ವಿಭಾಗಗಳು

ಸುದ್ದಿಪತ್ರ


 

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.

ತಾಲಿಬಾನಿಗಳು ಪಂಚಾಯ್ತಿ ನಡೆಸುವ ಪರಿ ಇದು

ಅಲ್ಲಿಂದಾಚೆಗೆ ಅಫ್ಘಾನಿಸ್ತಾನದ್ದು ಕಣ್ಣೀರಿನ ಕತೆ. ತಾಲಿಬಾನಿಗೆ ಆಧುನಿಕತೆ ಹಿಡಿಸದು. ಹೀಗಾಗಿ ಷರೀಯತ್ ಕಾನೂನುಗಳನ್ನು ಒತ್ತಡದಿಂದ ಹೇರಿತು. ಭಾರತದಲ್ಲಿ ಜನ್ಮ ತಳೆದ ದಿಯೋಬಂದಿಗಳ ಷರೀಯತ್ ವಿವರಣೆಗಳ ಆಧಾರದ ಮೇಲೆ ರಾಷ್ಟ್ರ ನಡೆಯಬೇಕಾಯ್ತು. ಹೀಗಾಗಿ ಹಂದಿ ಮತ್ತು ಅದರ ಎಲ್ಲ ಉತ್ಪನ್ನಗಳಿಗೆ ಮೊದಲ ನಿಷೇಧ ಬಿತ್ತು. ಮನುಷ್ಯನ ಕೂದಲಿನಿಂದ ಮಾಡಿದ ವಸ್ತುಗಳನ್ನು ಬಳಸುವಂತಿರಲಿಲ್ಲ. ಹೋಟೆಲ್‌ಗಳನ್ನು ಮುಚ್ಚಲಾಯ್ತು. ಸಿನಿಮಾಗಳು ಸ್ತಬ್ಧಗೊಂಡವು. ಸಂಗೀತದ ಕಂಠ ಒತ್ತಲಾಯ್ತು. ಟೀವಿ-ಟೇಪ್‌ರೆಕಾರ್ಡರುಗಳಿರಲಿ, ಕಂಪ್ಯೂಟರ್ ಅನ್ನೂ ಬಳಸುವಂತಿರಲಿಲ್ಲ. ಉಗುರು ಬಣ್ಣ ಹಚ್ಚುವಂತಿರಲಿಲ್ಲ, ಪಟಾಕಿ ಸಿಡಿಸುವಂತಿರಲಿಲ್ಲ. ನಿಷೇಧದ ಪಟ್ಟಿ ದೊಡ್ಡದಿತ್ತು. ಹೆಣ್ಣುಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ತಿರುಗಾಡುವಂತಿರಲಿಲ್ಲ. ಹಾಗೆ ತಿರುಗಾಡುವಾಗ ಸಂಬಂಧಿಕರನ್ನು ಬಿಟ್ಟು ಬೇರೆ ಗಂಡಸಿರುವುದು ಪತ್ತೆಯಾದರೆ ಅವಳ ಕೈಕಾಲುಗಳನ್ನು ಬಂಧಿಸಿ ಛಡಿ ಏಟಿನ ಶಿಕ್ಷೆ ನೋಡಲಾಗುತ್ತಿತ್ತು. ರಸ್ತೆಯಲ್ಲಿ ಕಾರುಗಳನ್ನು ಅಡ್ಡಗಟ್ಟಿ ಸ್ಟೀರಿಯೋ ಸಿಕ್ಕರೆ ಅಂಥವನನ್ನು ಸೈಕಲ್ ಚೈನಿನಿಂದ ಬಡಿಯಲಾಗುತ್ತಿತ್ತು. ಓಹ್! ನಾವು ಕೈಮುಟ್ಟಿದ್ದನ್ನು, ಮೈಮುಟ್ಟಿದ್ದನ್ನೆಲ್ಲ ತಾಲಿಬಾನ್ ಎಂದು ಬುದ್ಧಿಜೀವಿಗಳು ಕರೆದುಬಿಡುತ್ತಾರಲ್ಲ, ಅಂಥವರು ಬಿಬಿಸಿ ಪ್ರಕಟಪಡಿಸಿರುವ ತಾಲಿಬಾನಿನ ವಿಡಿಯೋ ನೋಡಬೇಕು. ಉಸಿರುಗಟ್ಟಿ ಸತ್ತೇ ಹೋಗುತ್ತಾರೆ,
ಇಂತಹ ಪರಮ ಕ್ರೂರ ಸರ್ಕಾರಕ್ಕೆ ಒಳಗಿಂದೊಳಗೆ ಆಶ್ರಯ ಕೊಟ್ಟು ಬೆಳೆಸಿದ್ದು ಪಾಕಿಸ್ತಾನ. ಪಾಕಿಸ್ತಾನವನ್ನು ಛೂಬಿಟ್ಟದ್ದು ಅಮೆರಿಕಾ. ಇತಿಹಾಸದ ವೈಪರೀತ್ಯವೇ ಇದು. ಭಸ್ಮಾಸುರ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಸತ್ತ. ಹಾಗೆಯೇ ಅಮೆರಿಕಾ ಲಾಡೆನ್‌ನ ಭಯೋತ್ಪಾದಕ ದಾಳಿಗೆ ಬಲಿಯಾಯ್ತು. ಆ ವೇಳೆಗಾಗಲೇ ಮುಲ್ಲಾ ಓಮರ್ ಮತ್ತು ಲಾಡೆನ್ ಬೀಗರಾಗಿಬಿಟ್ಟಿದ್ದರು. ತಾಲಿಬಾನ್ ಈಗ ಸೆಟೆದು ಲಾಡೆನ್ ರಕ್ಷಣೆಗೆ ನಿಂತುಬಿಟ್ಟಿತು. ಕೋಪಗೊಂಡ ಅಮೆರಿಕಾ ಅಫ್ಘಾನಿಸ್ತಾನದ ಮೇಲೇರಿಹೋಯಿತು. ಲಾಡೆನ್‌ನ ನೆಪದಲ್ಲಿ ಇಡಿಯ ದೇಶವನ್ನು ಉಧ್ವಸ್ತಗೊಳಿಸಿತು. ತಲೆಮರೆಸಿಕೊಂಡು ಓಡಿದ ತಾಲಿಬಾನಿಗಳು ಸೇರಿಕೊಂಡಿದ್ದು ಪಾಕಿಸ್ತಾನಕ್ಕೆ.

ದಿನಚರಿ ಬರೆಯುತ್ತಿರುವ ಮಲಾನಾ

ತಾಲಿಬಾನಿಗಳ ಪಾಲಿಗೆ ಪಾಕಿಸ್ತಾನ ಮಾವನ ಮನೆಯಿದ್ದಂತೆ. ಆದರೆ ಏನೇ ಹೇಳಿ, ಪಾಕಿಸ್ತಾನಕ್ಕೆ ಈಗಲೂ ಭಾರತದ ನಂಟಿದೆ. ಹಿಂದಿ ಸಿನಿಮಾಗಳು, ಗೀತೆಗಳು, ಊಟ ತಿಂಡಿಗಳು, ಪೋಷಾಕುಗಳ ವಿಷಯದಲ್ಲೆಲ್ಲ ಅವರು ನಮ್ಮನ್ನು ಅನುಸರಿಸುತ್ತಾರೆ. ಅಂಥದರಲ್ಲಿ ತಾಲಿಬಾನು ಒಳನುಸುಳಿದ್ದು ಅವರ ಪಾಲಿಗೆ ನುಂಗಲಾರದ ತುತ್ತೇ. ಮೊದಮೊದಲು ಬಾಲಮುದುರಿಕೊಂಡಿದ್ದ ತಾಲಿಬಾನಿಗಳು ಬರಬರುತ್ತ ಮುಕ್ತಭಾವದ ಪಾಕಿಸ್ತಾನಿಗಳನ್ನು ಗುರಿಯಾಗಿಸಿಕೊಂಡರು. ಫತ್ವಾಗಳನ್ನು ಹೊರಡಿಸಿದರು. ಷರೀಯತ್ ಕಾನೂನುಗಳನ್ನು ಜಾರಿಗೆ ತರುವ ಪ್ರಯತ್ನಕ್ಕೂ ಕೈಹಾಕಿದರು. ಕೊನೆಗೆ ಇಸ್ಲಾಮಾಬಾದಿನಿಂದ ೨೦೦ ಕಿಮೀ ದೂರದ ಸ್ವಾತ್ ಭಾಗವನ್ನು ಸರ್ಕಾರದಿಂದ ಬಿಡಿಸಿ ತಮ್ಮ ತೆಕ್ಕೆಗೆ ಹಾಕಿಕೊಂಡರು. ತಾಲಿಬಾನಿಗಳಿಗೆ ಆಶ್ರಯ ಕೊಟ್ಟ ತಪ್ಪಿಗೆ ಪಾಕಿಸ್ತಾನ ಪ್ರಾಯಶ್ಚಿತ್ತ ಅನುಭವಿಸಲೇಬೇಕಿತ್ತು. ’ಭಗವಂತನಲ್ಲದಿದ್ದರೆ ಬಿಡಿ, ಇತಿಹಾಸವೇ ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನು ಮರೆಯಬೇಡಿ’ ಎಂಬ ಸ್ವಾಮಿ ವಿವೇಕಾನಂದರ ಮಾತು ಅದೆಷ್ಟು ನಿಜ ನೋಡಿ!
ಪೊಲೀಸ್ ಠಾಣೆ ತಾಲಿಬಾನಿನ ಪಂಚಾಯ್ತಿ ಕೇಂದ್ರವಾಯ್ತು. ಇಲ್ಲಿ ನ್ಯಾಯ ಘೋಷಣೆಯಾಗುತ್ತಿತ್ತು. ನ್ಯಾಯವೇನು? ಬರಿ ಶಿಕ್ಷೆಯಷ್ಟೇ. ಹೆಣ್ಣು ಮಕ್ಕಳ ಶಾಲೆಗೆ ನಿಷೇಧ ಹೇರಲಾಯ್ತು. ಧಾರ್ಮಿಕ ಶಿಕ್ಷಣವಷ್ಟೆ ಅವರ ಪಾಲಿನ ಪಂಚಾಮೃತ. ಆಧುನಿಕ ಜಗತ್ತಿನ ಬೆಳಕಿಗೆ ತೆರೆದುಕೊಂಡಿದ್ದವರು ಏಕಾಏಕಿ ಅಂಧಕಾರದ ಕೂಪಕ್ಕೆ ತಳ್ಳಲ್ಪಟ್ಟರು. ಹೆಚ್ಚೂಕಡಿಮೆ ಆರು ವರ್ಷ ನಿತ್ಯ ಸಾವಿನದ್ದೆ ರಾಜ್ಯಭಾರ. ಇಂದಿದ್ದವರು ನಾಳೆ ಇಲ್ಲ. ನಾಳೆ ಬದುಕುವ ಖಾತ್ರಿ ಯಾರಿಗೂ ಇಲ್ಲ. ಅನೇಕರು ಊರು ಬಿಟ್ಟು ಹೋದರು. ಶಾಲೆಗಳನ್ನು ಕದ್ದುಮುಚ್ಚಿ ನಡೆಸಲಾಗುತ್ತಿತ್ತು. ಸಿಕ್ಕಿಬಿದ್ದರೆ ಸಾವು ಖಚಿತ. ಆಗಲೇ ಹನ್ನೊಂದರ ಹುಡುಗಿ ಮಲಾನಾ ಡೈರಿ ಬರೆಯಲು ಶುರು ಮಾಡಿದ್ದು. ಉರ್ದುವಿನಲ್ಲಿ ಈಕೆ ಬರೆದಿಟ್ಟ ಸಾಲುಗಳು ಹೃದಯವಿದ್ರಾವಕವಾಗಿದ್ದವು. ತಾಲಿಬಾನ್ ಕ್ರೌರ್ಯದ ವಿಶ್ವರೂಪ ದರ್ಶನ ಮಾಡಿಸುವಂತಿದ್ದವು. ಬಿಬಿಸಿಯ ಉರ್ದು ವಿಭಾಗ ಅದನ್ನು ಪ್ರಕಟಿಸಲು ಒಪ್ಪಿಕೊಂಡಿತು. ಮಲಾನಾಳ ತಂದೆ ಶಿಕ್ಷಕರಾಗಿದ್ದವರು. ಅವರು ಆಕೆಯ ಬೆಂಬಲಕ್ಕೆ ನಿಂತರು. ಮೊದಲ ಪತ್ರ ಪ್ರಕಟಗೊಂಡಾಗ ಆಕೆಯ ಪಟ್ಟಣದಲ್ಲಿ ತಾಲಿಬಾನಿಗಳ ಕ್ರೌರ್ಯದ ಹಸಿವಾಸನೆ ಹಾಗೇ ಇತ್ತು. ಹೀಗಾಗಿ ’ಗುಲ್ ಮಕಾಯ್’ ಹೆಸರಿನಲ್ಲಿ ಆಕೆಯ ಪತ್ರಗಳು ಅಚ್ಚಾದವು. ’ಅದೊಮ್ಮೆ ಶಾಲೆಯಿಂದ ಬರುವಾಗ ನಿನ್ನ ಕೊಂದುಬಿಡ್ತೇವೆ, ಬಿಡೋದಿಲ್ಲ’ ಎಂದೊಬ್ಬ ಜೋರಾಗಿ ಕೂಗುತ್ತಿದ್ದ. ಗಾಬರಿಗೊಂಡು ಮನೆಕಡೆ ಸರಸರನೆ ಹೆಜ್ಜೆ ಹಾಕಿದೆ. ಸ್ವಲ್ಪ ದೂರ ಹೋಗಿ ತಿರುಗಿನೋಡಿದೆ. ಆತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂದು ಖಾತ್ರಿಯಾಯ್ತು. ಫೋನಿನಲ್ಲಿ ಆತ ಯಾರಿಗೋ ಹೇಳುತ್ತಿದ್ದ ಮಾತುಗಳವು ಎಂದು ಅರಿತು ನಿರಾಳವಾದೆ’ ಎಂದು ಒಂದು ಪತ್ರದಲ್ಲಿ ಆಕೆ ದುಃಖ ತೋಡಿಕೊಂಡಿದ್ದಾಳೆ.
೨೦೦೯ರಲ್ಲಿ ರಾವಲ್ಪಿಂಡಿಯಲ್ಲಿ ತಾಲಿಬಾನಿ ಆತ್ಮಹತ್ಯಾ ದಳದ ಇಬ್ಬರು ದೇಹಕ್ಕೆ ಬಾಂಬ್ ಕಟ್ಟಿಕೊಂಡು ರಾವಲ್ಪಿಂಡಿಯ ಮಸೀದಿಗೆ ನುಗ್ಗಿ ನಲವತ್ತು ಮಂದಿಯನ್ನು ಕೊಂದರು. ಸತ್ತವರಲ್ಲಿ ಪುಟ್ಟಮಕ್ಕಳೂ ಇದ್ದರು. ಪಾಕಿಸ್ತಾನ ಸರ್ಕಾರಕ್ಕೆ ಇದೊಂದು ತಪರಾಕಿಯೇ ಆಗಿತ್ತು. ರಾಜಧಾನಿಗೆ ಸಮೀಪದಲ್ಲೇ ತಾಲಿಬಾನಿಗಳು ಹಬ್ಬಿಕೊಂಡಿರುವುದು ಬೆಳವಣಿಗೆಯ ಲಕ್ಷಣವಾಗಿರಲಿಲ್ಲ. ತಾನೇ ಕೊಟ್ಟ ಬಂದೂಕು, ತಾನೇ ಮದರಸಾಗಳ ಮೂಲಕ ಕಳಿಸಿದ ಜನ ತಮ್ಮನ್ನೆ ಕೊಲ್ಲುವುದು ಸಹ್ಯವಾಗಲಿಲ್ಲ. ’ಫ್ಲಷ್ ಔಟ್ ತಾಲಿಬಾನ್’ ಯೋಜನೆ ರೂಪುಗೊಂಡಿತು. ಸ್ವಾತ್ ಕೊನೆಗೂ ಸ್ವಾಧೀನಕ್ಕೆ ಬಂತು. ಆಗ ಗುಲ್ ಮಕಾಯ್, ಮಲಾನಾ ಆಗಿ ಸಮಾಜದ ಮುಂದೆ ಕಾಣಿಸಿಕೊಂಡಳು. ಜಗತ್ತು ಬೆರಗಾಯ್ತು. ಹದಿಮೂರರ ಪೋರಿಗೆ ಶಾಂತಿ ಪ್ರಶಸ್ತಿಗಳು ಅರಸಿಕೊಂಡು ಬಂದವು. ದುಷ್ಟ ರಕ್ಕಸರ ನಡುವೆಯೂ ಸಮರ್ಥ ಶಕ್ತಿಯಾಗಿ ಕಂಗೊಳಿಸಿದಳು ಮಲಾನಾ.
ಮಲಾನಾ ಈಗ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದಳು. ಆಕೆ ಸ್ತ್ರೀ ಶಿಕ್ಷಣದ ಕುರಿತು ಮಾತಾಡತೊಡಗಿದಳು. ಇಸ್ಲಾಮ್‌ನ ಸರಿಯಾದ ವ್ಯಾಖ್ಯೆ ಮಾಡಿರೆಂದು ಬಲ್ಲವರನ್ನು ಕೇಳಿಕೊಂಡಳು. ಮೊದಲು ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಆಮೇಲೆ ಕದಿಯುವ ಕೈಗಳನ್ನು ಕಡಿಯಿರಿ ಎಂದು ತಾಲಿಬಾನಿಗಳಿಗೆ ನಿಷ್ಠುರವಾಗಿಯೇ ಹೇಳಿದಳು. ಕೊನೆಗೆ ಸಿಯಾಚಿನ್ ಬೆಟ್ಟದ ಮೇಲೆ ನಿಂತ ಎರಡೂ ರಾಷ್ಟ್ರದ ಸೈನಿಕರು ಸ್ವಸ್ಥಾನಕ್ಕೆ ಮರಳಿದರೆ ದಿನನಿತ್ಯ ಉಳಿಯುವ ಐದಾರು ಕೋಟಿ ರೂಪಾಯಿ ಹಣವನ್ನು ಶಿಕ್ಷಣಕ್ಕೆ, ಆರೋಗ್ಯಕ್ಕೆ ಖರ್ಚು ಮಾಡಬಹುದಲ್ಲ ಎಂದು ಪತ್ರಕರ್ತರೆದುರು ಕೇಳಿಕೊಂಡಳು. ಇಂತಹ ಕೆಲಸ ಇಂದಿನ ರಾಜಕಾರಣಿಗಳಿಗೆ ಮಾಡಲಾಗದಿದ್ದರೆ, ನಾನೇ ರಾಜಕಾರಣಕ್ಕೆ ಬಂದುಬಿಡುತ್ತೇನೆ ಎಂದು ಗದರಿಸಿದಳು. ಇಷ್ಟೆಲ್ಲ ಮಾಡುವಾಗಲೂ ಮಲಾನಾಗೆ ಹದಿನಾಲ್ಕೇ ವರ್ಷ ವಯಸ್ಸು!

ಮತಾಂಧ ಹೇಡಿಗಳಿಗೆ ಬಲಿಯಾದ ದಿಟ್ಟ ಬಾಲಕಿ

ಪ್ರತಿನಿತ್ಯ ಗೌರವ ಮುಗಿಲೆತ್ತರಕ್ಕೇರುವುದು ಕಂಡ ಕಟ್ಟರ್‌ಪಂಥಿಗಳು ಗುರ್ರೆನ್ನಲಾರಂಭಿಸಿದರು. ಸಮಯಕ್ಕಾಗಿ ಕಾದರು. ಕೊನೆಗೆ, ಮೊನ್ನೆ ಶಾಲೆಯಿಂದ ಆಕೆ ಮರಳುವಾಗ, ವ್ಯಾನ್ ತಡೆದು ಕತ್ತಿಗೆ, ತಲೆಗೆ ಎರ್ರಾಬಿರ್ರಿ ಗುಂಡು ಹಾರಿಸಿ ಆಕೆಯನ್ನು ಕೊಂದುಬಿಡುವ ಯತ್ನ ಮಾಡಿದರು! ’ಹದಿನಾಲ್ಕರ ತರುಣೀಗೆ ಹೆದರಿದ ಹೇಡಿಗಳು’ ಅಂತ ತಾಲಿಬಾನಿಗಳ ಗುಂಡಿಗೆ ಬಲಿಯಾದ ಸಲ್ಮಾನ್ ತಾಸಿರ್‌ರ ಮಗ ಶೆಹರ‍್ಯಾರ್ ತಾಸಿರ್ ಟ್ವೀಟ್ ಮಾಡಿರುವುದು ಸರಿಯಾಗಿಯೇ ಇದೆ. ಪಾಕಿಸ್ತಾನದ ರಕ್ಷಣಾ ಮಂತ್ರಿ ಕಯಾನಿ, ’ಮಕ್ಕಳ ಮೇಲೆ ಕರುಣೆಯಿಲ್ಲದವನು ನಮ್ಮವನಲ್ಲವೇ ಅಲ್ಲ ಎಂದ ಪ್ರವಾದಿಯ ಮಾತಿಗೆ ಬೆಲೆ ಕೊಡದ ಭಯೋತ್ಪಾದಕರು ಮುಸ್ಲಿಮರೆ ಅಲ್ಲ’ ಎಂದಿದ್ದಾರೆ.
ಮಲಾನಾ ಅತಿ ಹಳೆಯ ಒಂದು ಚರ್ಚೆಗೆ ಹೊಸ ರೂಪ ತಂದುಕೊಟ್ಟಿದ್ದಾಳೆ. ಮತಪಂಥಗಳು ಜೇನಿನ ಸವಿಯಾಗಬೇಕೆ ಹೊರತು ಕುಟುಕುವ ಜೇನುಗಳಾಗಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಒಂದು ಪರಿವರ್ತನೆಯ ಪರ್ವ ಬರುತ್ತಿದೆ. ಎಲ್ಲೆಡೆ ಗಾಢಾಂಧಕಾರವೆ ತುಂಬಿ, ಇನ್ನು ಉಳಿಗಾಲವೆ ಇಲ್ಲ ಎನ್ನಿಸಿದಾಗ ಭಗವಂತ ತನ್ನ ಶಕ್ತಿ ತೋರುತ್ತಾನೆ ಎನ್ನುತ್ತಾರಲ್ಲ, ಹಾಗೆಯೇ ಆಗಿದೆ. ಪಾಕಿಸ್ತಾನದಂತಹ ಪಾಕಿಸ್ತಾನದಲ್ಲಿ ಜನ ಮೂಲಭೂತವಾದಕ್ಕೆ ತಿರುಗಿಬಿದ್ದಿದ್ದಾರೆ. ಪತ್ರಿಕೆಗಳು-ಟೀವಿಗಳು ಸಾಮಾನ್ಯರು-ಮೇಲ್ವರ್ಗದವರು, ನಿವೃತ್ತರು-ಶಾಲಾಮಕ್ಕಳು ಮಲಾನಾ ಹೆಸರಲ್ಲಿ ಬೀದಿಗೆ ಬಂದು ನಿಂತಿದ್ದಾರೆ.

ನಾವೆಲ್ಲ ನಿನ್ನ ಜತೆಗಿದ್ದೇವೆ ಮಲಾನಾ….

ನಮ್ಮವರೂ ಈಗ ಎಚ್ಚೆತ್ತುಕೊಳ್ಳಬೇಕು. ದಿಒಯೋಬಂದಿಗಳ ಚಿಂತನೆಗಳನ್ನು ನಮ್ಮೂರಿಗೂ ಹೊತ್ತುತಂದು ನಮ್ಮ ಮನಸ್ಸುಗಳಲ್ಲೂ ವಿಷ ಬೀಜ ಬಿತ್ತಿ ಶಾಂತಭಾರತವನ್ನು ಕಾದಾಡಲು ಹಚ್ಚುವವರಿಂದ ಎಚ್ಚರವಾಗಿರಬೇಕಿದೆ. ಹಿಂದೊಮ್ಮೆ ಕಾಶ್ಮೀರದಲ್ಲಿ ಸೈಕಲ್ ತುಳಿಯುತ್ತಿದ್ದ ಹೆಣ್ಣುಮಗುವೊಂದರ ಕಾಲಿಗೆ ಗುಂಡು ಹೊಡೆದಿದ್ದನ್ನು ನೆನಪಿಸಿಕೊಳ್ಳಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಜಾಗೃತವಾದರೆ, ಭಾರತವೂ ಉಳಿಯುತ್ತದೆ, ನಾವೂ ಉಳಿಯುತ್ತೇವೆ.
ಥ್ಯಾಂಕ್ಸ್ ಮಲಾನಾ! ಅನೇಕ ಸತ್ಯಗಳನ್ನು ನಿರ್ಭಿಡೆಯಿಂದ ಬಿಚ್ಚಿಟ್ಟ ನೀನು ಇನ್ನೂ ಮಡಬೇಕಾದ್ದು ಸಾಕಷ್ಟಿದೆ. ಬೇಗ ಗುಣವಾಗಿ ಬಾ.

Comments are closed.