ವಿಭಾಗಗಳು

ಸುದ್ದಿಪತ್ರ


 

ಸದ್ಯ, ನಮ್ಮ ಸೈನಿಕ ಇಂದಿಗೂ ದೇಶಭಕ್ತನಾಗಿದ್ದಾನೆ…

ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಮರುವಸತಿ ಕಲ್ಪಿಸಿ ಅವರಿಗೆ ನೌಕರಿಯನ್ನೂ ಕೊಟ್ಟು ಹೆಂಡತಿ ಮಕ್ಕಳನ್ನು ಸಾಕುವ ಕೆಲಸಕ್ಕೆ ಕಾಶ್ಮೀರ ಸರ್ಕಾರ ಕೈ ಹಾಕಿದೆ! ದೇಶ ರಕ್ಷಣೆಗೆ ಹೋರಾಡಿದ ಸೈನಿಕ ಎರಡು ಗುಂಟೆ ಜಮೀನಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಲೆದಾಡಬೇಕು. ಇದು ಯಾವ ನ್ಯಾಯ?

ಕಳೆದ ಕೆಲವಾರು ತಿಂಗಳಿಂದ ಸೈನಿಕರ ಸಾವಿನ ಸುದ್ದಿ ನಿತ್ಯ ಕೇಳುವಂತಾಗಿದೆ. ಮೊನ್ನೆ ತಾನೆ ೩೧ರ ತರುಣ ಫಿರೋಜ್ ಖಾನ್ ಕದನದಲ್ಲಿ ಕಾದಾಡುವ ಅವಕಾಶವೂ ದೊರೆಯದೇ ಸಾವಿಗೀಡಾಗಿದ್ದಾನೆ. ಬಕ್ರೀದ್ ಹಬ್ಬದ ದಿನ ಅವನ ಮನೆಯವರಿಗೆ ಸರ್ಕಾರ ಕೊಟ್ಟ ಉಡುಗೊರೆ ಅದು! ಹಬ್ಬಕ್ಕೆಂದು ಮಂಜೂರಾಗಿದ್ದ ರಜೆಯನ್ನು ಪಾಕಿಸ್ತಾನಿಯರ ಒಳನುಸುಳುವಿಕೆಯ ಕಾರಣದಿಂದ ತಿರಸ್ಕರಿಸಿ ಗಡಿಯಲ್ಲಿಯೇ ಉಳಿದಿದ್ದ ಫಿರೋಜ್. ದುರ್ದೈವದ ಕ್ಷಣಗಳಲ್ಲಿ ಸಿಡಿದ ಪಾಕಿಸ್ತಾನಿ ಮೋರ್ಟಾರ್ ಶೆಲ್ ಅವನನ್ನು ಬಲಿ ತೆಗೆದುಕೊಂಡೇಬಿಟ್ಟಿತು. ಇದಕ್ಕೂ ಕೆಲವು ದಿನ ಮುನ್ನ ಗಡಿ ನಿಯಂತ್ರಣಾ ರೇಖೆಯ ಕೇರನ್ ವಿಭಾಗದಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಜವಾನ ಪಾಟೀಲ್ ಶವವಾಗಿ ಮಲಗಿದ್ದ. ಇದಕ್ಕೆ ಕೆಲವು ತಿಂಗಳುಗಳ ಮುನ್ನ ಮಲಗಿದ್ದ ಐವರನ್ನು ಪಾಕಿಸ್ತಾನಿಯರು ಹತ್ಯೆ ಮಾಡಿದ್ದರು. ಅದಕ್ಕೂ ಕೆಲವು ತಿಂಗಳ ಮುಂಚೆ ಇಬ್ಬರು ಸೈನಿಕರ ತಲೆ ಕಡಕೊಂಡು ಹೋಗಿದ್ದರು!

a9361a8b-a885-4005-a780-4bb4d347f79fHiResಪಾಕಿಸ್ತಾನಕ್ಕೆ ಕಾಣದ ಕೈಗಳ ಬೆಂಬಲ ದೊರೆಯುತ್ತಲೇ ಇದೆ. ಅಮೆರಿಕದ ಕಬಂಧಬಾಹುಗಳಿಂದ ಅಫ್ಘಾನಿಸ್ತಾನ ಬಿಡಿಸಿಕೊಳ್ಳುತ್ತಿದ್ದಂತೆ ಅತ್ತಲಿಂದ ಭಯೋತ್ಪಾದಕರ ಪೂರೈಕೆ ಖಾತ್ರಿಯಾಗಿತ್ತು. ಇತ್ತ ಚೀನಾ ಶಸಾಸಗಳನ್ನು ಒದಗಿಸುವುದರ ಅನುಮಾನವೂ ಬಲವಾಗಿತ್ತು. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಿದ್ದ ಕೇಂದ್ರ ಸರ್ಕಾರ, ತನ್ನೆಲ್ಲ ಗುಪ್ತಚರ ವಿಭಾಗವನ್ನು ದೇಶದೊಳಗಿನ ತನ್ನ ವಿರೋಧಿಗಳ ಮೇಲೆ ಛೂ ಬಿಟ್ಟು ಕುಳಿತಿತ್ತು. ಪರಿಣಾಮ? ಪಾಕಿಸ್ತಾನಕ್ಕೆ ಸುಗ್ಗಿ ಹಬ್ಬ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಗಡಿಯಲ್ಲಿ ೧೯೨ ಬಾರಿ ಕದನ ವಿರಾಮದ ಉಲ್ಲಂಘನೆಯಾಗಿದೆ. ಕಳೆದ ವರ್ಷ ೧೧೭ ಬಾರಿ, ೨೦೧೧ರಲ್ಲಿ ೬೧ಬಾರಿ ಆಗಿತ್ತು. ನುಸುಳುಕೋರರ ಉಪಟಳ ಅದೆಷ್ಟು ತೀವ್ರವಾಗಿದೆಯೆಂದರೆ ನಾಲು ದಿನದಲ್ಲಿ ಎಂಟು ಬಾರಿ, ಒಂದೇ ದಿನದಲ್ಲಿ ನಾಲ್ಕು ಬಾರಿ ಕದನವಿರಾಮ ಉಲ್ಲಂಸಿದ ದಾಖಲೆಗಳಿವೆ. ಜಮ್ಮುವಿನ ಗಡಿಗುಂಟ ೨೦೦ಕ್ಕೂ ಹೆಚ್ಚು, ಕಾಶ್ಮೀರದ ಗಡಿಯಾಚೆ ೫೦೦ಕ್ಕೂ ಹೆಚ್ಚು ಭಯೋತ್ಪಾದಕರು ಒಳಗೆ ಬರಲು ಕಾತರದಿಂದ ಕಾದು ಕುಂತಿದ್ದಾರೆಂದು ಸೈನ್ಯದ ಗುಪ್ತಚರರ ವರದಿ. ನಮ್ಮ ರಕ್ಷಣಾ ಸಚಿವರು ದಿವ್ಯಮೌನ ಧರಿಸಿ ಕುಳಿತಿರುವುದು ಮಾತ್ರ ಅಚ್ಚರಿ.
ಇತ್ತೀಚೆಗೆ ಗಡಿಭಾಗದ ಕೇರನ್‌ನಲ್ಲಿ ಭಯೋತ್ಪಾದಕರು ಒಳನುಸುಳಿದರಲ್ಲ ಆಗಲೂ ಆದದ್ದು ಇದೇ. ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಹೊಂದಿಕೊಂಡ ಭಾಗ ಅದು. ಘನವಾದ ಕಾಡು, ಬೆಟ್ಟ-ಗುಡ್ಡ, ಕಾಲುವೆಗಳಿಂದ ಕೂಡಿದ ದುರ್ಗಮ ಪ್ರದೇಶ. ಹೀಗಾಗಿಯೇ ನಮ್ಮ ಸೇನೆ ಅತ್ತ ಗಮನ ಹರಿಸುವುದನ್ನೇ ಬಿಟ್ಟುಬಿಟ್ಟಿತ್ತು. ಶಲಾಭತ್, ಕಾಂತ್‌ವಲಿ, ಟ್ರೆಗ್ರಾಮ್‌ಗಳು ಅಂದಿನಿಂದಲೂ ನುಸುಳುಕೋರರಿಗೆ ಹೇಳಿ ಮಾಡಿಸಿದ ಜಾಗ. ಬೆಟ್ಟಗುಡ್ಡಗಳ ಬದಿಯಲ್ಲಿ, ಕಾಡಿನ ನಡುವೆ ಅವಿತುಕೊಳ್ಳಲಿಕ್ಕೂ ಸ್ಥಳ ಸಿಕ್ಕುತ್ತಿದ್ದುದರಿಂದ ಭಯೋತ್ಪಾದಕರು ಒಳನುಸುಳಲು ರಾಜಮಾರ್ಗವಾಗಿತ್ತು. ಆಗೀಗ ಸೈನಿಕರ ಕೈಗೆ ಒಂದಿಬ್ಬರು ಸಿಕ್ಕಿ ಬೀಳುತ್ತಿದ್ದುದು ಬಿಟ್ಟರೆ ಇತ್ತ ಗಮನಹರಿಸುವ ಮಹತ್ವದ ಕೆಲಸವೇನೂ ಆಗಲಿಲ್ಲ. “ಯುದ್ಧವನ್ನು ತಡೆಯುವ ಮಹತ್ವದ ಉಪಾಯವೆಂದರೆ, ಯುದ್ಧಕ್ಕೆ ತಯಾರಿ ನಡೆಸುವುದು” ಅಂತ ಯುದ್ಧಪಂಡಿತರು ಹೇಳುತ್ತಾರೆ. ಅದು ಸತ್ಯವೂ ಹೌದು. ಚೀನಾದೊಡನೆ ಯುದ್ಧ ಮಾಡುವುದಿರಲಿ, ಕಣ್ಣೆತ್ತಿ ನೋಡುವುದಕ್ಕೂ ಯಾರೂ ತಯಾರಿಲ್ಲ. ಕಾರಣ ಅದು ಸದಾ ಯುದ್ಧಕ್ಕೆ ಸಜ್ಜಾಗಿರುತ್ತದೆ ಅಂತ. ನವಾಜ್ ಷರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದಾಗಲೇ ಅವಘಡಗಳ ಮುನ್ಸೂಚನೆ ಇತ್ತು. ಭಾರತ ಆಗಲೂ ಎಚ್ಚರಿಕೆವಹಿಸಲಿಲ್ಲ. ಪ್ರಧಾನಿ ಮನಮೋಹನ್ ಸಿಂಗ್‌ರು ನವಾಜ್ ಷರೀಫರನ್ನು ತಬ್ಬಿಕೊಳ್ಳುವ ಮಾರ್ಗ ಹುಡುಕಾಡುತ್ತಿದ್ದರು. ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರೆ ಮುಸಲ್ಮಾನರು ವೋಟು ಹಾಕಲಾರರೆಂಬ ಹೆದರಿಕೆ ಅವರಿಗೆ.
ಇದರ ನೇರ ಪರಿಣಾಮ ನಮ್ಮ ಸೈನ್ಯಕ್ಕೇ. ಈ ಬಾರಿ ಕೇರನ್ ಭಾಗದಲ್ಲಿ ನುಸುಳುಕೋರರು ಬಂದಿರುವ ಸುದ್ದಿ ಸಿಕ್ಕಾಗ ಬಲು ತಡವಾಗಿತ್ತು. ಇದೊಂಥರಾ ಕಾರ್ಗಿಲ್‌ಗೆ ವಿರುದ್ಧವಾದ ಸ್ಥಿತಿ. ನೂರಾರು ಭಯೋತ್ಪಾದಕರು ಭಾರತದ ಗಡಿಯೊಳಕ್ಕೆ ಕಾಲುವೆಗಳ ಮೂಲಕ ಒಳನುಸುಳಿ ಬಂದು ನಮ್ಮ ಪೋಸ್ಟ್‌ಗಳನ್ನು ಆಕ್ರಮಿಸಿ ಕುಳಿತುಬಿಟ್ಟರು. ಕಾರ್ಗಿಲ್‌ನಲ್ಲಿ ಬೆಟ್ಟದ ಮೇಲೆ ಪಾಕ್ ಸೇನೆ ಇತ್ತು. ಇಲ್ಲಿ ಕಾಡಿನ ಮರೆಯಲ್ಲಿ ಅಡಗಿತ್ತು ಪಾಕ್‌ಸೇನೆ. ನಮ್ಮ ಸೈನ್ಯಕ್ಕೆ ಇದೊಂದು ಸವಾಲು. ನಮ್ಮ ಠಾಣೆಗಳನ್ನು ಕಳಕೊಂಡೆವೆಂದರೆ ಯುದ್ಧದ ಸ್ಥಿತಿ ನಿರ್ಮಾಣವಾಗಿರುವುದನ್ನು ಒಪ್ಪಿಕೊಳ್ಳಬೇಕು. ಬರಿಯ ಭಯೋತ್ಪಾದಕರು ನುಸುಳಿದ ಗಲಾಟೆಯಾದರೆ ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಮುಗಿಯಬೇಕು. ಎರಡೂ ಆಗಲಿಲ್ಲ.
ಗಡಿಯ ಆ ತುದಿಯಲ್ಲಿ ನಿಂತು ಪಾಕಿಸ್ತಾನದ ಸೇನೆ ಸಾಕಷ್ಟು ರಕ್ಷಣೆ ನೀಡುತ್ತಿತ್ತು. ಇತ್ತ ನುಸುಳುಕೋರರ ಸಂಖ್ಯೆಯನ್ನೂ ನಿರ್ಣಯಿಸಲಾಗದ ಸೇನೆ ಹೆಲಿಕಾಪ್ಟರ್‌ಗಳನ್ನು ಬಳಸುವ ಯೋಚನೆ ಮಾಡಿತಾದರೂ ಕೂಡಲೇ ಅದನ್ನು ಕೈಬಿಡಲಾಯ್ತು. ಬಂದಿರುವ ಭಯೋತ್ಪಾದಕರು ಅದನ್ನು ಹೊಡೆದುರುಳಿಸಿದರೆ ಯುದ್ಧ ಶುರುವಾಯ್ತೆಂಬ ಸಂದೇಶ ರವಾನೆಯಾಗಿಬಿಡುವ ಹೆದರಿಕೆಯಿಂದ ಸೈನ್ಯ ಕಾಲಾಳುಗಳನ್ನೇ ಬಳಸುವ ನಿರ್ಧಾರ ಮಾಡಿತು.
ಸೆಪ್ಟೆಂಬರ್ ೨೩ರ ರಾತ್ರಿ ಗೂರ್ಖಾ ರೈಫಲ್ಸ್ ದಾಳಿಕೋರರನ್ನು ತಡೆಯುವ ಕಾರ್ಯಾಚರಣೆಗೆ ಮುಂದಾಯ್ತು. ನಿರೀಕ್ಷೆ ಮೀರಿದ ಕದನವಾಯ್ತು. ಭಾರತ ಐವರು ಸೈನಿಕರು ಗಾಯಗೊಂಡರು. ಶ್ರೀನಗರದ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಮಲಗಿದ್ದ ಸೈನಿಕ ರಾಜು ದೋಲು, ತಾನು ಈಗಿಂದೀಗಲೇ ಯುದ್ಧಭೂಮಿಗೆ ಮರಳಬೇಕು ಎಂದು ಹಠ ಹಿಡಿದು ಕುಳಿತ. ನಲ್ವತ್ತಕ್ಕೂ ಹೆಚ್ಚು ಭಯೋತ್ಪಾದಕರು ಸಾಕಷ್ಟು ಶಸಗಳೊಂದಿಗೆ ಒಳಬಂದು ಕುಳಿತಿದ್ದಾರೆಂಬುದು ಅವನ ಮಾತಿನಿಂದಲೇ ಎಲ್ಲರಿಗೂ ಗೊತ್ತಾದದ್ದು. ಎಚ್ಚೆತ್ತುಕೊಂಡ ಸೇನೆ ಸೈನಿಕರು ಯಾರೊಂದಿಗೂ ಮಾತನಾಡುವಂತಿಲ್ಲ ಎಂದು ತಾಕೀತು ಮಾಡಿತಲ್ಲದೇ, ಮಾಧ್ಯಮಗಳಿಗೂ ನೈಜ ಚಿತ್ರಣ ನೀಡದೇ ಸುಮ್ಮನಾಯಿತು. ಒಟ್ಟಾರೆ ಈ ಕಾರ್ಯಾಚರಣೆ ಮುಗಿದ ವೇಳೆಗೆ ಹದಿನೈದು ದಿನವಾದರೂ ಕಳೆದಿತ್ತು. ಬೆರಳೆಣಿಕೆಯಷ್ಟು ಭಯೋತ್ಪಾದಕರು ಸತ್ತುರುಳಿದ್ದರು. ಇದು, ಅತಿ ದೊಡ್ಡ ಭಯೋತ್ಪಾದಕ-ವಿರೋಧಿ ಕಾರ್ಯಾಚರಣೆ ಎಂಬ ಹೆಸರು ಪಡೆಯಿತು.
ವಾಸ್ತವವಾಗಿ ಪಾಕಿಸ್ತಾನ ಯೋಚಿಸಿದ್ದೇ ಬೇರೆ. ತನ್ನ ಬಾಡಿಗೆ ಸೈನಿಕರ ಮೂಲಕ ಭಾರತದೊಳಕ್ಕೆ ಶಸಾಸಗಳನ್ನು ತಲುಪಿಸಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ದಂಗೆಗಳಿಗೆ ಕಾರಣವಾಗಬೇಕೆಂಬ ಬಯಕೆ ಅದಕ್ಕಿತ್ತು. ಚುನಾವಣೆಯ ಹೊತ್ತಲ್ಲಿ ಇಲ್ಲಿ ಅಸಂಬದ್ಧ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ನೀಡುವ ಉದ್ದೇಶ ಕೂಡಾ. ಸೈನ್ಯದ ಸಮಯಪ್ರಜ್ಞೆಯಿಂದ ಉಳಕೊಂಡೆವು ಅಷ್ಟೇ.. ಇಷ್ಟಕ್ಕೂ ಸೈನಿಕರು ಜೀವದ ಹಂಗು ತೊರೆದು ಭಯೋತ್ಪಾದಕರ ವಿರುದ್ಧ ಕಾದಾಡಬೇಕಾದರೂ ಏಕೆ? ಹೀಗೆ ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಮರುವಸತಿ ಕಲ್ಪಿಸಿ ಅವರಿಗೆ ನೌಕರಿಯನ್ನೂ ಕೊಟ್ಟು ಹೆಂಡತಿ ಮಕ್ಕಳನ್ನು ಸಾಕುವ ಕೆಲಸಕ್ಕೆ ಕಾಶ್ಮೀರ ಸರ್ಕಾರ ಕೈ ಹಾಕಿದೆ! ದೇಶಕ್ಕಾಗಿ ಬಡಿದಾಡಿದ ಸೈನಿಕ ಎರಡು ಗುಂಟೆ ಜಮೀನಿಗಾಗಿ ಡಿ.ಸಿ. ಎದುರು ಅಲೆದಾಡಬೇಕು; ದೇಶದ್ರೋಹಿಗೆ ಸಕಲ ಸವಲತ್ತುಗಳೂ ತಾಂಬೂಲದೊಂದಿಗೆ ಸಿಗಬೇಕು. ಇದು ಯಾವ ನ್ಯಾಯ?
ಅ-ಲ್‌ನನ್ನು ನೇಣಿಗೇರಿಸಿದ ಕೆಲವು ತಿಂಗಳಲ್ಲಿಯೇ ಅವನ ಮಾವನ ಊರು ಬಾರಾಮುಲ್ಲಾಕ್ಕೆ ಹೋಗುವ ಅವಕಾಶ ನನಗೆ ದಕ್ಕಿತ್ತು. ಅಲ್ಲಿನ ತರುಣರ ಪಾಲಿಗೆ ಆತ ಭಗತ್‌ಸಿಂಗ್. “ಸರ್ಕಾರ ಹೀಗೆ ನಡಕೊಳ್ಳೋದರಿಂದಲೇ ಶಿಕ್ಷಿತ ತರುಣರೂ ಭಯೋತ್ಪಾದಕರಾಗೋದು” ಅಂತ ನನ್ನೊಂದಿಗಿದ್ದ ಪಿಎಚ್‌ಡಿ ಪಡಕೊಂಡ ವಿದ್ಯಾರ್ಥಿ ವಾದಿಸುತ್ತಿದ್ದ. ವಿಷ ಈಗ ದೇಶದಾದ್ಯಂತ ಸಮಾನವಾಗಿ ಹಬ್ಬುತ್ತಿದೆ. ಗೃಹಸಚಿವರಿಗೆ, ರಕ್ಷಣಾ ಸಚಿವರಿಗೆ ಇದು ಗೊತ್ತಿಲ್ಲವೆಂದಲ್ಲ. ೨೦೦೮ರ ನವೆಂಬರ್ ೨೨ಕ್ಕೆ  ನಡೆದ ಡಿಜಿ ಮತ್ತು ಐಜಿಗಳ ಸಭೆಯಲ್ಲಿ ಆಗಿನ ಗೃಹ ಸಚಿವ ಶಿವರಾಜ್ ಪಾಟೀಲರು “ನುಸುಳುವಿಕೆ ಎಲ್ಲೆಡೆಯಿಂದಲೂ ನಡೆಯುತ್ತಿದೆ. ನಗರ ಪಟ್ಟಣಗಳಲ್ಲಿ ವಾಸವಿದ್ದುಕೊಂಡು, ವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತ, ಕಂಪನಿಗಳಲ್ಲಿ ಕೆಲಸ ಮಾಡುತ್ತ ಭಯೋತ್ಪಾದನಾ ಕೃತ್ಯಗಳಿಗೆ ಸಹಕರಿಸುವವರನ್ನು ಗುರುತಿಸಿ ಬಂಧಿಸುವ ಕೆಲಸವನ್ನು ಸಿಐಡಿಗಳು ಮಾಡಬೇಕು” ಎಂದಿದ್ದರು. ಅಷ್ಟೇ ಅಲ್ಲ, ಭಾರತದ ಕರಾವಳಿ ಪ್ರದೇಶ ಭಯೋತ್ಪಾದಕ ದಾಳಿಗೆ ಮುಕ್ತವಾಗಿದೆ ಎಂಬ ಕೂಗಂತೂ ೧೯೯೩ರ ಮುಂಬೈ ದಾಳಿಯ ನಂತರ ತೀವ್ರವಾಗಿತ್ತು. ಅಷ್ಟಾದರೂ ಮುಂಬೈ ಮೇಲಿನ ಕಸಬ್ ದಾಳಿಯನ್ನು ತಡೆಯುವ ಸಾಮರ್ಥ್ಯ ನಮಗಿರಲಿಲ್ಲ! ಈಗಲೂ ಲಕ್ಷದ್ವೀಪದಲ್ಲಿ ಹರಡಿಕೊಂಡಿರುವ ೩೬ ದ್ವೀಪಗಳಲ್ಲಿ ನಮ್ಮ ಪೊಲೀಸರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಅದಾಗಲೇ ಐಎಸ್‌ಐ ಅಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿರುವ ಸುದ್ದಿ ಕೇಳಿಬರುತ್ತಿದೆ. ಕೇರಳಕ್ಕೆ ಶಸಾಸಗಳು ಪೂರೈಕೆಯಾಗೋದು ಆ ಮಾರ್ಗದಿಂದಲೇ ಎಂಬ ಗುಪ್ತಚರ ವರದಿಯೂ ಇದೆ. ಅದಕ್ಕೇ ಬಂಧತನಾದ ಯಾಸಿನ್ ಭಟ್ಕಳ್ ಮಂಗಳೂರಿನಲ್ಲಿ ಬಲವಾದ ಬೇರು ಇಳಿಬಿಟ್ಟಿದ್ದನ್ನು ಒಪ್ಪಿಕೊಂಡಿದ್ದ.
ಇವ್ಯಾವುದೂ ಹೊಸ ಸಂಶೋಧನೆಗಳೇನಲ್ಲ. ಈ ದೇಶದ ಎಲ್ಲ ಗೃಹಸಚಿವರಿಗೂ, ರಕ್ಷಣಾ ಸಚಿವರಿಗೂ ಗೊತ್ತಿರುವ ವಿಚಾರಗಳೇ. ನಮ್ಮ ಗುಪ್ತಚರ ಸಂಸ್ಥೆಗಳು ಈ ಕುರಿತಂತೆ ಕೊಟ್ಟ ವರದಿಯ ಮೇಲೆ ಕಣ್ಣಾಡಿಸಿ ಅದನ್ನೇ ಆಧಾರವಾಗಿಟ್ಟುಕೊಂಡು ಸೆಮಿನಾರುಗಳಲ್ಲಿಯೂ ಅವರು ಮಾತನಾಡುತ್ತಾರೆ. ಪ್ರತ್ಯಕ್ಷ ಕಾರ್ಯಾಚರಣೆ ವಿಚಾರ ಬಂದಾಗ ಸೆಕ್ಯುಲರ್ ಸೋಗು ಹಾಕಿಕೊಂಡು ಎಲ್ಲವನ್ನೂ ಮರೆತುಬಿಡುತ್ತಾರೆ.
ನಿಜಕ್ಕೂ ದೇಶ ಇಂದು ಕೆಟ್ಟ ಸ್ಥಿತಿಯ ಮೂಲಕ ಹಾದುಹೋಗುತ್ತಿದೆ. ಹುಟ್ಟುವ ಮಗು ಸ್ವಾಭಿಮಾನಿಯಾಗಿ, ದೇಶಭಕ್ತನಾಗಿ ಬೆಳೆಯಲೆಂಬ ಕನಸು ಕಟ್ಟಿಕೊಡಬಲ್ಲ ನಾಯಕನೇ ಇಲ್ಲ. ಕರ್ನಾಟಕವನ್ನೇ ನೋಡಿ.. ಮುಸಲ್ಮಾನನಾಗಿ ಹುಟ್ಟಿದರೆ ಸಾಕು, ಓದಿಸೋದು, ಉಣಿಸೋದು, ಆರೋಗ್ಯ ನೋಡಿಕೊಳ್ಳೋದು ಕೊನೆಗೆ ಮದುವೆ ಮಾಡಿ ಪಾತ್ರೆಪಗಡೆ, ಹಾಸಿಗೆ-ಮಂಚ, ಬೀರು ಎಲ್ಲವನ್ನೂ ಕೊಡೋದು ಸರ್ಕಾರವೇ. ಸರ್ಕಾರವೆಂದರೆ ತಂದೆ ಇದ್ದಂತೆ ಅಂತಾರಲ್ಲ. ಈ ದೃಷ್ಟಿಯಿಂದ ಅದು ಸರಿ ಎನಿಸುತ್ತೆ!
ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಾಚಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಲು ಸಿದ್ಧ ಎನ್ನುವ ಮಾನಸಿಕತೆ ನಮ್ಮೊಳಗೆ ಸೇರಿಯಾಗಿದೆ. ಇದು ಸೈನಿಕನೊಳಗೆ ಹೊಕ್ಕಿಬಿಟ್ಟಿತೆಂದರೆ ನಮ್ಮ ಕತೆಯೇನು ಹೇಳಿ! ಸದ್ಯ, ನಮ್ಮ ಸೈನಿಕ ಇಂದಿಗೂ ದೇಶಭಕ್ತನಾಗಿದ್ದಾನೆ. ಸಾಯುವುದು ಖಾತ್ರಿಯಿರುವುದು ಗೊತ್ತಾದಾಗಲೂ ಬೆನ್ನು ತೋರಿ ಓಡಿಬರುವ ಜಾಯಮಾನ ಅವನದಲ್ಲ. ಹೀಗಾಗಿಯೇ ಪ್ರತ್ಯಕ್ಷ ಕದನ ನಡೆದರೂ ಅದು ನುಸುಳುಕೋರರನ್ನು ಹೊರದಬ್ಬಿದ ಕಾರ್ಯಾಚರಣೆ ಎಂದು ಆಳುವ ನಾಯಕರ ಮಾನವನ್ನೂ, ದೇಶದ ಘನತೆಯನ್ನೂ ಉಳಿಸಿದ್ದಾನೆ.
ಓಹ್! ಸೈನಿಕ ಚಿರಾಯುವಾಗಲಿ!

Comments are closed.