ವಿಭಾಗಗಳು

ಸುದ್ದಿಪತ್ರ


 

ಹಿಂದೂ ಅಂದರೆ ಜೀವನ ಪದ್ಧತಿ, ಏಕೆ ಗೊತ್ತಾ?

ಇಂದು ಕಾಲೇಜಿಗೆ ಹೋಗುವ ಹುಡುಗಿ ಸ್ನಾನ ಮಾಡದೇ ತಿನ್ನಬಾರದೆಂದು ಸೈನ್ಸ್ ಪುಸ್ತಕದಲ್ಲಿ ಎಲ್ಲಿದೆ ಹೇಳು ಎಂದು ತಂದೆ-ತಾಯಿಯರನ್ನು ಪ್ರಶ್ನಿಸುವಾಗ ಅವರ ಬಳಿ ಉತ್ತರವಿಲ್ಲ. ಇದರ ಹಿಂದೆ ಸಾವಿರಾರು ವರ್ಷಗಳಿಂದ ಹರಿದು ಬಂದ ಘನೀಭವಿತ ಪರಂಪರೆ ಇದೆ ಎಂದರೆ ಆಕೆಗೆ ಅರ್ಥವಾಗೋಲ್ಲ. ನಾವಿಂದು ವಿಜ್ಞಾನದ ಭೂತಗನ್ನಡಿಯ ಮೂಲಕ ಭಾರತದ ಚಿತ್ರ ನೋಡುವಾಗ ಪಶ್ಚಿಮವನ್ನೇ ಕಾಣುತ್ತಿದ್ದರೆ ಅತ್ತ ನಿವೇದಿತಾ ಶ್ರದ್ಧೆಯೆಂಬ ಕನ್ನಡಕ ಹಾಕಿಕೊಂಡು ಇಲ್ಲಿನ ಪ್ರತಿ ಮನೆಯಲ್ಲೂ ಭಾರತವನ್ನೇ ಕಾಣುತ್ತಿದ್ದಳು. ಎಷ್ಟೊಂದು ವ್ಯತ್ಯಾಸ.

ಇತ್ತೀಚೆಗೆ ಬೆಳಕಿಗೆ ಬಂದ ಘಟನೆ. ವಹಾಬಿ ಎಂಬ ಕಟ್ಟರ್ ಪಂಥಕ್ಕೆ ಸೇರಿದ ಮುಸಲ್ಮಾನರ ಗುಂಪು ಹಿಂದುಗಳ ಮತಾಂತರಕ್ಕೆ ಬಲುದೊಡ್ಡ ಪ್ರಯತ್ನ ಮಾಡುತ್ತಿದೆ. ಜಾಕಿರ್ ನಾಯಕ್ನ ಇತರ ಪಂಥಗಳ ಮೇಲಿನ ಬೆಂಕಿಯುಗುಳುವ ಮಾತುಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಳಿಸಿ ಅವರ ಮನಸ್ಸು ಕೆಡಿಸಿ ಮತಾಂತರಿಸಿಬಿಡುವ ಯೋಜನೆ ಅವರದ್ದು. ಹೀಗೆ ಹಿಂದುತ್ವದ ಬಂಧದಿಂದ ಆಚೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ; ಅವರಿಗೆ ತಮ್ಮದೇ ಹುಡುಗಿಯೊಂದಿಗೆ ಮದುವೆ ಮಾಡಿಸಿ ಆ ಹುಡುಗನನ್ನು ಮಸೀದಿಯಲ್ಲಿ ಕೆಲಸಕ್ಕೆ ಹಚ್ಚಿ ಬಿಡುತ್ತಾರೆ. ಮತಾಂತರಗೊಂಡವರು ಸ್ವಲ್ಪ ಬುದ್ಧಿವಂತರಾದರೆ ಅವರನ್ನೇ ಬಳಸಿ ಇತರ ಹಿಂದೂಗಳ ಮತಾಂತರಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಮತಾಂತರಗೊಂಡ ಹುಡುಗಿಯೊಬ್ಬಳು ಸಿಕ್ಕಿದ್ದಳು. ಮತಾಂತರವಾದದ್ದೇಕೆಂದರೆ ಪುಂಖಾನುಪುಂಖವಾಗಿ ಹಿಂದೂ ಧರ್ಮದ ಮೂರ್ತಿ ಪೂಜೆಯಲ್ಲಿನ ಹುಳುಕುಗಳನ್ನು ಆಡಿಕೊಳ್ಳಲಾರಂಭಿಸಿದಳು. ಮೂವತ್ಮೂರು ಕೋಟಿ ದೇವತೆಗಳ ಲೇವಡಿ ಮಾಡಿದಳು. ಶಿವನ ‘ಲಿಂಗ’ವನ್ನೂ ಬಿಡದೇ ಪೂಜಿಸುವ ಜನಾಂಗ ಎಂದೂ ಅಪಹಾಸ್ಯ ಮಾಡಿದಳು. ಅವಳು ಹೇಳಿದ್ದೆಲ್ಲ ಕೇಳಿ ಉತ್ತರಿಸುವ ಮೊದಲು ವಹಾಬಿ ಪಂಥದ ಇತಿಹಾಸ ತೆರೆದಿಟ್ಟೆ. ಈಕೆಯನ್ನು ಮುಂದಿನ ದಿನಗಳಲ್ಲಿ ಅವರು ಬಳಸಿಕೊಳ್ಳಬಹುದಾದ ರೀತಿಗಳನ್ನು ವಿವರಿಸಿದೆ. ಆಮೇಲೆ ಹಿಂದೂ ಧರ್ಮದಲ್ಲಿ ಹುದುಗಿರುವ ಪೂಜಾ ಪದ್ಧತಿಯ ಸೂಕ್ಷ್ಮಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟೆ. ಇವೆಲ್ಲಕ್ಕೂ ಖಂಡಿತ ಪರಿಪೂರ್ಣ ಉತ್ತರ ಕೊಡುವೆ. ಸದ್ಯಕ್ಕೆ ನಿವೇದಿತಾ ಈ ಸಂಗತಿಗಳನ್ನು ಅರ್ಥೈಸಿಕೊಂಡ ಬಗೆ ನಿಮ್ಮೆದುರಿಗೆ ಬಿಚ್ಚಿಡುವೆ.

two

 

ಹಿಂದೂ ಎಂದರೆ ಏನು? ಅಂತ ಯಾರಾದರೂ ಕೇಳಿದಾಗ ಅದು ಜೀವನ ಮಾರ್ಗ ಅಂತ ನಾವೆಲ್ಲ ಹೇಳುತ್ತೇವಲ್ಲ ಅದು ಹೇಗೆ ಅಂತ ಸಮರ್ಥಿಸಿಕೊಳ್ಳಬಲ್ಲೆವೇನು? ನಿವೇದಿತಾ ತನ್ನ ವೆಬ್ ಆಫ್ ಇಂಡಿಯನ್ ಲೈಫ್ನಲ್ಲಿ ಅದನ್ನು ಮನಮುಟ್ಟುವಂತೆ ವಿವರಿಸುತ್ತಾಳೆ. ‘ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಪರಂಪರೆಗಳು ಭಾರತೀಯ ಬದುಕಿನ ಹಂದರದ ಅವಿಭಾಜ್ಯ ಅಂಗಗಳೆಂಬ ಸತ್ಯ ಅವಳಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹಿಂದೂವೊಬ್ಬ ಬದುಕು ಕಟ್ಟಿಕೊಂಡಿರೋದೇ ಮನೆ, ಮಂದಿರ, ಊರು ಮತ್ತು ತೀರ್ಥಕ್ಷೇತ್ರಗಳ ಸುತ್ತ. ಅವನ ಪೂಜಾ ಪದ್ಧತಿ, ಮೈಮೇಲೆ ಹಾಕಿಕೊಳ್ಳೋ ಧಾರ್ಮಿಕ ಸಂಕೇತಗಳು, ಹುಟ್ಟಿನಿಂದ ಹಿಡಿದು ಸಾವಿನವರೆಗೆ ಪ್ರತಿಯೊಬ್ಬನಿಗೂ ಪ್ರತ್ಯೇಕವಾಗಿ ಹಂತ-ಹಂತದಲ್ಲೂ ನಡೆಸುವ ಸಂಸ್ಕಾರಗಳು, ತಿಂಗಳಿಗೊಂದಾದರೂ ಹಬ್ಬ, ವ್ರತ-ಉಪವಾಸಗಳು, ಗಂಗೆಯ ಪಾವಿತ್ರ್ಯದ ಕುರಿತಂತೆ ಆಳಕ್ಕೆ ಹುದುಗಿರುವ ಭಕ್ತಿ ಇವೆಲ್ಲವೂ ಸೇರಿ ಹಿಂದೂ ಧರ್ಮವನ್ನು ಒಂದು ಬದುಕಿನ ರೀತಿಯಾಗಿ ಮಾರ್ಪಡಿಸಿಬಿಟ್ಟಿದೆ.’ ಎನ್ನುತ್ತಾಳೆ. ಅಲ್ಲದೇ ಮತ್ತೇನು? ಬೆಳಗ್ಗೆ ಬೇಗನೆದ್ದು ಮನೆಯೆದುರು ನೀರು ಚೆಲ್ಲಿ, ರಂಗೋಲಿ ಇಟ್ಟು, ದಾಸರ ಪದ ಹೇಳಿಕೊಳ್ಳುತ್ತಾ ಬೇಗನೆ ಶಾಲೆಗೆ ಹೋಗಬೇಕಿರುವ ಮಕ್ಕಳಿಗಾಗಿ ತಿಂಡಿ-ಅಡುಗೆ ಮಾಡಿಟ್ಟು ಅವರನ್ನೆಲ್ಲ ತಯಾರು ಮಾಡಿ ಕಳಿಸಿ ತಾನೂ ಸ್ನಾನ ಮಾಡಿ ದೇವರಕೋಣೆ ಹೊಕ್ಕಿ ಸಾಕಷ್ಟು ಹೊತ್ತು ಪೂಜೆ ಮಾಡಿ ಆನಂತರವೇ ತಿಂಡಿ ತಿನ್ನುವ ತಾಯಿ ಒಂದು ಅಪರೂಪದ ಧಾರ್ಮಿಕ ಬದುಕನ್ನೇ ತನ್ನದಾಗಿಸಿಕೊಂಡಿದ್ದಾಳೆ. ಅವಳಿಗೆ ಅಮೇರಿಕಾದ ಅಧ್ಯಕ್ಷರ ಬಗ್ಗೆ ಗೊತ್ತಿಲ್ಲದಿರಬಹುದು ಆದರೆ ದೇವರ ಕೋಣೆಯಲ್ಲಿ ಕುಳಿತಿರುವ ದೇವರ ಕುರಿತಂತೆ ಆಕೆಗೆ ಚೆನ್ನಾಗಿ ಗೊತ್ತು. ತನ್ನ ಮಕ್ಕಳ ಆರೋಗ್ಯಕ್ಕಾಗಿ ಮನೆ ಮದ್ದು ಮಾಡುವ ಜ್ಞಾನ ಜೋರಾಗಿಯೇ ಇದೆ ಆಕೆಗೆ. ಇದನ್ನು ನಿವೇದಿತಾ ಬಲು ಸುಂದರವಾಗಿ ಅರಿತಿದ್ದಳು. ಆಕೆ ತನ್ನಿಡೀ ಪುಸ್ತಕದಲ್ಲಿ ಪ್ರೇಮದ ಪರದೆ ಹೊದುಕೊಂಡೇ ಹಿಂದೂಧರ್ಮದ ಹಂದರವನ್ನು ವಿವರಿಸುತ್ತಾಳೆ. ಆ ವಿವರಣೆಗಳನ್ನು ಓದುವುದೇ ಒಂದು ಆನಂದ. ‘ಬೆಳಗ್ಗಿನ ಜಾವ 4 ಗಂಟೆಗೆ ಎದ್ದು ತನ್ನ ಕೋಣೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಭಾರತೀಯ ಹೆಣ್ಣುಮಗಳ ಬದುಕು ಆರಂಭ. ಆನಂತರ ಸ್ವಲ್ಪ ಹೊತ್ತು ಧ್ಯಾನ ಮಾಡಿ ಗಂಗೆಗೆ ಹೋಗಿ ನಿತ್ಯ ಸ್ನಾನ. ಮುಂದೆ ಪೂರ್ಣ ಪ್ರಮಾಣದ ಪೂಜೆ ಮಾಡಿ ಆಮೇಲೇ ಊಟ’ ಎನ್ನುತ್ತಾಳೆ ಆಕೆ. ನನಗಂತೂ ಅಷ್ಟು ಬೇಗನೇ ಏಳುವುದು ಎಂದೂ ಸಾಧ್ಯವಾಗಲಿಲ್ಲ ಎಂಬುದನ್ನು ಸೇರಿಸುವುದು ಮರೆಯುವುದಿಲ್ಲ. ಕ್ರಿಶ್ಚಿಯನ್ ಮಿಶಿನರಿಗಳು ಹಬ್ಬಿಸಿದ್ದ, ಭಾರತೀಯರೆಂದರೆ ಸದಾ ನೀರೆರೆಚಿಕೊಂಡು ಶುದ್ಧೀಕರಣದ ಮಡಿ ಮಾಡುವ, ಎಲ್ಲೆಂದರಲ್ಲಿ ನಮಸ್ಕಾರ ಮಾಡುವ, ಅರ್ಥವಿಲ್ಲದ ಜಾತಿ ಬಂಧನದಲ್ಲಿ ನರಳುವ ಜನಾಂಗ ಎಂಬುದು ಅಕ್ಷರಶಃ ಸುಳ್ಳೆಂದು ಜರಿಯುತ್ತಾಳೆ. ವಾಸ್ತವದಲ್ಲಿ ಇಲ್ಲಿನ ಆಚರಣೆಗಳು ಅದೆಷ್ಟು ಹೃತ್ಪೂರ್ವಕವೆಂದು ಕೊಂಡಾಡುತ್ತಾಳೆ. ಅವಳ ದೃಷ್ಟಿಯಲ್ಲಿ ‘ಭಾರತೀಯನ ಪಾಲಿಗೆ ದಿನ ನಿತ್ಯದ ಆಚರಣೆ, ವೈಯಕ್ತಿಕ ಹವ್ಯಾಸಗಳೆಲ್ಲ ಬಲು ಪ್ರಾಚೀನ ಕಾಲದಿಂದ ರಾಷ್ಟ್ರ ಪ್ರವಾಹದಲ್ಲಿ ಹರಿದು ಬಂದ ಬಹು ಮುಖ್ಯವಾದ, ಪವಿತ್ರವಾದ ಶಾಶ್ವತ ನಿಧಿ! ಅದನ್ನು ಹಾಳಾಗದಂತೆ ಜತನದಿಂದ ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬನ ಜವಾಬ್ದಾರಿ.’
ನಿವೇದಿತಾ ಬಲು ಸೂಕ್ಷ್ಮ. ತುಂಬಾ ಹತ್ತಿರದಿಂದ ಪ್ರತಿಯೊಂದನ್ನು ಗಮನಿಸಿ ಅದರಲ್ಲಿರುವ ಸತ್ತ್ವವನ್ನು ಗೌರವಿಸಿ ಆರಾಧಿಸಿದ್ದಾಳೆ. ಬಹುಶಃ ಪಶ್ಚಿಮದ ಆಚರಣೆ-ಚಿಂತನೆಗಳನ್ನು ಪೂರ್ವದೊಂದಿಗೆ ತುಲನೆ ಮಾಡುವ ಸಾಮಥ್ರ್ಯ ಆಕೆಗೆ ಸಿದ್ಧಿಸಿತ್ತು. ಹೀಗಾಗಿಯೇ ಆಕೆ ಸಮರ್ಥವಾಗಿ ಎಲ್ಲವನ್ನೂ ತಾಳೆ ಹೇಳುತ್ತಾಳೆ, ‘ಸ್ನಾನ ಮತ್ತು ಊಟ ಪಶ್ಚಿಮದ ಪಾಲಿಗೆ ಸ್ವಾರ್ಥದ ಕ್ರಿಯೆಯಾದರೆ ಭಾರತದಲ್ಲಿ ಅದು ಬಲು ಪ್ರಮುಖವಾದ ಸಂಸ್ಕಾರ.’ ಅದಕ್ಕೆ ಆಕೆ ಸೂಕ್ತ ಉಲ್ಲೇಖವನ್ನೂ ಕೊಡುತ್ತಾಳೆ. ಗಂಗೆಯಲ್ಲಿ ಸ್ನಾನಕ್ಕೂ ಮುನ್ನ ತನ್ನ ಪಾದ ಸ್ಪರ್ಶಕ್ಕೆ ಆಕೆಯ ಬಳಿ ಕ್ಷಮೆ ಕೇಳುವ ಪರಿ ಅನನ್ಯ. ಸ್ನಾನ ಆಗುವವರೆಗೆ ಊಟ ಮಾಡುವಂತಿಲ್ಲ ಎಂಬ ನಿಯಮ ಬೇರೆ. ಹೀಗಾಗಿ ಪ್ರತಿನಿತ್ಯ ಊಟ ಮಾಡುವ ಮುನ್ನ ಒಮ್ಮೆ ಗಂಗೆಯನ್ನು ಪ್ರಾರ್ಥಿಸುವ ಪ್ರತೀತಿ. ‘ಪೂಜೆ ಮಾಡದೇ ಊಟವಿಲ್ಲ ಮತ್ತು ಸ್ನಾನ ಮಾಡದೇ ಪೂಜೆ ಮಾಡುವಂತಿಲ್ಲ’ ಇದು ಭಾರತದ ಹೆಣ್ಣುಮಗಳು ಬಲು ಕಠಿಣವಾಗಿ ಆಚರಿಸಿಕೊಂಡು ಬಂದಿರುವ ಜೀವನ ಪದ್ಧತಿ ಎಂದು ಉದ್ಗರಿಸುತ್ತಾಳೆ ನಿವೇದಿತಾ.

ಇಂದು ಕಾಲೇಜಿಗೆ ಹೋಗುವ ಹುಡುಗಿ ಸ್ನಾನ ಮಾಡದೇ ತಿನ್ನಬಾರದೆಂದು ಸೈನ್ಸ್ ಪುಸ್ತಕದಲ್ಲಿ ಎಲ್ಲಿದೆ ಹೇಳು ಎಂದು ತಂದೆ-ತಾಯಿಯರನ್ನು ಪ್ರಶ್ನಿಸುವಾಗ ಅವರ ಬಳಿ ಉತ್ತರವಿಲ್ಲ. ಇದರ ಹಿಂದೆ ಸಾವಿರಾರು ವರ್ಷಗಳಿಂದ ಹರಿದು ಬಂದ ಘನೀಭವಿತ ಪರಂಪರೆ ಇದೆ ಎಂದರೆ ಆಕೆಗೆ ಅರ್ಥವಾಗೋಲ್ಲ. ನಾವಿಂದು ವಿಜ್ಞಾನದ ಭೂತಗನ್ನಡಿಯ ಮೂಲಕ ಭಾರತದ ಚಿತ್ರ ನೋಡುವಾಗ ಪಶ್ಚಿಮವನ್ನೇ ಕಾಣುತ್ತಿದ್ದರೆ ಅತ್ತ ನಿವೇದಿತಾ ಶ್ರದ್ಧೆಯೆಂಬ ಕನ್ನಡಕ ಹಾಕಿಕೊಂಡು ಇಲ್ಲಿನ ಪ್ರತಿ ಮನೆಯಲ್ಲೂ ಭಾರತವನ್ನೇ ಕಾಣುತ್ತಿದ್ದಳು. ಎಷ್ಟೊಂದು ವ್ಯತ್ಯಾಸ.

one

‘ಧರ್ಮ ಅಂದರೆ ರಿಲಿಜನ್ ಅಲ್ಲ, ಅದು ಮನುಷ್ಯನೊಳಗೆ ಅಡಗಿರುವ ಮನುಷ್ಯತ್ವದಂತೆ, ಶಾಶ್ವತವಾದ, ವಿಚಲಿತವಾಗದ, ಅಗತ್ಯವಾದ ಸೂಕ್ಷ್ಮವಸ್ತು’. ಎಂಬುದು ಆಕೆಯ ಗ್ರಹಿಕೆ. ಈ ಹಿನ್ನೆಲೆಯಲ್ಲಿ ಹಿಂದೂಧರ್ಮ ಜೀವನ ನಡೆಸಲು ಅಗತ್ಯವಾಗಿ ಬೇಕಾದ ಬಲು ಸೂಕ್ಷ್ಮ ಸಂಗತಿ ಎಂಬುದು ಆಕೆಗೆ ಅರಿವಿತ್ತು. ಈ ಧರ್ಮವನ್ನು ಆಕೆ ರಾಷ್ಟ್ರೀಯ ಧರೋಹರವೆಂದೂ ರಾಷ್ಟ್ರೀಯ ಸದಾಚಾರವೆಂದೂ ಗುರುತಿಸುತ್ತಾಳೆ. ‘ಈ ಧರ್ಮವನುಳಿಸಲೆಂದೇ ಝಾನ್ಸಿರಾಣಿ ಲಕ್ಷ್ಮಿಬಾಯಿ ಕಾದಾಡಿದ್ದು. ಈ ಧರ್ಮದೊಂದಿಗೆ ಹೇಗೆ ನಡೆದುಕೊಂಡರೆಂಬ ಆಧಾರದ ಮೇಲೆಯೇ ಪಠಾನರು, ಮೊಘಲರು, ಇಂಗ್ಲೀಷರನ್ನು ಭಾರತದ ರೈತ ತೂಗಿ ನೋಡೋದು. ಈ ಧರ್ಮದ ಆಚರಣೆ ಸಮರ್ಥವಾಗಿ ಮಾಡಿದನೆಂದೇ ಯುಧಿಷ್ಠಿರನನ್ನು ಎಲ್ಲರೂ ಧರ್ಮರಾಯನೆಂದು ಕೊಂಡಾಡೋದು’ ಎನ್ನುತ್ತಾಳೆ ಆಕೆ. ಬಹುಶಃ ಇದು ಹೊಸ ಹೊಳಹೇ ಸರಿ. ಅದೇಕೆ ಕೊಲವೊಮ್ಮೆ ಭಾರತೀಯರು ಹೊರಗಿನವರ ಆಳ್ವಿಕೆಯನ್ನು ಒಪ್ಪಿಕೊಳ್ಳುತ್ತಾರೆ, ತಮ್ಮವರನ್ನು ಧಿಕ್ಕರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಬುದ್ಧನ ಸ್ವೀಕಾರಕ್ಕೂ ಚಾರ್ವಾಕರ ಧಿಕ್ಕಾರಕ್ಕೂ ಧರ್ಮದ ಸೂಕ್ಷ್ಮಸಂಗತಿಯೊಂದು ಕಾರಣವೆಂಬುದಂತೂ ಬಲು ಸ್ಪಷ್ಟ.
ಇನ್ನು ದೈವಪೂಜೆಯ ಕುರಿತಂತೆ ಆಕೆಯ ಅಧ್ಯಯನವೂ ಬಲು ಆಳವಾದದ್ದು ಮತ್ತು ಅಚ್ಚರಿ ಹುಟ್ಟಿಸುವಂಥದ್ದು. ಆಕೆ ಚೀನಾದಲ್ಲಿ ಪೂಜೆಗೊಳ್ಳಲ್ಪಡುವ, ಶಕ್ತಿವಂತ ದೇವಿಯರ ಕುರಿತಂತೆ ಉಲ್ಲೇಖ ಮಾಡುತ್ತಾ ಭಾರತದಲ್ಲಿ ಮಾತೃಪೂಜೆ ಎನ್ನುವುದು ಕಾಲಗರ್ಭದಲ್ಲಿ ಹುದುಗಿಹೋಗಿರುವ ಅತ್ಯಂತ ಪ್ರಾಚೀನ ಆಚರಣೆ ಎಂದು ನೆನಪಿಸುವುದನ್ನು ಮರೆಯುವುದಿಲ್ಲ. ಹಿಮಾಲಯವನ್ನೂ ದಾಟಿ ಚೀನಾ, ಮಂಗೋಲಿಯಾಗಳ ಸಂಪರ್ಕಕ್ಕೆ ಬಂದ ಭಾರತೀಯರ ಪ್ರಭಾವ ಅವರ ಮೇಲಾಗಿರುವುದನ್ನು ಆಕೆ ಗುರುತಿಸುತ್ತಾಳೆ. ಈ ಕಾರಣದಿಂದಾಗಿಯೇ ಭಾರತದ ದಕ್ಷಿಣದಲ್ಲಿ ಪೂಜಿಸಲ್ಪಡುವ ಕನ್ಯಾಕುಮಾರಿ ಮತ್ತು ಜಪಾನಿನಲ್ಲಿ ಇಂದಿಗೂ ಪೂಜೆಗೊಳ್ಳುವ, ಸಕಲ ಸಂಪತ್ತುಗಳನ್ನು ಕರುಣಿಸುವ ಕ್ವಾನ್ಯೋನ್ ದೇವಿಯ ನಡುವಣ ಸಾಮ್ಯ ಅಧ್ಯಯನ ಯೋಗ್ಯವಾದುದು ಎನ್ನುತ್ತಾಳೆ. ನಿವೇದಿತಾ ಸಹಜವಾಗಿಯೇ ಪ್ರಶ್ನಿಸುತ್ತಾಳೆ, ‘ಸ್ವರ್ಗದ ದೇವತೆಯಾದ ಚೀನಾದ ಕಾರಿ ಮತ್ತು ಭಾರತದ ಕಾಳಿ ಇವರಿಬ್ಬರಲ್ಲಿ ಯಾರು ಪ್ರಾಚೀನ?’ ಅವಳ ಸಂಶೋಧನಾ ಮನೋಭಾವ ಇಲ್ಲಿಗೇ ನಿಲ್ಲುವಂಥದ್ದಲ್ಲ. ‘ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖವಾಗುವ ಮತ್ತು ಮೊಹಮ್ಮದೀಯರು ಆರಂಭದಿಂದಲೂ ಪೂಜಿಸುವ ‘ಕಾಬಾ’ದ ಶಿಲೆ ಅಲ್ಲಿನ ಜನಾಂಗವನ್ನು ಏಕವಾಗಿ ಬಂಧಿಸಿರುವ ಕೇಂದ್ರಬಿಂದು’ ಎನ್ನುತ್ತಾಳೆ. ‘ಭಾರತದಲ್ಲಿ ಇಂದಿಗೂ ಆಸ್ಥೆಯಿಂದ ಆರಿಸಿದ ಕಲ್ಲನ್ನು ಗರ್ಭಗುಡಿಯಲ್ಲೋ, ಬಯಲಲ್ಲೋ ಇಟ್ಟು ಭಕ್ತಿಯ ಸಂಕೇತವಾಗಿ ಪೂಜಿಸುವ ಜನಾಂಗವಿದೆ. ಇದು ಅವರ ಪಾಲಿಗೆ ಸಾಮಾನ್ಯ ಕಲ್ಲಲ್ಲ. ಸಾಕ್ಷಾತ್ತು ಹಿಮಾಲಯ’ ಎನ್ನುತ್ತಾಳೆ.
ನನಗೆ ಅಚ್ಚರಿ ಹುಟ್ಟಿಸಿದ ಅಂಶ ಪೂಜೆಗೆ, ಅಭಿಷೇಕಕ್ಕೆ ನಾವು ಬಳಸುವ ಎಣ್ಣೆಯ ಕುರಿತಂತೆ ಆಕೆಯ ಚಿಂತನೆ. ಹೀಗೆ ಆಲೋಚಿಸಿ ನೋಡಿ, ಭಗವಂತನಿಗೆ ನಾವು ಎಣ್ಣೆಯ ಅಭಿಷೇಕ ಮಾಡುವುದಾದರೂ ಏಕೆ? ನಿವೇದಿತಾ ಹೇಳುವಂತೆ ಜಗತ್ತಿನೆಲ್ಲೆಡೆ ಅಗ್ನಿ ಮತ್ತು ಬೆಳಕು ಪೂಜೆಯ ಕೇಂದ್ರವೇ. ಎಣ್ಣೆಗೆ ಬೆಂಕಿಯನ್ನೂ ಹೊತ್ತಿಸುವ ಶಕ್ತಿ-ಸಾಮಥ್ರ್ಯಗಳಿರುವುದರಿಂದ ಅದು ಹಿಂದೂವಿನ ಪಾಲಿಗೆ ಅತ್ಯಂತ ಪವಿತ್ರ. ಬೆಳಕನ್ನು ಕೊಡಬಲ್ಲ ವಸ್ತು ಪವಿತ್ರವೆನಿಸಿದ್ದರಿಂದಲೇ ಅದರಿಂದ ಕಲ್ಲಿಗೆ ಅಭಿಷೇಕ ಮಾಡುತ್ತಾನೆ ಹಿಂದೂ ಎನ್ನುವುದು ಆಕೆಯ ತರ್ಕ.

 
ಎಲ್ಲ ಪೂಜೆಯ ಮೂಲವೂ ಅಗ್ನಿಯ ಆರಾಧನೆಯೇ. ಹೀಗಾಗಿ ಕ್ರಿಶ್ಚಿಯನ್ನರು ಹೊತ್ತಿಸುವ ಲ್ಯಾಂಪ್, ಮುಸಲ್ಮಾನರು ಗೋರಿಯೆದುರು ಇಡುವ ದೀಪ ಮತ್ತು ಸುವಾಸನೆಯುಕ್ತ ಹೂಗಳು ಮತ್ತು ಹಿಂದೂ ಮಂದಿರಗಳಿಂದ ಹೊರಸೂಸುವ ಧೂಪದ ಸುವಾಸನೆ, ಹಣ್ಣು-ಹೂಗಳು ಇವೆಲ್ಲವೂ ಇದನ್ನು ಅರಿಯಬಲ್ಲ ಮಹತ್ವದ ಸಂಕೇತಗಳೇ. ಇದರ ಆಧಾರದ ಮೇಲೆಯೇ ನಿವೇದಿತಾ ಹೇಳೋದು, ಚೈನಾದ ತಾವೋವಾದ, ಪರ್ಶಿಯಾದ ಜೋರಾಷ್ಟ್ರಿಯನ್ ವಾದ ಮತ್ತು ಭಾರತದ ಹಿಂದುತ್ವ ಇವೆಲ್ಲವೂ ಅಂತರಂಗದೊಳಕ್ಕೆ ಬೆಸೆಯಲ್ಟಟ್ಟ ಒಂದೇ ಚಿಂತನೆಯ ವಿಭಿನ್ನ ರೂಪಗಳು. ಸ್ವತಃ ಇಸ್ಲಾಂ ಭಾರತದೊಂದಿಗೆ ಸಂಪರ್ಕಕ್ಕೆ ಬಂದೊಡನೆ ಸೂಫಿ ತತ್ತ್ವದ ಮಾತಾಡಲಾರಂಭಿಸಿತು’ ಎನ್ನುತ್ತಾಳೆ. ಮತ್ತು ಇವೆಲ್ಲವುಗಳಲ್ಲಿ ಅಡಗಿರುವ ಭಾರತದ ಪಾತ್ರವನ್ನು ಕೊಂಡಾಡುತ್ತಾಳೆ.

three
ಹೌದು. ಇಡಿಯ ಭಾರತವೇ ಆಕೆಯ ಪಾಲಿಗೆ ಒಂದು ತತ್ತ್ವಶಾಸ್ತ್ರದ ಮಹಾಗ್ರಂಥ. ಆಕೆ ಇಲ್ಲಿನ ಪ್ರತಿಯೊಂದು ಸಂಗತಿಯನ್ನೂ ಈ ಚಿಂತನೆಗೆ ತಾಳೆ ಹೊಂದಿಸಿಯೇ ನೋಡೋದು. ಭಾರತವನ್ನು ನಿಂತ ನೀರು ಎಂದು ಆಂಗ್ಲರು ಜರಿಯುವಾಗ ಆಕೆಗೆ ಕೋಪ ಬರುವ ಕಾರಣ ಇದೇ. ಆಕೆ ಘಂಟಾಘೋಷವಾಗಿ ಸಾರುತ್ತಾಳೆ, ‘ಭಾರತದ ಒಂದು ಪೀಳಿಗೆ ಮತ್ತೊಂದು ಪೀಳಿಗೆಗಿಂತ ಬೇರೆಯಾಗಿಯೇ ವ್ಯವಹರಿಸುತ್ತದೆ. ಪ್ಯಾರಿಸ್ಸಿನಲ್ಲಿ ಕೂಡ ಇಷ್ಟು ಬದಲಾವಣೆ ಕಾಣುವುದು ಕಷ್ಟ’ ಎನ್ನುತ್ತಾಳೆ. ಆಕೆಯ ಪ್ರಕಾರ ಅದಕ್ಕೆ ಕಾರಣವೇನು ಗೊತ್ತೇ? ‘ಇಲ್ಲಿನ ಪ್ರತಿಯೊಬ್ಬ ಸಂತ, ಪ್ರತಿಯೊಬ್ಬ ಕವಿ ಹಳೆಯ ತಾತ್ತ್ವಿಕ ಸಾಹಿತ್ಯ ರಾಶಿಗೆ ತಾನೊಂದಷ್ಟು ಭಿನ್ನವಾದುದನ್ನು ಸೇರಿಸುತ್ತಾನೆ ಮತ್ತು ಸಮಾಜ ಅದನ್ನು ಸ್ವೀಕರಿಸುತ್ತದೆ. ಸಂಸ್ಕೃತ ಸಾಹಿತ್ಯ ರಾಶಿ ಒಂದೆಡೆಯಾದರೆ ಸ್ಥಳೀಯ ಬಲಾಢ್ಯ ಸಂಸ್ಕೃತಿಯನ್ನು ಬಿಂಬಿಸುವ ದೇಸೀ ಭಾಷೆಗಳ ಸಾಹಿತ್ಯದ ಕೊಡುಗೆ ಮತ್ತೊಂದೆಡೆ. ಇವೆಲ್ಲವೂ ರಾಷ್ಟ್ರೀಯ ಸಾಹಿತ್ಯದ ಅಂಗಗಳಾಗಿಯೇ ಗುರುತಿಸಲ್ಪಡುತ್ತದೆ. ಬಂಗಾಳದಲ್ಲಿ ಚೈತನ್ಯ, ಸಿಖ್ಖರ ದಶಗುರುಗಳು, ಮಹಾರಾಷ್ಟ್ರದ ತುಕಾರಾಮರು, ದಕ್ಷಿಣದ ರಾಮಾನುಜರು ಇವರೆಲ್ಲರು ರಾಷ್ಟ್ರೀಯ ಸಾಹಿತ್ಯದ ಮೂರ್ತಿವೆತ್ತ ರೂಪಗಳೇ ಆಗಿದ್ದರು. ಆ ಸಾಹಿತ್ಯವನ್ನು ಸಾಮಾನ್ಯರ ಬದುಕಿಗೆ ಹೊಂದುವಂತೆ ತತ್ತ್ವವನ್ನು ರೂಪಿಸುವ ಹೊಣೆ ಅವರ ಹೆಗಲಮೇಲಿತ್ತು. ಅವರು ಅದನ್ನು ಸೂಕ್ತವಾಗಿ ನಿಭಾಯಿಸಿದರು. ಹೀಗಾಗಿ ಇಂಥವರನ್ನು ಭಾರತ ಅವತಾರವೆಂದು ಕರೆಯುತ್ತೆ. ಮತ್ತು ಇವರು ನಿರ್ಮಿಸಿದ ಪಂಥವೇ ರಾಷ್ಟ್ರವಾಗುತ್ತೆ. ಹೀಗೆಯೇ ಮರಾಠಾ ಸಾಮ್ರಾಜ್ಯ ರೂಪುಗೊಂಡಿದ್ದು, ಲಾಹೋರಿನಲ್ಲಿ ಅಧಿಪತ್ಯ ಸ್ಥಾಪನೆಯಾಗಿದ್ದು. ದೂರದ ಅರೇಬಿಯಾದಲ್ಲಿ ಇಸ್ಲಾಂ ತನ್ನ ತಾನು ರೂಪಿಸಿಕೊಂಡಿದ್ದು’.
ನಿವೇದಿತೆಯ ಆಲೋಚನೆಯ ಓತಪ್ರೋತ ಪ್ರವಾಹ ಹರಿಯುತ್ತಲೇ ಇರುತ್ತದೆ. ಓದಿನ ಓಟದಲ್ಲಿ ಎಲ್ಲೆಲ್ಲಿ ತಡೆಯೊಡ್ಡುವಿರೋ ಅಲ್ಲೆಲ್ಲಾ ಹೊಸ ಶಕ್ತಿ-ಚೈತನ್ಯಗಳ ಉತ್ಪಾದನೆಯಾಗುತ್ತದೆ. ‘ಮಾನವನ ಹಕ್ಕು ಪ್ರಾಪಂಚಿಕ ಸುಖ ಭೋಗಗಳ ತ್ಯಾಗವೇ ಹೊರತು ಕೂಡಿಟ್ಟು ಪರಮಾತ್ಮನೊಂದಿಗೆ ಸಮಾನತೆ ಸಾಧಿಸುವುದಲ್ಲ’ ಎಂದಿತು ಭಾರತ ಎನ್ನುತ್ತಾಳೆ ಆಕೆ. ಅದನ್ನು ಭಾರತೀಯರು ಮತ್ತು ಯೂರೋಪಿಯನ್ನರು ಅರಿಯುವಂತೆ ಮಾಡುವಲ್ಲಿ ಆಕೆಯ ಶ್ರಮ ಅಪಾರ. ಇಂದು ವಹಾಬಿಗಳು, ಮಿಶನರಿಗಳು ವೇದ-ಪುರಾಣಗಳ ಕುರಿತಂತೆ ಕೇಳುವ ಪ್ರಶ್ನೆ ಮೂರನೇ ಕ್ಲಾಸಿನ ಮಟ್ಟದ್ದೂ ಅಲ್ಲ. ನಿವೇದಿತಾ ಅವುಗಳಿಗೆ ಬಲು ಹಿಂದೆಯೇ ಮುಲಾಜಿಲ್ಲದೇ ಉತ್ತರಿಸಿದ್ದಾಳೆ. ವೇದ ಅನ್ನೋದು ಶಾಶ್ವತ ಸತ್ಯ. ಪುರಾಣ ಸೃಷ್ಟಿಯ ರಹಸ್ಯ, ಮಹಾಪುರುಷರ ಅವತಾರ ಅವರ ಸಾವು, ಪವಾಡಗಳ ಕಥನ ಎನ್ನುವ ಆಕೆ ಇವೆರಡೂ ಒಂದರೊಳಗೆ ಸೇರಿಕೊಂಡಂತೆ ಕಂಡರೂ ಬೇರ್ಪಡಿಸಿ ವಿವರಿಸುವುದು ಕಷ್ಟವಲ್ಲ ಎನ್ನುತ್ತಾಳೆ. ಮಿಶನರಿಗಳಿಗೆ ಅರ್ಥವಾಗಲೆಂದೇ, ‘ನೀನು ದೇವರನ್ನು ನಿನ್ನ ಹೃದಯ ಮತ್ತು ಆತ್ಮದಿಂದ ಪ್ರೀತಿಸು’ ಎಂದು ಬೈಬಲ್ ಹೇಳಿರುವುದು ವೇದವಿದ್ದಂತೆ ಮತ್ತು ‘ಹಿರೋಡ್ನು ರಾಜನಾಗಿದ್ದಾಗ ಯೇಸು ಬೆತ್ಲೆಹೆಂನಲ್ಲಿ ಹುಟ್ಟಿದ’ ಎನ್ನುವ ಬೈಬಲ್ ಭಾಗ ಪುರಾಣವಿದ್ದಂತೆ ಎಂದು ವಿವರಿಸುತ್ತಾಳೆ. ಓಹ್! ಎಷ್ಟು ಸಲೀಸಲ್ಲವೇ? ಇದು ನಿವೇದಿತೆಯ ವೈಶಿಷ್ಟ್ಯ.

Comments are closed.