ವಿಭಾಗಗಳು

ಸುದ್ದಿಪತ್ರ


 

ಶಾಲೆಯಲ್ಲಿ ಕೊನೆಯ ಬೆಂಚು, ಬಾಳಿನಲ್ಲಿ ಕೋಲ್ಮಿಂಚು

ಸುಹಾಸ್ ಗೋಪಿನಾಥ್… ಇಪ್ಪತ್ತಾರು ವರ್ಷದವ. ಅರಳುಹುರಿದಂತೆ ಇಂಗ್ಲಿಷ್ ಮಾತನಾಡುತ್ತಾನೆ. ಕನ್ನಡವೂ ಅಷ್ಟೇ ಮಧುರ. ಸದ್ಯಕ್ಕೆ ಜಾಗತಿಕ ಕಂಪನಿ ಗ್ಲೋಬಲ್ ಇಂಕ್ನ ಮಾಲಿಕ. ಅಷ್ಟೇ ಅಲ್ಲ, ವಿಶ್ವ ಬ್ಯಾಂಕ್‌ಗೆ ಭಾರತದ ಪರವಾದ ಏಕೈಕ, ಅತ್ಯಂತ ಕಿರಿಯ ಸಲಹೆಗಾರ. ಚಿಕ್ಕ ವಯಸ್ಸಿನಲ್ಲಿಯೇ ಇಂಟರ್ನೆಟ್ ಜಗತ್ತಿನೆಡೆಗೆ ಆಕರ್ಷಿತನಾಗಿ ರೈಮ್ ಕಲಿಯುವ ವೇಳೆಗೆ ವೆಬ್‌ಸೈಟ್ ನಿರ್ಮಾಣದ ಭಾಷೆಗಳನ್ನು ಕಲಿತ. ಅವನ ಮೊದಲ ವೆಬ್‌ಸೈಟ್ ಕೂಲ್ ಹಿಂದೂಸ್ಥಾನ್, ಹೆಮ್ಮೆ ಪಡುವ ಮುನ್ನವೇ ಕೂಲ್ ಪಾಕಿಸ್ತಾನ್ ಆಗಿಬಿಟ್ಟಿತ್ತು. ಯಾರೋ ಧೂರ್ತರು ಅದನ್ನು ಹ್ಯಾಕ್ ಮಾಡಿದ್ದರು. ೧೪ರ ಸುಹಾಸ್ ತಲೆ ನೂರು ದಿಕ್ಕಿನಲ್ಲಿ ಹರಿದಿತ್ತು. ಆತ ಕಂಪನಿಯೊಂದರ ಆರಂಭಕ್ಕೆ ಮುನ್ನುಡಿ ಬರೆದ. ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿತು. ವಯಸ್ಸು ಹದಿನೆಂಟು ಆಗುವವರೆಗೆ ಬ್ಯಾಂಕಿನಲ್ಲಿ ಖಾತೆ ತೆರೆಯುವಂತಿಲ್ಲ. ಇನ್ನು ಕಂಪನಿ ದೂರದ ಮಾತು ಎಂದುಬಿಟ್ಟಿತು. ಸುಮ್ಮನಿರುವ ಜಾಯಮಾನ ಸುಹಾಸನದಲ್ಲ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಬರೆದ. ಕರೆ ಬಂತು, ಓಡಿದ. ಅವನ ಕನಸಿನ ಕಂಪನಿ ಅಲ್ಲಿಂದ ಶುರುವಾಗಿಯೇ ಬಿಟ್ಟಿತು. ಹದಿನಾಲ್ಕರ ತರುಣ ಜಾಗತಿಕ ಕಂಪನಿಯ ಒಡೆಯನಾದ. ಜಗತ್ತಿನ ಅತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆ ಅವನದಾಯ್ತು.
ಅಚ್ಚರಿ ಗೊತ್ತೇನು? ಶಾಲೆಯಲ್ಲಿ ಮಾತ್ರ ಅವನೆಂದಿಗೂ ಮುಂದಿನ ಸಾಲಿನ ಹುಡುಗನಾಗಿರಲಿಲ್ಲ. ತನ್ನ ಅಣ್ಣನಷ್ಟು ಬುದ್ಧಿವಂತನಾಗಿರಲಿಲ್ಲ. ತಂದೆ – ತಾಯಿ  ಮೇಷ್ಟ್ರುಗಳೆಲ್ಲ ಅಣ್ಣನ್ನ ನೋಡು ಎಂದು ಮೂದಲಿಸುವವರೇ. ಇಂದು ಮಾತ್ರ ಎಲ್ಲವೂ ತಿರುಗಾಮುರುಗಾ! ಅವನ ತರಗತಿಯಲ್ಲಿ ಅವನಿಗಿಂತ ಮುಂದೆ ಕೂತು ಶಭಾಷ್‌ಗಿರಿ ಪಡೆದುಕೊಂಡವರು ಇಂದು ಅವನದೇ ಕಂಪನಿಯಲ್ಲಿ ಉದ್ಯೋಗಿಗಳು. ಅದು ಬಿಡಿ. ಸುಹಾಸ್‌ಗೆ ಇಷ್ಟೆಲ್ಲ ಮಾಡಿದ ನಂತರ ಬಿಇ ಪಡೆಯಬೇಕೆಂಬ ಮನಸ್ಸಾಯ್ತು. ಕಾಲೇಜಿಗೆ ಸೇರಿಕೊಂಡ. ಜಾಗತಿಕ ಖ್ಯಾತಿಯ ತರುಣ ಆತ. ಹೀಗಾಗಿ ಆಗಾಗ ವಿಶ್ವ ಬ್ಯಾಂಕು ಅವನನ್ನು ಬೇರೆ ಬೇರೆ ಕಾರಣಗಳಿಗೆ ಕರೆಸಿಕೊಳ್ಳುತ್ತಲಿತ್ತು. ಇತ್ತ ಸುಹಾಸ್ ಕಾಲೇಜಿನ ಕ್ಯಾಂಪಸ್ಸಿಗಿಂತ ಹೆಚ್ಚು ವಿಶ್ವಬ್ಯಾಂಕಿನ ಪಡಸಾಲೆಗಳಲ್ಲಿ ತಿರುಗಾಡುತ್ತಿದ್ದ. ಸಹಜವಾಗಿಯೇ ತರಗತಿಯಲ್ಲಿ ಹಾಜರಿ ಕಡಿಮೆಯಾಯ್ತು. ಪರೀಕ್ಷೆ ಬರೆಯಲು ಅನುಮತಿ ಸಿಗಲಿಲ್ಲ. ವಿಶ್ವ ಬ್ಯಾಂಕಿನ ಪತ್ರಗಳನ್ನೆಲ್ಲ ಸುಹಾಸ್ ಮುಖ್ಯಸ್ಥರ ಮುಂದೆ ಹರವಿದ. ವಿಶ್ವಬ್ಯಾಂಕಿಗಾದರೂ ಹೋಗು; ರಾಜ್ಯ ಬ್ಯಾಂಕಿಗಾದರೂ ಹೋಗು. ನನಗೆ ಹಾಜರಾತಿ ಬೇಕಷ್ಟೆ ಎಂಬ ಉತ್ತರ ಬಂತು. ಪರೀಕ್ಷೆ ಬರೆಯೋ ಆಸೆ ಕಮರಿಹೋಯ್ತು. ನಮ್ಮ ಶಿಕ್ಷಣ ವ್ಯವಸ್ಥೆ ಇಂಥದ್ದು. ಒಂದೋ ಹಾಜರಾತಿಯ ಹಿಂದೆ ಓಡುವಂಥದ್ದು. ಇಲ್ಲವೇ ಹೇಗಾದರೂ ಪದವಿ ಪ್ರಮಾಣ ಪತ್ರ ನೀಡಿಬಿಡುವಂಥದ್ದು!
ಪುತ್ತೂರಿನಲ್ಲೂ ಇಂತಹುದೇ ಒಂದು ಪ್ರೇರಣಾದಾಯಿ ಘಟನೆ ಇದೆ. ಪಿತ್ರಾರ್ಜಿತವಾದ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ  ಶಂಕರ ಭಟ್ಟರಿಗೆ ಬಂಗಾರದಂಥ ನೀರು ದಕ್ಕಿತು. ಕೃಷಿಯ ಕೆಲಸ ಮಾಡುತ್ತ ಮಾಡುತ್ತಲೇ ರಾಜ್ಯದ ಜನರಿಗೆ ಈ ನೀರನ್ನು ತಲುಪಿಸಬೇಕೆಂಬ ಹುಳ ಅವರ ತಲೆ ಹೊಕ್ಕಿತು. ಸಾಹಸಕ್ಕೆ ಕೈಹಾಕಿಯೇಬಿಟ್ಟರು. ಆ ಕುರಿತಂತೆ ಅಧ್ಯಯನ ನಡೆಸಿ ಬಿಂದು ನೀರಿನ ಕಂಪನಿ ಶುರುಮಾಡೇಬಿಟ್ಟರು. ನೋಡನೋಡುತ್ತಲೆ ಕಂಪನಿ ಬೆಳೆಯಿತು. ಅದೊಂದು ದಿನ ಕೋಕೊಕೋಲಾ ಕಂಪನಿ ೫ ಕೋಟಿಗೆ ಇಡಿಯ ಘಟಕವನ್ನು ಮಾರಲು ಕೇಳಿಕೊಂಡಿತು. ಉಹು…. ಇವರು ಒಪ್ಪಲಿಲ್ಲ. ಇಂದು ನಾಲ್ಕೈದು ರಾಜ್ಯಗಳಿಗೆ ಬಿಂದು ದಕ್ಕುತ್ತದೆ. ಆದರೆ ವಿಷಯ ಅದಲ್ಲ.   ಶಂಕರಭಟ್ಟರೊಡನೆ ಮಾತನಾಡುತ್ತ ಕಣ್ಣರಳಿಸಿ ಕೇಳಿದೆ. ನೀವು ಎಷ್ಟು ಓದಿಕೊಂಡಿದ್ದೀರಿ? ಹಾಗೆ ಕೇಳುವಾಗ ಎಂಬಿಎ ಆದರೂ ಆಗಿರಬೇಕೆಂಬ ಊಹೆ ಇತ್ತು. ಎಸ್‌ಎಸ್‌ಎಲ್‌ಸಿಯನ್ನೂ ಮಾಡಿಲ್ಲವೆಂಬ ಅವರ ಉತ್ತರ ಗಾಬರಿ ಹುಟ್ಟಿಸಿತು. ಸಹೋದರರು ಚೆನ್ನಾಗಿ ಓದಿಕೊಂಡು ಕೆಲಸದಲ್ಲಿದ್ದಾರೆ, ನಾನು ಏನೂ ಓದಿಕೊಂಡಿಲ್ಲ. ಒಂದಷ್ಟು ಜನರಿಗೆ ಕೆಲಸ ನೀಡಿದ್ದೇನೆ ಎನ್ನುವಾಗ ನನಗೆ ಆಶ್ಚರ್ಯವೂ ಸಂತೋಷವೂ ಏಕಕಾಲಕ್ಕೆ ಉಂಟಾದವು. ಅವರ ಮುಂದಿನ ಯೋಜನೆಯ ಬಗ್ಗೆ ತಿಳಿಯುವ ಕಾತರವಿತ್ತು. ಭಟ್ಟರು ಅವರಾಗಿಯೇ, `ಈ ಕಂಪನಿಯನ್ನು ಮತ್ತಷ್ಟು ಬೆಳೆಸಬೇಕು. ಮತ್ತಷ್ಟು ಜನರಿಗೆ ಉದ್ಯೋಗಾವಕಾಶ ಮಾಡಿಕೊಡಬೇಕು. ಇದನ್ನು ವಾರ್ಷಿಕ ನೂರುಕೋಟಿ ರೂಪಾಯಿಗಳಷ್ಟು ವಹಿವಾಟಿನ ಉದ್ಯಮವನ್ನಾಗಿ ರೂಪಿಸಬೇಕು ಅನ್ನುವ ಕನಸು ನನ್ನದು. ಅದಕ್ಕಾಗಿ ಶ್ರಮ ಹಾಕುತ್ತಿದ್ದೇನೆ. ಸಾಧಿಸಿ ತೋರಿಸುತ್ತೇನೆ ಅನ್ನುವ ಭರವಸೆ ನನಗಿದೆ’ ಎಂದಾಗ ನಾನು ಅವರ ಆತ್ಮವಿಶ್ವಾಸಕ್ಕೆ ಬೆರಗಾಗಿಬಿಟ್ಟಿದ್ದೆ.
ಇಷ್ಟೆಲ್ಲ ಮಾತು ಈಗೇಕೆಂದರೆ, ನಮ್ಮ ಶಿಕ್ಷಣ ಅದೆಂಥದ್ದು ಎಂದು ಚರ್ಚಿಸುವ ಕಾರಣಕ್ಕಾಗಿ. ಮಕ್ಕಳೊಳಗಿನ ಸಾಮರ್ಥ್ಯವನ್ನು ಹೊರತೆಗೆಯುವ ಶಿಕ್ಷಣ ಬೇಕಾಗಿದೆಯೇ ಹೊರತು ಅವರಿಗೆ ಮಾಹಿತಿ ತುಂಬಿ ತಲೆಕೆಡಿಸಿ ಕೂಲಿಗಳನ್ನಾಗಿ ಮಾಡುವ ಇಂದಿನ ಶಿಕ್ಷಣವಲ್ಲ. ಆತ್ಮವಿಶ್ವಾಸ ನೀಡದ ಸೃಜನಶೀಲತೆ ಬೆಳೆಸದ ಹೊಸದರ ತುಡಿತ ಹುಟ್ಟಿಸದ ದೊಡ್ಡ ಕನಸು ಕಾಣಲು ಪ್ರೇರೇಪಿಸದ ಶಿಕ್ಷಣ ಅದೆಂತಹ ಶಿಕ್ಷಣ? ಪ್ರೌಢ ಶಾಲೆಗೆ ಹೋಗುವ ವೇಳೆಗಾಗಲೇ ಸ್ವಂತ ಬುದ್ಧಿ ಕಳೆದುಕೊಳ್ಳುವಂತೆ ಮಹಾಪ್ರಯತ್ನವನ್ನೆ ಶಿಕ್ಷಣ ಎಂದು ಕರೆಯಲಾಗುತ್ತಿದೆ. ನಮ್ಮ ನೀತಿಗಳೆ ಹಾಗೆ. ಎಲ್ಲರಿಗೂ ಶಿಕ್ಷಣ ಕೊಡಿಸುವ ಭರದಲ್ಲಿ ಸಮರ್ಥ ಶಿಕ್ಷಣ ಕೊಡುವುದನ್ನು ಮರೆತುಬಿಟ್ಟಿದ್ದೇವೆ.
ತಲೆ ತುಂಬ ಗಣಿತದ ಸೂತ್ರಗಳನ್ನು ತುಂಬಿಕೊಂಡು ಸಮಾಜದ ಇಸವಿಗಳೊಂದಿಗೆ ಗುದ್ದಾಡುತ್ತಾ ವಿಜ್ಞಾನದ ಅತ್ಯಂತ ಕಠಿಣ ಪ್ರಯೋಗಗಳನ್ನು ಪಿಳಿಪಿಳಿ ನೋಡುತ್ತಾ ಕುಳಿತುಕೊಳ್ಳುವ ವಿದ್ಯಾರ್ಥಿ ವರ್ಷದ ಕೊನೆಯ ಪರೀಕ್ಷೆಗಾಗಿ ಬಡಿದಾಡಲು ಸನ್ನದ್ಧನಾಗುತ್ತಾನೆ ಅಷ್ಟೆ. ಅದೇ ಅವನ ಬುದ್ಧಿವಂತಿಕೆಯ ಅಳತೆಗೋಲು. ಹಾಗೆ ನೋಡಿದರೆ ಕೇವಲ ಹತ್ತು ವರ್ಷದ ಶಿಕ್ಷಣ ಆಸಕ್ತಿ ಹುಟ್ಟಿಸುವಂಥದ್ದಾದರೆ ಸಾಕು. ಮುಂದಿನದನ್ನು ಅವನೇ ಓದಿಕೊಳ್ಳುತ್ತಾನೆ.
ನನಗೆ ಚೆನ್ನಾಗಿ ನೆನಪಿದೆ. ಶಿಬಿರವೊಂದಕ್ಕೆ ಬಂದ ಮಿತ್ರ ಚೈತ್ರ ತನ್ನ ಕಂಪ್ಯುಟರ್ ಅನ್ನು ಪ್ರೊಜೆಕ್ಟರ್‌ಗೆ ಹೊಂದಿಸಿ ಪರದೆಯ ಮೇಲೆ ಬಗೆಬಗೆಯ ಪ್ರಾಣಿಗಳನ್ನು ತೋರಿಸುತ್ತಾ ಸಾಗಿದ್ದ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅತ್ಯಂತ ವಿಶಿಷ್ಟ ಪ್ರಾಣಿ ಸಂಕುಲದ ಪರಿಚಯ ಅದು. ಸೇರಿದ್ದ ಅರವತ್ತು ಮಕ್ಕಳೂ ಬಾಯಿ ಕಳಕೊಂಡು ನೋಡಿದರು. ಆಮೇಲಿನ ಕಥೆ ಕೇಳಿ. ಮಕ್ಕಳೆಲ್ಲ ಪಾರ್ಕಿನಲ್ಲಿ ಕಾಣುವ ಕೀಟಗಳನ್ನು ಹತ್ತಿರದಿಂದ ಗುರುತಿಸಲಾರಂಭಿಸಿದರು. ಈ ಮುನ್ನ ಕೇಳಿದುದರೊಂದಿಗೆ ತಾಳೆ ಹಾಕಲಾರಂಭಿಸಿದರು. ಅರೆ! ಪಶ್ಚಿಮ ಘಟ್ಟದ ಹಲ್ಲಿ ಇಲ್ಲೂ ಇದೆ ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದರು. ಮಕ್ಕಳ ಪಾಲಿನ ಪ್ರಾಣಿಶಾಸ್ತ್ರದ ಪಾಠವೇ ಮುಗಿದಿತ್ತು. ಸಲೀಮ್ ಅಲಿ ಎಂಬ ಪಕ್ಷಿ ಶಾಸ್ತ್ರಜ್ಞ ಹುಟ್ಟಿದ್ದು ಹೀಗೇ. ಪಕ್ಷಿಗಳನ್ನು ನೋಡುವ ಹುಚ್ಚು ಬೆಳೆಸಿದ ಉಪಾಧ್ಯಾಯರು ಪಕ್ಕಕ್ಕೆ ಸರಿದರು. ಹುಡುಗ ಅವುಗಳನ್ನು ಗಮನವಿಟ್ಟು ನೋಡಿದ. ನೋಡಿದ್ದೆಲ್ಲ ದಾಖಲಿಸುತ್ತ ಹೋದ. ಅಧ್ಯಯನ ನಡೆಸಿದ. ಪಕ್ಷಿಗಳು ಸಲೀಮ್ ಅಲಿಯ ಪಾಲಿಗೆ ಪಕ್ಕದ ಮನೆಯ ಮಕ್ಕಳಂತಾದವು. ಸ್ವತಂತ್ರ ಚಿಂತನೆಯ ವ್ಯಕ್ತಿತ್ವ ಹುಟ್ಟೋದು ಹೀಗೆ. ನಮಗೆ ಸ್ವಾತಂತ್ರ್ಯ ಬಂತು ನಿಜ. ಆದರೆ ಸ್ವತಂತ್ರ ಚಿಂತನೆ ಬರಲೇ ಇಲ್ಲ.
ಮಣಿಪಾಲದಲ್ಲಿ ಪ್ರೌಢಶಾಲಾ ಮಕ್ಕಳಿಗೆಂದೇ ನಡೆದ ಇನ್ಸ್‌ಪೈರ್ ಕಾರ್ಯಕ್ರಮದಲ್ಲಿ ಮೈಸೂರಿನ ಗಣಿತ ಪ್ರೊಫೆಸರ್ ಯೊಗಾನಂದರು ಹೇಳುತ್ತಿದ್ದರು. ಜಗತ್ತಿನ ಮೂಕ ಭಾಷೆ ಗಣಿತ. ಆದರೆ ಅದನ್ನೂ ಕಷ್ಟವಾಗುವಂತೆ ಕಲಿಸಿಬಿಟ್ಟಿದ್ದೇವೆ ಅಂತ. ಅಲ್ಲವೆ ಮತ್ತೆ? ಭಾರತೀಯರಾಗಿ ನಾವು ಬುದ್ಧಿವಂತಿಕೆಯನ್ನು ಗಣಿತ ಸೂತ್ರಗಳನ್ನು ಉರು ಹೊಡೆಯುವುದರಲ್ಲಿ ವ್ಯಯಿಸುತ್ತಿದ್ದೇವೆ. ಸಮಸ್ಯೆಯ ಹಿಂದಿನ ತತ್ವವನ್ನು ಅರ್ಥೈಸಿಕೊಳ್ಳುವ ಯತ್ನ ನಡೆದೇ ಇಲ್ಲ. ಹೀಗಾಗಿ ಪ್ರಮುಖ ನಿರ್ಣಯ ಕೈಗೊಳ್ಳುವಲ್ಲಿ ನಾವು ಸೋಲೋದು. ಭಾರತೀಯ ವಿದ್ಯಾರ್ಥಿಗಳು ಗಣಿತ ಒಲಂಪಿಯಾಡ್‌ನಲ್ಲಿ ಭಾಗವಹಿಸುತ್ತಾರಲ್ಲ, ಅಲ್ಲಿ ಅನೇಕ ಬಾರಿ ಸೋಲೋದು ಈ ಕಾರಣಕ್ಕಾಗಿಯೇ. ಸಪ್ತಸ್ವರಗಳಿಂದ ಹುಟ್ಟುವ ನೂರಾರು ರಾಗಗಳ ಕುರಿತಂತೆ ಒಬ್ಬ ಗಣಿತ ಅಧ್ಯಾಪಕ ಸಮರ್ಥವಾಗಿ ಪಾಠ ಮಾಡಬಲ್ಲ ಗೊತ್ತೇನು? ಹಾಗೆ ಮಾಡುವ ಮೂಲಕ ಆತ ಗಣಿತದ ಆಸಕ್ತಿಯನ್ನೂ ಅರಳಿಸಬಲ್ಲ. ಸಂಗೀತದೆಡೆಗೆ ಗಮನ ಹರಿಸುವಂತೆಯೂ ಮಾಡಬಲ್ಲ.
ಶಿಕ್ಷಣ ಹೀಗಿದ್ದಾಗಲೇ ಅದರ ಲಾಭ. ಶ್ರೇಷ್ಟ ಪಂಡಿತರಾದ ಸುಧಾಕರ ಶರ್ಮರಿಗೆ ಮಗ ಏನು ಮಾಡುತ್ತಿದ್ದಾನೆ ಎಂದು ಕೇಳಿದ್ದಕ್ಕೆ ಸದ್ಯಕ್ಕೆ ಮಡಿಕೆ ಮಾಡುವ ಮಣ್ಣಿನಲ್ಲಿ ಕಲಾಕೃತಿ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದಿದ್ದರು. ಶಾಲೆಗೆ ಹೋಗೋಲ್ವಾ ಅಂದಿದ್ದಕ್ಕೆ, ಮನೆಯಲ್ಲಿಯೇ ಅದಕ್ಕಿಂತ ಹೆಚ್ಚು ಕಲಿಯುತ್ತಿದ್ದಾನೆ ಎಂದು ಉತ್ತರಿಸಿದ್ದರು. ಶಾಲೆಯ ಶಿಕ್ಷಣ ನಂಬಿಕೆ ಕಳಕೊಂಡಷ್ಟೂ ಜನ ಪ್ರತ್ಯೇಕ ಹಾದಿ ಹಿಡಿಯುತ್ತಿದ್ದಾರೆ. ಸ್ವಂತ ಆಲೋಚನೆಗೆ ಪ್ರೇರಣೆ ಕೊಡಬಲ್ಲ ಸಮರ್ಥ ಮಾರ್ಗ ಅರಸುತ್ತಿದ್ದಾರೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಗೆ ಸರಿಯಾದ ದಾರಿ ತೋರಿಸಲು ಸೂಕ್ತ ಸಮಯ. ಅಂಕಪಟ್ಟಿಗಳಲ್ಲಿ ತುಂಬಿರುವ ಭಾರೀಭಾರೀ ಅಂಕಗಳ ನಡುವೆ ಶಿಕ್ಷಣ ವ್ಯವಸ್ಥೆಯನ್ನು ಹೂತುಹೋಗಲು ಬಿಡದೆ ಅಲ್ಲೆಲ್ಲೋ ಕೊನೆಯ ಸಾಲಿನಲ್ಲಿ ಕುಳಿತ ಸುಹಾಸ ಗೋಪಿನಾಥ್‌ನಂಥವರನ್ನು ಹುಡುಕುವ ಕೆಲಸ ಮಾಡಬೇಕಿದೆ. ಕಲ್ಪನೆಗಳನ್ನು ಸಾಕಾರಗೊಳಿಸಬಲ್ಲ ನವಪೀಳಿಗೆಯನ್ನು ನಿರ್ಮಿಸಬೇಕಿದೆ. ಗಮನವಿಟ್ಟು ನೋಡುವ, ಕೇಳುವ ವರ್ಗವನ್ನು ತಯಾರಿಸಬೇಕಿದೆ.
ಹೌದು… ಶಿಕ್ಷಣದ ಜವಾಬ್ದಾರಿ ಬಹಳಷ್ಟಿದೆ.

1 Response to ಶಾಲೆಯಲ್ಲಿ ಕೊನೆಯ ಬೆಂಚು, ಬಾಳಿನಲ್ಲಿ ಕೋಲ್ಮಿಂಚು

  1. Laxminarayan Shastri

    Bahala Volleya lekhana Sulibele avare… Namagu enadru hosadannu maduva icchashati ide adare sadhaneya marga sikta illa ashte…? nimminda enadru salahe sikkutta….?