ವಿಭಾಗಗಳು

ಸುದ್ದಿಪತ್ರ


 

ವಾಲ್‌ಮಾರ್ಟ್‌ ಹಿನ್ನೆಲೆ, ಹುನ್ನಾರ

ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿಗರ ಅಬ್ಬರದ ಕುರಿತು ಕೇಳೀಕೇಳೀ ಬೇಸರ ಬಂದುಬಿಟ್ಟಿದೆಯಲ್ಲವೆ? ಎಷ್ಟೆಲ್ಲ ಮಾತುಗಳು, ಚರ್ಚೆಗಳು, ಸಿದ್ಧಾಂತಗಳು, ಪ್ರತಿವಾದಗಳು! ಈ ವಿಚಾರದ ಸೂಕ್ಷ್ಮತೆ ಅದೆಷ್ಟೆಂದರೆ, ದೇಶ ಹೊತ್ತುರಿಯುವಾಗಲೂ ಮೂಗಿನ ಮೇಲೆ ಬೆರಳಿಟ್ಟಿದ್ದ ಮನಮೋಹನ ಸಿಂಗರು ಈ ಗಲಾಟೆಯಲ್ಲಿ ಬಾಯ್ದೆರೆದರು. ಶತಾಯಗತಾಯ ವಾಲ್‌ಮಾರ್ಟ್‌ನಂತಹ ಚಿಲ್ಲರೆ (?) ಕಂಪನಿಗಳಿಗೆ ಅವಕಾಶ ಮಾಡಿಯೇಕೊಡುತ್ತೇನೆ ಎಂದರು.
ದೇಶ ಸ್ವಾತಂತ್ರ್ಯ ಕಂಡ ಆರಂಭದಿಂದಲೂ ಹೀಗೆಯೇ. ನಮಗೆ ಬೇಡವಾದುದಿರಲಿ, ಜಗತ್ತಿನಲ್ಲಿ ಯಾರಿಗೂ ಬೇಡವಾದುದನ್ನೆಲ್ಲ ಇಲ್ಲಿಗೆ ತಂದು ಸುರಿಯುತ್ತಾರೆ. ಇದು ಮೊದಲ ಪ್ರಧಾನಿಯಿಂದ ಹಿಡಿದು ಎಂಡೋಸಲ್ಫಾನಿನವರೆಗೆ, ಎಲ್ಲರಿಗೆ, ಎಲ್ಲದಕ್ಕೆ ಅನ್ವಯವಾಗುವಂಥದ್ದು. ಜಗತ್ತಿನೆಲ್ಲೆಡೆ ನಿಷೇಧಗೊಳ್ಳುವ ಔಷಧಗಳಿಗೆ ನಾವು ಸೂಕ್ತ ಮಾರುಕಟ್ಟೆಯಿದ್ದಂತೆ. ಜರ್ಝರಿತಗೊಂಡ ತಂತ್ರಜ್ಞಾನಕ್ಕೆ ನಾವು ಬಳಕೆದಾರರು. ಈಗ ಅಮೆರಿಕೆಯಲ್ಲಿಯೇ ಹರತಾಳಗಳ ಹಬ್ಬ ಆಚರಿಸಿಕೊಳ್ಳುತ್ತಿರುವ ವಾಲ್‌ಮಾರ್ಟ್‌ಗೆ ನಾವು ಕೆಂಪು ಹಾಸಿನ ಸ್ವಾಗತ ಕೋರುತ್ತಿದ್ದೇವೆ, ನಮ್ಮ ಬುದ್ಧಿಮತ್ತೆಗೆ ಏನೆನ್ನೋಣ!

wallmart sucks

ಹೋಗಲಿ. ಎಂದಾದರೂ ವಿದೇಶೀ ಬಂಡವಾಳದ ಕಥನದ ಆಳಕ್ಕೆ ಇಳಿದಿದ್ದೀರಾ? ಇದುವರೆಗೂ ಬಂಡವಾಳ ತರುತ್ತೇವೆ ಎಂದವರೆಲ್ಲ ಈ ದೇಶದಿಂದ ಹತ್ತಾರು ಪಟ್ಟು ಹಣ ಲಾಭ ಮಾಡಿಕೊಂಡು ಹೋಗಿದ್ದಾರೆಯೇ ಹೊರತು, ತಂದದ್ದು ಅಲ್ಪವೇ. ಈ ದೇಶದಲ್ಲಿ ಹೂಡಿಕೆಯಾಗುವ ಒಟ್ಟು ಬಂಡವಾಳದ ತೊಂಭತ್ತೇಳು ಪ್ರತಿಶತ ನಮ್ಮಿಂದಲೇ. ಉಳಿದ ಮೂರರಷ್ಟು ಮಾತ್ರ ಹೊರಗಿನವರ ಕೃಪೆ! ಈ ಪ್ರಮಾಣಕ್ಕಾಗಿ ನಾವು ಒತ್ತೆಯಿಡುವುದೇನನ್ನು ಗೊತ್ತೆ? ನಮ್ಮ ನೆಲ-ಜಲ-ಪರಿಸರ ಎಲ್ಲವನ್ನೂ. ಅನೇಕ ಕಂಪನಿಗಳಂತೂ ಬಂಡವಾಳ ತಂದು ಮಾಡಿರುವ ಉಪಕಾರಕ್ಕೆ ನಮ್ಮ ಸರ್ಕಾರಗಳು ತೆರಿಗೆ ಕೂಡ ಮನ್ನಾ ಮಾಡಿವೆ. ಎಲ್ಲವನ್ನೂ ಉಚಿತವಾಗಿ ಪಡೆದು, ತೆರಿಗೆ ಕೂಡ ಕಟ್ಟಬೇಕಿಲ್ಲದ ವಿದೇಶಿಯೊಂದಿಗೆ, ಎಲ್ಲಕ್ಕೂ ಸ್ವಂತ ಹಣ ಹಾಕಿ, ಅಧಿಕಾರಿಗಳ ನಡುವೆ ನುಜ್ಜುಗುಜ್ಜಾಗಿರುವ ಸ್ವದೇಶೀಯನ ಪೈಪೋಟಿ. ಹೇಗಿದೆ ವರಸೆ? ಗೆಲ್ಲಬೇಕೆಂದರೂ ಗೆಲ್ಲುವುದು ಹೇಗೆ?
ಇಂತಹ ಸರಹೊತ್ತಲ್ಲಿ ಚಿಲ್ಲರೆ ಕ್ಷೇತ್ರಕ್ಕೆ ವಿದೇಶೀಗರನ್ನು ಕರೆದು ನಮ್ಮವರನ್ನು ಬಡಿದಾಡಿರೆಂದು ನಿಲ್ಲಿಸಿದರೆ ಹೋರಾಡುವುದಾದರೂ ಹೇಗೆ? ಇಷ್ಟಕ್ಕೂ ಕೃಷಿಯನ್ನು ಬಿಟ್ಟರೆ ನಮಗಿರುವ ಉದ್ಯೋಗ ಸೃಷ್ಟಿಯ ಏಕೈಕ ಸ್ರೋತ ಚಿಲ್ಲರೆ ಅಂಗಡಿಗಳು. ಮದುವೆಯಾಗುವ ಮುನ್ನ ಸ್ವಂತ ಉದ್ಯೋಗದ ಹುಡುಗ ಏನು ಮಾಡುತ್ತಾನೆಂದು ಹುಡುಗಿಯ ಕಡೆಯವರು ಕೇಳಿದರೆ ಅವನು ಕೊಡಬಹುದಾದ ಉತ್ತರ ಎರಡೇ. ಒಂದು, ಚಿಲ್ಲರೆ ಅಂಗಡಿ ನಡೆಸುತ್ತಾನೆನ್ನುವುದು, ಮತ್ತೊಂದು ಆಟೋ ಓಡಿಸುತ್ತಾನೆನ್ನುವುದು ಮಾತ್ರ. ಬದುಕಿಗೆ ಭಂಗ ತಾರದ ಎರಡು ಉದ್ಯೋಗಗಳವು. ಈ ಕ್ಷೇತ್ರಗಳಲ್ಲಿ ಪ್ರತಿಶತ ನೂರರಷ್ಟು ಬಂಡವಾಳ ನಮ್ಮದೇ. ಅಪ್ಪನ ಪಿ.ಎಫ್.ಹಣ, ಅಮ್ಮನ ಒಡವೆ, ಬಂಧು ಬಳಗದವರ ಬ್ಯಾಂಕ್ ಬ್ಯಾಲೆನ್ಸ್‌ಗಳೆಲ್ಲ ಇಲ್ಲಿ ಬಂಡವಾಳವಾಗುತ್ತವೆ. ಈ ರೀತಿಯ ಕೌಟುಂಬಿಕ ವ್ಯವಸ್ಥೆ ರಚನೆಯಾಗಿರುವುದರಿಂದಲೇ ಈ ದೇಶಕ್ಕೆ ವಿದೇಶೀ ಬಂಡವಾಳದ ಜರೂರತ್ತೇ ಇಲ್ಲ. ಅದು ಬರಬೇಕೆಂಬ ಹಠವಿದ್ದರೆ ಸಾಮಾನ್ಯರು ಯೋಚಿಸಲಾಗದ ಬೃಹತ್ ಕ್ಷೇತ್ರಕ್ಕೆ ಅದನ್ನು ಆಹ್ವಾನಿಸಬಹುದೇ ಹೊರತು, ನಮ್ಮ ಹೋರಾಟದ ಮನೋಭಾವವನ್ನು ಜೀವಂತವಾಗಿರಿಸಿರುವ ಕ್ಷೇತ್ರಕ್ಕಲ್ಲ.
ಇಷ್ಟೆಲ್ಲ ಗೊತ್ತಿದ್ದಾಗ್ಯೂ ವಾಲ್‌ಮಾರ್ಟ್‌ಗಾಗಿ ಕಾದಾಟವೇಕೆ? ಅದೊಂದು ದೈತ್ಯ ಕಂಪನಿ. ಜಗತ್ತಿನ ಅತಿದೊಡ್ಡ ಚಿಲ್ಲರೆ ಕಂಪನಿ. ಜಗತ್ತಿನಲ್ಲಿಯೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಖಾಸಗಿ ಕಂಪನಿ. ಇಂದು ೧೫ ರಾಷ್ಟ್ರಗಳಲ್ಲಿ ೮,೫೦೦ ಬೃಹತ್ ಮಳಿಗೆಗಳ ಮೂಲಕ ತನ್ನ ಬಾಹುಗಳನ್ನು ವಿಸ್ತರಿಸಿರುವ ಕಂಪನಿ. ಅನೇಕ ರಾಷ್ಟ್ರಗಳ ವಾರ್ಷಿಕ ಉತ್ಪನ್ನಕ್ಕಿಂತಲೂ ಹೆಚ್ಚಿನ ಲಾಭ ಹೊಂದಿರುವ ಕಂಪನಿ! ಎಲ್ಲ ಬಿಡಿ. ರಾಷ್ಟ್ರಗಳ ನಾಯಕರನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೆರಿಕಾದ ದೈತ್ಯ ಇದು.
ಒಬ್ಬ ಸಾಮಾನ್ಯ ಉದ್ಯಮಿ ಸ್ಯಾಮ್ ವಾಲ್ಟನ್ ಶುರು ಮಾಡಿದ ಸಂಸ್ಥೆ ಇದು. ೧೯೬೨ರಲ್ಲಿ ಮೊದಲ ಮಳಿಗೆಯನ್ನು ನಗರದಿಂದ ಸ್ವಲ್ಪ ದೂರದಲ್ಲಿಯೇ ಆರಂಭಿಸಿದ. ಅದಾಗಲೇ ನಗರದಲ್ಲಿ ಬೇರೂರಿದ್ದವರೊಂದಿಗೆ ಕಾದಾಟ ನಡೆಸಿ ಸೋಲುವ ಬದಲು ಹಳ್ಳಿಗಳ ಸಣ್ಣ ಸಣ್ಣ ಅಂಗಡಿಗಳನ್ನು ಮುಚ್ಚಿಸೋಣವೆಂಬುದು ವಾಲ್ಟನ್‌ನ ಯೋಚನೆಯಾಗಿತ್ತು. ಊರ ಹೊರಭಾಗದ ದೊಡ್ಡ ಜಮೀನಿನಲ್ಲಿ ಅಂಗಡಿ ತೆರೆದು, ದುನಿಯಾದ ಎಲ್ಲ ವಸ್ತುಗಳನ್ನು ಅಲ್ಲಿ ಗುಡ್ಡೆ ಹಾಕೋದು. ಕಡಿಮೆ ಬೆಲೆಗೆ ಮಾರುವ ಪ್ರಚಾರ ಮಾಡಿ ಜನರನ್ನು ಸೆಳೆಯೋದು. ಒಮ್ಮೆ ಬಂದವರನ್ನು ಮರಳು ಮಾಡಿ ಮತ್ತೆ ಮತ್ತೆ ಬರುವಂತೆ ಮಾಡುವುದು. ಇವಿಷ್ಟೂ ಅವನ ವ್ಯಾಪಾರದ ವರಸೆ. ಬಲುಬೇಗ ವಾಲ್ಟನ್ ತಳವೂರಿದ. ಅವನ ಬುಡ ಭದ್ರವಾದಂತೆ ಹಳ್ಳಿಯ ಅಂಗಡಿಗಳು ಒಂದೊಂದಾಗಿ ಬಾಗಿಲು ಮುಚ್ಚಿದವು. ವಾಲ್‌ಮಾರ್ಟ್ ಈಗ ಮತ್ತೊಂದು ಅಂಗಡಿ ತೆರೆಯಲು ಸಜ್ಜಾಯ್ತು. ನೋಡನೋಡುತ್ತಲೆ ವಾಲ್ಟನ್‌ನ ಸಾಮ್ರಾಜ್ಯ ಬೆಳೆದುನಿಂತಿತು. ನಗರದ ಹೊರವಲಯದಲ್ಲಿ ಅಂಗಡಿ ತೆರೆದು ಟ್ರಾಫಿಕ್ ಕಿರಿಕಿರಿ ಬಿಡಿ; ನೆಮ್ಮದಿಯಿಂದ ಖರೀದಿ ಮಾಡಿಅನ್ನೋದೇ ಜಾಹೀರಾತಾಯ್ತು. ಅಮೆರಿಕನ್ನರು ಮರುಳಾದರು. ವಾಲ್‌ಮಾರ್ಟ್ ಅಮೆರಿಕೆಯ ಸಂಕೇತಗಳಲ್ಲೊಂದಾಯ್ತು.
ಒಮ್ಮೆ ಜನತೆಗೆ ಅನಿವಾರ್ಯ ಎಂದಾದೊಡನೆ ವಾಲ್ಟನ್‌ನ ಗುಂಪು ತನಗಿಷ್ಟಬಂದಂತೆ ಬಳುಕಲಾರಂಭಿಸಿತು. ಕೆಲಸಗಾರರು ಅತಿ ಕಡಿಮೆ ಸಂಬಳಕ್ಕೆ ಹೆಚ್ಚು ಕಾಲ ದುಡಿಯಬೇಕಾಯ್ತು. ನೌಕರರ ಸಂಘಕ್ಕೆ ವಾಲ್‌ಮಾರ್ಟ್‌ನಲ್ಲಿ ಅವಕಾಶವಿಲ್ಲದಂತಾಯ್ತು. ಬರುವ ಹಣ ಮನೆ ನಿರ್ವಹಣೆಗೇ ಸಾಲದೆಹೋದುದರಿಂದ ನೌಕರ ವಿಮೆ ಕಟ್ಟುವುದನ್ನು ನಿಲ್ಲಿಸಿದ. ವಾಲ್‌ಮಾರ್ಟ್ ಈ ನೌಕರರಿಗೆ ವಿಶೇಷ ತರಬೇತಿ ಕೊಟ್ಟು ಸರ್ಕಾರದ ಸಹಾಯ ಪಡೆಯುವ ವಾಮ ಮಾರ್ಗಗಳ ಬೋಧನೆ ಮಾಡಿತು. ತಾನೇ ಪ್ರಭಾವ ಬೀರಿ, ಸರ್ಕಾರದ ಹಣದಲ್ಲಿ ತನ್ನ ನೌಕರರ ಆರೋಗ್ಯದ ಖರ್ಚುವೆಚ್ಚಗಳು ನಿಭಾವಣೆಯಾಗುವಂತೆ ನೋಡಿಕೊಂಡಿತು. ಅಮೆರಿಕನ್ನರು ತಡವಾಗಿಯಾದರೂ ಎದ್ದರು. ವಾಲ್‌ಮಾರ್ಟ್‌ನಲ್ಲಿ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡದ್ದು ನಿಜ. ಆದರೆ ಸರ್ಕಾರ ವಾಲ್‌ಮಾರ್ಟ್ ನೌಕರರಿಗೆ ಮಾಡುವ ವೆಚ್ಚ ತನ್ನ ತೆರಿಗೆಯದ್ದೆಂದು ಲೆಕ್ಕ ಹಾಕಿದರೆ, ಒಟ್ಟಾರೆ ಕೊಳ್ಳುವಿಕೆ ತುಟ್ಟಿಯೇ ಆಯ್ತೆನ್ನುವುದು ಗೋಚರವಾಯ್ತು. ಅಲ್‌ನಾರ್ಮನ್ ತಿರುಗಿಬಿದ್ದ. ಅವನು, ತನ್ನ ಸ್ಪ್ರಾಲ್ ಬೂಸ್ಟರ್ ಸಂಸ್ಥೆಯ ಮೂಲಕ ವಾಲ್‌ಮಾರ್ಟ್‌ನ ಬಣ್ಣ ಬಯಲಿಗೆಳೆಯತೊಡಗಿದ. ಶುರುವಾದಾಗಿನಿಂದ ೩೦ ವರ್ಷಗಳ ಕಾಲ ಅನಭಿಷಿಕ್ತ ದೊರೆಯಾಗಿ ಮೆರೆದ ವಾಲ್‌ಮಾರ್ಟ್ ಈಗ ಜಾಗೃತ ಜನರ ಪ್ರತಿರೋಧ ಎದುರಿಸತೊಡಗಿತು. ೧೯೯೩ರಲ್ಲಿ ಮೊದಲ ಬಾರಿಗೆ ಮೆಸಾಚುಸ್ಸೆಟ್ಸ್‌ನ ಗ್ರೀನ್‌ಫೀಲ್ಡ್‌ನಲ್ಲಿ ವಾಲ್‌ಮಾರ್ಟ್‌ಗೆ ಅನುಮತಿ ನಿರಾಕರಿಸಲಾಯ್ತು. ಅಲ್ಲಿಂದಾಚೆಗೆ ಹೊಡೆತವೋ ಹೊಡೆತ. ಕ್ಲಿಂಟನ್‌ನ ಅಧಿಕಾರಾವಧಿಯಲ್ಲಿ ಸ್ವಲ್ಪ ಚೇತರಿಸಿಕೊಂಡಿತು. ಆತನಂತೂ ಮಾರ್ಟನ್ನು ಹೊಗಳುವ, ವಿದೇಶಗಳಿಗೆ ವಿಸ್ತರಿಸುವ ಯಾವ ಅವಕಾಶವನ್ನೂ ಬಿಡಲಿಲ್ಲ. ವಾಲ್‌ಮಾರ್ಟ್ ಈಗ ಹೊರದೇಶಕ್ಕೆ ದಾಪುಗಾಲಿಟ್ಟಿತು. ಅಮೆರಿಕಾದಲ್ಲಿ ಮಾರುಕಟ್ಟೆ ಒಂದು ಹಂತಕ್ಕೆ ಬಂದು ಮುಟ್ಟಿರುವುದು ಅರಿವಿಗೆ ಬಂದಿತ್ತು. ವಾಲ್‌ಮಾರ್ಟ್‌ನ ವಿದೇಶದ ವ್ಯಾಪಾರನೀತಿ ಬೇರೆಯೇ ಆಗಿತ್ತು. ಅದಾಗಲೇ ಅಲ್ಲಿ ಬೆಳೆದು ನಿಂತಿರುವ ದೊಡ್ಡ ಮಾರ್ಟನ್ನು ಕೊಂಡುಕೊಂಡುಬಿಡೋದು. ಆ ಮೂಲಕ ಒಬ್ಬ ಬಲಾಢ್ಯ ಎದುರಾಳಿಯನ್ನು ಯುದ್ಧಕ್ಕೆ ಮುನ್ನವೇ ಕೊಂದಂತೆ. ಜೊತೆಗೆ ಉದ್ಯೋಗಿಗಳನ್ನೂ ಅನಾಯಾಸವಾಗಿ ಪಡೆದುಕೊಂಡಂತೆ. ಇಂಗ್ಲೆಂಡ್, ಜಪಾನ್, ಚೀನಾಗಳಲ್ಲೆಲ್ಲ ಈ ರೀತಿಯಲ್ಲಿ ವ್ಯಾಪಾರಕ್ಕಿಳಿದಿತ್ತು ವಾಲ್‌ಮಾರ್ಟ್. ಅದಕ್ಕೆ ಹೊಡೆತಕೊಟ್ಟದ್ದು ಜರ್ಮನಿ ಮತ್ತು ಕೊರಿಯಾಗಳು. ಜರ್ಮನಿಯ ಜನರ ಔದಾಸೀನ್ಯ ಮತ್ತು ಕೊರಿಯನ್ನರ ಮನಸ್ಥಿತಿಗಳಿಂದಾಗಿ ವಾಲ್‌ಮಾರ್ಟ್ ಅಲ್ಲಿ ಉದ್ಧಾರವಾಗಲೇ ಇಲ್ಲ. ಕೊರಿಯಾದ ಹೆಣ್ಣುಮಕ್ಕಳು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಊರಹೊರಗಿನ ತನಕ ಹೋಗಲಾರರೆಂಬುದೇ ವಾಲ್‌ಮಾರ್ಟ್‌ಗೆ ನುಂಗಲಾರದ ತುತ್ತಾಗಿತ್ತು. ಯಾವ ಪ್ರಚಾರಗಳೂ ಕೆಲಸಕ್ಕೆ ಬರಲಿಲ್ಲ. ಭಾರತದಲ್ಲಿ ಯುನಿನಾರ್‌ಗೆ ಆದ ಗತಿಯೇ ಕೊರಿಯಾದಲ್ಲಿ ವಾಲ್‌ಮಾರ್ಟ್‌ಗೆ ಉಂಟಾಗಿತ್ತು.
ಇವುಗಳಿಂದ ಧೃತಿಗೆಡದ ವಾಲ್‌ಮಾರ್ಟ್ ತನ್ನ ಯಾತ್ರೆಯನ್ನು ಮುಂದುವರೆಸುತ್ತ ವ್ಯಾಪಾರವನ್ನು ವಿಸ್ತರಿಸುತ್ತಲೆ ನಡೆಯಿತು. ಅನೇಕ ಕಡೆಗಳಲ್ಲಿ ರಾಜ್ಯದ ಚುಕ್ಕಾಣಿ ಹಿಡಿದವರ ಮೇಲೂ ಪ್ರಭಾವ ಬೀರಿತು. ನಿಯಮಗಳನ್ನು ಮುರಿಯಿತು. ವ್ಯಾಪಾರ ವಹಿವಾಟಿನ ಶೇ.೪೦ರಷ್ಟು ತನ್ನ ಸುಪರ್ದಿಗೆ ಬಂದೊಡನೆ ವಸ್ತುಗಳ ತಯಾರಕರ ಮೇಲೂ ಪ್ರಭಾವ ಬೀರಿ, ಆಯಾ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಕೊಳ್ಳಲಾರಂಭಿಸಿತು. ಸೆವೆನ್ತ್ ಜನರೇಷನ್ ಎನ್ನುವ ಅಮೆರಿಕಾದ ಪ್ರಮುಖ ಕಂಪನಿಯೊಂದು ವಾಲ್‌ಮಾರ್ಟ್‌ಗೆ ವಸ್ತುಗಳನ್ನು ಮಾರುವುದಿಲ್ಲವೆಂದು ಹೇಳಿ ಬಹಿರಂಗ ಸಮರವನ್ನೆ ಸಾರಿತು. ಕೆಲವೊಮ್ಮೆಯಂತೂ ಈ ಬಲಿಷ್ಠ ಕಂಪನಿ ಹಾಲು, ಧಾನ್ಯಗಳಂತಹ ಪದಾರ್ಥಗಳನ್ನು ಮೂಲ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಿ, ಅಕ್ಕಪಕ್ಕದವರನ್ನು ಈ ದರಸಮರದಲ್ಲಿ ಕೊಂದುಬಿಟ್ಟಿತು. ಅದೊಂದು ರೀತಿ ಕಾನೂನುಗಳನ್ನು ಗಾಳಿಗೆ ತೂರಿ ಸವಾರಿ ಮಾಡುವ ಪ್ರಯತ್ನ. ವರ್ಜೀನಿಯಾದಲ್ಲಿ ಬೃಹತ್ ಕಟ್ಟಡಗಳ ನಿಯಮಾನುಸಾರ ಅಳತೆ ಮೀರಿ ಕಟ್ಟಡ ಕಟ್ಟಬಾರದೆಂದಾಗ ವಾಲ್‌ಮಾರ್ಟ್ ಏನು ಮಾಡಿತು ಗೊತ್ತೆ? ಅಕ್ಕಪಕ್ಕದಲ್ಲಿ ಕಟ್ಟಡಗಳನ್ನು ಕಟ್ಟಿ, ಇಬ್ಬಿಬ್ಬರು ಕ್ಯಾಷಿಯರ್‌ಗಳನ್ನು ಕೂರಿಸಿ, ಇದು ಜೊತೆಜೊತೆಯಲ್ಲಿರುವ ಎರಡಂಗಡಿ ಎಂದು ಕಣ್ಣಿಗೆ ಬೆಣ್ಣೆ ಸವರಿತ್ತು.
ಈ ಎಲ್ಲ ರಾದ್ಧಾಂತಗಳ ಹಿನ್ನೆಲೆಯಲ್ಲಿ, ಇಂದಿಗೆ ಹತ್ತು ವರ್ಷಗಳ ಹಿಂದೆಯೇ ಅಮೆರಿಕಾದಲ್ಲಿ ಓಚಿಣioಟಿಚಿಟ ಜಚಿಥಿ oಜಿ ಚಿಛಿಣioಟಿಘೋಷಿಸಿ ಪರಿಸರವನ್ನು ಗೌರವಿಸುವುದು, ನೌಕರರಿಗೆ ಸೂಕ್ತ ಸಂಬಳ ನೀಡುವುದೂ ಸೇರಿದಂತೆ ಏಳು ನಿರ್ಬಂಧಗಳನ್ನು ಜನರು ಹೇರಿದ್ದರು. ಜನರನ್ನು, ಪತ್ರಿಕೆಗಳನ್ನು, ನಾಯಕರನ್ನು, ಎಲ್ಲರನ್ನೂ ಸಾರಾಸಗಟಾಗಿ ಖರೀದಿ ಮಾಡುವ ಸಾಮರ್ಥ್ಯವುಳ್ಳ ವಾಲ್‌ಮಾರ್ಟ್, ಆಗೊಂದಷ್ಟು ಸುಧಾರಿಸಿಕೊಂಡು ಮುನ್ನಡೆಯಿತು.
ವಾಲ್‌ಮಾರ್ಟನ್ನು ಒಂದು ದೇಶವೆಂದು ಭಾವಿಸಿದರೆ, ಚೀನಾದ ಮೂರನೇ ದೊಡ್ಡ ಆಮದು ದೇಶವಾಗುತ್ತದೆ ಅದು. ಈ ಕಂಪನಿ ಭಾರತಕ್ಕೆ ಬರುವುದೆಂದರೆ ಚೀನಾದ ವಸ್ತುಗಳು ನಮ್ಮ ಮಾರುಕಟ್ಟೆ ತುಂಬಿಹೋಗೋದು ಅಂತರ್ಥ. ರಾಹುಲ್‌ಗಾಂಧಿ ಬಾಲಿಶವಾಗಿ ವಾಲ್‌ಮಾರ್ಟ್‌ನಿಂದ ರೈತರಿಗೆ ಅನುಕೂಲ ಎಂದಿದ್ದಾರಲ್ಲ, ಅದು ಈ ದೇಶದ ಒಂದೆರಡು ಎಕರೆಯ ರೈತನನ್ನು ಮೂಸಿಯೂ ನೋಡುವುದಿಲ್ಲ ಎಂಬುದನ್ನು ಆತ ಅರಿತೇ ಇಲ್ಲ. ಮತ್ತು ಭಾರತದ ಮುಕ್ಕಾಲು ಭಾಗ ರೈತರು ಕೆಳ, ಮಧ್ಯಮವರ್ಗದವರೇ. ಹಾಗಿದ್ದರೆ ಲಾಭ ಯಾರಿಗೆ?
ವಾಲ್‌ಮಾರ್ಟ್‌ನ ಸಿಇಒ ಅದಾಗಲೇ ಭಾರತಕ್ಕೆ ಬರಲು ತಾನೆಷ್ಟು ಖರ್ಚು ಮಾಡಿದ್ದೇನೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದಾನೆ. ಈ ಖರ್ಚು ಯಾರಿಗಾಗಿ ಎಂಬುದರ ಒಳಾರ್ಥ ನಿಮಗೆ ಗೊತ್ತಾಗಿರಲಿಕ್ಕೆ ಸಾಕು. ಮತ್ತು ಈ ಹಿನ್ನೆಲೆಯಲ್ಲಿ ಮನಮೋಹನ ಸಿಂಗರು ಬಾಯಿ ತೆರೆದ ಗುಟ್ಟೂ ಗೊತ್ತಾಗಿರಬೇಕು!

Comments are closed.