ವಿಭಾಗಗಳು

ಸುದ್ದಿಪತ್ರ


 

ಜಪಾನಿ ಪ್ರಧಾನಿ ಅವರ ಪಾಲಿನ ಸ್ವರ್ಗಕ್ಕೆ ಬಂದಿದ್ದಾರೆ!!

 ಜಪಾನಿನ ಪಾಲಿಗೆ ಭಾರತ ಈಗಲೂ ಸ್ವರ್ಗವೇ! ಎರಡನೇ ಮಹಾಯುದ್ಧದ ವೇಳೆ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಸೈನ್ಯ ಕಟ್ಟಿದ್ದ ಸುಭಾಷ್ ಚಂದ್ರ ಬೋಸರಿಗೆ ಬಲು ದೊಡ್ಡ ಪ್ರಮಾಣದ ಸಹಾಯ ಮಾಡಿದ್ದು ಜಪಾನೀ ನಾಯಕರುಗಳೇ. ಇಂದೂ ಅಷ್ಟೇ. ಚೀನಾದ ವಿಸ್ತರಣಾವಾದಕ್ಕೆ ಸೆಡ್ಡು ಹೊಡೆದು ನಿಂತಿರುವ ಜಪಾನ್ ಭಾರತದ ಜೊತೆಗೇ ನಿಂತಿದೆ.

japan saraswati

ಖಿಚಿಜೋಜಿ. ಟೋಕಿಯೋದ ಹೊರವಲಯದಲ್ಲಿರುವ ನಗರ. ಈ ನಗರದ ಅರ್ಥವೇನು ಗೊತ್ತೇ? ಖಿಬೋ ದೇವಿಯ ದೇವಾಲಯ ಅಂತ. ಇಷ್ಟಕ್ಕೂ ಈ ಖಿಬೋ ದೇವಿ ನಮ್ಮ ಲಕ್ಷ್ಮೀ ದೇವಿಯ ಜಪಾನಿ ರೂಪ! ಹೀಗಾಗಿ ಖಿಚಿಜೋಜಿ ಅಂದರೆ ಲಕ್ಷ್ಮೀ ದೇವಿಯ ನಗರ ಅಂತ!

ಇದನ್ನು ಹೇಳಿದ್ದು ಅದೇಕೆ ಗೊತ್ತಾ? ಜಪಾನಿ ಪ್ರಧಾನಿ ಶಿಂಜೋ ಅಬೆ ಭಾರತದಲ್ಲಿದ್ದಾರೆ. ಅವರು ಕಾಶಿಯ ಗಂಗಾ ತಟದಲ್ಲಿ ಆರತಿ ಮಾಡುತ್ತ ನಿಂತಾಗ ಅವರು ಬೇರೆ ರಾಷ್ಟ್ರದಿಂದ ಬಂದವರೆಂದು ಯಾರಿಗೂ ಅನ್ನಿಸಲೇ ಇಲ್ಲ. ಯಾಕೆ ಗೊತ್ತಾ ಏಕೆಂದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಜಪಾನು ಭಾರತದಿಂದ ಅಖಂಡವಾಗಿ ಪ್ರಭಾವಿತಗೊಂಡಿದೆ. ಈ ಪ್ರಭಾವ ಅದೆಷ್ಟು ಆಳಕ್ಕಿಳಿದಿದೆಯೆಂದರೆ ಜಪಾನೀಯರು ಭಾರತವನ್ನು ‘ತೆಂಜೀಕು’ ಎಂದು ಕಾವ್ಯಾತ್ಮಕವಾಗಿ ಕರೆಯುತ್ತಾರೆ. ಹಾಗೆಂದರೆ ‘ಸ್ವರ್ಗ’ ಅಂತರ್ಥ!

ಭಾರತೀಯ ಸಂಸ್ಕೃತಿ ಭಾರತಕ್ಕಿಂತಲೂ ಹೆಚ್ಚು ಸುಭದ್ರವಾಗಿ ಜಪಾನಿನಲ್ಲಿ ತಳವೂರಿದೆ ಎಂದು ಹೇಳುವುದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಜಪಾನಿಯರ ಅತ್ಯಂತ ಪ್ರಿಯ ದೇವತೆ ಸರಸ್ವತಿ. ನಮ್ಮಲ್ಲಿ ವೀಣೆ ಹಿಡಿದಿರುವ ಸರಸ್ವತಿಯಂತೆಯೇ ಅಲ್ಲಿ ದೇವಿಯನ್ನು ಚಿತ್ರಿಸಲಾಗಿದೆ. ಆಕೆಯನ್ನು ಸರಸ್ವತಿ ನದಿಯೊಂದಿಗೆ ಸಮೀಕರಿಸಿ ಜಲದೇವತೆಯೆಂದೂ ಪೂಜಿಸುತ್ತಾರೆ. ಕ್ರಿ.ಶ. 722 ರಲ್ಲಿ ಟೊಡಾಯ್ಜಿ ದೇವಸ್ಥಾನದಲ್ಲಿ ಲಕ್ಷ್ಮೀ, ಸರಸ್ವತಿಯರನ್ನು ಒಟ್ಟೊಟ್ಟಿಗೆ ಪೂಜಿಸಿದ ಮೊದಲ ಉಲ್ಲೇಖ ದಕ್ಕುತ್ತದೆ. ಅಲ್ಲಿಂದಾಚೆಗೆ ಪ್ರತಿವರ್ಷವೂ ಇಲ್ಲಿ ಇವರಿಬ್ಬರ ಪೂಜೆ ವಿಜೃಂಭಣೆಯಿಂದ ನೆರವೇರುತ್ತಿದೆ, ಈಗಲೂ! 1836 ರಲ್ಲಿ ಸೈಟೋಸಾಚಿಯೇ ಬರೆದ ಕೃತಿಯಲ್ಲಿ ಟೋಕಿಯೋ ಭಾಗದ ಖ್ಯಾತ ದೇವತೆ ಸರಸ್ವತಿಯಾಗಿದ್ದಳೆಂದು ಉಲ್ಲೇಖಿಸಲಾಗಿದೆ. 1934 ರಲ್ಲಿ ಚುಬೆನ್ ಸಾನ್ಯೋ ಎಂಬ ಮಹಿಳೆ ತನ್ನನ್ನು ತಾನು ಸರಸ್ವತಿಯ ಅವತಾರವೆಂದು ಬಲವಾಗಿ ಭಾವಿಸಿದಳಲ್ಲದೇ ಸಂಸ್ಕೃತದಲ್ಲಿ ಕೃತಿರಚನೆ ಶುರು ಮಾಡಿದಳು. ಅಚ್ಚರಿ ಏನು ಗೊತ್ತೇ? ಆಗ ಆಕೆ ಸಂಸ್ಕೃತವನ್ನು ಕಲಿತೇ ಇರಲಿಲ್ಲ! ಆಕೆಯಿಂದಾಗಿಯೇ ಅಲ್ಲಿ ಸರಸ್ವತಿ ಪಂಥದ ಉಗಮವಾಗಿದ್ದು. ಸರಸ್ವತಿ ಪಂಥವೆಂದ ಮೇಲೆ ಅದು ಅಧ್ಯಯನ ಶೀಲತೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಡಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಲೆಕ್ಕಕ್ಕೇ ಸಿಗದಷ್ಟು ಪ್ರಾಚೀನ ಕಾಲದಿಂದ ಹಿಡಿದು ತೀರಾ 1934 ರವರೆಗೆ ಈ ನಾಡಿನ ಪರಂಪರೆ ಧಾರಾ ಪ್ರವಾಹದಂತೆ ಹೇಗೆ ಹರಿದು ಬಂದಿರಬಹುದು ಆಲೋಚಿಸಿ. ಯಾವುದರಲ್ಲಿ ಸತ್ತ್ವವಿದೆಯೋ ಅದು ಪುಂಡ-ಪೋಕರಿಗಳ ಆಕ್ರಮಣಕ್ಕೆ ಸಿಕ್ಕು ನಾಶವಾಗಿಬಿಡುವಂಥದ್ದಲ್ಲ ಎನ್ನುವುದಕ್ಕೆ ಇದಕ್ಕಿಂತ ಬಲವಾದ ಸಾಕ್ಷಿ ಏನು ಬೇಕು ಹೇಳಿ!

ಜಪಾನಿನುದ್ದಕ್ಕೂ ಸಂಸ್ಕೃತ ವ್ಯಾಪಕವಾಗಿ ಹಬ್ಬಿದೆ. ದಕ್ಷಿಣ ಭಾರತದಿಂದ ಹೊರಟ ಭಾರದ್ವಾಜ ಗೋತ್ರೀಯರಾದ ಬೋಧಿಸೇನರೇ ಇದಕ್ಕೆ ಕಾರಣ. ಬಾಲ್ಯದಿಂದಲೇ ಅಖಂಡ ವಿರಾಗಿಗಳಾಗಿದ್ದ ಬೋಧಿಸೇನರು ಬೌದ್ಧ ಸಾಹಿತ್ಯಗಳಿಂದ ಬಹುವಾಗಿ ಪ್ರಭಾವಿತರಾದರು. ಒಂದೆಡೆ ಮನೆಯಿಂದ ಬಂದ ಹಿಂದೂ ಸಂಸ್ಕೃತಿ. ಮತ್ತೊಂದೆಡೆ ಆಸ್ಥೆಯಿಂದ ಗಳಿಸಿಕೊಂಡ ಬೌದ್ಧ ಸಂಸ್ಕೃತಿಯ ಹದವಾದ ಮಿಶ್ರಣವಾಗಿದ್ದ. ಬೋಧಿಸೇನ ಗಣಿತ, ಜ್ಯೋತಿಷ್ಯಗಳಲ್ಲೆಲ್ಲಾ ಪಾಂಡಿತ್ಯ ಸಂಪಾದಿಸಿದ್ದರು. ಸಹಜವಾಗಿಯೇ ಅಂದಿನ ಎಲ್ಲ ಪಂಡಿತರಂತೆ ಅವರೂ ಚೀನಾದತ್ತ ಪಯಣ ಬೆಳೆಸಿದರು. ಇವರ ಪಾಂಡಿತ್ಯವನ್ನು ಅಲ್ಲಿ ಬಹುವಾಗಿ ಕೊಂಡಾಡಿ ಗೌರವಿಸಲಾಯಿತು. ಚೀನಾದ ಪರ್ವತವೊಂದರ ಮೇಲೆ ಅವರು ತಪೋನಿರತರಾಗಿದ್ದಾಗ ಜಪಾನೀ ಭಿಕ್ಷುಗಳು ಬಂದು ಭೇಟಿ ಮಾಡಿ ತಮ್ಮೂರಿಗೆ ಬರುವಂತೆ ಕೇಳಿಕೊಂಡರು. ಆಗ ಶುರುವಾಯ್ತು ಅವರ ಜಪಾನೀ ಪ್ರವಾಸ.

ಜಪಾನಿನ ರಾಜ ಅವರನ್ನು ಸ್ವಾಗತಿಸಿ ಅವರಿಗೆ ಪ್ರಧಾನ ಧಮರ್ಾಚಾರ್ಯ ಬಿರುದನ್ನಿತ್ತು ಗೌರವಿಸಿದ. ಆಚಾರ್ಯ ಬೋಧಿಸೇನರ ಪ್ರಯತ್ನದಿಂದಲೇ ಜಪಾನಿನಲ್ಲಿ ಸಂಸ್ಕೃತದ ಅಧ್ಯಯನ ಮೊದಲಿಗೆ ಶುರುವಾಗಿದ್ದು. ಆಗ ‘ನಾರಾ’ ಜಪಾನಿನ ರಾಜಧಾನಿಯಾಗಿತ್ತು. ಇಲ್ಲಿನ ಮಂದಿರಗಳು, ವಿಹಾರಗಳು ಬೋಧಿಸೇನರ ಆಗಮನದಿಂದ ಚುರುಕಾದವು. ಬೋಧಿಸೇನರೂ ತಮ್ಮ ಸಾಮಥ್ರ್ಯದಿಂದ ಭಿಕ್ಷುಗಳಿಗೆ ಅನೇಕ ಆಧ್ಯಾತ್ಮಿಕ ಅನುಭೂತಿಗಳನ್ನು ಕೊಡಿಸಿದರು. ಅಲ್ಲಿ ನಿರಂತರ ಪಂಡಿತೋತ್ತಮರ ಪ್ರವಚನಗಳು ನಡೆಯುತ್ತಿದ್ದವು. ಉಚ್ಚ ಕಂಠದ ಸಂಸ್ಕೃತದ ಮಂತ್ರಗಳು ಮಾರ್ದನಿಸುತ್ತಿದ್ದವು. ಈ ಕಾರಣಕ್ಕೇ ಆ ಕಾಲವನ್ನು ‘ನಾರಾಯುಗ’ ಎಂದೇ ಕರೆಯುತ್ತಾರೆ! ಅನುಮಾನವೇ ಇಲ್ಲ. ಅದು ಭಾರತದಿಂದ ಪ್ರಭಾವಿತವಾಗಿದ್ದ ಜಪಾನೀ ಯುಗ!

ಜನ ಸಂಸ್ಕೃತವನ್ನು ಮಾತನಾಡಬಲ್ಲವರು, ಹೇಳಿಕೊಟ್ಟ ಮಂತ್ರಗಳನ್ನು ಉಚ್ಚರಿಸ ಬಲ್ಲವರಾಗಿದ್ದುದು ನಿಜ. ಆದರೆ ಬರೆದು- ಓದುವುದು ಇನ್ನೂ ಕಠಿಣವಾಗಿತ್ತು. ಆಚಾರ್ಯ ಕೋಬೆದಾಯಿಶಿ ಈ ಸಮಸ್ಯೆಯನ್ನು ಪರಿಹರಿಸಿದರು. ಚೀನಿ ಲಿಪಿ ಮತ್ತು ಭಾಷೆ ವ್ಯಾಪಕವಾಗಿದ್ದ ಜಪಾನಿನಲ್ಲಿ ಅವರು ಸಂಸ್ಕೃತದ ಲಿಪಿ ಪರಿಚಯಿಸಿದರು. ಚೀನಿ ಮತ್ತು ದೇವನಾಗರಿ ಎರಡನ್ನು ಬೆರೆಸಿದ ಹೊಸ ಲಿಪಿಯ ಆವಿಷ್ಕಾರವಾಯಿತು. ಜಪಾನಿ ಭಾಷೆಗೆ ಇದು ಹೊಸ ಶಕ್ತಿ ತುಂಬಿತು. ಅವರ ಭಾಷೆಯ ವರ್ಣಮಾಲೆ ಸಂಸ್ಕೃತಕ್ಕೆ ಬಲು ಹತ್ತಿರ. ಅ, ಇ, ಉ, ಎ, ಈ ಸ್ವರಗಳು ಅವರಲ್ಲೂ ಬಳಕೆಯಾಗುತ್ತವೆ. ಕ, ಕಿ, ಕು ಗಳು ನಮ್ಮ ವ್ಯಂಜನಗಳಂತೆ ಉಚ್ಚರಿಸಲ್ಪಡುತ್ತವೆ. ಕಠಿಣವಾದ ಚೀನಿ ಚಿತ್ರ ಲಿಪಿಗಳಿಗಿಂತ, ದೇವನಾಗರಿಯಿಂದ ಪ್ರಭಾವಿತವಾದ ಈ ಲಿಪಿ ಸುಲಭವಾಗಿತ್ತು. ಹೀಗಾಗಿ ರಾಜ ಪರಿವಾರ ಮತ್ತು ಪಂಡಿತರ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಈಗ ಸಾರ್ವತ್ರಿಕವಾಯ್ತು. ಎಲ್ಲರೂ ಓದಲು-ಬರೆಯಲು ಕಲಿತರು. ಅಷ್ಟೇ ಅಲ್ಲ. ಸಂಸ್ಕೃತದ ಸಾಹಿತ್ಯವನ್ನು ಮೂಲದಲ್ಲಿಯೇ ಓದಿ, ಅಥರ್ೈಸಿಕೊಳ್ಳಲು ಶಕ್ಯರಾದರು!

ಈಗಲೂ ಜಪಾನಿನ ಗೋರಿಗಳ ಬಳಿ ನಿಂತರೆ ಈಗಿನ ಜಪಾನಿಯರು ಓದಿ ಅಥರ್ೈಸಿಕೊಳ್ಳಲಾಗದ ಒಂದಷ್ಟು ಅಕ್ಷರಗಳನ್ನು ಕೆತ್ತಿರುತ್ತಾರೆ. ಇವೆಲ್ಲ ಸಂಸ್ಕೃತದಿಂದ ಪ್ರಭಾವಿತಗೊಂಡ ‘ಸಿದ್ಧ’ ಲಿಪಿಯ ಅಕ್ಷರಗಳು! ಇಂದಿಗೂ ಬುದ್ಧ ಮಂದಿರಗಳಲ್ಲಿ ಬೀಜಾಕ್ಷರಗಳನ್ನು ಸಂಸ್ಕೃತದಲ್ಲಿಯೇ ಬರೆದಿರುವುದು ಕಂಡು ಬರುತ್ತದೆ. ಈ ಅಕ್ಷರಗಳನ್ನು ದೈವೀ ಶಕ್ತಿಯುಳ್ಳವೆಂದು ಭಾವಿಸಿ ಮಂದಿರಗಳಿಗೆ ಹೋದಾಗ ಆ ಅಕ್ಷರಗಳ ಸೀಲು ಒತ್ತಿಸಿಕೊಂಡು ಬರುವ ಭಕ್ತಾದಿಗಳಿದ್ದಾರೆ. ಹೀಗೆ ಭಿನ್ನ ಭಿನ್ನ ಮಂದಿರಗಳಿಂದ ಭಿನ್ನ ಭಿನ್ನ ಬೀಜಾಕ್ಷರಗಳ ಸೀಲು ಒತ್ತಿಸಿಕೊಂಡ ಪುಸ್ತಕವನ್ನು (ಶಿಂಜಿನ್) ಜಪಾನಿಗರು ಅಕ್ಷರಶಃ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಜಪಾನಿನ ಕೋಯಸಾನ್ ಮಂದಿರದಲ್ಲಿ ಈಗಲೂ ಸಂಸ್ಕೃತ ಕಲಿಸುವ ವ್ಯವಸ್ಥೆ ಇದೆ. ಭಾರತದ ಬಾಂಧವ್ಯದ ಆಳವನ್ನು ಅರಿಯಲು ಬಹುಶಃ ಈ ಒಂದು ಎಳೆ ಹಿಡಿದು ಹೋದರೆ ಸಾಕೆನಿಸುತ್ತದೆ.

ಜಪಾನು ಮಂದಿರಗಳ ನಗರ. ಅವರ ಪೂಜಾ ಪದ್ಧತಿ, ಸಂಪ್ರದಾಯಗಳೆಲ್ಲ ಬಲುವಾಗಿ ಹಿಂದೂ ಸಂಸ್ಕೃತಿಯನ್ನು ಹೋಲುವಂಥವೇ. ಅವರು ಮಂದಿರಗಳಿಗೆ ಹೋದರೆ ಗಂಟೆ ಬಡಿಯುತ್ತಾರೆ, ನಮ್ಮಂತೆ ನಮಸ್ಕರಿಸುತ್ತಾರೆ. ಅರ್ಚಕರಂತೂ ಅನೇಕ ಸಂಸ್ಕೃತ ಮಂತ್ರಗಳನ್ನು ಜಪಿಸುತ್ತಾ ಪೂಜೆಗೈಯ್ಯುತ್ತಾರೆ. ಮುದ್ರೆಗಳನ್ನು ಬಳಸುತ್ತಾರೆ. ಕೊನೆಗೆ ಹೋಮಗಳನ್ನೂ ಮಾಡುತ್ತಾರೆ. ಹೋಮವನ್ನು ಇವರು ಗೋಮ ಎನ್ನುತ್ತಾರೆ. ಜಪಾನಿನ 1200ಕ್ಕೂ ಹೆಚ್ಚು ದೇವಾಲಯಗಳಲ್ಲಿ ಸಂಸ್ಕೃತ ಮಂತ್ರ ಸಹಿತವಾದ ಆಚರಣೆಗಳು ಈಗಲೂ ನಡೆಯುತ್ತವೆ.

homa in japan

ಟೋಕಿಯೋದಲ್ಲಿರುವ ಇಂದ್ರನ ಮಂದಿರ ಬಲು ವಿಶಿಷ್ಟವಾಗಿದ್ದು ಪ್ರತಿ ವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ವರುಣನ ಪೂಜೆಯೂ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತದೆ. ಹೊಸದಾಗಿ ಮದುವೆಯಾದವರು ಕಾಮದೇವನ ಪೂಜೆ ಮಾಡುವುದೂ ಇಲ್ಲಿ ಸಂಪ್ರದಾಯಬದ್ಧ. ಆಶ್ಚರ್ಯವೆಂಬಂತೆ ಇಲ್ಲಿ ಯಮನಿಗೂ ಅನೇಕ ದೇಗುಲಗಳಿವೆ.

ಟೋಕಿಯೋದ ಮಾತ್ಸುಚಿಯಾಮ್ ಶೋಟೆನ್ ಮಂದಿರ ಗಣೇಶನಿಗೆ ಸಮಪರ್ಿತ. ಇದು ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲ. ವಿದ್ಯಾಥರ್ಿಗಳು, ವ್ಯಾಪಾರಿಗಳೆಲ್ಲ ತಮ್ಮ ಅಭಿವೃದ್ಧಿಯ ಪ್ರಾರ್ಥನೆಗಾಗಿ ಈ ಮಂದಿರಕ್ಕೆ ಈಗಲೂ ಭೇಟಿ ನೀಡುತ್ತಾರೆ. ಕೆಲವು ಜಪಾನೀ ಪಂಡಿತರಂತೂ ಸಾವಿರಾರು ವರ್ಷಗಳಿಂದ ಬಿಟ್ಟೂ ಬಿಡದೇ ಗಣೇಶನ ಪೂಜೆ ನಡೆಯುತ್ತಿರುವ ಜಗತ್ತಿನ ಏಕೈಕ ದೇಗುಲವಿದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮಂದಿರಗಳ ವಿಚಾರಕ್ಕೆ ಬರುವುದಾದರೆ ಜಪಾನಿನ ಪ್ರತಿಯೊಂದು ಮನೆಯೂ ಮಂದಿರವೆ. ಪ್ರತಿ ಮನೆಯಲ್ಲೂ ಏಳು ಮಂಗಳಕಾರಿ ದೇವತೆಗಳಿರುತ್ತಾರೆ. ಕೆಲವೆಡೆ ಮೂತರ್ಿಗಳಿರುತ್ತವೆ. ಚಿತ್ರಗಳಂತೂ ಖಾತ್ರಿಯೇ. ದಂಡಧಾರಿ ಮಹಾಕಾಲನಾಗಿ ದಾಯಿಕೇತು, ಬಿಶಾಮನ್ ಎಂಬ ಹೆಸರಿನಲ್ಲಿ ಕುಬೇರನ ರೂಪ, ಬೆಂತೇನ್ಳಾಗಿ ವೀಣಾಧಾರಿ ಸರಸ್ವತಿ, ಹಾಗೆಯೇ ಶಿವ ಪಾರ್ವತಿಯರ ಪ್ರಿಯ ಸುತ ಗಣೇಶ ಕಾಂಗಿತಿನ್ ಶೋಟೇನ್ನಾಗಿ ಮನೆಮನೆಯನ್ನು ಅಲಂಕರಿಸಿದ್ದಾರೆ.

ಫೂದೊಮ್ಯೂ ಎಂಬ ಹೆಸರಿನ ಪರಂಪರೆಯೇ ಇದೆ. ಇದು ಅಚಲನಾಥ ಶಿವನ ಪರಂಪರೆ. ಜ್ವಾಲೆಗಳಿಂದ ಸುತ್ತುವರಿದ ಕೈಯ್ಯಲ್ಲಿ ಖಡ್ಗ ಮತ್ತು ಪಾಶವನ್ನು ಹಿಡಿದ ಶಿವ ಪ್ರಳಯಕ್ಕೆ ಸಿದ್ಧನಾಗಿರುವಂತೆಯೇ ಕಂಡು ಬರುತ್ತದೆ. ಈತನಿಗೂ ಮನೆ-ಮನೆಯಲ್ಲಿ ಪೂಜೆ ಸಲ್ಲುತ್ತದೆ.

ಏಳನೇ ಶತಮಾನದಲ್ಲಿ ಶತ್ರುಗಳನ್ನೆಲ್ಲ ಮೆಟ್ಟಿ ನಿಂತು ಜಪಾನ್ ಸಾಮ್ರಾಜ್ಯವನ್ನು ಕಟ್ಟಿದ ಶೋಟೋಕೋ ಭಾರತದ ಕುರಿತಂತೆ ಅಪಾರ ಗೌರವವುಳ್ಳವನಾಗಿದ್ದ. ಆತ ರಚಿಸಿದ ಸಂವಿಧಾನದ ಮೂರನೇ ಪರಿಚ್ಛೇದದಲ್ಲಿ ಆತ ಸ್ಪಷ್ಟವಾಗಿ ಹೇಳಿದ್ದ; ಈ ಸಂವಿಧಾನ ತ್ರಿರತ್ನಗಳ ಮೇಲೆ ಅವಲಂಬಿತವಾಗಿವೆ. ಬುದ್ಧ, ಧರ್ಮ ಮತ್ತು ಸಂಘ!

ಹೌದು. ಬುದ್ಧನ ಚಿಂತನೆಗಳು ಜಪಾನಿನ ಆಳಕ್ಕೆ ಹೊಕ್ಕಿವೆ. ಜೆನ್ ಪಂಥ ಇಲ್ಲಿನ ಜನರನ್ನು ಬಲುವಾಗಿ ಪ್ರಭಾವಿಸಿದೆ. ಯಾವ ಬೋಧಿಧರ್ಮ ಚೀನಾವನ್ನು ಬಲುವಾಗಿ ಪ್ರಭಾವಿಸಿದ್ದನೋ ಅದೇ ಬೋಧಿಧರ್ಮ ಜಪಾನಿನ ಮೇಲೂ ತನ್ನ ಕಾಂತಿಯನ್ನು ಬೀರಿದ್ದಾನೆ. ಇಲ್ಲಿ ಅವನನ್ನು ಬೋದಾಯ್ ದರುಮ ಎಂದು ಕರೆದು ಗೌರವಿಸುತ್ತಾರೆ. ಜೆನ್ ನೇರವಾಗಿ ಮನುಷ್ಯನನ್ನು ಮುಟ್ಟಿ ತಟ್ಟುವಂತಹುದು. ಜೀವನವನ್ನು ಕರಾರುವಾಕ್ಕಾಗಿ ರೂಪಿಸಿಕೊಳ್ಳಲು ಪ್ರೇರೇಪಿಸುವಂಥದ್ದು. ಜಪಾನಿಗರು ಇಂದು ತಮ್ಮ ಬದುಕನ್ನು ಕಟ್ಟುನಿಟ್ಟಾಗಿ, ಎಲ್ಲದರಲ್ಲು ಸಮರ್ಪಕವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿರೋದು ಈ ಬಗೆಯ ಧ್ಯಾನ ಕಲೆಯಿಂದಲೇ.

ಅವರು ಬಲು ಬುದ್ಧಿವಂತರು. ಹಿಂದೂ ಧರ್ಮದಿಂದ ಬದುಕಿನ ಸಾರವನ್ನು ಹೀರಿಕೊಳ್ಳುವುದನ್ನು ಕಲಿತರು; ಬುದ್ಧನ ಮಾರ್ಗದಿಂದ ಸಮಗ್ರ ಜೀವನ ನಡೆಸುವುದನ್ನು ಅರಿತರು. ಒಟ್ಟಾರೆ ಅವರ ಬದುಕು ಪರಿಪೂರ್ಣವಾಯ್ತು. ಆಳಕ್ಕೂ ಇಳಿದರು, ಎತ್ತರಕ್ಕೂ ಏರಿದರು. ನಾವು, ಭಾರತೀಯರು ಇವೆಲ್ಲ ಸಿದ್ಧಾಂತಗಳು, ಚಿಂತನೆಗಳನ್ನು ಜಗತ್ತಿಗೆ ಧಾರೆ ಎರೆದವರು. ಇಂದು ಕಣ ್ಣರಿಡುತ್ತಾ ಬೆಳಕು ಕಾಣದೇ ತೊಳಲಾಡುತ್ತಿದ್ದೇವೆ.

ಹಾಗಂತ ಜಪಾನ್ ಭಾರತವನ್ನು ಮರೆತಿಲ್ಲ. ಇಂದಿಗೂ ಅಲ್ಲಿ ಬೋಧಿಸೇನ ಭಾರದ್ವಾಜರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಪ್ರತೀವರ್ಷ ಲಕ್ಷಾಂತರ ಜನ ಜಪಾನಿಗರು ಭಾರತಕ್ಕೆ ಬಂದು ಇಲ್ಲಿನ ಆಧ್ಯಾತ್ಮಿಕ ಆನಂದವನ್ನು ಅನುಭವಿಸಿ ಹೋಗುತ್ತಾರೆ. ಸಾವಿರಾರು ಜನ ಈಶಾನ್ಯ ರಾಜ್ಯ ಅರುಣಾಚಲದ ಜೀರೋ ಜಿಲ್ಲೆಗೆ ಭೇಟಿ ಕೊಟ್ಟು ತಮ್ಮ ಪೂರ್ವಜರನ್ನು ಕಂಡು ಧನ್ಯರಾಗುತ್ತಾರೆ. ಹೌದು. ಅರುಣಾಚಲದಲ್ಲಿರುವ ಅಪಾತಾನಿ ಎಂಬ ಬುಡಕಟ್ಟು ಜನಾಂಗದವರು ಜಪಾನಿಗರನ್ನು ಹೋಲುತ್ತಾರೆ. ಅವರ ಆಕಾರ, ಬಣ್ಣ, ಸಂಸ್ಕೃತಿ, ಪೂಜಾ ಪದ್ಧತಿ ಎಲ್ಲವೂ ಪ್ರಾಚೀನ ಜಪಾನಿಗರದ್ದೇ.

ಈ ಎಲ್ಲ ಕಾರಣಗಳಿಂದಾಗಿ ಜಪಾನಿನ ಪಾಲಿಗೆ ಭಾರತ ಈಗಲೂ ಸ್ವರ್ಗವೇ! ಎರಡನೇ ಮಹಾಯುದ್ಧದ ವೇಳೆ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಸೈನ್ಯ ಕಟ್ಟಿದ್ದ ಸುಭಾಷ್ ಚಂದ್ರ ಬೋಸರಿಗೆ ಬಲು ದೊಡ್ಡ ಪ್ರಮಾಣದ ಸಹಾಯ ಮಾಡಿದ್ದು ಜಪಾನೀ ನಾಯಕರುಗಳೇ. ಇಂದೂ ಅಷ್ಟೇ. ಚೀನಾದ ವಿಸ್ತರಣಾವಾದಕ್ಕೆ ಸೆಡ್ಡು ಹೊಡೆದು ನಿಂತಿರುವ ಜಪಾನ್ ಭಾರತದ ಜೊತೆಗೇ ನಿಂತಿದೆ.

ಒಂದಂತೂ ಸತ್ಯ. ಜಪಾನ್ ಮೇಲೆ ಹಿಂದೂ ಸಂಸ್ಕೃತಿಯ ಪ್ರಭಾವವಿದೆ, ಬುದ್ಧನ ಚಿಂತನೆಗಳ ಪ್ರಭಾವವಿದೆ. ಜಪಾನಿನಿಂದ ಭಾರತವನ್ನು ತೆಗೆದು ಬಿಟ್ಟರೆ ಅದು ಹೆಚ್ಚು ಕಡಿಮೆ ಶೂನ್ಯಕ್ಕೆ ಹತ್ತಿರ. ಹಾಗೆ ನೋಡಿದರೆ ಜಪಾನು ನಮ್ಮ ಮೇಲೆ ಬೀರಿದ ಪ್ರಭಾವ ಕಡಿಮೆಯೇ! ಆದರೆ ಎರಡನೇ ಮಹಾಯುದ್ಧದ ದಾರುಣ ಸೋಲಿನ ನಂತರ ಜಪಾನು ನಿಮರ್ಾಣಗೊಂಡ ರೀತಿ ಇದೆಯಲ್ಲ ಅದು ಇಡಿಯ ಜಗತ್ತನ್ನೇ ಅಚ್ಚರಿಗೆ ತಳ್ಳಿರುವಂಥದ್ದು. ಹಿರೋಷಿಮಾ ಘಟನೆಯಾದ ಐದೇ ದಶಕಗಳಲ್ಲಿ ಜಪಾನು ಸಾಧಿಸಿರುವ ಪ್ರಗತಿ, ತುಳಿದಿರುವ ಬದಲಾವಣೆಯ ಹಾದಿ ಬೋಧಪ್ರದವಾದುದು. ಅವರು ಕೈಗೊಂಡ ಒಂದೇ ಒಂದು ಶ್ರೇಷ್ಠ ನಿಧರ್ಾರವೆಂದರೆ ಚೀನಾದ ಆಕ್ರಮಕ ಕಮ್ಯುನಿಸ್ಟ್ ಹಾದಿ ಬಿಟ್ಟು, ಭಾರತದ ಭಕ್ತಿಯ, ಕರ್ಮ ಯೋಗದ ಚಿಂತನೆಗಳನ್ನು ಅನುಸರಿಸಿದ್ದು. ನಾವೀಗ ಅದೇ ದಾರಿಯನ್ನು ಸವೆಸಬೇಕಿದೆ.

ಕೆಲವೊಮ್ಮೆ ಶಿಷ್ಯನಿಂದ ಗುರು ಪಾಠ ಕಲಿತರೆ ತಪ್ಪೇನೂ ಇಲ್ಲ. ಅಲ್ಲವೇ?

 

Comments are closed.