ವಿಭಾಗಗಳು

ಸುದ್ದಿಪತ್ರ


 

ಸರಸ್ವತಿಯನ್ನು ಹರಾಕಿತಿ ಎಂದವರ ಕಿತಾಪತಿ : ವಿಶ್ವಗುರು ಅಂಕಣ ~ 8

ಯಾವಾಗಲಾದರೂ ಬದರೀನಾಥಕ್ಕೆ ಹೋಗಿದ್ದೀರಾ? ದೇವರ ದರ್ಶನ ಮಾಡಿಕೊಂಡು ಸ್ವಲ್ಪ ಗುಡ್ಡದೆಡೆಗೆ ಹೋದರೆ ನೂರು – ನೂರಿಪ್ಪತ್ತು ಅಡಿ ಅಂತರದಲ್ಲಿ ಎರಡು ಪುಟ್ಟ ಗುಹೆಗಳು. ಒಂದರಲ್ಲಿ ವ್ಯಾಸರು, ಮತ್ತೊಂದರಲ್ಲಿ ಗಣೇಶ ಕುಳಿತಿರುತ್ತಿದ್ದರಂತೆ. ವ್ಯಾಸರು ಹೇಳುವ ಮಹಾಭಾರತ ಕಥನವನ್ನು ಗಣೇಶ ಬರೆದುಕೊಳ್ಳುತ್ತಿದ್ದನಂತೆ. ಇವೆರಡರ ಜೊತೆಗೇ ಅಲ್ಲಿ ಹುಟ್ಟಿ, ಭೋರ್ಗರೆದು ಕಾಣೆಯಾಗಿಬಿಡುವ ನೀರಿನ ಸ್ರೋತವೊಂದಿದೆ. ಅದನ್ನು ಸರಸ್ವತಿ ಅಂತಾರೆ. ಆಕೆಗೆ ಹರಿವಿನ ಸದ್ದು ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಂಡರೂ ಆಕೆ ಮನ್ನಿಸದೆ ಹೋದಾಗ ಲುಪ್ತವಾಗಿ ಹೋಗೆಂದು ಶಾಪ ಕೊಟ್ಟಿದ್ದನಂತೆ ಗಣಪ. ಅಂದಿನಿಂದ ಆಕೆ ಗುಪ್ತಗಾಮಿನಿಯಾಗಿಹೋದಳಂತೆ! ಪ್ರಯಾಗಕ್ಕೆ ಹೋಗಿ ನೋಡಿ. ಅಲ್ಲಿ ಗಂಗೆ – ಯಮುನೆಯರೊಂದಿಗೆ ಸರಸ್ವತಿ ಗುಪ್ತಗಾಮಿನಿಯಾಗಿಯೇ ಸಂಗಮಿಸುತ್ತಾಳೆ. ಹಾಗೆಂದು ಈ ದೇಶದ ಜನ ನಂಬಿದ್ದಾರೆ. ಈ ನಂಬಿಕೆ ಬಹಳ ಹಿಂದಿನಿಂದಲೂ ಹರಿದು ಬಂದಿರುವಂಥದ್ದು. ಕಣ್ಣಿಗೆ ಕಾಣದಿದ್ದರೂ ಸರಸ್ವತೀ ನದಿ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಆಕೆ ಸಾವಿರಾರು ವರ್ಷಗಳಿಂದ ಭಾರತೀಯರ ಜನ ಮಾನಸದಲ್ಲಿ ಮಹತ್ವದ ಪಾತ್ರ ಕಾಯ್ದುಕೊಂಡು ಬಂದಿದ್ದಾಳೆ.
ಪಶ್ಚಿಮದ ಚಿಂತಕರು, ರೋಮಿಲಾ ಥಾಪರ್‍ರಂಥ ನಮ್ಮದೇ ಎಡಪಂಥೀಯ ಇತಿಹಾಸಕಾರರಿಗೂ ಭಾರತೀಯರು ಮೂರ್ಖರೆನ್ನಿಸೋದು ಇದೇ ಕಾರಣಕ್ಕೇ. ಅಸ್ತಿತ್ವವೇ ಇಲ್ಲದ್ದಕ್ಕೆ ಮಹತ್ವ ಕೊಟ್ಟು ಶತಶತಮಾನಗಳಿಂದಲೂ ಅದನ್ನು ನಂಬಿಕೊಂಡು ಬಂದಿದ್ದಾರಲ್ಲ! ಅವರ ದುಗುಡಕ್ಕೆ ಇನ್ನೂ ಒಂದು ಕಾರಣವಿತ್ತು. ಋಗ್ವೇದದಲ್ಲಿ ಸರಸ್ವತೀ ನದಿಯ ಉಲ್ಲೇಖ ಐವತ್ತಕ್ಕೂ ಹೆಚ್ಚು ಬಾರಿ ಬಂದಿದೆ. `ಅಂಬೀತಮೇ ನದೀತಮೇ ದೇವೀತಮೇ ಸರಸ್ವತೀ’ – ತಾಯಿಯಾಗಿ, ನದಿಯಾಗಿ, ದೇವಿಯಾಗಿ ಕಾಪಾಡಿಕೊಂಡು ಬಂದಿರುವ ಸರಸ್ವತಿಯನ್ನು ಸ್ತುತಿಸುವ ಈ ಶ್ಲೋಕವಂತೂ ಸುಪ್ರಸಿದ್ಧ. ಸರಸ್ವತಿಯ ಇರುವಿಕೆ ಸತ್ಯವೆಂದು ಸಾಬೀತಾದರೆ, ಅಲ್ಲಿಗೆ ಆರ್ಯರ ಆಕ್ರಮಣದ, ಪಶ್ಚಿಮದ ಶ್ರೇಷ್ಠತೆಯ ವಾದಗಳೆಲ್ಲ ಹುಸಿಹೋಗಿಬಿಡುತ್ತವೆ. ಹೀಗಾಗಿಯೇ ಈ ಬುದ್ಧಿವಂತರೆಲ್ಲ ಸೇರಿ ಆಫ್ಘಾನಿಸ್ತಾನದ ಬಳಿಯಿರುವ ಸಣ್ಣ ನದಿಯೇ ಸರಸ್ವತೀ ಎಂದು ಗುರುತಿಸಿ ಜಗತ್ತನ್ನು ನಂಬಿಸಹೊರಟಿದ್ದರು.
ಅಷ್ಟರೊಳಗೆ ಇಸ್ರೋ ಹಾರಿಬಿಟ್ಟಿದ್ದ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಹರ್ಯಾಣದ ಮೂಲಕ ಹಾದುಹೋಗುವ ಹಿಮಾಲಯದ ನದಿಯೊಂದು ಗುಜರಾತ್ ಹಾದು ಸಾಗರದಲ್ಲಿ ಲೀನವಾಗುವುದನ್ನು ಗುರುತಿಸಿತು. ಈ ನದಿ ಕನಿಷ್ಠ ನಾಲ್ಕು ಸಾವಿರ ವರ್ಷಗಳ ಹಿಂದೆ ಬತ್ತಿಹೋಗಿರಬಹುದೆಂದು ಅಂದಾಜು ಮಾಡಲಾಯಿತು. ಇದರೊಂದಿಗೆ ವಸ್ತುನಿಷ್ಠ ಚಿಂತನೆ ನಡೆಸಿ ಇತಿಹಾಸದ ರೂಪರೇಷೆ ಬಿಡಿಸುತ್ತಿದ್ದ ಅಧ್ಯಯನಕಾರರ ಪ್ರಯತ್ನಗಳಿಗೆ ಜೀವ ದೊರೆತಂತಾಯ್ತು. ಕಲ್ಯಾಣ ರಾಮನ್‍ರಂಥ ಭೂಗರ್ಭ ಶಾಸ್ತ್ರಜ್ಞರೆಲ್ಲ ಇದರ ಬೆನ್ನು ಬಿದ್ದರು. ಋಗ್ವೇದ ಹೇಳಿರುವ ಸರಸ್ವತೀ ನದಿಯ ಹರಿವು – ದಿಕ್ಕು – ವಿಸ್ತಾರಗಳು ನೆಲದ ಮೇಲಿನ ಮತ್ತು ಬಾಹ್ಯಾಕಾಶ ಉಪಗ್ರಹದ ಮಾಹಿತಿಗಳೊಂದಿಗೆ ತಾಳೆಯಾಗಹತ್ತಿದವು. ಅಲ್ಲಿಗೆ ಋಗ್ವೇದದಲ್ಲಿ ಉಲ್ಲೇಖಗೊಂಡ ಸರಸ್ವತಿ ಭಾರತೀಯಳೇ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿತು. ಅಷ್ಟೇ ಅಲ್ಲ, ಸಾವಿರಸಾವಿರ ವರ್ಷಗಳ ಹಿಂದೂ ನಂಬಿಕೆ ವೈಜ್ಞಾನಿಕ ಪ್ರಯೋಗಗಳಿಗಿಂತಲೂ ಗಟ್ಟಿ ಮತ್ತು ಗಹನವಾದ್ದೆಂದು ಸಾಬೀತಾಯ್ತು. ಸುಳ್ಳಿನ ಕಂತೆಗಳನ್ನೇ ಪೋಣಿಸುತ್ತಿದ್ದವರೀಗ ಬೇರೆ ದಾರಿ ಕಾಣದೆ ಸುಮ್ಮನಾಗಿಬಿಟ್ಟರು. ಆರ್ಯ ಆಕ್ರಮಣವಾದವೆಂಬ ಮಹಾಮೋಸವನ್ನು ಇತಿಹಾಸದ ಮೇಲೆ ಹೇರಿದ್ದವರು, ಸತ್ಯದ ಬೆಳಕಿನಲ್ಲಿ ಬೆತ್ತಲಾಗಿ ಮುದುಡಿ ಕುಳಿತುಬಿಟ್ಟರು. ಇತಿಹಾಸವನ್ನು ಮತಾಂತರಕ್ಕೊಂದು ಅಸ್ತ್ರವನ್ನಾಗಿ ಬಳಸಲುಹೊರಟಿದ್ದ ಚರ್ಚ್ ಕೃಪಾಪೋಷಿತರು ದಾರಿಗಾಣದಂತಾದರು. 22222146
ಹೀಗೇ ಒಂದು ಅಂದಾಜು ಮಾಡಿ. ರೂಪುಗೊಂಡು ಆರಂಭದ ದಇನಗಳಲ್ಲಿ ಭೂಮಿ ಕಾವೇರುವುದು, ಘನೀಭವಿಸುವುದು ಅನಿಯಮಿತವಾಗಿ ನಡೆದೇ ಇತ್ತು. ದೀರ್ಘಕಾಲದ ಶೀತಲಯುಗ. ಒಮ್ಮಿಂದೊಮ್ಮೆಗೇ ಸೂರ್ಯಶಾಖಕ್ಕೆ ಹಿಮ ಕರಗಿ ನೀರಾಗಿ ಹರಿದು ಸಮುದ್ರವಾಗಿ ಭೋರ್ಗರೆಯುವುದು – ಇವೆಲ್ಲವೂ ನಡೆದೇ ಇತ್ತು. ಹಿಮದ ಪ್ರಭಾವ ದೀರ್ಘಕಾಲ ಇರುತ್ತಿದ್ದುದರಿಂದ ಹೆಚ್ಚು ಜನ ವಾಸಕ್ಕೆ ಸಮುದ್ರತೀರವನ್ನು ಆಯ್ದುಕೊಳ್ಳುತ್ತಿದ್ದರು. ಹಾಗೆ ನೋಡಿದರೆ, ನದೀತೀರದ ನಾಗರಿಕತೆ ಆರಂಭಗೊಂಡಿದ್ದು ಅನಂತರದ ದಿನಗಳಲ್ಲಿಯೇ. ನದಿ ಇರುವೆಡೆ ನೆಲೆನಿಂತು, ಮನೆಗಳನ್ನು ಕಟ್ಟಿಕೊಂಡು ಸಂಸ್ಕøತಿಗಳನ್ನು ಹುಟ್ಟುಹಾಕಿದ್ದು ಸಮುದ್ರ ತೀರ ವಾಸ ಆರಂಭಿಸಿದ ನಂತರದ ಕಾಲಘಟ್ಟದಲ್ಲಿ. ವೈಜ್ಞಾನಿಕ ಚಿಂತನೆಗಳ ಪ್ರಕಾರ ಈಜಿಪ್ಟ್, ಮೆಸಪೊಟೋಮಿಯಾ ಮತ್ತು ಭಾರತದ ಹರಪ್ಪ ನಾಗರಿಕತೆಗಳೆಲ್ಲ ಆಮೇಲಿನವು. ಸಮುದ್ರ ತೀರದಲ್ಲಿಯೇ ಅತ್ಯಂತ ಪ್ರಾಚೀನ ಮತ್ತು ಮನುಕುಲದ ಆರಂಭಿಕ ನಾಗರಿಕತೆ ಉಗಮಗೊಂಡಿದ್ದು.
ಆಗೆಲ್ಲ ಭಾರತ ಇಷ್ಟು ಕಿರಿದಾಗಿರಲಿಲ್ಲ. ಅಂದಿನ ಭಾರತದ ಭೂಪಟವನ್ನು ವಿಶಾಲ ಭಾರತ (ಗ್ರೇಟರ್ ಇಂಡಿಯಾ) ಎಂದು ಕರೆಯಬಹುದೇನೋ. ಈಗಿನ ಬಾಲಿ, ಸುಮಾತ್ರಾಗಳೂ ಭಾರತದೊಂದಿಗೆ ಒಂದಾಗಿ ದಕ್ಷಿಣ ಭಾರತವನ್ನು ರೂಪಿಸಿದ್ದವು. ಈ ಸಮುದ್ರ ತೀರದಲ್ಲಿ ಜನವಸತಿ ಇತ್ತು. ಜಗತ್ತಿನ ಮೊದಲ ಕೃಷಿ ಪದ್ಧತಿ ವಿಕಸಿತಗೊಂಡಿದ್ದು ಇಲ್ಲಿಯೇ ಎಂದು ಅನೇಕ ಭೂಗರ್ಭ ಶಾಸ್ತ್ರಜ್ಞರು ವಾದ ಮಂಡಿಸುತ್ತಾರೆ.
ಶೀತಲ ಯುಗ ಕಳೆಯುತ್ತಿದ್ದಂತೆ ಸಮುದ್ರ ಉಕ್ಕೇರಲಾರಂಭಿಸಿತು. ನೂರಾರು ಅಡಿಗಳಷ್ಟು ನೀರು ಭೂಮಿಯ ಮೇಲೆ ಹರಿದು ಅನೇಕ ಪ್ರದೇಶಗಳು ಮುಳುಗಿಹೋದವು. ಆಗಲೇ ಶ್ರೀಲಂಕಾ ಭಾರತದಿಂದ ಪ್ರತ್ಯೇಕಗೊಂಡಿದ್ದು. ವಿಶಾಲ ಭೂಪ್ರದೇಶವಾಗಿದ್ದ ಅಂಡಮಾನ್ ನಿಕೋಬಾರ್‍ಗಳು ಅನಂತರದಲ್ಲಿ ದ್ವೀಪಗಳಾಗಿ ಮಾರ್ಪಟ್ಟವು. ಇಂಡೋನೇಷಿಯಾ ತುಂಡುತುಂಡಾಯ್ತು. ದಕ್ಷಿಣದಲ್ಲಿನ ವಾಸಯೋಗ್ಯ ಭೂಮಿ ನೀರಿನಲ್ಲಿ ಮುಳುಗಿದ ಮೇಲೆ ಜನ ಅನಿವಾರ್ಯವಾಗಿ ಉತ್ತರದಿಕ್ಕಿಗೆ ವಲಸೆ ಹೋಗಬೇಕಾಯ್ತು. ಮಂಜು ಕರಗಿ ಹರಿದ ನದಿಗಳು ಸಿಹಿ ನೀರಿನ ಪ್ರಮುಖ ಸ್ರೋತವಾಗಿದ್ದಲ್ಲದೇ ಕೃಷಿ ಮತ್ತಿತರ ಜೀವನೋಪಾಯಕ್ಕೆ ಇಂಬು ಕೊಟ್ಟವು. ಈ ಆಧಾರದ ಮೇಲೆ ಇತಿಹಾಸದಲ್ಲಿ ನಾವು ಎರಡು ಮಹಾ ವಲಸೆಗಳನ್ನು ಗುರುತಿಸಬಹುದು. ಮೊದಲನೆಯದು ದಕ್ಷಿಣದಿಂದ ಹಿಮಾಲಯದ ತಪ್ಪಲಿಗೆ, ಮತ್ತೊಂದು, ಕಾಲಕ್ರಮೇಣ ಅಲ್ಲಿಂದ ಮಧ್ಯ ಏಷ್ಯಾ ಹಾಗೂ ಯುರೋಪ್ ಸೇರಿದಂತೆ ಜಗತ್ತಿನ ಪಶ್ಚಿಮ ಭಾಗಕ್ಕೆ.
ಈ ಸಿದ್ಧಾಂತ ವೈಜ್ಞಾನಿಕ ಚಿಂತನೆಗಳಿಗೆ ಪೂರಕವಾಗಿದ್ದು ಸತ್ಯಕ್ಕೆ ಹತ್ತಿರವೆನ್ನಿಸುತ್ತದೆ. ಜಗತ್ತಿನ ಇತಿಹಾಸವನ್ನು ಒಮ್ಮೆ ಅವಲೋಕಿಸಿ ನೋಡಿ. ಅವರ ಸಾಹಿತ್ಯಗಳು, ಧಾರ್ಮಿಕ ನಂಬುಗೆಗಳು, ಪೂಜಾ ಪದ್ಧತಿಗಳು, ಭಾಷೆ, ಬದುಕಿನ ರೀತಿನೀತಿಗಳೆಲ್ಲವೂ ಭಾರತದಿಂದ ಎರವಲು ಪಡೆದಿದ್ದೆಂದು ಮೇಲ್ನೋಟಕ್ಕೇ ಗೊತ್ತಾಗಿಬಿಡುತ್ತದೆ. ಮತ್ಸ್ಯಾವತಾರದ ಕಥೆಯನ್ನು ಅನೇಕ ಮತಗ್ರಂಥಗಳು ಯಥಾವತ್ ನಕಲು ಮಾಡಿವೆ. ಇಲ್ಲಿನ ನಗರಗಳ ಹೆಸರು ಜಗತ್ತಿನ ಬೇರೆ ಬೇರೆ ಭೂಭಾಗಗಳಲ್ಲಿ ಸಿಗುತ್ತವೆ. ಹೇಗೆ ಸಾಧ್ಯವಾಯ್ತು ಇದೆಲ್ಲ?
ಅನುಮಾನವೇ ಇಲ್ಲ. ಇಲ್ಲಿಂದ ಜಗತ್ತಿಗೆ ವಲಸೆ ಹೋದ ಋಷಿ ಪರಂಪರೆಯ ಜನಾಂಗದಿಂದಲೇ!
ಹೀಗೆ ಆರಂಭದ ವಲಸೆಯ ಕುರಿತಂತೆ ಮತ್ಸ್ಯಪುರಾಣದ ವರ್ಣನೆ ಕೇಳಿಯೇ ಇರುತ್ತೀರಿ. ವೈವಸ್ವತ ಮನು ವಿಷ್ಣುವನ್ನು ಕುರಿತು ತಪಸ್ಸು ಮಾಡಿ, ಪ್ರಳಯಕಾಲದಲ್ಲಿ ಜೀವಸಂಕುಲವನ್ನು ರಕ್ಷಿಸುವ ಸಾಮಥ್ರ್ಯ ಕೇಳಿ ಪಡೆದ. ಅದೊಮ್ಮೆ ಆತ ಸಮುದ್ರದ ಅಂಚಿನಲ್ಲಿ ನಿಂತು ತರ್ಪಣ ನೀಡುವಾಗ ಚಿಕ್ಕದೊಂದು ಮೀನು ಬೊಗಸೆಯಲ್ಲಿ ಸಏರಿತು. ಅಭಯ ಕೋರಿದ ಅದರ ರಕ್ಷಣೆ ಮಾಡಲು ಮೀನನ್ನು ಅರಮನೆಗೆ ತಂದ ಮನು ಪುಟ್ಟ ಬಟ್ಟಲಲ್ಲಿ ಇಟ್ಟ. ಕೆಲವೇ ಗಂಟೆಗಳಲ್ಲಿ ಬೆಳೆದ ಮೀನನ್ನು ತೊಟ್ಟಿಗೆ, ಮತ್ತೂ ಬೆಳೆದ ಅದನ್ನು ಅಲ್ಲಿಂದ ಕೆರೆಗೆ ರವಾನಿಸಲಾಯ್ತು. ಅದು ಕೆರೆಯನ್ನೂ ಮೀರಿ ಬೆಳೆಯತೊಡಗಿದಾಗ ರಾಜ ಉಪಾಯಗಾಣದೆ ಸಮುದ್ರಕ್ಕೆ ಅದನ್ನು ಬಿಡಲು ಹೊರಟ. ಆಗ ಮೀನು ಪ್ರಳಯಕಾಲದಲ್ಲಿ ಸಹಾಯಕ್ಕೆ ಒದಗುವೆನೆಂದು ಮಾತನ್ನಿತ್ತು, ಪ್ರಳಯಕಾಲ ಸನ್ನಿಹಿತವಾಗಿದೆ, ಹಡಗು ಸಿದ್ಧವಿಟ್ಟುಕೋ ಎಂದು ಹೇಳಿ ಹೊರಟುಹೋಯಿತು. ಅಂದುಕೊಂಡಂತೆ ನೆರೆಬಿದ್ದು ಪ್ರಳಯ ಉಕ್ಕಲಾರಂಭಿಸಿತು. ಮನು ಏಳು ಋಷಿಗಳನ್ನೂ, ಎಲ್ಲ ಜೀವಸಂಕುಲದ ಜೋಡಿಯನ್ನು, ಧವಸ ಧಾನ್ಯ ಹಾಗೂ ಬೀಜಗಳನ್ನು ಹಡಗಿನಲ್ಲಿ ತುಂಬಿಕೊಂಡು ಹೊರಟ. ಈಗ ಸಹಾಯಕ್ಕೆ ಬಂದ ಮೀನು ತನ್ನ ಮುಂದಲೆಯ ಕೊಂಬಿಗೆ ಹಡಗಿನ ಹಗ್ಗ ಕಟ್ಟಿಸಿಕೊಂಡು, ಅದನ್ನು ಎಳೆಯುತ್ತ ಹಿಮಾಲಯದ ತಪ್ಪಲಿಗೆ ಕರೆದೊಯ್ದಿತು. ಪ್ರಳಯದ ರಭಸವೂ ಇಳಿದು ಹೊಸ ಮನ್ವಂತರ ಉದಿಸಿತು.
ಈ ಕಥೆ ಹೇಳಿದರೆ ಇದನ್ನೊಂದು ಗೊಟ್ಟು ಪುರಾಣವೆಂದು ಹೇಳಿ ಮೂಗು ಮುರಿಯುತ್ತೇವೆ ತಾನೆ? ಹೀಗೆ ನಮ್ಮ ವೇದ – ಪುರಾಣ – ಇತಿಹಾಸ ಗ್ರಂಥಗಳನ್ನು ತುಚ್ಛವಾಗಿ ನೋಡುವಂತೆ ನಮ್ಮ ತಲೆ ಕೆಡಿಸಿದ್ದು ಪಾಶ್ಚಾತ್ಯ ಮಿಷನರಿ ಇತಿಹಾಸಕಾರರೇ. ಕ್ರಿ.ಪೂ.4004ರ ಅಕ್ಟೋಬರ್ 23ರ ಬೆಳಗ್ಗೆ 9 ಗಂಟೆಗೆ ಕರಾರುವಕ್ಕಾಗಿ ಭೂಮಿ ಹುಟ್ಟಿತೆನ್ನುವ ಬೈಬಲ್ಲಿನ ಸೃಷ್ಟಿ ಕಥಾನಕವನ್ನು ಒಪ್ಪುವವರಿಗೆ ನಮ್ಮ ಪುರಾಣಗಳು ಗೊಡ್ಡಾಗಿ ಕಂಡಿದ್ದು ಅಚ್ಚರಿ!
ಈಗ ಮತ್ಸ್ಯ ಪುರಾಣದ ಮನುವಿನ ಕಥೆಗೂ ಮಹಾವಲಸೆ ಸಿದ್ಧಾಂತಕ್ಕೂ ತಳಕು ಹಾಕಿ ನೋಡಿ. ಪ್ರಳಯ ಅನ್ನೋದು ಉಕ್ಕೇರಿದ ಸಮುದ್ರವನ್ನು ಸೂಚಿಸುತ್ತದೆ. ಮನು, ವಲಸೆಗೈಯಲು ಸಿದ್ಧವಾಗಿದ್ದ ತಂಡದ ನಾಯಕ. ಋಷಿಗಳು ಜ್ಞಾನಿಗಳ ಸಂಕೇತವಾದರೆ, ಧಾನ್ಯಗಳು ಕೃಷಿಯ ವಿಸ್ತರಣೆಯನ್ನು ಸಂಕೇತಿಸುತ್ತವೆ. ಹಿಮಾಲಯದ ತಪ್ಪಲು ಉತ್ತರ ಭಾರತದೆಡೆಗೆ ಹೊರಟ ಮನುವಿನ ಯಾತ್ರೆಯನ್ನು ನಮ್ಮೆದುರು ಇಡುತ್ತದೆ. ಅನುಮಾನಕ್ಕೆ ಲವಲೇಶವೂ ಆಸ್ಪದವಿಲ್ಲದಂತೆ ಆರ್ಯರ ಆಕ್ರಮಣ ಸಿದ್ಧಾಂತ, ಆರ್ಯರ ಜಾಗತಿಕ ಮಹಾವಲಸೆಯ ಭೂಮಿಕೆಯಾಗಿಯೂ ಮಾರ್ಪಡುತ್ತದೆ.
ಮನು ಹಿಮಾಲಯದ ತಪ್ಪಲಿನಿಂದ ಸರಸ್ವತೀ ನದಿಯ ತೀರದುದ್ದಕ್ಕೂ ತನ್ನ ಸಾಮ್ರಾಜ್ಯ ವಿಸ್ತಾರಗೊಳಿಸಿದ. ಇಲ್ಲಿಯೇ ವೈದಿಕ ಸಾನಗರಿಕತೆ ಅವತೀರ್ಣಗೊಂಡಿತು. ಹರಪ್ಪ ಯುಗದ ನಂತರ ಗಂಗೆಗೆ ಯಾವ ಸಥಾನ ದಕ್ಕಿತೋ ವೈದಿಕ ಯುಗದಲ್ಲಿ ಸರಸ್ವತಿಗೆ ಆ ಸ್ಥಾನವಿತ್ತು. ಋಗ್ವೇದದ ಆರನೇ ಮಂಡಲ ಹೇಳುವಂತೆ, ಆಕೆ ಪವಿತ್ರಳಷ್ಟೇ ಅಲ್ಲ, ಅತಿ ವಿಶಾಲ ಹರಹುಳ್ಳವಳೂ ಕೂಡ. ಆಕೆ ಇತರ ಏಳು ನದಿಗಳಿಗಿಂತ ಶ್ರೇಷ್ಠಳು. ಅವಳು ಆ ನದಿಗಳಿಗೆ ತಾಯಿಯೂ ಹೌದು. ವಸಿಷ್ಟ, ಜಮದಗ್ನಿ, ಭರದ್ವಾಜ, ಘೃತ್ಸಮದರಂಥ ಋಷಿಗಳು ಸರಸ್ವತೀ ತಪ್ಪಲಿನಲ್ಲಿ ತಪಸ್ಸಿಗೆ ಕುಳಿತವರು. ಅವರು ಮಂತ್ರ ದ್ರಷ್ಟಾರರೂ ಆದರು. ಋಗ್ವೇದದ ನದೀಸೂಕ್ತದಲ್ಲಿ ಯಮುನೆ ಮತ್ತು ಈಗಿನ ಸಟ್ಲೆಜ್ ನಡುವೆ ಇರುವ ಸರಸ್ವತಿಯ ಉಲ್ಲೇಖ ಬರುತ್ತದೆ. ಆದರೆ ಅದು ಒಣಗಿ ಸಹಸ್ರಮಾನಗಳೇ ಕಳೆದಿರುವುದರಿಂದ ತಥಾಕಥಿತ ಪಂಡಿತರು ಆ ಉಲ್ಲೇಖಗಳನ್ನೆ ತಿರಸ್ಕರಿಸಿಬಿಟ್ಟರು. ಸಾಲದ್ದಕ್ಕೆ, ಆಫ್ಘಾನಿಸ್ತಾನದ ಹರಾಕಿತಿಯೇ ಸರಸ್ವತಿಯೆಂದು ಹಣೆಪಟ್ಟಿ ಹಚ್ಚಿ ಜಗತ್ತಿನೆದುರು ಇಟ್ಟರು.
ಎಂತಹ ವಿಚಿತ್ರ ನೋಡಿ. ಸರಸ್ವತೀ ನದಿಯೊಂದು ಬಿಟ್ಟು ಋಗ್ವೇದದಲ್ಲಿ ಉಲ್ಲೇಖಗೊಂಡ ಬೇರೆಲ್ಲವೂ ಇಲ್ಲಿ ದೃಗ್ಗೋಚರವಿತ್ತು. ಹಿಮಾಲಯ, ವಿಶಾಲ ಸಾಗರ, ಗಂಗೆ – ಯಮುನೆಯರು, ಇತಿಹಾಸ ಬಿತ್ತರಿಸುವ ಪುರಾಣಗಳು – ಎಲ್ಲವೂ ಇದ್ದವು. ಆದರೆ ಆಫ್ಘಾನಿಸ್ತಾನದಲ್ಲಿ ಹಿಮಬೆಟ್ಟಗಳು ಇರಲಿಲ್ಲ. ಸಮುದ್ರದ ಸುಳಿವು ದೂರ. ಇದ್ದದ್ದು ಹರಾಕಿತಿ ಎಂಬ ನದಿ ಮಾತ್ರ. ಇತಿಹಾಸಕಾರರಿಗೆ ಅಷ್ಟು ಸಾಕಾಯ್ತು. ಹರಾಕಿತಿಯನ್ನೆ ಸರಸ್ವತಿ ಎಂದು ಸಂಸ್ಕøತದಲ್ಲಿ ಕರೆಯಲಾಗಿದೆ ಎಂದು ತಮ್ಮ ಭಾಷಾಜ್ಞಾನ ಮುಂದಿಟ್ಟುಕೊಂಡು ಕಥೆ ಹೆಣೆದರು. ಶತಾಯಗತಾಯ ಅವರು ಭಾರತದ ಶ್ರೇಷ್ಠತೆಯನ್ನು ಅಲ್ಲಗಳೆಯಲೇಬೇಕಿತ್ತು. ಅದರ ಬೌದ್ಧಿಕ ಸಾಮಥ್ರ್ಯವನ್ನು ನಿರಾಕರಿಸಲೇಬೇಕಿತ್ತು. ಈ ರಾಷ್ಟ್ರದ ಪ್ರಾಚೀನವಾದ್ದೇನೂ ಅಲ್ಲವೆಂದು ನಿರೂಪಿಸುವ ಅನಿವಾರ್ಯತೆ ಇತ್ತು ಅವರಿಗೆ.
1886ರಲ್ಲಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಆರ್.ಜೆ.ಓಲ್ಡ್‍ಹ್ಯಾಮ್ ಋಗ್ವೇದದ ಆಧಾರದ ಮೇಲೆ ಹರಿಯಾಣದ ಘಗ್ಗರ್ ಸರಸ್ವತಿಯ ಪಳೆಯುಳಿಕೆ ಎಂದು ನಿರೂಪಿಸಿದರು. ಆದರೆ ಯಾರೂ ಅದನ್ನು ಕಿವಿಯ ಮೇಲೂ ಹಾಕಿಕೊಳ್ಳಲಿಲ್ಲ. 1950ರ ವೇಳೆಗೆ ಆತ ಹೇಳಿದ್ದಕ್ಕೆ ಬೆಲೆ ಬಂದಿತಲ್ಲದೆ, ಹರಪ್ಪ ನಾಗರಿಕತೆ ಹರಡಿಕೊಂಡಿದ್ದು ಸಿಂಧೂ ನದೀ ತಪ್ಪಲಿನಲ್ಲಿ ಅಲ್ಲ, ಬದಲಿಗೆ ಸರಸ್ವತೀ ನದೀ ಬಯಲಿನಲ್ಲಿ ಎಂಬುದನ್ನು ಜಗತ್ತು ಒಪ್ಪತೊಡಗಿತು. 1978ರ ನಂತರ ಉಪಗ್ರಹಗಳು 6ರಿಂದ 8 ಕಿ.ಮೀ., ಕೆಲವೆಡೆ 14 ಕಿ.ಮೀ ವಿಸ್ತಾರದ ನದೀ ಪಾತ್ರವನ್ನು ಗುರುತಿಸಿದ ಮೇಲೆ ಸರಸ್ವತಿಯ ಅಸ್ತಿತ್ವಕ್ಕೆ ಗಟ್ಟಿ ಪ್ರಮಾಣ ದೊರೆತಂತಾಯ್ತು.
ಈ ಹಿನ್ನೆಲೆಯಲ್ಲಿ ಈ ನಾಗರಿಕತೆಯನ್ನು ಸಿಂಧೂ ಬಯಲಿನ ನಾಗರಿಕತೆಯಲ್ಲ, ಸರಸ್ವತೀ ಬಯಲಿನದೆಂದು ಗುರುತಿಸಬೇಕೆಂಬ ಕೂಗೂ ಕೇಳಿಬಂತು. ಅನೇಕರು ಆಯಿತೆಂದರು. ಆದರೆ ನಾವು ಭಾರತೀಯರು ಮಾತ್ರ ಇಂದಿಗೂ ಆರ್ಯರ ಆಕ್ರಮಣ ವಾದವನ್ನು, ಸಿಂಧೂ ಬಯಲಿನ ನಾಗರಿಕತೆಯನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಹಾಗೆಯೇ ಉಳಿಸಿಕೊಂಡು ಬಂದಿದ್ದೇವೆ.
ಈ ಎಲ್ಲಕ್ಕೆ ಪುಟವಿಟ್ಟಂತೆ ವಿಜ್ಞಾನ ಒಂದು ಹೊಸ ಅಂದಾಜು ವರದಿಯಾಗಿದೆ. ಅಧ್ಯಯನಗಳ ಪ್ರಕಾರ, ಹಿಮಾಲಯದಲ್ಲಿ ಹುಟ್ಟಿ ಸಾಗರ ಸೇರುವ ಸರಸ್ವತಿಯ ಉಲ್ಲೇಖ ಋಗ್ವೇದದಲ್ಲಿ ಬಂದಿದೆಯಲ್ಲ, ಅದು ಇಂದಿಗೆ ಸುಮಾರು ಹತ್ತು ಸಾವಿರ ವರ್ಷಗಳ ಹಿಂದಿನದು! ಅನಂತರದಲ್ಲಿ ಯಮುನೆ, ಸಟ್ಲೆಜ್‍ಗಳು ತಮ್ಮ ಹರಿವಿನ ದಿಕ್ಕು ಬದಲಿಸಿದ್ದರಿಂದ ಸರಸ್ವತೀ ನದಿ ನಿಧಾನವಾಗಿ ಮರೆಯಾಯ್ತು. ರಾಜಸ್ಥಾನ – ಹರ್ಯಾಣಗಳಲ್ಲಿ ಅಲ್ಲಲ್ಲಿ ಚಿಕ್ಕಪುಟ್ಟ ತೊರೆಯಾಗಿ ಕಾಣೆಯಾಯ್ತು. ಹೀಗಾಗಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ. ಅಂದರೆ, ಋಗ್ವೇದ ಸರಸ್ವತಿಯ ಉಚ್ಛ್ರಾಯ ಕಾಲದ್ದಾಗಿದ್ದರೆ, ಹರಪ್ಪ ಸಂಸ್ಕøತಿಯು ಸರಸ್ವತಿಯ ಅವನತಿಯ ಹಂತದ್ದು.

Comments are closed.