ವಿಭಾಗಗಳು

ಸುದ್ದಿಪತ್ರ


 

ಸ್ವಂತ ಮನೆಯೊಳಗೆ ನಾವೇ ಪರಕೀಯರಾ? ~ ವಿಶ್ವಗುರು – ೬

ಆರ್ಯರ ಆಕ್ರಮಣ ಸಿದ್ಧಾಂತವನ್ನು ಇಂದಿನ ಜನಜೀವನ ಎಳ್ಳಷ್ಟೂ ಸಮರ್ಥಿಸುವುದಿಲ್ಲ. ದ್ರವಿಡ ವಾದದ ಆಧಾರದ ಮೇಲೆ ಪ್ರತ್ಯೇಕತೆಯ ಸೌಧ ಕಟ್ಟಿ, ರಾಜಕಾರಣದ ಬೇಳೆ ಬೇಯಿಸಿಕೊಂಡ ಕೆಲವರು ಅನಿವಾರ್ಯಕ್ಕೆ ಬಸುರಾಗುತ್ತಿದ್ದಾರೆ ಬಿಟ್ಟರೆ, ಇದು ಸಹಜ ಪ್ರಕ್ರಿಯೆಯಲ್ಲ.

ಜಗತ್ತು ಕ್ರಿ.ಪೂ.4004ರ ಅಕ್ಟೋಬರ್ 23 ಬೆಳಗ್ಗೆ ಒಂಭತ್ತು ಗಮಟೆಗೆ ಸರಿಯಾಗಿ ಹುಟ್ಟಿತು. ಹೀಗೆ ಹೇಳಿದ್ದು ಯಾವುದೇ ವಿಜ್ಞಾನಿಯೂ ಅಲ್ಲ, ಭಾರತದ ಜ್ಯೋತಿಷಿಯೂ ಅಲ್ಲ. ಇದು ಬೈಬಲ್ ನೊಳಗಿರುವ ನಂಬಿಕೆ. ಜಗತ್ತಿನ ಇತಿಹಾಸವೆಲ್ಲ ಇದಕ್ಕೆ ಅನುಗುಣವಾಗಿಯೇ ಇರಬೇಕೆಂದು ಪಶ್ಚಿಮದ ಸಾಹಿತಿಗಳೂ ಕೆಲವು ವಿಜ್ಞಾನಿಗಳೂ ನಂಬುತ್ತಾರೆ. ಇದಕ್ಕೆ ವಿರುದ್ಧವಾದ ಸಾಕಷ್ಟು ಪುರಾವೆಗಳನ್ನು ಉತ್ಖನನದ ಸಾಕ್ಷಿಗಳನ್ನು ಒದಗಿಸಿದ ನಂತರವೂ ಅನೇಕರಿಗೆ ಈ ನಂಬಿಕೆಯನ್ನು ತ್ಯಜಿಸಿ ಹೊರಬರಲಾಗುತ್ತಿಲ್ಲ.

ನಮ್ಮೆಲ್ಲ ಇತಿಹಾಸದ ಪುಸ್ತಕಗಳು ಸಿಂಧೂ ಬಯಲಿನ ನಾಗರಿಕತೆಯಿಂದಲೇ ಶುರುವಾಗುವಂಥದ್ದು. ಹರಪ್ಪ ಮೊಹೆಂಜೋದಾರೋ ಉತ್ಖನನಗಳ ಆಧಾರದ ಮೇಲೆ ಅಲ್ಲಿನ ನಾಗರಿಕತೆ, ಜನಜೀವನ, ಪೂಜಾಪದ್ಧತಿ, ತಂತ್ರಜ್ಞಾನ, ಒಳಚರಂಡಿ ವ್ಯವಸ್ಥೆ, ನಗರ ನಿರ್ಮಾಣ – ಇವುಗಳ ಬಗ್ಗೆ ವಿಸ್ತಾರವಾದ ಚರ್ಚೆ. ಕೊನೆಯಲ್ಲಿ ಆರ್ಯರೆಂಬ ಮಧ್ಯ ಏಷಿಯಾದ ಅಲೆಮಾರಿ ಜನಾಂಗದ ಆಕ್ರಮಣಕ್ಕೆ ತುತ್ತಾಗಿ ನಾಶ. ಇವಿಷ್ಟೂ ಸರ್ವೇ ಸಾಮಾನ್ಯ. ಹೀಗೆ ಆಕ್ರಮಣವಾದದ್ದು ಕ್ರಿ.ಪೂ.1500ರಲ್ಲಿ ಎಂಬ ದಾವೆ ಬೇರೆ! ಇಲ್ಲಿಂದ ಆರ್ಯರು ಇಡಿಯ ಉತ್ತರ  ಭಾರತಕ್ಕೆ ವ್ಯಾಪಿಸಿಕೊಂಡರು. ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿದರು. ಹೀಗಾಗಿ ಉತ್ತರದವರು ಪರಕೀಯರು, ದಕ್ಷಿಣದ ನಾವು ಮೂಲ ನಿವಾಸಿಗಳು. – ಹೀಗೆಲ್ಲ ವಿಸ್ತಾರಗೊಳ್ಳುವ ಪಾಠ. ಅದಕ್ಕೆ ಪೂರಕವಾಗಿ ಉತ್ತರ ಭಾರತೀಯರು ಬೆಳ್ಳಗಿದ್ದು ನೀಲಿ ಕಂಗಳನ್ನು ಹೊಂದಿದ್ದಾರೆ. ದಕ್ಷಿಣದವರು ಕರಿ ಚರ್ಮದವರಾಗಿದ್ದಾರೆ. ಜೊತೆಗೆ ಅವರಾಡುವ ಭಾಷೆಗಿಂತ ನಾವಾಡುವ ಭಾಷೆ ಪೂರಾ ಭಿನ್ನ.

ಈ ವಾದವನ್ನು ಮ್ಯಾಕ್ಸ್ ಮುಲ್ಲರ್ ಗಿಂತ ಹಿಂದಿನವರು ಮಂಡಿಸಿದ್ದು ನಿಜವಾಗಿದ್ದರೂ ಆತ ಿದಕ್ಕೆ ರಂಗುರಂಗಿನ ಪುರಾವೆಗಳನ್ನು ಒದಗಿಸಿದ. ಇತಿಹಾಸಕಾರನಂತೆ ಸುಮಾರು ಕ್ರಿ.ಪೂ.1400ರ ವೇಳೆಗೆ ಆರ್ಯರು ಆಕ್ರಮಣ ಮಾಡಿರಬಹುದೆಂಬ ಊಹೆ ವ್ಯಕ್ತಪಡಿಸಿದ. ಻ದಕ್ಕೆ ಕಾರಣ ಬೈಬಲ್ಲು. ಭೂಮಿ ಹುಟ್ಟಿದ್ದು ಕ್ರಿ.ಪೂ.4004ರಲ್ಲಿ. ಆಡಮ್ ನಿಂದ  ಪ್ರಳಯ ಕಾಲದ ನೋವಾನ ವರೆಗೆ 1556 ವರ್ಷಗಳು ಕಳೆದವು. ಅಂದರೆ ಬೈಬಲ್ಲಿನ ಪ್ರಕಾರ ಪ್ರಳಯ ಾಗಿದ್ದು ಕ್ರಿ.ಪೂ.2448ರಲ್ಲಿ! ಪ್ರಳಯದ ನೀರಿಳಿದು, ಅದು ಒಣಗಿ ಒಂದು ಶ್ರೇಷ್ಠ ಸಂಸ್ಕೃತಿ ತಲೆಯೆತ್ತಿ ನಿಂತು, ಅದರ ಮೇಲೆ ಆರ್ಯರು ದಾಳಿ ನಡೆಸಬೇಕೆಂದರೆ ಒಂದು ಸಾವಿರ ವರ್ಷವಾದರೂ ಬೇಡವಾ? ಅಲ್ಲಿಗೆ 1400 ಬಂತು. ಹೀಗಾಗಿ ಅಲೆಮಾರಿ ಆರ್ಯರು ಕ್ರಿಪೂ 1400ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದರು; ಅಲ್ಲಿಂದ 200 ವರ್ಷಗಳ ನಂತರ, ಕ್ರಿಪೂ 1200ರಲ್ಲಿ ಋಗ್ವೇದದ ರಚನೆಯನ್ನು ಆರ್ಯರು ಮಾಡಿದರು!

1113159_orig

ಮ್ಯಾಕ್ಸ್ ಮುಲ್ಲರನ ತಲೆಗೆ ಅದೆಷ್ಟು ಬಹುಮಾನ ಕಟ್ಟಿದರೂ ಕಡಿಮೆಯೇ. ಮೊದಮೊದಲು ಈ ವಾದಕ್ಕೆ ಮನ್ನಣೆ ದೊರೆತು ಮ್ಯಾಕ್ಸ್ ಮುಲ್ಲರನ ಪಾಂಡಿತ್ಯವನ್ನು ಕೊಂಡಾಡಿದ ಅನೇಕರು ಬರಬರುತ್ತಾ ಈ ವಾದದ ಋಣಾತ್ಮಕ ಅಂಶಗಳನ್ನು ಮುಂದಿಡಲಾರಂಭಿಸಿದರು. ಋಗ್ವೇದದ ರಚನೆ ಕಾಲದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಒಡನೆಯೇ ಬದಲಾದ ಮುಲ್ಲರ್, “ವೇದ ಮಂತ್ರಗಳು ಕ್ರಿಪೂ 1000, 1500 ಅಥವಾ 2000, 3000 ಎಷ್ಟರಲ್ಲಿ ರಚಿಸಲ್ಪಟ್ಟಿತೆಂದು ನಿರ್ಣಯಿಸಲು ಭೂಮಂಡಲದ ಯಾವ ಶಕ್ತಿಗೂ ಸಾಧ್ಯವಿಲ್ಲ” ಎಂದುಬಿಟ್ಟ. ನೇರವಾಗಿ ಒಪ್ಪಿಕೊಳ್ಳದೆಯೇ ತನ್ನ ತಪ್ಪಿನಿಂದ ಸಾವಧಾನವಾಗಿ ಹಿಂದೆ ಸರಿಯುವುದು ಅವನಿಗೆ ಚೆನ್ನಾಗಿ ಗೊತ್ತಿತ್ತು.

ತಮಗೆ ಉಪಯೋಗವಾಗುವಂಥ ಕಲ್ಪನೆಯೊಂದನ್ನು ತಾವೇ ಮಾಡಿಕೊಂಡು, ಸಿಗುವ ಎಲ್ಲ ಪುರಾವೆಗಳನ್ನು ಅವಕ್ಕೆ ಹೊಂದಿಸುತ್ತ ಕಲ್ಪನೆಯನ್ನೇ ಸತ್ಯವೆಂದು ಸಿದ್ಧಪಡಿಸುವ ಕುತರ್ಕ ಮಿಶನರಿಗಳದ್ದು. ಅಚ್ಚರಿಯ ವಿಷಯವೆಂದರೆ, ಭಾರತದ ಇತಿಹಾಸ ಕುರಿತಂತೆ ಅಂದಿನ ದಿನಗಳಲ್ಲಿ ಅಧಿಕಾರಯುತವಾಗಿ ಮಾತಾಡುತ್ತಿದ್ದವರು ವಿಜ್ಞಾನಿಗಳೋ, ಇತಿಹಾಸಕಾರರೋ ಅಲ್ಲ. ಇಲ್ಲಿನ ಭಾಷೆ – ಜನಜೀವನಗಳನ್ನು ಅರಿಯದ ಸಾಹಿತಿಗಳೋ, ರಾಜಕಾರಣಿಗಳೋ ಆಗಿರುತ್ತಿದ್ದರೂ ಅದನ್ನು ಸಮರ್ಥಿಸಲು ನಮ್ಮ ಬುದ್ಧಿವಂತ ವರ್ಗ ಸಾಲುಗಟ್ಟಿ ನಿಂತಿರುತ್ತಿತ್ತು.

ಜಾನ್ ಮಾರ್ಶಲ್, ವೀಲರ್ ನಂಥ ಉತ್ಖನನ ತಜ್ಞರು ಕೆಲವರಂತೂ ಹರಪ್ಪಾದ ಻ವಶೇಷಗಳನ್ನು ಆರ್ಯರ ಆಕ್ರಮಣಕ್ಕೆ ಸೂಕ್ತವಾಗುವಂತೆ ಜೋಡಿಸುವ ಪ್ರಯತ್ನ ಮಾಡಿದರು. ಸಿಂಧೂ ನಾಗರಿಕತೆಯ ಮೇಲೆ ಇಂದು ಜಗತ್ತಿನಲ್ಲಿಯೇ ಅಧಿಕಾರವಾಣಿಯಿಂದ ಮಾತಾಡಬಲ್ಲ ಶ್ರೀ ಎಸ್ ಆರ್ ರಾವ್, “ಆರ್ಯರ ಆಕ್ರಮಣ ಅನ್ನುವುದು ಬುಡವಿಲ್ಲದ ವಾದ” ಎಂದು ಸ್ಪಷ್ಟವಾಗಿ ಧಿಕ್ಕರಿಸಿದ್ದಾರೆ. ಉತ್ಖನನದಲ್ಲಿ ದೊರೆತ, ಮಣ್ಣಿನಿಂದ ಮಾಡಿದ ಸಿಲಿಂಡರಿನಂಥ ವಸ್ತುವನ್ನು ನೋಡಿ ಶಿವಪೂಜಕರು ದ್ರಾವಿಡರು ಎಂದೆಲ್ಲ ನಿಶ್ಚಯಕ್ಕೆ ಬಂದಿದ್ದರಲ್ಲ, ರಾವ್ ಅದನ್ನೂ ಖಂಡಿಸಿ ಹಾಗೆ ಸಿಕ್ಕ ಮಣ್ಣಿನ ವಸ್ತುಗಳು ಶಿವಲಿಂಗವಲ್ಲ, ಻ದು ತಕ್ಕಡಿಯ ಮೇಲಿಡುವ ತೂಕದ ಬಟ್ಟುಗಳು ಎಂಬುದನ್ನು ಅನೇಕ ದಾಖಲೆಗಳ ಮೂಲಕ ದೃಢಪಡಿಸಿದರು.

ಇಂದಿಗೂ ದಕ್ಷಿಣದಲ್ಲಿರುವವರೆಲ್ಲ ಶಿವನ ಆರಾಧಕರು; ಆಕ್ರಮಣ ಮಾಡಿದ ಆರ್ಯರು ಶಿವವಿರೋಧಿಗಳು ಎಂದೆಲ್ಲ ವಾದಿಸುವವರಿಗೆ ಶಿವನ ವಾಸವೇ ಹಿಮಾಲಯದಲ್ಲಿ ಎಂಬುದು ಮರೆತಂತಿದೆ. ಅವನ ನಿತಾಂತ ಆರಾಧಕರು ನೇಪಾಳ, ಕಾಶ್ಮೀರದಲ್ಲಿಯೇ ಹರಡಿಕೊಂಡಿದ್ದರೆಂಬುದನ್ನು ಬೇಕಂತಲೇ ಮರೆಮಾಚಿದಂತಿದೆ. ಇಷ್ಟಕ್ಕೂ ದ್ರವಿಡ ದೇಶ ಬರಿಯ ದಕ್ಷಿಣ ಭಾಗವಲ್ಲ. ನಮ್ಮ ಗ್ರಂಥಗಳ ಪ್ರಕಾರ ಮಹಾರಾಷ್ಟ್ರ, ಗುಜರಾತುಗಳೂ ದ್ರವಿಡ ದೇಶಗಳೇ. `ದ್ರಾವಿಡ್’ ಎಂಬ ಕುಟುಂಬ ಮಹಾರಾಷ್ಟ್ರದಲ್ಲಿ ಸಹಜವಾಗಿಯೇ ನೋಡಸಿಗುತ್ತದೆ. ಆದರೆ ಯಾಕೋ ದ್ರಾವಿಡರ ಬಗ್ಗೆ ಮಾತಾಡುವಾಗ ನಾವು ಅವರನ್ನು ಬಿಟ್ಟು ಮಾತಾಡುತ್ತೇವೆ.

ಇಷ್ಟಕ್ಕೂ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಎಂದಿಗೂ ಕದನವೇ ಇರಲಿಲ್ಲ. ಉತ್ತರದ ದೇವತೆಗಳನ್ನು ದಕ್ಷಿಣದಲ್ಲಿ ಆರಾಧಿಸುತ್ತೇವೆ. ಹಾಗೆಯೇ ಶಂಕರ, ಮಧ್ವ, ರಾಮಾನುಜರನ್ನು ಉತ್ತರವೂ ಆಚಾರ್ಯರೆಂದು ಭಾವಿಸಿ ಗೌರವಿಸುತ್ತದೆ. ಸೂತ್ರ ರಚನಕಾರರಾದ ಬೌಧಾಯನ ಮತ್ತು ಆಪಸ್ತಂಭರು ದಕ್ಷಿಣದವರಾದರೂ ಉತ್ತರದಲ್ಲಿ ಅವರ ಸಿದ್ಧಾಂತಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಹಾಗೆಯೇ ದಕ್ಷಿಣಕ್ಕೆ ವೇದಜ್ಞಾನವನ್ನು ತಂದವರು ಅಗಸ್ತ್ಯರೆಂದು ಈಗಲೂ ನಂಬುತ್ತಾರೆ. ಮಂದಿರಗಳ ಭಿತ್ತಿಗಳಲ್ಲಿ ಅವರ ಶಿಲ್ಪ ಕೆತ್ತಿ ತಲೆಬಾಗುತ್ತಾರೆ. ಹೊರಗಿನಿಂದ ಆಕ್ರಮಣಕಾರಿಗಳಾಗಿ ಬಂದವರನ್ನು ಹೀಗೆ ಗೌರವಿಸುವುದು ಸಹಜವೆನಿಸಿದರೆ ಅದೇಕೆ ಅಲ್ಲಾವುದ್ದಿನ್ ಖಿಲ್ಜಿಗೆ, ಮಲ್ಲಿಕಾಫರನಿಗೆ ಈ ಗೌರವವಿಲ್ಲ?

ದಕ್ಷಿಣದವರಾದರೂ ಉತ್ತರದ ಮುಸಲ್ಮಾನರ ಆಳ್ವಿಕೆಗೆ ವಿದ್ಯಾರಣ್ಯರಂಥವರು ಪ್ರತಿಭಟಿಸಿದ್ದು ಒಪ್ಪುತ್ತೇವೆ ತಾನೆ? ಹಾಗಿದ್ದರೆ ಆರ್ಯರ ಆಕ್ರಮಣಕ್ಕೆ ಪ್ರತಿಭಟನೆ ನಡೆದ ಒಂದೇಒಂದು  ಉದಾಹರಣೆ ದೊರೆತಿಲ್ಲವೇಕೆ? ಊಹೂಂ… ಆರ್ಯರ ಆಕ್ರಮಣ ಸಿದ್ಧಾಂತವನ್ನು ಇಂದಿನ ಜನಜೀವನ ಎಳ್ಳಷ್ಟೂ ಸಮರ್ಥಿಸುವುದಿಲ್ಲ. ದ್ರವಿಡ ವಾದದ ಆಧಾರದ ಮೇಲೆ ಪ್ರತ್ಯೇಕತೆಯ ಸೌಧ ಕಟ್ಟಿ, ರಾಜಕಾರಣದ ಬೇಳೆ ಬೇಯಿಸಿಕೊಂಡ ಕೆಲವರು ಅನಿವಾರ್ಯಕ್ಕೆ ಬಸುರಾಗುತ್ತಿದ್ದಾರೆ ಬಿಟ್ಟರೆ, ಇದು ಸಹಜ ಪ್ರಕ್ರಿಯೆಯಲ್ಲ.

ಹೊರದೇಶದಿಂದ ಆರ್ಯರು ದಾಂಗುಡಿ ಇಟ್ಟರೆಂಬುದನ್ನು ವಿಜ್ಞಾನವೂ ಸಮರ್ಥಿಸುವುದಿಲ್ಲ. ಹರಪ್ಪಾ ಉತ್ಖನನದ ಆರಂಭದಲ್ಲಿ ಕುದುರೆ ಮತ್ತು ಅಕ್ಕಿ ಬಳಕೆಯ ಪುರಾವೆಗಳು ಸಿಗದೇಹೋದ್ದರಿಂದ ಇದು ದ್ರವಿಡ ಸಂಸ್ಕೃತಿ ಎಂದು ಘೋಷಿಸಲಾಗಿತ್ತು. ಕಾಲಕ್ರಮೇಣ ಕುದುರೆಗೆ ಸಂಬಂಧಿಸಿದ ಪಳೆಯುಳಿಕೆಗಳು, ಅನ್ನ ಪಾತ್ರೆಯ ಅವಶೇಷಗಳು ಲೋಥಾಲ್, ಕಲಿಬಂಗನ್, ಸುರ್ಕೋದಾತಾ ಮತ್ತು ರೋಸರ್ ಗಳಲ್ಲಿ ದೊರೆಯುತ್ತಿದ್ದಂತೆ ಈ ವಾದ ಬಿದ್ದುಹೋಯ್ತು. ಈ ಉತ್ಖನನ ಕಾಲದಲ್ಲಿ ದೊರಕಿದ ಯಜ್ಞಮಂಟಪಗಳು, ಬಲಿವೇದಿಗಳು ಆರ್ಯಸಂಸ್ಕೃತಿಯನ್ನು ಪ್ರತಿನಿಧಿಸಿದವೇ ಹೊರತು ದ್ರವಿಡ ವಾದವನ್ನಲ್ಲ. ಎಲ್ಲಕ್ಕೂ ಮಿಗಿಲಾಗಿ ಮಣ್ಣಿನಲ್ಲಿ ಮಾಡಿದ ಯೋಗಾಸನ ಭಂಗಿಗಳ ಮೂರ್ತಿಗಳಂತೂ ಹರಪ್ಪಾ ಸಂಸ್ಕೃತಿ ಆರ್ಯಸಂಸ್ಕೃತಿಯೇ ಎಂಬುದರಲ್ಲಿ ಅನುಮಾನಗಳನ್ನು ಉಳಿಸಲಿಲ್ಲ. ಉತ್ಖನನದ ಆ ಕ್ಷೇತ್ರ ಅದೆಷ್ಟು ದಿವಿನಾಗಿತ್ತೆಂದರೆ ಅಲ್ಲಿ ಆಕ್ರಮಣದ, ಪ್ರತಿರೋಧದ ಯಾವ ಚಿಹ್ನೆಯೂ ಇರಲಿಲ್ಲ. ವೈಜ್ಞಾನಿಕವಾಗಿ ಮಿಶನರಿಗಳ ಸಿದ್ಧಾಂತ ಸತ್ತು ಹೋಗಿತ್ತು.

ಅಷ್ಟೇ ಅಲ್ಲ, ಭಾರತೀಯ ಸಾಹಿತ್ಯಗಳಲ್ಲಿಯೂ ಆರ್ಯವೆಂಬುದು ಜನಾಂಗವೆಂಬುದಕ್ಕೆ ಯಾವ ಪುರಾವೆಯೂ ಇರಲಿಲ್ಲ. ಸಂಸ್ಕೃತ ಪದಗಳ ಕುರಿತಂತೆ ಕ್ರಿಶ 500ರ ವೇಳೆಗೆ ರಚನೆಯಾದ ಅಧಿಕೃತ ಗ್ರಂಥ ಅಮರಕೋಶದಲ್ಲಿ ಆರ್ಯ ಪದಕ್ಕೆ ಪರ್ಯಾಯ ರೂಪಗಳೇನು ಗೊತ್ತೆ? “ಮಹಾಕುಲಾ, ಕುಲೀನಾರ್ಯ, ಸಭ್ಯಸಜ್ಜನಸಾಧವಃ”. ಶ್ರೇಷ್ಠ ಕುಲದಲ್ಲಿ ಜನಿಸಿದವ ಸದ್ಗುಣ ಶೀಲ, ಸಜ್ಜನವೆಂಬ ಅರ್ಥವಿದೆ. ಎಲ್ಲಿಯೂ ಅದೊಂದು ಜನಾಂಗ ಎಂಬುದಕ್ಕೆ ಸಮರ್ಥನೆ ಯಿಲ್ಲ. ಪುರಾಣ ಗ್ರಂಥಗಳಲ್ಲಿ ಪತ್ನಿ ತನ್ನ ಗಂಡನನ್ನು ಆರ್ಯ ಎಂತಲೋ ಆರ್ಯ ಪುತ್ರ ಎಂತಲೋ ಸಂಬೋಧಿಸುವುದನ್ನು ಕಾಣುತ್ತೇವೆ. ಆತ ಈಕೆಯನ್ನು ಆರ್ಯೆ ಎಂದು ಕರೆಯುವುದೂ ಸಹಜವಾಗಿತ್ತು. ಜನಾಂಗವೊಂದಕ್ಕೆ ಪುಲ್ಲಿಂಗ, ಸ್ತ್ರೀಲಿಂಗ ಭೇದವಿರೋದು ಬೇರೆಲ್ಲಿಯೂ ಸಿಗಲಾರದು!

ಹಾಗೆ ನೋಡಿದರೆ ಭಾರತೀಯ ಸಾಹಿತ್ಯದಲ್ಲೆಲ್ಲ `ಆರ್ಯ’ ಪದದ ಬಳಕೆಯಾಗಿರುವುದನ್ನು ಸ್ಥೂಲವಾಗಿ ಗಮನಿಸಿದರೂ ಅದು ಇಂಗ್ಲೀಶಿನ `ಸರ್’ ಪದಕ್ಕೆ ಸಂವಾದಿಯಾಗಿ ನಿಲ್ಲುವಂಥದ್ದೆಂದು ಅರಿವಾಗುತ್ತದೆ. ಈ ಸರ್ ಎನ್ನುವ, ಮೇಡಮ್ ಎನ್ನುವ ಜನಾಂಗಗಳು ಇಂಗ್ಲೆಂಡಿನಲ್ಲಿ ಇತ್ತು ಎಂದರೆ ಎಷ್ಟು ಆಭಾಸವೋ, ‘ಆರ್ಯ’ ಪದವನ್ನು ಜನಾಂಗಕ್ಕೆ ತಳಕು ಹಾಕುವುದೂ ಅಷ್ಟೇ ಅನರ್ಥಕಾರಿ!

ಮನು ಒಂದೆಡೆ ಸ್ಪಷ್ಟ ದನಿಯಲ್ಲಿ ಹೇಳುತ್ತಾನೆ, “ಪವಿತ್ರ ಕರ್ತವ್ಯಗಳನ್ನು ತ್ಯಜಿಸಿದ, ಋಷಿಗಳನ್ನು ಗೌರವಿಸದ, ಪೌಂಡ್ರಕ, ಚೋಳ, ದ್ರವಿಡ, ಕಾಂಬೋಜ, ಯವನ, ಶಕ, ಪಾರದಾ, ಪಾಹ್ಲವ, ಚೀಣಾ, ಕಿರಾತರೇ ಮೊದಲಾದವರು ಶ್ರೇಷ್ಠ ಆರ್ಯ ಕ್ಷತ್ರಿಯ ಸ್ಥಾನದಿಂದ ಕುಸಿದು ಗುಲಾಮರಾಗಿಬಿಟ್ಟರು” ಎಂದು.

ಇಲ್ಲಿ ಚೀಣಾ ಎಂದರೆ ಚೀನೀಯರು, ಪಹ್ಲವರೆಂದರೆ ಪರ್ಷಿಯನ್ನರು, ಆಫ್ಘಾನಿಸ್ತಾನದ ಆಚೆಗಿನವರೆಲ್ಲ ಯವನರೆಂದು ಇತಿಹಾಸಕಾರರು ಗುರುತಿಸುತ್ತಾರೆ. ಇದರರ್ಥ ಬಲು ಸ್ಪಷ್ಟ. ಆರ್ಯರೆಂದರೆ ಶ್ರೇಷ್ಠ ಗುಣಗಳ ಒಡೆಯರು. ಈ ಗುಣಗಳನ್ನು ಕಳಕೊಂಡವರು ಸಹಜವಾಗಿಯೇ ಆ ಸ್ಥಾನದಿಂದ ಕುಸಿದುಬಿಡುತ್ತಾರೆ.

ಓಹ್! ಕತ್ತಲಲ್ಲಿಯೂ ಕಾಣಬಹುದಾದ ಸತ್ಯಗಳನ್ನು ಸೂರ್ಯನ ಬೆಳಕಲ್ಲಿಯೂ ಕಾಣದಂತೆ ಮಾಡಿಬಿಟ್ಟರಲ್ಲ, ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವೂ ಈಗಲೂ ಈ ಕಾರಣಗಳನ್ನಿಟ್ಟುಕೊಂಡು ಬಡಿದಾಡುವಂತೆ ಮಾಡಿಬಿಟ್ಟರಲ್ಲ! ನಮ್ಮ ಗ್ರಂಥಾಲಯಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಆರ್ಯ ಆಕ್ರಮಣ ವಾದವನ್ನು ಸಮರ್ಥಿಸುವ ಪ್ರಬಂಧ ಮಂಡನೆಯಾಗುವಂತೆ ನೋಡಿಕೊಂಡರಲ್ಲ… ಎಲ್ಲಕ್ಕೂ ಮಿಗಿಲಾಗಿ, ನಮ್ಮ ಪಠ್ಯ ಪುಸ್ತಕಗಳಲ್ಲಿ ಸುಳ್ಳು ವಾದಗಳೇ ರಾರಾಜಿಸುವಂತೆ ಮಾಡಿಬಿಟ್ಟರಲ್ಲ!

ಕಸಿವಿಸಿಯಾಗುತ್ತದೆ. ಮನೆಯೊಡೆಯನನ್ನು ಕರೆದು ಈ ಮನೆ ನಿನ್ನ ಸ್ವಂತದ್ದಲ್ಲವೆಂದು ಹೇಳುತ್ತ ಹೇಳುತ್ತ ಮಕ್ಕಳು – ಮೊಮ್ಮಕ್ಕಳನ್ನು ಪರಕೀಯರನ್ನಾಗಿಸಿಬಿಡುವ ಈ ಚಿಂತನೆಗಳು ಅದೆಷ್ಟು ಭಯಾನಕ ಅಲ್ಲವೆ?

Comments are closed.