ವಿಭಾಗಗಳು

ಸುದ್ದಿಪತ್ರ


 

ಹದಿನೈದರ ಪೋರ, ಶತಕಗಳ ಸರದಾರ!

ಸಚಿನ್ ಲೈಫ್‌ಸ್ಕ್ಯಾನ್ ಭಾಗ 3. 2ನೆಯದು ಇಲ್ಲಿದೆ. ಇದು 6 ವರ್ಷಗಳ ಹಿಂದೆ ಕರ್ಮವೀರದಲ್ಲಿ ಪ್ರಕಟವಾಗಿದ್ದ ಚಕ್ರವರ್ತಿಯ ಸರಣಿ ಬರಹ. ಇನ್ನೂ 4 ಕಂತುಗಳಲ್ಲಿ ಮುಂದುವರೆಯಲಿದೆ.

ಬದುಕಿನ ಕೆಲವೊಂದು ತಿರುವುಗಳು ಅದೆಷ್ಟು ನಾಟಕೀಯ ಎನ್ನುವುದು ನಂಬಲಸಾಧ್ಯ. ಕ್ರಿಕೆಟ್ ಆಟವನ್ನೇ ಬದುಕಾಗಿಸಿಕೊಂಡ ಸಚಿನ್ ಎತ್ತರಕ್ಕೆ ಬೆಳೆಯುವ ಲಕ್ಷಣಗಳನ್ನು ಬಾಲ್ಯದಲ್ಲಿಯೇ ತೋರಿಸಿದ್ದ. ಶಾಲಾ ದಿನಗಳಲ್ಲಿ ಸೆಂಚುರಿಗಳನ್ನು ನೀರು ಕುಡಿದಷ್ಟು ಸಲೀಸಾಗಿ ಬಾರಿಸುತ್ತಿದ್ದ. ಹದಿನೈದು ವರ್ಷದೊಳಗಿನವರ, ಹತ್ತೊಂಭತ್ತು ವರ್ಷದೊಳಗಿನವರ ತಂಡದಲ್ಲಿ ಮಿಂಚಿದ. ಆಡಿದ ಆಟಗಳಲ್ಲಿ ಅದೆಷ್ಟು ಚೆಂಡುಗಳನ್ನು ಕಳೆದೇಹೋಗುವಂತೆ ಬಾರಿಸಿದ್ದನೋ ದೇವರೇ ಬಲ್ಲ!

ಅದೊಂದ್ಸಲ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಆಗ ಸಚಿನ್ ಹತ್ತೊಂಬತ್ತು ವರ್ಷದೊಳಗಿನ ತಂಡದಲ್ಲಿದ್ದ. ಹಾಗೆ ನೋಡಿದರೆ ಅವನಿಗಿನ್ನೂ ಹದಿನೈದೂ ಪೂರ್ತಿಯಾಗಿರಲಿಲ್ಲ. ಆಗಲೇ ಮುಂಬೈ ರಣಜಿ ತಂಡದೊಂದಿದ್ಗೆ ಪ್ರಯೋಗಾತ್ಮಕ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ಆಹ್ವಾನ ಬಂತು. ಬ್ಯಾಟಿಂಗ್ ನ ನಂತರ ಫೀಲ್ಡಿಂಗ್ ಮಾಡಲು ಒಂದಿಬ್ಬರು ಆಟಗಾರರು ಬೇಕಾಗಬಹುದೆಂದು ಪಾಕಿಸ್ತಾನ ತಂಡ ಮುಂಬೈಯನ್ನು ಕೇಳಿಕೊಂಡಿತ್ತು. ಬ್ಯಾಟಿಂಗ್ ಮುಗಿದ ನಂತರ ಮಿಯಾಂದಾದ್ ಮತ್ತು ಖಾದಿರ್ ಫೀಲ್ಡಿಂಗ್ ಗೆ ಯಾರನ್ನಾದರೂ ಕಳಿಸಿ ಎನ್ನುತ್ತ ವಿಶ್ರಾಂತಿಗೆ ಹೊರಟುಬಿಟ್ಟರು. ಬಕಪಕ್ಷಿಯಂತೆ ಕಾಯುತ್ತಿದ್ದ ಸಚಿನ್ ಹಿರಿಯರ ಮುಖ ನೋಡಿ ಕೋರಿಕೆಯ ನಗೆ ನಕ್ಕು ಮೈದಾನಕ್ಕೆ ಓಡಿಬಿಟ್ಟ. ಇಮ್ರಾನ್ ಖಾನ್, ವಾಸಿಮ್ ಅಕ್ರಮ್ ರಂತಹ ಘಟಾನುಘಟಿಗಳೊಂದಿಗೆ ಸೇರಿ ಒಂದೆರಡು ಗಂಟೆ ಫೀಲ್ಡಿಂಗ್ ಮಾಡಿದ. ಅಷ್ಟೂ ಕಾಲ ಅಪ್ಪಟ ಪಾಕಿಸ್ತಾನದ ಸದಸ್ಯನಂತಾಗಿಬಿಟ್ಟಿದ್ದ! ಇದೇ ಸಚಿನ್ ಮುಂದೆ ಇದೇ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಗಳಿಗೆ, ಏಕದಿನ ಪಂದ್ಯಗಳಿಗೆ ಪಾದಾರ್ಪಣೆ ಮಾಡಿ ಇಮ್ರಾನ್ ಮೊದಲಾದವರ ಬೆವರಿಳಿಸಿದ್ದು ಈಗ ಇತಿಹಾಸ.

ಸಚಿನ್ ನ ಆಟ ಆಯ್ಕೆಗಾರರ ಕಣ್ ಕುಕ್ಕುತ್ತಿತ್ತು. ಗವಾಸ್ಕರ್, ವೆಂಗ್ ಸರ್ಕಾರ್ ರಂತಹ ಘಟಾನುಘಟಿಗಳೆಲ್ಲ ಅವನ ಆಟ ನೋಡುತ್ತ ಮೈಮರೆಯುತ್ತಿದ್ದರು. ಹೀಗಾಗಿ ಮುಂಬೈ ರಣಜಿ ತಂಡಕ್ಕೆ ಸಚಿನ್ ಸೇರ್ಪಡೆಯಾಗಬೇಕೆಂಬ ಒತ್ತಾಸೆ ಶುರುವಾಯ್ತು. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಒತ್ತಡ ಹೇರುವುದು ಸರಿಯಲ್ಲವೆಂದು ಒಂದಷ್ಟು ಜನ ಭಾವಿಸಿದರು. ಮತ್ತೊಂದಷ್ಟು ಜನ ಅದನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಅಂತೂ ಇಂತೂ ಮುಂಬೈ ರಣಜಿ ಆಟಗಾರರ ಪಟ್ಟಿಯಲ್ಲಿ ಸಚಿನ್ ಹೆಸರು ಬಂತು. ಮುಂದೆ ಆಡುವವರ ಪಟ್ಟಿಯಲ್ಲೂ ಅವನ ಹೆಸರು ಕಾಣಿಸಿಕೊಂಡಿತು.

ಗುಜರಾಥಿನೊಂದಿಗೆ ಮೊದಲ ಪಂದ್ಯ ಶುರುವಾಯ್ತು. ಅದು ಮೊದಲ ಇನ್ನಿಂಗ್ಸಿನಲ್ಲಿ ೧೪೦ ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಮುಂಬೈ ಅಂದಿನ ದಿನ ೯೫ ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ಮಾರನೆ ದಿನ ಮಧ್ಯಾಹ್ನದ ವೇಳೆ ೯೯ ರನ್ ಗಳಿಸಿದ ವೆಂಗ್ ಸರ್ಕಾರ್ ಔಟಾಗುವುದರೊಂದಿಗೆ ನಾಲ್ಕನೇ ನಂಬರಿನ ಬ್ಯಾಟ್ ಮನ್ ಪುಟ್ತಪೋರ ಸಚಿನ್ ಮೈದಾನಕ್ಕೆ ಬಂದ. ಇಡಿಯ ಮೈದಾನ ಅವನಿಗಾಗಿ ಕಾಯುತ್ತಿತ್ತು. ಶಾಲಾದಿನಗಳ ಆಟ ನೋಡಿದವರಿಗೆ ಹೆದರಿಕೆ ಶುರುವಾಗಿತ್ತು. ಸಚಿನ್ ಪಾಲಿಗದು ಅಗ್ನಿಪರೀಕ್ಷೆ!’ಆ ಹೆದರಿಕೆಯಲ್ಲಿರುವಾಗಲೇ ಅವನನ್ನು ಔಟ್ ಮಾಡಿಬಿಡಬೇಕು’. ಅದು ಎದುರಾಳಿಗಳ ಛಲ. ಮೊದಲ ಚೆಂಡಿನ ಲೈನ್ ಲೆಂತ್ ಚೆನ್ನಾಗಿತ್ತು. ಸಚಿನ್ ರಕ್ಷಣಾತ್ಮಕವಾಗಿ ಆಡಿದ. ಎರಡನೆಯ ಚೆಂಡನ್ನೂ ಗೌರವಿಸಿದ. ಆಫ್‌ಸ್ಟಂಪಿನತ್ತ ಪುಟಿದು ಬಂದ ಮೂರನೇ ಚೆಂಡನ್ನು ಮಾತ್ರ ಕವರ್ಸ್ ಮೂಲಕ ಬೌಂಡರಿಗಟ್ಟಿದ. ಸೇರಿದ ಜನರೆಲ್ಲ ಎದ್ದು ನಿಂತರು. ಕರತಾಡನ ಶುರುವಿಟ್ಟರು. ಊಟದ ಸಮಯವಾಯ್ತು. ಮರಳಿ ಬಂದ ಸಚಿನ್ ಎಂದಿನ ಆಟ ಮುಂದುವರೆಸಿದ. ಎದುರಿಗಿದ್ದವರು ತರಗೆಲೆಗಳಂತೆ ಉದುರುತ್ತಿದ್ದರೂ ತಲೆ ಕೆಡಿಸಿಕೊಳ್ಳಲಿಲ್ಲ. ಟೀ ಬ್ರೇಕ್ ಘೋಷಣೆಯಾಗುವ ವೇಳೆಗೆ ೮೦ರ ಗಡಿ ದಾಟಿಬಿಟ್ಟಿದ್ದ.ಮತ್ತೆ ಪಂದ್ಯ ಆರಂಭವಾಯಿತು. ಪೋರ ೯೫ರ ಸಂಖ್ಯೆಯಲ್ಲಿರುವಾಗ ಎಲ್ಲ ಫೀಲ್ಡರ್‌ಗಳೂ ಹತ್ತಿರ ಬಂದರು. ಅವನನ್ನು ಒತ್ತಡಕ್ಕೆ ಸಿಲುಕಿಸುವ ಯೋಜನೆ ಅವರದು. ಬೌಲರ್ ಚೆಂಡು ಎಸೆಯುವವರೆಗೂ ಸಚಿನ್ ಒತ್ತಡದಲ್ಲಿದ್ದ. ಚೆಂಡು ಅತ್ತ ಕೈಬಿಡುತ್ತಲೇ ಇತ್ತ ಸಚಿನ್ ಕ್ರೀಸ್ ಬಿಟ್ಟ. ಮುಂದೆ ಬಂದು ಚೆಂಡನ್ನು ಅಟ್ಟಿದ. ಅದು ಬೌಮ್ದರಿಯತ್ತ ಧಾವಿಸಿತು. ೧೦೦ರ ಅಂಚಿನಲ್ಲಿದ್ದ ಸಚಿನ್ ಅನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಬೀಳಿಸುವ ಸಂಚೂ ವಿಫಲವಾಯ್ತು. ಚೆಂಡನ್ನು ಲೆಗ್ ಸೈಡಿನತ್ತ ತಿರುಗಿಸಿ ಸಚಿನ್ ಒಂದು ರನ್ ಗಳಿಸಿ ಶತಕ ಪೂರೈಸಿದ. ರಣಜಿಯಲ್ಲಾಡಿದ ಮೊದಲ ಪಂದ್ಯದಲ್ಲೇ ಸಚಿನ್ ಈ ಸಾಧನೆಗೈದಿದ್ದ. ಆಗ ಅವನಿಗೆ ೧೫ ವರ್ಷ ೭ ತಿಂಗಳು ೧೨ ದಿನವಾಗಿತ್ತು! ರಣಜಿಯಲ್ಲಿ ಚೆಂದದ ಸಾಧನೆ ಮಾಡಿದ ಸಚಿನ್ ಹೆಚ್ಚಿನ ತರಬೇತಿಗೆಂದು ಚೆನ್ನೈನ ಡೆನ್ನಿಸ್ ಲಿಲ್ಲಿ ಕೇಂದ್ರಕ್ಕೆ ಹೊರಟ. ಅದೇ ಅಲ್ಲಿ ಎರಡು ವರ್ಷಗಳ ಹಿಂದೆ ಬೌಲಿಂಗ್ ತರಬೇತಿಗೆಂದು ಅರ್ಜಿ ಹಾಕಿದ್ದ ಸಚಿನ್‌ನನ್ನು ತಿರಸ್ಕರಿಸಲಾಗಿತ್ತು. ಅಲ್ಲಿಯ ಮನಸೂರೆಗೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸಿದ್ದ ತೆಂಡೂಲ್ಕರ್, ‘ಈ ಹುಡುಗ ಅಸಾಧಾರಣ ಆಟಗಾರನಾಗುತ್ತಾನೆ, ಬಹಳಷ್ಟು ರನ್ ಗಳಿಸುವ ಸಾಮರ್ಥ್ಯ ಪಡೆದಿದ್ದಾನೆ’ ಎಂದು ಶಹಬ್ಬಾಸ್‌ಗಿರಿ ಪಡೆದಿದ್ದ!

ಅದೇ ವೇಳೆಗೆ ಪಾಕಿಸ್ತಾನ ಪ್ರವಾಸ ಶುರುವಾಗಿದ್ದು, ಭಾರತದಿಂದ ಹೊರಟ ತಂಡಕ್ಕೆ ಸಚಿನ್‌ನನ್ನು ಸೇರಿಸಬೇಕೆಂದು ಆಯ್ಕೆ ಸಮಿತಿಯ ಬಹುತೇಕರು ಒತ್ತಡ ಹೇರುತ್ತಿದ್ದರು. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ದೊಡ್ಡ ಪಂದ್ಯಗಳನ್ನಾಡಿ ವಿಫಲವಾದರೆ ಆತನ ಆಟ ಹಾಳಾಗಿಹೋಗುತ್ತದೆ ಎಂದು ಒಂದಷ್ಟು ಜನ ವರಾತ ತೆಗೆದರು. ಸಮಿತಿಯ ಅಧ್ಯಕ್ಷರು ಮಾತ್ರ ಸ್ಪಷ್ಟವಾಗಿ ಹೇಳಿದ್ದರು, ‘ಸಚಿನ್ ಎಂದಿಗೂ ವಿಫಲವಾಗಲಾರ. ಅವನು ಗೆಲುವಿನ ಪರ್ಯಾಯ!’

ಅದೇನು ಶಕ್ತಿ ಅವನಲ್ಲಿತ್ತೋ? ತನ್ನ ಆಟದಿಂದ ಎಲ್ಲರನ್ನೂ ಸೆಳೆದುಬಿಡುತ್ತಿದ್ದ. ಒಮ್ಮೆ ಅವನ ಆಟ ನೋಡಿದವರು ಮುದ್ದಿನಿಂದ ಮುತ್ತಿಕ್ಕುವಷ್ಟು ಚೆನ್ನಾಗಿ ಆಡುತ್ತಿದ್ದ. ಯಾವ ಚೆಂಡಿಗೆ ಯಾವ ಥರದ ಹೊಡೆತ ಬೇಕು ಎಂದು ನುರಿತ ತಜ್ಞರು ಹೇಳುತ್ತಾರೋ ಅಂತಹುದೇ ಹೊಡೆತ ಬಾರಿಸಿ ಮನಗೆಲ್ಲುತ್ತಿದ್ದ. ಅವನ ಶ್ರದ್ಧೆ, ಏಕಾಗ್ರತೆ ಕಂಡ ಗವಾಸ್ಕರ್, ಇರಾನಿ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿದ ಸಚಿನ್ ಗೆ ತನ್ನ ಖ್ಯಾತ ಅಲ್ಟ್ರಾ ಸಾಫ್ಟ್ ಪಾಲಿಥಿನ್ ಪ್ಯಾಡುಗಳನ್ನು ಬಹುಮಾನವಾಗಿ ಕೊಟ್ಟಿದ್ದರು!

ಇವೆಲ್ಲ ಹಿನ್ನೆಲೆಗಳಲ್ಲಿಯೇ ಸಚಿನ್‌ನ ಪಾಕಿಸ್ತಾನ ಪ್ರವಾಸ ಅತ್ಯಂತ ಮಹತ್ವದ್ದು ಎನಿಸುವುದು. ಆತನನ್ನು ನಂಬುವ, ಆರಾಧಿಸುವ, ಎತ್ತರಕ್ಖೇರಲಿ ಎಂದು ಹಾರೈಸುವ ಎಲ್ಲರಿಗೂ ಡವಡವ… ಒಂದೆಡೆ ಬದ್ಧ ವೈರಿ ಪಾಕಿಸ್ತಾನ, ಮತ್ತೊಂದೆಡೆ ಭಾರತೀಯ ಜನ. ಎಂಥೆಂಥವರೂ ಇಂತಹ ಕಾತರದ ಕ್ಷಣಗಳಿಂದ ತಪ್ಪಿಸ್ಕೊಳ್ಳಲು ಯತ್ನಿಸ್ತಾರೆ. ಅಂತಹದರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನೇ ಪಾಕಿಗಳ ವಿರುದ್ಧ ಆಡಹೊರಟಿರುವ ಸಚಿನ್ ಎಲ್ಲರಿಗೂ ದಿಗಿಲು ಹುಟ್ಟಿಸಿದ್ದ. ಪಾಕಿಸ್ತಾನಕ್ಕೆ ಭಾರತೀಯ ತಂಡ ಕಾಲಿಟ್ಟಿತು. ತಂಡದ ನಾಯಕ ಶ್ರೀಕಾಂತ್. ಆತ ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವವರು. ಹೀಗಾಗಿಯೇ ಸಚಿನ್ ಮೇಲಿದ್ದ ಒತ್ತಡ ಅರಿತು, ಡ್ರೆಸ್ಸಿಂಗ್ ರೂಮಿನಲ್ಲಿ ಒಂಟಿಯಾಗಿ ಕುಳಿತವನ ಬಳಿ ಹೋದರು. ‘ಹೆದರಬೇಡ, ನಿನ್ನ ಆಟದ ಬಗ್ಗೆ ಕೇಳಿದ್ದೇನೆ. ನಾಲ್ಕೂ ಟೆಸ್ಟ್‌ಗಳಲ್ಲಿ ನೀನು ಇರುತ್ತೀಯ. ನಿನ್ನನ್ನು ಯಾರೂ ತೆಗೆಯುವುದಿಲ್ಲ. ಸಹಜವಾದ ಆಟವಾಡು’ ಎಂದು ಬೆನ್ನು ಚಪ್ಪರಿಸಿದ್ದರು. ಆಗ ಸಚಿನ್ ಏನು ಮಾಡುತ್ತಿದ್ದ ಗೊತ್ತಾ? ಆತಂಕದಿಂದ ಉಗುರು ಕಚ್ಚುತ್ತಿದ್ದ! ಶ್ರೀಕಾಂತ್ ತಮ್ಮ ಪಾಲಿನದ್ದನ್ನು ಹೇಳಿ ಮುಗಿಸುವವರೆಗೂ ನಿರುಮ್ಮಳವಾಗಿ ಕೇಲೀ, ಅನಂತರ ಮತ್ತೆ ಅಷ್ಟೇ ಗಹನವಾಗಿ ಉಗುರು ಕಚ್ಚುತ್ತ ಕುಳಿತುಬಿಟ್ಟ!

1 Response to ಹದಿನೈದರ ಪೋರ, ಶತಕಗಳ ಸರದಾರ!

  1. Keshav

    Sundara mattu sphoortidayaka kathe