ವಿಭಾಗಗಳು

ಸುದ್ದಿಪತ್ರ


 

ಪಟೇಲರೆದೆಯ ದರ್ದು, ಮುಕ್ತಗೊಂಡಿತು ಹೈದರಾಬಾದು

ನಾಡಿದ್ದು ಬೆಳಗ್ಗೆ ಬೀದರ್ ಗುಲ್ಬರ್ಗಾಗಳ ಕಡೆ ಒಂದು ಸುತ್ತು ಹಾಕಿ ಬನ್ನಿ. ನೀವು ಖಂಡಿತ ಅಚ್ಚರಿಗೊಳ್ಳುತ್ತೀರಿ. ನಾವು ಆಗಸ್ಟ್ ೧೫ಕ್ಕೆ ಹೇಗೆ ಸ್ವಾತಂತ್ರ್ಯೋತ್ಸವ ಆಚರಿಸುತ್ತೇವೋ ಹಾಗೇ ಅವರು ಸೆಪ್ಟೆಂಬರ್ ೧೭ಕ್ಕೆ ಆಚರಿಸುತ್ತಾರೆ. ಬಲು ವಿಜೃಂಭಣೆಯಿಂದ, ಅಷ್ಟೇ ಶ್ರದ್ಧೆಯಿಂದ.
ಹೀಗೇಕೆ?
ಇಡಿಯ ದೇಶ ಆಗಸ್ಟ್ ೧೪ರ ಮಧ್ಯರಾತ್ರಿ ಮುಕ್ತಗೊಂಡಾಗ ಮೂರು ಪ್ರಾಂತಗಳು ಮಾತ್ರ ಭಾರತಕ್ಕೆ ಸೇರಲಿಚ್ಛಿಸದೆ, ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಾಗದೆ ಉಳಿದಿದ್ದವು. ಜುನಾಗಡ, ಕಾಶ್ಮೀರ ಮತ್ತು ಹೈದರಾಬಾದು. ಹಿಂದೂ ಬಾಹುಳ್ಯದ ಜುನಾಗಡ, ಹೈದರಾಬಾದುಗಳ ಆಡಳಿತದ ಚುಕ್ಕಾಣಿ ಮುಸಲ್ಮಾನರ ಕೈಲಿದ್ದರೆ, ಮುಸ್ಲಿಮ್ ಬಾಹುಳ್ಯದ ಕಾಶ್ಮೀರದ ಜುಟ್ಟು ಹಿಂದೂ ರಾಜನ ಕೈಲಿತ್ತು. ಮುಸಲ್ಮಾನರು ಹೇಗಿದ್ದರೂ ಸಮಸ್ಯೆಯೇ ಎಂಬುದಕ್ಕೆ ಮತ್ತೇನು ಬೇಕು ಹೇಳಿ!
ಮೌಂಟ್ ಬ್ಯಾಟನ್‌ಗೆ ಜಿನ್ನಾನ ಮೇಲೆ ಮೊದಲಿಂದಲೂ ಪ್ರೀತಿ ಅಥವಾ ಭಾರತವನ್ನು ಕಿರಿದಾಗಿಸಿದಷ್ಟೂ ಅದರ ಸಾಮರ್ಥ್ಯ ಕುಂದುಬಹುದೆಂಬ ದೂರಾಲೋಚನೆ. ಆತ ವಿಭಜನೆಯ ಸೂತ್ರ ಮುಂದಿಟ್ಟಾಗ ನೆಹರೂ ಮರುಮಾತಿಲ್ಲದೆ ಒಪ್ಪಿಕೊಂಡಿದ್ದರು. ಆದರೆ ಪಟೇಲರು ಹಣ್ಣಿನ ಬುಟ್ಟಿಯಲ್ಲಿ ೫೬೦ ಹಣ್ಣುಗಳನ್ನು ಪೇರಿಸಿಟ್ಟರೆ ಒಪ್ಪಿಕೊಳ್ಳಬಹುದಷ್ಟೇಎಂದು ಗರಿಗರಿಯಾಗಿ ನುಡಿದಿದ್ದರು. ೫೬೦ ಹಣ್ಣುಗಳೆಂದರೆ ರಾಜರ ಅಧೀನದಲ್ಲಿರಲು ಒಪ್ಪದ ರಾಜರುಗಳನ್ನು, ಅವರ ಮಂತ್ರಿಗಳನ್ನು ಕರೆ – ಕರೆದು ಮಾತಾಡಿಸಿ, ಕೆಲವೊಮ್ಮೆ ಸೂಕ್ತ ಗೌರವ ಕೊಟ್ಟು, ಇನ್ನೂ ಕೆಲವೊಮ್ಮೆ ಬೆದರಿಸಿ ಒಲಿಸಿಕೊಂಡರು. ಈ ಮೂರು ರಾಜ್ಯಗಳು ಮಾತ್ರ ಕಗ್ಗಂಟಾಗಿಯೇ ಉಳಿದವು. ಕಾಶ್ಮೀರ ಮತ್ತು ಹೈದರಾಬಾದುಗಳನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕೊಟ್ಟುಬಿಡಬೇಕೆಂಬ ಇಚ್ಛೆ ಬ್ಯಾಟನ್ನನಿಗೆ ಬಲವಾಗಿಯೇ ಇತ್ತು. ಹಾಗೆ ನೋಡಿದರೆ ಪಟೇಲರಿಗೆ ಕಾಶ್ಮೀರದ ಮೇಲೆ ಪ್ರೀತಿ ಮಮತೆಗಳೇನು ಇರಲಿಲ್ಲ. ಹೈದರಾಬಾದು, ಜುನಗಡಗಳ ವಿಷಯದಲ್ಲಿ ಜಿನ್ನಾ ತಲೆ ಹಾಕದಿದ್ದರೆ ಕಾಶ್ಮೀರದ ತಕರಾರು ನಮಗೂ ಬೇಕಿಲ್ಲವೆಂಬುದು ಪಟೇಲರ ನಿಲುವಾಗಿತ್ತು. ತಲೆ ಕೆಟ್ಟ ಜಿನ್ನಾ ಸುಮ್ಮನಿರದೆ ಜುನಾಗಡದಲ್ಲಿ ಒಂದಷ್ಟು ರಾಜಕೀಯ ಮಾಡಿದ. ಪ್ರತೀಕಾರವಾಗಿ ಪಟೇಲರು ಕಾಶ್ಮೀರಕ್ಕೆ ಕೈಹಾಕಿದರು. ಜಿನ್ನಾನ ಹಸ್ತಕ್ಷೇಪದಿಂದಾಗಿ ಜುನಾಗಡದಲ್ಲಿ ಮತಗಣನೆ ನಡೆಯಿತು. ಹಿಂದೂಗಳು ಭಾರತದ ಪರ ಒಲವು ತೋರಿದರು. ಈಗ ಪಟೇಲರು ಕಾಶ್ಮೀರದ ಮಹಾರಾಜನನ್ನು ಒಲಿಸಿಕೊಂಡರು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದರು.
ಇವುಗಳ ನಡುವೆ ಒಳಗೊಳಗೆ ಕುದಿಯುತ್ತಿದ್ದುದು ಹೈದರಾಬಾದು. ಅಲ್ಲಿನ ನವಾಬ ಮೌಂಟ್ ಬ್ಯಾಟನ್‌ನ ಒಲವು ಗಳಿಸಿಕೊಂಡು ಸ್ವಲ್ಪ ಕಾಲಾವಕಾಶ ಪಡೆದಿದ್ದ. ಈ ಅವಧಿಯಲ್ಲಿ ಹಿಂದೂಗಳನ್ನು ಬೆದರಿಸಿ ತಮ್ಮಡಿಯಲ್ಲಿರಿಸಿಕೊಳ್ಳಲು ಮುಸಲ್ಮಾನ ಗೂಂಡಾ ರಜಾಕಾರರ ಪಡೆ ಬಲಿಷ್ಠಗೊಳಿಸಲಾಯ್ತು. ಅತ್ಯಾಚಾರಗಳ ಸುರಿಮಳೆಯೇ ಆಗಿಹೋಯ್ತು. ಈ ಮಧ್ಯೆ ರಾಷ್ಟ್ರ ಮಟ್ಟದಲ್ಲೂ ಸಾಕಷ್ಟು ಬದಲಾವಣೆ ಬಂದಿತ್ತು. ಗಾಂಧೀಜಿ ದೇಹತ್ಯಾಗವಾಗಿತ್ತು; ಪಟೇಲರು ಈ ದುಃಖ ಭರಿಸಲಾಗದೆ ಬೆಂದು ಹೃದಯಾಘಾತಕ್ಕೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು. ನೆಹರೂ ಏಕಾಂಗಿ ವೀರರಂತೆ ಬ್ಯಾಟನ್ ಹೇಳಿದಂತೆ ಕೇಳಿಕೊಂಡಿದ್ದರು. ಹೈದರಾಬಾದ್‌ನ ನವಾಬನೂ ತಾನು ಸ್ವಾಯತ್ತಗೊಂಡು ಗೋವೆಯನ್ನು ಪೋರ್ಚುಗೀಸರಿಂದ ಖರೀದಿಸಿ ವ್ಯಾಪಾರ ವೃದ್ಧಿಗೊಳಿಸಿಕೊಂಡು ಬೆಳೆಯುವ ಕನಸು ಕಾಣುತ್ತಿದ್ದ. ಸರ್ದಾರ್ ಪಟೇಲರು ಹೆಚ್ಚು ಕಡಿಮೆ ತೀರಿಕೊಂಡರೆಂದೇ ಎಲ್ಲರೂ ಭಾವಿಸಿದ್ದರು.
ಕಲ್ಲು ಹೃದಯ ಅದು. ಹಿಡಿದ ಕೆಲಸ ಪೂರ್ಣಗೊಳಿಸುವವರೆಗೆ ಹೊರಡುವ ಯಾವ ಲಕ್ಷಣವೂ ತೋರಲಿಲ್ಲ! ೫೬೦ ಹಣ್ಣುಗಳಲ್ಲಿ ಒಂದು ಹಣ್ಣು ಕಡಿಮೆ ಇದೆಯಲ್ಲ ಎಂಬ ಯೋಚನೆಯಿಂದಲೇ ಪಟೇಲರು ಸ್ವಸ್ಥರಾಗಿ ಮರಳಿ ಬಂದರು. ನವಾಬ ತಡಬಡಾಯಿಸಿ ಹೋದ. ಇತ್ತೆಹಾದ್-ಉಲ್-ಮುಸ್ಲಿಮೀನ್‌ನ ನಾಯಕರು ಅತ್ತಿಂದಿತ್ತ ಧಾವಿಸಿದರು. ಅದರದ್ದೇ ಉಗ್ರ ಭಾಗವಾದ ರಜಾಕಾರರ ನಾಯಕ ಕಾಸಿಂ ರಜ್ವಿ ೨೦ಸಾವಿರ ಜನರ ಸಏನೆ ಸಂಘಟಿಸಿದ. ಪಾಕಿಸ್ತಾನದ ನಂಟು ಹೊಂದಿದ್ದ ವ್ಯಾಪಾರಿ ಮೀರ್ ಲಾಯಕ್ ಅಲಿಯನ್ನು ನವಾಬನ ಮಂತ್ರಿ ಸ್ಥಾನದಲ್ಲಿ ಕೂರಿಸಲಾಯ್ತು. ಇನ್ನು ಪಾಕಿಸ್ತಾನದಿಂದ (ಈಗಿನ ಬಾಂಗ್ಲಾ) ಹೈದರಾಬಾದಿಗೆ ಸೇನೆ ಕಳಿಸುವ ತಯಾರಿಯನ್ನೂ ಮಾಡಿಕೊಂಡ. ಪಟೇಲರನ್ನು ಹೆದರಿಸಲೆಂದು ರಜ್ವಿ ದೆಹಲಿಗೆ ಹೋಗಿ sತರದ ಸೈನ್ಯ ಹೈದರಾಬಾದಿಗೆ ಬಂದರೆ ಕೊನೆಯ ವ್ಯಕ್ತಿ ಇರುವವರೆಗೆ ಹೋರಾಡಿ ಮಡಿಯುತ್ತೇವೆಅಂದ. ಬೇರೆಯವರಾದರೆ ಅದೇನು ಹೇಳುತ್ತಿದ್ದರೋ, ಪಟೇಲರು ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನೀನು ನಿರ್ಧರಿಸಿದ್ದರೆ ಯಾರು ತಡೆಯಬಲ್ಲರುಎಂದು ಮಾತು ಮುರಿದು ಎದ್ದುಹೋದರು. ರಜ್ವಿ ಅರ್ಧ ಮೆತ್ತಗಾದ.
ಆದರೇನು? ಜಿಹಾದಿನ ಅಮಲು ಏರಿತ್ತು. ನವಾಬ ಪಾಕಿಸ್ತಾನಕ್ಕೆ ೨೦ಕೋಟಿ ರೂಪಾಯಿ ತೆತ್ತು ಶಸ್ತ್ರಾಸ್ತ್ರ ತರಿಸಿಕೊಂಡ. ಕಾಸಿಂ ರಜ್ವಿ ಈ ಶಸ್ತ್ರಗಳನ್ನು ರಜಾಕಾರರ ಕೈಲಿಟ್ಟು ಇನ್ನೊಂದು ಕೈಲಿ ಕುರಾನ್ ಹಿಡಿದು ನಡೆಯಿರಿ ಎಂದ. ಮಹಾರಾಷ್ಟ್ರ, ಆಂಧ್ರ, ಕರ್ನಾಟಕಗಳ ಅನೇಕ ಪ್ರದೇಶಗಳು ಇವರ ದಾಳಿಗೆ ನಲುಗಿದವು. ಊರಿಗೆ ಊರೇ ಗುಳೆ ಹೊರಟವು. ಮುಸಲ್ಮಾನ ಗೂಂಡಾ ಹಿಂದೂ ಹೇಡಿಎಂಬ ಗಾಂಧೀಜಿಯ ಮಾತಿನ ಮೊದಲರ್ಧವನ್ನು ಮುಸ್ಲಿಮರು ದೃಢಪಡಿಸಿದರೆ, ಉತ್ತರಾರ್ಧವನ್ನು ಹಿಂದೂಗಳು ಸುಳ್ಳುಗೊಳಿಸಿದರು. ಕಂಡಕಂಡಲ್ಲಿ ಕದನಗಳು ನಡೆದವು. ಶಾಂತ ಹಿಂದುವೂ ಸಿಡಿದು ಕತ್ತಿ ಜಳಪಿಸಿದ್ದ.
ಪಟೇಲರಿಗೆ ದಿನವೂ ಸುದ್ದಿ ಬರುತ್ತಿತ್ತು. ಅವರ ಮನಸ್ಸು ಹೊಯ್ದಾಡುತ್ತಿತ್ತು. ಆ ವೇಳೆಗೆ ರಜ್ವಿ sರತದ ಸೈನ್ಯ ಹೈದರಾಬಾದಿಗೆ ಬಂದರೆ ಒಂದೂವರೆ ಕೋಟಿ ಹಿಂದೂಗಳ ಎಲುಬಿನ ಬೂದಿ ನೋಡಿ ಮರಳಬೇಕಷ್ಟೆಎಂದು ಗುಡುಗಿದ. ಈಗ ಪಟೇಲರಿಗೆ ಕೂರಲಾಗಲಿಲ್ಲ. ಅವರೊಳಗಿನ ಹಿಂದೂ ಜಾಗೃತನಾದ. ರಕ್ತ ಸುರಿಸಿ ನಿರ್ಮಿಸಿದ ಭಾರತದ ಏಕತೆ ನಾಶ ಮಾಡುವಂತಹ ಒಂದು ಪ್ರತ್ಯೇಕ ಭಾಗವನ್ನು ನಾನು ಸಹಿಸಲು ಸಾಧ್ಯವೇ ಇಲ್ಲಎಂದು ನಿಜಾಮನಿಗೆ ಖಡಕ್ಕಾಗಿಯೇ ಉತ್ತರಿಸಿದರು.
ಮೌಂಟ್ ಬ್ಯಾಟನ್ ಹೈದರಾಬಾದಿನ ಮೇಲಿನ ಪಟೇಲರ ಕೋಪ ಶಮನಗೊಳಿಸಲು ಒಂದು ಕರಡನ್ನು ಸಿದ್ಧ ಮಾಡಿಕೊಂಡು ಬಂದಿದ್ದರು. ಈ ಹಿಂದೆ ಪಟೇಲರು ಒಮ್ಮೆ ಅಂತಹ ಒಪ್ಪಂದಗಳನ್ನು ನಾ ಒಪ್ಪಲಾರೆ ಎಂದು ಸೂಚ್ಯವಾಗಿ ಹೇಳಿದ್ದರಿಂದ ಬ್ಯಾಟನ್ ತಾನೇ ಅದನ್ನು ಹೊತ್ತು ತಂದಿದ್ದ. ಪಟೇಲರು ದೇಶ ಬಿಟ್ಟು ಹೊರಡುತ್ತಿರುವ ಬ್ಯಾಟನ್ ಅನ್ನು ತಬ್ಬಿಕೊಂಡು ನಿನ್ನ ಋಣ ತೀರಿಸುವುದು ಕಷ್ಟ ಅಂದರು. ಕೂಡಲೇ ಬ್ಯಾಟನ್ ನವಾಬನ ಒಪ್ಪಂದ ಪತ್ರಗಳನ್ನು ಮುಂದಿಟ್ಟು ಇದಕ್ಕೆ ಸಹಿ ಹಾಕಿಬಿಡಿ. ಋಣ ತೀರುತ್ತದೆಎಂದ. ಪಟೇಲರು ಮರು ಮಾತಿಲ್ಲದೆ ಸಹಿ ಹಾಕಿದರು. ಆ ಪತ್ರದಲ್ಲಿ ರಜಾಕಾರರನ್ನು ಹದ್ದು ಬಸ್ತಿನಲ್ಲಿಡಬೇಕು ಎಂಬ ಸಾಲೊಂದೇ ರಜ್ವಿಯನ್ನು ಕೆಣಕಲು ಸಾಕು ಎಂಬುದು ಅವರಿಗೆ ಗೊತ್ತಿರದಿದ್ದ ಸಂಗತಿಯೇನಲ್ಲ. ಅಂದುಕೊಂಡಂತೆಯೇ ಆಯ್ತು. ರಜ್ವಿ ಒಪ್ಪಂದ ತಿರಸ್ಕರಿಸಿದ. ಬ್ಯಾಟನ್ ಭಾರವಾದ ಹೃದಯದೊಂದಿಗೆ ಮರಳಿದ.
ಪಾಕಿಸ್ತಾನದಿಂದ ವಿಮಾನಗಳು ಬೀದರ್ ಮತ್ತು ವಾರಂಗಲ್‌ಗಳಿಗೆ ಬಂದವು. ಸಾಕಷ್ಟು ಶಸ್ತ್ರಗಳೂ ರಜಾಕಾರರ ಕೈಸೇರಿದವು. ಇನ್ನು ಕಾಯುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಸೈನ್ಯ ಕಳಿಸುವ ಗಟ್ಟಿ ನಿರ್ಧಾರ ಗೃಹ ಸಚಿವರ ಮನಸಿನಿಂದ ಹೊರಬಿತ್ತು. ನೆಹರೂ ಇರಲಿ, ಸ್ವತಃ ಸೈನ್ಯವೇ ಇದು ಆತುರದ ನಿರ್ಧಾರವಾದೀತೇನೋ ಎಂದು ಹೆದರಿದಾಗ ಪಟೇಲರು ಕೊಟ್ಟ ಉತ್ತರವೇನು ಗೊತ್ತೆ? ಯಂತ್ರಣಕ್ಕೆ ಬೇಕಿರುವುದು ಸಂಖ್ಯೆಯಲ್ಲ, ಗತ್ತು. ಈಗ ನಮ್ಮ ಬಳಿ ಗತ್ತಿದೆ. ಹೈದರಾಬಾದನ್ನು ಮಣಿಸಿಬಿಡಬಹುದು. ಇನ್ನು ಸ್ವಲ್ಪ ದಿನ ಕಳೆದರೆ ಗತ್ತು ಇಳಿದುಹೋಗಿ ಸಂಖ್ಯೆ ಎಷ್ಟಿದ್ದರೂ ಗೆಲ್ಲುವುದು ಕಠಿಣವಾದೀತು
ಸೈನ್ಯಕ್ಕೆ ಇಷಾರೆ ಸಾಕಿತ್ತು. ಒಂದು ವಾರದೊಳಗೆ ದಾಳಿಗೆ ಬೇಕಾದ ತಯಾರಿ ಮುಗಿಯಿತು. ಆದರೂ ಒಂದೆರಡು ತಿಂಗಳು ಕಾಯಲೇಬೇಕಾಯ್ತು. ನೆಹರೂ ಮನಸ್ಸು ಗುಲಾಬಿ ಹೂವಲ್ಲವೆ? ಅವರು ಪತ್ರ ಬರೆದು ನವಾಬನನ್ನು ಒಲಿಸಿಕೊಳ್ಳುವ ಕಸರತ್ತು ಮಾಡಿಯೇ ಮಾಡಿದರು. ಪಟೇಲರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ನೆಹರೂ ರಾಜಾಜಿಯವರು ಬರೆಯುತ್ತಿದ್ದ ಇಂತಹ ಪ್ರೇಮ ಪತ್ರಗಳ ಬಗ್ಗೆ ಅವರು ಆಗಾಗ ಆಡಿಕೊಂಡಿದ್ದೂ ಇದೆ! ಸೆಪ್ಟೆಂಬರ್ ೧೨ಕ್ಕೆ ಸೈನ್ಯ ಕಳಿಸಬೇಕೆಂಬ ನಿರ್ಧಾರ ಮೊದಲೇ ಆಗಿತ್ತು. ಹೈದರಾಬಾದಿಗೆ ಅವತ್ತು ಸೂತಕ ಬೇರೆ. ಜಿನ್ನಾ ಅಂದೇ ತೀರಿಕೊಂಡಿದ್ದ. ಜಿನ್ನಾನ ಮೇಲೆ ಪಟೇಲರಿಗೆ ಅದೆಂಥ ಕೋಪವಿತ್ತೆಂದರೆ, ಹಿರಿಯ ಅಧಿಕಾರಿಯೊಬ್ಬ ರ್ ಧ್ವಜ ಅರ್ಧಕ್ಕಿಳಿಸಬೇಕೆಎಂದು ಕೇಳಿದ್ದಕ್ಕೆ ತ್ತವನು ನಿಮ್ಮ ಮಾವನಾ?ಎಂದು ರೇಗಿಬಿಟ್ಟಿದ್ದರು!
ಇದು ಸೈನಿಕ ಕರ್ಯಾಚರಣೆ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ದೇಶದೊಳಗೆ ಹೀಗೆ ಕಾರ್ಯಾಚರಣೆ ನಡೆಸಿದರೆ ಜಗತ್ತಿಗೆ ತಪ್ಪು ಸಂದೇಶ ಹೋಗುವುದೆಂದು ಅರಿತ ಪಟೇಲರು ಇದನ್ನು ಲೀಸ್ ಕಾರ್ಯಾಚರಣೆಎಂದರು. ಆಪರೇಷನ್ ಪೋಲೋನಾಮಕರಣವೂ ಆಯ್ತು. ಸೆಪ್ಟೆಂಬರ್ ೧೩ಕ್ಕೆ ಹೊರಟ ಸೇನೆಗೆ ಹೈದರಾಬಾದಿನಲ್ಲಿ ಹೇಳಿಕೊಳ್ಳುವಂತಹ ಪ್ರತಿರೋಧವೇ ಒದಗಲಿಲ್ಲ. ರಜಾಕಾರರು ಊರು ಬಿಟ್ಟು ಓಡಿಹೋಗಿದ್ದರು. ಸೆಪ್ಟೆಂಬರ್ ೧೭ರ ಮಧ್ಯಾಹ್ನದ ವೇಳೆಗೆ ಹೈದರಾಬಾದು ಸೊರಗಿ ಸುಣ್ಣವಾಗಿತ್ತು. ಹೆಚ್ಚು ಕಡಿಮೆ ಮೂರು ಸಾವಿರ ರಜಾಕಾರರು ಸತ್ತಿದ್ದರು. ಸಾವಿರಾರು ಜನ ಸೆರೆ ಸಿಕ್ಕಿದ್ದರು. ಕಾಸಿಂ ರಜ್ವಿ ಬಂಧಿತನಾಗಿದ್ದ, ನವಾಬ ತಲೆ ತಗ್ಗಿಸಿ ನಿಂತಿದ್ದ. ಜಿನ್ನಾನ ಶವ ಮಲಗಿದ್ದಲ್ಲೇ ಒಮ್ಮೆ ಹೊರಳಿತು. ಹೈದರಾಬಾದು ಭಾರತದೊಂದಿಗೆ ವಿಲೀನಗೊಂಡಿತು. ಪಟೇಲರ ಗಟ್ಟಿತನ ಮತ್ತೊಮ್ಮೆ ಸಾಬೀತುಗೊಂಡಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದು ವರ್ಷ ಒಂದು ತಿಂಗಳ ನಂತರ ಹೈದರಾಬಾದು ಪ್ರಾಂತ್ಯದ ಜನ ಸ್ವತಂತ್ರ ಗಾಳಿಯನ್ನು ಉಸಿರಾಡಿದ್ದರು. ಈಗಲೂ ಅವರ ಆ ಉಸಿರು ಸರದಾರರ ತಾಕತ್ತಿಗೇ ಸಮರ್ಪಿತ.
ಸಮಸ್ಯೆಗಳನ್ನು ನಿವಾರಿಸಲು ಬೇಕಿರುವುದು ಛಾತಿ, ಗತ್ತು. ಅಂತಹವನು ದೇಶದ ಗದ್ದುಗೆ ಏರಬೇಕು. ಚಿವುಟಿದರೂ ಮಾತಾಡದ, ಕೆನ್ನೆಗೆ ಬಡಿದರೂ ಸೊಲ್ಲೆತ್ತದ ನಾಯಕರನ್ನು ನೋಡೀನೋಡೀ ಸಾಕಾಗಿಹೋಗಿದೆ. ಈಗ ಮತ್ತೊಬ್ಬ ಪಟೇಲರು ಬೇಕಿದ್ದಾರೆ. ಅಸ್ಸಾಮಿನಿಂದ ಹಿಡಿದು ಪಂಜಾಬಿನವರೆಗೆ, ಕಾಶ್ಮೀರದಿಂದ ಹಿಡಿದು ಕೇರಳದವರೆಗೆ ಹಬ್ಬಿರುವ ವಿದ್ರೋಹಿಗಳ ಸಮಸ್ಯೆಗೆ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂಚಿಸಬಲ್ಲ ನಾಯಕ ಬೇಕು.
ನಾನಂತೂ ಅಂತಹವನಿಗಾಗಿ ಕಾಯುತ್ತಿದ್ದೇನೆ. ನೀವು?

Comments are closed.