ವಿಭಾಗಗಳು

ಸುದ್ದಿಪತ್ರ


 

ಸಮಾಜಘಾತುಕ ಕಾನೂನನ್ನು ಭಂಜಿಸೋದೂ ಗೊತ್ತು!

ರೋಗಿಯೋ, ನೊಂದವನೋ ದೇವರೆದುರು ಕುಳಿತು ಸಂಕಟ ಹೇಳಿಕೊಂಡು ಸಮಾಧಾನದುತ್ತರ ಪಡೆವಾಗ ಅವನ ಆತ್ಮವಿಶ್ವಾಸ ವೃದ್ಧಿಯಾಗೋದನ್ನು ನೋಡಬೇಕು. ಅದು ಗೊತ್ತಿದ್ದೇ ವೈದ್ಯರೂ ತಮ್ಮ ಆಸ್ಪತ್ರೆಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಒಮ್ಮೆ ಭಕ್ತಿಯಿಂದ ಪ್ರಾರ್ಥಿಸಿ ಅನ್ನೋದು.

ಐದು ವರ್ಷ ಉಸಿರು ಬಿಗಿ ಹಿಡಿದು,  ಬಾಲ ಮುದುರಿಕೊಂಡು ಬಿದ್ದಿದ್ದವರೆಲ್ಲ ಅದೇ ತಮಟೆ ಬಾರಿಸುತ್ತಾ ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದೊಡನೆ ಭೇಟಿ ಮಾಡಿದ ಜನರನ್ನು ಕಂಡಾಗಲೇ ಇಂಥದ್ದೆಲ್ಲದರ ಮುನ್ಸೂಚನೆ ಇತ್ತು. ಈಗ ಇವರು ಮೂಢನಂಬಿಕೆಗಳ ಕುರಿತಂತೆ ವಿಧೇಯಕವೊಂದನ್ನು ಚರ್ಚೆಗೆ ತಂದಿದ್ದಾರೆ. ದೇಹದ ಮೇಲೆ ದಾಳಿ ಮಾಡುವ ವೈರಸ್ಸುಗಳೂ ಪೂರಕ ವಾತಾವರಣಕ್ಕೆ ಕಾಯುತ್ತಿರುತ್ತವೆಯಂತೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದೊಡನೆ ಅವು ಮೆರೆದಾಡುತ್ತವೆ. ದೇಹವನ್ನು ಜರ್ಝರಿತಗೊಳಿಸಿಬಿಡುತ್ತವೆ. ಈ ಎಡ ಪಂಥೀಯ ಬುದ್ಧಿಜೀವಿಗಳೂ ಅಂಥವೇ ವೈರಸ್ಸುಗಳು. ಈಗ ಇವರು ಮೂಢ ನಂಬಿಕೆ ಕುರಿತ ವಿಧೇಯಕವೊಂದನ್ನು ಚರ್ಚೆಗೆ ತಂದಿದ್ದಾರೆ.
ಈ ವಿಧೇಯಕದ ಹಿಂದೆ ನಿಂತಿರುವ ಜನರ ಪಟ್ಟಿ ನೋಡಿದರೆ ಗೊತ್ತಾಗುತ್ತೆ. ಇವರಲ್ಲಿ ಯಾರೊಬ್ಬರೂ ಸಮಾಜ ಕಟ್ಟುವ ಕಳಕಳಿ ಇದ್ದವರಲ್ಲ. “ಹಿಂದು ಧರ್ಮವನ್ನು ನಾಶ ಮಾಡುವುದೇ ತಮ್ಮ ಗುರಿ” ಎಂದು ಟೀವಿ ಚರ್ಚೆಗಳಲ್ಲೆಲ್ಲ ಉತ್ಕಂಠಿತವಾಗಿ ಸಾರುವವರೇ ಇವರು. ಅವಕಾಶ ಸಿಕ್ಕಾಗಲೆಲ್ಲ ಹಿಂದು ಧರ್ಮವನ್ನು ಬೈದು, ಬೈಗುಳಗಳಿಂದ ಪಾರಾಗಲು ಯಾವುದಾದರೂ ಜಾತಿಯನ್ನು ಗುರಾಣಿಯಾಗಿ ಬಳಸುವವರು. ಶಂಕರಾಚಾರ್ಯರ ಕುರಿತಂತೆ ಮಾತನಾಡಿದರೆ ಬಸವಣ್ಣನವರನ್ನು ಅಡ್ಡ ತರುವರು; ಬಸವಣ್ಣನವರನ್ನೇ ಎತ್ತಿ ಹಿಡಿದರೆ, ಅವರ ಜಾತಿಯ ತಗಾದೆ ತೆಗೆಯುವರು. ದುರ್ದೈವವೆಂದರೆ (ಕ್ಷಮಿಸಿ, ಇದು ಕೊನೆಯ ಬಾರಿ. ವಿಧೇಯಕ ಅಂಗೀಕಾರವಾದರೆ ಈ ಪದವನ್ನು ಬಳಸುವಂತಿಲ್ಲ!) ಇಂತಹ ಬಾಲಬಡುಕರನ್ನು ಕಟ್ಟಿಕೊಂಡ ನಾಯಕರು ನಮ್ಮನಾಳುವವರು. sid2
ಹಿಂದು ಧರ್ಮವನ್ನು ವಿರೋಧಿಸುವವರೆಲ್ಲ ಇಂದಿನ ದಿನಗಳಲ್ಲಿ ’ಸೆಕ್ಯುಲರ್’ಗಳು. ಹಿಂದು ಆಚರಣೆಗಳನ್ನು ಧ್ವಂಸಗೈಯ್ಯುವ ಮಾತನಾಡಿದವರೆಲ್ಲ ’ವಿಜ್ಞಾನಿ’ಗಳು! ಅಚ್ಚರಿಯೇನು ಗೊತ್ತೇ? ಈ ವಿಧೇಯಕದಲ್ಲಿ ವೈeನಿಕ ಮನೋಭಾವನೆಯ ಕುರಿತಂತೆ ಪ್ಯಾರಾಗಟ್ಟಲೆ ಬರೆದಿರುವವರಲ್ಲಿ ವಿಜ್ಞಾನಿಯೆನಿಸಿಕೊಂಡವರು ಒಬ್ಬರೂ ಇಲ್ಲ. ಮಂಗಳನ ಅಂಗಳಕ್ಕೇ ಲಗ್ಗೆ ಇಟ್ಟು ದಾಖಲೆಗೆ ಉಪಕ್ರಮಿಸಿದ ವಿಜ್ಞಾನಿಗಳು ಉಡಾವಣೆಗೆ ಮುನ್ನ ತಲೆಬಾಗಿದ್ದು ತಿರುಪತಿ ತಿಮ್ಮಪ್ಪನಿಗೇ! ನಮ್ಮ ವಿeನಿಗಳೆಂಬ ಅಸಡ್ಡೆ ಇದ್ದರೆ ವಿಜ್ಞಾನ ಲೋಕದ ಮಹಾನ್ ಹೆಸರು ಕೆಲ್ವಿನ್‌ರನ್ನು ನೆನಪಿಸಿಕೊಳ್ಳಿ. ’ವಿಜ್ಞಾನದ ಆಳಕ್ಕಿಳಿದಂತೆಲ್ಲ ನಾಸ್ತಿಕವಾದದಿಂದ ದೂರವಾಗುತ್ತಿದ್ದೇನೆ, ಗಟ್ಟಿಯಾಗಿ ಆಲೋಚನೆ ಮಾಡುವವರಿಗೆಲ್ಲ ವಿಜ್ಞಾನ ದೇವರನ್ನು ಒಪ್ಪುವಂತೆ ಮಾಡುತ್ತದೆ” ಎನ್ನುತ್ತಿದ್ದರು ಅವರು. ಐನ್‌ಸ್ಟೀನ್‌ರಂತೂ ಭಗವಂತನ ಆಲೋಚನೆ ಅರಿತುಬಿಟ್ಟರೆ ಸಾಕು ಉಳಿದುದೆಲ್ಲ ಅದರ ಸಾಕಾರಕ್ಕೆ ಪುರಾವೆಗಳು ಎಂದಿದ್ದರು. ನಮ್ಮವರು ಅದನ್ನೇ ಅಧ್ಯಾತ್ಮ ಎಂದು ಕರೆದು ಸಾಧನೆಗೆ ಕುಳಿತಿದ್ದರು, ಸಾಕ್ಷಾತ್ಕರಿಸಿಕೊಂಡಿದ್ದರು. ಅದನ್ನು ಜನಸಾಮಾನ್ಯರಿಗೆ ವಿವರಿಸುವ ಸರಳ ಉಪಾಯ ಬಳಸಿದ್ದರು.
ನಿಮಗೆ ಗೊತ್ತಿರಲಿ. ಸತ್ಯವೆನ್ನುವುದಕ್ಕೆ ಸಮರ್ಥ ವಿವರಣೆ ನೀಡಲು ವಿeನವೂ ಸೋಲುತ್ತದೆಯೆನ್ನುವುದು ವಿಜ್ಞಾನಿಗೂ ಗೊತ್ತು. ಇಂದು ಸಾಬೀತಾಗಿರುವ ಸತ್ಯ ನಾಳೆ ಸುಳ್ಳಾಗಬಹುದು. ಕ್ವಾಂಟಂ ಸಿದ್ಧಾಂತದ ಸಂಶೋಧನೆಯಿಂದ ನ್ಯೂಟನ್ ಚಿಂತನೆಗಳು ಮೂಲೆಗುಂಪಾದರೆ, ಅನ್‌ಸರ್ಟೆನಿಟಿ ಸಿದ್ಧಾಂತದ ತರುವಾಯ ಕ್ವಾಂಟಂ ಸಿದ್ಧಾಂತಕ್ಕೂ ಹೊಸ ದಿಕ್ಕು ದೊರೆಯಿತು. ವೈಜ್ಞಾನಿಕ ಮನೋಭಾವನೆ ಎನ್ನುವುದು ಜ್ಞಾನಪೀಠಕ್ಕೆ ಲಾಬಿ ಮಾಡಿದಷ್ಟು ಸುಲಭವಲ್ಲ, ಗೊತ್ತಿರಲಿ!
ಸಂತರನ್ನು ಢೋಂಗಿ, ಕಳ್ಳ, ಮೋಸಗಾರ ಎಂದೆಲ್ಲ ಸಂಬೋಧಿಸುವ ಬುದ್ಧಿಜೀವಿಗಳನ್ನು ಏನೆಂದು ಕರೆಯಬೇಕು? ಪ್ರಶಸ್ತಿಗಾಗಿ ಹಲ್ಕಿರಿದು ನಿಲ್ಲುವ, ತಮ್ಮವರಿಗೆ ಕೆಲಸ ಕೊಡಿಸಲು ಗೋಗರೆವ, ಸಜ್ಜನರನ್ನು ಜರಿದು ಸುದ್ದಿಯಲ್ಲಿರಲು ಯತ್ನಿಸುವ ಬಾಲಬಡುಕರೆಂದರೆ ಸಾಕೋ? ಸ್ವಾಮಿಗಳಿಗೆ ಪಾದಪೂಜೆ ಮಾಡುವುದನ್ನು, ಪಲ್ಲಕ್ಕಿಯಲ್ಲಿ ಕುಂತು ಹೋಗುವುದನ್ನು ಉರಿಗಣ್ಣಿನಿಂದ ನೋಡುತ್ತಾರಲ್ಲ; ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅದ್ದೂರಿ ಮೆರವಣಿಗೆಯಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಿಂತಿರುತ್ತಾರಲ್ಲ ಯಾಕೆ? ಸ್ವಾಮಿಗಳಾದರೋ ಭಕ್ತಿಯಿಂದ ಕೊಟ್ಟ ಹಣದಲ್ಲಿ ಆಚರಣೆಗಳನ್ನು ಮಾಡುತ್ತಾರೆ, ಇವರು ತೆರಿಗೆ ಹಣದಲ್ಲಿ ಮಜಾ ಉಡಾಯಿಸುತ್ತಾರಲ್ಲ, ಇದಕ್ಕೊಂದು ವಿಧೇಯಕ ಬೇಡವಾ?
ನಮ್ಮ ಮಂತ್ರಿಗಳು ಗೂಟದ ಕಾರಲ್ಲಿ ಕೂತು ಹಿಂದೆ-ಮುಂದೆ ಬೆಂಗಾವಲಿಗೆ ಜನರನ್ನಿಟ್ಟುಕೊಂಡು ತಿರುಗಾಡುತ್ತಾರಲ್ಲ ಇವೆಲ್ಲ ಅಗತ್ಯವಿದೆಯಾ? ಬೆಳಗ್ಗೆ ಟ್ರಾಫಿಕ್ ಕಡಿಮೆ ಇರುವಾಗ ವಿಧಾನಸೌಧ ಸೇರಿಕೊಂಡು, ರಾತ್ರಿ ತಡವಾಗಿ ಮನೆಗೆ ಬಂದರಾಯ್ತಲ್ಲ. ಏಕಿಷ್ಟು ದುಂದುವೆಚ್ಚ? ಸಂತರಾದರೋ ಮನೆ-ಮಠ-ಪರಿವಾರ ತ್ಯಜಿಸಿ ಭಕ್ತರ ಸೇವೆಗೈಯ್ಯುತ್ತಿದ್ದಾರೆ. ಇವರು ಮಕ್ಕಳು-ಮೊಮ್ಮಕ್ಕಳು-ಸಂಬಂಧಿಕರ ಉದ್ಧಾರಕ್ಕೇ ನಿಂತಿದ್ದಾರೆ. ಅದೇಕೆ ಇವರಿಗಾಗಿ ಒಂದು ವಿಧೇಯಕ ಮಂಡಿಸಬಾರದು!
ಸಾಧುಗಳನೇಕರು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿರುವುದನ್ನು ತಡೆಯಲಿಕ್ಕಾಗಿ ಕಾನೂನು ಎಂದಿದ್ದೀರಿ. ಸರಿ. ಅರ್ಧಕ್ಕೂ ಹೆಚ್ಚ ಸಾಧುಗಳು ಮೋಸಗಾರರು ಅಂತಾನೇ ಇಟ್ಟುಕೊಳ್ಳಿ. ಆದರೆ ಭಾರತದ ಶೇಕಡಾ ೯೦ರಷ್ಟು ರಾಜಕಾರಣಿಗಳ ಮೇಲೆ ಜನರಿಗೆ ನಂಬಿಕೆಯೇ ಇಲ್ಲವಲ್ಲ! ಅದು ಬಿಡಿ. ಈ ಈ ವಿಧೆಯಕ ರಚನೆಯ ಸಮಿತಿಯಲ್ಲಿ ಕೆಲವು ಪತ್ರಕರ್ತರು ಇದ್ದಾರೆ.ಇಂದು ಮಾಧ್ಯಮವನ್ನು ಜನರು ’ಪೇಯ್ಡ್ ಮೀಡಿಯಾ’ ಅಂತಲೇ ಕರೆಯೋದು. ಢೋಂಗಿ ಬಾಬಾಗಳಿಗಿಂತ ಜನ ಹೆಚ್ಚು ಹೆದರೋದು ಪತ್ರಕರ್ತರಿಗೆ! ಈ ಸಮಿತಿಯಲ್ಲಿ ವಿಶ್ವವಿದ್ಯಾಲಯವೊಂದರ ಉಪಕುಲಪತಿಗಳು, ಪ್ರಾಧ್ಯಾಪಕರೂ ಇದ್ದಾರೆ. ಪಿ.ಎಚ್‌ಡಿ. ಕೊಡುವ ಮುನ್ನ ಯಾವ ಯಾವ ಶೋಷಣೆ ನಡೆಯುತ್ತದೆಂದು ಅವರನ್ನೇ ಕೇಳಿ ನೋಡಿ. ನಿತ್ಯಾನಂದರೂ ನಾಚುವಂತಹ ರಂಗು ರಂಗಿನ ಕತೆ ಹೇಳುತ್ತಾರೆ. ಅರೆ! ಇವರನ್ನೆಲ್ಲ ಜ್ಞಾನಿಗಳೆಂದು ನಂಬಿದ್ದೇವಲ್ಲ ಇದು ಮೂಢನಂಬಿಕೆಯಲ್ಲವೇ? ಪ್ಲೀಸ್, ನಿಮ್ಮ ವಿಧೇಯಕದಲ್ಲಿ ಇವರಿಗೂ ಒಂದು ಜಾಗ ಕೊಡಿ.
ಆಹಾ! ನಿಮ್ಮ ಪದಪ್ರಯೋಗದ ಸಾಮರ್ಥ್ಯಕ್ಕೆ ತಲೆದೂಗಲೇ ಬೇಕು. ಭಕ್ತರು ಗುರುಗಳ ಪಾದಪೂಜೆ ಮಾಡುವುದನ್ನು ’ಧಾರ್ಮಿಕ ವ್ಯಾಪಾರ’ ಎಂದಿದ್ದೀರಿ. ನೀವು ಬರೆದ ಪುಸ್ತಕಕ್ಕೆ ರಾಯಲ್ಟಿ ಪಡೆದದ್ದನ್ನು ’ಅಕ್ಷರ ವ್ಯಾಪಾರ’ ಅಂತ ಕರೆಯಬಹುದಾ? ವಿಶ್ವವಿದ್ಯಾಲಯಕ್ಕೆ ಸೆಮಿನಾರಿಗೆ ಹೋಗಿ ಕರೆಸಿ, ಜೇಬು ತುಂಬಿಸಿದವರಿಗೆ ಆನಂತರ ಪ್ರಶಸ್ತಿ ಕೊಡುವ ನಿಮ್ಮನ್ನು ’ಜ್ಞಾನದ ದಂಧೆಕೋರ’ ಅಂತ ಸಂಬೋಧಿಸಬಹುದಾ? ಎಲ್ಲವೂ ಹಾಗೇ. ನಮ್ಮ ಬುಡಕ್ಕೆ ಬೆಂಕಿ ಹೊತ್ತಿದಾಗಲೇ ಬಿಸಿ ಅನುಭವಕ್ಕೆ ಬರೋದು.
ಇಷ್ಟಕ್ಕೂ ರೋಗಿಯೋ, ನೊಂದವನೋ ದೇವರೆದುರು ಕುಳಿತು ಸಂಕಟ ಹೇಳಿಕೊಂಡು ಸಮಾಧಾನದುತ್ತರ ಪಡೆವಾಗ ಅವನ ಆತ್ಮವಿಶ್ವಾಸ ವೃದ್ಧಿಯಾಗೋದನ್ನು ನೋಡಬೇಕು. ಅದು ಗೊತ್ತಿದ್ದೇ ವೈದ್ಯರೂ ತಮ್ಮ ಆಸ್ಪತ್ರೆಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಒಮ್ಮೆ ಭಕ್ತಿಯಿಂದ ಪ್ರಾರ್ಥಿಸಿ ಅನ್ನೋದು. ದೇವರನ್ನು ಧಿಕ್ಕರಿಸುತ್ತೇನೆ ಎನ್ನುತ್ತಿದ್ದ ಜ್ಯೋತಿ ಬಸು, ಬುದ್ಧದೇವ ಭಟ್ಟಾಚಾರ್ಯರೂ ಹೆಂಡತಿ ಮಾಡುವ ಪೂಜೆಗೆ ಹೂವು ತಂದು ಕೊಡುತ್ತಿದ್ದವರೇ. ಇವೆಲ್ಲ ಬೂಟಾಟಿಕೆ ಏಕೆ?sid1
ಇಷ್ಟಕ್ಕೂ ಸಿದ್ದರಾಮಯ್ಯನವರೇ, ಮುಖ್ಯಮಂತ್ರಿ ಪದವಿ ಸ್ವೀಕಾರಕ್ಕೆ ಮುನ್ನ ಕುರ್ಚಿಗೆ ಪೂಜೆ ಮಾಡಿಕೊಂಡವರು ನೀವು; ಅವತ್ತಿಡೀ ನಿಂಬೇಹಣ್ಣು ಕೈಯಲ್ಲಿ ಹಿಡಿದುಕೊಂಡೇ ಕಾಲ ಕಳೆದವರು ನೀವು; ಚಾಮರಾಜನಗರಕ್ಕೆ ಹೋಗುವ ಮುನ್ನ ಗೆಳೆಯನಿಗೆ ಹೇಳಿ ಹೋಮ ಮಾಡಿಸಿದಿರಿ, ಆಮೇಲೆ ಪರಿವಾರದವರ ಕೈಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಟ್ಟಾಗಿ ಪೂಜೆ ಮಾಡಿಸಿದಿರಿ. ಬಹಳ ಹಿಂದೆ (ನಿಮಗೆ ಮರೆತಿರಬಹುದು) ನೀವು ಕುಳಿತಿದ್ದ ಜೆಸಿಬಿಗೆ ವಿದ್ಯುತ್ ತಂತಿ ತಗುಲಿ ನೀವು ಪ್ರಾಣಾಪಾಯದಿಂದ ಪಾರಾದಾಗ ’ದೇವರೇ ಕಾಪಾಡಿದ’ ಅಂದಿರಿ. ನಿಮ್ಮ ಕಂಡರಾಗದವರು ವಾಮಾಚಾರ ಮಾಡಿಸಿದ್ದಾರೆಂದಾಗ ಇಲ್ಲವೆನ್ನದೇ ಸುಮ್ಮನಾದಿರಿ. ಈಗ ಮಾತ್ರ ಏಕೀ ರಾದ್ಧಾಂತ? ಅದೇಕೆ ದೇವರ ಕೋಣೆಗೆ ಬೆನ್ನು ಹಾಕಿ ಕುಳಿತುಬಿಟ್ಟಿದ್ದೀರಿ. ಹುಷಾರು. ನೀವು ಬಲವಾಗಿ ನಂಬಿದವರೆಲ್ಲ ನಿಮಗೆ ಕೈ ಕೊಟ್ಟಿದ್ದಾರೆ. ನೀವು ನಂಬಲಾರೆನೆನ್ನುವ ಭಗವಂತನೇ ನಿಮ್ಮನ್ನುಳಿಸಿರೋದು. ಈಗಲೂ ಅಷ್ಟೇ. ಚುನಾವಣೆ ನಂತರ ಮುಖ್ಯಮಂತ್ರಿ ಪಟ್ಟ ಕಳೆದುಹೋಗುವ ಭೀತಿ ಉಂಟಾಗಿದೆಯಲ್ಲ, ಅದಕ್ಕೆ ಈಗಲೇ ತಯಾರಿ ಶುರುವಾಗಿದೆ. ವೈಜ್ಞಾನಿಕ ರಾಜಕಾರಣದ್ದಲ್ಲ, ಧಾರ್ಮಿಕ ರಾಜಕಾರಣದ್ದು!ಹೋಮ – ಹವನಗಳದ್ದು. ಯಾವುದನ್ನು ನಿಷೇಧಿಸುತ್ತೀರಿ? ಯಾರನ್ನು ಜೈಲಿಗೆ ಅಟ್ಟುವಿರಿ?
ಹೋಗಲಿ. ಈ ವಿಧೇಯಕದಲ್ಲಿ ಜಾನುವಾರುಗಳಿಗೆ ರೋಗ ಬಂದಾಗ ಬರೆ ಹಾಕುವುದನ್ನು, ಕಿವಿ ಕತ್ತರಿಸುವುದನ್ನು ನಿಷೇಧಿಸಬೇಕು ಎನ್ನಲಾಗಿದೆ. ನೀವು ನೋಡಿದರೆ ಗೋಹತ್ಯಾ ನಿಷೇಧ ವಿಧೇಯಕವನ್ನೇ ಮರಳಿ ಪಡೆದಿದ್ದೀರಿ. ಏನಿದು ದ್ವಂದ್ವ? ಊಟಕ್ಕೆ ಕುರಿ-ಕೋಳಿ ಕತ್ತರಿಸಿ ಚಪ್ಪರಿಸಿದರೆ ಸರಿ, ಅದನ್ನು ದೇವರಿಗೆ ಒಪ್ಪಿಸಿ ತಿಂದರೆ ತಪ್ಪು! ನನಗಂತೂ ಇದರ ಹಿಂದಿನ ವೈಜ್ಞಾನಿಕ ತಥ್ಯ ಅರ್ಥವಾಗಲಿಲ್ಲ.
ಅಂದಹಾಗೆ ಇದೇ ವಿಧೇಯಕದಲ್ಲಿ ’ಉದ್ದೇಶಪೂರ್ವಕವಾಗಿ ಅನ್ಯಧರ್ಮೀಯರ ಆಚರಣೆ-ಸಂಪ್ರದಾಯ-ನಂಬಿಕೆಗಳನ್ನು ನಿಂದಿಸುವುದು, ಅವಮಾನಿಸುವುದು, ತುಚ್ಛೀಕರಿಸುವುದು ಶಿಕ್ಷಾರ್ಹವಾಗಬೇಕು’ ಎಂದಿದೆ. ಅನೇಕ ಬಾರಿ ನೀವೇ ನಿಮ್ಮ ಭಾಷಣದಲ್ಲಿ ನಮ್ಮ ಆಚರಣೆ-ನಂಬಿಕೆಗಳನ್ನು ಆಡಿಕೊಂಡಿದ್ದೀರಿ. ಅದೇಕೆ ವಿಧೇಯಕದ ಆಶಯ ಈಡೇರಿಸಲು ನೀವೇ ಮುಂದೆ ನಿಲ್ಲಬಾರದು? ಪಾದಪೂಜೆ-ಅಡ್ಡಪಲ್ಲಕ್ಕಿ ಇವೆಲ್ಲ ನಮ್ಮ ನಂಬಿಕೆಗಳು. ಇದನ್ನು ಮೌಢ್ಯವೆಂದು ಕರಡು ಸಮಿತಿಯೇ ಕರೆದಿರುವುದರಿಂದ ಅದೇಕೆ ಅವರೆಲ್ಲರನ್ನೂ ಜೈಲಿಗೆ ತಳ್ಳಬಾರದು. ಸ್ವಘೋಷಿತ ದೇವಮಾನವರಿರುವಂತೆ ಸ್ವಘೋಷಿತ ಪವಾಡಭಂಜಕರೂ ಇದ್ದಾರಲ್ಲ, ನಮ್ಮ ಪರಂಪರೆಯನ್ನು ಆಡಿಕೊಂಡು ತಿರುಗಾಡುತ್ತಿದ್ದಾರಲ್ಲ ಪ್ರಯೋಗಾತ್ಮಕವಾಗಿ ಇವರುಗಳಿಗೆಲ್ಲ ಕಠಿಣ ಶಿಕ್ಷೆಯೇಕೆ ನೀಡಬಾರದು?
ಹೌದು, ನಿಜ. ನೀವು ಬೆಳಗಾವಿಯಲ್ಲಿ ವಿಧೇಯಕ ಮಂಡಿಸಿ. ಅದು ಅತ್ತ ಅನುಮೋದನೆಗೊಳ್ಳುತ್ತಿದ್ದಂತೆ ಇತ್ತ ಈ ಎಲ್ಲರಿಗೂ ಶಿಕ್ಷೆಯಾಗಲಿ. ಆಗ ಸಮಾಜ ತಂತಾನೇ ಶುದ್ಧಿಯಾಗುತ್ತದೆ. ಮೌಢ್ಯತೆಯ ಕಳೆ ತೊಲಗುತ್ತದೆ.
ಅದನ್ನು ಬಿಟ್ಟು ಹಿಂದು ಸಮಾಜದ ನಾಶಕ್ಕೇ ನೀವು ಈ ಕಾನೂನು ತಂದದ್ದಾದಲ್ಲಿ ಅಗೋ ನಮ್ಮದೂ ಒಂದು ಸವಾಲು. ನಾವು ಸಂತರನ್ನು ಊರೂರಲ್ಲೂ ಕರೆಸಿ ಪಾದಪೂಜೆ, ಪಲ್ಲಕ್ಕಿ ಉತ್ಸವಗಳನ್ನು ಮಾಡುತ್ತೇವೆ. ಅಹೋರಾತ್ರಿ ಭಜನೆ, ಹೋಮ ಮಾಡಿಸುತ್ತೇವೆ. ಜಪಮಾಲೆಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡುತ್ತೇವೆ, ಉಚಿತವಾಗಿ ಹಂಚುತ್ತೇವೆ. ಸಾಮೂಹಿಕ ಜಪಯಜ್ಞ ಮಾಡಿಸುತ್ತೇವೆ. ದೇವರಲ್ಲಿ ಪ್ರಶ್ನೆ ಕೇಳುತ್ತೇವೆ; ಕಾಣಿಕೆಯನ್ನೂ ನೀಡುತ್ತೇವೆ.
ನೆನಪಿರಲಿ. ಸಮಾಜಘಾತುಕ ಕಾನೂನನ್ನು ಭಂಜಿಸಲು ನಮಗೆ ಹೇಳಿಕೊಟ್ಟಿರೋದೇ ಮಹಾತ್ಮ ಗಾಂಧೀಜಿ. ನೀವು ಕಾಂಗ್ರೆಸ್ಸಿಗರಾಗಿ ಅದನ್ನು ಮರೆತಿರಬಹುದು. ನಮಗೆ ಚೆನ್ನಾಗಿ ನೆನಪಿದೆ!

Comments are closed.