ವಿಭಾಗಗಳು

ಸುದ್ದಿಪತ್ರ


 

ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ

ಮರೆವಿನ ವ್ಯಾಪ್ತಿ ಅದೆಷ್ಟಿದೆಯಲ್ಲ! ರಾಮದೇವ್ ಬಾಬಾ ಮತ್ತು ಅವರ ಭಕ್ತ ಸಮೂಹಕ್ಕೆ ದೆಹಲಿಯಲ್ಲಿ ಲಾಠಿ ಏಟು ಬಿದ್ದು ಜೂನ್‌ಗೆ ಬರೋಬ್ಬರಿ ಒಂದು ವರ್ಷ. ಅದಕ್ಕೂ ತಿಂಗಳ ಮುನ್ನ ಇಡಿಯ ದೇಶ ಜುಬ್ಬ- ಪೈಜಾಮಾದ ವೃದ್ಧನೊಬ್ಬನ ಹಿಂದೆ ನಡೆದುಹೊರಟಿತ್ತು. ಜೆಪಿ ಆಂದೋಲನದ ನಂತರ ದೇಶ ಕಂಡ ಮಹತ್ವದ ಹೋರಾಟ ಎಂದೆಲ್ಲ ಹೇಳಿಸಿಕೊಂಡ ಅಣ್ಣಾ ಹೋರಾಟ ಆ ಹೋರಾಟದ ಸ್ಥಿತಿ-ಗತಿಗಳೇನು? ನಾವೆಲ್ಲ ಮರೆತೇಬಿಟ್ಟಿದ್ದೇವೆ.
ಸ್ವಲ್ಪ ಫ್ಲ್ಯಾಷ್ ಬ್ಯಾಕು. ಅಣ್ಣಾ ಹಜಾರೆ ಕಳೆದ ಕೆಲವಾರು ದಶಕಗಳಿಂದ ಭ್ರಷ್ಟರ ವಿರುದ್ಧ ತೊಡೆ ತಟ್ಟುತ್ತಲೇಬಂದವರು. ರಾಮದೇವ್ ಬಾಬಾ ರಾಜೀವ ದೀಕ್ಷಿತರ ಭಾಷಣಗಳಿಂದ ಪ್ರಭಾವಿತರಾಗಿ ಸ್ವದೇಶೀ ಆಂದೋಲನದ ಮೂಲಕ ಭಾರತ್ ಸ್ವಾಭಿಮಾನ್‌ದತ್ತ ಹೊರಳಿದವರು. ೨೦೧೧ರ ಮಾಯೆಯೇನೋ? ಮಾಹಿತಿ ಹಕ್ಕಿನ ಹೋರಾಟಗಳನ್ನು ನಡೆಸಿಕೊಂಡುಬಂದಿದ್ದ ಕೇಜ್ರಿವಾಲ್, ಪೊಲೀಸ್ ಅಧಿಕಾರಿ ಕಿರಣ್ ಬೇಡಿ ತಾವು ಕೈಗೆತ್ತಿಕೊಂಡ ಹೋರಾಟಕ್ಕೆ ಅಣ್ಣಾರನ್ನು ಮುಂದಿರಿಸಿಕೊಂಡರು. ಆಸ್ಥಾ- ಸಂಸ್ಕಾರ್‌ಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರಿಗಳ ನೀರಿಳಿಸುತ್ತಿದ್ದ ರಾಮದೇವ್ ಬಾಬಾರ ಬೆಂಬಲವನ್ನು ಪಡಕೊಂಡು ಬೀಗಿದರು. ’ಇಂಡಿಯಾ ಅಗೇನ್‌ಸ್ಟ್ ಕರಪ್ಷನ್’ ಕೆಲಸ ಶುರು ಮಾಡಿತು. ಭ್ರಷ್ಟಾಚಾರಿಗಳ ಸಮೂಲ ನಾಶದ ಚರ್ಚೆ ಆರಂಭವಾಯಿತು.
ಅಂದುಕೊಂಡಂತೆ ನಡೆದಿದ್ದರೆ ಸಮಸ್ಯೆ ಇರಲಿಲ್ಲ. ದೆಹಲಿಯಲ್ಲಿ ಜನಲೋಕ್‌ಪಾಲ್ ಬಿಲ್‌ಗೆ ಆಗ್ರಹಿಸಿ ನಡೆದ ರ್‍ಯಾಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಸೇರಿದ್ದರು. ಹಾಗೆ ಸೇರಿದವರಲ್ಲಿ ಬಹುಪಾಲು ಬಾಬಾರ ಯೋಗ ಅನುಯಾಯಿಗಳೆಂಬುದರಲ್ಲಿ ಅನುಮಾನ ಯಾರಿಗೂ ಇರಲಿಲ್ಲ. ಟೀವಿಗಳಲ್ಲಿ ಬಿತ್ತರಗೊಂಡ ಚಿತ್ರಗಳಲ್ಲಿ ರಾಮ್‌ದೇವ್‌ರ ಫೋಟೋ ಹಿಡಿದು ನಿಂತ ಜನರೇ ಇದಕ್ಕೆ ಸಾಕ್ಷಿಯಾಗಿದ್ದರು. ಇದನ್ನು ಕಂಡು ’ಸೆಕ್ಯುಲರ್’ ಮದಿರೆ ಕುಡಿದ ಹಲವರಿಗೆ ಮತ್ತೇರಿಬಿಟ್ಟಿತು. ಕೇಸರಿ ಕಂಡಷ್ಟೂ ಆಂದೋಲನ ಹಳ್ಳಹಿಡಿಯುತ್ತದೆಂದು ಅಣ್ಣಾ ಟೀಮಿಗೆ ಅಫೀಮು ತಿನ್ನಿಸಿದರು. ಅವತ್ತೇ ಆಗಬಾರದ್ದು ಆಗಿಹೋಯಿತು. ರಾಮದೇವ್ ಬಾಬಾ ವೇದಿಕೆಯ ಬಳಿ ಬಂದಾಗ ಅವರನ್ನು ವೇದಿಕೆಯೇರದಂತೆ ತಡೆಯುವ ಯತ್ನ ಮಾಡಲಾಯ್ತು. ಭಾರತ ಮಾತೆಯ ಪಟವನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಲಾಯ್ತು. ’ವಂದೇ ಮಾತರಂ’ ಘೋಷಣೆ ಪ್ರಯತ್ನಪೂರ್ವಕವಾಗಿ ನಿಲ್ಲಿಸಲಾಯಿತು. ಕೊನೆಗೆ ಸೋನಿಯಾಗಾಂಧಿಯನ್ನು ಕರೆಸಿ ಅಣ್ಣಾ ಹಜಾರೆಯವರಿಗೆ ಹಾಲು ಕುಡಿಸುವ ಪ್ರಯಾಸವೂ ಆರಂಭವಾಯ್ತು. ರಾಮದೇವ್ ಬಾಬಾ ಕಡಿಮೆ ಭಂಡರಲ್ಲ. ಯಾರ ಮುಲಾಜೂ ಇಲ್ಲದೆ ವೇದಿಕೆ ಏರಿದರು. ಅಣ್ಣಾ ಹಜಾರೆಯವರನ್ನು ತಬ್ಬಿಕೊಂಡರು. ಹಾಲು ಕುಡಿಸಿದರು. ಬಗೆಬಗೆಯ ಘೋಷಣೆಗಳನ್ನು ಹಾಕಿಸಿ ತೆರಳಿದರು.
ಆದರೆ ॒ಹಾವು ಬಾಲ ತುಳಿಸಿಕೊಂಡಿತ್ತು. ಈಗ ಭುಸುಗುಟ್ಟುವುದಷ್ಟೇ ಬಾಕಿ. ಬಾಬಾ ರಾಮದೇವ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿಬಿಟ್ಟರು. ಕಪ್ಪುಹಣ ಮರಳಿ ತರುವ ಹೋರಾಟಕ್ಕೆ ತಮ್ಮ ಅನುಯಾಯಿಗಳನ್ನು ಎಳೆದುತಂದರು. ದೆಹಲಿಯ ರಾಮಲೀಲಾ ಮೈದಾನ ತುಂಬಿ ತುಳುಕಾಡಿತು. ಅದಕ್ಕೂ ಮುನ್ನ ಕಪಿಲ್ ಸಿಬಲ್ ನಡೆಸಿದ ಸಂಧಾನ ಬಾಬಾಜಿಗೆ ಕೋಡು ಮೂಡಿಸಿತ್ತು. ಸರ್ಕಾರ ತನ್ನೆದುರು ಸಾಷ್ಟಾಂಗವೆರಗಿಬಿಟ್ಟಿದೆಯೆಂಬ ಭ್ರಮೆಯಲ್ಲಿ ತೇಲಾಡಿದರು ಬಾಬಾ.
ಎಡವಟ್ಟು ಅಲ್ಲಿಯೇ ಆಗಿದ್ದು. ಅಡ್ಡ ನಿಂತವರನ್ನು ಮುಗಿಸಿಯೇಬಿಡುವ ಚಾಳಿ ಕಾಂಗ್ರೆಸ್ಸಿನ ಸಂಸ್ಕೃತಿಯಲ್ಲೇ ಅಡಗಿರುವಂಥದ್ದು. ನೆಹರೂ, ಸುಭಾಷ್ ಚಂದ್ರ ಬೋಸರ ಸಾವಿನ ಗುಟ್ಟು ರಟ್ಟಾಗಲು ಬಿಡಲೇ ಇಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ತಿರಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಇನ್ನು ಸಣ್ಣಪುಟ್ಟ ಅದೆಷ್ಟು ಮಂದಿ ಅದರ ಅಧಿಕಾರ ದಾಹಕ್ಕೆ ಬಲಿಯಾಗಿರುವರೋ ದೇವರೇ ಬಲ್ಲ. ಇಂತಹ ಕಾಂಗ್ರೆಸ್ಸಿಗೆ ಲಂಗೋಟಿಯುಡುವ ಫಕೀರನೊಬ್ಬ ಸವಾಲೇ ಆಗಿರಲಿಲ್ಲ. ಬಾಬಾಜೀಯನ್ನು ಬಡಿದು ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನೆ ಮಟ್ಟ ಹಾಕಿಬಿಡಬೇಕು ಅನ್ನುವ ಹಟಕ್ಕೆ ಬಿದ್ದಿತ್ತು ಸರ್ಕಾರ. ಕಪಿಲ್ ಸಿಬಲ್ ಒಪ್ಪಂದದ ಪತ್ರವನ್ನು ಬಾಬಾರ ಬಳಿಯೇ ಬರೆಸಿಕೊಂಡು ರಾಮಲೀಲಾ ಮೈದಾನದಲ್ಲಿ ಎಲ್ಲರೆದುರು ಅವರ ಮಾನ ಹರಾಜಿಗಿಟ್ಟುಬಿಟ್ಟ. ದಿನ ಬೆಳಗಾಗುವುದರಲ್ಲಿ ಮಾಧ್ಯಮಗಳು ಕಾಂಗ್ರೆಸ್ಸಿನ ಸೊಂಟವೇರಿ ಕುಳಿತುಬಿಟ್ಟಿದ್ದವು.
ಯೋಗಗುರು ಮುಗುಮ್ಮಾಗಿಬಿಟ್ಟರು. ಸರ್ಕಾರದ ಎಲ್ಲ ಇಲಾಖೆಗಳು ಅವರ ಹಿಂದೆ ಬಿದ್ದವು. ಪ್ರತಿಕ್ರಿಯಾತ್ಮಕ ರಾಜಕಾರಣ ಶುರುವಾಯ್ತು. ಭ್ರಷ್ಟಚಾರ ನಿರ್ಮೂಲನೆಯ ಕ್ರೆಡಿಟ್ಟು ಬಾಬಾಗೆ ಸೇರಿಬಿಡುತ್ತದಲ್ಲ ಎಂದು ಕಸಿವಿಸಿಪಡುತ್ತಿದ್ದ ಅಣ್ಣಾ ಟೀಮಿಗೆ (ಅಣ್ಣಾ ಹಜಾರೆ ಬಿಟ್ಟು) ಈಗ ನಿರಾಳವಾಗಿತ್ತು. ಗಾಂಧಿ ಮಾದರಿ ಹೊರಾಟ ರಾಮ್‌ದೇವ್ ಬಾಬಾಗೆ ಗೊತ್ತಿಲ್ಲವೆಂದರು ಕೆಲವರು. ತಾನೇ ಪ್ರಾಮಾಣಿಕನಲ್ಲದೆ ಇಂಥ ಹೋರಾಟ ಮಾಡಬಾರದೆಂದರು ಮತ್ತೊಂದಷ್ಟು ಜನ. ಬಾಬಾರಿಗೆ ಒಂದು ಹಿಡನ್ ಅಜೆಂಡಾ ಇದೆ ಎಂದರು ಕಿರಣ್ ಬೇಡಿ. ಅಲ್ಲಿಗೆ ಸಿಬಲ್ ಯೋಜನೆ ಪೂರ್ಣಗೊಂಡಿತ್ತು. ಬಾಬಾ ತಣ್ಣಗಾಗಿದ್ದರು. ಅಣ್ಣಾ ಟೀಮ್ ಅವರಿಂದ ಬೇರ್ಪಟ್ಟಿತ್ತು.
ಈಗ ಅಣ್ಣಾ ತಂಡ ತಿರುಗಿಬಿತ್ತು. ದೇಶವೆಲ್ಲ ಈ ಬಾರಿ ಪ್ರತಿಕ್ರಿಯೆಗೆ ಸಜ್ಜಾಯ್ತು. ಲಕ್ಷಲಕ್ಷ ಜನ ಧಾವಿಸಿಬಂದರು. ತೀರಾ ಅಸ್ಸಾಮ್‌ನಲ್ಲೂ ಕಾಲೇಜಿಂದ ಹುಡುಗರು ಬೀದಿಗಿಳಿದರು. ಅರವಿಂದ ಕೇಜ್ರಿವಾಲ್ ದಿನ ಬೆಳಗಾಗುವುದರೊಳಗೆ ಖ್ಯಾತರಾಗಿಬಿಟ್ಟರು. ಇನ್ನೇನು ಗೆಲುವು ಹತ್ತಿರವಿದೆ ಎಂದಾಗ ಮತ್ತೆ ಸಿಬಲ್ ಎಂಟ್ರಿಯಾಯ್ತು. ಅಣ್ಣಾ ತಂಡದೊಂದಿಗೆ ಗುರುತಿಸಿಕೊಂಡಿದ್ದ ಸ್ವಾಮಿ ಅಗ್ನಿವೇಶ್ ಸಿಬಲ್‌ರ ಏಜೆಂಟ್ ಎನ್ನುವುದು ಬೆಳಕಿಗೆ ಬಂತು. ಕಿರಣ್ ಬೇಡಿ ಕಾರ್ಯಕ್ರಮವೊಂದಕ್ಕೆ ಎಷ್ಟು ದುಡ್ಡು ಪಡೆಯುತ್ತಾರೆ ಎನ್ನುವ ಚರ್ಚೆ ಶುರುವಾಯ್ತು. ಕೆಜ್ರೀವಾಲ್ ವೇತನ ಬಾಕಿಯ ಕುರಿತಾಗಿ ಮಹತ್ವದ ಸುದ್ದಿಗಳು ಬೀದಿಗೆ ಬಿದ್ದವು. ಅಣ್ಣಾ ಟೀಮ್ ಒಳಗಿಂದೊಳಗೇ ಕಳಾಹೀನವಾಯಿತು. ಆದರೆ ಜನರ ಉತ್ಸಾಹ ಕುಂದಲಿಲ್ಲ. ಎಲ್ಲರ ಆಕ್ರೋಶ ತನ್ನ ವಿರುದ್ಧ ಎಂದರಿತ ಕೇಂದ್ರ ಸರ್ಕಾರ, ಭ್ರಷ್ಟಾಚರದಲ್ಲಿ ಎಲ್ಲ ಪಕ್ಷಗಳೂ ಒಂದೇ ಎಂದು ಬಿಂಬಿಸುವ ಪ್ರಯತ್ನಕ್ಕೆ ಕೈಹಾಕಿತು. ಬಿಜೆಪಿ ಕಾಂಗ್ರೆಸ್ಸಿನ ತೆಕ್ಕೆಗೆ ಬಿತ್ತು. ಕರ್ನಾಟಕದ ಬಿಜೆಪಿಯ ಭ್ರಷ್ಟರು, ಈ ಭ್ರಷ್ಟರಿಂದ ಹಣ ಪಡೆದು ತೇಜೋಹೀನವಾದ ಹೈಕಮಾಂಡು ಯಾರೂ ಮಾತಡುವ ಗೋಜಿಗೆ ಹೋಗದೆ ಸುಮ್ಮನುಳಿದುಬಿಟ್ಟರು. ಅಲ್ಲಿಗೆ ಕಾಂಗ್ರೆಸ್ಸಿನ ಯೋಜನೆ ಯಶಸ್ವಿಯಾಗಿತ್ತು. ತನಗಾದ ನಷ್ಟ ಬಿಜೆಪಿಗೆ ಲಾಭವಾಗದಂತೆ ಅದು ನೋಡಿಕೊಂಡಿತು.
ಅತ್ತ ಜನಲೋಕಪಾಲ್‌ಗೆ ಪ್ರತಿಯಾಗಿ ಲೋಕ್‌ಪಾಲ್ ಅನ್ನು ಸರ್ಕಾರ ಜಾರಿಗೆ ತಂತು. ಅಣ್ಣಾ ಟೀಮ್ ಜನಲೋಕಪಾಲ್ ಬೇಕೇಬೇಕೆಂಬ ಹಟಕ್ಕೆ ಬಿತ್ತು. ತಗೊಳ್ಳಿ. ಕಾಂಗ್ರೆಸ್ಸಿಗೆ ನಿರಾಳ. ಭ್ರಷ್ಟಾಚಾರ, ಕಪ್ಪುಹಣದ ಚರ್ಚೆಗಳು ನಿಂತುಹೋಗಿ ಲೋಕಪಾಲ್, ಜನಲೋಕಪಾಲ್ ಚರ್ಚೆ ಶುರುವಾಯ್ತು. ಜನಲೋಕಪಾಲದಲ್ಲಿ ಪ್ರಧಾನಿಯೂ ಪ್ರಶ್ನಾರ್ಹರೆಂಬ ಮಾತು ಕಾಂಗ್ರೆಸ್ಸನ್ನಿರಲಿ, ಬಿಜೆಪಿಯನ್ನೂ ಕೆರಳಿಸಿತು. ಸಂಸತ್ತನ್ನು ಹೊರಗಿನವರೊಬ್ಬರು ಪ್ರಶ್ನಿಸುವ ವ್ಯವಸ್ಥೆ ಯಾರೊಬ್ಬರಿಗೂ ಹಿಡಿಸಲಿಲ್ಲ. ಎನ್ನುವಲ್ಲಿಗೆ, ಅಣ್ಣಾ ಹಜಾರೆ ನಿಂತ ನೆಲ ಕಳಚಿಹೋಗಿತ್ತು. ಬಿಜೆಪಿಯೂ ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಲ್ಲಬೇಕೋ ಬೇಡವೋ ಎನ್ನುವ ದ್ವಂದ್ವಕ್ಕೆ ಬಿದ್ದಿತ್ತು. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಕಪ್ಪು ಹಣದ ಸುದ್ದಿ ತೆಗೆದು ಅದನ್ನು ಮರಳಿ ತರುವ ಆಧಾರದ ಮೇಲೇ ಬಿಜೆಪಿ ಹೋರಾಟ ನಡೆಸಿತ್ತು. ಈಗ ಅದು ಮೊದಲಿಗಿಂತ ಹೆಚ್ಚು ಆತುಕೊಂಡು ಅದನ್ನು ಮರಳಿ ತರಲು ಕಾದಾಡಬೇಕಿತ್ತು. ಅಷ್ಟು ಬಿಡಿ. ಸೋನಿಯಾ ಹಣ ವಿದೇಶದಲ್ಲಿದೆ ಎಂದು ಹೇಳಿದ್ದು ತಪ್ಪಾಯ್ತೆಂದು ಆಕೆಗೆ ಅಡ್ವಾಣಿ ಪತ್ರ ಬರೆದು, ಕಾರ್ಯಕರ್ತರ ಆತ್ಮಸ್ಥೈರ್ಯ ಕೊಂದುಬಿಟ್ಟರು. ಈ ವೇಳೆಗೆ ವಿದೇಶ ಪ್ರವಾಸಕ್ಕೆ ಹೋಗಿ ತನ್ನ ಕಪ್ಪು ಹಣವನ್ನು ಸೋನಿಯಾ ಚೀನಾಕ್ಕೆ ವರ್ಗಾಯಿಸಿದರೆಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ್ದನ್ನು ಹಿಡಿದೆಳೆಯಬೇಕಿದ್ದ ಬಿಜೆಪಿಗೆ ಅಡ್ವಾಣಿಯ ಈ ಪತ್ರವೇ ಮುಳುವಾಯಿತು.
ಅಣ್ಣಾ ಉಪವಾಸ ಮುಗಿಯಿತು. ಈಗಿಂದೀಗಲೇ ಜನಲೋಕಪಾಲ್ ಎಂದವರು ಎಲೆಕ್ಷನ್‌ಗೆ ಮುಂಚಿತವಾಗಿ ಆದರೆ ಸಾಕು ಎನ್ನುವಲ್ಲಿಗೆ ಬಂದರು. ಜನ ಲೋಕಪಾಲ್ ಜಾರಿಗೆ ತಂದ ಬಿಜೆಪಿ ಉತ್ತರಾಖಂಡದಲ್ಲಿ ಸೋತಿತು. ಅದರ ಹೆಸರನ್ನೂ ಎತ್ತದಿದ್ದ ಸಮಾಜವಾದಿ ಪಾರ್ಟಿ ಉತ್ತರಪ್ರದೇಶದಲ್ಲಿ ಗೆದ್ದಿತು. ಅಂದರೆ, ಅಣ್ಣಾ ಮತವಾಗಿ ಪರಿವರ್ತನೆಯಾಗಿರಲಿಲ್ಲ! ಎಲ್ಲ ರಾಜಕೀಯ ಪಕ್ಷಗಳೂ ನಿರಾಳವಾದವು. ಅಣ್ಣಾ ಟೀಮ್ ಹೈರಾಣಾಯಿತು. ಕಾಂಗ್ರೆಸ್ಸು ರಾಮದೇವ ಬಾಬಾರನ್ನು ಬಡಿದಾಗ ಬೀಗಿದ್ದ ಕೆಜ್ರಿವಾಲ್ ಹರಿದ್ವಾರ ಯೋಗಪೀಠಕ್ಕೆ ಹೋಗಿ ಬಾಬಾರೊಡನೆ ವೇದಿಕೆ ಹಂಚಿಕೊಂಡರು. ಕಿರಣ್ ಬೇಡಿಯಂತು ತಾನೇ ಹೇಳಿದ್ದ ಹಳೆಯದನ್ನೆಲ್ಲ ಮರೆತು ಒಗ್ಗಟ್ಟು ಮುರಿಯುವವರ ಸಂಚಿಗೆ ಬಲಿಯಾಗಬಾರದೆಂದು ಹರಿದ್ವಾರದಲ್ಲಿ ಭಾಷಣ ಬಿಗಿದುಬಿಟ್ಟರು. ರಾಮದೇವ ಬಾಬಾ ವರ್ಷದಿಂದಲೇ ಹೊಸ ಆಂದೋಲನವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅವರ ಸುತ್ತಲಿನ ತಂಡ ಹೊಚ್ಚ ಹೊಸತು. ಅವರ ಸುತ್ತಮುತ್ತ ಕೆ.ಎನ್.ಗೋವಿಂದಾಚಾರ್ಯ ಕಾಣುತ್ತಿಲ್ಲ, ಸುಬ್ರಹ್ಮಣಿಯನ್ ಸ್ವಾಮಿ ನಾಪತ್ತೆಯಾಗಿದ್ದಾರೆ. ಆರೆಸ್ಸೆಸ್ಸಿನ ಮುಖಂಡರು ದೂರ ಉಳಿದಿದ್ದಾರೆ. ಬಹುಶಃ ಇವರು ಬಂದರೆ ಅಂದೋಲನ ವ್ಯಾಪಕವಾಗಿ ಹರಡಲಾರದೆಂಬ ಹೆದರಿಕೆ ಬಾಬಾರಿಗೆ ಇರಬಹುದು.
ಹೇಗೇ ಇರಲಿ. ಜೂನ್ ಮೂರಕ್ಕೆ ಜಂತರ್‌ಮಂತರ್‌ನಲ್ಲಿ ಬಾಬಾ ಅನುಯಾಯಿಗಳು ಸೇರಲಿದ್ದಾರೆ. ಬಹುಶಃ ಅವತ್ತು ಅಣ್ಣಾ ಹಜಾರೆಯವರೂ ಅಲ್ಲಿಗೆ ಬಂದಾರು. ಇಂದಿನ ಟ್ರೆಂಡ್ ನೋಡಿದರೆ ಕೇಜ್ರಿವಾಲ್, ಕಿರಣ್ ಬೇಡಿಯೂ ವೇದಿಕೆಯ ಮೇಲಿದ್ದರೆ ಅಚ್ಚರಿಯಿಲ್ಲ. ಅಣ್ಣಾ ತಂಡಕ್ಕೆ ಈಗ ಜನಬಲ ಕಡಿಮೆಯಾಗಿದೆ. ವಿರೋಧಿಗಳು ಹೆಚ್ಚಾಗಿದ್ದಾರೆ. ಬಾಬಾ ಮಾತ್ರ ಹಳೆಯದರಿಂದ ಪಾಠ ಕಲಿತು ಸಂಚು ರೂಪಿಸಿದ್ದಾರೆ. ಅಣ್ಣಾಗೆ ಜನಲೋಕಪಾಲ್ ಬೆಕು, ಬಾಬಾಗೆ ಕಪ್ಪುಹಣ! ಇವರಿಬ್ಬರನ್ನು ಬೇರ್ಪಡಿಸಿ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮಾತ್ರ ಹೊಂಚುಹಾಕುತ್ತಲೆ ಕುಳಿತಿದೆ.

Comments are closed.