ವಿಭಾಗಗಳು

ಸುದ್ದಿಪತ್ರ


 

ಹೊಸ ಬಗೆಯ ಯುದ್ಧಕ್ಕೆ ಸಜ್ಜಾಗಬೇಕಿದೆ

೨೦೧೨ರಲ್ಲಿ ಯುದ್ಧವಾದರೆ ನಮ್ಮ ಸ್ಥಿತಿ ಈ ಕಾರಣಕ್ಕಾಗಿಯೇ ಗಂಭೀರವೆನಿಸೋದು. ನಮ್ಮಲ್ಲಿ ಸೈಬರ್ ಯುದ್ಧಕ್ಕೆ ನಡೆಯುತ್ತಿರುವ ತಯಾರಿ ಬಲು ಕಡಿಮೆ. ’ಏನಿಲ್ಲವೆಂದರೂ ೫ಲಕ್ಷ ಐಟಿ ಉದ್ಯೋಗಿಗಳು ನಮಗೆ ಬೇಕು. ಸದ್ಯಕ್ಕೆ ನಮ್ಮ ಬಳಿ ಇರುವುದು ತೀರ ಕಡಿಮೆ’ ಎಂದು ಈ ವಿಭಾಗದ ಅಧಿಕಾರಿಯೊಬ್ಬರು ಅಲವತ್ತುಕೊಂಡಿದ್ದಾರೆ.

ಚೀನಾ ದಾಳಿಗೆ ೫೦ ವರ್ಷವಾಯ್ತು. ಅವತ್ತಿಡೀ ನಡೆದ ಟಿವಿ ಚರ್ಚೆಗಳಲ್ಲಿ ನಿರೂಪಕನೊಬ್ಬ ಸೈನ್ಯಾಧಿಕಾರಿಗೆ ಪ್ರಶ್ನಿಸಿದ್ದ. ’ಮತ್ತೊಂದು ೧೯೬೨ರ ದಾಳಿಗೆ ಭಾರತ ಸಜ್ಜಾಗಿದೆಯೆ?’ ಅಧಿಕಾರಿ ಹೆಮ್ಮೆಯಿಂದ ತಲೆಯಾಡಿಸಿ, ಆಮೇಲೆ ವಾಸ್ತವದ ಸಾಲು ಹೇಳಿದರು. ’೧೯೬೨ರ ಯುದ್ಧ ಮರುಕಳಿಸಿದರೆ ನಾವು ಸಿದ್ಧ, ೨೦೧೨ರ ಯುದ್ಧಕ್ಕಲ್ಲ!’
ಹೌದು. ೨೦೧೨ರ ಯುದ್ಧ ಸಾಂಪ್ರದಾಯಿಕ ಯುದ್ಧವಾಗಿರಲಾರದು. ಅಲ್ಲಿ ಸೈನಿಕ – ಮದ್ದು – ಗುಂಡು ಎಲ್ಲವೂ ನಾವಂದುಕೊಂಡಷ್ಟು ಇರಲಾರದು. ಅದು ಕಣ್ಣೆದುರಿಗೆ ಕಾಣಿಸದೆ ಕೊಲ್ಲುವ ಕದನ. ಇಂಗ್ಲಿಶ್ ಕಾದಂಬರಿಗಳು ಅದನ್ನು ಸೈಬರ್ ವಾರ್ ಅಂತ ಕರೀತವೆ. ದೂರ ದೇಶದಲ್ಲಿ ಕುಳಿತು ಈ ದೇಶದ ಕಂಪ್ಯೂಟರ್‌ಗಳನ್ನು ಹೊಕ್ಕು ದಾಖಲೆಗಳನ್ನು ಕದ್ದು, ತಿರುಚಿ ವ್ಯವಸ್ಥೆಯನ್ನೆ ಬುಡಮೇಲುಗೊಳಿಸಿಬಿಡುವ ಹೊಸ ಬಗೆಯ ಕದನವಿದು. ಹಾಗೆ ನೋಡಿದರಿದು ನಮ್ಮ ಪಾಲಿಗೆ ಹೊಸತಷ್ಟೆ. ಜಗತ್ತಿನ ಕೆಲವು ರಾಷ್ಟ್ರಗಳು ಅದಾಗಲೇ ಈ ಯುದ್ಧದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿಯಾಗಿದೆ.

ಕೆಂಪು ಡ್ರಾಗನ್, ಹೂವಿನ ಮುಸುಕಿನಲ್ಲಿ…

ಇತ್ತೀಚಿನ ಇಂಗ್ಲಿಶ್ ವಾರಪತ್ರಿಕೆಯೊಂದು ಚೈನಾ ಈ ಬಾರಿ ಯುದ್ಧ ಮಾಡಿದರೆ ಏನೇನಾಗಬಹುದೆಂಬ ಝಲಕ್ ಕೊಟ್ಟಿದೆ. ರಾತ್ರಿ ೭ ಗಂಟೆಗೆ ಇಂಟರ್ನೆಟ್ ಸಂಪರ್ಕ ಸ್ಥಗಿತ. ೮ ಗಂಟೆಗೆ ದೂರವಾಣಿ ಸ್ತಬ್ಧ. ೯.೩೦ಕ್ಕೆ ಸಂಪರ್ಕ-ಗೂಢಚಾರ ಉಪಗ್ರಹಗಳು ಕೈಕೊಡುತ್ತವೆ. ೧೧ ಗಂಟೆಗೆ ವಿದ್ಯುತ್ ಗ್ರಿಡ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಅದೇ ವೇಳೆಗೆ ಆಕಾಶ ಯಾನ ನಿಯಂತ್ರಿಸುವ ಟ್ರಾಫಿಖ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ. ೨ ಗಂಟೆಯ ವೇಳೆಗೆ ಪೆಟ್ರೋಲ್-ಡೀಸೆಲ್ ಉತ್ಪಾದನೆ, ಹಂಚಿಕೆಗಳು ದಾರಿತಪ್ಪುತ್ತವೆ. ಬೆಳಗ್ಗೆ ೭ ಗಂಟೆಗೆ ನಾವು ಏಳುವ ಸಮಯಕ್ಕೆ ಹಣಕಾಸು ವ್ಯವಸ್ಥೆ ಬುಡಮೇಲಾಗಿ ಬ್ಯಾಂಕುಗಳು ಬೊಂಬಡಾ ಬಜಾಯಿಸುತ್ತಿರುತ್ತವೆ. ಶೇರು ಮಾರುಕಟ್ಟೆಗಳಲ್ಲಿ ಅಲ್ಲೋಲಕಲ್ಲೋಲ. ೯ ಗಂಟೆಗೆ ಆರೋಗ್ಯ ವ್ಯವಸ್ಥೆ ಹದಗೆಡುತ್ತದೆ. ಆನ ಕಂಗಾಲಾಗುವ ಹೊತ್ತಿಗೆ ನಮ್ಮ ಅರಿವು ಮೀರಿ ಭಾರತ ಸೈನ್ಯ ದಾಳಿಗೊಳಗಾಗುತ್ತದೆ. ಗಣಕೀಕೃತ ವ್ಯವಸ್ಥೆಯಲ್ಲಿ ಎಲ್ಲವನ್ನೂ ಕಂಪ್ಯೂಟರ್ ಕೈಗಿಟ್ಟು ಕೆಲಸ ಮಾಡುತ್ತಿರುವ ನಾವು ಅದೇ ವ್ಯವಸ್ಥೆಯಿಂದ ಮಾಗದ ಪೆಟ್ಟಿಗೆ ಒಳಗಾಗುತ್ತೇವೆ.
ಇಷ್ಟಕ್ಕೆಲ್ಲ ಕಾರಣ ಏನು ಗೊತ್ತೆ? ನಾವೆಲ್ಲ ಬಳಸುವ ಇಂಟರ್ನೆಟ್ ವ್ಯವಸ್ಥೆ. ನಾವು ಬಳಸುವ ಕಂಪ್ಯೂಟರ್ ಚಿಪ್‌ಗಳಿಂದ ನಿರ್ಮಾಣವಾದದ್ದು. ಇವುಗಳನ್ನು ನಿರ್ಮಿಸ್ತಿರೋದು ಚೀನಾದ ಕಂಪೆನಿಗಳು. ಈ ಕಂಪ್ಯೂಟರ್‌ಗಳನ್ನು ಅಂತರ್ಜಾಲ ವ್ಯವಸ್ಥೆಗೆ ಒಳಪಡಿಸಲು ಮತ್ತೆ ಚೀನಾದ ’ಹುವೆ’ ಒದಗಿಸುವ ಸಂಪರ್ಕಸಾಧನಗಳನ್ನೆ ಬಳಸುತ್ತಿದ್ದೇವೆ. ಈ ಸಾಧನಗಳಲ್ಲೆಲ್ಲ ಮೊದಲೇ ತನಗೆ ಬೇಕಾದ ಪ್ರೋಗ್ರಾಮ್‌ಗಳನ್ನು ಹುದುಗಿಸಿಟ್ಟಿರುವ ಕಂಪನಿ ಚೀನಾ ಸೇನೆಯ ಆಣತಿಯಂತೆ ಕೆಲಸ ಮಾಡುತ್ತದೆ. ಅದೊಂದು ದಿನ ಅಂತರ್ಜಾಲ ವ್ಯವಸ್ಥೆಯ ಮೂಲಕ ಈ ಪ್ರೋಗ್ರಾಮುಗಳನ್ನು ಜಾಗೃತಗೊಳಿಸಿಬಿಟ್ಟರೆ ಮುಗಿಯಿತು. ನಮ್ಮ ಅಂತರ್ಜಾಲ ವ್ಯವಸ್ಥೆ ನಮ್ಮ ಮಾತೇ ಕೇಳದು!
ಇಂರ್ಟೆಟ್ಟಿನ ದಾಳಿ ದಿನಗಳೆದಂತೆ ಉಂಟುಮಾಡುವ ಸಮಸ್ಯೆ ಹೆಚ್ಚು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು. ಎಷ್ಟು ಕಂಪ್ಯೂಟರ್‌ಗಳು ಅಂತರ್ಜಾಲಕ್ಕೆ ಜೋತುಬೀಳುವವೋ ಅಷ್ಟು ನಾಶದ ಪ್ರಮಾಣವೂ ಹೆಚ್ಚುವುದು.
ಈ ಬಗೆಯ ದಾಳಿ ಇಂದೇ ದಾಳಿ ಶುರುವಾಗಿರುವುದಲ್ಲ. ಕೊಸೊವೋದಲ್ಲಿ ಶಾಂತಿಸ್ಥಾಪನೆಯ ಪ್ರಯತ್ನ ನಡೆಯುತ್ತಿದ್ದಾಗ ನ್ಯಾಟೋ ಮತ್ತು ಸರ್ಬಿಯಾಗಳ ನಡುವೆ ಸೈಬರ್ ಯುದ್ಧ ನಡೆದಿತ್ತು. ಅವರ ಮಾಹಿತಿಗಳನ್ನು ಇವರು, ಇವರದನ್ನು ಅವರು ಕದಿಯೋದು, ತಿದ್ದೋದು ನಡೆದಿತ್ತು. ಪ್ಯಾಲಸ್ತೇನ್-ಇಸ್ರೇಲ್ ತಿಕ್ಕಾಟಗಳಲ್ಲೂ ಈ ಛದ್ಮಯುದ್ಧ ಉಲ್ಲೇಖಗೊಂಡಿತ್ತು. ಚೀನಾ-ಅಮೆರಿಕಾಗಳೂ ಒಬ್ಬರೊಬ್ಬರ ಕಂಪ್ಯೂಟರ್ ತಲೆಗೆ ಕೈಹಕೋದನ್ನು ಬಿಟ್ಟಿಲ್ಲ. ನಾವು-ಪಾಕಿಸ್ತಾನದವರೂ ಅಷ್ಟೇ. ಪಾಕೀ ಐಎಸ್‌ಐಗಳಂತೂ ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳನ್ನು ದಾರಿಗೆಡಿಸಿಬಿಡುತ್ತಾರೆ.
ಮಾರುಕಟ್ಟೆ ಜಾಗತಿಕವಾಗುತ್ತಿದ್ದಂತೆ ೯೫% ಕಂಪ್ಯೂಟರ್‌ಗಳು ಒಂದಕ್ಕೊಂದು ಬೆಸೆದುಕೊಂಡಿರುವಂಥವು. ಅವುಗಳಲ್ಲಿ ಬಹುಪಾಲು ಒಂದೇ ಆಪರೇಟಿಂಗ್ ಸಿಸ್ಟಮ್‌ಗಳನ್ನು, ಅಂತರ್ಜಾಲಕ್ಕೆ ಬೆಸೆದುಕೊಳ್ಳಲು ಒಂದೇ ಬಗೆಯ ಪ್ರೊಟೋಕಾಲ್‌ಗಳನ್ನು ಬಳಸುವುದರಿಂದ ದಾಳಿ ಮಡುವುದೂ ಬಲು ಸುಲಭ. ಹಾಗಂತ ಬಿಇ ಓದಿಕಂಡ ಸಾಫ್ಟ್‌ವೇರ್ ಇಂಜಿನಿಯರ್‌ಗಳೆಲ್ಲ ಈ ಕೆಲಸ ಮಾಡಲಾರರು. ಇದು ಅಡ್ಡದಾರಿ ಹಿಡಿದವರ ಕಸುಬು. ಸುಪ್ತವಾಗಿರುವ ಪ್ರೋಗ್ರಾಮ್‌ಗಳನ್ನು ಬರೆದಿಟ್ಟು ಇಂತಿಂಥ ಸಮಯಕ್ಕೆ ಸರಿಯಾಗಿ ಚಿಗಿತುಕೊಳ್ಳುವಂತೆ ಮಾಡಿ ಇರುವ ಮಾಹಿತಿಗಳನ್ನೆಲ್ಲ ನಾಶ ಮಾಡಿಬಿಡುವ ವಿಕೃತ ವಾಂಛೆ ಇದು. ಇಂಥವರನ್ನು ಸೈಬರ್‌ವಾರ್‌ಗೆ ಬಳಸಲಾಗುತ್ತದೆ. ಇವರಿಗೆ ಅಪಾರ ಸಂಬಳ ಕೊಟ್ಟು ಸಾಕಲಾಗುತ್ತದೆ.
ಇರಾನಿನ ಹಿಜ್ಬುಲ್ ವಿರೋಧಿ ಗುಂಪಿನ ಈ ಇ-ದಾಳಿಕೋರರು ಬರೆದ ವ್ಯವಸ್ಥೆ ಬುಡಮೇಲುಗೊಳಿಸುವ ವೈರಸ್ಸನ್ನು ಹುಡುಕಲು ಅನೇಕ ತಂತ್ರಾಂಶ ಸಂಸ್ಥೆಗಳು ಹೆಣಗಾಡಿಬಿಟ್ಟವು. ಒಂದು ವಾರದೊಳಗೆ ಸಾವಿರಾರು ಕಂಪ್ಯೂಟರ್‌ಗಳು ಇರಾನಿನಲ್ಲಿ ಕೆಟ್ಟುಕುಳಿತವು. ಸರ್ಕಾರದ ಸ್ಥಿತಿ ಗಂಭೀರವಾಗಿಬಿಟ್ಟಿತು. ಎದುರಿಗೆ ಕಾಣದ ವ್ಯಕ್ತಿಯೊಂದಿಗೆ ಅವರು ಕಾದಾಡಬೇಕಿತ್ತು. ಅತ್ತ ಅಮೆರಿಕಾ ಕೂಡ ಇರಾನಿನ ಅಣ್ವಸ್ತ್ರಗಳನ್ನು ಗುರುತಿಸಲು, ಮಟ್ಟಹಾಕಲು ’ಸ್ಟಕ್ಸ್‌ನೆಟ್’ ವೈರಸ್‌ಗಳನ್ನು ಬಳಸಿತ್ತು. ಕುಳಿತು ಇರಾನು ಶಮೂನ್ ವೈರಸ್ಸುಗಳ ಮೂಲಕ ಸೌದಿ ಅರೇಬಿಯಾದ ಪೆಟ್ರೋಲ್ ಬಾವಿಯ ೩೦ಸಾವಿರ ಕಂಪ್ಯೂಟರ್‌ಗಳು ಕೆಡುವಂತೆ ಮಾಡಿತ್ತು! ಭಾರತದ ವಿದೇಶಾಂಗ ಸಚಿವಾಲಯದ ಮೇಲಾದ ಸೈಬರ್ ದಾಳಿಯೂ ಕಡಿಮೆಯದೇನಲ್ಲ. ಈ ದಾಳಿಯ ನಂತರ, ಇಂತಹ ದಾಳಿಗಳ ಕುರಿತು ನಿಗಾವಹಿಸಬೇಕಾದ ತಂಡದ ಮುಖ್ಯಸ್ಥ ಶಿವಶಂಕರ್ ಮೆನನ್ ತಮ್ಮ ಈಮೇಲ್ ಐಡಿಯನ್ನೆ ಬದಲಾಯಿಸಿದ್ದು ವಿಪರ್ಯಾಸ!
ಇಂದು ಅಮೆರಿಕಾ ಚೀನಾಗಳೆರಡೂ ಈ ಕದನದಲ್ಲಿ ಮುಂದೆ ನಿಂತಿವೆ. ಇಸ್ಲಾಮ್ ರಾಷ್ಟ್ರಗಳೇನು ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಹಳ್ಳಿಯ ಬಡ ಅನಕ್ಷರಸ್ಥರನ್ನೆ ಗುರಿಯಾಗಿಸಿಕೊಂಡು ಪಡೆ ಕಟ್ಟುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ಸುಶಿಕ್ಷಿತ ಇಂಜಿನಿಯರ್, ಡಾಕ್ಟರ್‌ಗಳ ತಲೆಕೆಡಿಸಿ, ಅವರಿಗೆ ತರಬೇತಿ ನೀಡುತ್ತಿವೆ. ಅವರನ್ನು ಪರೋಕ್ಷವಾದ ಯುದ್ಧಗಳಿಗೆ, ಸೈಬರ್ ಕದನಕ್ಕೆ ಅಣಿಗೊಳಿಸುತ್ತಿವೆ. ಚೀನಾ ಅಂಥವರ ಬೆನ್ನಿಗೆ ನಿಂತಿದೆ.
ಈ ನಿಟ್ಟಿನಲ್ಲಿ ಚೀನಾ ಅದಾಗಲೇ ಸಮರ್ಥ ಸ್ಥಾನ ದಕ್ಕಿಸಿಕೊಂಡಿದೆ. ’ಹುವೆ’ ಮೂಲಕ ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ತಲುಪಿಬಿಟ್ಟಿವೆ. ಅತ್ಯಂತ ಕಡಿಮೆ ಬೆಲೆಗೆ ಹುವೆಯ ವಸ್ತುಗಳನ್ನು ತಲುಪಿಸುವ ಚೀನ ಆ ಮೂಲಕ ತನ್ನ ಕಾರ್ಯಸಾಧನೆ ಮಾಡಿಕೊಳ್ಳುತ್ತಿದೆ. ಆರಂಭದಲ್ಲಿಈ ವಿಚಾರವಾಗಿ ಜಗತ್ತು ಮುಗುಮ್ಮಾಗಿಯೇ ಇತ್ತು. ಆದರೆ ಹುವೆಯ ಜನಕ ರೆನ್ ಜೆಂಗ್‌ಫೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನಿಕಟವರ್ತಿ ಎಂದು ಅರಿತೊಡನೆ ಜಾಗೃತವಾಯ್ತು. ಅಮೆರಿಕಾ ಚಡಪಡಿಸಿತು. ಹುವೆಗೆ ನಿಷೇಧ ಹೇರುವ ಚಿಂತನೆ ನಡೆಸಿತು. ಅಷ್ಟರಲ್ಲಿ ಆಸ್ಟ್ರೇಲಿಯಾ ಅದಕ್ಕೆ ನೀಷೇಧ ಹೇರಿ ಗುಲ್ಲೆಬ್ಬಿಸಿತು. ಇತ್ತ ಭಾರತೀಯ ಗೂಢಚಾರ ಸಂಸ್ಥೆಗಳು ಹುವೆಯ ಸಹವಾಸ ಬೇಡವೆಂದರೂ ಸರ್ಕಾರ ಶಾಂತವಾಗಿಯೇ ಇತ್ತು. ಕಪಿಲ್ ಸಿಬಲ್‌ರಂತೂ ’ಹೆದರಿಕೆಗೆ ಕಾರಣವಿಲ್ಲ’ ಎಂದು ಷರಾ ಹೊರಡಿಸಿಬಿಟ್ಟರು. ಕಡಿಮೆ ಬೆಲೆಗೆ ಸಿಗುವ ಹುವೆಯ ಸಾಧನಗಳನ್ನು ದೇಶದ ಸುರಕ್ಷತೆ ಬದಿಗೊತ್ತಿಯಾದರೂ ನಮ್ಮದಾಗಿಸಿಕೊಳ್ಳಬೇಕೆಂಬ ಚಿಂತನೆ ಅವರದು.
೨೦೧೨ರಲ್ಲಿ ಯುದ್ಧವಾದರೆ ನಮ್ಮ ಸ್ಥಿತಿ ಈ ಕಾರಣಕ್ಕಾಗಿಯೇ ಗಂಭೀರವೆನಿಸೋದು. ನಮ್ಮಲ್ಲಿ ಸೈಬರ್ ಯುದ್ಧಕ್ಕೆ ನಡೆಯುತ್ತಿರುವ ತಯಾರಿ ಬಲು ಕಡಿಮೆ. ’ಏನಿಲ್ಲವೆಂದರೂ ೫ಲಕ್ಷ ಐಟಿ ಉದ್ಯೋಗಿಗಳು ನಮಗೆ ಬೇಕು. ಸದ್ಯಕ್ಕೆ ನಮ್ಮ ಬಳಿ ಇರುವುದು ತೀರ ಕಡಿಮೆ’ ಎಂದು ಈ ವಿಭಾಗದ ಅಧಿಕಾರಿಯೊಬ್ಬರು ಅಲವತ್ತುಕೊಂಡಿದ್ದಾರೆ. ಸಾಫ್ಟ್‌ವೇರ್ ವಿಭಾಗದಲ್ಲಿ ನಾವು ಜಗತ್ತನ್ನು ಆಳುವವರು, ಅತಿ ಹೆಚ್ಚು ರಫ್ತು ಮಾಡುವವರೆಂದು ಬಡಾಯಿ ಕೊಚ್ಚುತ್ತೇವಲ್ಲ, ಆದರೆ ಇವ್ಯಾವುವೂ ಬುದ್ಧಿವಂತರು ಮಾಡುವ ಕೆಲಸವೆಂದು ಗಣಿಸಲ್ಪಡುವುದೆ ಇಲ್ಲ. ಹಾರ್ಡ್‌ವೇರ್‌ನಲ್ಲಿ ಮತ್ತು ಮೂಲಸಾಫ್ಟ್‌ವೇರ್‌ನಲ್ಲಿ ಪ್ರಗತಿಯಾಗದ ಹೊರತು ಬಲ್ಲವರು ಇದನ್ನು ಸಾಧನೆಯೆಂದು ಒಪ್ಪಲಾರರು.
ಈಗ ಕಾಲ ಕೂಡಿ ಬಂದಿದೆ. ನಮ್ಮ ತರುಣರು ತಮ್ಮ ಕ್ಷೇತ್ರವನ್ನು ಸರಿಯಾಗಿ ಆಯ್ದುಕೊಳ್ಳಬೇಕಿದೆ. ವಿದೇಶಗಳಲ್ಲಿ ಕೂಲಿ ಕೆಲಸ ಮಾಡುವ, ದೇಹ ರಫ್ತು ಮಾಡುವ ಉದ್ಯೋಗಗಳನ್ನು ಬುದ್ಧಿವಂತರು ಮಾಡಬೇಕಿಲ್ಲ. ನಮ್ಮ ಇಂಜಿನಿಯರಿಂಗ್ ಕಾಲೇಜುಗಳು ಮತ್ತೊಬ್ಬರ ಕಂಪ್ಯೂಟರನ್ನು ಇಣುಕಿ ನೋಡುವ ತರಲೆಗಳನ್ನು ಸೃಷ್ಟಿ ಮಾಡಿ, ಪಕ್ಕದ ರಾಷ್ಟ್ರಗಳಿಗೆ ರಗಳೆ ಮಾಡಬೇಕಿದೆ. ಇವುಗಳ ಬಗ್ಗೆ ಚಿಂತಿಸಿ ಹೊಸ ಹೊಸ ಪ್ರಯೋಗ ಮಾಡುವ ಬದಲು ಕಪಿಲ್ ಸಿಬಲ್‌ರು ರಾಬರ್ಟ್ ವಾದ್ರಾರ ಅಧಿಕೃತ ವಕ್ತಾರರಾಗಿ ತಿರುಗಾಡುತ್ತಿದ್ದಾರೆ! ರಕ್ಷಣಾ ಇಲಾಖೆಯವರಾದರೋ ಇವುಗಳ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಮನಮೋಹನ ಸಿಂಗರಂತೆ ಮೌನವಾಗಿಬಿಟ್ಟಿದೆ. ಇದರಿಂದಾಗಿಯೇ ಇರುವ ಗೂಢಚಾರ ವಿಭಾಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಾಗದೆ ಹೊರೆಯಾಗಿಬಿಟ್ಟಿವೆ. ಸೈಬರ್ ಕದನಕ್ಕೆಂದೇ ದೆಹಲಿಯಲ್ಲಿರುವ ಎರಡು ವಿಭಾಗಗಳು ಒಂದಕ್ಕೊಂದು ಮಾತನಾಡಿಕೊಂಡು ಕೆಲಸ ಮಾಡುವುದಿಲ್ಲ. ಇತ್ತೀಚೆಗೆ ಹೊರದೇಶದ ವೆಬ್‌ಸೈಟನ್ನು ಕೆಲವೇ ದಿನಗಳ ಅಂತರದಲ್ಲಿ ಈ ಎರಡೂ ಸಂಸ್ಥೆಗಳು ಇಣುಕಿ ನೋಡಿದ್ದವು. ಸುಮ್ಮನೆ ಸಮಯ ವ್ಯರ್ಥ. ಹಣವೂ ಪೋಲು. ಬೆಟ್ಟ ಅಗೆದು ಇಲಿ ಸಿಕ್ಕಷ್ಟೆ ಅವರಿಗೆ ಮಾಹಿತಿ ಸಿಕ್ಕಿದ್ದು. ಇವುಗಳಲ್ಲಿ ಒಂದು ತಂಡ ದೇಶ ವಿರೋಧಿ ತಾಣವೊಂದನ್ನು ಸೃಷ್ಟಿಸಿ ಅದಕ್ಕೆ ಬರುವ – ಹೋಗುವ ಜನರನ್ನು ಗಮನಿಸುತ್ತ ಕುಳಿತಿತ್ತು. ಇದರ ಅರಿವಿಲ್ಲದೆ ಮತ್ತೊಂದು ತಂಡ ಈ ತಾಣವನ್ನು ನಿಷೇಧಿಸಿ ಕತೆ ಮುಗಿಸಿಬಿಟ್ಟಿತ್ತು!
ಉಫ್! ನಾವು ಈ ದಿಕ್ಕಿನಲ್ಲಿ ಬೆಳೆಯಬೇಕಾದ್ದು ಸಾಕಷ್ಟಿದೆ. ಕಳ್ಳರನ್ನು ಎದುರಿಸಲು ನಾವು ಕಳ್ಳ ಮಾರ್ಗವನ್ನು ಬಳಸಬೇಕು. ಚೀನಾಕ್ಕೆ ಸನ್ ಜೂನ ಯುದ್ಧ ಕಲೆಯ ಮಾರ್ಗದರ್ಶನವಿದ್ದರೆ, ನಮಗೆ ಶ್ರೀಕೃಷ್ಣನ ಗೀತೆಯ ಆದರ್ಶವಿದೆಯಲ್ಲ.. ಈ ಬಾರಿ ನಾವು ತಯಾರಾಗಿರದಿದ್ದರೆ ಬರುವ ದಿನಗಳು ಬಲು ಕಷ್ಟ. ಏಕೆಂದರೆ ಇದು ೧೯೬೨ ಅಲ್ಲ, ೨೦೧೨. ನೆನಪಿರಲಿ!

 

Comments are closed.