದಕ್ಕೆ ಕಾರಣವೇನು ಗೊತ್ತಾ? ಐಶ್ವರ್ಯಾ ರೈಳನ್ನು ಅಬು ಸಲೇಮ್‌ನ ಕಾರ್ಯಕ್ರಮಕ್ಕೆ ಹೋಗುವಂತೆ ಸಲ್ಮಾನ್ ಒತ್ತಾಯಪಡಿಸಿದ್ದ. ಆದರೆ ಐಶ್ವರ್ಯಾ ಅದನ್ನು ನಿರಾಕರಿಸಿದ್ದಳು. ಅದೊಂದು ರಾತ್ರಿ ಕುಡಿದ ಮತ್ತಿನಲ್ಲಿ ಕರೆ ಮಾಡಿದ ಸಲ್ಮಾನ್ ಸಾಹೇಬರು ಅತ್ಯಂತ ಹೀನ ಪದಗಳಲ್ಲಿ ಆಕೆಯನ್ನು ನಿಂದಿಸುತ್ತ, ತನ್ನದೊಂದು ಮಾತಿಗೆ ಅಂಡರ್‌ವಲ್ಡ್ ಧಣಿಗಳು ನಿನ್ನನ್ನು ಕೊಂದೇ ಬಿಡುವರೆಂದು ಧಮಕಿ ಹಾಕಿದ್ದ. ಕೊನೆಗೆ ಆತ, ತನಗೆ ಛೋಟಾ ಶಕೀಲ್ ಬಹಳ ಹತ್ತಿರದವನು, ಹಾಗೆಯೇ ತನ್ನ ಅಣ್ಣನಿಗೆ ದಾವೂದ್ ಸಂಪರ್ಕ ಚೆನ್ನಾಗಿದೆ ಎಂದು ಎಗರಾಡಿಕೊಂಡು ಆಡಿದ ಮಾತುಕಥೆ. ಪೊಲೀಸರ ಬಳಿ ಈಗ ಸುರಕ್ಷಿತವಾಗಿದೆ.
ಸಂಜಯ್ ದತ್‌ನದೂ ಅದೇ ಕಥೆ. ಛೋಟಾ ಶಕೀಲ್‌ನನ್ನು ಅಣ್ಣ ಎಂದು ಕರೆಯುವುದಲ್ಲದೆ, ತನಗೊಂದು ಚಿಪ್ ಕೊಡಿಸುವಂತೆ ಆತನನ್ನು ಕೇಳಿಕೊಂಡಿದ್ದಿದೆ. ಇದಕ್ಕೆ ಕೋರ್ಟ್ ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ಛೋಟಾ ಶಕೀಲ್ ಮಾತನಾಡುವ ಧಾಟಿ ಕೇಳಿಬಿಟ್ಟರೆ, ಸಂಜಯ್ ದತ್ ಮತ್ತು ಆತನ ನಡುವೆ ಇರುವ ಸಂಬಂಧ ಎತ್ತದ್ದೆಂದು ಊಹಿಸಿ ಗಾಬರಿಯಾಗಿಬಿಡುತ್ತದೆ.
ಈಚೀಚೆಗಂತೂ ಬಾಲಿವುಡ್ ಹೀರೋಗಳು, ನಿರ್ಮಾಪಕರು ಕುಣಿಯೋದೇ ಈ ಭೂಗತ ದೊರೆಗಳ ತಾಳಕ್ಕೆ. ಹಿಂದೆಲ್ಲಾ ಹೀಗಿರಲಿಲ್ಲ. ತೊಂಭತ್ತರ ದಶಕದಲ್ಲಿ ಸಿನಿಮಾ ರಂಗದ ನಟ ಭಯಂಕರರು ಹಾಗೂ ನಿರ್ದೇಶಕ, ನಿರ್ಮಾಪಕರು ವಿದೇಶಗಳಲ್ಲಿ ಈ ಮಂದಿ ಏರ್ಪಡಿಸುವ ಔತಣ ಕೂಟಗಳಲ್ಲಿ ಭಾಗವಹಿಸಿ ಕುಡಿದು, ಕುಣಿದು ಬರುತ್ತಿದ್ದರು ಅಷ್ಟೆ. ಅಲ್ಲಿ ದೊರೆಯುವ ವೈಭವದ ಆತಿಥ್ಯಕ್ಕೆ ಮರುಳಾಗಿ ಬಿಡುತ್ತಿದ್ದರು. ಬರಬರುತ್ತಾ ಭೂಗತ ದೊರೆಗಳಿಗೆ ಸಿನಿಮಾ ತಾರೆಯರನ್ನು ಕರೆಸಿ ಕುಣಿಸುವುದು ಗ್ಯಾಂಗ್‌ಸ್ಟರ್‌ಗಳಿಗೆ ಒಂದು ಬಗೆಯ ಫ್ಯಾಷನ್ ಆಗಿ ಹೋಯಿತು. ಕಾಲಕ್ರಮೇಣ ಈ ಬಾಂಧವ್ಯ ಗಟ್ಟಿಯಾಗುತ್ತ ಹೋಯ್ತು. ಅಲ್ಲಿಂದಾಚೆ ಅದು ಹಣಕಾಸಿನ ವ್ಯವಹಾರಕ್ಕೆ ತಿರುಗಿತು. ಬಾಲಿವುಡ್ ಸಿನಿಮಾಗಳು ನಿರಂತರ ಸೋಲುವುದನ್ನು ನೋಡಿ ಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿಬಿಟ್ಟವು. ಇದರಿಂದಾಗಿ ನಿರ್ಮಾಪಕರು ಈ ಭೂಗತ ಧಣಿಗಳಿಗೆ ಅಡ್ಡ ಬೀಳಲೇಬೇಕಾಗಿ ಬಂತು. ಹಣ ಕೊಟ್ಟವನ ಆಜ್ಞೆಯನ್ನೂ ಪಾಲಿಸಬೇಕಾಯ್ತು. ಒಂದು ಚಿತ್ರಕ್ಕೆ ನಾಯಕ ಯಾರಾಗಬೇಕೆಂಬುದನ್ನೂ ಮಾಫಿಯಾ ಡಾನ್‌ಗಳು ನಿರ್ಧರಿಸುವಂತಾಯಿತು. ಹೀಗಾಗಿಯೇ ಈ ಡಾನ್‌ಗಳಿಗೆ ಹತ್ತಿರವಾಗಲು ಪೈಪೋಟಿಯೂ ಶುರುವಾಯ್ತು. ತಮ್ಮ ಗೆಳೆತನ ಗಟ್ಟಿ ಮಾಡಿಕೊಳ್ಳಲೆಂದೇ ಅವರ ಅಕ್ರಮಗಳಿಗೂ ಜೊತೆಯಾದರು. ಹೀಗೆ, ನಾವು ಆರಾಧಿಸುವ ಹೀರೋಗಳೇ ದೇಶದ ಬೆನ್ನಿಗೆ ಚೂರಿ ಇರಿವ ದ್ರೋಹಿಗಳಾಗಿಬಿಟ್ಟರು.
ಕ್ರಮೇಣ ಡಾನ್‌ಗಳು ಆದೇಶ ನೀಡಲು ಶುರು ಮಾಡಿದರು. ೧೯೯೭ರಲ್ಲಿ ಮುಖೇಶ್ ದುಗ್ಗಲ್ ಮಾತು ಕೇಳದಿದ್ದುದಕ್ಕೆ ಅವನನ್ನು ಕೊಂದೇಬಿಡಲಾಯಿತು. ಕಹೋ ನಾ ಪ್ಯಾರ್ ಹೈ ಅಂತಹ ಜನಮೆಚ್ಚುಗೆಯ ಚಿತ್ರದ ನಂತರ ತಾನು ಹೇಳಿದ ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಹೃತಿಕ್ ರೋಷನ್ ಮೇಲೆ ಕೊಲೆಯ ಪ್ರಯತ್ನ ನಡೆಸಲಾಗಿದ್ದನ್ನು ಮರೆಯಲಾದೀತೆ? ಹೀಗಾಗಿಯೇ ಮೊದಲ ಚಿತ್ರದಲ್ಲಿ ಸಾಕಷ್ಟು ಭರವಸೆ ಉಳಿಸಿದ್ದರೂ ಹೃತಿಕ್ ಅನಂತರದಲ್ಲಿ ಆ ಎತ್ತರದಲ್ಲಿ ಉಳಿಯಲು ಸಾಧ್ಯವೇ ಆಗಲಿಲ್ಲ. ಮನೀಷಾ ಕೊಯ್ರಾಲಾಳ ಆಪ್ತಕಾರ್ಯದರ್ಶಿಯ ಸಾವಿಗೂ, ಗೋವಿಂದ್, ಕರಣ್ ಜೋಹರ್ ಹಿಂದೆ ಮುಂದೆ ಪೊಲೀಸರು ಗನ್ ಹಿಡಿದು ನಿಲ್ಲುವುದಕ್ಕೂ ಇದೇ ಕಾರಣ.
ದೇವದಾಸ್ ಸಿನಿಮಾ ನೆನಪಿಸಿಕೊಳ್ಳಿ. ಶತಕೋಟಿ ರೂಪಾಯಿಗಳಷ್ಟು ವೆಚ್ಚದ ಈ ಚಿತ್ರ ನಿರ್ಮಾಣಕ್ಕೆ ಹಣ ಹಾಕಿದ್ದು ನಾವೇ ಅಂತ ಛೋಟಾ ಶಕೀಲ ಮತ್ತು ಅಬು ಸಲೇಮ್ ಇಬ್ಬರೂ ಹೇಳಿಕೊಂಡ ಮೇಲೆ ನಿರ್ಮಾಪಕ ಭರತ್ ಶಾ ಗಾಬರಿಯಾಗಿ, ಕೊನೆಗೆ ಜೈಲಿಗೂ ಹೋಗಿಬಂದರು. ಆಮೇಲೆ ಅವರ ಬಿಡುಗಡೆಯೂ ಆಯ್ತು. ಈ ಬಾರಿ ಸಂಜಯ್‌ದತ್ ಒಳಹೋಗುವ ತಯಾರಿ ನಡೆಸಿದ್ದಾನೆ. ಚೊಟಾ ಶಕೀಲ್‌ನ ಮೊಬೈಲ್‌ನ ಸ್ಪೀಡ್ ಡಯಲ್ ನಂಬರ್ ಒತ್ತಿದರೆ ಅದು ಸಂಜಯ್ ದತ್‌ಗೆ ಹೋಗುತ್ತಿತ್ತೆಂದು ಕೇಳಿದ ಇಂಟೆಲಿಜೆನ್ಸ್ ಅಧಿಕಾರಿಗಳೇ ಗಾಬರಿಯಾಗಿದ್ದರು ಅಂದಮೇಲೆ ಪರಿಸ್ಥಿತಿ ಎಷ್ಟು ಗಂಭೀರವೆಂದು ಊಹಿಸಿ. ಈಗ ಐದು ವರ್ಷಗಳ ಶಿಕ್ಷೆ ಘೋಷಣೆಯಾಗಿದೆ. ಆದರೆ ಅದಾಗಲೇ ಸಂಜಯ್ ದತ್ ಜೈಲಿನಲ್ಲಿ ಒಂದೂವರೆ ವರ್ಷ ಕಾಲ ಕಳೆದಾಗಿದೆ. ಇನ್ನು ಬಾಕಿ ಇರುವುದು ಮೂರೂ ವರೆ ವರ್ಷಗಳು ಮಾತ್ರ. ತುಂಬ ತಲೆ ಕೆಡಿಸಿಕೊಳ್ಳಬೇಕಿಲ್ಲ.
ಈ ದಿನ ತಲೆ ಕೆಡಿಸಿಕೊಳ್ಳಬೇಕಾದ ವಿಷಯವೊಂದಿದೆ. ಅದು, ರಿಯಲ್ ಹೀರೋಗಳ ಕುರಿತಾದ್ದು. ಇಂದಿಗೆ ಸರಿಯಾಗಿ ಎಂಬತ್ತೆರಡು ವರ್ಷಗಳ ಹಿಂದೆ ಭಗತ್ ಸಿಂಗ್, ರಾಜ ಗುರು, ಸುಖ ದೇವರು ಬ್ರಿಟಿಷ್ ಸರ್ವಾಧಿಕಾರಕ್ಕೆ ಎದೆ ಕೊಟ್ಟು ನಿಂತು ಹೋರಾಡಿದ್ದಕ್ಕಾಗಿ ನೇಣಿಗೇರಿದ್ದರು. ಸಂಜಯ್‌ದತ್‌ನ ಕೇಸಿಗೂ ಈ ಘಟನೆಗೂ ಹೋಲಿಕೆಯಿದೆ. ಇಬ್ಬರೂ ಬಾಂಬ್‌ಗಳನ್ನು, ಮದ್ದುಗುಂಡುಗಳನ್ನು ಶೇಖರಿಸಿಟ್ಟುಕೊಂಡವರೇ. ಭಗತ್‌ನಿಗೆ ವಿದೇಶೀ ಕ್ರಾಂತಿಕಾರಿಗಳ ಸಂಪರ್ಕವಿತ್ತು, ಸಂಜಯ್‌ಗೆ ಮಾಫಿಯಾ ಡಾನ್‌ಗಳದ್ದು. ಭಗತ್ ಮತ್ತು ಸಾಥಿಗಳು ದೇಶದ ಗೌರವ ರಕ್ಷಣೆಗೆ ಹೋರಾಡಿದರು. ಸಂಜಯ್‌ದತ್ ದೇಶಕ್ಕೆ ಮಾರಕನಾದ. ಭಗತ್ ಸಿಂಗ್ ತನ್ನ ವಿಚಾರ ಮಂಡಿಸಲು ಸ್ವತಃ ತಾನೇ ಶರಣಾದ. ಸಂಜಯ್ ದತ್, ತನ್ನ ಅಭಿಮಾನಿಗಳನ್ನು ತೊರಿಸಿ ಬಿಟ್ಟುಬಿಡಿರೆಂದು ಗೋಗರೆದ.

ನಿಜವಾದ ನಾಯಕರಿವರು

ನಿಜವಾದ ನಾಯಕರಿವರು

ಛಿ! ನಾವು ಯಾರ ಅಭಿಮಾನಿಗಳು ಹೇಳಿ? ಏಳನೇ ವಯಸ್ಸಿಗೇ ಬಂದೂಕಿನ ಬೀಜ ಬಿತ್ತಿ ಬಂದೂಕಿನ ಬೆಳೆ ಬೆಳೆಯುತ್ತೇನೆಂದ, ಇಪ್ಪತ್ನಾಲ್ಕನೆಯ ವಯಸ್ಸಿಗೇ ಬ್ರಿಟಿಷರೆದುರು ನಿಂತು ತನ್ನ ದೇಶದ ಸ್ವಾತಂತ್ರ್ಯದ ಇಚ್ಛೆಯನ್ನು ವ್ಯಕ್ತಪಡಿಸಿದ ಭಗತ್ ಸಿಂಗನೋ, ಅಥವಾ ೧೯೯೩ರ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣನಾದ ಸಂಜಯ್ ದತ್ತನೋ? ಎದೆ ಮುಟ್ಟಿಕೊಂಡು ಹೇಳಿ.
ಸಾಹಸಿಗ- ಭಾವುಕ ರಾಜ್‌ಗುರು, ತನ್ನ ನಿಖರ ಗುರಿಗಾರಿಕೆಯಿಂದ ಆಂಗ್ಲರನ್ನು ಬಲಿ ತೆಗೆದುಕೊಂಡು ಆದಷ್ಟು ಬೇಗ ನೇಣಿಗೇರಬಯಸಿದ್ದನಲ್ಲ; ತಾನೊಮ್ಮೆ ಚಪಾತಿ ಮಾಡುವಾಗ, ಕಾದ ಸೌಟನ್ನು ಎದೆಯ ಮೇಲಿಟ್ಟುಕೊಂಡು ‘ಆಹಾ! ಬ್ರಿಟಿಷರು ಕೊಡುವ ನೋವನ್ನು ನಾನು ಸಹಿಸಿಕೊಳ್ಳಬಲ್ಲೆ’ ಎಂದು ಕುಣಿದಾಡಿದನಲ್ಲ, ಹೀರೋ ಅವನಾ ಅಥವಾ ಹಣ ಕೊಟ್ಟರೆ ಎದೆ ತೋರಿಸುವ ಸಲ್ಮಾನ್ ಖಾನನಾ? ಹೇಳಿ….
ಗೆಳೆಯರೊಳಗಿನ ದೇಶಭಕ್ತಿಯನ್ನು ತನ್ನ ಕಟು ಮಾತುಗಳಿಂದ ಕೆಣಕುತ್ತಾ ಯೋಜನೆ ರೂಪಿಸುವಲ್ಲಿ ಪಾದರಸದಂತಿದ್ದ ಸುಖ ದೇವ್ ಹೀರೋನಾ? ಅಥವಾ ಮೈದಾನದಲ್ಲಿ ಕುಡಿದುಕೊಂಡು ಸಿಗರೇಟ್ ಸೇದುತ್ತಾ ಪೊಲೀಸರ ಮೇಲೆ ಏರಿಹೋದ ಶಾರುಖ್ ಖಾನ್ ಹೀರೋನಾ? ಹೇಳಿ ಹೇಳಿ…
ತರುಣ ಪೀಳಿಗೆ ದಿಕ್ಕು ತಪ್ಪುತ್ತಿರೋದೇ ಇಲ್ಲಿ. ಸ್ವಾರ್ಥದ ಅಧೀನರಾಗಿ, ದುಷ್ಟ ಚಟಗಳ ದಾಸರಾಗಿ ಯಾವಕಾರಣಕ್ಕೂ ಮಾದರಿಯಾಗಲು ಯೋಗ್ಯರಲ್ಲದವರನ್ನು ಅನುಸರಿಸುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದೇವಲ್ಲ ಅದೇ ದೊಡ್ಡ ಸಮಸ್ಯೆ. ಭಗತ್ ಸಿಂಗ್‌ಗೆ ಪ್ರೇರಣೆ ನೀಡಿದ್ದು ಸಿನಿಮಾ ನಟನಲ್ಲ, ಕರ್ತಾರ್ ಸಿಂಗ್ ಸರಾಭಾ. ತನ್ನ ಹದಿನಾರನೇ ವಯಸ್ಸಿಗೇ ನೇಣುಗಂಬವೇರಿದವನು ಅವನು. ಹೀರೋ ಯಾವಾಗಲೂ ಹಾಗೆಯೇ. ತಾನು ಬದುಕುತ್ತಾನೆ, ಅಗತ್ಯ ಬಂದಾಗ ಬೇರೆಯವರು ಬದುಕಲೆಂದು ಪ್ರಾಣವನ್ನು ಅರ್ಪಿಸುತ್ತಾನೆ. ಇಂದಿನ ಈ ಮಹಾನುಭಾವರು ತಾವು ಬದುಕಲೆಂದು ಇತರರ ಜೀವ ತೆಗೆಯುತ್ತಾರೆ. ಇವರು ಯಾವಲೆಕ್ಕಕ್ಕೆ ಹೀರೋಗಳು ಹೇಳಿ? ಇವರನ್ನೇ ಆರಾಧಿಸುತ್ತಾ ಇವರ ತಾಳಕ್ಕೆ ನರ್ತಿಸುತ್ತ, ಬದುಕನ್ನು ಬರಡಾಗಿಸಿಕೊಳ್ಳುವವರ ಬಗ್ಗೆ ಏನು ಹೇಳೋದು ಹೇಳೀ..
ದೇಶದ ಪ್ರಶ್ನೆ ಬಂದಾಗ ನಾನೂ ಇಲ್ಲ, ನೀವೂ ಇಲ್ಲ. ನಾವು ಕಂಟಕರೆಂದು ಸಾಬೀತಾದರೆ ಶಿಕ್ಷೆ ಅನುಭವಿಸಲೇಬೇಕು. ಹೀಗಿರುವಾಗ ಸಂಜಯ್‌ದತ್ ಯಾವ ಲೆಕ್ಕ?
ನಾವಿಂದು ಕನ್ಣಿರು ಸುರಿಸಬೇಕಿರೋದು ತಪ್ಪಿತಸ್ಥನಾಗಿರುವ ಈ ರೀಲ್ ಹಿರೋಗಾಗಿ ಅಲ್ಲ. ಇಂದಿಗೆ ಎಂಬತ್ತೆರಡು ವರ್ಷಗಳಷ್ಟು ಹಿಂದೆ ಬಲಿದಾನಗೈದ ಆ ಮೂರು ಮಹಾಸಾಧಕರಿಗಾಗಿ.
ಜೈ ಹಿಂದ್!

Comments are closed.