ವಿಭಾಗಗಳು

ಸುದ್ದಿಪತ್ರ


 

ವಿಶ್ವ ಗುರು ~ 5; ಸ್ವಾರ್ಥಕ್ಕಾಗಿ ಸ್ವಾಭಿಮಾನವನ್ನೆ ಅಡವಿಟ್ಟ ಮಹಾಶಯ

ಬ್ರಿಟೀಷರು ಬಲು ಬುದ್ದಿವಂತರು. ಅವರು ಪಕ್ಕಾ ವ್ಯಾಪಾರಿಗಳು ಕೂಡ. ಹೀಗಾಗಿ ಯಾವುದನ್ನು, ಯಾರನ್ನು, ಯಾವಾಗ ಎಷ್ಟೆಷ್ಟು ಬಳಸಿಕೊಳ್ಳಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು; ಗೊತ್ತಿದೆ. ಮ್ಯಾಕ್ಸ್ ಮುಲ್ಲರ್ ಅನುವಾದಕನಾಗಿ ಬಂದೊಡನೆ ಅವನ ಹೆಸರನ್ನು ಖ್ಯಾತಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಅನೇಕ ಮತಪ್ರಚಾರಕರು ಬಿಡಿ, ಸಾಮಾನ್ಯ ಜನರೂ ಕೂಡ ಆನಂದ ತುಂದಿಲರಾದರು. ಹಿಂದೂಗಳನ್ನು ಕ್ರಿಸ್ತನ ಬಾಹುಗಳಿಗೆಳೆದುತರುವ ದೇವದೂತನೇ ಬಂದಿದ್ದಾನೆಂದುಕೊಂಡರು. ಮಿಶನರಿಗಳ ಪ್ರಚಾರದ ಭರಾಟೆ ಹಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಸಾಧ್ಯವಾದಷ್ಟೂ ಗೌರವ-ಪ್ರೋತ್ಸಾಹಗಳನ್ನು ಕೊಡುವುದು ಕರ್ತವ್ಯವೆಂದು ಯೂರೋಪ್ ಭಾವಿಸಿಬಿಟ್ಟಿತ್ತು. ಮ್ಯಾಕ್ಸ್ ಮುಲ್ಲರ್ ಗೆ ಒಂದರ ಮೇಲೊಂದರಂತೆ ಗೌರವ ಪದವಿಗಳು ಪ್ರಾಪ್ತವಾದುವು. ತಾನು ಕಷ್ಟಪಟ್ಟು ಗಳಿಸಿದ್ದ ಮೆಟ್ರಿಕ್ಯುಲೇಷನ್ ಸೇರಿದಂತೆ ನಾಲ್ಕು ಪದವಿಗಳು ಬಿಟ್ಟರೆ ಆನಂತರ 31 ಪದವಿಗಳು ಗೌರವದಿಂದಲೇ ಕೊಡಲ್ಪಟ್ಟವು! ಅಂದಿನ ದಿನದಲ್ಲಿ ಮ್ಯಾಕ್ಸ್ ಮುಲ್ಲರ್ ಎಬ್ಬಿಸಿದಂತಹ ’ಹವಾ’ ಎಂಥದ್ದಿರಬೇಕು ಊಹಿಸಿ.

20150426205737

ಇದಕ್ಕೂ ಮುನ್ನ ಅವನು ಲಂಡನ್ನಿಗೆ ಬರುತ್ತಿದ್ದಂತೆಯೇ ಅವನನ್ನು ವಿಕ್ಟೋರಿಯಾ ರಾಣಿಗೆ ಪರಿಚಯಿಸಲಾಯ್ತು. ಈ ಸುದ್ದಿಯೂ ಕಾಡ್ಗಿಚ್ಚಿನಂತೆ ಹಬ್ಬಿ ಇಡಿಯ ಯುರೋಪಿನಲ್ಲಿ ಈ 25 ರ ತರುಣನ ಕುರಿತಂತೆ ಆಸಕ್ತಿ ಮೂಡುವಂತೆ ಮಾಡಿತ್ತು.

ಮ್ಯಾಕ್ಸ್ ಮುಲ್ಲರ್ ಏನೇ ಹೇಳಿದರೂ ಕ್ರಿಶ್ಚಿಯನ್ ಮಿಶನರಿಗಳು ಅದನ್ನು ಜಗತ್ತಿನ ಮೂಲೆಮೂಲೆಗೂ ತಲುಪಿಸುತ್ತವೆ. ಜಾಲವೂ ವಿಸ್ತಾರವಾಗಿದ್ದರಿಂದ ಆತ ಹೇಳುವ ವಿಚಾರಕ್ಕಾಗಿ ಜಗತ್ತು ಕಾಯುತ್ತಿರುವಂತೆ ಮಾಡುವ ತಾಕತ್ತೂ ಅವರಿಗಿತ್ತು. ಭಾರತವಂತೂ ಗುಲಾಮಿ ರಾಷ್ಟ್ರವಾಗಿದ್ದರಿಂದ ಮ್ಯಾಕ್ಸ್ ಮುಲ್ಲರ್ ಹೇಳಿದ್ದಕ್ಕೆಲ್ಲ ತಾಳತಟ್ಟುವ ಚೇಲಾಗಳನ್ನು ತಯಾರು ಮಾಡುವುದು ಕಷ್ಟವೇ ಆಗಿರಲಿಲ್ಲ. 1857 ರಲ್ಲಿ ಕಲ್ಕತ್ತಾ, ಮದ್ರಾಸ್ ಮತ್ತು ಬಾಂಬೆ ವಿಶ್ವವಿದ್ಯಾಲಯಗಳ ರಚನೆಯಾದ ಮೇಲಂತೂ ಅಲ್ಲಿನ ಉಪನ್ಯಾಸಕರ ಹುದ್ದೆಗೆ ಕಾದಾಟ ಶುರುವಾಯಿತು. ಸಹಜವಾಗಿಯೇ ಯಾರು ಮ್ಯಾಕ್ಸ್ ಮುಲ್ಲರ್ ನ ವೇದದ ಅನುವಾದವನ್ನು, ಮಿಶನರಿಗಳ ಚಿಂತನೆಯನ್ನು ಸಮರ್ಥಿಸುತ್ತಾರೋ ಅಂಥವರಿಗೆ ಮಾತ್ರ ಅವಕಾಶ ಸಿಕ್ಕಿತು. ವಿರೋಧಿಗಳೆಲ್ಲ ವಿಶ್ವವಿದ್ಯಾಲಯಗಳಿಂದ ದೂರ ಉಳಿಯಬೇಕಾಯ್ತು. ಹೀಗಾಗಿ ಹೊಸ ಪೀಳಿಗೆಗೆ ಮ್ಯಾಕ್ಸ್ ಮುಲ್ಲರ್ ಬರೆದುದೆಲ್ಲವೂ ಸತ್ಯವೆಂದು ಈ ಉಪನ್ಯಾಸಕರುಗಳು ಬೋಧಿಸಲಾರಂಭಿಸಿದರು. ಆತ ಭಾರತೀಯರಿಗೂ ಆರಾಧ್ಯ ದೈವವಾದ; ಋಷಿಯೆನಿಸಿದ!.

ಈ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಮ್ಯಾಕ್ಸ್ ಮುಲ್ಲರ್ ನ ಸಾಹಿತ್ಯಗಳು ರಾರಾಜಿಸತೊಡಗಿದವು. ಲಂಡನ್ನಿನಲ್ಲಿ ಪ್ರಕಾಶನಗೊಳ್ಳುತ್ತಿದ್ದ ಈ ಪುಸ್ತಕಗಳನ್ನು ಗ್ರಂಥಾಲಯಗಳು ಕೊಂಡುಕೊಳ್ಳಲೇಬೇಕಿದ್ದರಿಂದ ಮುದ್ರಣಕ್ಕೆ ಬೇಕಿದ್ದ ಹಣ ದಕ್ಕುತ್ತಿತ್ತು, ಬ್ರಿಟೀಷ್ ಮುದ್ರಕರಿಗೆ ಸುಲಭದಲ್ಲಿ ಪುಸ್ತಕ ಮಾರಾಟವೂ ಆಗಿ ಬಿಡುತ್ತಿತ್ತು. ಅಂದಿನ ಬೇರೆ ಅನೇಕರಿಗೆ ದೊರೆಯದ ಸೌಲಭ್ಯ ಮ್ಯಾಕ್ಸ್ ಮುಲ್ಲರ್ ಗೆ ದೊರಕಿತು. ಆತ ದೈತ್ಯನಾಗಿ ಬೆಳೆದುಬಿಟ್ಟ.

ನಮ್ಮ ಕಥೆ ಕೇಳಿ. ನಾನೇ ಹಣ ಕೊಟ್ಟು ಪುಸ್ತಕಗಳನ್ನು ಖರೀದಿಸಿ ಅದೇ ಸತ್ಯವೆಂದು ಪಾಠ ಮಾಡಿ ಮುಂದಿನ ಪೀಳಿಗೆಗೆ ಭಾರತೀಯತೆಯು ಬೇರು ಸತ್ತ ಮರ ಎಂಬ ಅರಿವು ಮೂಡಿಸುತ್ತಿದ್ದೆವಲ್ಲ; ಎಂಥ ವಿಪರ್ಯಾಸ. ದುರ್ದೈವದ ಸಂಗತಿ ಎಂದರೆ ಇದು ಇಂದಿಗೂ ಬದಲಾಗಿಲ್ಲ. ಪಶ್ಚಿಮ ರಾಷ್ಟ್ರಗಳು ತಮಗೆ ಪೂರಕವಾದ ಸಿದ್ಧಾಂತವೊಂದನ್ನು ಭಾರತದ ಮೇಲೆ ಹೇರ ಹೊರಟರೆ ಅಂತಹ ವ್ಯಕ್ತಿಯನ್ನು ಗುರುತಿಸುತ್ತವೆ. ಅವನಿಗೆ ಅತ್ಯಂತ ಶ್ರೇಷ್ಠ ಪದವಿ – ಗೌರವಗಳನ್ನು ಕೊಡುತ್ತವೆ. ಕೆಲವೊಮ್ಮೆ ನೊಬೆಲ್ ಬಂದರೂ ಅಚ್ಚರಿ ಪಡಬೇಕಿಲ್ಲ. ಇದ್ದಕ್ಕಿದ್ದಂತೆ ಭಾರತ ಆ ವ್ಯಕ್ತಿಯ ಗುಣಗಾನವನ್ನು ಮಾಡಲು ಶುರು ಮಾಡುತ್ತದೆ. ಮಾಧ್ಯಮಗಳು ಆತನ ಬಗ್ಗೆ ಪುಟಗಟ್ಟಲೆ ಬರೆಯುತ್ತವೆ. ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆಂದೇ ಹಣಕೊಟ್ಟು ಸಾಕಲ್ಪಟ್ಟಿರುವ ಕೆಲವರು ಅವರನ್ನು ಕರೆದು ಸೆಮಿನಾರ್ ಮಾಡಿಸುತ್ತಾರೆ. ಆತನ ಕೃತಿಗಳ ಮೇಲೆ ಚರ್ಚೆಗಳು ಶುರುವಾಗುತ್ತವೆ. ಭಾರತದ ಪಾಲಿಗೆ ಆತ ’ಹೀರೋ’ ಆಗಿ ಬಿಡುತ್ತಾನೆ. ಅವನನ್ನು ವಿರೋಧಿಸುವವರನ್ನು ಮೂಲಭೂತವಾದಿಗಳೆಂದು ಕರೆದು ಪಕ್ಕಕ್ಕೆ ತಳ್ಳಿಬಿಡಲಾಗುತ್ತದೆ.

ದಯವಿಟ್ಟು ಕ್ಷಮಿಸಿ ಇಷ್ಟನ್ನೂ ಹೇಳಬೇಕಾದರೆ ನಾನು ಯಾವ ವ್ಯಕ್ತಿಯನ್ನೂ ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಆದರೆ ನಿಮ್ಮ ಮನಸ್ಸಿನಲ್ಲಿ ಯಾರು ಯಾರು ಹಾದು ಹೋದರೋ ಅವರೆಲ್ಲಾ ಹೀಗೆ ಬೆಳೆದು ಕಂಟಕವಾದ ಮ್ಯಾಕ್ಸ್ ಮುಲ್ಲರ್ ಗಳೇ! ಕರ್ನಾಟಕದಲ್ಲೇ ನೋಡಿ, ಖ್ಯಾತನಾಮ ಸಾಹಿತಿಗಳು ಬೇರೆ; ಜನ ಮೆಚ್ಚಿದ ಸಾಹಿತಿಗಳು ಬೇರೆ !

ಭಾರತವನ್ನು, ಇಲ್ಲಿನ ಆಚರಣೆಗಳನ್ನು, ಧರ್ಮವನ್ನು, ಪರಂಪರೆಯನ್ನು ಬೈದು ಮ್ಯಾಕ್ಸ್ ಮುಲ್ಲರ್ ಗಳಾಗಬೇಕೆಂದು ಬಯಸುವ ಬೇಕಾದಷ್ಟು ಮಂದಿ ಇಲ್ಲಿದ್ದಾರೆ. ಅವರನ್ನು ಆ ಮಟ್ಟಕ್ಕೇರಿಸುವ ವಿಶ್ವವಿದ್ಯಾಲಯಗಳಿಗೂ ಇಲ್ಲಿ ಕೊರತೆಯಿಲ್ಲ!

ಮ್ಯಾಕ್ಸ್ ಮುಲ್ಲರ್ ಈ ಖ್ಯಾತಿಯ ಚಕ್ರದೊಳಗೆ ಸಿಕ್ಕಿಹಾಕಿಕೊಂಡುಬಿಟ್ಟಿದ್ದ. ಅದನ್ನು ಬಿಡುವುದು ಅವನಿಗೆ ಕಷ್ಟವಾಗಿತ್ತು. ಮೊದಲು ಹಣದ ಆಮಿಶವೊಡ್ಡಿ ಅವನ ಪಾಂಡಿತ್ಯವನ್ನು ಕೊಂಡುಕೊಂಡರು. ಸ್ವತಃ ಆತ ಅನೇಕ ಬಾರಿ ಹತಾಶನಾಗುತ್ತಿದ್ದ. ಬ್ರಹ್ಮ ಸಮಾಜದ ಕೇಶವ ಚಂದ್ರ ಸೇನನಿಗೆ ಬರೆದ ಪತ್ರದಲ್ಲಿ “ಅವನಿಗೆ ಸ್ವಾತಂತ್ರ್ಯವಿದೆ” ಎಂಬ ಹೇಳಿಕೆ ಯಾವಾಗಲೂ ನನಗೆ ಇಷ್ಟ. ಅದರರ್ಥ “ಅವನು ಯಾರ ಮರ್ಜಿ, ಮುಲಾಜಿಗೆ ಒಳಗಾಗುವ ಅಗತ್ಯವಿಲ್ಲದಷ್ಟು ಸಂಪತ್ತು ಅವನ ಬಳಿ ಇದೆ ಅಂತ” ಎಂದಿದ್ದ.

ತಮ್ಮವರಲ್ಲದೆ ಬೇರೆಯವರನ್ನು ಮೇಲೇರಲು ಬಿಡದ ಬ್ರಿಟೀಷರು ಮ್ಯಾಕ್ಸ್ ಮುಲ್ಲರ್ ನನ್ನು ಇಷ್ಟು ಬೆಳೆಯಗೊಟ್ಟಿದ್ದೇ ಉದ್ದೇಶ ಈಡೇರಿಕೆಗೋಸ್ಕರ. ಅವನಿಗೆ ಅದೆಷ್ಟು ಕಿರಿ ಕಿರಿ ಮಾಡಿಬಿಟ್ಟಿದ್ದರೆಂದರೆ ಮೆಕಾಲೆ ಹತ್ತು ಸಾವಿರ ಪೌಂಡು ಕೊಡಿಸುತ್ತೇನೆಂದಿದ್ದ, ಕಂಪನಿ ಅದನ್ನು ಮೂರು ಸಾವಿರಕ್ಕಿಳಿಸಿತು. ಅಷ್ಟನ್ನು ಕೊಡುವ ಮೊದಲೇ 1857 ರ ಸಂಗ್ರಾಮ ನಡೆದು ಕಂಪನಿ ಸರ್ಕಾರದ ಸ್ವಾಮ್ಯ ಕಳಚಿ ಬಿತ್ತು, ನೇರ ಬ್ರಿಟನ್ನಿನ ರಾಣಿಯೇ ಭಾರತವನ್ನು ಆಳತೊಡಗಿದಳು. ಈಗ ಹಣಕ್ಕಾಗಿ  ಆತ ಮತ್ತೆ ಬಡಿದಾಡಬೇಕಾಗಿ ಬಂತು. ಆತ ಹತಾಶನಾದ ‘ಅತ್ಯಂತ ಕಡಿಮೆಗಾಗಿ ಮಹತ್ವದ್ದನ್ನು ಕಳೆದುಕೊಂಡುಬಿಟ್ಟೆ’ ಎಂದು ಕೊನೆಗಾಲದಲ್ಲಿ ರೋದಿಸುತ್ತಿದ್ದ ಮ್ಯಾಕ್ಸ್ ಮುಲ್ಲರ್.

ಆತನ ಕುರಿತಂತೆ ‘ಎ ಲೈಫ್ ಲಾಂಗ್ ಮಸ್ಕರೇಡ್’ ಪುಸ್ತಕ ಬರೆದಿರುವ ಬ್ರಹ್ಮದತ್ತ ಭಾರತಿ ಅವನ ಬದುಕನ್ನು ಹೀಗೆ ಹಿಡಿದಿಡುತ್ತಾರೆ; “ಹಸಿವಿನಿಂದ ಬಳಲುತ್ತಿದ್ದ ಬಾಲಕಿ, ಅನ್ನ ಕೊಟ್ಟು ಜೀವ ಉಳಿಸಿದವನಿಗೆ ತಾನು ವಯಸ್ಸಿಗೆ ಬಂದ ಮೇಲೆ ಇಚ್ಛೆಯಿಲ್ಲದಿದ್ದರೂ ದೇಹ ಒಪ್ಪಿಸಬೇಕಾಗಿ ಬರುವಂತಹ ದಯನೀಯ ಸ್ಥಿತಿ ಅವನದ್ದಾಗಿತ್ತು” ಎನ್ನುತ್ತಾರೆ. ಈ ಸಾಲುಗಳನ್ನು ಓದುವಾಗಲೆಲ್ಲಾ ಯಾಕೋ ಮನಸ್ಸು ಕಲಕಿದಂತಾಗುತ್ತದೆ. ಕಷ್ಟಪಟ್ಟು ಮೇಲೆಬಂದ, ಇಷ್ಟಪಟ್ಟು ಸಂಸ್ಕೃತ ಕಲಿತ, ಭಾರತದೆಡೆಗೆ ವಾಲುತ್ತಿದ್ದ ವೇಳೆಗೆ ಬ್ರಿಟೀಷರು ಕರೆದರು. ಸುಳಿಗೆ ಸಿಕ್ಕಿಕೊಂಡುಬಿಟ್ಟ. ಅವನ ಸಾಹಿತ್ಯ, ಪಾಂಡಿತ್ಯ ಅಸಾಧಾರಣ, ಆದರೆ ಅದನ್ನು ಅಡವಿಡಬೇಕಾದ ಪರಿಸ್ಥಿತಿ ಬಂದದ್ದು ಮಾತ್ರ ಬಲು ದುಃಖಕರ !

ಅದು ಆದದ್ದೂ ಹಾಗೆಯೇ, ಋಗ್ವೇದವನ್ನು ಆಧಾರವಾಗಿಟ್ಟುಕೊಂಡು ‘ಆರ್ಯ’ ಎನ್ನುವ ಪದವನ್ನು ಜನಾಂಗ ಎಂದು ನಂಬಿಸಿಬಿಟ್ಟ. ಅದಕ್ಕೆ ಯಾವ ವೈಜ್ಞಾನಿಕ ಆಧಾರವಿಲ್ಲವೆಂದು ಗೊತ್ತಿದ್ದರೂ ಬೈಬಲ್ಲಿಗೆ ಧಕ್ಕೆಯಾಗದಂತೆ ಅದನ್ನು ಸಾಧಿಸುತ್ತಾ ನಡೆದ. ಕೊನೆಗೊಮ್ಮೆ ಈ ಆರ್ಯ ವಾದದಿಂದಲೇ ಜರ್ಮನಿ ಏಕತೆ ಸಾಧಿಸಿತು; ಭಾರತವೂ ಒಂದಾದೀತೇನೋ ಎಂಬ ಹೆದರಿಕೆಯಿಂದ ಮಿಶನರಿಗಳು ಈ ವಾದವನ್ನು ಬದಲಿಸುವಂತೆ ಕೇಳಿಕೊಂಡರು. 1857 ರವರೆಗೆ ಇಪ್ಪತ್ತು ವರ್ಷಗಳ ಕಾಲ ಆರ್ಯ ಜನಾಂಗವಾದದ ಕುರಿತಂತೆ ಕಂಠ ಚೀರಿ ಹೇಳಿದ ಮ್ಯಾಕ್ಸ್ ಮುಲ್ಲರ್ ತನ್ನ ದಿಕ್ಕನ್ನು ಬದಲಾಯಿಸಿಬಿಟ್ಟ. ಅಲ್ಲಿಂದಾಚೆ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯ ಎಂದರೆ ಭಾಷೆಗಳ ಗುಚ್ಛ ಎಂದ. ಅದರ ಕುರಿತಂತೆ ತನ್ನದೇ ಸಾಕ್ಷ್ಯಗಳನ್ನು ಒದಗಿಸಿದ. ಭಾಷೆಗಳ ನಡುವಣ ಸಾಮ್ಯದ ಆಧಾರದ ಮೇಲೆ ಇತಿಹಾಸದ ಪುನರ್ ರಚನೆ ಮಾಡುವ ಸಾಹಸಕ್ಕೆ ಕೈ ಹಾಕಿದ. ಮಿಶನರಿಗಳು ಆರ್ಯ ಆಕ್ರಮಣವಾದವನ್ನು ಅದೆಷ್ಟು ಪ್ರಚಾರ ಮಾಡಿಬಿಟ್ಟಿದ್ದವೆಂದರೆ ಈ ಹೊಸ ಸಿದ್ಧಾಂತವನ್ನು ಯಾರೂ ಕೇಳಲು ತಯಾರಿರಲಿಲ್ಲ. 1888 ರಲ್ಲಿ ಆಕ್ರೋಶ ಭರಿತನಾಗಿ ಮ್ಯಾಕ್ಸ್ ಮುಲ್ಲರ್, “ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ, ಆರ್ಯ ಎನ್ನುವ ಪದವನ್ನು ನಾನು ಬಳಸಿದರೆ ಅದು ರಕ್ತವೋ ಮೂಳೆಯೋ ಅಥವಾ ತಲೆ ಬುರುಡೆಯೋ ಅಲ್ಲ, ಅದರರ್ಥ ಆರ್ಯ ಭಾಷೆಯನ್ನು ಮಾತಾಡುವವರು ಅಂತ.” ಎಂದ.

ಮಿಶನರಿಗಳು ಹೇಳಿದಂತೆ ಕೇಳುವುದಷ್ಟೇ ಅವನ ಕೆಲಸವಾಗಿಬಿಟ್ಟಿತ್ತು. ಜರ್ಮನಿಯ ಜನ ಬಲು ಸ್ವಾಭಿಮಾನಿಗಳು ಎನ್ನುತ್ತಾರೆ. ಮ್ಯಾಕ್ಸ್ ಮುಲ್ಲರ್ ಅದನ್ನೇ ಬಲಿ ಕೊಟ್ಟಿದ್ದ. ಇಂಗ್ಲೀಷರು ಅವನನ್ನು ಕಂಠಮಟ್ಟ ಗೌರವಿಸಿದರು. ಗುಣಗಾನ ಮಾಡಿದರು. ಕೇಳಿದ್ದನ್ನು ಕೊಟ್ಟರು, ಅದಕ್ಕೆ ಪೂರಕವಾಗಿ ತಮಗೆ ಬೇಕಾದ್ದನ್ನು ಮಾಡಿಸಿಕೊಂಡರು. ಒಟ್ಟಾರೆ ತನ್ನ ಬದುಕನ್ನು ಮುಕ್ತವಾಗಿ ತಿರುಗಾಡಿಕೊಂಡಿರುವ ಅಡಿಯಾಳಿನಂತೆ ಸವೆಸಿದ. ಇಂಗ್ಲೀಷರ ಗೌರವವೆಲ್ಲಾ ಚರ್ಮದವರೆಗೆ ಎಂಬುದು ಅವರಿಗೆ ಅರಿವಿತ್ತಲ್ಲದೇ ಅವರ ಪಾಲಿಗೆ ತಾನು ಅನ್ಯಗ್ರಹ ಜೀವಿಯಂತೆಯೇ ಎಂಬುದನ್ನೂ ಚೆನ್ನಾಗಿ ತಿಳಿದುಕೊಂಡಿದ್ದ. ಅದು ಅವನ ಅರಿವಿಗೆ ಬರುವಂತಹ ಘಟನೆಗಳೂ ನಡೆದಿದ್ದವು. 1860 ರಲ್ಲಿ ಆಕ್ಸ್ ಫರ್ಡಿನ ಬೋಡೇನ್ ಸಂಸ್ಕೃತ ಪೀಠಕ್ಕೆ ಚುನಾವಣೆಗಳು ನಡೆದಾಗ ಮ್ಯಾಕ್ಸ್ ಮುಲ್ಲರ್ ಅದರ ಅಧ್ಯಕ್ಷನಾಗುವ ಆಕಾಂಕ್ಷೆ ವ್ಯಕ್ತಪಡಿಸಿದ. ಆಕ್ಸ್ ಫರ್ಡಿನಲ್ಲಿಯೇ 14 ವರ್ಷ ಸಂಸ್ಕೃತ ಕಲಿಸುತ್ತಿದ್ದ ಮೋನಿಯರ್ ವಿಲಿಯಂಸ್, ಅವನ ಎದುರಾಳಿ ಮುಲ್ಲರ್ ಕೂಡ ಲಂಡನ್ನಿಗೆ ಬಂದು ಅಷ್ಟೇ ವರ್ಷ ಕಳೆದಿತ್ತು. ಚುನಾವಣೆಯ ಪ್ರಚಾರ ಜೋರಾಗಿಯೇ ನಡೆದಿತ್ತು. ಇಬ್ಬರೂ ಹಿಂದೂಗಳನ್ನು ಮತಾಂತರಿಸುವಲ್ಲಿ ತಾವು ಮಿಶನರಿಗಳಿಗೆ ಮಾಡಿದ ಸಹಾಯ ಎಂಥದ್ದೆಂಬುದನ್ನು ಜನರ ಮುಂದಿಟ್ಟರು. ಪತ್ರಿಕಾ ಜಾಹೀರಾತುಗಳು, ಲೇಖನಗಳು, ಮಾತು-ಪ್ರತಿಮಾತು ಎಲ್ಲವೂ ಆಯಿತು. ಪಾಂಡಿತ್ಯದಲ್ಲಿ ಮೋನಿಯರ್ ಗಿಂತಲೂ ಒಂದು ತೂಕ ಹೆಚ್ಚೇ ಇದ್ದರೂ ಮುಲ್ಲರ್ ಗೆ ಹಿನ್ನೆಡೆಯಾಗುವಂತಹ ಒಂದು ಅಂಶವಿತ್ತು. ಅದು ಆತ ಇಂಗ್ಲೇಂಡಿನವನಲ್ಲ; ಜರ್ಮನಿಯವ ಅನ್ನೋದು! ಬೋರ್ಡನ್ ಪೀಠಕ್ಕೆ ಇಂಗ್ಲೀಷಿನವನೇ ಆಗಲೇಬೇಕೆಂಬ ಇಂಗ್ಲೇಂಡಿನ ಸಹಜ ಸ್ವಾಭಿಮಾನ ಚುನಾವಣೆಯಲ್ಲಿ ಕೆಲಸ ಮಾಡಿತು. ಫಲಿತಾಂಶ ಬಂದಾಗ ಮ್ಯಾಕ್ಸ್ ಮುಲ್ಲರ್ ನ ಎದೆ ಒಡೆದಿತ್ತು, 220ಕ್ಕೂ ಹೆಚ್ಚು ಮತಗಳ ಅಂತರದಿಂದ ಮೋನಿಯರ್ ವಿಲಿಯಂಸ್ ಗೆಲುವು ಸಾಧಿಸಿದ. ದುಃಖದಿಂದ ತನ್ನ ತಾಯಿಗೆ ಬರೆದ ಪತ್ರದಲ್ಲಿ  ಮ್ಯಾಕ್ಸ್ ಮುಲ್ಲರ್ “ಶ್ರೇಷ್ಟ ಜನರೆಲ್ಲಾ ನನಗೆ ಮತ ಹಾಕಿದರು, ಆದರೆ ಕೆಟ್ಟ ಜನರೇ ಬಹುಸಂಖ್ಯಾತರಾಗಿದ್ದರು” ಎಂದು ಅಲವತ್ತುಕೊಂಡಿದ್ದ.

ಕಾಲ ಮಿಂಚಿ ಹೋಗಿತ್ತು. ಮ್ಯಾಕ್ಸ್ ಮುಲ್ಲರ್ ತನ್ನ ಸ್ವಾಭಿಮಾನ, ರಾಷ್ಟ್ರೀಯತೆ ಎಲ್ಲವನ್ನೂ ಬಲಿಕೊಟ್ಟಾಗಿತ್ತು. ಆತ ಈಗ ತನ್ನ ಒಡೆಯನಿಗೆ ನಿಷ್ಠನಾಗಿ ನಡೆದುಕೊಳ್ಳಲೇಬೇಕಿತ್ತು. ಬನ್ಸೆನ್ ಗೆ ಆರಂಭದ ದಶಕದಲ್ಲಿಯೇ ಬರೆದ ಪತ್ರವೊಂದರಲ್ಲಿ “ಸಂತ ಪೌಲನ ಕಾಲದ ರೋಮ್, ಗ್ರೀಸ್ ಗಳಿಗಿಂತ ಭಾರತ ಕ್ರಿಸ್ತೀಕರಣಕ್ಕೆ ಹೆಚ್ಚು ಪಕ್ವಗೊಂಡಿದೆ. ಈ ಕೊಳೆತ ಮರ ಉರುಳಿದರೆ ಆಡಳಿತಕ್ಕೆ ತೊಂದರೆಯಾಗಬಹುದೆಂಬ ಒಂದೇ ಕಾರಣಕ್ಕೆ ಇದು ಇಷ್ಟು ದಿನ ಉಳಿದುಕೊಂಡಿತ್ತು. ಒಮ್ಮೆ ಆಂಗ್ಲೇಯ ಇದು ಉರುಳಬೇಕೆಂದು ನಿಶ್ಚಯಿಸಿದರೆ ಇದು ಉಳಿಯುವುದು ಅಸಾಧ್ಯ. ಈ ಹೋರಾಟಕ್ಕಾಗಿ ನಾನು ನನ್ನ ಬದುಕನ್ನೇ ಕೊಡಲು ಸಿದ್ಧ.” ಎಂದು ಗುಟುರು ಹಾಕಿದ್ದ. ಈ ಮಾತನ್ನು ಅವನೀಗ ಉಳಿಸಿಕೊಳ್ಳಬೇಕಿತ್ತು. ಭಾರತದಲ್ಲಾಗುವ ಪ್ರತಿಯೊಂದು ಮತಾಂತರಕ್ಕೂ ತಾನೇ ಕಾರಣವಾಗುವ ತವಕವೂ ಇತ್ತು. ಊಹೂಂ, ಸರಕಾರ, ಸೇನೆ, ಶಿಕ್ಷಣ, ನ್ಯಾಯ, ದೇವಸ್ಥಾನ ಎಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರವೂ ಮಿಶನರಿಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಮುಲ್ಲರನ ನೋವಿಗೆ ಅದೂ ಒಂದು ಕಾರಣ.

ಇಷ್ಟೆಲ್ಲಾ ಅದೇಕೆ ವಿಸ್ತಾರವಾಗಿ ಚರ್ಚಿಸಬೇಕಾಯಿತೆಂದರೆ, ನಮ್ಮ ಹಿಂದೆ ನಡೆದ ಪ್ರತಿಯೊಂದು ಘಟನೆಗೂ ಒಂದು ಕಾರಣವಿದೆ. ಹಾಗೆಯೇ ನಮ್ಮೆದುರಿಗೆ ನಡೆಯುವ ಪ್ರತಿಯೊಂದು ಘಟನೆಗೂ ಒಂದು ಷಡ್ಯಂತ್ರವಿದೆ! ಅವೆಲ್ಲವನ್ನೂ ಅರಿಯಲು ಇಷ್ಟಾದರೂ ಪೀಠಿಕೆ ಬೇಕೇ ಬೇಕಲ್ಲವೇ ?

Comments are closed.