ವಿಭಾಗಗಳು

ಸುದ್ದಿಪತ್ರ


 

ಶಾಂತಿಯ ಮಂತ್ರಕ್ಕೆ ಅಣ್ವಸ್ತ್ರದ ಅಕ್ಷತೆ

ಏನೇ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಎಂದಾಕ್ಷಣ ಒಮ್ಮೆ ಹೃದಯವೇ ತೇವವಾಗುತ್ತೆ. ಆ ಮನುಷ್ಯ ಪ್ರಧಾನಿ ಗಾದಿಯಲ್ಲಿ ಕುಳಿತ ಆ ದಿನಗಳೇ ಚೆಂದ. ಹದಿಮೂರು ದಿನದ ಸರ್ಕಾರ, ಆಮೇಲಿನ ೧೩ ತಿಂಗಳ ಸರ್ಕಾರ, ಕೊನೆಗೆ ಪೂರ್ಣ ಪ್ರಮಾಣದ ಅಧಿಕಾರ! ಅವರ ಕಾಲಕ್ಕೇ ಭಾರತವೆಂಬ ಈ ದೇಶ ಗಂಡು ರಾಷ್ಟ್ರ ಎನಿಸಿಕೊಂಡಿದ್ದು. ಅವರ ಕಾಲದಲ್ಲೇ ಈ ದೇಶದ ಜನರ ದೇಹದಲ್ಲಿ ಸ್ವಾಭಿಮಾನದ ರಕ್ತ ಹರಿದಿದ್ದು. ನಾಡಿದ್ದು ಮೇ ೧೧ಕ್ಕೆ ಪೋಖರಣ್ ನಲ್ಲಿ ಬಾಂಬ್ ಸ್ಫೋಟದ ಪರೀಕ್ಷೆ ನಡೆಸಿ ೧೫ ವರ್ಷಗಳಾಗುತ್ತವೆ. ಅದಕ್ಕೂ ಮುನ್ನ ಶಕ್ತಿಹೀನವಾಗಿದ್ದ ಭಾರತ ಅಲಿಪ್ತ ನೀತಿಯ ಶಾಂತಿಯ ಮಾತಾಡುತ್ತಿತ್ತು. ಆನಂತರ ನಮ್ಮ ಶಾಂತಿ ಮಂತ್ರವನ್ನು ಜಗತ್ತು ಬಾಯ್ಮುಚ್ಚಿ ಕೇಳಲಾರಂಭಿಸಿತು. ಅನುಮಾನವಿಲ್ಲ, ಶ್ರೇಯ ಅಟಲ್ ಜೀಗೇ.

ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ ಮಾಡಿದ ಮೊದಲ ಕೆಲಸವೇ ವಿಜ್ಞಾನಿಗಳನ್ನು ಕರೆದು ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ ಎಂದು ಎಂದು ಕೇಳಿದ್ದು. ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು. ಅವರೇನೋ ತಯಾರಿ ಶುರುವಿಟ್ಟರು. ಪಾಪ, ಸರ್ಕಾರವೇ ೧೩ ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ ಅದೆಷ್ಟು ಬೇಸರವಾಯ್ತೋ, ಪರಮಾಣು ಸಂಶೋಧನಾನಿರತ ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು. ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು, ದೇವೇಗೌದರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಅಣ್ವಸ್ತ್ರ ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ. ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು. ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ, ಪ್ರಧಾನಿಯಾಗಿ ಮತ್ತೆ ಬಂದೇಬರುತ್ತಾನೆಂಬ ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್ ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು, ಚಿದಂಬರಂರನ್ನು ಕರೆದು ಯೋಜನೆ ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು. `ನೀವು ಅಧಿಕಾರ ಕಳಕೊಂಡರೂ ನಾವು ನಮ್ಮ ಸಂಶೋಧನೆ ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ ಅಣ್ವಸ್ತ್ರವಲ್ಲ, ಹೈಡ್ರೋಜನ್ ಬಾಂಬನ್ನೇ ಸಿಡಿಸಿ ಪರೀಕ್ಷಿಸೋಣ ಎಂದುಬಿಟ್ಟರು. ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.
ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪ ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ ಗಮನಿಸುತ್ತಿದ್ದವು. ಅಮೆರಿಕಾದ್ ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ ತಿರುಗಾಡುತ್ತಿದ್ದರು. ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ ಅದನ್ನು ನನಸು ಮಾಡುವಲ್ಲಿ ಪ್ರಯಾಸವೂ ಜೋರಾಗಿಯೇ ಇತ್ತು. ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು. ಯೋಜನೆ ರೂಪುಗೊಂಡಿತು. ಕಲಾಂ, ಚಿದಂಬರಂ, ಅಟಲ್ ಜೀ ಮತ್ತು ಅವರ ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ ಸಂಜೆಯೇ!
ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ, ನೀರಿನ ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ ತಗ್ಗು ತೋಡುವಾಗ ತೊಂದರೆಯೂ ಇಲ್ಲ, ಆಳಕ್ಕೆ ಹೋದಂತೆ ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ. ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ ಶುರು ಮಾಡಬೇಕು. ಬೆಳಗಾಗುವುದರೊಳಗಾಗಿ ವಸ್ತುಗಳು, ವಾಹನಗಳು ಎಲ್ಲೆಲ್ಲಿದ್ದವೋ ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ ಅಣ್ವಸ್ತ್ರ ಪರೀಕ್ಷೆ ಇರಲಿ, ಅದರ ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ ವಿಜ್ಞಾನಿಗಳಿಗೆ ದಾರಿ ಮಾಡಿಕೊಟ್ಟರು. ದೂರದೂರದಿಂದ ಪರಿಸರ ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್ ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು ಯೋಜನೆ!
ಅಬ್ದುಲ್ ಕಲಾಂ, ಚಿದಂಬರಂ, ಕಾಕೋಡ್ಕರ್ ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ, ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ,ಫ್ಯಾನೂ ಇಲ್ಲದೆ ಕೆಲಸ ಮಾಡಬೇಕಿತ್ತು. ಗಾಳಿಗೆ ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ ಹೊತ್ತಿಕೊಂಡರೆ ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.
ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ. ಅದರ ಮರುದಿನವೇ ಪರೀಕ್ಷಣೆ ನಡೆದುಬಿಡಲಿ ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್ ಎಂಬ ಎರಡು ತಗ್ಗುಗಳು, ನವ್ ತಾಲ್ ಎಂಬ ೪ ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್ ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ. ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು. ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.
ದೊಡ್ಡ ದೊಡ್ಡ ರಿಂಗ್‌ಗಳನ್ನು ತಗ್ಗಿನೊಳಗೆ ಇಳಿಬಿಡಲು ಮರಳು ತುಂಬಿದ ಚೀಲಗಳನ್ನು ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್ ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರು. ನಿಮಿಶಕ್ಕೆ ೩ ಮರಳ ಚೀಲವಾದರೆ ೨೪ ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು. ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು. ಜಾಡು ಹುಡುಕಿಕೊಂಡು ಹೊರಟರೆ, ಸೈನಿಕರ ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ, ತಾನೂ ಮರಳ ಚೀಲ ಹೊರುವ ಕೆಲಸಕ್ಕೆ ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು. ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು. ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ ತಾನು ಕೆಲಸ ಮುಂದುವರೆಸಿದ್ದ. ಭಾರತದ ಮಹತ್ಸಾಧನೆಯೊಂದಕ್ಕೆ ಮುನ್ನುಡಿ ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ ಯೋಚನೆಯೇ ಅವನನ್ನು ರೋಮಾಂಚನಗೊಳಿಸಿಬಿಟ್ಟಿತ್ತು.
ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ, ಶಾಲೆಗೆ ರಜೆ ಕೊಡಿ, ಸೈನ್ಯದ ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು. ಸೋಹ್ರಂ ಎಂಬ ವ್ಯಕ್ತಿಯೊಬ್ಬ ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು, ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ? ೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ ಮನೆಯ ಸೂರು ಸೀಳಿಹೋಗಿತ್ತು. ಮನೆ ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ; ನಾವು ನಿಮ್ಮೊಂದಿಗಿದ್ದೇವೆ’ ಎಂದಿದ್ದ. ಅಧಿಕಾರಿ ಅವಾಕ್ಕಾಗಿ ಸೋಹ್ರಂನನ್ನು ತಬ್ಬಿಕೊಂಡಿದ್ದ.
ಕೊನೆಗೂ ಆ ಸಮಯ ಬಂದುಬಿಟ್ಟಿತ್ತು. ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ. ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ ಪ್ಲುಟೋನಿಯಮ್ ಮಿಸುಕಾಡಿದ್ದರೆ ಅನಾಹುತವೇ ಕಾದಿತ್ತು. ಇಡಿಯ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ತಂದೆ ತೀರಿಕೊಂಡ ಸುದ್ದಿ ಬಂತು. ಎಲ್ಲರ ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ, ತಂದೆಯ ಅಂತ್ಯ ಸಂಸ್ಕಾರ ಮುಗಿಸಿ, ಮುಂದಿನ ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು. `ನಮ್ಮಪ್ಪ ಇದ್ದಿದ್ದರೆ, ಹೀಗೇ ಮಾಡಲು ಹೇಳಿರುತ್ತಿದ್ದರು’ ಎಂದರು. ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು. ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ. ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ ಬೆಪ್ಪಾಯ್ತು. ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್ ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ ಕಿವಿಗೊಟ್ಟು ಕೂತಿದ್ದಾರೆ. ೦ಯಾವುದನ್ನೂ ನೇರವಾಗಿ ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ ಭಾಷೆಯಲ್ಲೇ ಕೇಳಬೇಕು.
ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು. ಮರಳು ಶಾಂತವಾಯ್ತು. ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ ಪರಿಣಾಮಗಳನ್ನು ಸೆರೆಹಿಡಿಯಲು ಕ್ಯಾಮೆರಾವೊಂದನ್ನು ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ ಶುರುಮಾಡಿದರು. ೫…೪…೩…೨…೧…. ಅವರೆದುರಿನ ಟೀವಿ ಪರದೆಯಲ್ಲಿ ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು. ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ ಒಂದಷ್ಟು ಸಂಕೇತವನ್ನು ಗೀಚಿತು. ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು. ಅವರು ಕುಣಿದಾಡುತ್ತ ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. `ವೈಟ್ ಹೌಸ್ ಸಿಡಿಯಿತು, ಬುದ್ಧ ಮತ್ತೆ ನಕ್ಕ!’ ಅಟಲ್ ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್, ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.
ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ ಮಾತ್ರ ಎದೆಯುಬ್ಬಿಸಿ ಬೀಗುತ್ತ ಜಗದೆದುರು ನಿಂತಿತ್ತು.
೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ತೆಂಡೂಲ್ಕರ್ ರಾಜ್ಯಸಭಾ ಸದಸ್ಯನಾಗುವ ಸುದ್ದಿ ಕೇಳಿ ರೋಮಾಂಚಿತರಾದವರು’ ಅವತ್ತಿನ ಆ ವಿಜ್ಞಾನಿಗಳೆಲ್ಲ ಎಲ್ಲಿ ಹೋದರೆಂಬ ವಿಚಾರಕ್ಕೆ ಚರ್ಚೆಗೂ ಕೂರಲಿಲ್ಲ…

Comments are closed.